ಕನ್ನಡ: ತತ್ವಶಾಸ್ತ್ರ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಭಾಷಾವಿಜ್ಞಾನ

ಮಾನವ ತನ್ನ ಭಾವ, ಭಾವನೆಗಳನ್ನು ಆಲೋಚನೆ, ವಿಚಾರಗಳನ್ನು ಮತ್ತೊಬ್ಬರಿಗೆ ತಿಳಿಸಲು ರೂಢಿಸಿಕೊಂಡಿರುವ ಹಲವು ಮಾಧ್ಯಮಗಳಲ್ಲಿ ಭಾಷೆ ಪ್ರಧಾನವಾದುದು. ಭಾಷೆ ಒಂದು ಸಾಮಾಜಿಕ ವಸ್ತು. ಮನುಷ್ಯನನ್ನು ಪ್ರಾಣಿ ಜಗತ್ತಿನಿಂದ ಬೇರ್ಪಡಿಸಿ ತೋರಿಸಲು ಇರುವ ಪ್ರಮುಖ ಸಾಧನ. ಭಾಷೆ ಮನುಷ್ಯನಿಗೆ ಮೂಲತಃ ಅನುಕರಣೆಯಿಂದ ಲಭ್ಯವಾಗುತ್ತದೆ. ಅದು ನಿರಂತರ ಪರಿವರ್ತನಶೀಲವಾದುದು; ಹರಿಯುವ ನದಿಯಂತೆ ಚಲನಶೀಲವಾದುದು, ಜೀವಂತವಾದುದು. ಮನುಷ್ಯ ಮನುಷ್ಯರ ನಡುವೆ ಭಾವನಾತ್ಮಕ ಸಂಬಂಧವನ್ನು ಬೆಸೆಯುವ, ಸಮಾಜ, ಸಂಸ್ಕೃತಿ, ಸಾಹಿತ್ಯ ಮೊದಲಾದವುಗಳ ಗತಿಶೀಲತೆಗೆ ಭಾಷೆ ಮಹತ್ ಸಾಧನ. ಅದು ಅಂದರೆ “ಭಾಷೆ ಒಂದು ಸಮಾಜದ ವ್ಯಕ್ತಿಗಳು ಪರಸ್ಪರ ವ್ಯವಹಾರಕ್ಕಾಗಿ ಬಳಸುವ ಯಾದೃಚ್ಛಿಕ (ಸ್ವತಂತ್ರ) ಧ್ವನಿಸಂಕೇತಗಳ ಒಂದು ವ್ಯವಸ್ಥೆ” ಎಂದು ಸೂತ್ರ ರೂಪದಲ್ಲಿ ಭಾಷಾ ವಿಜ್ಞಾನಿಗಳು ಹೇಳಿದ್ದಾರೆ.
ಭಾಷೆಗೆ ಸಂಬಂಧಿಸಿದ ಎಲ್ಲಾ ಆಂತರಿಕ ಹಾಗೂ ಬಾಹ್ಯ ವಿಚಾರಗಳನ್ನು ಕ್ರಮಬದ್ಧವಾಗಿ ಅಧ್ಯಯನ ಮಾಡುವ ಒಂದು ಶಿಸ್ತೇ ಭಾಷಾಶಾಸ್ತ್ರ. ಈ ದೃಷ್ಟಿ ವೈಜ್ಞಾನಿಕವಾಗಿಯೂ ಇರುವುದರಿಂದ ಇದಕ್ಕೆ ಭಾಷಾ ವಿಜ್ಞಾನ ಎಂದು ಕರೆಯುವರು. ಇದನ್ನು ಇಂಗ್ಲಿಶಿನ ಫಿಲಾಲಜಿ ಮತ್ತು ಲಿಂಗ್ವಿಸ್ಟಿಕ್ಸ್ ಪದಗಳಿಗೆ ಸಂವಾದಿಯಾಗಿ ಬಳಸುವರು. ‘ಫಿಲಾಲಜಿ’ ಎಂಬುದು ಮೂಲತಃ ಗ್ರೀಕ್ ಶಬ್ದ. ಲ್ಯಾಟಿನ್‌ನಲ್ಲಿ ‘ಫಿಲೊಲಾಜಿಯಾ’ ಎಂದಿದೆ. ಮಾತಿನ ಬಗೆಗೆ ಆಸಕ್ತಿ ಎಂದರ್ಥ. ‘ಫಿಲಾಲಜಿ’ಯಲ್ಲಿ ‘ಫಿಲಾಸ್’, ‘ಲೋಗಸ್’ ಮತ್ತು ‘ಲಜಿ’ ಎಂಬ ಮೂರು ರೂಪಗಳಿವೆ. ‘ಫಿಲಾಸ್’ ಎಂಬುದಕ್ಕೆ ‘ಆಸಕ್ತಿ, ಮಮತೆ’ ಎಂದೂ, ‘ಲೋಗಸ್’ ಎಂಬುದಕ್ಕೆ ಮಾತು, ನುಡಿ ಎಂದೂ ‘ಲಜಿ’ ಎಂಬುದಕ್ಕೆ ಶಾಸ್ತ್ರ ಅರ್ಥಗಳಿವೆ ಈ ಮೂರೂ ರೂಪಗಳು ಸೇರಿ ‘ಆಸಕ್ತಿಯುಳ್ಳ ಭಾಷೆಯ ಶಾಸ್ತ್ರೀಯ ಅಧ್ಯಯನ’ ಎಂಬರ್ಥದ ಫಿಲಾಲಜಿ ಎಂಬ ಪರಿಭಾಷೆ ಇಂಗ್ಲೆಂಡ್ ಮೊದಲಾದ ಯೂರೋಪಿನ ಬೇರೆ ಬೇರೆ ವಿದ್ವಾಂಸರಿಂದ ಬಳಕೆಗೆ ಬಂದಿತು. ಈ ಪದ ಮೊದಲಿಗೆ 1386ರಲ್ಲಿ ಬಳಕೆಗೆ ಬಂತು. ಈ ಪದದ ಅರ್ಥವನ್ನು ನಿಘಂಟುಗಳು ವಿಶ್ವಕೋಶಗಳು ಈ ರೀತಿ ವಿವರಿಸಿವೆ: ‘ಪ್ರಚಲಿತವಿರುವ ಗ್ರಂಥಸ್ಥ ಭಾಷೆಗಳ ಅಧ್ಯಯನ; ಪಠ್ಯಗಳ ಅಧ್ಯಯನ ಮತ್ತು ಅವುಗಳ ಸಂವಹನ’ (ವೆಬ್‌ಸ್ಟರ್ ನಿಘಂಟು). ಅದು ಭಾಷೆಯ ವಿಜ್ಞಾನ. ನಿಷ್ಪತ್ತಿ, ವ್ಯಾಕರಣ, ಅಲಂಕಾರ, ಸಾಹಿತ್ಯ ವಿಮರ್ಶೆಯನ್ನು ಅಧ್ಯಯನ ಮಾಡುತ್ತದೆ; ಸಾಹಿತ್ಯಕ ಮತ್ತು ಸಾಹಿತ್ಯೇತರ ಪದಗಳನ್ನು ಅಧ್ಯಯನ ಮಾಡುತ್ತದೆ; ಪಠ್ಯಮುಖೇನ ಸಂಸ್ಕೃತಿಯನ್ನು ಅಧ್ಯಯನ ಮಾಡುತ್ತದೆ. ಮೂಲತಃ ಗ್ರೀಸ್ ಮತ್ತು ರೋಮ್ ಭಾಷೆಗಳನ್ನು ಅಧ್ಯಯನ ಮಾಡಲು ಮತ್ತು ವಿವರಿಸಲು ಮನುಷ್ಯರಿಗೆ ಸಾಧ್ಯವಾಗುವ ಜ್ಞಾನವೇ ಅದು (ಚೇಂಬರ್ಸ್‌ ನಿಘಂಟು) ‘ಈಗ ವಿರಳವಾಗಿ ಆದರೆ ಒಂದು ಕಾಲದಲ್ಲಿ ಭಾಷೆ ಮತ್ತು ಸಾಹಿತ್ಯದ ಅಧ್ಯಯನ ಎಂಬರ್ಥದಲ್ಲಿ ಬಳಕೆಯಾಗುತ್ತಿದ್ದ ಪದ. ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ಸಾಹಿತ್ಯ ಮತ್ತು ಭಾಷಿಕ ಪಾಂಡಿತ್ಯ, ವಿದ್ವತ್ತುಗಳನ್ನು ಬೇರೆ ಬೇರೆಯಾಗಿಯೇ ನೋಡಲಾಗುತ್ತಿದೆ. ಭಾಷೆಯ ಅಧ್ಯಯನ ಎಂಬರ್ಥದಲ್ಲಿ ಹಿಂದೆ ಬಳಕೆಯಾಗುತ್ತಿದ್ದ ‘ಫಿಲಾಲಜಿ’ ಎಂಬ ಪದದ ಸ್ಥಾನದಲ್ಲಿ ‘ಲಿಂಗ್ವಿಸ್ಟಿಕ್ಸ್’ ಎಂಬ ಪದವನ್ನು 19ನೇ ಶತಮಾನದಲ್ಲಿ ಬಳಕೆಗೆ ತರಲಾಯಿತು. ಈಗ ‘ತೌಲನಿಕ ಭಾಷಾವಿಜ್ಞಾನ’ ಎಂದು ಯಾವುದನ್ನು ಕರೆಯಲಾಗುತ್ತಿದೆಯೋ ಅದನ್ನು ಹಿಂದೆ ‘ಕಂಪ್ಯಾರಟೀವ್ ಫಿಲಾಲಜಿ’ ಎಂದು ಕರೆಯಲಾಗುತ್ತಿತ್ತು (ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ 387).
ಲಿಂಗ್ವಿಸ್ಟಿಕ್ಸ್’ ಎಂಬುದು ಲ್ಯಾಟಿನ್ ಶಬ್ದ ಇದರಲ್ಲಿ ಲಿಂಗ್ವಾ (=ನಾಲಗೆ, ಮಾತು) ಮತ್ತು ಟಿಕ್ಸ್ (=ವಿಜ್ಞಾನ) ಎಂಬ ಎರಡು ರೂಪಗಳಿವೆ. ಈ ಎರಡು ರೂಪಗಳು ಸೇರಿ ‘ಭಾಷೆಯ ವೈಜ್ಞಾನಿಕ ಅಧ್ಯಯನ’ ಎಂಬರ್ಥದ ಲಿಂಗ್ವಿಸ್ಟಿಕ್ಸ್ ಪದ 18ನೇ ಶತಮಾನದಲ್ಲಿ ಅಮೆರಿಕನ್ನರಿಂದ ಬಳಕೆಗೆ ಬಂದಿದೆ.
ವ್ಯಾಪಕ ಅರ್ಥದಲ್ಲಿ ಭಾಷೆಯ ಎಲ್ಲಾ ಅಂಶಗಳನ್ನು, ಎಲ್ಲಾ ಬಗೆ ಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುವುದೇ ಭಾಷಾ ವಿಜ್ಞಾನ’ (ಚೇಂಬರ್ಸ್‌ ನಿಘಂಟು) ಭಾಷೆ ಅಥವಾ ಭಾಷೆಗಳನ್ನು ಐತಿಹಾಸಿಕ ಅಥವಾ ತೌಲನಿಕ ಅಥವಾ ವರ್ಣನಾತ್ಮಕ, ರಚನಾತ್ಮಕ ದೃಷ್ಟಿಕೋನದಿಂದ ವೈಜ್ಞಾನಿಕ ವಾಗಿ ಅಧ್ಯಯನ ಮಾಡುವ ವಿಧಾನ. ಭಾಷಾವಿಜ್ಞಾನ ಭಾಷೆಯಲ್ಲಿನ ಧ್ವನಿ ವ್ಯವಸ್ಥೆ ಮುಖ್ಯವಾಗಿ ಧ್ವನಿಬದಲಾವಣೆ (ಧ್ವನಿ ವಿಜ್ಞಾನ), ಅದರ ವಿಭಕ್ತಿ, ಪ್ರತ್ಯಯಗಳು ಮತ್ತು ಪದರಚನೆ (ಆಕೃತಿಮಾ ವಿಜ್ಞಾನ), ಅದರ ವಾಕ್ಯ ಸ್ವರೂಪ (ವಾಕ್ಯವಿಜ್ಞಾನ) ಮತ್ತು ಅದರ ಅರ್ಥ ಬದಲಾವಣೆ (ವ್ಯತ್ಯಾಸ) (ಅರ್ಥವಿಜ್ಞಾನ), ಕಾಗುಣಿತ ಮೊದಲಾದ ಎಲ್ಲ ಅಂಶಗಳನ್ನು ಅಧ್ಯಯನ ಮಾಡುತ್ತದೆ. (ವೆಬ್‌ಸ್ಟರ್ ನಿಘಂಟು). ಈ ಬಗೆಯ ಭಾಷಾಧ್ಯಯನವನ್ನು ಫ್ರೆಂಚ್‌ನಲ್ಲಿ‘Linguistique’ ಎಂದೂ, ಜರ್ಮನ್‌ನಲ್ಲಿ ‘Sprachwiss enschaft’ ಎಂದೂ, ರಷ್ಯನ್ ಭಾಷೆಯಲ್ಲಿ ‘Yazeikoz nanie’ ಎಂದೂ ಭಾರತದ ಬೇರೆ ಭಾಷೆಗಳಲ್ಲಿ ಭಾಷಾವಿಜ್ಞಾನ, ಭಾಷಾಶಾಸ್ತ್ರ, ಭಾಷಾವಿಚಾರ ಎಂದೂ ಬೇರೆ, ಬೇರೆ ಹೆಸರುಗಳಿಂದ ಕರೆಯುವರು.
ಪ್ರಾಚೀನದಲ್ಲಿ ಭಾಷೆಯನ್ನು ಕುರಿತ ಅಧ್ಯಯನವು ಭಾರತೀಯರಿಂದ ವ್ಯಾಕರಣಶಾಸ್ತ್ರದ ಅಧ್ಯಯನವಾಗಿ ಚಿಗುರೊಡೆಯಿತು. ತರುವಾಯ ಶಬ್ದ ಶಾಸ್ತ್ರ, ನಿರ್ವಚನಶಾಸ್ತ್ರ, ನಿರುಕ್ತಿಶಾಸ್ತ್ರಗಳಾಗಿ ಬೆಳೆದು ಭಾಷಾಶಾಸ್ತ್ರವಾಗಿ ಪರಿವರ್ತನೆ ಹೊಂದಿತು. ಸಾಹಿತ್ಯ ಹಾಗೂ ಸಂಸ್ಕೃತಿಗಳನ್ನು ಭಾಷೆಯ ಮೂಲಕ ತಿಳಿಯಲು ಹೊರಟ ಅಧ್ಯಯನ ವಿಧಾನವೇ ‘ಭಾಷಾಶಾಸ್ತ್ರ’ ಎಂಬ ಹೆಸರು ಪಡೆಯಿತು. ತದನಂತರ ಭಾಷೆಯನ್ನೇ ಶಾಸ್ತ್ರೀಯವಾಗಿ, ಪ್ರಾಯೋಗಿಕವಾಗಿ, ವೈಜ್ಞಾನಿಕವಾಗಿ ಅಧ್ಯಯನ ಮಾಡುವ ಪದ್ಧತಿ ವ್ಯಾಪಕವಾಗಿ ಬೆಳೆಯಿತು. ವ್ಯಾಕರಣಶಾಸ್ತ್ರಕ್ಕೂ, ಭಾಷಾಶಾಸ್ತ್ರಕ್ಕೂ ವ್ಯತ್ಯಾಸವಿದೆಯೆಂಬುದನ್ನು ಗಮನಿಸದ ಕೆಲವು ವಿದ್ವಾಂಸರು ತೌಲನಿಕ ಭಾಷಾಶಾಸ್ತ್ರ, ಐತಿಹಾಸಿಕ ಭಾಷಾಶಾಸ್ತ್ರಗಳಂತೆ ತೌಲನಿಕ ವ್ಯಾಕರಣ, ಐತಿಹಾಸಿಕ ವ್ಯಾಕರಣಗಳೆಂದು ವಿಭಾಗಿಸಿ ಅಧ್ಯಯನ ನಡೆಸಿದರು. ಹದಿನೇಳನೆಯ ಶತಮಾನದಲ್ಲಿ ಭಾಷೆಯ ತೌಲನಿಕ ಹಾಗೂ ಐತಿಹಾಸಿಕ ಅಧ್ಯಯನ ಮಹತ್ವ ಪಡೆಯಿತು. ಆ ಸಂದರ್ಭದಲ್ಲಿ ಶಬ್ದಗಳ ತೌಲನಿಕ ಅಧ್ಯಯನದ ಬಗ್ಗೆ ಹೆಚ್ಚಿನ ಗಮನವಿತ್ತೇ ಹೊರತು ವ್ಯಾಕರಣದ ವಿಚಾರದ ಬಗ್ಗೆ ಇರಲಿಲ್ಲ. ಭಾಷೆಯ ಶಾಸ್ತ್ರೀಯ ಅಧ್ಯಯನವನ್ನು ಯೂರೋಪಿನಲ್ಲಿ ಫಿಲಾಲಜಿ (1386) ಎಂದು ಕರೆದರು. ಇದನ್ನು ಭಾಷೆಯ ಐತಿಹಾಸಿಕ ಮತ್ತು ತೌಲನಿಕ ಅಧ್ಯಯನಕ್ಕೂ ಅನ್ವಯಿಸಿದ್ದ ರಿಂದ ಭಾಷಾಧ್ಯಯನ ಕ್ಷೇತ್ರದ ವ್ಯಾಪ್ತಿ ಇನ್ನಷ್ಟು ವಿಶಾಲವಾಯಿತು. 1716ರಲ್ಲಿ ಡೇವಿಡ್ ಎಂಬ ಭಾಷಾಶಾಸ್ತ್ರಜ್ಞ ಭಾಷೆಯ ಅಧ್ಯಯನವನ್ನು ಗ್ಲಾಸಾಲಜಿ ಎಂದ ಕರೆದರೂ ಈ ಶಬ್ದ ಹೆಚ್ಚು ಪ್ರಚಾರಕ್ಕೆ ಬರಲಿಲ್ಲ. ಫ್ರೀಚರ್ಡ್ ಎಂಬ ಮತ್ತೊಬ್ಬ ವಿದ್ವಾಂಸ 1814ರಲ್ಲಿ ಭಾಷೆಯ ಅಧ್ಯಯನ ವನ್ನು ಗ್ಲಾಟಾಲಜಿ ಎಂದು ಕರೆದನು. ಆದರೆ ಫಿಲಾಲಜಿ ಎಂಬ ಪದಕ್ಕೆ ದೊರೆತ ಪ್ರಚಾರ ಬೇರಾವ ಪದಗಳಿಗೂ ದೊರೆಯಲಿಲ್ಲ. ಇದನ್ನೇ ಅಮೆರಿಕನ್ನರು 18ನೆಯ ಶತಮಾನದಲ್ಲಿ ಲಿಂಗ್ವಿಸ್ಟಿಕ್ಸ್ ಎಂದು ಕರೆದರು.

ಭಾಷಾಶಾಸ್ತ್ರ ಮತ್ತ ಭಾಷಾವಿಜ್ಞಾನ

ಭಾಷಾಶಾಸ್ತ್ರ ಮತ್ತ ಭಾಷಾವಿಜ್ಞಾನ ಈ ಎರಡು ಪದಗಳು ಚಾರಿತ್ರಿಕವಾಗಿ ಪರಸ್ಪರ ಸಂಬಂಧವನ್ನು ಹೊಂದಿದ್ದರೂ ಇವುಗಳ ಸ್ವರೂಪದಲ್ಲಿ ಭಿನ್ನತೆ ಯಿರುವುದನ್ನು ಗಮನಿಸಬಹುದು. ಭಾಷೆಗಳ ಶಾಸ್ತ್ರೀಯ ಅಧ್ಯಯನವನ್ನು ‘ಭಾಷಾಶಾಸ್ತ್ರ’ ಎಂದೂ ಭಾಷೆಗಳ ವೈಜ್ಞಾನಿಕ ಅಧ್ಯಯನವನ್ನು ‘ಭಾಷಾ ವಿಜ್ಞಾನ’ ಎಂದೂ ವಿಭಜಿಸಲಾಗಿದೆ. ಮೊದಲನೆಯದು ಸಾಹಿತ್ಯ ಗ್ರಂಥಗಳು, ಶಿಲಾಶಾಸನಗಳು, ತಾಮ್ರಪತ್ರಗಳಲ್ಲಿ ದೊರೆಯುವ ಭಾಷೆಯನ್ನು ಶಾಸ್ತ್ರೀಯ ದೃಷ್ಟಿಯಿಂದ ವಿವೇಚಿಸಿದರೆ ಎರಡನೆಯದು ಬರಹ ಮತ್ತು ಆಡು ಭಾಷೆ ಗಳೆರಡನ್ನೂ ತಾರತಮ್ಯವೆಣಿಸದೆ ವೈಜ್ಞಾನಿಕ ದೃಷ್ಟಿಯಿಂದ ವಿವೇಚಿಸುತ್ತದೆ. ಹಾಗಾಗಿ ‘ಭಾಷಾಶಾಸ್ತ್ರ’ದ ದೃಷ್ಟಿಗಿಂತ ಭಾಷಾವಿಜ್ಞಾನದ ದೃಷ್ಟಿ ಹೆಚ್ಚು ವ್ಯಾಪಕ ಹಾಗೂ ಸೂಕ್ತ ಎಂಬುದು ವಿದ್ವಾಂಸರ ಅಭಿಮತ.
ಹಿಂದಿನ ಭಾಷಾಧ್ಯಯನದ ರೀತಿ ಅಂದರೆ ವ್ಯಾಕರಣ ಶಾಸ್ತ್ರಗಳ ಸ್ವರೂಪ ನಿಗಮನ ಅಥವಾ ಆಜ್ಞಾಸ್ವರೂಪದ್ದಾದರೆ ಇಂದಿನ ಭಾಷಾಶಾಸ್ತ್ರ ಭಾಷಾ ವಿಜ್ಞಾನಗಳ ಸ್ವರೂಪ ಅನುಗಮನ ರೀತಿಯದು. ಮೊದಲನೆಯದು ಸೂತ್ರ ಗಳನ್ನು ಮೊದಲು ನೀಡಿ ಉದಾಹರಣೆಗಳನ್ನು ನಂತರ ನೀಡಿದರೆ ಎರಡನೆಯದು ಸಂಗ್ರಹಿತ ದತ್ತದ ಆಧಾರದಿಂದ ನಿಯಮಗಳನ್ನು ರೂಪಿಸುತ್ತದೆ. ಇದು ಭಾಷೆ ಹೇಗಿರಬೇಕು ಎಂದು ಹೇಳದೆ, ಹೇಗಿದೆ ಎಂದು ಮಾತ್ರ ವಿವರಿಸುತ್ತದೆ, ವಿಶ್ಲೇಷಿಸುತ್ತದೆ. ಮತ್ತೊಂದು ಪ್ರಮುಖ ಅಂಶವೆಂದರೆ ಪರಂಪರಾಗತ ವ್ಯಾಕರಣಕಾರರು ಲಿಖಿತ ರೂಪಗಳಿಗೆ ಹೆಚ್ಚು ಮಹತ್ವವನ್ನು ನೀಡುತ್ತಿದ್ದರೆ ಆಧುನಿಕ ಭಾಷಾ ವಿಜ್ಞಾನಿಗಳು ಆಡು ಮಾತಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ಕೊಡುತ್ತಾರೆ. ಬರೆಹ ಆಡುಮಾತಿನ ಪ್ರತಿಬಿಂಬ. ಹಾಗಾಗಿ ಆಡುಮಾತೇ ಭಾಷೆ, ಅದೇ ಪ್ರಮಾಣ. ಭಾಷಾಶಾಸ್ತ್ರಜ್ಞರು ಭಾಷೆಯ ಉಗಮ, ವಿಕಾಸ, ಭಾಷಾವ್ಯತ್ಯಾಸ, ಭಾಷಾ ಪ್ರಭೇದಗಳು, ಭಾಷಾಸ್ವೀಕರಣ, ಭಾಷಾವರ್ಗೀಕರಣ, ಸಮಾಜ, ಸಂಸ್ಕೃತಿ, ಜನಾಂಗ ಮೊದಲಾದ ಎಲ್ಲಾ ಭಾಷೆಯ ಬಾಹ್ಯ ಅಂಶಗಳನ್ನು ಅಧ್ಯಯನ ಮಾಡುವುದರ ಜೊತೆಗೆ ಅದರ ಆಂತರಿಕ ಅಂಶಗಳಾದ ಧ್ವನಿ, ಪದ, ರೂಪ, ವಾಕ್ಯ, ಅರ್ಥ, ವ್ಯಾಕರಣ ಮೊದಲಾದ ಎಲ್ಲಾ ಅಂಶಗಳನ್ನೂ ಅಧ್ಯಯನ ಮಾಡುತ್ತಾರೆ. ಆದ್ದರಿಂದ ಭಾಷೆಯ ಆಂತರಿಕ ಹಾಗೂ ಬಾಹ್ಯ ವಿಚಾರಗಳನ್ನು ಅಧ್ಯಯ ಮಾಡುವ ವ್ಯವಸ್ಥೆಯೇ ‘ಭಾಷಾವಿಜ್ಞಾನ’ ಎಂದು ವ್ಯಾಖ್ಯಾನಿಸಿಕೊಳ್ಳಲಾಗಿದೆ. ಗ್ಲೀಸನ್ ಎಂಬ ಭಾಷಾ ವಿಜ್ಞಾನಿ “ಭಾಷೆಯ ಆಂತರಿಕ ರಚನೆಯನ್ನು ಅರಿಯುವುದೇ ಭಾಷಾವಿಜ್ಞಾನ” ಎಂದರೆ ವಿನ್‌ಫ್ರೆಡ್ ಲೇಮನ್ ಎಂಬಾತ “ಭಾಷಾವಿಜ್ಞಾನ ಎಂಬುದು ಮಾನವ ವರ್ತನೆಗೆ ಸಂಬಂಧಿಸಿದ ವಿಜ್ಞಾನ. ಯಾವುದೇ ವಾಕ್ಯವನ್ನು ಪೂರ್ಣ ಅರ್ಥಮಾಡಿಕೊಳ್ಳುವುದೆಂದರೆ ಮನುಷ್ಯನ ಮನಸ್ಸಿನ ನಡವಳಿಕೆಯನ್ನು ಅರ್ಥಮಾಡಿಕೊಂಡಂತೆ ಆಗುತ್ತದೆ” ಎಂದು ಅಭಿಪ್ರಾಯ ಪಟ್ಟಿದ್ದಾನೆ.
ಭಾಷಾ ವಿಜ್ಞಾನ ಇಂದು ಅನೇಕ ಅಧ್ಯಯನ ಶಾಖೆಗಳಾಗಿ ಬೆಳೆದಿದೆ. ಅವನ್ನು ಪ್ರಮುಖವಾಗಿ ಸಾಮಾನ್ಯ ಭಾಷಾವಿಜ್ಞಾನ ಮತ್ತು ಆನ್ವಯಿಕ ಭಾಷಾ ವಿಜ್ಞಾನ ಎಂದು ಎರಡು ವಿಭಾಗಗಳಾಗಿ ವಿಂಗಡಿಸಬಹುದು. ಮತ್ತೆ ಸಾಮಾನ್ಯ ಭಾಷಾವಿಜ್ಞಾನದಲ್ಲಿ ವಿವರಣಾತ್ಮಕ (ವರ್ಣನಾತ್ಮಕ) ಭಾಷಾವಿಜ್ಞಾನ, ಐತಿಹಾಸಿಕ (ಚಾರಿತ್ರಿಕ) ಭಾಷಾವಿಜ್ಞಾನ, ತೌಲನಿಕ (ತುಲನಾತ್ಮಕ) ಭಾಷಾವಿಜ್ಞಾನ ಎಂದು ಒಳವಿಭಾಗಗಳನ್ನು ಅಂತೆಯೇ ಆನ್ವಯಿಕ ಭಾಷಾ ವಿಜ್ಞಾನದಲ್ಲಿ ಮಾನವ ಭಾಷಾವಿಜ್ಞಾನ, ಮನೋಭಾಷಾ ವಿಜ್ಞಾನ, ಸಾಮಾಜಿಕ ಭಾಷಾ ವಿಜ್ಞಾನ, ಜೈವಿಕ ಭಾಷಾವಿಜ್ಞಾನ, ವೈದೃಶ್ಯಾತ್ಮಕ ಭಾಷಾವಿಜ್ಞಾನ, ಕ್ರಿಯಾತ್ಮಕ ಭಾಷಾ ವಿಜ್ಞಾನ, ಗಣಿತೀಯ ಭಾಷಾವಿಜ್ಞಾನ, ಕ್ಷೇತ್ರಭಾಷಾವಿಜ್ಞಾನ ಎಂದು ಹಲವು ಒಳ ವಿಭಾಗಗಳನ್ನು ವಿಂಗಡಿಸಿಕೊಳ್ಳಬಹುದು.

ಸಾಮಾನ್ಯ ಭಾಷಾವಿಜ್ಞಾನ

ಭಾಷೆ ಅಥವಾ ಭಾಷೆಗಳಲ್ಲಿ ಕಂಡುಬರುವ ಸಾಮಾನ್ಯ ವಿಚಾರಗಳನ್ನು ಅಧ್ಯಯನ ಮಾಡುವ ವಿಜ್ಞಾವೇ ಸಾಮಾನ್ಯ ಭಾಷಾ ವಿಜ್ಞಾನ. ಇದರಲ್ಲಿ ಭಾಷೆಯ ಸಾಮಾನ್ಯ ಗುಣ, ಲಕ್ಷಣಗಳನ್ನು ಐತಿಹಾಸಿಕ, ವಿವರಣಾತ್ಮಕ ಹಾಗೂ ತೌಲನಿಕ – ಈ ಮೂರು ದೃಷ್ಟಿಗಳಿಂದ ವಿವರಿಸಬಹುದು. ಇದರಿಂದ ಹೊರಡುವ ತತ್ತ್ವಗಳನ್ನು ಇತರ ಜ್ಞಾನಶಾಖೆಗಳೊಂದಿಗೆ ಪ್ರಾಯೋಗಿಕವಾಗಿ ಅನ್ವಯಿಸಿಯೂ ನೋಡಬುಹುದು.

ಐತಿಹಾಸಿಕ ಭಾಷಾವಿಜ್ಞಾನ

ಯಾವುದೇ ಒಂದು ಭಾಷೆಗೆ ಚರಿತ್ರೆ ಅಥವಾ ಇತಿಹಾಸ ಇರುತ್ತದೆ. ಭಾಷೆಯ ಒಂದು ಅವಸ್ಥೆಯೊಡನೆ ಇನ್ನೊಂದು ಭಾಷೆಯ ಅವಸ್ಥೆ ಅಥವಾ ಅವಸ್ಥೆಗಳನ್ನು ಹೋಲಿಸಿ ನೋಡುವುದನ್ನು ಐತಿಹಾಸಿಕ ಭಾಷಾ ವಿಜ್ಞಾನ ಎನ್ನುವರು. ಇದು ಸಾಮಾನ್ಯ ಭಾಷಾವಿಜ್ಞಾನದ ಒಂದು ಪ್ರಮುಖ ಶಾಖೆಯಾಗಿದೆ. ಭಾಷೆ ಅಥವಾ ಭಾಷೆಗಳು ಐತಿಹಾಸಿಕವಾಗಿ ಬೆಳೆದುಬಂದ ವಿಧಾನವನ್ನು ಇದರಲ್ಲಿ ವಿವೇಚಿಸಲಾಗುತ್ತದೆ. ಭಾಷೆಯ ಧ್ವನಿಗಳು, ಶಬ್ದಕೋಶ, ವ್ಯಾಕರಣ ಇತ್ಯಾದಿಗಳಲ್ಲಿ ಕಾಲಕಾಲಕ್ಕೆ ಉಂಟಾದ ಮಾರ್ಪಾಡುಗಳನ್ನು ಸಕಾರಣವಾಗಿ ನಿರೂಪಿಸುವುದೇ ಐತಿಹಾಸಿಕ ಭಾಷಾ ವಿಜ್ಞಾನದ ಮುಖ್ಯ ಉದ್ದೇಶ. ಭಾಷೆಯ ಹುಟ್ಟು ಮತ್ತು ಬೆಳವಣಿಗೆ, ಭಾಷಾ ವ್ಯತ್ಯಾಸ, ಭಾಷಾ ಸ್ವೀಕರಣ, ಸಾದೃಶ್ಯ ಸೃಷ್ಟಿ, ಭಾಷೆಯ ಪೂರ್ವೇತಿಹಾಸ ಮೊದಲಾದವನ್ನು ಸವಿವರವಾಗಿ ತಿಳಿಯಲು ಈ ಬಗೆಯ ಅಧ್ಯಯನ ಸಹಾಯಕವಾದುದು. ಇದನ್ನು ದ್ವಿಕಾಲಿಕ ಭಾಷಾ ವಿಜ್ಞಾನ, ವಿಕಾಸಾತ್ಮಕ ಭಾಷಾವಿಜ್ಞಾನ ಎಂದು ಬೇರೆ ಬೇರೆ ಹೆಸರುಗಳಿಂದ ವಿದ್ವಾಂಸರು ಕರೆದು ಕೊಂಡಿದ್ದಾರೆ.
ಭಾಷೆಯನ್ನು ಐತಿಹಾಸಿಕ ವಿಧಾನವನ್ನನುಸರಿಸಿ ಅಧ್ಯಯನ ಮಾಡುವ ರೂಢಿ ಬಹಳ ಪ್ರಾಚೀನವಾದುದು. ಗ್ರೀಕರು ಮತ್ತು ರೋಮನ್ನರು ಈ ವಿಧಾನವನ್ನನುಸಿದ ಮೊತ್ತಮೊದಲಿಗರು. ತರುವಾಯ ಪ್ರಾಚೀನ ಅರಬ್ಬರು, ಚೀನೀಯರು, ಭಾರತೀಯರು. ಯೂರೋಪಿಯನ್ನರು ಐತಿಹಾಸಿಕ ಅಧ್ಯಯನ ವನ್ನು ಅನುಸರಿಸಿದರು. 15-17ನೆಯ ಶತಮಾನಗಳಲ್ಲಿ ಗ್ರೀಕ್, ಹೀಬ್ರೂ, ಅರಾಬಿಕ್, ಹಿಟ್ಟೈಟ್ ಮೊದಲಾದ ಭಾಷೆಗಳನ್ನು ಐತಿಹಾಸಿಕವಾಗಿ ಅಧ್ಯಯನ ಮಾಡಿದ ವಿದ್ವಾಂಸರು ಎಲ್ಲಾ ಭಾಷೆಗಳಿಗೂ ಗ್ರೀಕ್ ಭಾಷೆಯೇ ಮೂಲವೆಂದು ಅಭಿಪ್ರಾಯಪಟ್ಟರೆ ಇನ್ನು ಕೆಲವರು ಸಂಸ್ಕೃತ ಭಾಷೆಯೇ ಎಲ್ಲಾ ಭಾಷೆಗಳ ಮೂಲವೆಂದು ಮತ್ತೂ ಕೆಲವರು ಹೀಬ್ರೂ ಭಾಷೆಯೇ ಮೂಲವೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸರ್ ವಿಲಿಯಂ ಜೋನ್ಸ್, ಷ್ಲೆಗಲ್, ರಾಸ್‌ಮಸ್‌ರಾಸ್ಕ್, ಯೂಕೋಬ್ ಗ್ರಿಮ್, ವರ್ನರ್, ಹಮ್‌ಬೋಲ್ಟ್, ಫ್ರಾನ್ಸಿಸ್‌ಭಾಪ್, ಮ್ಯಾಕ್ಸ್‌ಮುಲ್ಲರ್, ವ್ಹೀಟ್ನಿ ಮೊದಲಾದವರು ಐತಿಹಾಸಿಕ ಭಾಷಾವಿಜ್ಞಾನದ ಪ್ರಮುಖರು.

ವಿವರಣಾತ್ಮಕ ಭಾಷಾವಿಜ್ಞಾನ

ಒಂದು ಭಾಷೆಯ ಧ್ವನಿ, ಪದ, ರೂಪ, ವಾಕ್ಯ, ಅರ್ಥ ಮುಂತಾದ ವಿಚಾರಗಳನ್ನು ಆ ಭಾಷೆಯಲ್ಲಿರುವ ಸ್ಥಿತಿಯಲ್ಲಿಯೆ ವಿವರಿಸಿ ತೋರಿಸಲಾಗುತ್ತದೆ. ಒಂದು ಭಾಷೆಯ (ಬರೆಹದ ಭಾಷೆಯಾಗಿರಲಿ, ಆಡು ಭಾಷೆಯಾಗಿರಲಿ) ಕಿರಿಯ ಘಟಕವಾದ ಧ್ವನಿಮಾದಿಂದ ಹಿಡಿದು ಹಿರಿಯ ಘಟಕವಾದ ವಾಕ್ಯದವರೆಗೆ ಅದರ ಎಲ್ಲ ಅಂಶಗಳನ್ನೂ ವಿವರಿಸಿ ವಿಶ್ಲೇಷಿಸುವ ಈ ಬಗೆಯ ಅಧ್ಯಯನ ವಿಧಾನಕ್ಕೆ ವಿವರಣಾತ್ಮಕ ಭಾಷಾವಿಜ್ಞಾನ ಎನ್ನುವರು. ಇದು ಭಾಷೆಯ ಆಂತರಿಕ ರಚನೆಗೆ ಸಂಬಂಧ ಪಟ್ಟ ಅಧ್ಯಯನ ವಿಧಾನ. ಭಾಷೆಯಲ್ಲಿನ ಪ್ರತಿಯೊಂದು ಅಂಶಗಳನ್ನೂ ಸವಿವರವಾಗಿ, ಪ್ರಾಯೋಗಿಕವಾಗಿ ಅಧ್ಯಯನ ಮಾಡುವುದರಿಂದ ಅನೇಕ ಉಪಶಾಖೆಗಳು ಇದರಲ್ಲಿವೆ. ಧ್ವನಿವಿಜ್ಞಾನ, ಧ್ವನಿಮಾವಿಜ್ಞಾನ, ಆಕೃತಿಮಾ ವಿಜ್ಞಾನ, ವಾಕ್ಯ ವಿಜ್ಞಾನ, ಅರ್ಥವಿಜ್ಞಾನ ಇವು ಪ್ರಮುಖವಾದವು. ಒಂದು ಭಾಷೆಯಲ್ಲಿನ ಧ್ವನಿಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುವ ವಿಧಾನ ಧ್ವನಿವಿಜ್ಞಾನ (ಫೊನೆಟಿಕ್ಸ್) ಆದರೆ ಒಂದು ಭಾಷೆಯ ಮಹತ್ವದ ಧ್ವನಿಗಳ ಅಥವಾ ಧ್ವನಿಮಾಗಳ ವೈಜ್ಞಾನಿಕ ಅಧ್ಯಯನವನ್ನು ಧ್ವನಿಮಾ ವಿಜ್ಞಾನ (ಫೋನಿಮಿಕ್ಸ್) ಎನ್ನುವರು. (ಧ್ವನಿವಿಜ್ಞಾನ, ಧ್ವನಿಮಾ ವಿಜ್ಞಾನಗಳನ್ನು ಸ್ವನವಿಜ್ಞಾನ, ಸ್ವನಿಮಾವಿಜ್ಞಾನ ಎಂತಲೂ ಕರೆಯವರು) ಧ್ವನಿ ವಿಜ್ಞಾನದಲ್ಲಿ ಉಚ್ಚರಿತ ಧ್ವನಿಗಳು, ಅವುಗಳ ಹುಟ್ಟು, ಸ್ವರೂಪ, ವರ್ಗೀಕರಣ, ಧ್ವನಿಲಿಪಿ, ಬಳಕೆ ಈ ಅಂಶಗಳನ್ನು ವಿವೇಚಿಸಲಾಗುತ್ತದೆ ಈ ಅಧ್ಯಯನ ವಿವರಣಾತ್ಮಕ ಭಾಷಾವಿಜ್ಞಾನ ಎಂದು ಕರೆಯುವರು. ಅಲ್ಲದೆ ಎಲ್ಲ ಅಧ್ಯಯನ ವಿಧಾನ ಗಳಿಗೂ ಇದು ಅವಶ್ಯಕ ಹಾಗೂ ಪೂರಕವಾದುದರಿಂದ ಭಾಷಾವಿಜ್ಞಾನದ ಎಲ್ಲ ಶಾಖೆಗಳಿಗೂ ಸಂಬಂಧಪಡುತ್ತದೆ. ‘ಧ್ವನಿವಿಜ್ಞಾನ ಜಗತ್ತಿನ ಎಲ್ಲಾ ಭಾಷೆಗಳ ಉಚ್ಚರಿತ ಧ್ವನಿಗಳ ಅಧ್ಯಯನಕ್ಕೆ ಸಂಬಂಧಿಸಿದ್ದಾದರೆ ಧ್ವನಿಮಾ ವಿಜ್ಞಾನ ಯಾವುದಾದರೊಂದು ಭಾಷೆಯ ಅಥವಾ ಉಪಭಾಷೆಯ ಧ್ವನಿಮಾಗಳ ಅಧ್ಯಯನಕ್ಕೆ ಸಂಬಂಧಿಸಿದ್ದಾಗಿದೆ’. ಧ್ವನಿಮಾದ ಅನಂತರದ ದೊಡ್ಡ ಹಾಗೂ ಅರ್ಥಪೂರ್ಣವಾದ ಘಟಕ ಪದ ಅಥವಾ ಪದಪುಂಜಗಳಲ್ಲಿನ ಆಕೃತಿಗಳನ್ನು ವಿಶ್ಲೇಷಿಸುವ ಅಧ್ಯಯನ ಆಕೃತಿಮಾವಿಜ್ಞಾನ (ಮಾರ್ಫಾಲೊಜಿ) ಎನಿಸಿಕೊಳ್ಳುತ್ತದೆ. ಭಾಷೆಯ ಹಿರಿಯ ಘಟಕವೆಂದರೆ ವಾಕ್ಯಗಳು. ವಾಕ್ಯಗಳ ರಚನೆ, ಅವುಗಳಲ್ಲಿನ ಪದಪುಂಜ, ವಾಕ್ಯ ಖಂಡಗಳು, ಅವುಗಳ ಬಗೆ ಮೊದಲಾದವನ್ನು ವಿಶ್ಲೇಷಿಸಿ ವಿವರಿಸುವ ಅಧ್ಯಯನ ವಿಧಾನವನ್ನು ವಾಕ್ಯ ವಿಜ್ಞಾನ, ವಾಕ್ಯರಚನಾ ವಿಜ್ಞಾನ (ಸಿನ್‌ಟ್ಯಾಕ್ಸ್) ಎಂದು ಕರೆಯುವರು. ಯಾವುದೇ ಭಾಷೆ ಅಥವಾ ಉಪಭಾಷೆಗಳಲ್ಲಿ ಬರುವ ಪದರಚನೆಗಳು ತಮ್ಮದೇ ಆದ ಅರ್ಥವನ್ನು ಹೊಂದಿರುತ್ತವೆ. ಭಾಷಾವಿಜ್ಞಾನದಲ್ಲಿ ಅರ್ಥದ ಹಂತ ಬಹಳ ಮಹತ್ವವಾದುದು. ಇತ್ತೀಚೆಗೆ ಈ ಶಾಖೆ ಭಾಷಾಧ್ಯಯನದ ಸಂದರ್ಭದಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ. ಪದರಚನೆಗಳು ಪಡೆದುಕೊಂಡಿರುವ ಅರ್ಥಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸುವ ಅಧ್ಯಯನ ವಿಧಾನವನ್ನು ಅರ್ಥವಿಜ್ಞಾನ ಅಥವಾ ಶಬ್ದಾರ್ಥವಿಜ್ಞಾನ (ಸಿಮ್ಯಾಂಟಿಕ್ಸ್) ಎನ್ನುವರು. ಇವಲ್ಲದೆ ಅರ್ಥವಿಜ್ಞಾನದಲ್ಲಿ ಪದಕೋಶ ಸ್ವರೂಪ, ವಿಕಾಸದ ಹಂತಗಳನ್ನು ಅಧ್ಯಯನ ಮಾಡುವ ಇನ್ನೊಂದು ಶಾಖೆಯನ್ನು ರೂಪಿಸಿಕೊಳ್ಳ ಲಾಗಿದೆ. ಅದೇ ನಿಘಂಟು ರಚನಾವಿಜ್ಞಾನ (ಲೆಕ್ಸಿಕೋಗ್ರಫಿ). ಇದರ ಜೊತೆಗೆ ಭಾಷೆಯ ಸ್ವರೂಪವನ್ನು ಗ್ರಹಿಸುವ ಉದ್ದೇಶದಿಂದ ಸಂಕಥನಶಾಸ್ತ್ರವೆಂಬ ಸ್ತರವೊಂದನ್ನು ಕಲ್ಪಿಸಿಕೊಳ್ಳಲಾಗಿದೆ. ವಾಕ್ಯವೆಂಬ ಘಟಕದ ಆಚೆಗೆ ವಾಕ್ಯಗಳ ನಡುವೆ ರೂಪುಗೊಳ್ಳುವ ಸಂಬಂಧವನ್ನು ಅಧ್ಯಯನ ಮಾಡುವುದು ಈ ಶಾಸ್ತ್ರಶಾಖೆಯ ಉದ್ದೇಶವಾಗಿದೆ.
ಭಾಷಾವಿಜ್ಞಾನ ಕ್ಷೇತ್ರದಲ್ಲಿ ವಿವರಣಾತ್ಮಕ ಭಾಷಾವಿಜ್ಞಾನ 30ನೆಯ ಶತಮಾನದಲ್ಲಿ ವ್ಯಾಪಕವಾಗಿ ಬೆಳೆಯಿತು. ಈ ವಿವರಣಾತ್ಮಕ ಭಾಷಾ ವಿಜ್ಞಾನ ವನ್ನು ವಿದ್ವಾಂಸರು ಏಕಕಾಲಿಕ ಭಾಷಾವಿಜ್ಞಾನ (ಸಿಂಕ್ರಾನಿಕ್ ಲಿಂಗ್ವಿಸ್ಟಿಕ್) ವಿಶ್ಲೇಷಣಾತ್ಮಕ ಭಾಷಾವಿಜ್ಞಾನ (ಅನೆಲಿಟಿಕಲ್ ಲಿಂಗ್ವಿಸ್ಟಿಕ್ಸ್) ಸಂರಚನಾತ್ಮಕ ಭಾಷಾವಿಜ್ಞಾನ (ಸ್ಟ್ರಕ್ಚರಲ್ ಲಿಂಗ್ವಿಸ್ಟಿಕ್ಸ್), ಅಚಲ ಭಾಷಾವಿಜ್ಞಾನ (ಸ್ಟ್ಯಾಟಿಕ್ ಲಿಂಗ್ವಿಸ್ಟಿಕ್ಸ್), ವರ್ಣನಾತ್ಮಕ ಭಾಷಾವಿಜ್ಞಾನ (ಟ್ಯಾಕ್ಸೋನಮಿಕ್ ಲಿಂಗ್ವಿಸ್ಟಿಕ್ಸ್) ಎಂದು ಬೇರೆ ಬೇರೆ ಹೆಸರುಗಳಿಂದ ಕರೆದುಕೊಂಡಿದ್ದಾರೆ. ಗ್ರಾಂಥಿಕ ಭಾಷೆ ಗಳಿಗಿಂತ ಆಡುಭಾಷೆಗಳ ಅಧ್ಯಯನಕ್ಕೆ ಈ ಶಾಖೆ ಹೆಚ್ಚು ಮಹತ್ವ ನೀಡಿದ್ದರ ಫಲವಾಗಿ ಅನೇಕ ಭಾಷೆ ಉಪಭಾಷೆಗಳ ಅಧ್ಯಯನ ವ್ಯಾಪಕವಾಗಿ ನಡೆದಿದೆ. ಫರ್ಡಿನಂಡ್ ಡಿ. ಸಸೂರ್ (1857-1913), ಎಡ್ವರ್ಡ್ ಸಪೀರ್ (1884-1931), ಫ್ರಾನ್ಸ್ ಬೋಆಸ್ (1896- 1938) ಲಿಯೊನಾರ್ಡ್ ಬ್ಲೂಂ ಫೀಲ್ಡ್ (1887-1949) ಮೊದಲಾದ ಭಾಷಾವಿಜ್ಞಾನಿಗಳು ಈ ಅಧ್ಯಯನ ಶಾಖೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.

ತೌಲನಿಕ ಭಾಷಾವಿಜ್ಞಾನ

ಐತಿಹಾಸಿಕ ಭಾಷಾವಿಜ್ಞಾನದ ಒಂದು ಪ್ರಮುಖ ಅಂಗವಿದು. ಇದರಲ್ಲಿಎರಡು ಅಥವಾ ಅದಕ್ಕಿಂತ ಹೆಚ್ಚು ಭಾಷೆ ಅಥವಾ ಉಪಭಾಷೆಗಳನ್ನು ಪರಸ್ಪರ ಹೋಲಿಸಿ ಅವುಗಳಲ್ಲಿರುವ ಪ್ರಮುಖ ಅಂಶಗಳನ್ನು ಗುರುತಿಸಿಕೊಳ್ಳಲಾಗುತ್ತದೆ. ಮೂಲತಃ ಒಂದೇ ಭಾಷೆಯಿಂದ ಹುಟ್ಟಿ ಬೆಳೆದು ಬಂದ ಭಾಷೆ, ಉಪಭಾಷೆಗಳಲ್ಲಿ ಸಾಮಾನ್ಯವಾಗಿ ಹೋಲಿಕೆ, ಸಮಾನಾಂಶಗಳು ಇದ್ದೇ ಇರುತ್ತವೆ. ಭಾಷೆಗಳ ನಡುವೆ ಇರಬಹುದಾದ ಸಂಬಂಧಗಳನ್ನು ತಿಳಿಯಲು ಈ ತೌಲನಿಕ ಅಧ್ಯಯನ ಅತ್ಯಗತ್ಯ, ಆದ್ದರಿಂದ ಈ ಬಗೆಯ ಅಧ್ಯಯವನ್ನು ತೌಲನಿಕ ಭಾಷಾವಿಜ್ಞಾನ ಎನ್ನುವರು. ಇದರಿಂದ ಭಾಷೆಗಳ ಸಮಾನ ಹಾಗೂ ಅಸಮಾನ ಅಂಶಗಳನ್ನು ನಿರ್ಧರಿಸಿಕೊಳ್ಳ ಬಹುದಲ್ಲದೆ ಅವು ಚಾರಿತ್ರಿಕವಾಗಿ ಬೆಳೆದು ಬಂದ ವಿಧಾನವನ್ನು ತಿಳಿಯಬಹು ದಲ್ಲದೆ ಅವು ಚಾರಿತ್ರಿಕವಾಗಿ ಬೆಳೆದು ಬಂದ ವಿಧಾನವನ್ನೂ ತಿಳಿಯಬಹುದು. ಈ ವಿಧಾನದಿಂದ ಜಗತ್ತಿನ ಭಾಷೆಗಳು ವಿಕಾಸಗೊಂಡ ಬಗೆ, ಅವುಗಳ ಮೂಲಭಾಷೆ ಯಾವುದಾಗಿರಬಹುದು; ಸೋದರ (ಜ್ಞಾತಿ) ಭಾಷೆಗಳ ನಡುವಣ ಸಂಬಂಧ, ಉಪಭಾಷೆಗಳು ಅವುಗಳ ಸ್ವರೂಪ, ವ್ಯಾಪ್ತಿ ಮೊದಲಾದ ಅಂಶಗಳನ್ನು ವಿವರವಾಗಿ ತಿಳಿಯಲು ಸಾಧ್ಯ. ಭಾಷಾವರ್ಗೀಕರಣ, ಭಾಷಿಕ ಪರಿವರ್ತನೆ, ಭಾಷಿಕ ಪುನರ್‌ನಿರ್ಮಾಣ, ಭಾಷಾಕಾಲಕ್ರಮವಿಜ್ಞಾನ ಈ ವಿಚಾರಗಳ ತಿಳಿವಳಿಕೆಗೂ ತೌಲನಿಕ ಭಾಷಾವಿಜ್ಞಾನ ಸಹಾಯಕ.
ಈ ಅಧ್ಯಯನ ವಿಧಾನವು 18, 19ನೆಯ ಶತಮಾನಗಳಲ್ಲಿ ಹೆಚ್ಚು ಪ್ರಚುರತೆಯನ್ನು ಪಡೆಯಿತು. ಪ್ರಾರಂಭದಲ್ಲಿ ಸಂಸ್ಕೃತ ಮತ್ತು ಇತರ ಭಾಷೆಗಳಿಗೆ ಇರುವ ವ್ಯತ್ಯಾಸಗಳನ್ನು ಈ ವಿಧಾನದಿಂದ ಸರ್ ವಿಲಿಯಂ ಜೋನ್ಸ್ ನಿರ್ಧರಿಸಲು ತೊಡಗಿದನು. ಆದ್ದರಿಂದ ಈತನನ್ನು ‘ತೌಲನಿಕ ಭಾಷಾವಿಜ್ಞಾನದ ಪಿತಾಮಹ’ ಎಂದು ಕರೆಯುವರು. ಹೆನ್ರಿ ಥಾಮಸ್ ಕೋಲ್ ಬ್ರುಕ್, ಷ್ಲೆಗೆಲ್, ವಿಲ್‌ಹೆಲ್ಮ್‌ಹಂಬೋಲ್ಟ್, ರಾಸ್‌ಮಸ್‌ರಾಸ್ಕ್, ಯಾಕೊಬ್ ಗ್ರಿಮ್, ವರ್ನರ್, ಫ್ರಾನ್ಸಿಸ್ ಬಾಪ್ ಮೊದಲಾದವರು ಈ ಶಾಖೆಯ ಬೆಳವಣಿಗೆಗೆ ಶ್ರಮಿಸಿದ ಪ್ರಮುಖರು.

ಆನ್ವಯಿಕ ಭಾಷಾ ವಿಜ್ಞಾನ (ಅಪ್ಲೈಡ್ ಲಿಂಗ್ವಿಸ್ಟಿಕ್ಸ್)

ಸಾಮಾನ್ಯ ಭಾಷಾವಿಜ್ಞಾನದಿಂದ ಲಭ್ಯವಾದ ಭಾಷೆಗಳ ಸಾಮಾನ್ಯ ತತ್ತ್ವಗಳನ್ನು ಬೇರೆ ಬೇರೆ ಶಾಸ್ತ್ರ, ವಿಜ್ಞಾನಗಳ ಸಹಾಯದಿಂದ ವಿವಿಧ ರೀತಿಯಲ್ಲಿ ಅವುಗಳಿಗೆ ನೇರವಾಗಿ ಅನ್ವಯವಾಗುವಂತೆ ವಿವೇಚಿಸುವ ಅಧ್ಯಯನ ಶಿಸ್ತೇ ಆನ್ವಯಿಕ ಭಾಷಾವಿಜ್ಞಾನ. ಈ ಅಧ್ಯಯನಕ್ಕೆ ವಿವಿಧ ಪ್ರಯೋಗಗಳ ನೆರವು ಅತ್ಯಗತ್ಯ ವಾದ್ದರಿಂದ ಇದನ್ನು ಪ್ರಾಯೋಗಿಕ ಭಾಷಾವಿಜ್ಞಾನ (ಪ್ರಾಕ್ಟಿಕಲ್ ಲಿಂಗ್ವಿಸ್ಟಿಕ್ಸ್) ಎಂತಲೂ ಕರೆಯುತ್ತಾರೆ. ಈ ಆನ್ವಯಿಕ ವಿಧಾನದಲ್ಲೂ ಮಾನವ ಭಾಷಾ ವಿಜ್ಞಾನ, ಮನೋಭಾಷಾವಿಜ್ಞಾನ ಮೊದಲಾಗಿ ಈ ಹಿಂದೆಯೇ ತಿಳಿಸಿರುವಂತೆ ಅನೇಕ ಅಧ್ಯಯನ ಶಾಖೆಗಳಿವೆ.

ಮಾನವ ಭಾಷಾವಿಜ್ಞಾನ (ಆ್ಯನ್ತ್ರೊಪಾಲಾಜಿಕಲ್ ಲಿಂಗ್ವಿಸ್ಟಿಕ್ಸ್)

ಮಾನವ ಸಮಾಜ ಜೀವಿ; ಭಾಷೆ, ಸಂಸ್ಕೃತಿ ಮಾನವ ನಿರ್ಮಿತ. ವ್ಯಕ್ತಿ, ಸಮಾಜ ಮತ್ತು ಸಂಸ್ಕೃತಿಗಳ ನಡುವಣ ಕೊಂಡಿಯಂತೆ ಭಾಷೆ ಕಾರ್ಯ ನಿರ್ವಹಿಸುತ್ತದೆ. ಮಾನವರ ನಡುವೆ ಭಾವವಿನಿಮಯಕ್ಕೆ ಭಾಷೆ ಸಹಾಯಕ. ಆದ್ದರಿಂದ ಮಾನವಶಾಸ್ತ್ರಜ್ಞರು ತಮ್ಮ ಕ್ಷೇತ್ರಕಾರ್ಯಕ್ಕನುಗುಣವಾಗಿ ಭಾಷಾ ವಿಜ್ಞಾನದ ಉಪಯೋಗವನ್ನು ಹೊಂದಲು ಪ್ರಯತ್ನಿಸಿದ್ದರ ಫಲವೇ ‘ಮಾನವ ಭಾಷಾವಿಜ್ಞಾನ’ದ ಶಾಖೆಯ ಉಗಮಕ್ಕೆ ಕಾರಣ. ಮಾನವಶಾಸ್ತ್ರಜ್ಞರ ಪ್ರಕಾರ ಭಾಷೆ ಸಂಸ್ಕೃತಿಯ ಪ್ರಮುಖ ಅಂಗಗಳಲ್ಲಿ ಒಂದು. ಆದ್ದರಿಂದ ಭಾಷೆಯ ಅಧ್ಯಯನದ ಮೂಲಕ ಸಂಸ್ಕೃತಿಯ ಅಧ್ಯಯನ ಹೆಚ್ಚು ಪರಿಪೂರ್ಣವಾಗುತ್ತದೆ ಎಂದು ಭಾವಿಸಲಾಗಿದೆ. ಇದರಿಂದ ಮಾನವನಿಗೂ ಭಾಷೆಗೂ ಅವನ ಸಂಸ್ಕೃತಿಗೂ ಇರುವ ಸಂಬಂಧವನ್ನು ಅಧ್ಯಯನ ಮಾಡಬಹುದು. ಈ ಕ್ಷೇತ್ರ ದಲ್ಲಿ ಎಡ್ವರ್ಡ್ ಸಪೀರ್, ಫಾನ್ಸ್ ಬೋಆಸ್, ಲಿಯೊನಾರ್ಡ್ ಬ್ಲೂಂಫೀಲ್ಡ್ ಮೊದಲಾದವರು ಕೃಷಿ ಮಾಡಿದ ಪ್ರಮುಖರು.

ಮನೋಭಾಷಾವಿಜ್ಞಾನ (ಸೈಕೋ - ಲಿಂಗ್ವಿಸ್ಟಿಕ್ಸ್)

ಮಾನವನ ಅನೇಕ ಬಗೆಯ ಮಾನಸಿಕ ಚಟುವಟಿಕೆಗಳು ಅಥವಾ ವರ್ತನೆಗಳು ಅವನಾಡುವ ಭಾಷೆಯ ಮುಖಾಂತರ ಪ್ರಕಟಗೊಳ್ಳುತ್ತವೆ. ಇವನ್ನು ಪ್ರಾಯೋಗಿಕ, ವೈಜ್ಞಾನಿಕ ಹಾಗೂ ಸೈದ್ಧಾಂತಿಕವಾಗಿ ವಿವೇಚಿಸುವ ಅಧ್ಯಯನ ಶಿಸ್ತೇ ‘ಮನೋಭಾಷಾವಿಜ್ಞಾನ. ವಿಚಾರದ ಗ್ರಹಿಕೆ, ಅಭಿವ್ಯಕ್ತಿ, ಆಲೋಚನೆ ಇವು ಭಾಷಾವಿಜ್ಞಾನದ ಮೂಲಕ ಮನೋವಿಜ್ಞಾನಿಗೆ ಸಹಾಯಕ. ಇಂತಹ ಕ್ರಿಯೆ, ಪ್ರತಿಕ್ರಿಯೆಗಳನ್ನು ಈ ಅಧ್ಯಯನ ಶಾಖೆ ಅಧ್ಯಯನ ಮಾಡುತ್ತದೆ. ಇದರಲ್ಲೂ ಅನೇಕ ಸೂಕ್ಷ್ಮ ಶಾಖೆಗಳನ್ನು ಮಾಡಿಕೊಳ್ಳಲಾಗಿದೆ.

ಸಾಮಾಜಿಕ ಭಾಷಾವಿಜ್ಞಾನ (ಸೋಸಿಯೋ - ಲಿಂಗ್ವಿಸ್ಟಿಕ್ಸ್)

ಮಾನವ, ಸಮಾಜ ಮತ್ತು ಭಾಷೆ ಪರಸ್ಪರ ನಿಕಟ ಸಂಬಂಧವನ್ನು ಹೊಂದಿದಂತಹವು ಹಾಗೂ ಪರಸ್ಪರ ಪೂರಕವಾದವು. ಭಾಷೆಯ ಅಸ್ತಿತ್ವ ಹಾಗೂ ಚಲನಶೀಲತೆಗೆ ಸಮಾಜ ಅತಿ ಅವಶ್ಯ ಇವೆರಡರ ನಡುವಣ ಸಂಬಂಧವನ್ನು ಅಧ್ಯಯನ ಮಾಡುವ ಶಾಖೆಯೇ ಸಾಮಾಜಿಕ ಭಾಷಾವಿಜ್ಞಾನ. ಈ ವಿಧಾನದಿಂದ ಒಂದು ಸಮಾಜದ ಸ್ವರೂಪ, ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಬಹುದು. ಇಟಲಿ, ಫ್ರಾನ್ಸ್, ಜರ್ಮನಿ, ಅಮೆರಿಕ ಮುಂತಾದ ದೇಶಗಳಲ್ಲಿ ಪ್ರಚುರಗೊಂಡ ಈ ವಿಧಾನ ಇಂದು ಎಲ್ಲೆಡೆ ಮಹತ್ವಪಡೆದುಕೊಂಡಿದೆ.

ಜೈವಿಕ ಭಾಷಾ ವಿಜ್ಞಾನ (ಬಯೋ-ಲಿಂಗ್ವಿಸ್ಟಿಕ್ಸ್)

ಪ್ರಾಣಿಗಳಂತೆ, ಮರಗಿಡಗಳಂತೆ, ಮನುಷ್ಯರಂತೆ ಭಾಷೆಗೂ ಜೀವವಿದೆ; ಅದು ಚಿರಪರಿವರ್ತನ ಶೀಲ ಹಾಗೂ ವಿಕಾಸಶೀಲ. ಆದ್ದರಿಂದ ಜೀವಶಾಸ್ತ್ರಕ್ಕೂ ಭಾಷಾವಿಜ್ಞಾನಕ್ಕೂ ನಿಕಟ ಸಂಬಂಧವಿದೆ. ಜೀವವಿಕಾಸದ ರೀತಿ ನೀತಿಗಳನ್ನು ಅರಿಯಲು ಭಾಷಾಧ್ಯಯನ ಸಹಾಯಕ ಎಂಬ ದೃಷ್ಟಿಯೇ ‘ಜೈವಿಕ ಭಾಷಾವಿಜ್ಞಾನ’ದ ಉಗಮಕ್ಕೆ ಕಾರಣ. ಇದು ಪಾಶ್ಚಾತ್ಯ ದೇಶಗಳಲ್ಲಿ ಹೆಚ್ಚು ಪ್ರಚುರವಾಗಿದೆ. ಡಾರ್ವಿನ್‌ನ ವಿಕಾಸವಾದದ ಹಿನ್ನೆಲೆಯಲ್ಲಿ ಇದನ್ನು ವಿವರಿಸಬಹುದಾದದ್ದ ರಿಂದ ಇದನ್ನು ‘ವಿಕಾಸಾತ್ಮಕ ಭಾಷಾವಿಜ್ಞಾನ’ ಎಂತಲೂ ಕರೆಯುವರು.

ವೈದೃಶ್ಯಾತ್ಮಕ ಭಾಷಾವಿಜ್ಞಾನ (ಕಾನ್‌ಟ್ರಾಸ್ಟೀವ್ ಲಿಂಗ್ವಿಸ್ಟಿಕ್ಸ್)

ಯಾವುದಾದರೂ ಎರಡು ಅಥವಾ ಎರಡಕ್ಕಿಂತ ಹೆಚ್ಚು ಭಾಷೆ ಅಥವಾ ಉಪಭಾಷೆಗಳಲ್ಲಿನ ಧ್ವನಿ, ಪದ, ರೂಪ, ಆಕೃತಿಮಾ, ಅರ್ಥ, ವಾಕ್ಯ, ವ್ಯಾಕರಣ ಮುಂತಾದವುಗಳಲ್ಲಿ ಕಂಡುಬರುವ ವೈದೃಶ್ಯ ಅಂಶಗಳನ್ನು ನಿರ್ಧರಿಸಿ ವಿಶ್ಲೇಷಿಸುವ ಅಧ್ಯಯನ ಶಾಖೆಯೇ ‘ವೈದೃಶ್ಯಾತ್ಮಕ ಭಾಷಾ ವಿಜ್ಞಾನ’. ಇದರಿಂದ ಭಾಷೆಗಳ ಸ್ವರೂಪವನ್ನು ತಿಳಿಯಲು ಸಹಾಯಕ ವಾಗುತ್ತದೆ.

ಕ್ರಿಯಾತ್ಮಕ ಭಾಷಾವಿಜ್ಞಾನ (ಫಂಕ್ಷನಲ್ ಲಿಂಗ್ವಿಸ್ಟಿಕ್ಸ್)

ಭಾಷೆಯ ವಿವಿಧ ಘಟಕಗಳಾದ ಧ್ವನಿ, ಧ್ವನಿಮಾ, ಪದ, ಆಕೃತಿಮಾ, ಅರ್ಥ, ವಾಕ್ಯ ಇವು ತಮ್ಮ ಕಾರ್ಯವನ್ನು ಹೇಗೆ ನಿರ್ವಹಿಸುತ್ತವೆ ಎಂಬುದನ್ನು ವಿವೇಚಿಸ ಬಹುದಾದ ಬಗೆಯನ್ನು ‘ಕ್ರಿಯಾತ್ಮಕ ಭಾಷಾವಿಜ್ಞಾನ’ ಎಂದು ಕರೆಯುವರು. ಇದು ಪ್ರಾಗ್‌ಭಾಷಿಕ ಪಂಥಕ್ಕೆ ಸೇರಿದ ವಿದ್ವಾಂಸರ ಕೊಡುಗೆ. ಇದರಿಂದ ಭಾಷೆಯ ರಚನಾತ್ಮಕ ಅಂಶಗಳ ಕಾರ್ಯನಿರ್ವಹಣೆಯ ವಿಧಾನವನ್ನು ತಿಳಿಯಬಹುದು.

ಗಣಿತೀಯ ಭಾಷಾವಿಜ್ಞಾನ (ಮ್ಯಾಥಮೆಟಿಕಲ್ ಲಿಂಗ್ವಿಸ್ಟಿಕ್ಸ್)

ಭಾಷೆಯ ವಿವಿಧ ಅಂಶಗಳಾದ ಧ್ವನಿ, ಧ್ವನಿಮಾ, ಆಕೃತಿಮಾ, ಪದಗಳು, ಪದಾನುಕ್ರಮ, ವಾಕ್ಯ, ವ್ಯಾಕರಣ ಮೊದಲಾದ ಅಂಶಗಳನ್ನು ಗಣಿತ, ಬೀಜಗಣಿತ, ಅಂಕಗಣಿತಗಳ ಸಹಾಯದಿಂದ ವಿಶ್ಲೇಷಿಸುವ ವಿಧಾನವೇ ‘ಗಣಿತೀಯ ಭಾಷಾವಿಜ್ಞಾನ’. ಇದರಿಂದ ರಚನಾಕ್ರಮವನ್ನು ತಿಳಿಯಲು ಸಹಾಯಕ. ಇದನ್ನು ‘ಸಾಂಖ್ಯಿಕ ಭಾಷಾವಿಜ್ಞಾನ’ ಎಂತಲೂ ಕರೆಯುವರು.

ಕ್ಷೇತ್ರ ಭಾಷಾವಿಜ್ಞಾನ (ಫೀಲ್ಡ್ ಲಿಂಗ್ವಿಸ್ಟಿಕ್ಸ್)

ಒಂದು ಭಾಷೆ ಅಥವಾ ಉಪಭಾಷೆಯನ್ನು ವೈಜ್ಞಾನಿಕವಾಗಿ, ಪ್ರಾಯೋಗಿಕವಾಗಿ ಅಧ್ಯಯನ ಮಾಡ ಬೇಕಾದರೆ ಆ ಭಾಷೆ ಬಳಕೆಯಾಗುವ ಕ್ಷೇತ್ರದಿಂದ ನೇರವಾಗಿ ಸಾಮಗ್ರಿಯನ್ನು ಸಂಗ್ರಹಿಸಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಸಂಶೋಧಕ, ಸಂಗ್ರಹಕಾರ, ಸೂಚಕರು ಅನುಸರಿಸಬೇಕಾದ ವಿಧಿವಿಧಾನಗಳನ್ನು ತಿಳಿಸುವ ಶಾಖೆಯೇ ಕ್ಷೇತ್ರಭಾಷಾವಿಜ್ಞಾನ. ಆಡು ಭಾಷೆಗಳ ಅಧ್ಯಯನಕ್ಕೆ ಈ ವಿಧಾನ ಅತ್ಯಗತ್ಯ.

ಭಾಷಾಧ್ಯಯನದ ಇತಿಹಾಸ

ಸುಮಾರು ಎರಡು ಸಾವಿರ ವರ್ಷಗಳಿಂದಲೂ ಭಾಷೆಯನ್ನು ಕುರಿತಂತೆ ತುಂಬ ಕುತೂಹಲಕರವಾದ ಹಾಗೂ ಗಂಭೀರವಾದ ಚಿಂತನೆಗಳು ನಡೆಯುತ್ತಲೇ ಬಂದಿವೆ. ಅರ್ಥದ ಸ್ವರೂಪ, ವಿಚಾರಗಳ ಖಚಿತತೆ ಹಾಗೂ ಭಾಷೆಯ ಉಗಮವನ್ನು ಕುರಿತಂತೆ ಪ್ರಾಚೀನ ಕಾಲದಿಂದಲೂ ನಡೆಸಿದ ಆಲೋಚನೆಗಳು ಕಾಲ್ಪನಿಕ ಹಾಗೂ ಕಥಾತ್ಮಕ ಸ್ವರೂಪದ್ದಾಗಿವೆ. ಆದರೂ ಪ್ರಾಚೀನ ಕಾಲ ದಿಂದಲೂ ವಿದ್ವಾಂಸರು ವ್ಯಾಕರಣದ ಅಂಶಗಳು, ಶಬ್ದಕೋಶ, ಉಚ್ಚಾರಣೆ ಮುಂತಾದ ವಸ್ತುನಿಷ್ಠ ಅಧ್ಯಯನವನ್ನೂ ನಡೆಸಿದ್ದಾರೆ. ಇದರ ಫಲವೇ ಈಗ ಹೆಚ್ಚು ಪ್ರಚುರದಲ್ಲಿರುವ ಭಾಷಾಶಾಸ್ತ್ರ ಅಥವಾ ಭಾಷಾವಿಜ್ಞಾನ. ಇದು ಹದಿನೆಂಟನೆಯ ಶತಮಾನದಲ್ಲಿ ಹೆಚ್ಚು ಪ್ರಚಾರಕ್ಕೆ ಬಂದರೂ ಅದಕ್ಕಿಂತಲೂ ಮುಂಚೆಯೇ ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಭಾಷೆಯನ್ನು ಕುರಿತ ಚಿಂತನೆಗಳು ನಡೆದಿದ್ದವೆಂಬುದಕ್ಕೆ ಆಧಾರಗಳು ದೊರೆಯುತ್ತವೆ.
ಪ್ರಾಚೀನತೆಯ ದೃಷ್ಟಿಯಿಂದ ನೋಡಿದಾಗ ಭಾಷೆಯ ಅಧ್ಯಯನ ನಡೆದುದು ಪ್ರಪ್ರಥಮವಾಗಿ ಭಾರತದಲ್ಲಿ ಮತ್ತು ಗ್ರೀಸಿನಲ್ಲಿ. ಭಾರತದಲ್ಲಿ ಪಾಣಿನಿ, ಯಾಸ್ಕ, ಪತಂಜಲಿ, ಕಾತ್ಯಾಯನ ಮೊದಲಾದ ವ್ಯಾಕರಣಕಾರರು ಆ ಕಾಲಕ್ಕೆ ವ್ಯಾವಹಾರಿಕ ಭಾಷೆಯಾಗಿದ್ದ ಸಂಸ್ಕೃತಕ್ಕೆ ವ್ಯಾಕರಣವನ್ನು ರಚಿಸುವುದರ ಮೂಲಕ, ವೇದಗಳನ್ನು ಅಧ್ಯಯನ ಮಾಡುವುದರ ಮೂಲಕ, ಅವುಗಳಿಗೆ ಭಾಷ್ಯಗಳನ್ನು, ಟೀಕೆ, ಟಿಪ್ಪಣಿಗಳನ್ನು ಬರೆಯುವುದರ ಮೂಲಕ ಭಾಷಾಧ್ಯಯನವನ್ನು ನಡೆಸಿದ ಪ್ರಮುಖರೆನಿಸಿದ್ದಾರೆ. ಇವರ ಕೃತಿಗಳಲ್ಲಿ ಪಾಣಿನಿಯ ‘ಅಷ್ಟಾಧ್ಯಾಯೀ’ ಮಾನವ ಪ್ರತಿಭೆಯ ಮಹಾಸ್ಮಾರಕಗಳಲ್ಲಿ ಒಂದೆಂದು (ಲಿಯೊನಾರ್ಡ್ ಬ್ಲೂಮ್ ಫೀಲ್ಡ್) ವಿದ್ವಾಂಸರಿಂದ ಪ್ರಶಂಸಗೆ ಒಳಗಾಗಿದೆ. ಇದು ಶ್ರೇಷ್ಠ ಕೃತಿಯೆನಿಸಲು ಕಾರಣಗಳು ಎರಡು. ಒಂದು: ಪ್ರಪಂಚದಲ್ಲಿಯೇ ಇದು ಮೊದಲ ವರ್ಣನಾತ್ಮಕ ವ್ಯಾಕರಣ ಎಂಬುದು. ಎರಡು: ವಿಶ್ವದ ಯಾವುದೇ ಭಾಷೆಯ ವರ್ಣನಾತ್ಮಕ ವಿಶ್ಲೇಷಣೆಗೆ ಅಗ್ರ ಪಂಕ್ತಿಯಾಗಬಲ್ಲ ಮಹತ್ವದ ಅಂಶಗಳು ಇದರಲ್ಲಿವೆ ಎಂಬುದು. ಸಂಸ್ಕೃತ ಭಾಷೆಯನ್ನು ಆಳವಾಗಿ ಅಧ್ಯಯನ ಮಾಡಿ ರಚಿಸಿದ ವ್ಯಾಕರಣ ಗ್ರಂಥ ‘ಅಷ್ಟಾಧ್ಯಾಯೀ’ ಭಾಷಾವಿಜ್ಞಾನ ಕ್ಷೇತ್ರಕ್ಕೆ ಪಾಣಿನಿಯು ನೀಡಿದ ಅಪೂರ್ವ ಕೊಡುಗೆಯೆನಿಸಿದೆ. ಆದ್ದರಿಂದಲೇ ಈತನನ್ನು ಜಗತ್ತಿನ ಭಾಷಾ ವಿಜ್ಞಾನದ ಮೂಲ ಪ್ರವರ್ತಕನೆಂದು ಪರಿಗಣಿಸಿಕೊಳ್ಳಲಾಗಿದೆ. ಅಂತೆಯೇ ಯಾಸ್ಕನ ‘ನಿರುಕ್ತ’, ಪತಂಜಲಿಯ ‘ಮಹಾಭಾಷ್ಯ’ ಈ ಕಾಲದ ಪ್ರಮುಖ ಕೃತಿಗಳು. ‘ಅಷ್ಟಾಧ್ಯಾಯೀ’ ಎಂದರೆ ಎಂಟು ಅಧ್ಯಾಯಗಳು ಎಂದರ್ಥ. ಇದರಲ್ಲಿ ನಾಲ್ಕು ಸಾವಿರ ಸೂತ್ರಗಳಿದ್ದು ಪದರಚನೆಯ ನಿಯಮವನ್ನು ತುಂಬ ಸ್ಪಷ್ಟವಾಗಿ ವಿವರಿಸಲಾಗಿದೆ. ಸೂಕ್ಷ್ಮವಾದ ಧ್ವನ್ಯಾತ್ಮಕ ವಿಶ್ಲೇಷಣೆಯಿಂದಾಗಿ ಇದು ಪ್ರಾಮುಖ್ಯವನ್ನು ಹೊಂದಿದೆ.
ಪ್ರಾಚೀನ ಕಾಲದಲ್ಲಿ ಭಾರತೀಯರಂತೆಯೇ ಭಾಷೆಯ ಬಗೆಗೆ ಹೆಚ್ಚು ಅಧ್ಯಯನ ನಡೆಸಿದವರಲ್ಲಿ ಗ್ರೀಕರು ಪ್ರಮುಖರು. ಗ್ರೀಸ್ ಪಾಶ್ಚಾತ್ಯ ಸಂಸ್ಕೃತಿಯ ತಲಕಾವೇರಿಯೆಂದು ಹೆಸರಾಗಿದೆ. ಇದು ಪಾಶ್ಚಾತ್ಯ ಕಲೆ, ಸಂಸ್ಕೃತಿ, ವಿಜ್ಞಾನಗಳೆಲ್ಲಕ್ಕೂ ಮಾತೃಸ್ಥಾನದಲ್ಲಿದೆ. ಗ್ರೀಕ್ ತತ್ತ್ವಜ್ಞಾನಿಗಳು ಭಾಷೆಯ ಹುಟ್ಟು, ಇತಿಹಾಸ, ರಚನೆಗಳ ವಿಷಯದಲ್ಲಿ ಗಹನವಾಗಿ ಆಲೋಚನೆ ನಡೆಸಿದ್ದಾರೆ. ಪ್ಲೇಟೋ(ಕ್ರಿ.ಪೂ. 427-347)ನಿಗಿಂತ ಒಂದು ಶತಮಾನ ಮೊದಲೇ ಭಾಷೆಯ ಬಗೆಗೆ ಕೆಲವು ಊಹಾತ್ಮಕ ವಿಚಾರಗಳು ಅಲ್ಲಲ್ಲಿ ನಡೆದಿದ್ದವು. ಪ್ಲೇಟೋ ತನ್ನ ‘ಕ್ರೇಟಿಲಸ್’ದಲ್ಲಿ ಈ ವಾದವಿವಾದ ವನ್ನು ಕುರಿತು ಚರ್ಚಿಸುತ್ತಾರೆ. ಶಬ್ದದ ಉಗಮ, ಶಬ್ದ ಅರ್ಥಗಳ ಪರಸ್ಪರ ಸಂಬಂಧ, ಅದು ಸಹಜವಾದುದೋ ಅಥವಾ ಪರಂಪರಾಗತವೋ ಎಂಬ ಬಗ್ಗೆ ಚರ್ಚೆ ಅಲ್ಲಿ ಬರುತ್ತದೆ. ಪ್ಲೇಟೋವಿಗೆ ಮೊದಲು ಸಾಕ್ರೆಟಿಸ್ ಕೂಡ ಭಾಷೆಯ ವಿಷಯವಾಗಿ ಚರ್ಚಿಸಿದ್ದಾನೆ. ಶಬ್ದ ಅರ್ಥಗಳಲ್ಲಿ ಸಹಜ ಸಂಬಂಧವೇನೂ ಇಲ್ಲವೆಂದು ಆತ ಹೇಳುತ್ತಾನೆ. ಪ್ಲೇಟೋನ ಶಿಷ್ಯನಾದ ಅರಿಸ್ಟಾಟಲ್ (ಕ್ರಿ.ಪೂ. 384-322) ಭಾಷೆಯನ್ನು ಕುರಿತ ಅಧ್ಯಯನವನ್ನು ಮುಂದುವರೆಸುತ್ತಾನೆ. ವಿಭಕ್ತಿ ಪ್ರತ್ಯಯಗಳ ಬಗೆಗೆ ವಿಚಾರ ಮಾಡಿದವರಲ್ಲಿ ಈತನೇ ಮೊದಲಿಗ. ಈತ ರೂಪಿಸಿಕೊಟ್ಟ ಎಷ್ಟೋ ಪಾರಿಭಾಷಿಕ ಪದಗಳು ಈಗಲೂ ಇಂಗ್ಲಿಶ್‌ನಲ್ಲಿ ಬಳಕೆಯಾಗುತ್ತಿವೆ. ಈತನ ತರುವಾಯ ಬಂದ ಡ್ರಯೋನಿಸಸ್ ಥ್ರಾಕ್ಸ್ ಕ್ರಿ.ಪೂ. 3ನೆಯ ಶತಮಾನ ಯುರೋಪಿನಲ್ಲಿ ಗ್ರೀಕ್ ಭಾಷೆಯ ಮೊದಲ ವ್ಯಾಕರಣವನ್ನು ರಚಿಸಿದ. ಇದರಲ್ಲಿ ನಾಮ, ಲಿಂಗ, ಕ್ರಿಯೆ, ವಚನ, ವಿಭಕ್ತಿ – ಇವೆಲ್ಲವುಗಳ ಉಲ್ಲೇಖವಿದ್ದರೂ ಭಾಷಾಶಾಸ್ತ್ರ ದೃಷ್ಟಿಗಿಂತ ಮಿಗಿಲಾಗಿ ತಾತ್ವಿಕ ದೃಷ್ಟಿಕಂಡುಬರುತ್ತದೆ.
ಗ್ರೀಕರ ನಂತರ ಬಂದ ರೋಮನ್ನರು ಗ್ರೀಕ್ ಮಾದರಿಯನ್ನೇ ಅನುಸರಿಸಿ ಲ್ಯಾಟಿನ್ ವ್ಯಾಕರಣಗಳನ್ನು ರಚಿಸಿದರು. ಡೊನಾಟಿಸ್ (4ನೆಯ ಶತಮಾನ) ಪ್ರಿಸ್ಕಿಯನ್ (ಆರನೆಯ ಶತಮಾನ) ಎಂಬ ವೈಯಾಕರಣಿಗಳು ಪ್ರಮುಖರು. ಗ್ರೀಕರಿಗೆ ಗ್ರೀಕ್ ಒಂದೇ ನಿಜವಾದ ಭಾಷೆಯೆಂಬಂತೆ ರೋಮನ್ನರಿಗೆ ಲ್ಯಾಟಿನ್ ಒಂದೇ ಪ್ರಪಂಚದ ಏಕೈಕ ತರ್ಕಬದ್ಧವಾದ ಭಾಷೆ ಆ ಭಾಷೆಯ ವ್ಯಾಕರಣವೇ ಆದರ್ಶ ವ್ಯಾಕರಣ. ಕ್ರಿ.ಪೂ. 116-627ರಲ್ಲಿನ ಮಾರ್ಕಸ್ ಟಿರೆಂಟಿಯನ್ ವ್ಯಾರೊ “ಆ್ಯನ್ ದಿ ಲ್ಯಾಟಿನ್ ಲಾಂಗ್ವೇಜ್” ಎಂಬ ಕೃತಿಯನ್ನು ಬರೆದ. ಇದರಲ್ಲಿ ನಿಷ್ಪತ್ತಿ, ಆಕೃತಿ ವಿಜ್ಞಾನ ಮತ್ತು ವಾಕ್ಯ ವಿಜ್ಞಾನ ಎಂಬ ಶೀರ್ಷಿಕೆಗಳಿದ್ದು 26 ಅಧ್ಯಾಯಗಳಿವೆ. ಇದರಲ್ಲಿ ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳಲ್ಲಿನ ಹಲವು ವ್ಯತ್ಯಾಸಗಳನ್ನು ಈತ ಗುರುತಿಸುತ್ತಾನೆ. ಹಲವು ಲೇಖಕರು ವ್ಯಾಕರಣ ಹಾಗೂ ಭಾಷಣ ಕಲೆಯ ಕ್ಷೇತ್ರದಲ್ಲಿ ಪ್ರಮುಖ ಕೃತಿಗಳನ್ನು ರಚಿಸಿದ್ದಾರೆ. ಅವರಲ್ಲಿ ಪ್ರಮುಖರೆಂದರೆ ಸಿಸಿರೊ (ಕ್ರಿ.ಪೂ. 106-43) ಶೈಲಿಯ ಬಗ್ಗೆ, ಕ್ವಿಂಟಿಲಿಯನ್ (ಕ್ರಿ.ಶ. 1ನೆಯ ಶತಮಾನ) ರೂಢಿ ಮತ್ತು ಸಾರ್ವಜನಿಕ ಭಾಷಣದ ಬಗಗೆ, ಜ್ಯೂಲಿಯಸ್ ಸೀಸರ್ ವ್ಯಾಕರಣದ ನಿಯತತೆಯ ಬಗ್ಗೆ ಕೃತಿಗಳನ್ನು ರಚಿಸಿದ್ದಾರೆ.
ಕ್ರಿ.ಶ. 1400ರಲ್ಲಿ ಲಾರೆಂಟಿಯಸ್‌ವಲ್ಲ ಎಂಬಾತ ಬರೆದ ಲ್ಯಾಟಿನ್ ವ್ಯಾಕರಣ ಹದಿನೆಂಟನೆಯ ಶತಮಾನದವರೆಗೆ ಪ್ರಭುತ್ವವನ್ನು ಸ್ಥಾಪಿಸಿತ್ತು. ರೋಮನ್ ಯುಗದ ಮುಖ್ಯ ಫಲಿತವೆಂದರೆ ವಿವರಣಾತ್ಮಕ ವ್ಯಾಕರಣದ ಮಾದರಿಯಾಗಿರುವುದು. ಮಧ್ಯಯುಗ ಹಾಗೂ ಪುನರುಜ್ಜೀವನ ಕಾಲದಲ್ಲಿ ಭಾಷಾ ಬೋಧನೆಗೆ ಬುನಾದಿಯನ್ನು ಹಾಕಿದಂತಾಯಿತು. ಕಾಲಕ್ರಮದಲ್ಲಿ ಈ ಮಾದರಿಯು ವ್ಯಾಕರಣದ ಅಧ್ಯಯನಕ್ಕೆ ಸಾಂಪ್ರದಾಯಿಕ ವಿಧಾನವಾಗಿ ಪರಿಣಮಿಸಿತಲ್ಲದೆ ಇಂಗ್ಲಿಶ್ ಹಾಗೂ ಇತರ ಆಧುನಿಕ ಭಾಷೆಗಳ ಬೋಧನೆಯ ಮೇಲೆ ತನ್ನ ಪ್ರಭಾವವನ್ನು ಬೀರಿತು.
ಮಧ್ಯಯುಗ : ಯುರೋಪಿನಲ್ಲಿ ‘ಕತ್ತಲೆಯ ಯುಗ’ ಎನ್ನಲಾಗುವ ಈ ಅವಧಿಯಲ್ಲಿ ಭಾಷಾವಿಜ್ಞಾನದ ಸಿದ್ಧಾಂತಗಳ ಬೆಳವಣಿಗೆಯ ಬಗೆಗೆ ಹೆಚ್ಚಿನ ವಿವರಗಳು ದೊರೆಯುವುದಿಲ್ಲ. ಆದರೂ ಲ್ಯಾಟಿನ್ ಭಾಷೆ ಶಿಕ್ಷಣ ಮಾಧ್ಯಮ ವಾಗಿ ಬಳಕೆಗೊಂಡು ಅಭಿಜಾತಯುಗ ಹಾಗೂ ಮಧ್ಯಯುಗಗಳ ನಡುವಿನ ಸಂಪ್ರದಾಯವನ್ನು ಉಳಿಸಿಕೊಂಡಿರುವುದು ತಿಳಿದುಬರುತ್ತದೆ. ಈ ಕಾಲದಲ್ಲಿ ವ್ಯಾಕರಣ, ತರ್ಕ ಹಾಗೂ ಭಾಷಣ ಕಲೆಯ ಬಗೆಗೆ ಅನೇಕ ವಿಚಾರಗಳು ಪ್ರಕಟಗೊಂಡವು. ಮಧ್ಯಯುಗದ ತತ್ತ್ವಗಳ ಚೌಕಟ್ಟಿನಲ್ಲಿ ವ್ಯಾಕರಣದ ನಿಯಮಗಳು ರೂಪಿತಗೊಂಡವು. ವ್ಯಾಕರಣಗಳ ನಿಯಮಗಳನ್ನು ವಿವರಿಸಲು ತತ್ತ್ವಶಾಸ್ತ್ರವನ್ನು ಬಳಸಿಕೊಂಡರು. ಕೋಶವಿಜ್ಞಾನ, ಭಾಷಾಂತರದ ಬಗೆಗೆ ಹೆಚ್ಚಿನ ಬೆಳವಣಿಗೆಗಳು ಕ್ರೈಸ್ತ ಗುರುಗಳ ಚಟುವಟಿಕೆಗಳಿಂದ ಕಂಡುಬಂದವು. ಎಂಟನೆಯ ಶತಮಾನದ ಸುಮಾರಿನಲ್ಲಿ ಅರಬ್ಬಿಯ ಉಚ್ಚಾರಣೆಯ ಬಗೆಗೆ ಕೃತಿಗಳಲ್ಲದೆ ಹಲವು ಪ್ರಮುಖ ವ್ಯಾಕರಣಗಳು, ಶಬ್ದಕೋಶಗಳು ರಚನೆಯಾದವು. ಧಾರ್ಮಿಕ ಕದನದ ಪರಿಣಾಮವಾಗಿ ಕಾಲಕ್ರಮೇಣ ಗ್ರೀಕ್, ಅರಬ್ಬಿ ಹೀಬ್ರೂ ಭಾಷೆಗಳ ನಡುವೆ ಸಂಪರ್ಕವುಂಟಾ ಯಿತು. ಇಂಗ್ಲಿಶ್, ಡಚ್, ಸ್ಕಾಂಡಿನೇವಿ ಯನ್, ಜರ್ಮನ್, ಗಾಥಿಕ್ ಮೊದಲಾದ ಭಾಷೆಗಳ ಅಧ್ಯಯನದ ಫಲವಾಗಿ ಐತಿಹಾಸಿಕ ಹಾಗೂ ತೌಲನಿಕ ಭಾಷಾಧ್ಯಯನ ಬೆಳಕಿಗೆ ಬಂದಿತು. ಬೇರೆ ಬೇರೆ ವಿದ್ವಾಂಸರು ಭಾಷೆಗಳಿಗೆ ಮೂಲ. ಗ್ರೀಕ್, ಹೀಬ್ರೂ ಎಂದು ಬೇರೆ ಬೇರೆ ಯಾಗಿ ವಾದಿಸತೊಡಗಿದರು. ಭಾಷೆ ದೈವದತ್ತವಾದದುದು ಸಾಂಪ್ರದಾಯಿಕವಾಗಿ ಬೇರೂರಿದ್ದ ವಿಚಾರವನ್ನು ಪ್ರತಿಭಟಿಸಲು, ಅದು ದೈವದತ್ತವಾದುದಲ್ಲ, ಮಾನವ ಸೃಷ್ಟಿ ಎಂದು ಪ್ರತಿಪಾದಿಸಲು ಹಲವು ವಿದ್ವಾಂಸರು ಬಹಳ ಕಾಲ ವಾದವಿವಾದ ನಡೆಸಿದರು.
ಪುನರುಜ್ಜೀವನದ ಕಾಲದಲ್ಲಿ (14-16ನೆಯ ಶತಮಾನ) ಗ್ರೀಕ್, ಹೀಬ್ರೂ, ಅರೇಬಿಕ್ ಭಾಷೆಗಳ ಅಧ್ಯಯನವು ಪ್ರಾರಂಭವಾಯಿತು. ಕ್ರೈಸ್ತ ಮತ ಪ್ರಚಾಕರು ಬೇರೆ ಬೇರೆ ಭಾಷೆಗಳಿಗೆ ಬೈಬಲನ್ನು ಭಾಷಾಂತರಿಸಿದರು. ಅವಕ್ಕೆ ಹಲವು ವ್ಯಾಕರಣಗಳು ರಚಿತಗೊಂಡವು. ಯುರೋಪಿಯನ್ ಭಾಷೆ ಗಳು ಅದರಲ್ಲಿಯೂ ರೋಮನ್ ಭಾಷಾ ಕುಟುಂಬವನ್ನು ಕುರಿತಂತೆ ವ್ಯವಸ್ಥಿತ ವಾದ ಅಧ್ಯಯನ ನಡೆಯಿತು. ಇಟಾಲಿಯನ್ ಹಾಗೂ ಸ್ಪ್ಯಾನಿಷ್ ಭಾಷೆಗಳ ಮೊಟ್ಟಮೊದಲ ವ್ಯಾಕರಣಗಳು ಕ್ರಿ.ಶ. 15ನೆಯ ಶತಮಾನದಲ್ಲಿ ರಚಿತವಾದವು. ಫ್ರಾನ್ಸಿಸ್ಕಸ್ ಜೂನಿಯಸ್ (1589-1677) ಎಂಬಾತ ಇಂಗ್ಲಿಶಿನ ಪ್ರಾಚೀನ ಬರೆಹಗಳನ್ನು ಅಭ್ಯಸಿಸಿದ. ಜಾರ್ಜ್ ಹಿಕ್ಸ್ (1642-1715) ಎಂಬಾತ ಈ ಕೆಲಸವನ್ನು ಮುಂದುವರೆಸಿ ಇಂಗ್ಲಿಶ್ ಭಾಷೆಯ ಪ್ರಾಚೀನ ಘಟ್ಟಗಳನ್ನು ಕುರಿತು ಅಮೂಲ್ಯ ವಿಷಯಗಳನ್ನು ಸಂಗ್ರಹಿಸಿದ. ಹಲವು ಭಾಷೆಗಳಲ್ಲಿ ಶಬ್ದಕೋಶ ಯೋಜನೆಗಳು ಆರಂಭವಾದವು. ಮುದ್ರಣದ ವ್ಯವಸ್ಥೆಯಿಂದ ಶಿಕ್ಷಣ ಕ್ಷೇತ್ರದಲ್ಲಿ ವ್ಯಾಪಕ ಬದಲಾವಣೆಯುಂಟಾಯಿತು. ಹಳೆಯ ಒಡಂಬಡಿಕೆಯ ಭಾಷೆ ಹೀಬ್ರೂವಾಗಿದ್ದರಿಂದ ಅದು ಸ್ವರ್ಗದ ಭಾಷೆಯೆಂಬ ಭಾವನೆ ಬಲವಾಗಿ ಯುರೋಪಿನ ಎಲ್ಲಾ ಭಾಷೆಗಳ ಎಲ್ಲ ಪದಗಳನ್ನು ನಿಷ್ಪನ್ನ ಮಾಡುವ ಪ್ರಯತ್ನಗಳು ನಡೆದವು. ಹದಿನೇಳನೆಯ ಶತಮಾನದಲ್ಲಿ ಲೀಬ್‌ನೀಜ್ ಎಂಬ ಜರ್ಮನ್ ವಿದ್ವಾಂಸ ಈವರೆಗಿದ್ದ ಪ್ರಪಂಚದ ಭಾಷೆಗಳಿಗೆಲ್ಲ ಹೀಬ್ರೂ ಭಾಷೆಯೇ ಮೂಲ ಎನ್ನುವ ನಂಬಿಕೆಯನ್ನು ತೀವ್ರವಾಗಿ ವಿರೋಧಿಸಿ ಪ್ರತಿಯೊಂದು ಭಾಷೆಯೂ ತನ್ನದೇ ಆದ ವ್ಯಾಕರಣ, ಕೋಶಗಳನ್ನು ರಚಿಸಿಕೊಳ್ಳಲು ಉತ್ತೇಜಿಸಿದ.
ಹದಿನೆಂಟನೆಯ ಶತಮಾನದಲ್ಲಿ ಭಾಷಾವಿಜ್ಞಾನಕ್ಕೆ ಸಂಬಂಧಿಸಿದಂತೆ ಹಲವು ಊಹೆಗಳು ನಡೆದವು. ಭಾಷೆ ಪ್ರಾಕೃತಿಕವಾದುದೇ ಅಥವಾ ಮಾನವ ನಿರ್ಮಿತವಾದುದೇ ಎಂಬ ವಿಷಯದಲ್ಲಿ ಚರ್ಚೆ ನಡೆಯಿತು. ರೂಸೋ ಎಂಬಾತ ‘ಭಾಷೆಯನ್ನು ಒಂದು ಸಾಮಾಜಿಕ ಒಪ್ಪಂದ’ ಎಂದು ಕರೆದ. ಭಾಷೆ ಮಾನವ ನಿರ್ಮಿತವಾದುದು ಅದು ದೈವದತ್ತವಾದುದಲ್ಲ, ದೈವದತ್ತವಾದುದೇ ಆಗಿದ್ದರೆ ಹೆಚ್ಚು ತರ್ಕಬದ್ಧವಾಗಿರುತ್ತಿತ್ತು ಎಂದು ಹಲವು ದೃಷ್ಟಾಂತಗಳ ಮೂಲಕ ಅನೇಕರು ಸಾಧಿಸಿ ತೋರಿಸಿದರು. ಈ ಶತಮಾನದಲ್ಲಿ ಕಂಡುಬರುವ ಪ್ರಮುಖ ಅಂಶವೆಂದರೆ ಸಾರ್ವತ್ರಿಕ ಸಂವಹನದ ಮಾಧ್ಯಮವಾಗಿದ್ದ ಲ್ಯಾಟಿನ್ ಭಾಷೆ ತನ್ನ ಸ್ಥಾನವನ್ನು ಕಳೆದುಕೊಂಡು ಆ ಸ್ಥಾನದಲ್ಲಿ ಆಧುನಿಕ ಭಾಷೆಗಳು ಬಳಕಗೆ ಬಂದುದಾಗಿದೆ. ಧ್ವನಿಶಾಸ್ತ್ರದ ಬಗ್ಗೆ ವ್ಯವಸ್ಥಿತವಾದ ಅಧ್ಯಯನದ ಪ್ರಾರಂಭ, ಸಾರ್ವತ್ರಿಕ ತತ್ತ್ವಗಳ ಆಧಾರದ ಮೇಲೆ ಸಾಮಾನ್ಯ ವ್ಯಾಕರಣಗಳ ಬೆಳವಣಿಗೆ, ಶಾಲೆಗಳಲ್ಲಿ ಸಂಪ್ರದಾಯಿಕ ವ್ಯಾಕರಣಗಳ ಬಳಕೆ ಇವೇ ಮೊದಲಾದವು ಈ ಶತಮಾನದಲ್ಲಿ ಕಂಡುಬರುವ ಇನ್ನಿತರ ಮುಖ್ಯ ಅಂಶಗಳಾಗಿವೆ.
ಹತ್ತೊಂಬತ್ತನೆಯ ಶತಮಾನದಲ್ಲಿ ಭಾಷೆಯ ವಿಷಯದಲ್ಲಿ ಐತಿಹಾಸಿಕ ದೃಷ್ಟಿ ಬೆಳೆಯಿತು. ಪಾಶ್ಚಾತ್ಯ ವಿದ್ವಾಂಸರಿಗೆ ಸಂಸ್ಕೃತದ ಪರಿಚಯವಾಗಿ ಭಾಷಾಶಾಸ್ತ್ರದ ಇತಿಹಾಸದಲ್ಲಿ ಒಂದು ಕ್ರಾಂತಿಕಾರಕವಾದ ಪರಿವರ್ತನೆಯೇ ಉಂಟಾಯಿತು. 1767 ರಲ್ಲಿ ಫ್ರೆಂಚ್ ಪಾದ್ರಿಯೊಬ್ಬ ಲ್ಯಾಟಿನ್ ಮತ್ತು ಸಂಸ್ಕೃತ ಪದಗಳನ್ನು ಹೋಲಿಸಿ ಒಂದು ವರದಿಯನ್ನು ಕಳುಹಿಸಿದ್ದ. ಹದಿನೆಂಟನೆಯ ಶತಮಾನದ ಉತ್ತರಾರ್ಧದಲ್ಲಿ ಸರ್‌ವಿಲಿಯಂ ಜೋನ್ಸ್ (1746-1796) ಎಂಬ ವಿದ್ವಾಂಸ ಸಂಸ್ಕೃತವನ್ನು ಅಧ್ಯಯನ ಮಾಡಿ, ಅದಕ್ಕೂ ಉಳಿದ ಭಾಷೆಗಳಿಗೂ ನಿಕಟ ಸಂಬಂಧವಿದೆ; ಸಂಸ್ಕೃತವೂ ಸೇರಿದಂತೆ ಅನೇಕ ಯುರೋಪಿನ ಭಾಷೆಗಳು ಮೂಲತಃ ಒಂದು ಭಾಷೆಯಿಂದ ಹೊರಟವು ಎಂದು 1786 ರಲ್ಲಿ ಹೇಳಿದ. ಈತನ ಮಾತುಗಳು ‘ತೌಲನಿಕ ಭಾಷಾವಿಜ್ಞಾದ ಪಿತಾಮಹ’ನೆಂದು ಕರೆಯಲಾಗಿದೆ. ಈ ಶತಮಾನದ ಆದಿಯಲ್ಲಿ ಷ್ಲೆಗೆಲ್ ಸಂಸ್ಕೃತವನ್ನು ಚೆನ್ನಾಗಿ ಅಭ್ಯಾಸ ಮಾಡಿದ್ದ. ಈ ಶತಮಾನದಲ್ಲಿ ಮುಖ್ಯರಾದವ ರೆಂದರೆ ಫ್ರಾನ್ಸ್ ಬಾಪ್, ಯಾಕೋಬ್ ಗ್ರಿಮ್ ಮತ್ತು ರಾಸ್ ಮಸ್ ರಾಸ್ಕ್ – ಈ ಮೂವರು. ಬಾಪ್ ‘ಗ್ರೀಕ್ ಮುಂತಾದ ಯುರೋಪಿನ ಎಲ್ಲ ಭಾಷೆ ಗಳಿಗೂ ಸಂಸ್ಕೃತವೇ ಮೂಲವೆಂದು ಆ ಕಾಲದಲ್ಲಿ ಪ್ರಚಲಿತದಲ್ಲಿದ್ದ ಭಾವನೆ ಯನ್ನು ಒಪ್ಪದೆ ಸಂಸ್ಕೃತ ಮೂಲಭಾಷೆಯ ಲಕ್ಷಣಗಳನ್ನು ತನ್ನ ಸೋದರ ಭಾಷೆಗಳಿಗಿಂತ ಹೆಚ್ಚು ಶುದ್ಧ ರೂಪದಲ್ಲಿ ಉಳಿದುಕೊಂಡಿರಬಹುದೇ ಹೊರತು ಅದೇ ಮೂಲವಲ್ಲ’ ಎಂದು ಸಾರಿದನು. ಈತನ ಅಧ್ಯಯನ ವಿಧಾನ ದಿಂದ ತೌಲನಿಕ ಭಾಷಾವಿಜ್ಞಾನ ಇನ್ನೂ ಜನಪ್ರಿಯವಾಯಿತು. ಗ್ರಿಮ್ ಎಂಬಾತ ‘ಎಂತಹ ಕ್ಷುದ್ರ ಭಾಷೆಯೂ ಪ್ರತಿ ಉಪಭಾಷೆಯೂ ಗೌರವಾರ್ಹ, ಅಧ್ಯಯನ ಯೋಗ್ಯ ಎಂದದ್ದಲ್ಲದೆ ಭಾಷೆಗೆ ನಿಯಮಗಳನ್ನು ಹಾಕುತ್ತಿದ್ದ ವ್ಯಾಕರಣಗಳ ಪದ್ಧತಿಯನ್ನು ಖಂಡಿಸಿದ. ಗ್ರೀಕ್, ಗಾಥಿಕ್, ಹೈಜರ್ಮನ್ ಭಾಷೆಗಳ ಧ್ವನಿ ಸಂವಾದಗಳನ್ನು ತೋರಿಸುವ ಸೂತ್ರವನ್ನು ಕಂಡುಹಿಡಿದ. ಇದು ‘ಗ್ರಿಮ್ಸ್ ಲಾ’ ಎಂದು ಪ್ರಚಲಿತವಾಯಿತು. ಡೆನ್ಮಾರ್ಕಿನ ರಾಸ್‌ಮಸ್‌ರಾಸ್ಕ್ ಎಂಬಾತ ‘ಭಾಷೆಗೆ ಪದಗಳು ಸೇರಬಹುದು. ಇದರ ಪದಗಳು ಹೊರಟು ಹೋಗಬಹುದು; ಆದರೆ ಅದರ ವ್ಯಾಕರಣ ಮಾತ್ರ ನಿಶ್ಚಲವಾಗಿರುತ್ತದೆ ಎರಡು ಭಾಷೆಗಳಲ್ಲಿ ಸರ್ವನಾಮಗಳೂ, ಸಂಖ್ಯಾವಾಚಕಗಳೂ ಒಂದೇ ಆಗಿದ್ದರೆ ಆ ಎರಡು ಭಾಷೆಗಳೂ ಒಂದೇ ಮೂಲದಿಂದ ಬಂದಿರುತ್ತವೆ’ ಎಂದು ಹೇಳಿದ. ಅಲ್ಲದೆ ದ್ರಾವಿಡ ಭಾಷೆಗಳು ಸಂಸ್ಕೃತ ಜನ್ಯವಲ್ಲ ಅವು ಕೆಲವಂಶಗಳಲ್ಲಿ ಸಿಥಿಯನ್ ಭಾಷೆಗಳನ್ನು ಹೋಲುತ್ತವೆ ಎಂದು ಹೇಳಿದ. ಈತನ ಹೇಳಿಕೆಯನ್ನು ರಾಬರ್ಟ್‌ಕಾಲ್ಡ್‌ವೆಲ್ (1856) ಎಂಬಾತ ಆಳವಾಗಿ ಅಧ್ಯಯನ ಮಾಡಿ ಅನುಮೋದಿಸಿದ. ವರ್ನರ್ ಎಂಬಾತ ಗ್ರಿಮ್‌ನ ನಿಯಮದಲ್ಲಿದ್ದ ಅಪವಾದಗಳನ್ನು ಬೇರೊಂದು ರೀತಿಯಲ್ಲಿ ವಿವರಿಸಬಹುದೆಂದು ತೋರಿಸಿಕೊಟ್ಟ ದ್ರಾವಿಡ ಭಾಷಾವರ್ಗ ಒಂದು ಪ್ರತ್ಯೇಕ ಭಾಷಾವರ್ಗವೆಂಬುದನ್ನು ಕಂಡುಕೊಂಡ ಪ್ರಾಚೀನರಲ್ಲಿ ರಾಸ್‌ಮಸ್‌ರಾಸ್ಕ್ ಕೂಡ ಒಬ್ಬ.
ಇಪ್ಪತ್ತನೇ ಶತಮಾನದಲ್ಲಿ ಆಧುನಿಕ ಭಾಷಾವಿಜ್ಞಾನದ ಬೆಳವಣಿಗೆಗೆ ಕಾರಣರಾದವರಲ್ಲಿ ಫರ್ಡಿನಂಡ್ ಡಿ. ಸಸ್ಸೂರ್, ಫ್ರಾನ್ಸ್ ಬೋಆಸ್, ಎಡ್ವರ್ಡ್ ಸಪೀರ್ ಮತ್ತು ಲಿಯೊನಾರ್ಡ್ ಬ್ಲೂಮ್ ಫೀಲ್ಡ್ ಇವರು ಪ್ರಮುಖರು. 1857ರಲ್ಲಿ ಜನಿಸಿದ ಸಸ್ಸೂರ್ ವಿವರಣಾತ್ಮಕ ಸಂರಚನಾತ್ಮಕ ಭಾಷಾವಿಜ್ಞಾನದ ತಂತ್ರವನ್ನು ಅತ್ಯುತ್ತಮವಾಗಿ ಪ್ರತಿಪಾದಿಸಿದ. ಏಕಕಾಲಿಕ ಮತ್ತು ದ್ವಿಕಾಲಿಕ ಎಂಬ ಪರಿಭಾಷೆಗಳನ್ನು ಮೊದಲಿಗೆ ಬಳಸಿದವನು ಈತ. ಈತನನ್ನು ‘ಸಂರಚನಾತ್ಮಕ ಭಾಷಾವಿಜ್ಞಾನದ ಪಿತಾಮಹ’ನೆನ್ನಲಾಗಿದೆ. ಈತನ ವಿದ್ಯಾರ್ಥಿಗಳು ಸಂಗ್ರಹಿಸಿದ ಈತನ ಉಪನ್ಯಾಸಗಳ ಸಂಕಲನ ‘ಸಾಮಾನ್ಯ ಭಾಷಾವಿಜ್ಞಾನ: ಒಂದು ಅಧ್ಯಯನ (ಕೋರ್ಸ್ ಇನ್ ಜನರಲ್ ಲಿಂಗ್ವಿಸ್ಟಿಕ್ಸ್) ಮೂಲ ಫ್ರೆಂಚ್ ಭಾಷೆಯಲ್ಲಿರುವ ಅಮೂಲ್ಯ ಕೃತಿ. ಆಧುನಿಕ ಅಮೆರಿಕನ್ ಭಾಷಾವಿಜ್ಞಾನದ ಆರಂಭಕಾರ ಬೋಆಸ್. ಬುಡಕಟ್ಟು ಜನಾಂಗಗಳ ಅಧ್ಯಯನವೂ ಮಹತ್ವದ್ದೆಂದು ಈತ ತೋರಿಸಿಕೊಟ್ಟ ಅಮೆರಿಕಾದ ಇಂಡಿಯನ್ ಭಾಷೆಗಳ ಮೇಲೆ ಬರೆದ ಕೃತಿ ‘ಹ್ಯಾಂಡ್‌ಬುಕ್ ಆಫ್ ಅಮೆರಿಕನ್ ಇಂಡಿಯನ್ ಲಾಂಗ್ವೇಜಸ್’ ವಿವರಣಾತ್ಮಕ ಭಾಷಾ ವಿಜ್ಞಾನಕ್ಕೆ ಅತ್ಯುತ್ತಮ ಕಾಣಿಕೆಯಾಗಿದೆ. ಸಪೀರ್ ಫ್ರಾನ್ಸ್ ಬೋಆಸ್‌ನ ನೆಚ್ಚಿನ ವಿದ್ಯಾರ್ಥಿ, ಭಾಷಾ ವಿಜ್ಞಾನ – ಸಮಾಜ, ಭಾಷಾ ವಿಜ್ಞಾನ ಸಂಸ್ಕೃತಿ, ಭಾಷಾವಿಜ್ಞಾನ ಮಾನವಶಾಸ್ತ್ರಕ್ಕಿರುವ ಸಂಬಂಧವನ್ನು ಸ್ಪಷ್ಟವಾಗಿ ನಿರೂಪಿಸಿದ ವ್ಯಕ್ತಿ ಈತ. ಈತ ಬರೆದ ‘ಲಾಂಗ್ವೇಜ್’ ಎಂಬ ಕೃತಿ ವಿವರಣಾತ್ಮಕ ಭಾಷಾವಿಜ್ಞಾನದ ಮೂಲಕೃತಿಯೆನಿಸಿದೆ. ಭಾಷಾವಿಜ್ಞಾನ ಕ್ಷೇತ್ರದಲ್ಲಿ ಹೊಸ ಶಕೆಯನ್ನು ಪ್ರಾರಂಭಿಸಿದ ವಿದ್ವಾಂಸನೆಂದರೆ ಲಿಯೊನಾರ್ಡ್ ಬ್ಲೂಮ್ ಫೀಲ್ಡ್. ಈತ ಆಧುನಿಕ ಭಾಷಾವಿಜ್ಞಾನಕ್ಕೆ ವಸ್ತುನಿಷ್ಠವಾದ ತಳಹದಿಯನ್ನು ಹಾಕಿದ. ವರ್ಣನಾತ್ಮಕ, ತೌಲನಿಕ ಭಾಷಾಧ್ಯಯನದಲ್ಲಿ ತೊಡಗುವವರಿಗೆ ಈತ ರಚಿಸಿದ ‘ಲಾಂಗ್ವೇಜ್’ ಆಚಾರ್ಯ ಕೃತಿ, ಬೈಬಲ್ ಎನಿಸಿದೆ.
ಆನಂತರ ಬಂದ ಭಾಷಾವಿಜ್ಞಾನಿಗಳು ಒಂದೊಂದು ಪರಿಮಿತ ಕ್ಷೇತ್ರವನ್ನು ಆರಿಸಿಕೊಂಡು ಕೆಲಸ ಮಾಡಿದ್ದಾರೆ. ಅಮೆರಿಕಾದ ಕೆನ್ನತ್ ಲೀ ಪೈಕ್ ಧ್ವನಿ ವಿಜ್ಞಾನ (1942), ಧ್ವನಿಮಾ ವಿಜ್ಞಾನ (1947) ಈ ಕೃತಿಗಳನ್ನು ರಚಿಸುವು ದರ ಮೂಲಕ ವರ್ಣನಾತ್ಮಕ ಭಾಷಾವಿಜ್ಞಾನಕ್ಕೆ ಅಮೂಲ್ಯ ಕಾಣಿಕೆಯನ್ನು ನೀಡಿದ್ದಾರೆ. ಬ್ಲೂಮ್ ಫೀಲ್ಡ್ ಪಂಥಕ್ಕೆ ಸೇರಿದ ಯೂ ಜಿನ್ ಎ. ನೈಡಾ ‘ಆಕೃತಿಮಾ ವಿಜ್ಞಾನ’ (ಮಾರ್ಫೊಲೊಜ) ಎಂಬ ಅಪೂರ್ವ ಕೃತಿಯನ್ನು ರಚಿಸಿದ್ದಾರೆ. ಅಮೆರಿಕಾದ ಭಾಷಾವಿಜ್ಞಾನಿಯಾದ ಸಿ.ಎಫ್. ಹಾಕೆಟ್ ರಚಿಸಿದ ‘ಆಧುನಿಕ ಭಾಷಾವಿಜ್ಞಾನ: ಒಂದು ಅಧ್ಯಯನ’ (ಎ ಕೋರ್ಸ್ ಇನ್ ಮಾಡರ್ನ್ ಲಿಂಗ್ವಿಸ್ಟಿಕ್ಸ್ – 1958) ಎಂಬ ಕೃತಿ ಭಾಷಾ ವಿಜ್ಞಾನದ ಸಮಗ್ರ ವಿಷಯಗಳನ್ನು ಸಂಕ್ಷಿಪ್ತವಾಗಿ ವಿವರಿಸುತ್ತದೆ. ಭಾಷಾವಿಜ್ಞಾನ ಕ್ಷೇತ್ರದ ಪ್ರವೇಶಕ್ಕೆ ಈ ಕೃತಿ ಅನಿವಾರ್ಯವೆನಿಸಿದೆ. 1965ರಲ್ಲಿ ನೋಮ್ ಚೋಮ್‌ಸ್ಕಿ ವಾಕ್ಯರಚನೆ ಕುರಿತು ರಚಿಸಿದ ಆಸ್ಬೆಕ್ಟ್ ಆಫ್ ಸಿಂಟ್ಯಾಕ್ಸ್ ವಾಕ್ಯ ವಿಜ್ಞಾನಕ್ಕೆ ಮಹತ್ವದ ಕೊಡುಗೆ.
ಕನ್ನಡದಲ್ಲಿಯೂ ಭಾಷಾ ವಿಜ್ಞಾನಕ್ಕೆ ಸಂಬಂಧಪಟ್ಟಂತೆ ಅನೇಕ ವಿದ್ವಾಂಸರು ಲೇಖನಗಳು, ಕೃತಿಗಳನ್ನು ರಚಿಸುವುದರ ಮೂಲಕ ಮಹತ್ವದ ಕೃಷಿ ಮಾಡಿ ದ್ದಾರೆ. ವಿವರಣಾತ್ಮಕ, ಐತಿಹಾಸಿಕ, ತೌಲನಿಕ ಹಾಗೂ ಆನ್ವಯಿಕ ಈ ಎಲ್ಲಾ ಶಾಖೆಗಳಿಗೆ ಸಂಬಂಧಪಟ್ಟಂತೆ ಅನೇಕ ಗ್ರಂಥಗಳು ರಚನೆಯಾಗಿವೆ. ಸಂಶೋಧನೆ ಗಳೂ ನಡೆದಿವೆ, ನಡೆಯುತ್ತಿವೆ. ಆರ್.ವಿ. ಜಾಗೀರದಾರರ ‘ಶಾರದೆಯ ಸಂಸಾರ’ ಅಥವಾ ‘ಭಾಷಾಶಾಸ್ತ್ರ’, ಡಾ. ಶಂಬಾ ಜೋಶಿಯವರ ‘ಕಂನುಡಿಯ ಹುಟ್ಟು’ (1937), ಆರ್. ನರಸಿಂಹಾಚಾರ್ಯರ ‘ಹಿಸ್ಟರಿ ಆಫ್ ಕನ್ನಡ ಲಾಂಗ್ವೇಜ್’ (1934), ಆರ್.ವೈ. ಧಾರವಾಡಕರರ ‘ಕನ್ನಡ ಭಾಷಾಶಾಸ್ತ್ರ’ (1962), ಪ್ರ.ಗೋ. ಕುಲಕರ್ಣಿ ಅವರ ‘ಕನ್ನಡ ಭಾಷೆಯ ಚರಿತ್ರೆ’ (1967), ಹಂಪನಾಗರಾಜಯ್ಯ ಅವರ ‘ದ್ರಾವಿಡ ಭಾಷಾವಿಜ್ಞಾನ’ (1966), ಭಾಷಾ ವಿಜ್ಞಾನ (1968), ಎಚ್.ಎಸ್.ಬಿಳಿಗಿರಿ ಅವರ ‘ವರ್ಣನಾತ್ಮಕ ವ್ಯಾಕರಣ’ (1970), ಕೆ.ಎಂ. ಕೃಷ್ಣರಾವ್ ಅವರ ‘ಕನ್ನಡ ಭಾಷಾ ಸ್ವರೂಪ’ (1968), ಎಂ. ಚಿದಾನಂದ ಮೂರ್ತಿ ಅವರ ‘ಭಾಷಾವಿಜ್ಞಾನದ ಮೂಲತತ್ವಗಳು’ (1965), ಡಿ.ಎನ್. ಶಂಕರಭಟ್ಟರ ‘ಕನ್ನಡ ವಾಕ್ಯಗಳು’ (1978), ಕನ್ನಡ ಭಾಷೆಯ ಕಲ್ಪಿತ ಚರಿತ್ರೆ (1995), ಜೆ.ಎಸ್. ಕುಳ್ಳಿಯವರ ‘ಆಧುನಿಕ ಭಾಷಾವಿಜ್ಞಾನ’, ‘ವರ್ಣನಾತ್ಮಕ ಭಾಷಾವಿಜ್ಞಾನ’ (1971), ‘ಐತಿಹಾಸಿಕ ಭಾಷಾವಿಜ್ಞಾನ’ (1973), ‘ಭಾಷಾಸೌಧ’, ವಿಲಿಯಂ ಮಾಡ್ತಾ ಅವರ ‘ಕನ್ನಡ ಭಾಷೆಯ ರೂಪರೇಷೆಗಳು’ (1970), ಸಂಗಮೇಶ ಸವದತ್ತಿ ಮಠರ ‘ಕನ್ನಡಭಾಷಾ ವ್ಯಾಸಂಗ’ (1986) ‘ಕನ್ನಡ ಭಾಷಾ ಕೈಪಿಡಿ’, ಕೆ.ಕೆಂಪೇಗೌಡರ ‘ಭಾಷೆ ಮತ್ತು ಭಾಷಾವಿಜ್ಞಾನ’ (1987), ‘ಸಾಮಾನ್ಯ ಭಾಷಾವಿಜ್ಞಾನ’ (1993), ‘ತೌಲನಿಕ ದ್ರಾವಿಡ ಭಾಷಾವಿಜ್ಞಾನ’ (1987), ಕೆ.ಕುಶಾಲಪ್ಪಗೌಡ ಅವರ ‘ಕನ್ನಡ ಭಾಷೆ ಮತ್ತು ವ್ಯಾಕರಣಗಳ: ಒಂದು ಅಧ್ಯಯನ’ (1987), ಕೆ.ವಿ.ನಾರಾಯಣ ಅವರ ‘ನಮ್ಮೊಡನೆ ನಮ್ಮ ನುಡಿ’ (2005) ಮತ್ತು ‘ನಮ್ಮ ಕನ್ನಡ’ ಪತ್ರಿಕೆಯಲ್ಲಿನ ‘ಭಾಷಾಧ್ಯಯನ ಕುರಿತ ಟಿಪ್ಪಣಿಗಳು’. ಕೆ.ಪಿ. ಭಟ್ ಅವರ ‘ಉಪಭಾಷೆ’ (1972), ಶಾಲಿನಿ ರಘುನಾಥ ಅವರ ‘ಉಪ ಭಾಷಾ ಅಧ್ಯಯನ’ (1973) ಆರ್. ರಾಮಕೃಷ್ಣ ಅವರ ‘ಭಾಷಾ ವೀಕ್ಷಣ’ (2000), ‘ಭಾಷಾವಿಜ್ಞಾನ ವಿಕಾಸ’ (1999) ‘ದ್ರಾವಿಡ ಭಾಷೆಗಳು’ ಎಂ.ಎಚ್.ಕೃಷ್ಣಯ್ಯ ಅವರ ‘ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆ’ (1993) ಸಾಂಬಮೂರ್ತಿ ಅವರ ‘ಭಾಷೆ ಮತ್ತು ಅಶಾಬ್ದಿಕ ಸಂವಹನ’ (2005) ಈ ಮೊದಲಾದವು ಕನ್ನಡ ಭಾಷೆ ಮತ್ತು ಭಾಷಾಧ್ಯಯನದ ಸಂದರ್ಭದಲ್ಲಿ ಹೆಸರಿಸಬಹುದಾದ ಕೆಲವು ಪ್ರಮುಖ ಕೃತಿಗಳು. ಇವಲ್ಲದೆ ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ನಡೆದಿರುವ ಹಾಗೂ ನಡೆಯುತ್ತಿರುವ ಸಂಶೋಧನೆಗಳೂ ಕನ್ನಡ ಭಾಷಾವಿಜ್ಞಾನ ಕ್ಷೇತ್ರದ ಹರಹು ಮತ್ತು ಆಳವನ್ನು ಹೆಚ್ಚಿಸುತ್ತವೆ.