ಮಿರ್ಜಿ ಅಣ್ಣರಾಯರು ಕಂಡಂತೆ ಭಾಷಾ ಶಿಕ್ಷಣ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

'ಭಾಷಾ ಶಿಕ್ಷಣ'

ಮಿರ್ಜಿ ಅಣ್ಣರಾಯರು ರಚಿಸಿರುವ 'ಭಾಷಾ ಶಿಕ್ಷಣ'ಹೊತ್ತಿಗೆಯು 1957 ರಲ್ಲಿ ಧಾರವಾಡದ, ಭಾರತ ಬುಕ್ ಡಿಪೋ ರವರಿಂದ ಪ್ರಕಾಶಿತಗೊಂದಿರುವ ಕೃತಿ. ಇಲ್ಲಿ ಲೇಖಕರು ನೇಡಬಾಳದ ಸನ್ನತಿ ವಿದ್ಯಾಲಯದಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿದ್ದಾಗಿನ ಬೋಧನಾನುಭವದ ಸಾರಸಂಗ್ರಹ. ಕಾಲೇಜು ಮೆಟ್ಟಿಲನ್ನೇ ಮುಟ್ಟದಿದ್ದರೂ ಅವರ ಶೈಕ್ಷಣಿಕ ಚಿಂತನೆ ಸ್ನಾತಕೋತ್ತರ ಮಟ್ಟದ್ದು ಎನ್ನುವುದೇ ಸೋಜಿಗದ ಸಂಗತಿ. ಇದಕ್ಕೆ ಉತ್ತಮ ನಿದರ್ಶನ ಈ 'ಭಾಷಾ ಶಿಕ್ಷಣ'ಪುಸ್ತಕ. ಇಲ್ಲಿಯ ಶೈಕ್ಷಣಿಕ ತತ್ವಗಳ ವಿವೇಚನೆಯನ್ನು ಕೇವಲ ಕನ್ನಡ ಭಾಷೆಗೆ ಮಾತ್ರವಲ್ಲದೆ ಯಾವ ಭಾಷಾ ಶಿಕ್ಷಣಕ್ಕಾದರು ಧಾರಾಳವಾಗಿ ಅನ್ವಹಿಸಬಹುದಾಗಿದೆ. ಅದರಂತೆ ಸಂಗ್ರಹ ರೂಪವಾಗಿ ಕೊಟ್ಟಿರುವ ಅಭ್ಯಾಸ ಕ್ರಮವನ್ನು ಸಹ ನವೀನ ಅಭ್ಯಾಸ ಬಂದಾಗಿಯೂ ಉಪಯೋಗಿಸಲು ಅಡ್ಡಿಯಿಲ್ಲ. ಇನ್ನು ಪಠ್ಯಪುಸ್ತಕದ ಬಗ್ಗೆ ಚರ್ಚಿಸುತ್ತ "ಶಿಕ್ಷಣಕ್ಷೇತ್ರದಲ್ಲಿ ಪಠ್ಯಪುಸ್ತಕಗಳಿಗಿಂತ ಶಿಕ್ಷಕರ ಯೋಗ್ಯತೆಗೇನೇ ಪ್ರಥಮ ಸ್ಥಾನ" ಎನ್ನುವ ಮೂಲ ಪಠ್ಯಪುಸ್ತಕ ಅಗತ್ಯವೇ ವಿನಹ ಅನಿವಾರ್ಯವಲ್ಲ ಎಂಬುದು ಇವರ ಚಿಂತನೆ. ರಾಷ್ಟ್ರೀಯ ಪಠ್ಯಕ್ರಮ-2005” ರಂತೆ ಇವರ ಪರಿಕಲ್ಪನೆಗಳು ಚಟುವಟಿಕೆ ಆಧಾರಿತವಾಗಿವೆ. ವಿವಿಧ ಮಾದರಿಯ ಮನೋವಿಕಾಸ ಮತ್ತು ಅಭ್ಯಾಸಕ್ರಮ, ಗದ್ಯ ಶಿಕ್ಷಣ,ಕವಿತಾ ಶಿಕ್ಷಣ ಪಠ್ಯಾಧಾರಿತ ಚಟುವಟಿಕೆಗಳು ಮೊದಲಾದವುಗಳನ್ನು ತರಗತಿಯಲ್ಲಿ ಬೋಧಿಸುವ ಬಗ್ಗೆ ಮತ್ತು ಅನ್ವಯಿಸುವ ಬಗ್ಗೆ ಸ್ಥೂಲವಾಗಿ ಮತ್ತು ಸೂಕ್ಷ್ಮವಾಗಿ ವಿಶ್ಲೇಷಿಸಿದ್ದಾರೆ. ಇದರಲ್ಲಿ ಕೊನೆಗೆ ಕೆಲವು ವಾರಗಳನ್ನು (ಆಭ್ಯಾಸ) ಕಲಿಸುವ ಟಿಪ್ಪಣಿಗಳನ್ನು ಕೊಟ್ಟಿದೆ. ಅವು ಸ್ಥೂಲ ರೂಪುರೇಷೆಗಳು ಮಾತ್ರ ಆಗಿವೆ.ಅವುಗಳನ್ನು ಕೇವಲ ದಿಕ್ಸೂಚಿಗಳಂತೆ ನಿರೀಕ್ಷಿಸಬಹುದಾಗಿದೆ.ಪ್ರಸ್ತುತ ಜೀವನ ಶಿಕ್ಷಣಕ್ಕೆ ಉಪಯುಕ್ತವೆನಿಸುವ ಚಟುವಟಿಕೆಯ ಹಿನ್ನಲೆಯಲ್ಲಿ ವಾರಗಳನ್ನು ಇಲ್ಲಿ ಸೇರಿಸಿದ್ದಾರೆ.

ಲೇಖಕರ ಕಿರು ಪರಿಚಯ

ಬೆಳಗಾವಿಯಿಂದ ಉತ್ತರಕ್ಕೆ ಸುಮಾರು 125 ಕಿ.ಮೀ ದೂರದ ಹಳ್ಳಿ ಸೇಡಬಾಳ ಮಿರ್ಜಿ ಅಣ್ಣಾರಾಯರ ಕಾರ್ಯಕ್ಷೇತ್ರ. ಅಣ್ಣಾರಾಯರ ಹೆಸರಿನಲ್ಲಿರುವ ಮಿರ್ಜಿ ಎಂಬುದು ಅಣ್ಣಾರಾಯರ ಪೂರ್ವಜರಿದ್ದ ಊರು. ಸೇಡಬಾಳ ಕರ್ನಾಟಕದ ಜನಮನದ ನೆನಪಿನಲ್ಲಿ ನಿಂತಿರುವುದು ಮಿರ್ಜಿ ಅಣ್ಣಾರಾಯರಿಂದ. ಬೆಳಗಾವಿಯಂತೆಯೇ, ಆ ಜಿಲ್ಲೆಗೆ ಸೇರಿದ ಸೇಡಬಾಳವೂ ಕರ್ನಾಟಕದ ಗಡಿಯಲ್ಲಿದೆ. ಈ ಗಡಿಯನ್ನು ಕರ್ನಾಟಕದ ಸೆರಗಿನೊಳಗೇ ನಿಲ್ಲುವಂತೆ ಮೂರುವರೆ ದಶಕಗಳ ಕಾಲ ದುಡಿದವರು, ಪ್ರತಿಫಲಾಪೇಕ್ಷೆಯಿಲ್ಲದೆ ಶ್ರಮಿಸಿದವರು ಅಣ್ಣಾರಾಯರು.

ತಮ್ಮ ಹಡೆದವರನ್ನು ಕುರಿತು ಅಣ್ಣಾರಾಯರು ಹೇಳುತ್ತಾರೆ, “ನನ್ನ ತಂದೆ ತಾಯಂದಿರು ಅಕ್ಷರಗಳನ್ನು ಕಲಿತವರಲ್ಲ, ಆದರೆ ತುಂಬಾ ಸುಸಂಸ್ಕೃತರು”. ಹೀಗೆ ಶ್ರೀಸಾಮಾನ್ಯರ ಮನೆತನದಲ್ಲಿ ಆಗಸ್ಟ್ ೨೫, ೧೯೧೮ರಲ್ಲಿ ಜನಿಸಿದ ಅಣ್ಣಾರಾಯರು ತಮ್ಮ ೫೭ ವರ್ಷಗಳ ಜೀವಿತ ಕಾಲದಲ್ಲಿ ಮಾಡಿಮಟ್ಟಿದ್ದು ಮಾತ್ರ ಅಸಾಮಾನ್ಯವಾದದ್ದು.

ಅಣ್ಣಾರಾಯರು ವಿದ್ಯಾರ್ಥಿಯಾಗಿ ಕಾಲೇಜು ಮೆಟ್ಟಿಲು ಹತ್ತಿದವರಲ್ಲ; ಅವರು ಬರೆದ ಪುಸ್ತಕಗಳು ಮಾತ್ರ ಸ್ನಾತಕೋತ್ತರ ತರಗತಿಗಳಿಗೂ ಪಠ್ಯಗಳಾಗಿವೆ. ಸಾಹಿತ್ಯ ಕೃತಿಗಳಾಗಿ ಮನ್ನಣೆ ಹೊಂದಿವೆ. ಮಠಕ್ಕೆ ಹಾಜರಾಗಿ ಅವರು ಕಲಿತದ್ದು ಪ್ರಾಥಮಿಕ ಶಾಲೆಯವರೆಗೆ. ಅಲ್ಲಿಂದ ಆಚೆ ಮನೆಯಲ್ಲಿ ಕುಳಿತೇ ಸ್ವಾಧ್ಯಾಯ ಕಲಿಕೆ. ಖಾಸಗಿಯಾಗಿ ಕಲಿಯುತ್ತಾ ಸಾಹಿತ್ಯ ಪರಿಷತ್ತಿನ ‘ಜಾಣ’ ಪರೀಕ್ಷೆಗೆ ಅಭ್ಯರ್ಥಿಯಾಗಿ ನೋಂದಾಯಿಸಿಕೊಂಡು, ೧೯೩೮ರಲ್ಲಿ ಜಾಣರಾದರು. ಮರುವರ್ಷ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನೇಮಕವಾದರು. ವ್ಯವಹಾರಕ್ಕೆಂದು ತಕ್ಕಮಟ್ಟಿನ ಇಂಗ್ಲಿಷ್ ಮತ್ತು ಗುಜರಾತಿ ಕಲಿತರು. ಸಂಸ್ಕೃತ, ಪ್ರಾಕೃತಗಳ ಪರಿಶ್ರಮವಿತ್ತು. ವಿಶ್ವವಿಖ್ಯಾತ ವಿದ್ವಾಂಸ ಡಾ. ಆ. ನೇ. ಉಪಾಧ್ಯೆಯವರ ಮಾರ್ಗದರ್ಶನದಲ್ಲಿ ಪ್ರೌಢ ಕೃತಿಗಳನ್ನೂ ಅಭ್ಯಸಿಸಿದರು. ಅಣ್ಣಾರಾಯರ ಬರಹಗಳಲ್ಲಿ ೯೦೦ ಪುಟಗಳ ಜೈನಧರ್ಮ ಅಣ್ಣಾರಾಯರ ಮೇರುಕೃತಿ. ಸಂಸ್ಕೃತದಲ್ಲಿ ಪೂರ್ವ ಪುರಾಣ – ಉತ್ತರ ಪುರಾಣ ಎಂಬ ಎರಡೂ ಭಾಗಗಳು ಸೇರಿ ಆದ ‘ಮಹಾಪುರಾಣ’ವು ದೊಡ್ಡ ಮಹಾಕಾವ್ಯ. ಈ ವಿದ್ವತ್ ಕೃತಿಗಳ ಶ್ರೇಣಿಗೆ ಸೇರಿದ ಮತ್ತೊಂದು ಗ್ರಂಥ ‘ರತ್ನ ಕರಂಡಕ ಶ್ರಾವಕಾಚಾರ’ ಎಂಬ ಪ್ರಕಾಂಡ ಪಂಡಿತ ತಾರ್ಕಿಕ ಸಮಂತ ಭದ್ರಾಚಾರರೇ ಬರೆದುದೆಂದು ಪ್ರಚುರವಾಗಿರುವ ಈ ಉತ್ಕೃಷ್ಟ ಕೃತಿಯನ್ನು ಅದರ ವ್ಯಾಖ್ಯಾನದೊಡನೆ, ಡಾ. ಆ. ನೇ. ಉಪಾಧ್ಯೆ ಅವರ ಸೂಚನೆಗಳೊಡನೆ ಅಣ್ಣಾರಾಯರು ಕನ್ನಡದಲ್ಲಿ ಸಾದರಪಡಿಸಿದ್ದಾರೆ. ಉನ್ನತ ತರಗತಿಗಳಿಗೆ ಕನ್ನಡವನ್ನು ಬೋಧಿಸುವ ಕಾಲೇಜು ಅಧ್ಯಾಪಕರಿಗೆ ಇದರ ನೆರವು ಅಪಾರ. ಭಾರತೀಯ ಜ್ಞಾನಪೀಠದ ಆಧಾರಸ್ಥಂಭರೆನಿಸಿದ್ದ ಡಾ. ಹೀರಾಲಾಲ್ ಜೈನ್ ಅವರ ‘ಭಾರತೀಯ ಸಂಸ್ಕೃತಿಗೆ ಜೈನ ಧರ್ಮದ ಕೊಡುಗೆ’ ಎಂಬ 600 ಪುಟಗಳ ಕೃತಿಯನ್ನು ಮಿರ್ಜಿ ಅಣ್ಣಾರಾಯರು ಕನ್ನಡಿಸಿದ್ದಾರೆ. ಕನ್ನಡ ಸಾಹಿತ್ಯದಿಂದ ಆಕರ್ಷಿತರಾಗಿ ರೂಢಿಸಿಕೊಂಡದ್ದು ಬರವಣಿಗೆ. ಸನ್ಮತಿ, ವಿವೇಕಾಭ್ಯುದಯ, ಗುರುದೇವ, ಪ್ರಬುದ್ಧ ಕರ್ನಾಟಕ, ಜೀವನ-ಮುಂತಾದ ಪತ್ರಿಕೆಗಳಿಗೆ ಬರೆದ ಲೇಖನಗಳು. ಬರೆದ ಮೊದಲ ಕಾದಂಬರಿ ನಿಸರ್ಗ (೧೯೪೫), ಭಾಷೆಯ ಹೊಸತನ, ಸರಳ ನಿರೂಪಣೆಯಿಂದ ಕೂಡಿದ ಕಾದಂಬರಿ. ರಾಷ್ಟ್ರಪುರುಷ, ರಾಮಣ್ಣ ಮಾಸ್ತರ, ಶ್ರೇಯಾಂಸ, ಪ್ರತಿ ಸರಕಾರ, ಅಶೋಕ ಚಕ್ರ, ಎರಡು ಹೆಜ್ಜೆ, ಹದಗೆಟ್ಟಹಳ್ಳಿ ಮುಂತಾದ ಸಾಮಾಜಿಕ ಕಾದಂಬರಿಗಳು. ಚಾರಿತ್ರಿಕ ಕಾದಂಬರಿ-ಸಾಮ್ರಾಟ್ ಶ್ರೇಣಿಕ, ಚಾವುಂಡರಾಯ. ಪೌರಾಣಿಕ ಕಾದಂಬರಿ- ಋಷಭದೇವ. ಕಥಾಸಂಕಲನಗಳು-ಪ್ರಣಯ ಸಮಾ, ಅಮರ ಕಥೆಗಳು, ವಿಜಯಶ್ರೀ. ಶೈಕ್ಷಣಿಕ ಗ್ರಂಥಗಳು-ಭಾಷಾ ಶಿಕ್ಷಣ, ಲೇಖನ ಕಲೆ, ಮೂಲ ಶಿಕ್ಷಣದ ಮೌಲ್ಯಮಾಪನ. ವಿಮರ್ಶಾ ಕೃತಿಗಳು-ದತ್ತವಾಣಿ, ವಿಮರ್ಶೆಯ ಸ್ವರೂಪ, ಭರತೇಶನ ನಾಲ್ಕು ಚಿತ್ರಗಳು, ಕನ್ನಡ ಸಾಹಿತ್ಯದ ಒಲವುಗಳು. ಸಂಪಾದಿತ ಕೃತಿಗಳು-ಕಲ್ಯಾಣ ಕೀರ್ತಿಯ ಚಿನ್ಮಯ, ಚಿಂತಾಮಣಿ, ಭರತೇಶ ವೈಭವದ ಶೋಭನ ಸಂಗಳು. ಜೀವನ ಚರಿತ್ರೆ-ಪ್ರಿಯದರ್ಶಿ, ಭಾರತದ ಬೆಳಕು, ಖಾರವೇಲ, ಭಗವಾನ್ ಮಹಾವೀರ, ಬುದ್ಧನ ಕಥೆ, ಮಹಮದ್ ಪೈಗಂಬರ್, ಶ್ರೀ ಶಾಂತಿಸಾಗರರು, ತೀರ್ಥಂಕರ ಮಹಾವೀರ, ಮಹಾಪುರುಷ ಸೇರಿ ಸುಮಾರು ೩೦ಕ್ಕೂ ಹೆಚ್ಚು ಕೃತಿ ಪ್ರಕಟಿತ.

ವರಕವಿ ಬೇಂದ್ರೆಯವರ ವ್ಯಕ್ತಿ-ಕೃತಿ ಪರಿಚಯ ಮಾಡಿಕೊಡುವ ಕೃತಿಯೊಂದನ್ನು ಅಣ್ಣಾರಾಯರು ‘ದತ್ತವಾಣಿ’ ಎಂಬ ಹೆಸರಿನಿಂದ ಅಚ್ಚುಹಾಕಿಸಿದ್ದಾರೆ. ಡಾ. ಸಿದ್ಧಯ್ಯ ಪುರಾಣಿಕರನ್ನು ಪರಿಚಯಿಸುವ ಕಾವ್ಯಾನಂದ, ಡಾ. ರಂ. ಶ್ರೀ. ಮುಗಳಿಯವರನ್ನು ಪರಿಚಯಿಸುವ ‘ರಸಿಕರಂಗ’ ಮೊದಲಾದ ಅಭಿನಂದನ ಗ್ರಂಥಗಳಿಗೆ ಸಂಪಾದಕರಾಗಿದ್ದಾರೆ. ಇವು ಅಣ್ಣಾರಾಯರ ಅಮತ್ಸರ ಗುಣಕ್ಕೆ ಕನ್ನಡಿ ಹಿಡಿಯುವ ಕೃತಿಗಳು.

  • ಮಾಹಿತಿ ಕೃಪೆ

ಕನ್ನಡ ಸಾಹಿತ್ಯ ಅಕಾಡೆಮಿ ಪ್ರಕಟಣೆಯಾದ 'ಸಾಲು ದೀಪಗಳು' ಕೃತಿಯಲ್ಲಿ' ಕಮಲ ಹಂಪನಾ ಅವರ ಮಿರ್ಜಿ ಅಣ್ಣಾರಾಯರ ಕುರಿತಾದ ಬರಹ