ಗೂಗಲ್ ಡ್ರೈವ್ ಕಲಿಯಿರಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಪರಿಚಯ

ಗೂಗಲ್‌ ಡ್ರೈವ್‌ ಎಂಬುದು, ನೀವು ರಚಿಸಿದ ಅಥವಾ ನಿಮ್ಮೊಡನೆ ಇತರರು ಹಂಚಿಕೊಂಡ ಕಡತಗಳನ್ನು ಮತ್ತು ಕಡತಕೋಶಗಳನ್ನು ಸಂಗ್ರಹಿಸುವ ಆನ್‌ಲೈನ್‌ ಕಡತಕೋಶವಾಗಿದೆ. ವಿವಿಧ ಸಾಧನಗಳ ಮೂಲಕ ನಿಮ್ಮ ಡ್ರೈವ್ ಅನ್ನು ಬಳಸಲು, ನಿಮ್ಮ ಗೂಗಲ್‌ ಜೀಮೇಲ್‌ ಖಾತೆಯ ಮೂಲಕ ಲಾಗಿನ್‌ ಆಗಬೇಕಾಗುತ್ತದೆ.

ಮೂಲ ಮಾಹಿತಿ

ಐ.ಸಿ.ಟಿ ಸಾಮರ್ಥ್ಯ ಗೂಗಲ್ ಡ್ರೈವ್ ಸಂಪನ್ಮೂಲಗಳನ್ನು ಬಳಸಲು, ಹಂಚಿಕೊಳ್ಳಲು ಮತ್ತು ಪ್ರಕಟಿಸಲು ಬಳಸುವ ಪರಿಕರವಾಗಿದೆ.
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ ಈಗಾಗಲೇ ನೀವು ರಚಿಸಿರುವ ಕಡತಗಳನ್ನು ಮತ್ತು ಕಡತಕೋಶಗಳನ್ನು ಇಲ್ಲಿ ಸಂಗ್ರಹಿಸಬಹುದು. ಅದಲ್ಲದೇ ಇದೇ ಪುಟದಲ್ಲಿ ಹೊಸದಾಗಿ ಕಡತ ಮತ್ತು ಕಡತಕೋಶಗಳನ್ನು ರಚಿಸಬಹುದು. ನಂತರ ನಿಮ್ಮ ದಾಖಲೆಗಳನ್ನು ಸಹವರ್ತಿಗಳೊಂದಿಗೆ ಹಂಚಿಕೊಳ್ಳಬಹುದು ಹಾಗು ಅವರು ವಿಶ್ಲೇಷನೆ ಮಾಡಲು ಅಥವಾ ತಿದ್ದುಪಡಿ ಮಾಡಲು ಅವಕಾಶ ನೀಡಬಹುದು.
ಆವೃತ್ತಿ ವೆಬ್‌ ಆಧಾರಿತ ಅನ್ವಯಕವಾಗಿರುವುದರಿಂದ ಇದು ಅನ್ವಯವಾಗುವುದಿಲ್ಲ.
ಸಂರಚನೆ ಈ ಅನ್ವಯಕಕ್ಕೆ ಯಾವುದೇ ಸಂರಚನೆಯ ಅವಶ್ಯಕವಿರುವುದಿಲ್ಲ, ಆದರೆ ಗೂಗಲ್ ಡ್ರೈವ್‌ ಬಳಸಲು ಇಂಟರ್‌ನೆಟ್‌ ಲಭ್ಯವಿರಬೇಕಾಗುತ್ತದೆ.
ಇತರೇ ಸಮಾನ ಅನ್ವಯಕಗಳು
ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ ಪ್ರಸ್ತುತ ಬಳಕೆಯಲ್ಲಿರುವ ಎಲ್ಲಾ ಆಂಡ್ರಾಯಿಡ್‌ ಮೊಬೈಲ್‌ ಗಳಲ್ಲಿ ಈಗಾಗಲೇ ಗೂಗಲ್ ಡ್ರೈವ್‌ ಅನುಸ್ಥಾಪನೆಯಾಗಿರುತ್ತದೆ. ಮೊಬೈಲ್‌ ಸಂರಚನೆಯಲ್ಲಿ ನಿಮ್ಮ ಮೊಬೈಲ್‌ನಲ್ಲಿನ ಕಡತಗಳು ಗೂಗಲ್ ಡ್ರೈವ್ ಅಪ್‌ಲೋಡ್‌ ಆಗುವಂತೆ ಮಾಡಿಕೊಳ್ಳಬೇಕು.
ಅಭಿವೃದ್ದಿ ಮತ್ತು ಸಮುದಾಯ ಸಹಾಯ ಗೂಗಲ್

ಲಕ್ಷಣಗಳ ಮೇಲ್ನೋಟ

  1. ಚಿತ್ರಗಳು, ಇಮೇಲ್‌ಗಳು, ಆಡಿಯೋ, ವಿಡಿಯೋ ಮುಂತಾದ ಕಡತಗಳನ್ನು ಸಂಗ್ರಹಿಸಲು ಅನುಕೂಲವಾಗುವಂತೆ ಗೂಗಲ್ ಡ್ರೈವ್‌ ನಲ್ಲಿ 15 GB ಸ್ಥಳಾವಕಾಶವಿರುತ್ತದೆ.
  2. ಗೂಗಲ್ ಡ್ರೈವ್‌ನಲ್ಲಿರುವ ಕಡತಗಳನ್ನು ಯಾವುದೇ ಸಾಧನಗಳ (ಪೋನ್, ಟ್ಯಾಬ್, ಕಂಪ್ಯೂಟರ್) ಮೂಲಕ ತೆರೆಯಬಹುದಾಗಿದೆ.
  3. ನೀವು ಅಪ್‌ಲೋಡ್ ಮಾಡಿದ ನಂತರ, ಆ ಕಡತವನ್ನು ತಿದ್ದಲು, ಮಾಹಿತಿ ಸೇರಿಸಲು ಅಥವಾ ಸಹಯೋಜಿತವಾಗಿ ರಚಿಸಲು ಸಾಧ್ಯವಾಗುವಂತೆ ಇತರರನ್ನು ನೀವು ಆಹ್ವಾನಿಸಬಹುದು. ಇದಕ್ಕಾಗಿ ಇಮೇಲ್‌ನಲ್ಲಿ ಕಡತದ ಲಗತ್ತಾಗಿ ಕಳುಹಿಸುವ ಅವಶ್ಯಕತೆ ಇರುವುದಿಲ್ಲ. ಕೇವಲ ಲಿಂಕ್ ಅನ್ನು ಹಂಚಿಕೊಂಡರೆ ಸಾಕು ಅದರ ಮೂಲಕ ಸರಳವಾಗಿ ಬದಲಾವಣೆಗಳನ್ನು ಮಾಡಬಹುದು.

ಅನುಸ್ಥಾಪನೆ

ಈ ಅನ್ವಯಕವು ವೆಬ್‌ ಆಧಾರಿತ ಅನ್ವಯಕವಾಗಿರುವುದರಿಂದ ಇದು ಅನ್ವಯವಾಗುವುದಿಲ್ಲ. ನಿಮ್ಮ ಡ್ರೈವ್ ಅನ್ನು ಬಳಸಲು, ನಿಮ್ಮ ಗೂಗಲ್‌ ಜೀಮೇಲ್‌ ಖಾತೆಯ ಮೂಲಕ ಲಾಗಿನ್‌ ಆಗಬೇಕಾಗುತ್ತದೆ.

ಅನ್ವಯಕ ಬಳಕೆ

ಗೂಗಲ್ ಡ್ರೈವ್ ಬಳಸುವುದು

1. ಈ ಮೇಲಿನ ಚಿತ್ರ ಗೂಗಲ್ ಡ್ರೈವ್ ತೆರೆಯುವುದು ಹೇಗೆಂದು ತಿಳಿಸುತ್ತದೆ. ಇದಕ್ಕಾಗಿ ನೀವು ಮೊದಲು ಬ್ರೌಸರ್ (Mozilla Firefox) ತೆರೆಯಬೇಕಾಗುತ್ತದೆ. ಉಬುಂಟು ಕಸ್ಟಂ ಆಪರೇಟಿಂಗ್ ಸಿಸ್ಟಂ ನ ಕಂಪ್ಯೂಟರ್‌ನಲ್ಲಿ Applications → Internet→ Firefox web browser ಮೂಲಕ ತೆರೆಯಬಹುದು. ನಂತರ ಅಡ್ರೆಸ್ ಬಾರ್‌ನಲ್ಲಿ www.gmail.com ಎಂದು ನಮೂದಿಸಿ ಜೀಮೇಲ್ ಪುಟಕ್ಕೆ ತೆರಳಿ.
2. ಇಲ್ಲಿ ನಿಮ್ಮ ನಿಮ್ಮ ಗೂಗಲ್‌ ಜೀಮೇಲ್‌ ಖಾತೆಯ ಯೂಸರ್ ಐಡಿ ಮತ್ತು ಪಾಸ್‌ವರ್ಡ್‌ ನಮೂದಿಸುವ ಮೂಲಕ ಲಾಗಿನ್‌ ಆಗಬೇಕು.
3. ನಂತರ ಮೂರನೇ ಚಿತ್ರದಲ್ಲಿ ತೋರಿಸಿರುವಂತೆ, ಗೂಗಲ್ ಅನ್ವಯಕಗಳ ಪಟ್ಟಿಯಲ್ಲಿ ನೋಡಿ. ಇಲ್ಲಿ Drive ನ್ನು ಆಯ್ಕೆ ಮಾಡಿಕೊಳ್ಳಿ.
4. ಈಗ ಗೂಗಲ್ ಡ್ರೈವ್ ಪುಟ ತೆರೆಯುತ್ತದೆ ಹಾಗು ನಾಲ್ಕನೇ ಚಿತ್ರದಲ್ಲಿರುವಂತೆ ಕಾಣುತ್ತದೆ.

ಕಡತಗಳನ್ನು ರಚಿಸುವುದು ಮತ್ತು ಅಪ್‌ಲೋಡ್‌ ಮಾಡುವುದು

  1. ಗೂಗಲ್‌ ಡ್ರೈವ್‌ ಗೆ ಕಡತಗಳನ್ನು ಅಪ್‌ಲೋಡ್‌ ಮಾಡಲು. ಪರದೆಯ ಎಡಬದಿಯಲ್ಲಿರುವ “New” ಬಟನ್‌ ಮೇಲೆ ಕ್ಲಿಕ್ ಮಾಡಿ.
    1. ಕಡತಕೋಶವನ್ನು ರಚಿಸಲು “Folder” ಮೇಲೆ ಕ್ಲಿಕ್ ಮಾಡಿ--> ಈ ಕಡತಕೋಶಕ್ಕೆ ಹೆಸರು ಸೂಚಿಸಿ --> “Create” ಮೇಲೆ ಕ್ಲಿಕ್ ಮಾಡಿ.
    2. ಕಡತ ಅಪ್‌ಲೋಡ್‌ ಮಾಡಲು “File Upload” ಮೇಲೆ ಕ್ಲಿಕ್ ಮಾಡಿ -> ಕಡತವನ್ನು ಆಯ್ಕೆ ಮಾಡಿ → ನಂತರ “Open” ಮೇಲೆ ಕ್ಲಿಕ್ ಮಾಡಿ.
    3. ಇಲ್ಲಿ ನೀವು ಹೊಸ ಕಡತಗಳನ್ನು ರಚಿಸಬಹುದು. ಡಾಕ್ಯುಮೆಂಟ್, ಸ್ಪ್ರೆಡ್‌ಶೀಟ್‌, ಸ್ಲೈಡ್‌ಗಳನ್ನು ರಚಿಸಬಹುದು.
  2. ಕಡತಗಳನ್ನು ಹಂಚಿಕೊಳ್ಳುವುದು : ಯಾವುದೇ ಕಡತವನ್ನು ಇತರರೊಡನೆ ಹಂಚಿಕೊಳ್ಳಲು ಮೊದಲು ಆ ಕಡತವನ್ನು ತೆರೆದು ಪರದೆಯ ಮೇಲ್ಬಾಗದ ಬಲಬದಿಯಲ್ಲಿರುವ “SHARE” ಬಟನ್ ಮೇಲೆ ಕ್ಲಿಕ್ ಮಾಡಿ. ಅಥವಾ ಗೂಗಲ್ ಡ್ರೈವ್ ನಲ್ಲಿ ಉಳಿಸಲಾಗಿರುವ ಕಡತದ ಮೇಲೆ ಮೌಸ್ ಮೂಲಕ ಬಲ ಕ್ಲಿಕ್ ಮಾಡುವುದರಿಂದಲೂ ““SHARE” ಆಯ್ಕೆಯನ್ನು ತೆಗೆದುಕೊಳ್ಳಬಹುದು. ಈ ಮೂಲಕ ಕಡತಗಳನ್ನು ಇತರರೊಡನೆ ಹಂಚಿಕೊಳ್ಳಬಹುದಾಗಿದ್ದು, ನೀವು ಯಾರೊಂದಿಗೆ ಹಂಚಿಕೊಳ್ಳಲು ಬಯಸುತ್ತೀರೋ ಅವರ ಇಮೇಲ್ ಐಡಿ ನಮೂದಿಸಿ ಅವರೊಂದಿಗೆ ಹಂಚಿಕೊಳ್ಳಬಹುದು.
  3. ಇತರರೊಡನೆ ಕಡತಗಳನ್ನು ಹಂಚಿಕೊಳ್ಳುವಾಗ, ಅವರಿಗೆ ಈ ಕಡತದ ಬಳಕೆಯ ಮೇಲೆ ಕೆಲವು ಅನುಮತಿಗಳನ್ನು ನೀಡಬಹುದು. ಉದಾಹರಣೆಗೆ : ಈ ಕಡತವನ್ನು ಅವರು ಸಹ ತಿದ್ದುಪಡಿ ಮಾಡಬಹುದಾದಲ್ಲಿ “can edit” ಆಯ್ಕೆಯನ್ನು, ಕಡತದ ವಿಷಯದ ಬ್ಗಗೆ ಅಭಿಪ್ರಾಯ ತಿಳಿಸಬಹುದಾದಲ್ಲಿ "Can comment" ಮತ್ತು ಕೇವಲ ವೀಕ್ಷಣೆ ಮಾತ್ರ ಮಾಡಬಹುದಾದಲ್ಲಿ "Can view" ಆಯ್ಕೆಯನ್ನು ಮಾತ್ರವೇ ತೆಗೆದುಕೊಳ್ಳಬಹುದು.

ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು

ಇಲ್ಲಿ ಪ್ರತ್ಯೇಕವಾಗಿ ಕಡತಗಳನ್ನು ಉಳಿಸುವ ಅಗತ್ಯವಿರುವುದಿಲ್ಲ. ನೀವು ಗೂಗಲ್ ಡ್ರೈವ್‌ನಲ್ಲಿ ಕಡತ ತೆರೆದು ಕೆಲಸ ಪ್ರಾರಂಭಿಸಿದ ತಕ್ಷಣ ಈ ಕಡತವು ಸ್ವಯಂಚಾಲಿತವಾಗಿ ಸೇವ್ ಆಗುತ್ತಿರುತ್ತದೆ. ನೀವು ಕಡತ ರಚನೆಯ ಸಂದರ್ಭದಲ್ಲಿ ಇದಕ್ಕೆ ಸೂಕ್ತವಾದ ಹೆಸರು ನೀಡಬೇಕು. ಇಲ್ಲವಾದಲ್ಲಿ ಈ ಕಡತವು "Untitled" ಎಂಬ ಹೆಸರಿನೊಂದಿಗೆ ಉಳಿಯುತ್ತದೆ.

ಉನ್ನತೀಕರಿಸಿದ ಲಕ್ಷಣಗಳು

  1. "Google Drawing Page" ಮೂಲಕ ಡ್ರಾಯಿಂಗ್ ಗಳನ್ನು ರಚಿಸಬಹುದು.
  2. ಗೂಗಲ್ ಡ್ರೈವ್ ಓಪನ್ ಡಾಕ್ಯುಮೆಂಟ್ ಪಾರ್ಮಾಟ್‌ ವೀವರ್ ನ್ನು ಹೊಂದಿದೆ. ಈ ಮೂಲಕ .odt, .fodt, .ott, .odp, .fodp, .otp, .ods, .fods, .ots, .doc, .docx, .xls, .xlsx, .ppt, .pptx ನಮೂನೆ ಬೆಂಬಲಿತ ಕಡತಗಳನ್ನು ತೆರೆಯಬಹುದಾಗಿದೆ. ಮತ್ತು ಈ ಮೇಲಿನ ವಿವಿಧ ನಮೂನೆಗಳಲ್ಲಿ ಡೌನ್‌ಲೋಡ್‌ ಸಹ ಮಾಡಿಕೊಳ್ಳುವ ಸೌಲಭ್ಯವಿದೆ.

ಸಂಪನ್ಮೂಲ ರಚನೆಯ ಆಲೋಚನೆಗಳು

ಚಿತ್ರಗಳು, ಪ್ರಮುಖ ಕಡತಗಳು ಮತ್ತು ಪಠ್ಯ ಸಂಪನ್ಮೂಲಗಳಂತಹ ಎಲ್ಲಾ ದಾಖಲೆಗಳನ್ನು ಗೂಗಲ್‌ ಡ್ರೈವ್‌ನಲ್ಲಿ ಉಳಿಸಿಕೊಳ್ಳಬಹುದು. ಈ ಸಂಪನ್ಮೂಲಗಳನ್ನು ನಿಮ್ಮ ಸಹವರ್ತಿಗಳೊಡನೆ ಹಂಚಿಕೊಳ್ಳುವ ಮೂಲಕ ಹಿಮ್ಮಾಹಿತಿ, ಸಲಹೆ ಪಡೆದು ಹೆಚ್ಚು ಪರಿಣಾಮಕಾರಿಯಾಗಿಸಬಹುದು.

ಆಕರಗಳು

Tutorial

Google Drive page