ಕಿಶೋರಿ ಕ್ಲಬ್
ಕಿಶೋರಿ ಕ್ಲಬ್ - ಅರಿವಿಲ್ಲದ ಅನಾರೋಗ್ಯಕರ ವರ್ತನೆಯಿಂದ ಆರೋಗ್ಯಕರ ಪರಿವರ್ತನೆಯೆಡೆಗೆ
ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ತಮ್ಮ ಸುತ್ತಲ ಪರಿಸರದ ಹಾಗೂ ಸಮಾಜದ ಓರೆಕೋರೆಗಳ ಪರಿಚಯವಾದರೆ ಮುಂದೆ ಅವರು ತಂತಮ್ಮ ಜೀವನಗಳಲ್ಲಿ ತಮ್ಮ ಆಕಾಂಕ್ಷೆಯ ವಿಷಯಗಳಲ್ಲಿ ಸಾಧನೆ ಮಾಡಲು ಅನುವಾಗುತ್ತದೆ ಎಂಬುದು ನಮ್ಮ ನಂಬಿಕೆ.
ಇದೇ ನಂಬಿಕೆಯಿಂದ ಹದಿಹರೆಯದ ಹೆಣ್ಣುಮಕ್ಕಳನ್ನು ಸಬಲೀಕರಣಗೊಳಿಸುವ ಉದ್ದೇಶವನ್ನು ಹೊಂದಿರುವ “ಹೊಸ ಹೆಜ್ಜೆ ಹೊಸ ದಿಶೆ” ಯೋಜನೆಯನ್ನು ಐ.ಟಿ.ಫಾರ್ ಚೇಂಜ್ ಸಂಸ್ಥೆಯು ವಿನ್ಯಾಸಗೊಳಿಸಿ ಕಳೆದ ಐದು ವರ್ಷಗಳಿಂದ ಕಾರ್ಯಗತಗೊಳಿಸುತ್ತಿದೆ.
ಈ ಯೋಜನೆಯಡಿಯಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ ಕಿಶೋರಿ ಕ್ಲಬ್‌ಗಳನ್ನು ಹದಿಹರೆಯದ ಹೆಣ್ಣುಮಕ್ಕಳ ವೇದಿಕೆಗಳಾಗಿ ನಿರ್ಮಿಸಿ, ಅವುಗಳ ಮುಖಾಂತರ ಅವರ ಜೀವನಕ್ಕೆ ಪೂರಕವಾಗುವ ಅಂಶಗಳನ್ನು ಪರಿಚಯಿಸಿ, ಅವರ ಸಶಕ್ತ ಭವಿಷ್ಯವನ್ನು ರೂಪಿಸಿಕೊಳ್ಳುವೆಡೆಗೆ ಉಪಯುಕ್ತ ತರಬೇತಿಗಳನ್ನು ನೀಡುವ ಉದ್ದೇಶವಿದೆ.
ಹಲವು ವರ್ಷಗಳ ಹಿಂದೆ ಇದ್ದಂತಹ ಹದಿಹರೆಯದ ಹೆಣ್ಣುಮಕ್ಕಳಿಗಾಗಿಯೇ ಸಮಗ್ರ ಶಿಕ್ಷಣ ಕರ್ನಾಟಕ ಇವರು ರೂಪಿಸಿದ “ಕಿಶೋರಿ” ಕಾರ್ಯಕ್ರಮದ ರೀತಿಯಲ್ಲಿಯೇ ಈ ಕ್ಲಬ್‌ಗಳನ್ನು ರೂಪಿಸಲಾಗಿದೆ. ಈ ಕ್ಲಬ್‌ಗಳ ಭಾಗವಾಗಿ, ಜೀವನ ಕೌಶಲ್ಯಗಳು, ವೃತ್ತಿ ಮಾರ್ಗದರ್ಶನ, ಆನ್‌ಲೈನ್ ಜಾಲತಾಣಗಳ ಜವಾಬ್ದಾರಿಯುತ ಬಳಕೆ, ಆರೋಗ್ಯ ಮತ್ತು ನೈರ್ಮಲ್ಯ, ಆಕಾಂಕ್ಷೆಗಳ ನಿರ್ಮಾಣ ಮತ್ತು ಅವರ ಲಿಂಗತ್ವದ ಗುರುತನ್ನು ಬಲಪಡಿಸುವುದು ಸೇರಿದಂತೆ ಹದಿಹರೆಯದವರಿಗೆ ಸಂಬಂಧಿಸಿದ ಹಲವು ಕಲಿಕಾ ಘಟಕಗಳನ್ನು ತರಗತಿಗಳಲ್ಲಿ ಬಳಸುವಂತೆ ಡಿಜಿಟಲ್ ತಂತ್ರಜ್ಞಾನಗಳನ್ನು ಒಳಗೊಂಡ ವೈವಿಧ್ಯಮಯವಾದ ಪಠ್ಯಕ್ರಮವನ್ನು ಸಿದ್ಧಪಡಿಸಲಾಗಿದೆ. ಇವುಗಳನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಂಡು ತಮ್ಮ ಶಾಲೆಗಳಿಗೆ ಅನುಗುಣವಾಗುವಂತೆ ಮಹಿಳಾ ಶಿಕ್ಷಕಿಯರು ಬಳಸಬಹುದಾಗಿದೆ.
ಕಿಶೋರಿ ಕ್ಲಬ್‌ಗಳ ವಿವರಗಳು ಇಂತಿವೆ,
- ರಾಜ್ಯದ ಎಲ್ಲಾ ಜಿಲ್ಲೆಗಳ ಪ್ರೌಢಶಾಲೆಗಳಲ್ಲಿ “ಕಿಶೋರಿ ಕ್ಲಬ್”ಗಳು ನಡೆಯಬಹುದು. 8ನೇ ತರಗತಿಯಿಂದ 10ನೇ ತರಗತಿಯ ಹೆಣ್ಣುಮಕ್ಕಳು ಇದರಲ್ಲಿ ಭಾಗವಹಿಸಿ ತಮ್ಮ ಸಶಕ್ತತೆಗೆ ಇಂಬು ಕೊಡುವ ವೇದಿಕೆಗಳಾಗಿ ಶಿಕ್ಷಕರ ಸಹಭಾಗಿತ್ವದಲ್ಲಿ ಭಾಗವಹಿಸುವುದು.
- ಶಾಲೆಯಲ್ಲಿ ಕಿಶೋರಿಯರಿಗೆ ಪ್ರತಿದಿನವೂ ಲಭ್ಯವಿರುವ, ಅವರಿಗೆ ಚೆನ್ನಾಗಿ ಸ್ಪಂದಿಸುವ ಮಹಿಳಾ ಶಿಕ್ಷಕಿಯರೇ ಈ ಕ್ಲಬ್‌ಗಳ ನೇತೃತ್ವ ವಹಿಸಿ ನಡೆಸುವುದು. ಈ ನಿಟ್ಟಿನಲ್ಲಿ ಕಿಶೋರಾವಸ್ಥೆಯ ಅನೇಕ ಮಜಲುಗಳು ಮತ್ತು ಅದರೊಟ್ಟಿಗೆ ಬರುವ ಅನೇಕ ಸಂಕಷ್ಟಗಳ ಬಗ್ಗೆ ತಿಳಿಸುವ ಕಾರ್ಯಾಗಾರಗಳು ಶಿಕ್ಷಕಿಯರಿಗೆ ಬೆಂಬಲ ನೀಡುತ್ತವೆ.
- ಶಾಲೆಯಲ್ಲಿ ಪ್ರತೀ 15 ದಿನಗಳಿಗೊಮ್ಮೆ ಕಿಶೋರಿ ಕ್ಲಬ್ ಸಭೆಗಳನ್ನು ನಡೆಸುವುದು. ಶಿಕ್ಷಕಿಯರೇ ಈ ಸೆಶನ್‌ಗಳನ್ನು ನಡೆಸುವುದರಿಂದ ಪ್ರತೀ ಶಾಲೆಯೂ ಶೈಕ್ಷಣಿಕ ವರ್ಷದ ಮೊದಲಿನಿಂದಲೇ ಕಿಶೋರಿ ಕ್ಲಬ್‌ಗಳಿಗೆ 40 ರಿಂದ 60 ನಿಮಿಷಗಳ ಅವಧಿಯನ್ನು ಯೋಜಿಸಬಹುದಾಗಿದೆ.
- ಈ ಸಭೆಗಳಿಗೆ ಬೇಕಿರುವ ಸಂಪನ್ಮೂಲಗಳನ್ನು ವಿವಿಧ ಜಿಲ್ಲೆಗಳ ಸ್ಥಳೀಯ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಧರ್ಭಗಳಿಗೆ ಅನುಸಾರವಾಗಿ ಹಾಗು ಅಲ್ಲಿನ ಇತರ ಅಗತ್ಯತೆಗಳಿಗೆ ಅನುಸಾರವಾಗಿ ಶಿಕ್ಷಕಿಯರೊಟ್ಟಿಗೆ ಸೇರಿ ನಿರ್ಮಿಸಲಾಗಿದೆ. ಅವರು ಇಲ್ಲಿರುವ ಆಡಿಯೋ, ವೀಡಿಯೋ ಹಾಗು ಪಠ್ಯ ಸೇರಿದಂತೆ ವಿವಿಧ ಕಲಿಕಾ ಸಂಪನ್ಮೂಲಗಳನ್ನು ಬಳಸಬಹುದು.
- ಪ್ರತೀ ಮಾಡ್ಯೂಲ್‌ಗಳಿಗೆ ನೀಡಿರುವ ಡಿಜಿಟಲ್ ಸಂಪನ್ಮೂಲಗಳು ಆಯಾ ಮಾಡ್ಯೂಲ್‌ಗಳ ವಿಷಯಗಳನ್ನು ಸಂಪೂರ್ಣವಾಗಿ ಕಲಿಯಲು ಸಹಕರಿಸುತ್ತವೆ ಹಾಗು ಆ ಕಲಿಕೆ ಹೆಚ್ಚಿನ ಕಾಲ ಉಳಿಯುವಂತೆ ಮಾಡುತ್ತವೆ. ಜೊತೆಗೆ ನೀಡಿರುವ ಸಹಾಯ ಕೈಪಿಡಿಗಳು ವಿವಿಧ ಸ್ವಾರಸ್ಯಕರವಾದ ಪರಿಣಾಮಕಾರಿ ಚಟುವಟಿಕೆಗಳನ್ನು ಹೊಂದಿವೆ.
- ಕಿಶೋರಿಯರ ಸಮಸ್ಯೆಗಳು ಹಾಗು ಸವಾಲುಗಳನ್ನು ಮುಕ್ತವಾಗಿ ಚರ್ಚಿಸಬೇಕು. ಜೊತೆಗೆ ಅವರಿಗೆ ಬೇಕಿರುವ ವಿವಿಧ ರೀತಿಯ ಮಾಹಿತಿಗಳನ್ನು ನೀಡಬೇಕು. ಕಿಶೋರಿಯರಿಗೆ ನೆರವಾಗುವಂತಹ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳುವುದು ಎನ್ನುವುದನ್ನು ಯೋಜಿಸಬೇಕು.
- ಕಿಶೋರಿ ಕ್ಲಬ್ ಚಟುವಟಿಕೆಗಳ ಭಾಗವಾಗಿ ಕಿಶೋರಿಯರಿಗಾಗಿ ಹಲವು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಇವುಗಳ ಮೂಲಕ ಹೆಣ್ಣುಮಕ್ಕಳಿಗೆ ಬೇಕಿರುವ ಹಲವು ರೀತಿಯ ಕೌಶಲಗಳನ್ನು ಕಲಿಸುವುದು ಉದಾಹರಣೆಗೆ ಕಂಪ್ಯೂಟರ್ ಕಲಿಕೆ, ಆಡಿಯೋ ವೀಡಿಯೋ ತಯಾರಿಸುವ ಕಲಿಕೆ ಮತ್ತು ಜೀವನ ಕೌಶಲಗಳ ಕಲಿಕೆ.
- ಶಾಲೆಯ ನಂತರ ಅವರಿಗಿರುವ ವಿವಿಧ ವೃತ್ತಿಗಳ ಆಯ್ಕೆಗಳಿಗೆ ಅವರನ್ನು ಪರಿಚಯಿಸುವುದು. ಬೇಕಿರುವ ಮಾರ್ಗದರ್ಶನ ನೀಡುವುದು.
ಕಿಶೋರಿ ಕ್ಲಬ್‌ನ ಪಠ್ಯಕ್ರಮ ಇಂತಿದೆ
ಕ್ರ. ಸಂ. | ಕಲಿಕಾ ಘಟಕಗಳ ವಿಷಯ ಪಟ್ಟಿಕೆ |
1 | ಕಿಶೋರಿ ಕ್ಲಬ್‌ನ ಪರಿಚಯ ಹಾಗು ಮಾನದಂಡಗಳ ರಚನೆ |
2 | ಹದಿಹರೆಯ ಅಥವ ಕಿಶೋರಾವಸ್ಥೆ ಎಂದರೇನು - ಈ ಹಂತದಲ್ಲಿ ಆಗುವ ದೈಹಿಕ, ಮಾನಸಿಕ ಮತ್ತು ಬೌದ್ಧಿಕ ಬದಲಾವಣೆಗಳ ಸ್ವರೂಪವೇನು ಎನ್ನುವುದರ ಬಗ್ಗೆ ಅರಿವು ಮೂಡಿಸುವುದು |
3 | ಪುರುಷ ಪ್ರಧಾನತೆ ಮತ್ತು ಸಮಾಜದಲ್ಲಿರುವ ಅಸಮಾನತೆಯ ಹಿಂದೆ ಇದರ ಪಾತ್ರ |
4 | ಮಾಧ್ಯಮ ಮತ್ತು ಮಾರುಕಟ್ಟೆ - ಪುರುಷ ಪ್ರಧಾನತೆಯನ್ನು ಎತ್ತಿಹಿಡಿಯುವಲ್ಲಿ ಇದರ ಕೀಲಕ ಪಾತ್ರ |
5 | ಗುರುತು ಮತ್ತು ಅಸ್ಮಿತೆ ಹಾಗು ಹದಿಹರೆಯ |
6 | ಬಾಡಿ ಇಮೇಜ್ - ದೇಹದ ಚಿತ್ರಣ ಮತ್ತು ಹದಿಹರೆಯ |
7 | ಸಮತೋಲನ ಆಹಾರ ಮತ್ತು ಪೌಷ್ಟಿಕತೆ |
8 | ಅನೀಮಿಯ/ರಕ್ತ ಹೀನತೆ |
9 | ಜೀವನ ಕೌಶಲ್ಯಗಳ ಪರಿಚಯ ಹಾಗೂ ಕಿಶೋರಿ ಸಬಲೀಕರಣದಲ್ಲಿ ಅವುಗಳ ಪಾತ್ರ |
10 | ಋತುಚಕ್ರ - ಏಕೆ, ಹೇಗೆ ಮತ್ತು ಇದರ ಸವಾಲುಗಳನ್ನು ನಿಭಾಯಿಸುವ ಬಗೆ ಏನು |
11 | ಸಂತಾನೋತ್ಪತ್ತಿ ಪ್ರಕ್ರಿಯೆ - ಹೇಗಾಗುತ್ತದೆ |
12 | POCSO - ಲೈಂಗಿಕ ಹಿಂಸೆ ಮತ್ತು ಕಿರುಕುಳದ ಸ್ವರೂಪ ಹಾಗು ಅದನ್ನು ಮೀರುವುದಕ್ಕಾಗಿ ಕಿಶೋರಿಯರಿಗಿರುವ ಬೆಂಬಲಗಳೇನು |
ಬೇಸ್‌ಲೈನ್ ಸಮೀಕ್ಷೆ
ಕಿಶೋರಿ ಕ್ಲಬ್‌ನಲ್ಲಿ ಪಾಲ್ಗೊಳ್ಳುವ ಹದಿಹರೆಯದ ಹೆಣ್ಣುಮಕ್ಕಳ ಬಗ್ಗೆ ತಿಳಿದುಕೊಳ್ಳಲು ಹಾಗು ಅದರಿಂದ ಅವರಿಗೆ ಬೇಕಿರುವ ಹಾಗೆ ವಿಷಯಗಳ ಹಂಚಿಕೆಯ ಬಗ್ಗೆ ಯೋಜನೆಗಳನ್ನು ಮಾಡಿಕೊಳ್ಳಲು ಶೈಕ್ಷಣಿಕ ವರ್ಷದ ಆರಂಭದಲ್ಲಿ ಬೇಸ್‌ಲೈನ್ ಸಮೀಕ್ಷೆ ನಡೆಸುವುದು ಬಹುಮುಖ್ಯ ಚಟುವಟಿಕೆಯಾಗಿರುತ್ತದೆ. ಇದರಿಂದ ಒಂದು ವರ್ಷದಲ್ಲಿ ಕಿಶೋರಿಯರಲ್ಲಾಗುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಕೂಲಂಕುಶವಾಗಿ ನೋಡಬಹುದಾಗಿದೆ.
ಕಿಶೋರಿ ಕ್ಲಬ್ ಫೆಸಿಲಿಟೇಟರ್ ರಿಪೋರ್ಟ್ ಟೆಂಪ್ಲೇಟ್ (KCF template)
ಪ್ರತೀ ಸೆಶನ್ ಮುಗಿದ ಮೇಲೆ ತುಂಬಬೇಕಿರುವ ಕಿಶೋರಿ ಕ್ಲಬ್ ಫೆಸಿಲಿಟೇಟರ್ ಗೂಗಲ್ ಫಾರ್ಮನ್ನು ಇಲ್ಲಿ ನೋಡಬಹುದಾಗಿದೆ.
ಶಿಕ್ಷಕಿಯರಿಗಾಗಿ ಸಂಪನ್ಮೂಲಗಳು :
ಕಿಶೋರಿ ಕ್ಲಬ್ ನಡೆಸಲು ಬೇಕಿರುವ ಸಂಪನ್ಮೂಲಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ. ಪ್ರತೀ ಎರೆಡು ವಾರಗಳಿಗೊಮ್ಮೆ ಇಲ್ಲಿ ಸಂಪನ್ಮೂಲಗಳನ್ನು ಹಂಚಿಕೊಳ್ಳಲಾಗುವುದು.
ಗರ್ಲ್ಸ್ ಅಡ್ಡ
ಕಿಶೋರಿಯರು ಹೆಚ್ಚೆಚ್ಚು ಅಂತರ್ಜಾಲವನ್ನು ಬಳಸುತ್ತಿರುವುದರಿಂದ ಅವರು ಅದರ ಬಗ್ಗೆ ಸವಿಸ್ತಾರವಾಗಿ ತಿಳಿದುಕೊಳ್ಳುವ ಅಗತ್ಯವಿದೆ. ಅಂತರ್ಜಾಲದಿಂದ ಬರುವ ಅಪಾಯಗಳ ಅರಿವು, ಅವುಗಳನ್ನು ಬಳಸಿಕೊಂಡು ಭವಿಷ್ಯದ ಬಗ್ಗೆ ಮಾಹಿತಿ ಕಲೆಹಾಕುವುದು, ಒಟ್ಟಾರೆಯಾಗಿ ಅವರ ಸಬಲೀಕರಣದ ಚುಕ್ಕಾಣಿ ಅವರ ಕೈಗೆ ಸಿಗುವುದು ಬಹುಮುಖ್ಯವಾದ ಅಂಶವಾಗಿದೆ. ಆದ್ದರಿಂದ ಈ ಗರ್ಲ್ಸ್ ಅಡ್ಡ ಸರಣಿಯಲ್ಲಿ ಅವರಿಗೆ ಉಪಯುಕ್ತವಾಗುವ ಅಂತರ್ಜಾಲ, ಸೈಬರ್ ಸುರಕ್ಷತೆ ಹೀಗೆ ಹಲವು ವಿಷಯಗಳು ಚರ್ಚೆಯಾಗಲಿವೆ. ಅವೆಲ್ಲವನ್ನು ಈ ಲಿಂಕಿನಲ್ಲಿ ನೋಡಬಹುದಾಗಿದೆ.
ಗರ್ಲ್ಸ್ ಅಡ್ಡ
ವೃತ್ತಿ ಮಾರ್ಗದರ್ಶನ ಕೋರ್ಸ್ :
ಕಿಶೋರಿ ಕ್ಲಬ್ ವತಿಯಿಂದ ಹತ್ತನೇ ತರಗತಿಯ ಹೆಣ್ಣುಮಕ್ಕಳಿಗಾಗಿ ಅವರ ಭವಿಷ್ಯಕ್ಕೆ ನೆರವಾಗುವ ವಿವಿಧ ಜೀವನ ಕೌಶಲ್ಯಗಳು ಹಾಗು ವೃತ್ತಿಗಳ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಈ ಕೋರ್ಸನ್ನು ಆರಂಭಿಸಲಾಗಿದೆ.
ಪೂರ್ತಿ ಕೋರ್ಸ್ ಮುಗಿಸಿದ ಮೇಲೆ ಅಲ್ಲೇ ನೀಡಿರುವ ಹಿಮ್ಮಾಹಿತಿ ಫಾರ್ಮನ್ನು ತುಂಬುವುದರ ಮೂಲಕ ಪ್ರಮಾಣ ಪತ್ರವನ್ನು ಪಡೆಯಬಹುದಾಗಿದೆ.
ಕೋರ್ಸನ್ನು ಈ ಲಿಂಕಿನಲ್ಲಿ ನೋಡಬಹುದು.
ಜೀವನ ಕೌಶಲ್ಯಗಳು ಹಾಗು ವೃತ್ತಿ ಮಾರ್ಗದರ್ಶನ
ಕಿಶೋರಿ ಅಡ್ಡ :
ಕಿಶೋರಿ ಕ್ಲಬ್‌ನಲ್ಲಿ ಭಾಗವಹಿಸುವ ಕಿಶೋರಿಯರು ಹೆಚ್ಚಾಗಿ ಬಳಸುವ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡೇ ಅವರ ಜೊತೆಗೆ ನಾವು ಮಾತನಾಡಬೇಕಿದೆ. ಈ ಅಗತ್ಯತೆಯ ರೂಪಕವೇ ಈ ಕಿಶೋರಿ ಅಡ್ಡ ಇನ್‌ಸ್ಟಾಗ್ರಾಮ್ ಪುಟ.
ಕಿಶೋರಿಯರಿಗೆ ಉಪಯುಕ್ತವೆನಿಸುವ ವಿವಿಧ ವಿಷಯಗಳನ್ನು ಅವರಿಗೆ ಇಷ್ಟವಾಗುವ ರೀತಿಯಲ್ಲಿ, ಭಾಷೆಯಲ್ಲಿ ಹಾಗು ರೂಪದಲ್ಲಿ ಪ್ರಸ್ತುತಪಡಿಸಲಾಗಿದೆ.
ನಿಮ್ಮ ಶಾಲೆಯ ಕಿಶೋರಿಯರಿಗೂ ಈ ಲಿಂಕನ್ನು ನೀಡುವ ಮೂಲಕ ಅವರು ಕಿಶೋರಿ ಅಡ್ಡವನ್ನು ಫಾಲೋ ಮಾಡುವಂತೆ ಮಾಡಿ ಜೊತೆಗೆ ನೀವೂ ನೋಡಿ.
ಅದರ ಲಿಂಕನ್ನು ಇಲ್ಲಿ ನೋಡಬಹುದಾಗಿದೆ.