ಚಿಗುರು ೫ - ಆಡಿಯೊ ರೆಕಾರ್ಡಿಂಗ್‌ ಬೇಸಿಕ್ಸ್ - ಭಾಗ ೨

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಸಾರಾಂಶ

ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳುವುದರಿಂದ ಕಿಶೋರಿಯರಿಗೆ ಬೇರೆ ಬೇರೆ ಸಾಧ್ಯತೆಗಳ ಬಗ್ಗೆ ತಿಳಿದುಕೊಳ್ಳಲು ಅವಕಾಶ ನೀಡುತ್ತದೆ. ಆಡಿಯೋ ರೆಕಾರ್ಡಿಂಗ್‌ ಬಳಕೆ ಮಾಡುವುದರಿಂದ ಕಿಶೋರಿಯರಿಗೆ ನಾವೂ ತಂತ್ರಜ್ಞಾನಗಳನ್ನು ಬಳಕೆ ಮಾಡಬಹುದು ಎನ್ನುವ ಆತ್ಮವಿಶ್ವಾಸ ಮೂಡುತ್ತದೆ. ಆಡಿಯೋ ರೆಕಾರ್ಡಿಂಗ್‌ ಜೊತೆಗೆ, ಬೇರೆ ಬೇರೆ ವಿಷಯಗಳ ಬಗ್ಗೆ ಮಾತನಾಡಲು ಉತ್ತೇಜಿಸುವುದರಿಂದ ಕಿಶೋರಿಯರ ಅಭಿವ್ಯಕ್ತಿ ಕೌಶಲ್ಯವನ್ನು ಕೂಡ ಹೆಚ್ಚಿಸಬಹುದು.

ಊಹೆಗಳು

1. ಹಿಂದಿನ ವಾರ ತಂತ್ರಜ್ಞಾನದ ಬಗ್ಗೆ ಹೇಳಿರುವುದರಿಂದ ನಾವೂ ತಂತ್ರಜ್ಞಾನ ಉಪಯೋಗಿಸಬಹುದು ಎಂದು ಅನಿಸಿರಬಹುದು.

2. ಹಿಂದಿನ ಮಾತುಕತೆಯ ಸಮಯದಲ್ಲಿ, ರೆಕಾರ್ಡಿಂಗ್‌ ಮಾಡುವಾಗ ಗಮನದಲ್ಲಿಟ್ಟುಕೊಳ್ಳುವ ಅಂಶಗಳನ್ನು ಕಿಶೋರಿಯರು ಪಾಲಿಸಿದ್ದಾರೆ.

3. ಕೆಲವು ಕಿಶೋರಿಯರು ಗುಂಪಿನಲ್ಲಿ ಗಲಾಟೆ ಮಾಡಿದರೂ, ವೈಯಕ್ತಿಕವಾಗಿ ಆತ್ಮವಿಶ್ವಾಸದ ಕೊರತೆ ಇದೆ.

4. ಚಟುವಟಿಕೆಯ ಸಮಯದಲ್ಲಿ ಉಪಯೋಗಿಸುವ ಸಂಪನ್ಮೂಲಗಳು ಕನ್ನಡದಲ್ಲಿ ಇವೆ ಹಾಗೂ ಎಲ್ಲ ಕಿಶೋರಿಯರಿಗೂ ಕನ್ನಡ ಸರಾಗವಾಗಿ ಓದಲು ಬರದಿರಬಹುದು.

5. ಹಿಂದಿನ ವಾರ ನಾವೇ ಕಿಶೋರಿಯರನ್ನು ಕರೆದಿರುವುದರಿಂದ ಉಳಿದವರು ಈ ಕಿಶೋರಿಯರನ್ನು ನಮ್ಮ ಅಚ್ಚುಮೆಚ್ಚಿನವರು ಎಂದು ಅಂದುಕೊಂಡಿರಬಹುದು.

6. ನಮ್ಮ ಹತ್ತಿರ ಇದ್ದ ಧ್ವನಿ ಮುದ್ರಣ (ರೆಕಾರ್ಡರ್‌) ಗಳ ಸಂಖ್ಯೆ ೨. ಆದ್ದರಿಂದ ಸರಳವಾಗಿ ಇರುವ ಚಟುವಟಿಕೆ ಮಾಡಿಸಿದರೂ, ಎಲ್ಲರಿಗೂ ಅವಕಾಶ ಸಿಗದಿರಬಹುದು.

ಉದ್ದೇಶ

ಆಡಿಯೋ ಬೇಸಿಕ್ಸ್‌ ಅಭ್ಯಾಸ ಮಾಡುವುದು.

ಕಿಶೋರಿಯರ ಅಭಿವ್ಯಕ್ತಿ ಕೌಶಲ್ಯವನ್ನು ಹೆಚ್ಚಿಸುವತ್ತ ಹೊಸ ಹೆಜ್ಜೆ.

ಪ್ರಕ್ರಿಯೆ

ಹಿಂದಿನ ವಾರ ರೆಕಾರ್ಡಿಂಗ್‌ ಮಾಡುವಾಗ ನೆನಪಿಟ್ಟುಕೊಳ್ಳಬೇಕಾದ ಅಂಶಗಳನ್ನು ಪುನಃ ನೆನಪಿಸಬೇಕು. ಇದನ್ನು ಈ ಕೆಳಗಿನ ಚಾರ್ಟ್‌ ಅನ್ನು ಉಪಯೋಗಿಸಿ ಮಾಡಬಹುದು. ಚಾರ್ಟ್‌ನಲ್ಲಿ  ಚಿತ್ರಗಳನ್ನು ಬರೆದಿರುತ್ತೇವೆ.   ೫ ನಿಮಿಷ

೨ ಜನರ ಗುಂಪುಗಳನ್ನು ಮಾಡಿಕೊಳ್ಳಲು ಹೇಳುವುದು.

ರೆಕಾರ್ಡಿಂಗ್‌ ಮಾಡುವುದನ್ನು ಫೆಸಿಲಿಟೇಟರ್‌ಗಳು ಕಿಶೋರಿಯರ ಎದುರಲ್ಲಿ ಮಾಡಿ ತೋರಿಸುತ್ತೇವೆ.

ಇದಾದ ನಂತರ ಜೋಡಿಗಳ ಗುಂಪುಗಳನ್ನು ಮಾಡಿಕೊಳ್ಳವುದು.

ಗುಂಪುಗಳನ್ನು ಮಾಡಲು ಪ್ರತಿ ಜೋಡಿಗೂ ಒಂದರಿಂದ ನಾಲ್ಕರವೆರೆಗೆ ಎಣಿಸಲು ಹೇಳುವುದು.  ೫ ನಿಮಿಷ

ಪ್ರತಿ ಗುಂಪಿನ ಜೊತೆ ಒಬ್ಬ ಫಸಿಲಿಟೇಟರ್‌ ಇರುತ್ತಾರೆ.

ಗುಂಪುಗಳನ್ನು ಮೈದಾನಕ್ಕೆ ಕರೆದುಕೊಂಡು ಹೋಗಿ ರೆಕಾರ್ಡಿಂಗ್‌ ಅಭ್ಯಾಸ ಮಾಡಲು ಹೇಳುವುದು.  ೨೦ ನಿಮಿಷ

ಧ್ವನಿ ಮುದ್ರಣದ ಅಭ್ಯಾಸದ ನಂತರ ಎಲ್ಲರೂ ತರಗತಿಗೆ ಬರುತ್ತಾರೆ. ಮುಂದಿನ ಚಟುವಟಿಕೆಗೆ ೫ ಜೋಡಿಗಳನ್ನು ಸ್ವಯಂಪ್ರೇರಿತರಾಗಿ ಬರಲು ಹೇಳವುದು.

ಅವರಿಗೆ ಈ ಕೆಳಗಿನ ಗಾದೆಗಳನ್ನು ಕೊಟ್ಟು, ಆ ಗಾದೆಗಳ ಬಗ್ಗೆ ಪರಸ್ಪರ ರೆಕಾರ್ಡಿಂಗ್‌ ಮಾಡಲು ಹೇಳುತ್ತೇವೆ. ಈ ರೆಕಾರ್ಡಿಂಗ್‌ ಅನ್ನು ಸಮಯಾವಕಾಶ ಹಾಗು ಸ್ಥಳಾವಕಾಶ ನೋಡಿಕೊಂಡು ಬೇರೆ ಬೇರೆ ಜಾಗಗಳಲ್ಲಿ ಕೂಡ ಮಾಡಬಹುದು.                                            ೨೦ ನಿಮಿಷ

1. ಕೊಟ್ಟ ಹೆಣ್ಣು ಕುಲಕ್ಕೆ ಹೊರಗು.

2. ಗಂಡು ಕೂತು ಕೆಟ್ಟ, ಹೆಣ್ಣು ತಿರುಗಿ ಕೆಟ್ಟಳು.

3. ಅಳೋ ಗಂಡಸನ್ನ, ನಗೋ ಹೆಂಗಸನ್ನ ನಂಬಬಾರದು.

4. ಹೆಣ್ಣಿಗೆ ಹಟ ಇರಬಾರದು, ಗಂಡಿಗೆ ಚಟ ಇರಬಾರದು.

5. ಹಿರೇ ಅಕ್ಕನ ಚಾಳಿ ಮನೆ ಮಂದಿಗೆಲ್ಲಾ.

6. ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡಿಸು.

7. ಸೊಸೆ ಸತ್ತರೆ ಸೋಬಾನ, ಮಗ ಸತ್ತರೆ ಮನೆಹಾಳು.

8. ಹೆಣ್ಣು ಹುಟ್ಟಿದರೊಂದು ಹುಣ್ಣು ಹುಟ್ಟಿದಹಾಗೆ.

9. ಹೆಣ್ಣು ಹುಟ್ಟಿದ ಮನೆ ನುಣ್ಣಗೆ, ಗಂಡು ಹಡೆದವರ ಮನೆ ತಣ್ಣಗೆ.

10. ತಾಯಿ ನೋಡಿ ಮಗಳನ್ನು ತಕ್ಕೊ, ಹಾಲನ್ನು ನೋಡಿ ಎಮ್ಮೆ ತಕ್ಕೊ.

11. ಹೆರಿಗೆ ಬೇನೆ ಗಂಟೆ ತನಕ, ಬಂಜೆ ಬೇನೆ ಬದುಕಿನ ತನಕ.

12. ಹೆಣ್ಣಿನ ಬುದ್ಧಿ  ಮೊಣಕಾಲ್ ಕೆಳಗೆ.

13. ಹೆಣ್ಣಿಗೆ ಹೆಣ್ಣೇ ಶತ್ರು.

ರೆಕಾರ್ಡ್‌ ಮಾಡಿದ ನಂತರ, ತರಗತಿಯಲ್ಲಿ ರೆಕಾರ್ಡ್‌ ಮಾಡಿದ ಆಡಿಯೋವನ್ನು ಉಳಿದ ಕಿಶೋರಿಯರಿಗೆ ಕೇಳಿಸಿ ಅವರ ಅಭಿಪ್ರಾಯಗಳನ್ನು ಕೇಳುವುದು. ರೆಕಾರ್ಡ್‌ ಮಾಡಿದ ಕಿಶೋರಿಯರಿಗೆ ಅವರ ಅನುಭವಗಳನ್ನು ಕೂಡ ಹಂಚಿಕೊಳ್ಳಲು ಹೇಳುವುದು.                        ೧೦ ನಿಮಿಷ

ಅಭಿಪ್ರಾಯಗಳು ಹಾಗು ಅನುಭವಗಳ ಹಂಚಿಕೆಯಾದ ನಂತರ ರೆಕಾರ್ಡಿಂಗ್‌ ಅನ್ನುವುದು ಬಹಳ ಸರಳವಾದ ವಿಚಾರ. ಹಲವಾರು ಸನ್ನಿವೇಶಗಳನ್ನು ಕೇವಲ ರೆಕಾರ್ಡಿಂಗ್‌ ಉಪಯೋಗಿಸಿ ಅಭಿವ್ಯಕ್ತಪಡಿಸಬಹುದು ಎಂದು ಹೇಳಿ ಮಾತುಕತೆಯನ್ನು ಮುಗಿಸುತ್ತೇವೆ.                                ೧೦ ನಿಮಿಷ

ಬೇಕಾದ ಸಂಪನ್ಮೂಲಗಳು

• ಆಡಿಯೋ ಸಂಕಲನ (ಎಡಿಟಿಂಗ್‌) ಸಾಫ್ಟ್‌ವೇರ್‌ (ಅಡಾಸಿಟಿ) ಇರುವ ಕಂಪ್ಯೂಟರ್‌/ಲ್ಯಾಪ್‌ಟಾಪ್‌ - ೧

• ಪ್ರೊಜೆಕ್ಟರ್‌- ೧

• ಸ್ಪೀಕರ್‌ - ೧

• ರೆಕಾರ್ಡರ್‌ - ೨

ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು

- ಒಬ್ಬ ಮುಖ್ಯ ಫೆಸಿಲಿಟೇಟರ್‌, ೩ ಫೆಸಿಲಿಟೇಟರ್‌ಗಳು ಗುಂಪುಗಳ ಜೊತೆ ಅಭ್ಯಾಸಕ್ಕಾಗಿ

ಒಟ್ಟು ಸಮಯ

೮೦ ನಿಮಿಷ

ಇನ್‌ಪುಟ್‌ಗಳು

ಪ್ರಸ್ತುತಿ

ಆಡಿಯೋ ಬೇಸಿಕ್ಸ್‌ ಅಂಶಗಳಿರುವ ಚಾರ್ಟ್‌

ಔಟ್‌ಪುಟ್‌ಗಳು

ಕಿಶೋರಿಯರು ಮಾಡಿರುವ ಆಡಿಯೋ ಕಡತಗಳು.