ಲಿಬ್ರೆ ಆಫೀಸ್ ರೈಟರ್ ಕಲಿಯಿರಿ

From ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು
Revision as of 12:17, 6 October 2017 by Anand (talk | contribs)

(diff) ← Older revision | Latest revision (diff) | Newer revision → (diff)
Jump to: navigation, search

See in English

ಪರಿಚಯ

ಲಿಬ್ರೆ ಆಫೀಸ್ ರೈಟರ್ ಎಂಬುದು ಲಿಬ್ರೆ ಆಫೀಸ್ ತಂತ್ರಾಂಶವಾಗಿದ್ದು ಪೊಟ್ಟಣಿತದ ಸ್ವತಂತ್ರ ಮತ್ತು ಮುಕ್ತ 'ವರ್ಡ್‌ ಪ್ರೊಸೆಸರ್' ಆಗಿದೆ ಹಾಗು ಇದು OpenOffice.org ನ ಭಾಗವಾಗಿದೆ. ಮೈಕ್ರೋಸಾಪ್ಟ್‌ ವರ್ಡ್‌ನ ರೀತಿಯ ಕೆಲವು ವೈಶಿಷ್ಟ್ಯಗಳನ್ನು ಹೊಂದಿರುವ 'ವರ್ಡ್‌ಪ್ರೊಸೆಸರ್' ಇದು.

ಮೂಲ ಮಾಹಿತಿ

ಐ.ಸಿ.ಟಿ ಸಾಮರ್ಥ್ಯ ಲಿಬ್ರೆ ಆಫೀಸ್ ರೈಟರ್ ಸ್ವತಂತ್ರ ಮತ್ತು ಮುಕ್ತ ಶೈಕ್ಷಣಿಕ ಪರಿಕರವಾಗಿದ್ದು, ಸಾರ್ವತ್ರಿಕ ಸಂಪನ್ಮೂಲ ರಚನೆಗಾಗಿ ಬಳಸಲಾಗುತ್ತದೆ.
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ ಲಿಬ್ರೆ ಆಫೀಸ್ ರೈಟರ್ ಎಂಬುದು ದಾಖಲೆಗಳನ್ನು ಸೃಷ್ಟಿಸಲು, ತಿದ್ದಲು ಮತ್ತು ಮುದ್ರಿಸಲು ಉಪಯೋಗಿಸುವ ಒಂದು ವಿಧವಾದ ಆಪ್ಲಿಕೇಶನ್ ಸಾಫ್ಟ್‌ವೇರ್. ಇದನ್ನು ಉಪಯೋಗಿಸಿ ಸೃಷ್ಟಿಸಬಹುದಾದ ಹಲವು ರೀತಿಯ ದಾಖಲೆಗಳೆಂದರೆ - ಪತ್ರಗಳು,ವರದಿಗಳು, ಮೆಮೋಗಳು ಮತ್ತು ಇತರೆ ವೈಯಕ್ತಿಕ, ವ್ಯಾವಹಾರಿಕ ಮತ್ತು ವೃತ್ತಿಗತ ದಾಖಲೆಗಳು. ಇದನ್ನು ಪಠ್ಯವನ್ನು ಫಾರ್ಮೆಟ್ ಮಾಡಲು, ಕಾಗುಣಿತವನ್ನು ಪರೀಕ್ಷಿಸಲು, ಟೇಬಲ್‌ಗಳನ್ನು ಸೇರಿಸಲು ಮತ್ತು ಸೂಕ್ತವಾದ ಚಿತ್ರಗಳನ್ನು ಸೇರಿಸಲು ಸಹ ಉಪಯೋಗಿಸಬಹುದು.
ಆವೃತ್ತಿ 5.1
ಸಂರಚನೆ ಇದು ಉಬುಂಟು ತಂತ್ರಾಂಶದ ಭಾಗವಾಗಿದ್ದು, ಪ್ರತ್ಯೇಕವಾದ ಯಾವುದೇ ಸಂರಚನೆಯ ಅವಶ್ಯಕತೆ ಇರುವುದಿಲ್ಲ. ಇದಲ್ಲದೇ ಹಲವು ಹೆಚ್ಚುವರಿ ಲಕ್ಷಣಗಳನ್ನು ಅನುಸ್ಥಾಪಿಸಿಕೊಂಡು ಬಳಸಬಹುದಾಗಿದೆ
ಇತರೇ ಸಮಾನ ಅನ್ವಯಕಗಳು
ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ ಅಂಡ್ರಾಯಿಡ್‌ ಮೊಬೈಲ್‌ ನಲ್ಲಿ ಆಂಡ್ರಾಯಿಡ್ ವ್ಯೂವರ್ ನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಹಾಗೆಯೇ ಈ ಅನ್ವಯಕವನ್ನು "ಓಪನ್ ಡಾಕ್ಯುಮೆಂಟ್ ವ್ಯೂವರ್" ಮತ್ತು WPS ಆಫೀಸ್ ಅನ್ವಯಕಗಳ ಮೂಲಕ ಬಳಸಬಹುದು.
ಅಭಿವೃದ್ದಿ ಮತ್ತು ಸಮುದಾಯ ಸಹಾಯ Developer(s) -The Document Foundation

ಸಮುದಾಯ ಸಹಾಯ

ಲಕ್ಷಣಗಳ ಮೇಲ್ನೋಟ

ಲಿಬ್ರೆ ಆಫೀಸ್ ರೈಟರ್‌ನಲ್ಲಿ ಗ್ರಾಫಿಕ್, ಕೋಷ್ಟಕ, ಚಾರ್ಟ್‌ ಮುಂತಾದವುಗಳನ್ನೊಳಗೊಂಡ ಪಠ್ಯ ದಾಖಲೆಗಳನ್ನು ರಚಿಸಲು ಹಾಗು ವಿನ್ಯಾಸಗೊಳಿಸಲು ಸಾಧ್ಯವಾಗುತ್ತದೆ. ಅದೇ ರೀತಿ ದಾಖಲೆಗಳನ್ನು ಓಪನ್ ಡಾಕ್ಯುಮೆಂಟ್‌ ಫಾರ್ಮಾಟ್ (.odf), ಮೈಕ್ರೋಸಾಫ್ಟ್ ವರ್ಡ್ (.doc), HTML ನಂತಹ ವಿವಿಧ ನಮೂನೆಗಳಲ್ಲಿ ಉಳಿಸಿಕೊಳ್ಳಬಹುದು. ಹಾಗು ಸುಲಭವಾಗಿ ನಿಮ್ಮ ದಾಖಲೆಯನ್ನು ಪಿಡಿಎಫ್‌ಗೆ ವರ್ಗಾಯಿಸಬಹುದು.

ಅನುಸ್ಥಾಪನೆ

  1. ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.
  2. ಒಂದು ವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “LibreOffice” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.
  3. ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.
    1. Application > System Tools > ಮೂಲಕ ಟರ್ಮಿನಲ್ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
    2. ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ($) ನಂತರ ಈ ಕೆಳಗಿನ ಕಮಾಂಡ್ ನಮೂದಿಸಿ
    3. sudo apt-get install LibreOffice

ಅನ್ವಯಕ ಬಳಕೆ

ಪಠ್ಯ ಕಡತವನ್ನು ರಚಿಸುವುದು ಮತ್ತು ಉಳಿಸಿಕೊಳ್ಳುವುದು

  1. ಲಿಬ್ರೆ ಆಫೀಸ್ ರೈಟರ್ ತೆರೆಯುವುದು - ನೀವು Application - Office - LibreOffice Writer ಮೇಲೆ ಒತ್ತಿದಾಗ (ಪ್ರವೇಶಿಸಿದಾಗ), ಮುಖ್ಯಪುಟವು ಈ ಮೇಲಿನ ಮೊದಲನೇ ಚಿತ್ರದಲ್ಲಿರುವಂತೆ ಕಾಣುತ್ತದೆ. ಇಲ್ಲಿ ನೀವು ಪಠ್ಯದಾಖಲೆಗೆ ಚಿತ್ರ, ಕೋಷ್ಟಕ ಮತ್ತು ಗ್ರಾಫ್‌ಗಳನ್ನು ಸೇರಿಸಬಹುದು. ಇದರ ಜೊತೆಗೆ ಇಲ್ಲಿ ಬಹುಭಾಷೆಯಲ್ಲಿಯೂ ಈ ಪಠ್ಯವನ್ನು ನಮೂದಿಸಬಹುದು. ಇಲ್ಲಿ ಭಾಷೆ ಬದಲಾಯಿಸಿಕೊಳ್ಳಲು ನಿಮ್ಮ ಡೆಸ್ಕ್‌ಟಾಪ್‌ನ ಮೇಲ್ಭಾಗದ ಪ್ಯಾನಲ್‌ ನಲ್ಲಿರುವ "En" ಮೇಲೆ ಒತ್ತಿ ನಿಮಗೆ ಅಗತ್ಯವಾದ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದು.
  2. ಕಡತ ಉಳಿಸುವುದು - ಇದರಲ್ಲಿ ಪಠ್ಯ ಸಂಪಾದನೆ ಪ್ರಾರಂಭಿಸಿದ ನಂತರ ಮೊದಲಿಗೆ ಈ ಕಡತವನ್ನು ಉಳಿಸಿಕೊಳ್ಳಬೇಕು. File-Save ಅಥವಾ Ctrl+S ಆಯ್ಕೆ ಮಾಡಿ. ಪಠ್ಯ ಸಂಪಾದನೆಗೆ ಸೂಕ್ತವಾಗುವ ಹೆಸರನ್ನು ಸೂಚಿಸಿ ಸೂಕ್ತ ಕಡತಕೋಶದಲ್ಲಿ ಉಳಿಸಿ. ಇದೇ ಕಡತವನ್ನು ಮತ್ತೆ ಬೇರೊಂದು ಹೆಸರಿನಲ್ಲಿ ಅಥವಾ ಬೇರೊಂದು ಸ್ಥಳದಲ್ಲಿ ಉಳಿಸಲು 'SAVE AS' ಆಯ್ಕೆಯನ್ನು ಬಳಸಬಹುದು.
  3. ಕಡತ ಉಳಿಸುವುದು - ಇಲ್ಲಿ ನೀವು ಉಳಿಸಬೇಕಿರುವ ಕಡತಕೋಶವನ್ನು ಆಯ್ಕೆ ಮಾಡಿಕೊಂಡು ಕಡತಕ್ಕೆ ಸೂಕ್ತ ಹೆಸರನ್ನು ನಮೂದಿಸಿ ನಂತರ 'SAVE' ಬಟನ್ ಮೇಲೆ ಕ್ಲಿಕ್ ಮಾಡಿ.
  4. ಇದು '.odt' ನಮೂನೆಯಲ್ಲಿ ಉಳಿಯುತ್ತದೆ. '.odt' ಅಂದರೆ ಓಪನ್ ಡಾಕ್ಯುಮೆಂಟ್ ಟೆಕ್ಸ್ಟ್ ಎಂದು ಅರ್ಥ.

ಕಡತಗಳಲ್ಲಿ ಪಠ್ಯ ಸಂಪಾದನೆಗೆ ಅನುಕೂಲವಾಗುವಂತೆ ಲಿಬ್ರೆ ಆಫೀಸ್ ರೈಟರ್‌ನ ಮೆನುಬಾರ್ ಹಲವು ಆಯ್ಕೆಗಳನ್ನು ಹೊಂದಿದೆ. ಕಡತ ಉಳಿಸುವುದು, ಸಂಕಲನ ಮಾಡುವುದು, ದಾಖಲೆ ನೋಡುವುದು ಮತ್ತು ಮಾಡುವುದು, ಚಿತ್ರ/ಕೊಂಡಿ/ಕೋಷ್ಟಕ ಸೇರಿಸುವುದು ಮುಂತಾದ ಆಯ್ಕೆಗಳನ್ನು ಹೊಂದಿರುತ್ತದೆ. ಇದರ ಜೊತೆಗೆ ವ್ಯಾಕರಣ ಸರಿಪಡಿಸಲು ಸಹ ಆಯ್ಕೆಗಳಿವೆ. ಇಲ್ಲಿನ ಆಯ್ಕೆಗಳನ್ನು ಬಳಸಲು ಮೆನುಬಾರ್‌ಗೆ ಹೋಗಿ ಆಯಾ ಅಂಶಗಳನ್ನು ತೆರೆಯಬಹುದು ಅಥವಾ ಪರದೆಯಲ್ಲಿನ 'ಟೂಲ್‌' ಸೂಚಕಗಳ ಮೇಲೆ ಒತ್ತುವ ಮೂಲಕವು ಬಳಸಬಹುದಾಗಿದೆ. ಪಠ್ಯ ಸಂಪಾದನೆಯಲ್ಲಿ ಸಾಮಾನ್ಯವಾಗಿ ಬಳಕೆಯಾಗುವ ಕೆಲವು ಆಯ್ಕೆಗಳನ್ನು ಇಲ್ಲಿ ಚರ್ಚಿಸಲಾಗಿದೆ.

ಪಠ್ಯ ಸಂಪಾದನೆ ಮತ್ತು ನಮೂನೀಕರಿಸುವುದು (ಫಾರ್ಮಾಟಿಂಗ್)

ದಾಖಲೆ ನಮೂನೀಕರಿಸುವುದು
  1. ಒಂದು ದಾಖಲೆಯಿಂದ ಮತ್ತೊಂದು ದಾಖಲೆಗೆ ಕಾಪಿ ಮಾಡಲು, ಮೊದಲು ಪಠ್ಯವನ್ನು ಆಯ್ಕೆ ಮಾಡಿಕೊಂಡು Edit-Copy ಅಥವಾ Ctrl+C ಆಯ್ಕೆ ಮಾಡಿಕೊಳ್ಳಬೇಕು. ನಂತರ ಅದನ್ನು ಅಂಟಿಸಲು Edit-Paste ಅಥವಾ Ctrl+V ಆಯ್ಕೆ ಮಾಡಿಕೊಳ್ಳಬೇಕು Edit → Paste. ಮೆನುಬಾರ್ ನ Edit ಆಯ್ಕೆಯಲ್ಲಿ ಇಡೀ ಪಠ್ಯದಾಖಲೆಯಲ್ಲಿ ಕೆಲವು ಪದಗಳನ್ನು ಸುಲಭವಾಗಿ ಹುಡುಕಬಹುದಾಗಿದೆ. ಇದಕ್ಕಾಗಿ Edit ನಲ್ಲಿ --> Find ನ್ನು ಆಯ್ಕೆ ಮಾಡಿಕೊಳ್ಳಬೇಕು.
  2. Format ಮೆನುವು ಪಠ್ಯದ ನಮೂನೆ, ಪಠ್ಯದ ಗಾತ್ರ, ವಿಸ್ತೀರ್ಣದಲ್ಲಿ ಬದಲಾವಣೆ ಮಾಡಲು, ಆಯ್ಕೆಗಳನ್ನು ಹೊಂದಿರುತ್ತದೆ. ಟೂಲ್‌ಬಾರ್‌ನಲ್ಲಿ “B” ಮತ್ತು “I” ಐಕಾನ್‌ಗಳನ್ನು ಪಠ್ಯವನ್ನು ಬೋಲ್ಡ್‌ ಮತ್ತು ಇಟಾಲಿಕ್‌ ಮಾಡಲು ಬಳಸಲಾಗುತ್ತದೆ.

ಚಿತ್ರಗಳು ಮತ್ತು ಕೋಷ್ಟಕಗಳನ್ನು ಸೇರಿಸುವುದು

  1. Insert ಮೆನುವು ಚಿತ್ರಗಳನ್ನು, ಹೈಪರ್‌ಲಿಂಕ್‌ಗಳನ್ನು, ಚಾರ್ಟ್‌ಗಳನ್ನು, ಪುಟ ಸಂಖ್ಯೆಗಳನ್ನು ಫಾರ್ಮುಲಾಗಳನ್ನು ಸೇರಿಸುವ ಆಯ್ಕೆಗಳನ್ನು ಹೊಂದಿರುತ್ತದೆ. ಪುಟಸಂಖ್ಯೆಗಳನ್ನು ಪ್ರತಿ ಪುಟದ ಅಡಿ ಬರಹದ ಜಾಗದಲ್ಲಿ ಸೇರಿಸಬಹುದು.
  2. ಚಿತ್ರ ಸೇರಿಸಲು, ಮೆನುಬಾರ್‌ನಲ್ಲಿ Insert → Image → ಗೆ ಹೋಗಿ ನಂತರ ಸೇರಿಸಬೇಕಿರುವ ಚಿತ್ರವನ್ನು ಆಯ್ಕೆ ಮಾಡಿ.
  3. ಸೇರಿಸಿದ ಚಿತ್ರವು ಈ ಚಿತ್ರದಲ್ಲಿರುವಂತೆ ಕಾಣುತ್ತದೆ.
  1. ಕೋಷ್ಟಕ ಸೇರಿಸಲು, ಮೆನುಬಾರ್‌ನಲ್ಲಿ Table → Insert Table ಕ್ಲಿಕ್ ಮಾಡಿ. ನಂತರ ಕಾಣುವ ವಿಂಡೋನಲ್ಲಿ ನಿಮಗೆ ಅವಶ್ಯಕವಿರುವ ಅಡ್ಡಗೆರೆ (rows) ಮತ್ತು ಲಂಬಗೆರೆ (columns) ಯನ್ನು ನಮೂದಿಸಿ. ಇದಲ್ಲದೇ, ಈಗಾಗಲೇ ನೀವು ಸ್ಪ್ರೆಡ್‌ಶೀಟ್‌ನಲ್ಲಿ ಮಾಹಿತಿಯನ್ನು ನಮೂದಿಸಿದಲ್ಲಿ ಅದನ್ನು ಕಾಪಿ ಮಾಡಿಕೊಂಡು ಇಲ್ಲಿ ಅಂಟಿಸಬಹುದು.ಮತ್ತೊಂದು ವಿಧಾನದಲ್ಲಿಯೂ ಸಹ ಕೋಷ್ಟಕವನ್ನು ಸೇರಿಸಬಹುದು. ಲಿಬ್ರೆ ಆಫೀಸ್ ರೈಟರ್‌ನ ಪರದೆಯ ಮೇಲಿನ ಪರಿಕರ ಪಟ್ಟಿಯಲ್ಲಿ (ಟೂಲ್‌ಬಾರ್‌) ಕೋಷ್ಟಕ ಸೂಚಕವನ್ನು ಆಯ್ಕೆ ಮಾಡಿಕೊಳ್ಳಿ. ಇದರಲ್ಲಿ ನಿಮ್ಮ ಮೌಸ್ ಕರ್ಸರ್ ಮೂಲಕ ನಿಮಗೆ ಅವಶ್ಯಕವಿರುವ ಅಡ್ಡಗೆರೆ (rows) ಮತ್ತು ಲಂಬಗೆರೆಯನ್ನು ಆಯ್ದುಕೊಳ್ಳಬಹುದು.
  2. ಒಮ್ಮೆ ಕೋಷ್ಟಕ ಸೇರಿಸಿದ ನಂತರ ಅಡ್ಡಗೆರೆ (rows) ಮತ್ತು ಲಂಬಗೆರೆ (columns)ಯ ಅಗಲ ಮತ್ತು ಉದ್ದ ಅಳತೆಯನ್ನು ಮೆನುಬಾರ್‌ನಲ್ಲಿನ Table -> Size ಮೂಲಕ ಬೇಕಾದ ಅಳತೆಗೆ ಹೆಚ್ಚು ಕಡಿಮೆ ಮಾಡಿಕೊಳ್ಳಬಹುದು. ಅದೇ ರೀತಿ ಅಡ್ಡಗೆರೆ (rows) ಮತ್ತು ಲಂಬಗೆರೆ (columns)ಯನ್ನು ಅಳಿಸಲು ಅಥವಾ ಸೇರಿಸಲು Table -> Insert /Delete ಆಯ್ಕೆಯನ್ನು ಬಳಸಬಹುದು, ಕೋಷ್ಟಕದ ಹಲವು ಚೌಕಗಳನ್ನು ವಿಲೀನಗೊಳಿಸಲು ಅಥವ ಬೇರ್ಪಡಿಸಲು Table -> Merge Cells, Table -> Split Cells ಆಯ್ಕೆಯನ್ನು ಬಳಸಬಹುದು.
  3. ಇದು ಸ್ಪ್ರೆಡ್‌ಶೀಟ್‌ ಮಾದರಿಯಲ್ಲಿಯೇ ನಮೂದಾಗುತ್ತದೆ. ಸ್ಪ್ರೆಡ್‌ಶೀಟ್‌ನ ಮಾದರಿ ಬೇಡವೆಂದಲ್ಲಿ, ನೀವು ಕಾಪಿ ಮಾಡಿಕೊಂಡಿರುವ ದತ್ತಾಂಶವನ್ನು ಅಂಟಿಸುವಾಗ ಮೆನುಬಾರ್‌ ನಲ್ಲಿ EDIT > 'Paste Special -> Formatted text (RTF)' ಅನ್ನು ಆಯ್ಕೆ ಮಾಡಿಕೊಳ್ಳಬಹುದು.

ಕ್ರಮಸಂಖ್ಯೆ ಪಟ್ಟಿಯನ್ನು ರಚಿಸುವುದು

ಪಟ್ಟಿ ಸೇರಿಸುವುದು

  1. ನಮೂನೀಕರಿಸುವ ಆಯ್ಕೆಯು ಕ್ರಮ ಸಂಖ್ಯೆಯನ್ನು ಸೇರಿಸಲು ಆಯ್ಕೆಯನ್ನು ಹೊಂದಿರುತ್ತದೆ. ಇದಕ್ಕಾಗಿ ಈಗಾಗಲೇ ನಮೂದಾಗಿರುವ ಪಠ್ಯವನ್ನು ಆಯ್ಕೆ ಮಾಡಿಕೊಂಡು ನಂತರ ಮೆನುಬಾರ್‌ ನಲ್ಲಿನ Format > Bullets and Numbering ನ್ನು ಆಯ್ಕೆ ಮಾಡಿಕೊಳ್ಳಿ. ನಂತರ ನಿಮಗೆ ಬೇಕಾದ ಕ್ರಮಸಂಖ್ಯೆ ಅಥವಾ ಬಿಂದುಗಳ ಶೈಲಿಯನ್ನು ಆಯ್ದುಕೊಳ್ಳಿ. ಇದೇ ರೀತಿ ಉಪ ಕ್ರಮಸಂಖ್ಯೆಯನ್ನು ಸಹ ರಚಿಸಬಹುದು.
  2. ಮೆನುಬಾರ್‌ನಲ್ಲಿನ Format -->Paragraph ನಲ್ಲಿ ಪಠ್ಯ,ವಾಕ್ಯಗಳ ಸಾಲುಗಳ ನಡುವಿನ ಅಂತರವನ್ನು ನಮೂದಿಸಬಹುದು.

ಪರಿವಿಡಿ ಕೋಷ್ಟಕವನ್ನು (table of content) ರಚಿಸುವುದು

  1. ಪರಿವಿಡಿ ಕೋಷ್ಟಕದ ಮೂಲಕ ಪಠ್ಯ ದಾಖಲೆಯನ್ನು ವಿವಿಧ ವಿಭಾಗದಲ್ಲಿ ತಲೆಬರಹಗಳು ಹಾಗು ಅದಕ್ಕೆ ಅಡಿಬರಹಗಳಾಗಿ ವಿಂಗಡಿಸಬಹುದು. ಇದನ್ನು ಎರಡು ರೀತಿಯಲ್ಲಿ ಮಾಡಬಹುದು.
    1. ಇದಕ್ಕಾಗಿ ಮೊದಲಿಗೆ ನಿಮ್ಮ ಪಠ್ಯದಾಖಲೆಯಲ್ಲಿ ತಲೆಬರಹಗಳನ್ನು ಆಯ್ಕೆ ಮಾಡಿಕೊಳ್ಳಬೇಕು. “heading 1” “heading 2” “heading 3” ಎಂಬುದಾಗಿ ಆಯಾ ಪಠ್ಯಕ್ಕೆ ಪೂರಕವಾಗಿ ತಲೆಬರಹ ನಮೂದಿಸಬೇಕು. ಇದಕ್ಕಾಗಿ ಪರಿಕರಪಟ್ಟಿ (ಟೂಲ್‌ಬಾರ್‌) ನಲ್ಲಿರುವ “heading" ಆಯ್ಕೆಯನ್ನು ಬಳಸಬಹುದು ( ಮೊದಲನೇ ಚಿತ್ರದಲ್ಲಿ ತೋರಿಸಿರುವಂತೆ).
    2. ಇದನ್ನು ಮೆನುಬಾರ್‌ನ Style ಮೆನು ಮೂಲಕವೂ ಆಯ್ಕೆ ಮಾಡಿಕೊಳ್ಳಬಹುದು.
    3. Styles and formatting ಆಯ್ಕೆ ಯ ಮೂಲಕ ಅಕ್ಷರದ ಗಾತ್ರ ಮತ್ತು ಬಣ್ಣವನ್ನು ಬದಲಾಯಿಸಬಹುದು.
  2. ತಲೆಬರಹಗಳನ್ನು ಆಯ್ದುಕೊಂಡ ನಂತರ , ನಿಮ್ಮ ಪಠ್ಯ ದಾಖಲೆಯಲ್ಲಿ ಯಾವ ಪುಟದಲ್ಲಿ ಪರಿವಿಡಿ ಸೇರಿಸಲು ಬಯುಸುತ್ತೀರೋ ಅಲ್ಲಿ ಕ್ಲಿಕ್ ಮಾಡಿ, ನಂತರ ಮೆನುಬಾರ್‌ನಲ್ಲಿನ Insert - Table of Contents and Index – Index Entry ನ್ನು ಆಯ್ಕೆ ಮಾಡಿ ನಂತರ “OK” ಮೇಲೆ ಕ್ಲಿಕ್ ಮಾಡಿ. ಒಮ್ಮೆ ಪರಿವಿಡಿ ಪಟ್ಟಿಯನ್ನು ರಚಿಸಿದ ನಂತರ ಅದನ್ನು ಮತ್ತೆ ನವೀಕರಿಸಲು ಬಯಸಿದಲ್ಲಿ, ಪರಿವಿಡಿಯ ಮೇಲೆ ಮೌಸ್‌ನಲ್ಲಿ ರೈಟ್‌ಕ್ಲಿಕ್‌ ಮಾಡಿ, ನಂತರ Update Index or Table of Contents ಅನ್ನು ಆಯ್ಕೆ ಮಾಡಿ.

ಪುಟಕ್ಕೆ ತಲೆಬರಹ(header) ಮತ್ತು ಅಡಿಬರಹ (footer) ಸೇರಿಸುವುದು

  1. ನಿಮ್ಮ ಪಠ್ಯ ದಾಖಲೆಯ ಪುಟಕ್ಕೆ ತಲೆಬರಹ ಮತ್ತು ಅಡಿಬರಹನ್ನು ಸೇರಿಸಬಹುದು. ಉದಾಹರಣೆಗೆ ಅಡಿಬರಹದಲ್ಲಿ ನೀವು ಕಡತದ ಹೆಸರನ್ನು ನಮೂದಿಸಬಹುದು. ಇದು ಎಲ್ಲಾ ಪುಟದಲ್ಲಿಯೂ ಕಾಣುತ್ತದೆ. ಹಾಗೆಯೇ ಅಡಿಬರಹದಲ್ಲಿ ಅಥವಾ ತಲೆಬರಹದಲ್ಲಿ ನೀವು ಪುಟದ ಸಂಖ್ಯೆಯನ್ನು ನಮೂದಿಸಬಹುದು. ಮುದ್ರಿತ ಪ್ರತಿಯನ್ನು ಓದುವಾಗ ಪ್ರತಿ ಪುಟದಲ್ಲಿಯು ಪುಟ ಸಂಖ್ಯೆ ಮತ್ತು ದಾಖಲೆಯ ಹೆಸರು ಇದ್ದರೆ ಅದು ಓದುವವರಿಗೆ ಬಹಳ ಉಪಯುಕ್ತವಾಗುತ್ತದೆ. ಲಿಬ್ರೆ ಆಫೀಸ್ ರೈಟರ್‌ನ ಮೆನುಬಾರ್‌ನಲ್ಲಿನ Insert--->Footer ಮೂಲಕ ಇದನ್ನು ಸುಲಭವಾಗಿ ನಮೂದಿಸಬಹುದು.
  2. ಅಡಿಬರಹವನ್ನು ಸೇರಿಸಿದ ನಂತರ, ಪುಟದ ಕೆಳಭಾಗದಲ್ಲಿ ಇನ್ನು ಹಲವು ಅಂಶಗಳನ್ನು ಸೇರಿಸಬಹುದು (ಪುಟದ ಸಂಖ್ಯೆ, ದಿನಾಂಕ, ಬರಹಗಾರರ ಹೆಸರು, ಸಮಯ ಇತ್ಯಾದಿ). ಇದಕ್ಕಾಗಿ ಮೆನುಬಾರ್‌ನಲ್ಲಿ Insert--->Fields ನ್ನು ಆಯ್ಕೆ ಮಾಡಿಕೊಳ್ಳಬೇಕು. ಇಲ್ಲಿ ನೀವು ಮೂದಿಸುವ ಪಠ್ಯವು ಎಲ್ಲಾ ಪುಟಗಳಲ್ಲಿಯೂ ಕಾಣುತ್ತದೆ. ಪುಟದ ಸಂಖ್ಯೆಗಳು ಮಾತ್ರ ಪ್ರತಿ ಪುಟಕ್ಕೂ ಬದಲಾಗುತ್ತವೆ. ಇದೇ ರೀತಿ ತಲೆಬರಹದಲ್ಲಿಯೂ ಸಹ ಸೇರಿಸಬಹುದಾಗಿದೆ.

ಕಾಗುಣಿತ ಪರಿಶೀಲನೆ (Spell Check)

  1. ಕಾಗುಣಿತ- ಮೆನುಬಾರ್‌ನ Tools ನಲ್ಲಿ automatic spell checking ಅನ್ನು ಚಾಲನೆಗೊಳಿಸಬೇಕು (enable) . ಇದರಿಂದ ನಿಮ್ಮ ದಾಖಲೆಯಲ್ಲಿನ ಕಾಗುಣಿತ ತಪ್ಪುಗಳನ್ನು ಗುರುತಿಸಿಕೊಂಡು ಸರಿಪಡಿಸಬಹುದು. ತಪ್ಪಾಗಿ ನಮೂದಾಗಿರುವ ಕಾಗುಣಿತದ ಪದವು ಕೆಂಪು ಅಡ್ಡಗೆರೆಯನ್ನು ಹೊಂದಿರುತ್ತದೆ. ಒಂದು ವೇಳೆ ಇದು ಹಸಿರು ಅಡ್ಡಗೆರೆಯನ್ನು ಹೊಂದಿದ್ದಲ್ಲಿ ಆಗ ಆ ವಾಕ್ಯದ ವ್ಯಾಕರಣವು ತಪ್ಪಾಗಿರುತ್ತದೆ. ಈ ಪದಗಳ ಮೇಲೆ ಮೌಸ್‌ ಮೂಲಕ ಬಲಬದಿಯಲ್ಲಿ ಒತ್ತಿದಾಗ ಸರಿಯಾದ ಪದವನ್ನು ಆಯ್ದುಕೊಳ್ಳುವ ಆಯ್ಕೆಯನ್ನು ನೋಡಬಹುದು. ಇಲ್ಲಿ ಸರಿಯಾದ ಪದಕ್ಕೆ ಸಹ ಕೆಂಪು ಅಡ್ಡಗರೆ ಇದ್ದಾಗ, ನೀವು ಆ ಪದವನ್ನು 'add your word to the dictionary' ಮೇಲೆ ಕ್ಲಿಕ್ ಮಾಡುವ ಮೂಲಕ ಸೇರಿಸಬಹುದು. ಇದು ಆ ಪದವನ್ನು ಶಬ್ದಕೋಶಕ್ಕೆ ಸೇರಿಸಿಕೊಳ್ಳುತ್ತದೆ ಹಾಗು ಮುಂದೆ ತಪ್ಪಾಗಿ ತೋರಿಸುವುದಿಲ್ಲ.
  2. ಇದಲ್ಲದೇ, ಒಂದೊಂದು ಪದದ ವ್ಯಾಕರಣವನ್ನು ಪ್ರತ್ಯೇಕವಾಗಿ ಪರಿಶೀಲಿಸಬಹುದು. ಇದಕ್ಕಾಗಿ ಮೆನುಬಾರ್‌ನ Tools > spelling and grammar ನ್ನು ಆಯ್ಕೆ ಮಾಡಿಕೊಳ್ಳಬೇಕು. ಇದು ಒಂದೊಂದು ವಾಕ್ಯದಲ್ಲಿನ ಪದಗಳನ್ನು ವ್ಯಾಕರಣ ಪರಿಶೀಲಿಸುತ್ತದೆ. ಬೇರೆಯವರೊಡನೆ ಪಠ್ಯ ದಾಖಲೆಯನ್ನು ಹಂಚಿಕೊಳ್ಳುವ ಮೊದಲು ಕಾಗುಣಿತ ಮತ್ತು ವ್ಯಾಕರಣ ಪರಿಶೀಲಿಸುವುದು ಉತ್ತಮವಾಗಿರುತ್ತದೆ.
  3. ವ್ಯಾಕರಣ ಪರಿಷ್ಕರಿಸಲು ಅನುಕೂಲವಾಗುವಂತೆ ನೀವು ಬಳಸುವ ಭಾಷೆಗಳ ಶಬ್ದಕೋಶವನ್ನು ಅನುಸ್ಥಾಪನೆ ಮಾಡಿಕೊಂಡಿರಬೇಕು.

ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು

ಬೇರೆ ಎಲ್ಲಾ ಅನ್ವಯಕಗಳಂತೆಯೇ, ಇದನ್ನು ಸಹ FILE – SAVE AS ಮೂಲಕ ಉಳಿಸಬಹುದು. ಕೀಬೋರ್ಡ್ ಮೂಲಕ ಮಾಡುವುದಾದಲ್ಲಿ CTRL-S ಕೀ ಬಳಸಬಹುದು. ಕಡತಕ್ಕೆ ಅರ್ಥಪೂರ್ಣವಾದ ಹೆಸರನ್ನು ನಮೂದಿಸಿ ಉಳಿಸಬಹುದು. ಕಡತದ ಹೆಸರಿನಲ್ಲಿ ದಿನಾಂಕವನ್ನು ನಮೂದಿಸುವುದು ಸಹ ಬಹಳ ಉಪಯುಕ್ತವಾಗುತ್ತದೆ.
ಇದು .odt ನಮೂನೆಯಲ್ಲಿ ಉಳಿಯುತ್ತದೆ. .odt ಅಂದರೆ ಓಪನ್ ಡಾಕ್ಯುಮೆಂಟ್ ಟೆಕ್ಸ್ಟ್ ಎಂದು ಅರ್ಥ. ಇದು ಭಾರತ ಸರ್ಕಾರದ ಮುಕ್ತ ತಂತ್ರಾಂಶಗಳ ನೀತಿಯಿಂದ ಶಿಫಾರಸ್ಸುಗೊಂಡಿದೆ.

ಬೇರೆ ಎಲ್ಲಾ ಅನ್ವಯಕಗಳಂತೆಯೇ, ಇದನ್ನು ಪಿಡಿಎಫ್‌ಗೆ 'ಎಕ್ಸ್‌ಪೋರ್ಟ್‌' ಮಾಡಬಹುದು. ಇದು ನೀವು ಯಾವುದೇ ರೀತಿಯ ಬದಲಾವಣೆ ಮಾಡದೇ ಕೇವಲ ಮುದ್ರಿಸುವ ಸಲುವಾಗಿ ಬಳಕೆಯಾಗುತ್ತದೆ.
Export as pdf.png

ಉನ್ನತೀಕರಿಸಿದ ಲಕ್ಷಣಗಳು

  1. ಪಠ್ಯ ಬದಲಾವಣೆ (Trak Changes) (ಪಠ್ಯ ದಾಖಲೆಯನ್ನು ಬೇರೊಬ್ಬರು ತಿದ್ದುಪಡಿ ಮಾಡಿದಾಗ, ಆ ತಿದ್ದುಪಡಿಗಳನ್ನು ಪ್ರತ್ಯೇಕವಾದ ಬಣ್ಣದ ಅಕ್ಷರದಲ್ಲಿ ನೋಡಬಹುದು. ನಂತರ ಆ ತಿದ್ದುಪಡಿಯನ್ನು ಮೂಲಕ ಬರಹಗಾರರು ಒಪ್ಪಿಕೊಳ್ಳಬಹುದು ಅಥವಾ ತಿರಸ್ಕರಿಸಬಹುದಾಗಿದೆ.
  2. ಪುಟ ವಿನ್ಯಾಸ (ಸುದ್ದಿ ಪತ್ರಿಕೆಗಳನ್ನು ಅಥವಾ ಮ್ಯಾಗಜಿನ್‌ ಗಳ ರೀತಿಯ ಪ್ರಸ್ತುತಿಗೆ ಅವಶ್ಯಕವಾಗುವಂತಹ ಪುಟ ವಿನ್ಯಾಸ ಮಾಡಿಕೊಳ್ಳಬಹುದಾಗಿದೆ.

ಸಂಪನ್ಮೂಲ ರಚನೆಯ ಆಲೋಚನೆಗಳು

ಪಠ್ಯ ಸಂಪನ್ಮೂಲಗಳನ್ನು ರಚಿಸಲು ಮತ್ತು ತಿದ್ದುಪಡಿ ಮಾಡಲು ಈ ಅನ್ವಯಕವನ್ನು ಬಳಸಬಹುದು. ಇದರಲ್ಲಿ ಚಿತ್ರಗಳನ್ನು, ವೆಬ್‌ಲಿಂಕ್‌ಗಳನ್ನು, ಹೈಪರ್‌ಲಿಂಕ್‌ಗಳನ್ನು ಸೇರಿಸಬಹುದು. ಕೋಷ್ಟಕಗಳನ್ನು ಸೇರಿಸಬಹುದು, ಪರಿವಿಡಿ ರಚಿಸಬಹುದು ಹಾಗು ಪಠ್ಯ ದಾಖಲೆಯನ್ನು ರಚಿಸಲು ಹಲವು ರೀತಿಯಲ್ಲಿ ಬಳಸಬಹುದಾಗಿದೆ.

ಆಕರಗಳು

  1. ಲಿಬ್ರೆ ಆಫೀಸ್ ಪುಟ
  2. ವಿಕಿಪೀಡಿಯ