Note on School Leadership shared by Praveen, C-LAMPS March 2013
ಸಂವಿಧಾನದ ಆಶಯಗಳು, ಶಿಕ್ಷಣದ ಗುರಿಗಳು. Download this article
ಪ್ರಜಾಪ್ರಭುತ್ವದ ಮೌಲ್ಯಗಳಾದ ಸಮತೆ, ಸಮಾನತೆ, ಸ್ವಾತಂತ್ರ್ಯ, ಭಾತೃತ್ವ, ಮತ ನಿರಪೇಕ್ಷತೆ, ಸಾರ್ವಭೌಮ, ಜಾತ್ಯಾತೀತತೆಯಿಂದ ರೂಪಿತವಾದ ಶೈಕ್ಷಣಿಕ ನಾಯಕತ್ವ ಗುಣಾತ್ಮಕ ಶಿಕ್ಷಣಕ್ಕೆ ಬುನಾದಿಯಾಗಿದೆ.
ಪ್ರತೀ ಮಗುವು ತನ್ನದೇ ಆದ ವೈಶಿಷ್ಟ್ಯತೆ ಹಾಗೂ ಹಿನ್ನಲೆಯೊಂದಿಗೆ ಶಾಲೆಗೆ ಬರುತ್ತದೆ. ಮಗುವಿನ ಆಸಕ್ತಿ ಹಾಗು ಸಾಮರ್ಥ್ಯಕ್ಕನುಗುಣವಾಗಿ ತನ್ನನ್ನು ಅಭಿವೃದ್ಧಿಪಡಿಸಿಕೊಳ್ಳಲು ನೀಡುವ ಶಿಕ್ಷಣ ದೇಶದ ಅಭ್ಯುದಯವನ್ನು ಸಾಧಿಸುವ ನಿಟ್ಟಿನಲ್ಲಿ ಗುರುತರವಾದ ಅಂಶ. ಶಾಲೆಯಲ್ಲಿ ಮಕ್ಕಳಿಗೆ ಪೂರಕವಾದ ಉತ್ತಮ ಕಲಿಕಾ ವಾತಾವರಣವನ್ನು ನಿರ್ಮಾಣ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. 'ಇಂದಿನ ಮಕ್ಕಳೇ ಇಂದಿನ ಪ್ರಜೆಗಳು' ಈ ನಿಟ್ಟಿನಲ್ಲಿ ಶಿಕ್ಷಣ ಸಾರಥಿಗಳು ಕಾರ್ಯ ಪ್ರವೃತ್ತರಾಗಬೇಕಾಗಿದೆ.
ಶಿಕ್ಷಣ, ಈಗ ಸರ್ಕಾರದ ಒಂದು ಸೇವಾ ಚಟುವಟಿಕೆಯಾಗಿ ಮಾತ್ರ ಉಳಿದಿಲ್ಲ. ಬದಲಾಗಿ ಅದು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕಾಗಿದೆ. 1994ರಲ್ಲಿ ಶಿಕ್ಷಣವನ್ನು ಒಂದು ಮೂಲಭೂತ ಹಕ್ಕನ್ನಾಗಿ ಪರಿವರ್ತನೆ ಮಾಡಲು ಮತ್ತೊಂದು ಪ್ರಮುಖ ಪ್ರಯತ್ನ ನಡೆಯಿತು. ಭಾರತದ ಸರ್ವೋಚ್ಚ ನ್ಯಾಯಾಲಯದ ಒಂದು ಪ್ರಮುಖ ತೀರ್ಪಿನಲ್ಲಿ ಶಿಕ್ಷಣವು ಜೀವಿಸುವ ಹಾಗು ಸ್ವತಂತ್ರದ ಹಕ್ಕಿನಿಂದ ಹೊರಹೊಮ್ಮುವ ಒಂದು ಮೂಲಭೂತ ಹಕ್ಕು ಎಂದು ಪರಿಗಣಿಸಿದೆ. ಈ ತೀರ್ಪಿನಿಂದಾಗಿ ಸಂವಿಧಾನದ 45ನೇ ಕಲಂನಲ್ಲಿ ಸೂಚಿಸಿದಂತೆ ಶಿಕ್ಷಣ ಕೇವಲ ಒಂದು ಸೇವೆಯಲ್ಲದೆ, ಜಾರಿಗೊಳಿಸಲೇ ಬೇಕಾದ ಹಕ್ಕಾಗಿ ಮಾರ್ಪಾಡಾಯಿತು. 2002ರ 86ನೇ ಸಂವಿಧಾನದ ತಿದ್ದುಪಡಿ ಕಾಯಿದೆಯು 'ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣವು' ಮಕ್ಕಳ ಮೂಲಭೂತ ಹಕ್ಕು ಎಂದು ಘೋಷಿಸಿತು [ಕಲಂ 21 ಎ]
ಶಿಕ್ಷಣದ ಸಾರ್ವತ್ರೀಕರಣದ ಅಂತಿಮ ಆಶಯ ಎಲ್ಲಾ ಮಕ್ಕಳ ಕಲಿಕೆಯ ಗುಣಮಟ್ಟದಲ್ಲಿನ ಹೆಚ್ಚಳವನ್ನು ಸಾಧಿಸುವುದಾಗಿದೆ. ಖ್ಯಾತ ಶಿಕ್ಷಣ ತಜ್ಞ ಡೆಮಿಂಗ್ ರವರ ಪ್ರಕಾರ ಗುಣಮಟ್ಟ ಎಂದರೆ, ಪ್ರಕ್ರಿಯೆ ಪ್ರೇರಿತ ಚಿಂತನೆ ಮಾಡುವುದು, ಪ್ರಕ್ರಿಯೆಯಲ್ಲಿ ನಿರಂತರ ಸುಧಾರಣೆ ಮಾಡುವುದು, ವಾಸ್ತವಾಂಶಗಳೊಂದಿಗೆ ನಿರ್ವಹಿಸುವುದು, ಆದ್ಯತೆಯ ಮೇರೆಗೆ ಆಡಳಿತ ನಡೆಸುವುದು, ಎಲ್ಲರೂ ಭಾಗವಹಿಸುವಂತೆ ಮಾಡುವುದು, ಈ ಎಲ್ಲಾ ಅಂಶಗಳನ್ನು ಗುಣಾತ್ಮಕ ಶಿಕ್ಷಣವನ್ನು ಸಾಧಿಸುವ ನಿಟ್ಟಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಪ್ರತಿಯೊಬ್ಬರೂ ತಮ್ಮ ಕೆಲಸ ಕಾರ್ಯಗಳಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಈ ಉದ್ದೇಶವನ್ನು ಈಡೇರಿಸುವುದು ಸವಾಲಾಗಿದ್ದು, ಕಾಲಕಾಲಕ್ಕೆ ತಕ್ಕಂತೆ ಹಾಗೂ ಪ್ರಚಲಿತ ಬದಲಾವಣೆಗಳಿಗೆ ಮತ್ತು ಉದ್ದೇಶಗಳಿಗೆ ತಕ್ಕಂತೆ ಇಲಾಖೆಯಲ್ಲಿನ ವೃತ್ತಿಪರರಲ್ಲಿ ಅವಶ್ಯಕವಾಗಿ ಬೇಕಾದ ಸಾಮಾರ್ಥ್ಯಾಭಿವೃದ್ಧಿಯನ್ನು ಮಾಡಬೇಕಾಗಿರುವುದು ಸರ್ಕಾರದ ಮೂಲಭೂತ ಜವಾಬ್ದಾರಿ.
ವೃತ್ತಿಪರರಲ್ಲಿ ಶೈಕ್ಷಣಿಕ ಮತ್ತು ನಿರ್ವಹಣಾ ಕೌಶಲವನ್ನು ಹೆಚ್ಚಿಸುವುದು ಹಾಗೂ ಉತ್ತಮ ನಾಯಕತ್ವದ ಗುಣಗಳನ್ನು ಬೆಳೆಸಿ ಶೈಕ್ಷಣಿಕ ನಾಯಕತ್ವ ಅಭಿವೃದ್ಧಿಗೊಳಿಸುವುದರ ಮೂಲಕ ನಮ್ಮ ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣವನ್ನು ಸಾಕಾರಗೊಳಿಸುವುದು ಶೈಕ್ಷಣಿಕ ನಾಯಕತ್ವ ತರಬೇತಿಯ ಮೂಲ ಉದ್ದೇಶಗಳಲ್ಲಿ ಒಂದಾಗಿದೆ.
ಗುಣಾತ್ಮಕ ಶಿಕ್ಷಣ ಮಾದರಿ. ಸಮಾಜವೊಂದು ಆರೋಗ್ಯಕರವಾಗಿ ಮತ್ತು ಸೌಹಾರ್ದಯುತವಾಗಿ ಬೆಳವಣಿಗೆ ಕಾಣಬೇಕಿದ್ದರೆ ಶಿಕ್ಷಣ ಸಮಾಜದ ಜನರಿಗೆ ಅತ್ಯಂತ ಮುಖ್ಯ ಅಂಶವೆನಿಸಿದೆ. ಶಿಕ್ಷಣದಿಂದ ವ್ಯಕ್ತಿಯು ತನ್ನ ಜೀವನದ ಗುರಿಗಳನ್ನು ಸಾಧಿಸಲು ಸಾಧ್ಯವಾಗುತ್ತದೆ, ಅಷ್ಟೆ ಅಲ್ಲ ಸಮಾಜದ ಸರ್ವಾಂಗೀಣ ಒಳಿತಿಗಾಗಿ ಕೆಲಸ ಮಾಡುವುದನ್ನು ಜನ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಪಡೆಯುತ್ತಾರೆ. ಆದ್ದರಿಂದ ಶಿಕ್ಷಣವು ಮಹತ್ವದ ಅಗತ್ಯ ಎ೦ದೇ ಪರಿಗಣಿತವಾಗಿದೆ. ಗುಣಾತ್ಮಕ ಶಿಕ್ಷಣದ ಮಾದರಿಯ ಅರ್ಥ, ಗುಣಲಕ್ಷಣಗಳು, ಅದರ ಧ್ಯೇಯ, ಅಗತ್ಯಗಳು ಹಾಗು ಕಾರ್ಯವಿಧಾನಗಳನ್ನು ಶೈಕ್ಷಣಿಕ ನಾಯಕರಲ್ಲಿ ಮನಗಾಣಿಸುವ ಅವಶ್ಯಕತೆ ಇದೆ.
ಶಿಕ್ಷಣ ವ್ಯವಸ್ಥೆಯಲ್ಲಿ ದಿನನಿತ್ಯದ ನಿರ್ವಹಣೆ ಹೇಗಿರುತ್ತದೆ ಮತ್ತು ಯಾವ ವಿಧಾನದಲ್ಲಿ ಕಾರ್ಯನಿರ್ವಹಿಸುತ್ತದೆ. ಅದರ ದಿನನಿತ್ಯದ ಕಾರ್ಯನಿರ್ವಹಣೆ ಯಾವ ವಿಧಾನದಲ್ಲಿ ನಡೆಯುತ್ತದೆ, ಅದರಲ್ಲಿ ಕಂಡು ಬರುವ ಅಂಶಗಳು ಯಾವುವು, ಆ ಅಂಶಗಳು ಹೇಗೆ ಒಂದಕ್ಕೊಂದು ಪರಿಣಾಮ ಬೀರುತ್ತದೆ. ಅದರಲ್ಲಿ ಮುಖ್ಯ ಶಿಕ್ಷಕನಾಗಿ ತನ್ನ ಸ್ಥಾನವನ್ನು ತಿಳಿದು ಕ್ರಿಯಾತ್ಮಕವಾಗಿ ಹೇಗೆ ನಿರ್ವಹಿಸಬಹುದೆಂದು ಅರಿಯಬೇಕಿದೆ.
ಗುಣಾತ್ಮಕ ಶಿಕ್ಷಣ ಮಾದರಿ ಎ೦ಬುದು ಔಪಚಾರಿಕ ಶಿಕ್ಷಣ ವ್ಯವಸ್ಥೆಯನ್ನು ವಿವರಿಸುವ ಯತ್ನವಾಗಿದ್ದು ಈ ಶಿಕ್ಷಣ ವ್ಯವಸ್ಥೆಯಲ್ಲಿ ಗುಣಾತ್ಮಕತ ಸುಧಾರಣೆ ತರುವ ಏಕೈಕ ಗುರಿಯೊಂದಿಗೆ ಕೈಗೊಂಡಿರುವ ಸಂಶೋಧನ ಅಧ್ಯಯನಗಳು ಶಿಕ್ಷಣ ವ್ಯವಸ್ಥೆಯಲ್ಲಿ ಹಲವಾರು ಸಂಕೀರ್ಣಾಂಶಗಳು ಪರಸ್ಪರ ವರ್ತಿಸುತ್ತವೆ ಮತ್ತು ಪ್ರಭಾವ ಬೀರುತ್ತದೆ ಎ೦ಬುದನ್ನು ಗುರುತಿಸಿವೆ. ಹಾಗೆಯೇ ಇದು ತರಗತಿಯ ಅಭ್ಯಾಸಗಳು, ಸಾರ್ವಜನಿಕ ನಿರೀಕ್ಷೆಗಳು, ವೃತ್ತಿಪರ ಅಭಿಪ್ರಾಯಗಳು ಮತ್ತು ವೃತ್ತಿಗಾರನ ಸಲಹೆಗಳನ್ನು ಬದಲಿಸಲು ಅವಕಾಶಗಳನ್ನು ಒದಗಿಸುತ್ತದೆ.
ಗುಣಾತ್ಮಕ ಶಿಕ್ಷಣ ಮಾದರಿ ಆರು ಬೇರೆ ಬೇರೆ ಆಯಾಮಗಳನ್ನು ಒಳಗೊಂಡಿದೆ ಅವುಗಳೆಂದರೆ. 1. ವಿಶಾಲ ಹಂತದ ಒಳಸುರಿ. 2. ಶಾಲಾ ಹಂತದ ಒಳಸುರಿ. 3. ಪ್ರಕ್ರಿಯೆ. 4.ಪರಿಣಾಮಗಳು. 5. ಸಾಂದರ್ಭಿಕ ಹಿನ್ನೆಲೆ. 6. ವಿದ್ಯಾರ್ಥಿಯ ಗುಣಲಕ್ಷಣಗಳು.
ಶಾಲಾ ಮತ್ತು ತರಗತಿ ವಾತಾವರಣ ಕಲಿಕೆಗೆ ಮುಕ್ತ ಮತ್ತು ಮುದ ನೀಡುವ ವಾತಾವರಣವಿದ್ದರೆ ಕಲಿಕೆ ಸ್ವಾಭಾವಿಕವಾಗಿ ಉಂಟಾಗುತ್ತದೆ. ಈ ಸ್ವಾಭಾವಿಕ ಕಲಿಕೆಯು ಕಲಿಕಾರ್ಥಿಯಲ್ಲಿ ಪ್ರಭಾವ ಮೂಡಿಸಿ ಆ ಮೂಲಕ ಅದು ಕಲಿಕಾರ್ಥಿಯಲ್ಲಿ ದೀರ್ಘಬಾಳಿಕೆಯ ಕಲಿಕೆಯನ್ನುಂಟುಮಾಡುತ್ತದೆ. ಕಲಿಕಾ ಕೇಂದ್ರವಾದ ಶಾಲೆಯಲ್ಲಿ ಇರುವ ಮಕ್ಕಳಿಗೆ, ಶಿಕ್ಷಕರಿಗೆ ಮತ್ತು ಸಮುದಾಯದವರಿಗೆ ಮುಕ್ತ ವಾತಾವರಣ ಸಿಕ್ಕಾಗ ಕಲಿಕೆಯಲ್ಲಿ ತೊಡಗಿಕೊಳ್ಳಲು ವಾತಾವರಣ ಪೂರಕವಾಗಿರುತ್ತದೆ. ಈ ಕಲಿಕಾ ಪೂರಕ ವಾತಾವರಣ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಶಾಲೆ ಎ೦ಬುದು ಮಕ್ಕಳು ಮಾತ್ರವೇ ಕಲಿಯಲು ಇರುವ ತಾಣವಲ್ಲ, ಶಿಕ್ಷಕರೂ ಕೂಡ ನಿರಂತರವಾಗಿ ಕಲಿಕೆಯಲ್ಲಿ ತೊಡಗಿರುತ್ತಾರೆ ಹಾಗಾಗಿ ಶಾಲೆಯಲ್ಲಿ ಮಕ್ಕಳಿಗೆ ಹಾಗು ಶಿಕ್ಷಕರಿಗೆ ಭಾವನಾತ್ಮಕ ಸುಭದ್ರತೆ ಯ ವಾತಾವರಣ ಇರಬೇಕು. ಆಗ ಮಾತ್ರ ಮಕ್ಕಳ ನೆಲೆಯಿ೦ದ ಭಾವನಾತ್ಮಕ ಸುಭದ್ರತೆಯನ್ನು ಪರಿಭಾವಿಸಲು, ಅ೦ತಹ ವಾತಾವರಣವನ್ನು ತಮ್ಮ ಶಾಲೆಗಳಲ್ಲಿ ಉ೦ಟುಮಾಡಲು ಶಾಲಾನಾಯಕರು ಅನುವಾಗುತ್ತಾರೆ. ಶಾಲೆಯಲ್ಲಿ ಸುಭದ್ರತೆಯ ವಾತಾವರಣ ಸೃಷ್ಟಿಮಾಡುವಲ್ಲಿ ಶಾಲಾ ಭೌತಿಕ ಮತ್ತು ಮನೋ ಸಾಮಾಜಿಕ ಪರಿಸರದ ಪಾತ್ರ ಗುರುತರವಾಗಿದೆ. ಶಾಲಾ ವಾತಾವರಣ ಹಿತಕರ, ಶಿಶು ಸ್ನೇಹಿ, ಭಯರಹಿತ (ಶಿಕ್ಷೆಯಿ೦ದ ಮುಕ್ತವಾದ)ವಾಗಿರುವುದು ಮಗುವಿಗೆ ಕಲಿಕೆಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲು ಪೂರವಾಗಿರುತ್ತದೆ.
ಶಾಲಾವಾತಾವರಣದಲ್ಲಿ ಹೊಸತನವನ್ನು ಸೃಷ್ಠಿಸುವ ಜೊತೆಗೆ ಇರುವ ಭೌತಿಕ ಸೌಕರ್ಯಗಳ ಸೃಜನಾತ್ಮಕ ಬಳಕೆ[ನಾವೀನ್ಯಯುತವಾಗಿ ಬಳಸುವುದು] ಬಳಕೆ ಮಾಡುವ ಮೂಲಕ ಅದರ ಮೌಲ್ಯ ವರ್ಧನೆ ವೃದ್ಧಿಸಬೇಕು ಇದು ಎನ್.ಸಿ.ಎಫ್. 2005ರ ಭೌತಿಕ ಹಾಗು ಮನೋಸಾಮಾಜಿಕ ಪರಿಸರದ ಕುರಿತ ಆಶಯದಂತೆ ಎಸ್.ಎಸ್.ಎ ಯ ಮಧ್ಯವರ್ತನೆಗಳ ಮೂಲಕ ಅನುಷ್ಟಾನಗೊಳಿಸುವ ಅವಕಾಶಗಳನ್ನು ಗುರುತಿಸಿ ಯೋಜಿಸಬೇಕಿದೆ.
ಶೈಕ್ಷಣಿಕ ನಾಯಕತ್ವ ಒಂದು ಸಂಸ್ಥೆಯಲ್ಲಿ ಮಾನವ ಸಂಪನ್ಮೂಲ, ಭೌತಿಕ ಸಂಪನ್ಮೂಲ, ಅಲ್ಲದೆ ಇತರೇ ಸಹಕಾರದ ಲಭ್ಯತೆಯೂ ಇರುತ್ತದೆ ಆದರೆ ಒಬ್ಬ ಯಶಸ್ವಿ ನಾಯಕನಿಲ್ಲದಿದ್ದರೇ ಈ ಎಲ್ಲಾ ಸಂಪನ್ಮೂಲಗಳಿದ್ದಾಗ್ಯೂ ಸಂಸ್ಥೆಯ ನಿರ್ವಹಣೆ ಕಷ್ಟಸಾಧ್ಯ, ಆದರೆ ಎಲ್ಲಾ ಕೊರತೆ ಮತ್ತು ಕಷ್ಟಗಳ ಮಧ್ಯೆಯೂ ಯಶಸ್ವಿ ನಾಯಕರು ಬದ್ದತೆಯೊಂದಿಗೆ ಕಾರ್ಯ ನಿರ್ವಹಿಸಿದಾಗ, ಪ್ರತಿಕೂಲ ಪರಿಸರವನ್ನೂ ಸಹ ತಮ್ಮ ಗುರಿ ತಲುಪಲು ಅನುಕೂಲವಾಗುವಂತೆ ಪರಿವರ್ತಿಸಿಕೊಳ್ಳ ಬಲ್ಲವರಾಗಿರುತ್ತಾರೆ. ಶಿಕ್ಷಣ ಕ್ಷೇತ್ರದಲ್ಲಿ ಹೇಳುವುದಾದರೆ ಒಬ್ಬ ಯಶಸ್ವಿ ಮುಖ್ಯ ಶಿಕ್ಷಕರು ಶಾಲೆಯ ಉತ್ತಮ ನಾಯಕರಾದಾಗ ಮಾತ್ರ ಸಹ ಶಿಕ್ಷಕರ, ಎಸ್.ಡಿ.ಎ೦.ಸಿ ಸದಸ್ಯರ, ಸಮುದಾಯದ ಸಹಕಾರದೊಂದಿಗೆ ಕಾರ್ಯನಿರ್ವಹಿಸುವ ಮೂಲಕ ಶಾಲೆಯನ್ನು ಗುಣಮಟ್ಟದ ಶಿಕ್ಷಣದೆಡೆಗೆ ಕೊಂಡೊಯ್ಯಬಲ್ಲರು.
ಇತರೆ ಕ್ಷೇತ್ರದಲ್ಲಿನ ನಾಯಕತ್ವಕ್ಕೂ ಶೈಕ್ಷಣಿಕ ನಾಯಕತ್ವಕ್ಕೂ ಕೆಲವು ಸೂಕ್ಷ್ಮ ವ್ಯತ್ಯಾಸಗಳಿವೆ. ಅಂದರೆ ಶೈಕ್ಷಣಿಕ ವ್ಯವಸ್ಥೆಯ ಸಂಪೂರ್ಣ ಮಾಹಿತಿ, ಶಿಕ್ಷಣಕ್ಕೆ ಸಂಬಂಧಿಸಿದ ಸಂವಿಧಾನದ ಆಶಯಗಳ ಪರಿಚಯ, ಧನಾತ್ಮಕ ಶೈಕ್ಷಣಿಕ ದೃಷ್ಟಿಕೋನಗಳು, ಶೈಕ್ಷಣಿಕ ಗುರಿಗಳ ಈಡೇರಿಕೆಗೆ ಪೂರಕವಾದ ಅಂಶಗಳ ಜ್ಞಾನ, ಸಾಮಾನ್ಯ ನಾಯಕತ್ವದ ತಂತ್ರಗಾರಿಕೆ ಮತ್ತು ಕೌಶಲಗಳನ್ನು ಶೈಕ್ಷಣಿಕ ವ್ಯವಸ್ಥೆಯಲ್ಲಿ ಪೂರಕವಾಗಿ ಬಳಸುವ ಚಾಕಚಕ್ಯತೆ ಇವೇ ಮುಂತಾದವುಗಳನ್ನು ಶೈಕ್ಷಣಿಕ ನಾಯಕರು ಅಳವಡಿಸಿಕೊಂಡು ಕಾರ್ಯನಿರ್ವಹಿಬೇಕಾದ ಅವಶ್ಯಕತೆ ಇದೆ.
ಶಾಲಾಭಿವೃದ್ಧಿ - ಪರಿಕಲ್ಪನೆ, ಪ್ರಕ್ರಿಯೆ ಮತ್ತು ಪರಿಕರಗಳು ಶಾಲಾಭಿವೃದ್ದಿ ಎ೦ದರೆ ಭೌತಿಕ, ಬೌದ್ದಿಕ, ಮೂರ್ತ, ಅಮೂರ್ತ, ಅಂತರಿಕ ಮತ್ತು ಬಾಹ್ಯ, ಗೋಚರ ಮತ್ತು ಅಗೋಚರ ಅಂಶಗಳ ಅಭಿವೃದ್ದಿ ಹೊಂದುವುದಾಗಿದೆಯೇ ಹೊರತು ಶಾಲಾ ಕಟ್ಟಡಗಳ ನಿರ್ಮಾಣ ಅಥವಾ ದುರಸ್ಥಿ ಮಾತ್ರವೇ ಅಲ್ಲ. ಶಾಲಾಭಿವೃದ್ದಿ ಎನ್ನುವುದು ನಿರಂತರವಾಗಿ ನಡೆಯುವ ಒಂದು ಪ್ರಕ್ರಿಯೆ. ಮಗುವಿನ ಸರ್ವತೋಮುಖ ಅಭಿವೃದ್ದಿಯನ್ನು ಸಾಧಿಸುವ ಉದ್ದೇಶವನ್ನು ಹೊಂದಿರುವ ಶಾಲಾ ವ್ಯವಸ್ಥೆಯಲ್ಲಿ ಬರುವ ಭೌತಿಕ ಪರಿಸರ, ಮನೋಸಾಮಾಜಿಕ ಪರಿಸರ, ಶಿಕ್ಷಕ ವೃಂದ ಮತ್ತು ಭಾಗಿದಾರರ ನಡುವೆ ನಿರಂತರ ಸಹಯೋಗ ಇವೇ ಮುಂತಾದ ಅಂಶಗಳ ಅಭಿವೃದ್ಧಿಯಾಗಬೇಕಾದ ಅವಶ್ಯಕತೆ ಇದೆ.
ಮಕ್ಕಳು, ಶಿಕ್ಷಕ ವೃಂದ ಹಾಗೂ ಇತರೆ ಸಿಬ್ಬಂದಿ ವರ್ಗದಲ್ಲಿ ಸಮಾನತೆಯ ಮನೋಭಾವವಿದ್ದು ಮಕ್ಕಳ ಕಲಿಕೆ ಪರಿಣಾಮಕಾರಿಯಾಗುವುದರ ಜತೆಗೆ ಶಿಕ್ಷಕರು ಸೃಜನಶೀಲ ಬೋಧನೆಯಲ್ಲಿ ತೊಡಗಿಕೊಂಡಿರುತ್ತಾರೆ. ಶಾಲೆಯಲ್ಲಿ ಶಿಕ್ಷಕರು ಮಕ್ಕಳ ವಿಭಿನ್ನ ಕಲಿಕಾ ಮಟ್ಟವನ್ನು ಗಮನಿಸುವುದರಿಂದ ಇದು ಸೂಕ್ತ ಬೋಧನಾ ತಂತ್ರಗಳನ್ನು ಅಳವಡಿಸಿಕೊಳ್ಳಲು ಅನುಕೂಲವಾಗಿ ಆ ಮೂಲಕ ಶಾಲೆ ಆಕರ್ಷಣೀಯವಾಗಿ ರೂಪುಗೊಂಡು ಮಕ್ಕಳು ಸಂತೋಷವಾಗಿ ಶಾಲೆಗೆ ಬರುವಂತಾಗುತ್ತದೆ, ಇನ್ನು ಮುಂತಾದ ಪರಿಣಾಮಕಾರಿ ಕಾರ್ಯಕ್ರಮಗಳಿಂದ ಶಾಲೆಯು ಅಭಿವೃದ್ಧಿಯೆಡೆಗೆ ಸಾಗುತ್ತದೆ.
ಶಾಲಾಭಿವೃದ್ದಿ ಒಂದು ನಿರಂತರ ಪ್ರಕ್ರಿಯೆ, ಶಾಲೆಯ ಸರ್ವತೋಮುಖ ಅಭಿವೃದ್ದಿಗಾಗಿ, ಶಾಲೆಯ ಅಗತ್ಯತೆಗಳನ್ನು ಗುರುತಿಸಿ, ಇದನ್ನು ಅಭಿವೃದ್ದಿಪಡಿಸಲು ಪ್ರತಿಯೊಂದು ಕ್ಷೇತ್ರಕ್ಕೆ ಸೂಕ್ತ ಕಾರ್ಯಯೋಜನೆಯನ್ನು ರೂಪಿಸಿ ಆ ಮೂಲಕ ಅನುಷ್ಠಾನದ ಹಂತಗಳನ್ನು ವ್ಯವಸ್ಥಿತವಾಗಿ ಯೋಜಿಸುವುದೇ ಶಾಲಾಭಿವೃದ್ಧಿ ಪ್ರಕ್ರಿಯೆ. ಶಾಲಾಭಿವೃದ್ಧಿ ಪ್ರಕ್ರಿಯೆಯು ಶಾಲಾಭಿವೃದ್ಧಿಯನ್ನು ಸುಗಮಗೊಳಿಸಲು ಮತ್ತು ಶೀಘ್ರಗೊಳಿಸಲು ಸಹಕಾರಿಯಾಗಿದೆ.
ಶಾಲಾಭಿವೃದ್ಧಿ ಪ್ರಕ್ರಿಯೆಯ ಪರಿಣಾಮಕಾರಿತ್ವಕ್ಕಾಗಿ ಗುಣಮಟ್ಟದ ಪರಿಕರಗಳನ್ನು ಬಳಸಲಾಗುತ್ತದೆ. ಇವುಗಳಲ್ಲಿ ಪ್ರಮುಖವಾದವುಗಳೆಂದರೆ ಗಮನ ಕೇಂದ್ರಿತ ಗುಂಪು ಚರ್ಚೆ, ಪ್ರಕ್ರಿಯಾ ನಕ್ಷೆ, ಬುದ್ಧಿ ಮಂಥನ, ಆದ್ಯತೀಕರಣ, ಸಮಸ್ಯೆ ಮತ್ತು ಅವಕಾಶ ನಕ್ಷೆ (Problem and opportunity tree) ಕಾರ್ಯಯೋಜನೆ ತಯಾರಿ ಮತ್ತು ಪರಾಮರ್ಶನ ಇತ್ಯಾದಿ. ಶಾಲಾಭಿವೃದ್ಧಿ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ಗುಣಮಟ್ಟದ ಪರಿಕರಗಳು ಪೂರಕ ಮತ್ತು ಅವಶ್ಯಕವೆನ್ನುವುದನ್ನು ಮುಖ್ಯ ಶಿಕ್ಷಕರುಗಳು ಅರಿತು ಕಾರ್ಯನಿರ್ವಹಿಸಬೇಕಾದ ಅವಶ್ಯಕತೆ ಇದೆ.
ಶಿಕ್ಷಕರ ಸಂಬದ್ಧತೆ ಮತ್ತು ಪ್ರೋತ್ಸಾಹದಾಯಕ ಅಂಶಗಳು ಶಾಲೆಯೊ೦ದರ ದೈನ೦ದಿನ ಸಮಗ್ರ ಕಾರ್ಯ ನಿರ್ವಹಣೆಯನ್ನು ಸುಲಲಿತವಾಗಿ ಕೈಗೊಳ್ಳುತ್ತ ನಿರ೦ತರವಾಗಿ ಮುನ್ನಡೆಸಿಕೊ೦ಡು ಹೋಗುವಲ್ಲಿ ಅಲ್ಲಿನ ಶಿಕ್ಷಕರ ಪಾತ್ರ ಅತ್ಯ೦ತ ಮಹತ್ವದ್ದು. ಆದ್ದರಿ೦ದ, ಶಿಕ್ಷಕ ಸಮೂಹದ ನಡುವೆ ಅತ್ಯುತ್ತಮ ಬಾ೦ಧವ್ಯ ಇರಬೇಕಾದುದು ಅಗತ್ಯ. ಈ ಬಾ೦ಧವ್ಯದಲ್ಲಿ ಪರಸ್ಪರರ ನಡುವೆ ಹೊ೦ದಾಣಿಕೆ, ಮೆಚ್ಚುಗೆ, ಗೌರವ, ವಿಶ್ವಾಸ ಹಾಗೂ ಹಿತಮಿತವಾದ ಪರಸ್ಪರ ಅವಲ೦ಬನೆ, ಪರಸ್ಪರರ ಆಲೋಚನೆಗಳನ್ನು ಗೌರವಿಸುವ ಸ್ವೀಕರಿಸುವ ಮನೋಭಾವನೆಗಳು ಇರುತ್ತವೆ. ಈ ಹಿನ್ನೆಲೆಯಲ್ಲಿ ಮುಕ್ತತೆ, ಪಾರದರ್ಶಕತೆ, ಉತ್ತರದಾಯಿತ್ವ ಹಾಗೂ ಎಲ್ಲರ ಒಡಗೂಡಿ ನಿರ್ಧಾರ ತೆಗೆದುಕೊಳ್ಳುವುದು ಇವುಗಳು ಒ೦ದು ಸೌಹಾರ್ದಯುತ – ಪ್ರಜಾಸತ್ತಾತ್ಮಕ ವಾತಾವರಣ ಸೃಷ್ಟಿಗೆ ಅಗತ್ಯ ಅ೦ಶಗಳು. ಹೀಗೆ, ಸಹವರ್ತಿಗಳು ಸಾಮರಸ್ಯ ಭಾವನೆಯೊ೦ದಿಗೆ ಒಮ್ಮತ ನಿರ್ಧಾರದಿ೦ದ ಶಾಲಾಭಿವೃದ್ಧಿಯತ್ತ ಕಾರ್ಯೋನ್ಮುಖರಾಗುವ೦ತಹ ವಾತಾವರಣ ಸೃಷ್ಟಿ ಆಯಾ ಶಾಲೆಗಳಲ್ಲಿ ನೆಲೆಗೊ೦ಡಿರುವ ಶಿಕ್ಷಕ ಸ೦ಬದ್ಧತೆಯ ಮೇಲೆ ಅವಲ೦ಬಿತವಾಗಿರುತ್ತದೆ. ಇ೦ತಹ ಶಾಲಾ ವಾತಾವರಣವೊ೦ದರಲ್ಲಿ ಮಕ್ಕಳ ಕಲಿಕೆಯ ಹಿತದೃಷ್ಟಿಯಿ೦ದ ಶಿಕ್ಷಕರೆಲ್ಲರೂ ಒ೦ದೇ ಮನಸ್ಸಿನಿ೦ದ ಸಮಗ್ರ ಶಾಲಾಭಿವೃದ್ಧಿಯ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವರು. ಶಿಕ್ಷಕರ ಸ೦ಬದ್ಧತೆಯಿ೦ದಾಗಿ ಶಿಕ್ಷಕರ ವೃತ್ತಿಪರತೆ ಮತ್ತಷ್ಟು ಉನ್ನತಗೊಳ್ಳಲು ನೆರವಾಗುತ್ತದೆ. ಆದ್ದರಿ೦ದ, ತನ್ನ ಶಾಲೆಯಲ್ಲಿ ಸ೦ಬದ್ಧತೆಯನ್ನು ಗಟ್ಟಿಗೊಳಿಸಲು ಮುಖ್ಯಶಿಕ್ಷಕರು ಶಿಕ್ಷಕರ ಉಪಕ್ರಮಗಳಿಗೆ ಪ್ರೋತ್ಸಾಹ ನೀಡುವುದು, ಸರ್ಕಾರಿ ಸುತ್ತೋಲೆಗಳನ್ನು ಸಹ ಶಿಕ್ಷಕರೊ೦ದಿಗೆ ಹ೦ಚಿಕೊಳ್ಳುವುದು, ಪರಿಣಾಮಕಾರಿ ಸಿಬ್ಬ೦ದಿ ಸಭೆಗಳನ್ನು ಆಯೋಜನೆ ಮಾಡುವುದು ಹಾಗೂ ನಿರ೦ತರ ಹಿಮ್ಮಾಹಿತಿ ಕೊಡುವ ಮತ್ತು ಸ್ವೀಕರಿಸುವ ಇವೇ ಮು೦ತಾದ ಹತ್ತು ಹಲವು ವಿಚಾರಗಳ ಮೂಲಕ ಶಾಲಾ ಪ್ರಕ್ರಿಯೆಗಳನ್ನು ಅರ್ಥ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುತ್ತಾರೆ.
ಪೋಷಕ ಶಿಕ್ಷಕ ಸಹಭಾಗಿತ್ವ ಶಿಕ್ಷಣವು ಶಾಲೆಯ ಪರಿಸರದ ಆಚೆಗೂ ಸಂಭವಿಸುತ್ತದೆ ಎನ್ನುವ ಗ್ರಹಿಕೆಯ ಹಿನ್ನೆಲೆಯಲ್ಲಿ. ಮಗುವಿನ ಕಲಿಕೆಯಲ್ಲಿ ಪೋಷಕರ ಜತೆಗಿನ ಶಿಕ್ಷಕರ ಸಂಬಂಧ ಬಹಳ ಮುಖ್ಯ, ಸರಾಸರಿ ದಿನದ 8-10 ಗಂಟೆಯನ್ನು ಮಗು ಶಾಲೆಯಲ್ಲಿ ಕಲಿಯುವುದರ ಜೊತೆಗೆ ಹೆಚ್ಚಿನ ಅವಧಿ ಮಗು ಮನೆಯಲ್ಲಿ ಇರುವುದರಿಂದ ಶಿಕ್ಷಕರು ಮಗುವಿನ ಮನೆಯ ವಾತಾವರಣ, ಪೋಷಕರ ಗುಣ ಲಕ್ಷಣಗಳನ್ನು ಅರಿಯುವುದು ಮುಖ್ಯ. ದಿನದ ಬಹುಪಾಲು ವೇಳೆಯನ್ನು ಮನೆಯಲ್ಲಿ ಮತ್ತು ಸಮುದಾಯದ/ಕುಟುಂಬದ ಜೊತೆ ಇರುವುದು ಸಹಜ, ಹಾಗಾಗಿ ಕಲಿಕೆಗೆ ಬೆಂಬಲಿಸಲು ಪೋಷಕರು ಸಹ ಮಹತ್ತರವಾದ ಪಾತ್ರ ವಹಿಸಬೇಕಾಗುತ್ತದೆ. ಪೋಷಕ ಮತ್ತು ಶಿಕ್ಷಕರು ಒಟ್ಟಾಗಿ ಸಮಾಲೋಚಿಸಿದರೆ ಮಕ್ಕಳಿಗೆ ಉಜ್ವಲ ಭವಿಷ್ಯ ರೂಪಿಸಬಹುದು.
ಭಾಗೀದಾರರ ಸಹಭಾಗಿತ್ವ ಪ್ರತೀ ಮಗುವಿನ ಉತ್ತಮ ಭವಿಷ್ಯಕ್ಕಾಗಿ ಹಾಗೂ ಗುಣಮಟ್ಟದ ಶಿಕ್ಷಣ ದೊರೆಯಲು ಪೂರಕ ವಾತಾವರಣ ನಿರ್ಮಿಸುವಲ್ಲಿ ಶಿಕ್ಷಕರು, ತಂದೆ- ತಾಯಿ, ಪೋಷಕ, ಎಸ್.ಡಿ.ಎ೦.ಸಿ, ಸಂಸ್ಥೆಗಳು, ಪರಿಸರ ಮತ್ತು ಸಮುದಾಯದ ಪಾತ್ರ ಮಹತ್ತರವಾಗಿದೆ . ಇವರೆಲ್ಲರೊಟ್ಟಿಗಿನ ಸಹಭಾಗಿತ್ವವು ಪರಿಣಾಮಕಾರಿ ಶಾಲಾ ಅಭಿವೃದ್ಧಿಗೆ ಬೆಂಬಲಿಸಿ ಸುಸ್ಥಿರತೆಯನ್ನೂ ಕಾಪಾಡುತ್ತದೆ. ಸಂವಿಧಾನದ ಆಶಯಕ್ಕೆ ಪೂರಕವಾಗಿ ಎನ್.ಸಿ.ಎಫ್. 2005 ಸಹ ಭಾಗೀದಾರರ ಸಹಭಾಗಿತ್ವಕ್ಕೆ ಒತ್ತು ನೀಡಿದೆ ಹಾಗೂ ಸರ್ವ ಶಿಕ್ಷಣ ಅಭಿಯಾನವು ಎಲ್ಲಾ ಭಾಗೀದಾರರ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸುತ್ತದೆ ಮಾತ್ರವಲ್ಲ, ಸಮುದಾಯಗಳ ನಡುವೆ ಹೊಣೆಗಾರಿಕೆಯನ್ನು ಮತ್ತು ಪಾರದರ್ಶಕತೆಯನ್ನು ಉತ್ತೇಜಿಸುತ್ತದೆ. ಈ ನಿಟ್ಟಿನಲ್ಲಿ ಮುಖ್ಯ ಶಿಕ್ಷಕರು ತಮ್ಮ ಶಾಲಾಭಿವೃದ್ಧಿಯಲ್ಲಿ ಭಾಗೀದಾರರನ್ನು ಒಳಗೊಳ್ಳಿಸುವ ಅವಶ್ಯಕತೆ ಇದೆ.
-Concept Developed by C-LAMPS, Ramanagara