ಉದ್ಯಾನವನದಲ್ಲಿನ ಚೆಂದದ ಕಾಬಾಳೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಬೇಸಿಗೆ ರಜೆ ಬಂತೆಂದರೆ ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಓದುವ ಕಿರಿಕಿರಿ, ಮನೆಗೆಲಸ ಇಲ್ಲದೆ ಹಾಯಾಗಿರಬಹುದೆಂದುಕೊಳ್ಳುವುದು ಸಹಜ. ಬೆಳಿಗ್ಗೆ ವಾಕಿಂಗ್, ಜಾಗಿಂಗ್, ಮಧ್ಯಾಹ್ನ ಕಂಪ್ಯೂಟರ ಕಲಿಕೆ ಮತ್ತು ಆಟ, ಸಾಯಂಕಾಲ ರಿಂಗ್, ಬ್ಯಾಡಮಿಂಟನ್ ಆಟ, ಹೀಗೆ ರಜೆಯಲ್ಲಿ ಮಕ್ಕಳ ವೇಳಾ ಪಟ್ಟಿ ಸಿದ್ದವಾಗುತ್ತದೆ.
ಮುಂಜಾವಿನ ವಿಹಾರಕ್ಕಾಗಿ ನಾನು ಮಕ್ಕಳಾದ ಸಂಜು, ತೇಜುರೊಂದಿಗೆ ಹೊರತಾಣದಲ್ಲಿರುವ ಪ್ರಕೃತಿ ನಗರದ ಗಾರ್ಡನ್‍ಗೆ ಹೋಗಿದ್ದೇವು. ಅಲ್ಲಿ ತರತರಹದ ಹೂಗಳನ್ನು ನೋಡಿ ಮಕ್ಕಳು ಖುಷಿಯಿಂದ ಇದು ಯಾವ ಹೂವು, ಇದರ ಹೆಸರೇನು ಎಂದು ಚರ್ಚಿಸುತ್ತಾ ಸಾಗಿದೆವು. ಹೂಗಳ ಸಂಖ್ಯೆ ಅಷ್ಟೇನು ಹೆಚ್ಚಿಲ್ಲದಿದ್ದರೂ ಹಲವು ಬಗೆ ಹೂಗಳಾದ ಬ್ಲ್ಯಾಕ್‍ಬೆರ್ರಿ ಲಿಲಿ, ಕಾಬಾಳೆ (ಕೆನ್ನಾ) ಬೊಗೊನ್ ವಿಲ್ಲಿ ಮುಂತಾದವುಗಳು ಮಕ್ಕಳ ಗಮನಸೆಳೆದವು.
ಬಣ್ಣ ಬಣ್ಣದ ಹೂಗಳನ್ನು ನೋಡಿ ಆಶ್ಚರ್ಯದಿಂದ ಸಂಜು ಕೇಳಿದಳು, ಇದು ಯಾವ ಹೂವು? ನಾನು ಹೇಳಿದೆ, ಇದು ಕಾಬಾಳೆ ಹೂ. ನಾನು ಹೈಸ್ಕೂಲ್ ಕಲಿಯುವಾಗ ಮನೆಯ ಹಿತ್ತಲಲ್ಲಿ ಮೂರು ಬಗೆಯ ಕಾಬಾಳಿಗಳನ್ನು ಬೆಳೆಸಿದ್ದೆ. ಅಡುಗೆ ಮನೆ ನೀರು ಅವುಗಳಿಗೆ ಹೋಗುವ ಹಾಗೆ ಮಾಡಿದ್ದೆ ಆದ್ದರಿಂದ ಅತೀ ದಟ್ಟವಾಗಿ ಬೆಳೆದಿದ್ದವು. ಇದರ ಎಲೆಗಳನ್ನು ಊಟಕ್ಕೆ ಪ್ಲೇಟ್‍ನ ಹಾಗೆ ಬಳಸುತ್ತಿದ್ದೇವು. ಪೂಜಾ ಮಾಡುವ ಸಂದರ್ಭದಲ್ಲಿ ಬಾಳೆ ಗಿಡದ ಬದಲು ಈ ಕಾಬಾಳೆಗಳನ್ನು ಇಡುತ್ತಿದ್ದೆವು.

3..jpg4..jpg

ತೇಜು: ಇವು ಏಷ್ಟು ತರಹದ ಬಣ್ಣದ ಹೂಗಳನ್ನು ಬಿಡುತ್ತವೆ?
ಸಂಜು: ಇದರಲ್ಲಿ ಎಷ್ಟು ಬಗೆಗಳಿವೆ. ಇದರ ವೈಜ್ಞಾನಿಕ ಹೇಸರೇನು?
ನಾನು: ನಿಧಾನ, ನಿಧಾನ, ಒಂದೊಂದಾಗಿ ಹೇಳುತ್ತೇನೆ ಎನ್ನುತ್ತಾ ವಿವರಿಸಿದೆ.
ಇದರ ಹೆಸರು ಕಾಬಾಳೆ (ಕೆನ್ನಾ) ಇದರ ಸಾಮಾನ್ಯ ಹೆಸರು: ಇಂಡಿಯನ್ ಶಾಟ್. ಇದರ ಹುಟ್ಟು ಸ್ಥಳ ಮಧ್ಯದಕ್ಷಿಣ ಅಮೇರಿಕಾ ಮತ್ತು ವೆಸ್ಟ್ ಇಂಡಿಜ್‍ಗಳಾಗಿವೆ. ಕುಟುಂಬದ ಹೆಸರು ಸ್ಕೀಟಾ ಮಿನೇ.
ಇದು ಹಳದಿ ಮತ್ತು ಕೆಂಪು ಪುಷ್ಪಗಳಿರುವ ಎತ್ತರ ಬೆಳೆಯುವಂತಹದ್ದಾಗಿದೆ. ಉದಾಹರಣೆ: ಒಂದು – ಎರಡು ಮೀಟರ್ ಎತ್ತರ ಬೆಳೆಯುವ ನಮೂನೆಗಳು. ಬಿಳಿ, ಹಳದಿ, ಕಿತ್ತಳೆ, ತಿಳಿಗೆಂಪು, ಕೆಂಪು ಮತ್ತು ಕೆಸರಿ ಬಣ್ಣದ ಹೂ ಬಿಡುವ ಕೆನ್ನಾಗಳು.
45 – 105 ಸೆಂ.ಮೀ. ಎತ್ತರ ಬೆಳೆಯುವ ನಮೂನೆಗಳು: ತಿಳಿಗೆಂಪು, ಕಿತ್ತಳೆ, ಹಳದಿ, ಕೆಂಪು ಬಣ್ಣದ ಹೂ ಬಿಡುವ ಕಾಬಾಳೆಗಳು (ಕೆನ್ನಾ).
ಇವುಗಳಲ್ಲಿ ಕೆಲವೊಂದಕ್ಕೆ ಮಚ್ಚೆಗಳಿರುವ ಅಥವಾ ಗೆರೆಗಳಿರುವ ದಳಗಳುಳ್ಳ ಹೂಗಳು ಇರುವವು. ಕೆಲವೊಂದು ನಮೂನೆಗಳಲ್ಲಿ ಕಂಚುವರ್ಣದ ಅಥವಾ ವಿವಿಧ ವರ್ಣಗಳ ಎಲೆಗಳು ಇರುವುವು.
ನನ್ನ ವಿವರಣೆಯನ್ನು ಮಧ್ಯದಲ್ಲಿಯೇ ತಡೆದು ಸಂಜು ಕೇಳಿದಳು, ಬೆಂಗಳೂರಿನ ಲಾಲಬಾಗನಲ್ಲಿ ಇಂಥ ಹೂಗಳನ್ನು ನೋಡಿದ್ದೆವು. ದೊಡ್ಡದಾದ ಗೋಲಾಕಾರದ ಜಾಗದಲ್ಲಿ ಇವುಗಳನ್ನು ಬೆಳೆಸಿದ್ದರು. ಹೂಗಳು ಕೆಂಪಾಗಿ ನೋಡಲು ಎಷ್ಟು ಅಂದವಾಗಿ ಕಾಣುತ್ತಿದ್ದವು ಅಲ್ವಾ ತೇಜು.
ತೇಜು: ಹೌದು, ನನಗಿಂತ ಎತ್ತರವಾಗಿದ್ದವು. ಬಹಳಷ್ಟು ಹೂಗಳಿದ್ದವು. ಅಲ್ಲಿ ನಾವು ಫೋಟೋ ತೆಗೆದಿದ್ದೆವು.
ನಾನು: ಓಹೋ! ಹೌದು... ನಿಮಗೆ ನೇನಪಿದೆಯಾ.... ಎಷ್ಟು ಚೆನ್ನಾಗಿ ಹೂ ಬಿಟ್ಟಿದ್ದವು. ಇವುಗಳನ್ನು ಹೆಚ್ಚಾಗಿ ಮಡಿಗಳನ್ನು ಮಾಡಿ ಬೆಳೆಸುವರು. ಒಂದೇ ಬಣ್ಣದ ಹೂಗಳನ್ನು ಒಂದೆಡೆ ಇರುವಂತೆ ಗೋಲಾಕಾರ, ಚೌಕ, ತ್ರಿಭುಜಾಕಾರ ಹೀಗೆ ವಿವಿಧ ಆಕಾರದ ಮಡಿಗಳನ್ನು ಮಾಡಿ ಕೆನ್ನಾಗಳನ್ನು ಬೆಳೆಸುವರು.
ಸಂಜು: ಪಪ್ಪಾ ಇವುಗಳ ಬೀಜಗಳನ್ನು ಹಾಕಿ ಬೆಳೆಸಬೇಕಾ?
ನಾನು: ಹಾಗೇನಿಲ್ಲಾ ಈ ತರಹದ ಸಸ್ಯಗಳು ಬೀಜ ಅಥವಾ ಬೇರುಗಡ್ಡೆಗಳ ತುಂಡುಗಳಿಂದ ಬೆಳೆಸಬಹುದು. ಜೂನ್ ತಿಂಗಳಲ್ಲಿ ಮಡಿಗಳನ್ನು ತಯಾರಿಸಿ ಬೇರುಗಡ್ಡೆಗಳನ್ನು ನಾಟಿ ಮಾಡಬೇಕು. ಚೆನ್ನಾಗಿ ಬೇರು ಬಿಡುವಂತೆ ಮಾಡಲು ಮತ್ತು ಬೇರು ಕಾಂಡಗಳು ಕೊಳೆಯದಂತೆ ನೊಡಿಕೊಳ್ಳಲು ಒಂದು ಪದರು ಮರಳಿನ ಮೇಲೆ ಬೆರುಗಡ್ಡೆಗಳನ್ನಿಟ್ಟು ನಾಟಿ ಮಾಡಬಹುದು. ವರ್ಷದ ಅವಧಿಯಲ್ಲಿ ಸಸ್ಯಗಳು ಆಗಾಗ್ಗೆ ಹೂ ಬಿಡಬಹುದು. ಆದರೆ ಅಕ್ಟೋಬರನಿಂದ ಡಿಸೆಂಬರವರೆಗೆ ಮತ್ತು ಏಪ್ರೀಲ್‍ನಿಂದ ಜೂನ್‍ವರೆಗಿನ ಅವಧಿಯು ಹೂಗಳನ್ನು ಪಡೆಯಲು ಅತ್ಯತ್ತಮವಾದ ಸಮಯ.
ತೇಜು: ನಾವು ಅಕ್ಟೋಬರ್ ರಜೆಯಲ್ಲಿ ಬೆಂಗಳೂರಿಗೆ ಹೋಗಿದ್ದೆವು ಅಲ್ವಾ! ಅಕ್ಕಾ.
ಸಂಜು: ಹೌದು ಅಕ್ಟೋಬರ್‍ನಲ್ಲಿ ಹೋಗಿದ್ವಿ. ಎಷ್ಟು ಮಜವಾಗಿತ್ತು. ಲಾಲಬಾಗನಲ್ಲಿ ಹೂಗಳು ತುಂಬಿದ್ದವು.
ತೇಜು: ಪಪ್ಪಾ ಇವುಗಳ ಬೀಜ ಹೇಗಿರುತ್ತವೆ?
ನಾನು: ಕೆನ್ನಾ ಸಸ್ಯದ ಬೀಜಗಳು ಬಟಾಣಿ ಕಾಳುಗಳ ಗಾತ್ರದಷ್ಟು ಮತ್ತು ಕಪ್ಪಾದ ಬಣ್ಣ ಹೊಂದಿರುತ್ತವೆ. ಒಂದು ಹೂವಿನಿಂದ ಎರಡರಿಂದ ಏಂಟು ಬೀಜುಗಳನ್ನು ಪಡೆಯಬಹುದು. ಹಲವುಸಾರಿ ನೇರವಾಗಿ ನೇಲದಲ್ಲಿ ಹಾಕುವುದರಿಂದ ನಾಟಿಯಾಗದಿರಬಹುದು. ಏಕೆಂದರೆ ಬೀಜದ ಹೊರಾವರಣವು ಬಹಳ ಗಟ್ಟಿಯಾಗಿರುವುದು. ಬೀಜಗಳನ್ನು ಉಸುಕಿನ ಕಾಗದದಿಂದ ತಿಕ್ಕಿ ಅಥವಾ ಬೀಜದ ಸ್ವಲ್ಪ ಭಾಗವನ್ನು ಭ್ರೂಣಕ್ಕೆ ಗಾಯಗಳಾಗದಂತೆ ಕತ್ತರಿಸಿ ಬಿತ್ತುವುದರಿಂದ ಅಥವಾ ಬೀಜಗಳನ್ನು ರಾತ್ರಿಯಿಡೀ ನೀರಿನಲ್ಲಿ ಅಥವಾ ಸಗಣಿಯಲ್ಲಿಟ್ಟು ನಾಟಿ ಮಾಡಬಹುದು. ಆಗ ಬೀಜಗಳು ಅತ್ಯುತ್ತಮವಾಗಿ ಮೊಳಕೆಯೊಡೆಯುವವು.
ಸಂಜು, ತೇಜು: ಹಾಗಾದರೆ ನಾವು ಇದನ್ನು ನಮ್ಮ ಮನೆಯಲ್ಲಿ ಬೆಳೆಸೋಣ ಎಂದು ಖುಷಿಯಿಂದ ಹೇಳಿದರು .


ಲೇಖಕರು:
ಶ್ರೀ ಸಂಗಮೇಶ ವ್ಹಿ. ಬುರ್ಲಿ
(ರಾಜ್ಯಪ್ರಶಸ್ತಿ ಪುರಸ್ಕøತ ಶಿಕ್ಷಕರು)
ಬಂಜಾರಾ ಪ್ರೌಢಶಾಲೆ, ಬಂಜಾರಾ ನಗರ,
ಸೋಲಾಪೂರ ರಸ್ತೆ ವಿಜಯಪೂರ – 586103
ಮೋ:9060060300 - 9008930072
Email : svb1966bjp@gmail.com