ಮಾಡ್ಯೂಲ್ ೭- ಪುರುಷ ಪ್ರಧಾನತೆ ಭಾಗ ೧
ಉದ್ದೇಶ
- ಪುರುಷ ಪ್ರಧಾನತೆ ಶಬ್ದವನ್ನು ಪರಿಚಯ ಮಾಡಿಸುವುದು
- ಪುರುಷಪ್ರಧಾನತೆ ಎಂಬ ವ್ಯವಸ್ಥೆ ಹೇಗೆ ಕೆಲಸಮಾಡುತ್ತದೆ, ಈ ವ್ಯವಸ್ಥೆ ಯಾಕಿದೆ, ಇದರಿಂದ ಯಾರಿಗೆ ಲಾಭ? - ಇದು ಶಕ್ತಿಯುತವಾಗಿ ಮುಂದುವರೆಯಲು ಪೂರಕವಾದ ಅಂಶಗಳೇನು? - ರೂಢಾವಳಿಗಳು, ಇತ್ಯಾದಿಗಳ ಬಗ್ಗೆ ಮಾತನಾಡುವುದು
ಪ್ರಕ್ರಿಯೆ
ಕುಶಲೋಪರಿಯ ಮೂಲಕ ನಮ್ಮ ಮಾತುಕತೆಯನ್ನು ಶುರು ಮಾಡುವುದು. ಕಟ್ಟುಪಾಡುಗಳನ್ನು ಜ್ಞಾಪಿಸುವುದು - ಅವರು ಹೇಳಿಲ್ಲ ಅಂದರೆ ನಾವೇ ಒಂದೊಂದಾಗಿ ಹೇಳುವುದು.
- ಏನಾದ್ರೂ ಮಾತಾಡ್ಬೇಕಿದ್ರೆ ಕೈ ಎತ್ತಿ ಮಾತಾಡೋಣ
- ಬೇರೆಯವರು ಮಾತಾಡ್ತಿದ್ರೆ ಅವರನ್ನ interrupt ಮಾಡೋದಾಗ್ಲಿ, ನಗೋದು, ಅಣಕ ಮಾಡೋದಾಗ್ಲಿ ಮಾಡೋದು ಬೇಡ
- ಎಲ್ಲಾರೂ ಭಾಗವಹಿಸಬೇಕು
- ನೀವು ಗಲಾಟೆ ಮಾಡ್ತ ಇದರೆ ನಾವು ಸೈಲೆಂಟ್ ಆಗ್ತೀವಿ. ಆಗ್ಲೂ ಮಾತಾಡ್ತ ಇದ್ರೆ ನಾವು ವಾಪಸ್ ಹೊರಟು ಹೋಗ್ತೀವಿ
- ಫೋಟೋ ತೆಗೀವಾಗ ಫೋಸ್ ಕೊಡಬೇಡಿ
- ನಾವು ನಿಮಗೆ ಎಷ್ಟು ಮರ್ಯಾದೆ ಕೊಡ್ತಿವೋ ನಿವು ನಮಗೆ ಅಷ್ಟೇ ಮರ್ಯಾದೆ ಕೊಡಬೇಕು
ಹಿಂದಿನ ವಾರ ಏನು ಮಾತಾಡಿದ್ವಿ ಎಂದು ನೆನಪು ಮಾಡುವುದು. ಕಿಶೋರಿಯರು ಬರೆದ ದಿನಚರಿಯ ಪಟ್ಟಿಯನ್ನು ತೋರಿಸುವುದು.
ನೀವು ಈ ದಿನಚರಿಗಳನ್ನು ಬರೆದಾಗ ನಿಮ್ಮ ಗಮನಕ್ಕೆ ಬಂದ ಅಂಶಗಳೇನು? ಎಂದು ಪ್ರಶ್ನೆಯನ್ನು ಕೇಳುವುದು. ಪ್ರಾಂಪ್ಟ್ ಮಾಡಲು ಅಪ್ಪ ಏನ್ ಮಾಡ್ತ ಇದ್ರು, ಅಮ್ಮ ಏನ್ ಮಾಡ್ತಿದ್ರು. ಯಾರು ಹೊರಗಡೆ ಹೋಗ್ತಿದ್ರು, ಯಾರು ಮನೇನಲ್ಲಿದ್ರು. ನೀವೇನ್ಮಾಡ್ತಿದ್ರಿ ಎಂದು ಕೇಳುವುದು. ಯಾರ್ಯಾರು ಮಾಡೋದು ಸಿಮಿಲರ್ ಇತ್ತು, ಬೇರೆ ಬೇರೆ ಇತ್ತು ಹೀಗೆ ಪ್ರಾಂಪ್ಟ್ ಮಾಡೋದು . ಎಲ್ಲರೂ ಹೇಳಾದ ನಂತರ, ನೀವು ಹೇಳ್ತಿರೋದನ್ನ ನೋಡಿದರೆ ಅಮ್ಮ ಒಂದು ರೀತಿಯ ಕೆಲಸ ಮಾಡ್ತಾರೆ, ಅಪ್ಪ ಒಂದು ರಿತಿಯ ಕೆಲಸ ಮಾಡ್ತಾರೆ. ಆದ್ರೆ ಅಪ್ಪ ಮಾಡೋ ಕೆಲಸ ಅಮ್ಮ ಮಾಡೋದು, ಅಮ್ಮ ಮಾಡೋ ಕೆಲಸ ಅಪ್ಪ ಮಾಡೋದು ಅಂತ ಬದಲಾಯಿಸಿಕೊಳ್ಳಬಹುದ? ಉದಾಹರಣೆಗೆ - ಅಪ್ಪ ಅಡಿಗೆ ಮಾಡೋದು, ನೆಲ ಒರೆಸಿ ರಂಗೋಲಿ ಹಾಕೋದು. ನಿಮ್ಮ ಅಣ್ಣ/ ತಮ್ಮನ ಬದಲು ನೀವು ಅಂಗಡಿಗೆ ಹೋಗೋದು? ಇದನ್ನ ಕೇಳಿ ಕಿಶೋರಿಯರಿಗೆ ನಗು ಬರಬಹುದು ಅಥವ ಇದೆಲ್ಲ ಹೇಗೆ ಸಾಧ್ಯ ಅಂತ ಕೇಳಬಹುದು. ಮಹಿಳೆಯರಿಗೆ ಒಂದು ರೀತಿ ಕೆಲಸ ಇರುತ್ತೆ, ಗಂಡ್ಮಕ್ಳಿಗೇ ಒಂದು ರೀತಿಯ ಕೆಲಸ ಇರುತ್ತೆ ಅಂತಾನೂ ಹೇಳಬಹುದು. ಅವರು ಏನು ಹೇಳುತ್ತಾರೆ ಅನ್ನುವ ಆಧಾರದ ಮೇಲೆ ಇದನ್ನ ಕೇಳಿದ್ರೇನೆ ನಮಗೆ ನಗು ಬರುತ್ತೆ. ಇದನ್ನ ಊಹಿಸಿಕೊಳ್ಳೋಕೂ ಆಗಲ್ಲ. ಈ ರೀತಿ ಪುರುಷರು ಈ ಕೆಲಸ ಮಾಡ್ಬೇಕು, ಮಹಿಳೆಯರು ಈ ಕೆಲಸಾನೇ ಮಾಡ್ಬೇಕು ಅಂತ ಸಮಾಜ ಹೇಳುತ್ತೆ.
೧. ಆದ್ರೆ ನಾವು ಗಮನಿಸಿದ್ರೆ ಯಾರ್ಬೇಕಿದ್ರೂ ಯಾವ ಕೆಲಸ ಕೂಡ ಮಾಡಬಹುದಲ್ವ?
ಹೆಣ್ಮಕ್ಳು ಕೂಡ ಅಂಗಡಿಗೆ ಹೋಗೋದಿಕ್ಕೆ ಸಾಧ್ಯ ಅಲ್ವ? ಗಂಡ್ಮಕ್ಳೂನು ಅಡಿಗೆ ಮಾಡೋದಿಕ್ಕೆ ಸಾಧ್ಯ ಅಲ್ವ?
ಹೌದೋ, ಇಲ್ವೋ .. ಹೌದು ಎಂದು ಜೋರಾಗಿ ಹೇಳಿಸೋದು.
ಈ ರೀತಿ ಹೆಣ್ಮಕ್ಳು ಈ ರೀತಿ ಇರಬೇಕು, ಈ ಕೆಲಸಾನೇ ಮಾಡ್ಬೇಕು, ಈ ಕೆಲಸ ಮಾಡ್ಬಾರ್ದು, ಗಂಡ್ಮಕ್ಳು ಈ ರೀತಿ ಇರ್ಬೇಕು, ಈ ಕೆಲಸಾನೇ ಮಾಡ್ಬೇಕು ಈ ಕೆಲಸ ಮಾಡ್ಬಾರ್ದು, ಅನ್ನೋ ವ್ಯವಸ್ತೆಗೆ ಒಂದು ಹೆಸರಿದೆ.
೨. ಅದರ ಹೆಸರೇ ಪುರುಷಪ್ರಧಾನತೆ. ಏನು? ಪುರುಷಪ್ರಧಾನತೆ.
ಪುರುಷಪ್ರಧಾನತೆ ಎಂದು ಜೋರಾಗಿ ಹೇಳಿಸಿವುದು. ಬೊರ್ಡಿನ ಮೇಲೆ ಬರೆಯುವುದು. 20 ನಿಮಿಷ
ಇದಾದ ನಂತರ, ಇದನ್ನು ಅರ್ಥ ಮಾಡಿಕೊಳ್ಳೋಕೆ ಇನ್ನೊಂದು ಚಟುವಟಿಕೆ ಮಾಡೋಣ ಅಂತ ಹೇಳಿ ನಾಲ್ಕು ಗುಂಪುಗಳನ್ನು ಮಾಡುವುದು. ಗುಂಪುಗಳನ್ನು ಮಾಡಲು ಪೈಲಟ್, ಎಂಜಿನಿಯರ್, ಡಾಕ್ಟರ್, ಸೈಂಟಿಸ್ಟ್ ಎಂದು ಚೀಟಿಯನ್ನು ಎತ್ತಿಸುವುದು / ಅಥವ ಹೇಳಿಸುವುದು.
ಎಲ್ಲರಿಗೂ ಕೇಳಿಸುವಂತೆ ನಾವು ಒಂದು ಗಾದೆಯನ್ನು ಹೇಳುತ್ತೇವೆ (ಇವುಗಳನ್ನು ಪ್ರಿಂಟ್ ಮಾಡಿ ಅವರಿಗೆ ಚೀಟಿಗಳಂತೆ ನೀಡುವುದು) ಅದನ್ನು ನೀವು ಒಪ್ಪುತ್ತೀರ ಅಥವಾ ಒಪ್ಪುವುದಿಲ್ಲವೇ, ಏಕೆ?
ಎಂದು ನಿಮ್ಮ ಗುಂಪಿನಲ್ಲಿ ಚರ್ಚಿಸಿ ಬರೆಯಿರಿ.
ಗಾದೆಗಳು :
- ಅಳೋ ಗಂಡ್ಸನ್ನ , ನಗೋ ಹೆಂಗಸನ್ನು ನಂಬಬಾರದು
- ಗಂಡು ಕೂತು ಕೆಟ್ಟ, ಹೆಣ್ಣು ತಿರುಗಿ ಕೆಟ್ಟಳು
- ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ
ಒಂದೊಂದು ಗಾದೆಯ ಬಗ್ಗೆ ಚರ್ಚಿಸಿ ಬರೆಯಲು ೫ ನಿಮಿಷ ಸಮಯ ಇರುತ್ತದೆ ಎಂದು ಹೇಳುವುದು.
ಗಾದೆಗಳು ಗೊತ್ತಾಗಿಲ್ಲ ಎಂದರೆ ಅದರ ಅರ್ಥವನ್ನು ನಾವೇ ಹೇಳುವುದು. 25 ನಿಮಿಷ
ಇದಾದ ನಂತರ ದೊಡ್ಡ ಗುಂಪಿಗೆ ಬಂದು ಸೇರುವುದು. ಅಲ್ಲಿ ಒಂದೊಂದು ಗುಂಪಿನವರೂ ಬರೆದಿರುವುದನ್ನು ತಂದು ಪ್ರೆಸೆಂಟ್ ಮಾಡುತ್ತಾರೆ. ಅವರು ಗುಂಪಿನಲ್ಲಿದ್ದಾಗಲೇ ಯಾರಾದರೂ ಒಬ್ಬರನ್ನು ಅಥವ ಇಬ್ಬರನ್ನು ಪ್ರೆಸೆಂಟ್ ಮಾಡಲು ಆಯ್ಕೆ ಮಾಡಿಕೊಳ್ಳಿ ಎಂದು ಹೇಳಿ, ಆಯ್ಕೆ ಮಾಡಿಸಿ, ಕರೆದುಕೊಂಡು ಬರುವುದು 20 ನಿಮಿಷ
ಇದೆಲ್ಲಾ ಇವಾಗ ಇಲ್ಲ ಹಿಂದೆ ಇತ್ತು, ಇಲ್ಲಿಲ್ಲ ಅದು ಹಳ್ಳಿಗಳಲ್ಲಿ ಮಾತ್ರ ಇರೋದು ಅಂತ ಹೇಳಬಹುದು, ಇದೆಲ್ಲಾ ಸುಳ್ಳು ಅಂತಲೂ ಹೇಳಬಹುದು. ಹಿಂಗೆಲ್ಲಾ ಹೇಳಬಾರದು ಇದೆಲ್ಲಾ ತಪ್ಪು ಅಂತಲೂ ಹೇಳಬಹುದು.
ದೊಡ್ಡೋರು ಮಾಡಿರುವುದು ಅಂತ ಹೇಳಬಹುದು.
ಈ ಗಾದೆಗಳನ್ನೆಲ್ಲ ನಾವು ಈಗ ಬಳಸದೇ ಇರವಹುದು, ಅಥವ ಅದನ್ನ ನಮ್ಮ ಹಿರಿಯರು ಹೇಳಿರೋದು ಅಂತ ಬದಿಗಿಡಬಹುದು. ಆದರೆ ಅದರೆ ಬೇರೆ ಬೇರೆ version ಗಳನ್ನ ನಾವು ನೋಡ್ತಾನೇ ಇರ್ತೀವಿ ಅಲ್ವ?
೧. ಈಗ ನೀವು ಎಷ್ಟು ಜನ ಗಂಡುಮಕ್ಳು ಅತ್ತಿರೋದನ್ನ/ಅಳೋದನ್ನ ನೋಡಿದ್ದ್ದೀರ - ಒಂದ್ವೇಳೆ ಅತ್ತಿದ್ರೂ ಯಾವ ಕಾರಣಕ್ಕೆ ಅಳೋದು ಓಕೆ ಮಾಮೂಲಾಗಿ ? - (ಯಾರಾದ್ರೂ ಸತ್ತುಹೋದರೆ ಅಳಬಹುದು). ಆಮೇಲೆ ಅವರು ಅತ್ತರೆ ಅವನ್ನ ಏನು ಹೆಣ್ಮಕ್ಳ ಥರ ಅಳ್ತೀಯ, ಅಳುಮುಂಜಿ ನೀನು ಅಂತ ಎಲ್ಲ ಹೇಳ್ತೀವಿ
ಅದೇ ಥರ ಜಾಸ್ತಿ ನಗ್ತಾ ಇರೋ ಹೆಣ್ಮಕ್ಳನ್ನ ಏನಂತಾರೆ? ಆ ಹುಡ್ಗಿ ಚೆಲ್ಲು ಚೆಲ್ಲಾಗ್ ಆಡ್ತಾಳೆ ಅಂತ ಅಂತಾರಲ್ವ? ಚೆಂಗ್ಲು ಅಂತಾರೆ, ಗಂಭೀರವಾಗಿಲ್ಲ ಅಂದ್ರೆ ‘ಆ ಹುಡ್ಗಿ ಸರಿ ಇಲ್ಲ’ ಅಂತಾನೂ ಅನ್ಬಹುದಲ್ವ?
ಸ್ವಲ್ಪ ಜೋರಾಗಿ, ಜಾಸ್ತಿ ಮಾತಾಡಿದ್ರೆ ಬಜಾರಿ ಅಂತೀವಿ
೨. ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ
ಚಿಕ್ಕೋರಾಗಿದ್ದಾಗಿಂದಾನೂ ನಮ್ಮನ್ನ ನೀನು ಬೇರೆಯವರ ಮನೆಗೆ ಹೋಗಬೇಕಾಗಿರೋಳು. ಇದನ್ನೆಲ್ಲ ಕಲಿತುಕೊಬೇಕು ಅಂತ ಅಡಿಗೆ, ಕ್ಲೀನಿಂಗ್, ನಯ, ನಾಜೂಕು ಎಲ್ಲ ಕಲಿಸ್ತಾರೆ ತಾನೆ. ಆಮೇಲೆ ರೇಶನ್ ಕಾರ್ಡ್ ಹರಿದು ಕೊಡೋದು, ಅಲ್ಲಿರೋದು ನಮ್ಮನೆ ಇಲ್ಲಿ ಇರುವುದು ಸುಮ್ಮನೆ ಅಂತ ಎಲ್ಲ ಹೆಳ್ತಾರಲ್ವ?
ಯಾರಾದ್ರೂ ಹೆಣ್ಮಕ್ಳು ಮದುವೆ ಆದ್ಮೇಲೆ ಅಪ್ಪ ಅಮ್ಮನ ಜೊತೆಗೇ ಇರೋದನ್ನ ನೋಡಿದೀರ? ಎಲ್ಲೋ ರೇರ್ ಆಗಿ ಕೆಲವೊಂದು ಸಿಚುಯೇಶನ್ ನಲ್ಲಿ ನೋಡಿರ್ಬೋದು ಅಷ್ಟೆ., ಇಲ್ಲಾ ಅವ್ಳಿಗೂ ಅವ್ಳ ಅತ್ತಿಗೇಗೂ ಜಗ್ಳ ಆದ್ರೆ ಮೊದಲು ಬರೋ ಮಾತೇನೂ? ನಿನ್ ಮನೆಗೆ ನೀನು ಹೋಗು, ಇಲ್ಯಾಕಿದೀಯ ಅಂತ ಇಲ್ಲ ನಮ್ಮನೆ ವ್ಯವಹಾರದಲ್ಲಿ ನೀನ್ಯಾಕೆ ತಲೆ ಹಾಕ್ತಿಯ ಅಂತಾನೋ ಅಂತಾರೆ ಅಲ್ವ? ಗಂಡನ ಜೊತೆ ಅಮ್ಮನ ಮನೆಲೆ ಇದ್ರೆ ಆಗ ಏನಂತಾರೆ?
- ಮನೆ ಅಳಿಯನ್ ಮಾಡ್ಕೊಂಡಿದಾರೆ ಪಾಪ
- ಹೆಂಡ್ತಿ ಮನೆಮೇಲೆ ಆಧಾರ ಮಾಡ್ಕಂಡಿದ್ದಾನೆ, ಸರಿ ಇಲ್ಲ ಅವ್ನು
- ಇತ್ಯಾದಿ
೩. ಏನೂ ಕೆಲ್ಸ ಮಾಡದೇ ಮನೇನಲ್ಲೇ ಇರೋ ಗಂಡಸನ್ನ ನೋಡಿದೀರ? (ನೋಡಿದೀವಿ ಅಂದ್ರೆ ಅವರನ್ನು ಪ್ರೋಬ್ ಮಾಡುವುದು)
ಅವರನ್ನ ಏನಂತಾರೆ?
ಅವ್ರನ್ನ ಕೈಲಾಗದೋರು, ಬೇಜಾವಾಬ್ದಾರಿ ಅಂತ ಎಲ್ಲ ಬೈತಾರಲ್ವ?
ನಿಮ್ಮಲ್ಲೇ ಹಿಂದಿನ್ ವಾರ ಯಾರೋ ಹೇಳಿದ್ರಪ್ಪ, ಗಂಡ್ಮಕ್ಳು ಅಂದ್ರೆ ಹೊರ್ಗಡೆ ಹೋಗಿ ದುಡೀಬೇಕು ಅಂತ.
ಆಮೇಲೆ ಹೆಣ್ಮಕ್ಳು ಈಗ ಹೊರಗಡೆ ಹೋಗಿ ಓದ್ತಾರೆ, ಕೆಲಸ ಮಾಡ್ತಾರೆ. ಆದರೂನು ಈಗ ನೀವು ನಿಮ್ ಫ್ರೆಂಡ್ಸ್ ಒಟ್ಟಿಗೆ ಫಿಲ್ಮ್ ನೋಡೋಕೆ ಹೋಗ್ತೀನಿ ಅಂದರೆ ಏನೇಳ್ತಾರೆ?
ಜೊತೆಗೆ ಹೆಣ್ಮಕ್ಳು ಅವರು ಯಾವ ಕೆಲಸಕ್ಕೆ ಹೊರಗಡೆ ಹೋಗಿದಾರೋ ಅದನ್ನಷ್ಟೇ ಮಾಡಿ ಬರಬೇಕು. ಎಕ್ಸ್ಟ್ರಾ ಏನೂ ಮಾಡಂಗಿಲ್ಲ, ಅಲ್ವ?
ಹಾಗಾಗಿ ಗಾದೆಗಳನ್ನ ಡೈರೆಕ್ಟ್ ಆಗಿ ಬಳಸದೇ ಇದ್ರೂನೂ ಅದರಲ್ಲಿರೋ ಅಂಶಗಳನ್ನ ನಾವು ತರಹೇವಾರಿಯಾಗಿ ಡೇಲಿ ಬಳಸ್ತಾ ಇರ್ತೀವಿ, ನೋಡ್ತಾ ಇರ್ತೀವಿ ನಮ್ಮ್ ಸುತ್ತ ಮುತ್ತ.
ಇದಕ್ಕೆಲ್ಲ ಏನು ಕಾರಣ, ಯಾಕೆ ಹಿಂಗೆಲ್ಲ ಇದೆ ಇದ್ರಿಂದೆ ಏನು ಪರಿಣಾಮ ಆಗ್ತಿದೆ ನಮ್ಮ ಮೇಲೆ ಅನ್ನೋದನ್ನ ನಾವು ಯೋಚಿಸ್ಬೇಕು.
ಸೋ ….
ಇವೆಲ್ಲಾದಕ್ಕೂ ಕಾರಣವಾಗಿರೋದೇ ಪುರುಷಪ್ರಧಾನತೆ.
ಇದನ್ನು ೩-೪ ಸಾರಿ ಜೋರಾಗಿ ಹೇಳಿಸುವುದು. 10 ನಿಮಿಷ
ನೀವೂ ಕೂಡ ಪುರುಷ ಪ್ರಧಾನತೆ ಅಂದ್ರೆ ಏನು ಅಂತ ನಿಮ್ಮ ಸುತ್ತಮುತ್ತ ಕೇಳ್ಕೊಂಡು ಬನ್ನಿ. ನಾವೂ ಕೂಡ ಅದ್ರಿಂದಾನೆ ಮುಂದಿನ ವಾರ ಮಾತುಕತೆನ ಸ್ಟಾರ್ಟ್ ಮಾಡಿ ಇದ್ರ ಬಗ್ಗೆ ಇನ್ನೂ ಜಾಸ್ತಿ ತಿಳ್ಕೊಳೋಣ.
ನಮಸ್ಕಾರ. (೫ ನಿಮಿಷ)
ಬೇಕಾಗುವ ಸಾಮಗ್ರಿಗಳು
- ಪ್ರೊಜೆಕ್ಟರ್
- ಪ್ರೊಜೆಕ್ಟರ್ ಕೇಬಲ್
- Extension cord
- Kishoris
- Daily routine activity detail
- Brown sheets
- ಗಾದೆಗಳ ಚೀಟಿ - 5
ಒಟ್ಟೂ ಫೆಸಿಲಿಟೇಟರ್‌ಗಳು - 3
ಇನ್‌ಪುಟ್‌ಗಳು
- ಕಿಶೋರಿಯರು ಬರೆದ ದಿನಚರಿಯ ಪಟ್ಟಿ
ಔಟ್‌ಪುಟ್‌ಗಳು
- ಕಿಶೋರಿಯರು ಬರೆದ ಗಾದೆಗಳ ವಿವರಣೆ