"ಜನಪದ ಕಲೆಗಳ ವೈಭವ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೧೮೫ ನೇ ಸಾಲು: ೧೮೫ ನೇ ಸಾಲು:
 
![{{Youtube|iv__LWOhMfA}} ಕಂಸಾಳೆ ವೀಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿರಿ]
 
![{{Youtube|iv__LWOhMfA}} ಕಂಸಾಳೆ ವೀಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿರಿ]
 
!
 
!
[Youtube|jeOq98qcczM&nohtml5 ನಂದಿ ಕುಣಿತ]
+
[{{Youtube|jeOq98qcczM&nohtml5}} ನಂದಿ ಕುಣಿತ]
 
![ {{Youtube|ZGja0OT0Jlk}} ವೀರಗಾಸೆ]
 
![ {{Youtube|ZGja0OT0Jlk}} ವೀರಗಾಸೆ]
 
|}
 
|}

೦೪:೨೮, ೧ ಅಕ್ಟೋಬರ್ ೨೦೧೯ ನಂತೆ ಪರಿಷ್ಕರಣೆ

ಪರಿಕಲ್ಪನಾ ನಕ್ಷೆ

ಹಿನ್ನೆಲೆ/ಸಂದರ್ಭ

ಗ್ರಾಮೀಣ ಬದುಕಿನ ಅನಕ್ಷರಸ್ಥರಲ್ಲಿನ ಜಾನಪದ ಕಲೆಗಳು, ಹಾಡು, ಗಾದೆ ನಗರ ಬದುಕಿನ ಜನಕ್ಕೆ ವಿಶಿಷ್ಟ ಸಂವೇದನೆಯನ್ನುಂಟು ಮಾಡಿವೆ. ಗ್ರಾಮಗಳ ದೈನಿಕ ಬದುಕು ಆರಂಭವಾಗುವುದೇ ಇಂಥ ಜನಪದ ಹಾಡು-ಹಬ್ಬ ಆಚರಣೆಗಳಿಂದ. ಇವೊತ್ತಿನ ವಿಜ್ಞಾನಯುಗ ಪರಂಪರಾಗತ ಕಲೆಗಳನ್ನು ಮರೆಸುವಂತೆ ನಾಗಾಲೋಟಕ್ಕೆ ಓಡುತ್ತಿದೆ. ಹೀಗಿದ್ದೂ ನಗರ ಬದುಕಿನ ಈ ಜನಕ್ಕೆ `ಜನಪದ' ಮನರಂಜನೆಯನ್ನೀಯುವ ಮಟ್ಟಕ್ಕೆ ಸೀಮಿತವಾಗಿದೆಯೇನೋ ಅನ್ನುವ ಸಂಶಯ ಮೂಡಿದೆ. ಇದು ವಾಸ್ತವವೂ ಕೂಡ.

ಈ ಜಾನಪದ ಪ್ರಕಾರವನ್ನು ಸಂಸ್ಕೃತಿಯ ಒಂದು ಭಾಗವೆಂದು ಭಾವಿಸಬೇಕಾಗಿರುವುದರಿಂದ ಇದರ ಉಳಿವು ನಮ್ಮ ಕೈಲಿದೆ. ಇದಕ್ಕಾಗಿ ಸರಕಾರ ಪ್ರೋತ್ಸಾಹಕವಾಗಿ ಜಾನಪದ ಅಕಾಡೆಮಿ ಸ್ಥಾಪಿಸಿ ಲಕ್ಷಾಂತರ ರುಪಾಯಿ ಖರ್ಚಿಸುತ್ತಿದೆ. ಕಲಾವಿದರಿಗೆ ಪ್ರಶಸ್ತಿ, ಪುರಸ್ಕಾರ ನೀಡಿ ಗ್ರಾಮೀಣ ಪ್ರತಿಭೆಗಳನ್ನು ಹುಡುಕಿ ಈ ಪ್ರಕಾರದ ಜೀವಂತಿಕೆಗೆ ಶ್ರಮಿಸುತ್ತಿದೆ. ಕೆಲವು ವರ್ಷಗಳ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕ ಜನಪದ ಕಲೆಗಳನ್ನು ಪರಿಚಯಿಸುವ ಕೃತಿಯೊಂದನ್ನು ಹೊರತಂದಿದೆ. ಇದರ ಸಂಪಾದಕರು ಜಾನಪದ ಚಿಂತಕ ಗೊ. ರು. ಚನ್ನಬಸಪ್ಪ ಅವರು.

ಈ ಕೃತಿಯಲ್ಲಿ ಹತ್ತಾರು ವಿದ್ವಾಂಸರು ನಶಿಸುತ್ತಿರುವ ಜಾನಪದ ಕಲೆಗಳನ್ನು ಗುರ್ತಿಸಿ, ಮಾಹಿತಿ ಸಂಗ್ರಹಿಸಿದ್ದಾರೆ. ಹೀಗಾಗಿ ಕರ್ನಾಟಕದ ನೂರಾರು ಜನಪದ ಕಲೆಗಳ ಪರಿಚಯ ರೇಖಾಚಿತ್ರ ಹಾಗೂ ಛಾಯಾಚಿತ್ರಗಳಿಂದ ಸುಂದರವಾಗಿ ಮೂಡಿಬಂದಿದೆ. ಅಪರೂಪದ ದಾಖಲೆಗಳ ಈ ಕೃತಿಯನ್ನು ಹೊರತರಲು ಹಿರಿಯರಾದ ಗೊ. ರು. ಚನ್ನಬಸಪ್ಪ ಅವರು ಪಟ್ಟ ಶ್ರಮ ದಾಖಲಾರ್ಹ ಹಾಗೂ ಅಭಿನಂದನೀಯ. ಅಂಥ ಕಲೆಗಳಲ್ಲಿ ಕೆಲವು ಮಹತ್ವದ್ದನ್ನು ವಿಶ್ವಾದ್ಯಂತದ ಕನ್ನಡಿಗರಿಗೆ ಈ ಮೂಲಕ ಪ್ರತೀ ತಿಂಗಳು ಪರಿಚಯಿಸುತ್ತೇವೆ. ಆ ನಿಟ್ಟಿನಲ್ಲಿನ ಮೊದಲ ಭಾಗವಾಗಿ ಕಂಸಾಳೆ ಹಾಗೂ ಉಮ್ಮತ್ತಾಟ್ ಎಂಬ ಜಾನಪದ ಕಲೆಗಳು ಇಲ್ಲಿದೆ.

ಕಲಿಕೋದ್ದೇಶಗಳು

* ನಮ್ಮ ನಾಡಿನ ಜಾನಪದ ಕಲೆ ಉಳಿಸುವದು.

* ಜಾನಪದರ ಕಲೆಗಳಿಂದ ಪುರ್ವಜರನ್ನು ನೆನಸಿಕೊಳುವದು.

* ಈ ಕಲೆಗಳು ನಮ್ಮ ನಾಡಿನ ವ್ಯೆವಿದ್ಯತೆಯನ್ನು ತಿಳಿಸುವದು.

ಕವಿ ಪರಿಚಯ

ಶಿಕ್ಷಕರಿಗೆ ಟಿಪ್ಪಣಿ

ಕಂಸಾಳೆ :

ಶಿವ ಮತ್ತು ಶರಣರ ಮಹಿಮೆಗಳನ್ನು ಕಥಾರೂಪದಲ್ಲಿ ಹಾಡುತ್ತ ಒಂದು ವಿಶಿಷ್ಟ ಜಾನಪದ ಸಂಪ್ರದಾಯವನ್ನು ಬೆಳಸಿಕೊಂಡು ಬಂದಿದೆ ಕಂಸಾಳೆ ಪ್ರಾಕಾರ. ಕಂಸಾಳೆಯ ಕಲಾವಿದರು ಪ್ರಮುಖವಾಗಿ ಮೈಸೂರು ಜಿಲ್ಲೆಯ ಮಲೆ ಮಹದೇಶ್ವರನ ಭಕ್ತರು. ಮಂಡ್ಯ-ಬೆಂಗಳೂರು ಜಿಲ್ಲೆಗಳಲ್ಲೂ ವಿರಳವಾಗಿ ಕಾಣುತ್ತಾರೆ. ಜಾನಪದ ಸತ್ವವುಳ್ಳ ಕಥನಗೀತೆ, ಕಂಚಿನ ತಾಳಗಳ ವಿಶಿಷ್ಟವಾದ ಶಬ್ದ ಹಾಗೂ ಕಲಾವಿದರ ಕೈಚಳಕಗಳ ಸುಂದರ ಸಮ್ಮಿಳನದಿಂದಾಗಿ ಈ ಕಲೆ ವಿಸ್ಮಯಕಾರಕವಾಗಿ ಜನಮನವನ್ನು ತಣಿಸಿ ಶ್ರವಣಾನಂತವುಂಟುಮಾಡುತ್ತದೆ. `ಕಂಸಾಳೆ’ ಎನ್ನುವುದು ಕಲಾವಿದರು ಕೈಯಲ್ಲಿ ಹಿಡಿಯುವ ಒಂದು ಬಗೆಯ ವಾದ್ಯ ವಿಶೇಷ. ಭಿಕ್ಷಾಪಾತ್ರೆಯಂತಿರುವ, ಮಧ್ಯೆ ದಾರದ ಕುಚ್ಚು ಕಟ್ಟಿದ, ಅಂಗೈ ಅಗಲದ ಮಿಶ್ರಲೋಹದ ಒಂದು ಬಟ್ಟಲು ಎಡಗೈಯಲ್ಲಿದ್ದರೆ, ಬಲಗೈಯಲ್ಲಿ ಮಟ್ಟಸವಾದ ತಾಳವಿರುತ್ತದೆ. ಮುಚ್ಚಳದ ನಡುವಿನ ಹೊರಭಾಗ ಉಬ್ಬಿರುತ್ತದೆ. ಆ ಉಬ್ಬಿನ ರಂಧ್ರದಿಂದ ಬಿಗಿದ ನೀಳವಾದ ದಾರ ಗೊಂಡೆಗಳಿಂದ ಅಲಂಕೃತವಾಗಿ ಬಲಗೈ ಮೇಲಿಂದ ಇಳಿಬಿದ್ದಿರುತ್ತದೆ.ಸಾಮಾನ್ಯವಾಗಿ ಕಂಸಾಳೆಯ ಮೇಳದಲ್ಲಿ ಮೂರು ಜನರಿರುತ್ತಾರೆ. ವೃತ್ತಿ ಗಾಯಕರಾದ ಕಂಸಾಳೆಯವರಿಗೆ ವಿಶೇಷವಾದ ವೇಷಭೂಷಣಗಳೇನೂ ಇರುವುದಿಲ್ಲ. ಸಾಧಾರಣವಾಗಿ ಅಂಗಿ, ಪಂಚೆ, ಹೆಗಲಲ್ಲಿ ಜೋಳಿಗೆ, ಕೊರಳಲ್ಲಿ ರುದ್ರಾಕ್ಷಿ, ಹಣೆಯಲ್ಲಿ ವಿಭೂತಿ, ಇವರಲ್ಲಿ ಇಬ್ಬರು ಏಕತಾರಿ ಕಂಜರ ಹಿಡಿದು ಹಿಮ್ಮೇಳದವರಾಗುತ್ತಾರೆ. ಇನ್ನೊಬ್ಬ ಮುಮ್ಮೇಳದವನಾಗಿ ನಡುವೆ ಕಂಸಾಳೆ ಹಿಡಿದು ಕುಳಿತಿರುತ್ತಾನೆ. ಎಡಗೈ ಬಟ್ಟಲನ್ನು ಮೇಲುಮುಖವಾಗಿ ಅಂಗೈ ಮೇಲೆ ಇರಿಸಿಕೊಂಡು. ಬಲಗೈಯ ಮೇಲು ತಾಳವನ್ನು ಕುಟ್ಟುವುದರಿಂದ ಕಂಚಿನ ಕಣಿ ಕಣಿ ನಾದ ಉಂಟಾಗುತ್ತದೆ. ವಿವಿಧ ಧಾಟಿಯ ವಿವಿಧ ತಾಳದ ಹಾಡುಗಳಿಗೆ ಈ ನಾದ ಮಧುರ ಹಿನ್ನಲೆಯಾಗುತ್ತದೆ. ಹಬ್ಬ ಹರಿದಿನಗಳಲ್ಲಿ, ಶಿವರಾತ್ರಿ-ನವರಾತ್ರಿ ಕಾಲದಲ್ಲಿ ಮಹದೇಶ್ವರನ ಜಾತ್ರೆ ಸಂದರ್ಭದಲ್ಲಿ ಕೈಯಲ್ಲಿ ಕಂಸಾಳೆ ಹಿಡಿದು, ಮಾದಯ್ಯನ ಕೋಲ (ನಾಗಬೆತ್ತ)ನ್ನು ಕಂಕುಳಲ್ಲಿಟ್ಟು ಕೊಂಡು, ಬುತ್ತಿಯ ಗಂಟನ್ನು ತಲೆಯ ಮೇಲಿಟ್ಟುಕೊಂಡು, ಯಾತ್ರೆ ಹೊರಡುವುದು ಮೈಸೂರು ಜಿಲ್ಲೆಯಲ್ಲಿ ಸಾಮಾನ್ಯ ದೃಶ್ಯ. ಮಲೆಯ ಮಹದೇಶನ ಜಾತ್ರೆಯಲ್ಲಿ ಕಂಸಾಳೆಯ ಪ್ರದರ್ಶನ ಕೇಂದ್ರವಾಗುತ್ತದೆ ಆ ಪ್ರದೇಶ. ಬೆಳದಿಂಗಳ ರಾತ್ರಿಯಲ್ಲಿ ಕಂಸಾಳೆಯ ಕಲಾವಿದರ ಹಲವಾರು ಗುಂಪುಗಳು ಅಲ್ಲಿ ಮೇಳ ನಡೆಸುತ್ತವೆ;

“ಕೂಗೋ ಕೂಗು ಮಾದೇವನ,

ಕೂಗಿದರೆ ದುಂಡು ಮಾದೇವನ,

ಕೂಗಿದರೆ ಕುಣಿಯುತ್ತ, ಬರುವನ ಮಾದೇವನ,

ಕೂಗಯ್ಯ ಮುದ್ದು ಮಾದೇವನ”

ಎಂಬತಹ ಸೊಲ್ಲುಗಳ ಹಿನ್ನಲೆಯಲ್ಲಿ ಕಂಚಿನ ತಾಳದ ಶಬ್ದ ಕರ್ಣಾನಂದವನ್ನುಂಟುಮಾಡುತ್ತದೆ.

ಕಂಸಾಳೆಯ ಕಲಾವಿದರಲ್ಲಿ ಮಹದೇಶ್ವರನ ಹುಟ್ಟು, ಬಾಲ್ಯ, ಬಾಲಲೀಲೆ, ಯೌವನ, ವಿನೋದ, ವಿರಸ, ಮುಪ್ಪು, ಮಹಿಮೆಗಳು ಕಂಠಸ್ಥವಾಗಿ ನಿಂತಿವೆ. ಈ ಕಾವ್ಯವನ್ನು ಇಡೀ ರಾತ್ರಿ ಹಾಡಿ ತಣಿಸುವ ಅವರ ಕಲೆಗಾರಿಕೆ ಮೆಚ್ಚುವಂತಹುದು, ಇದಲ್ಲದೆ ಕಲಾವಿದರು ಪಿರಿಯಾಪಟ್ಟಣದ ಲಾವಣಿ, ಸಾರಂಗಧರ, ಚೆನ್ನಿಗರಾಮ, ಘನಪತಿರಾಯ, ಬಾಲನಾಗಮ್ಮ, ಅರ್ಜುನ ಜೋಗಿ ಮುಂತಾದ ಜನಪದ ಕಥಾ ಪ್ರಸಂಗಗಳನ್ನೂ ಹಾಡುತ್ತಾರೆ. ಜನಪದ ಬೆಳಸಿಕೊಂಡು ಬರುತ್ತಿರುವ ಇವರ ಕಲೆ ಜಾನಪದ ಕ್ಷೇತ್ರದ ದೊಡ್ಡ ನಿಧಿಗಳಲ್ಲೊಂದಾಗಿದೆ.

ಕಂಸಾಳೆಯ ಕಲಾಪ್ರಕಾರಗಳಲ್ಲಿ `ಬೀಸುಕಂಸಾಳೆ’ಯು ವಿಶಿಷ್ಟ ಶೈಲಿಯದು. ಚಮತ್ಕಾರ, ಶ್ರಮ ಎರಡೂ ಒಟ್ಟಿಗೆ ಸೇರಿ ಅಭಿವ್ಯಕ್ತವಾಗುವ ಈ ಪ್ರದರ್ಶನಕ್ಕೆ ನಾಲ್ಕು ಜನ ಬೇಕು, ಒಬ್ಬಾತ ಮಧ್ಯೆ ಇದ್ದು ತಾಳಕ್ಕೆ ತಕ್ಕಂತೆ ತಲೆಯ ಮೇಲೆ, ಬೆನ್ನ ಹಿಂದೆ, ಕಾಲು ಕೆಳಗೆ, ಕುಳಿತು, ನಿಂತು, ಬಾಗಿ ಬಳುಕಿ, ಉರುಳಾಡಿ, ಸುತ್ತ ನಿಂತ ಮೂವರಿಗೆ ತಾಳಗಳನ್ನು ಕೊಡುತ್ತ, ನಿರ್ದಿಷ್ಟ ಲಯದಲ್ಲಿ ಬೀಸು ಕಂಸಾಳೆಯನ್ನು ಪ್ರದರ್ಶಿಸುತ್ತಾನೆ. ಹೀಗೆ ಆರಂಭವಾದ ಪ್ರದರ್ಶನ ಪರಾಕಾಷ್ಠೆಗೆ ಹೋದಾಗ ನಾಲ್ಕು ಜೊತೆ ಕಂಸಾಳೆಗಳ ತಾಳದ ಕಂಚಿನ ಸ್ವರ, ಮಿಂಚಿನ ವೇಗದ ಕೈ ಚಳಕ ನೋಟಕರನ್ನು ಮೂಕವಿಸ್ಮಯರನ್ನಾಗಿ ಮಾಡುತ್ತದೆ. ಎಷ್ಟೇ ಚುರುಕಿನಿಂದ ಕಲೆ ನಡೆದರೂ ಎಲ್ಲೂ ತಾಳ ತಪ್ಪದಂತೆ ಎಚ್ಚರ ವಹಿಸುವ ಕಲಾವಿದರ ಪರಿಪೂರ್ಣ ಕುಶಲತೆ ನಿಜಕ್ಕೂ ಸೋಜಿಗ ಪಡುವಂಥದು. ಗಾಯಕರು `ಲಿಂಗ ಬಾ, ಮುದ್ದು ಲಿಂಗ ಬಾ, ನಮ್ಮ ಮುದ್ದು ಮಾದಯ್ಯನ ಲಿಂಗ ಬಾ’-ಎಂಬ ಹಾಡನ್ನು ಲಯಬದ್ಧವಾಗಿ ತಾಳದೊಂದಿಗೆ ಹೊಂದಿಸಿಕೊಂಡೇ ಹಾಡುತ್ತಾರೆ.

ಕಲಾವಿದರು ಕಂಸಾಳೆಗೆ ಕಟ್ಟಿದ ದಾರದ ತುದಿಯನ್ನು ಹಿಡಿದುಕೊಂಡು ಬೀಸಿ ತಾಳ ಹಾಕುವುದರಿಂದ ಇದು `ಬೀಸು ಕಂಸಾಳೆ’ ಯಾಗಿದೆ. ಈ ದಾರ ಸುಮಾರು ಒಂದೊವರೆ ಅಥವಾ ಎರಡು ಅಡಿ ಉದ್ದವಿರುವುದರಿಂದ ಕಲಾವಿದ ದೇಹದ ಸುತ್ತಮುತ್ತ ಯಾವ ಭಾಗಕ್ಕಾದರೂ ತಿರುಗಿಸಿ ತಾಳ ಬಡಿಯಲು ಅವಕಾಶವಾಗುತ್ತದೆ. ಆದರೂ ಇದಕ್ಕೆ ಅತ್ಯಂತ ಕುಶಲತೆ ಹಾಗೂ ಅಭ್ಯಾಸ ಬೇಕಾಗುತ್ತದೆ. ವಿವಿಧ ಭಂಗಿಗಳಲ್ಲಿ ತಿರುಗುತ್ತ ಕಂಸಾಳೆಯನ್ನು ಬೀಸುತ್ತಿರುವಾಗ ಸ್ವಲ್ಪ ಲೆಕ್ಕಾಚಾರ ತಪ್ಪಿದರೂ ತಾಳ ತಪ್ಪಿ ಮೈಗೆ ಏಟು ಬೀಳುವ ಸಂಭವವುಂಟು. ಆದ್ದರಿಂದ ಕುಂತಾಡುವ ಅಥವಾ ನಿಂತಾಡುವ ಕಂಸಾಳೆಗಿಂತ ಬೀಸುಕಂಸಾಳೆ ಕ್ಲಿಷ್ಟವಾದ ಕಲೆ; ಅಷ್ಟೇ ರೋಮಾಂಚಕಾರಿ!

ಕಲಾವಿದರು ಬಿಗಿ ಕಸೆ ಅಂಗಿ, ಮೊಳಕಾಲಿನವರೆಗೆ ಬಿಗಿ ಕಾಸೆ ಕಟ್ಟಿದ ಪಂಚೆ ಧರಿಸಿರುತ್ತಾರ್‍ಹೆ;. ಕೆಲವು ಕಡೆ ಬರಿ ಮೈಯಲ್ಲಿದ್ದು ಚಡ್ಡಿ ಮಾತ್ರ ಧರಿಸಿರುವುದುಂಟು. ಉಳಿದಂತೆ ಮೈಕೈಗೆ ಅಲ್ಲಲ್ಲಿ ವಿಭೂತಿ ಧರಿಸಿರುತ್ತಾರೆ. ಕಿವಿಗೆ ರುದ್ರಾಕ್ಷಿಯಿರುತ್ತದೆ.

ಕಂಸಾಳೆಯವರನ್ನು `ದೇವರ ಗುಡ್ಡ’ ರೆಂದೂ ಕರೆಯುತ್ತಾರೆ. `ಗುಡ್ಡ’ ನೆಂಈಟPS;ದರೆ ಮಹದೇಶ್ವರನ `ಭಕ್ತ’, ಗುಡ್ಡನನ್ನು ಬಿಡುವುದು ಕಂಸಾಳೆ ಮನೆತನದ ವಿಶಿಷ್ಟ ಸಂಪ್ರದಾಯ. ವಂಶ ಪಾರಂಪರ್‍ಯವಾಗಿ ಬಂದ ಪದ್ಧತಿಯಂತೆ ಮನೆಗೊಬ್ಬ ಗುಡ್ಡನನ್ನು ಬಿಡುವುದು ಮಹದೇಶ್ವರನ ಒಕ್ಕಲಲ್ಲಿ ಕಡ್ಡಾಯ. ಅಲ್ಲದೆ ಕಂಟಕ ನಿವಾರಣೆ, ಕಷ್ಟ ಪರಿಹಾರದ ದೆಸೆಯಿಂದ ಮಾಡಿಕೊಂಡ ಹರಕೆಯಂತೆ ಗುಡ್ಡನನ್ನು ಬಿಡುವುದೂ ಉಂಟು. ಮಕ್ಕಳಾಗದವರು ಹೊತ್ತ ಹರಕೆಯ ಪರಿಣಾಮವಾಗಿ ಹುಟ್ಟಿದ ಹಿರಿಯ ಹೆಣ್ಣು-ಗಂಡು ಮಕ್ಕಳನ್ನು `ಗುಡ್ಡಿ’-`ಗುಡ್ಡ’ ರಾಗಿ ಬಿಡುವುದೂ ಉಂಟು. ಗುಡ್ಡಿ ಬಿಡುವ ಸಂಪ್ರದಾಯ ಇತ್ತೀಚೆಗೆ ಕಡಿಮೆಯಾಗಿದೆ. ಆಕೆ ಗುಡ್ಡಿಯಾದ ಮೇಲೆ ವಿವಾಹವಾಗುವಂತಿಲ್ಲ. ಇಷ್ಟಪಟ್ಟಲ್ಲಿ ಗುಡ್ಡನೊಬ್ಬನನ್ನು ಆಕೆ `ಸ್ವೀಕರಿ’ಸಬಹುದು.

ಗಂಡಸರನ್ನು`ಗುಡ್ಡ’ರಾಗಿ ಬಿಡುವ ಸಂಪ್ರದಾಯ ಈಗಲೂ ಇದೆ. ಗುಡ್ಡರಾದ ಮೇಲೆ ಕಂಸಾಳೆ ವಾದ್ಯ ಮತ್ತು ಪದಗಳನ್ನು ಕಲಿತು ಹಾಡುವ ಕಲೆಯನ್ನು ಬೆಳಸಿಕೊಂಡು ಕ್ರಮವಾಗಿ ಮಹದೇಶ್ವರನ ಸೇವೆ ಸಲ್ಲಿಸಬೇಕು.

ಉಮ್ಮತ್ತಾಟ್ :

ಕೊಡಗು ಜಿಲ್ಲೆಗೇ ಸೀಮಿತವಾದ ವಿಶಿಷ್ಟ ಕಲೆ `ಉಮ್ಮತ್ತಾಟ್’. ಪೌರಾಣಿಕ ಹಿನ್ನಲೆಯ ಈ ಕಲೆಯಲ್ಲಿ ಪಾಲುಗೊಳ್ಳುವವರೆಲ್ಲ ಮಹಿಳೆಯರೇ. ಸಮುದ್ರ ಮಥನ ಕಾಲದಲ್ಲಿ ವಿಷ್ಣು ಮೋಹಿನಿ ರೂಪ ತಾಳಿ ಉಮಾದೇವಿಯ ನಾನಾ ರೀತಿಯ ನೃತ್ಯಗಳಿಂದ ಸುರಾಸುರರ ಮನವೊಲಿಸಿ ಅವರನ್ನೆಲ್ಲ ಬೆರಗು ಮಾಡಿ ಅಮೃತವನ್ನು ಹಂಚಿದ ಸಂಕೇತವೇ `ಉಮ್ಮತ್ತಾಟ್’ ಎಂದು ಕೊಡವರ ನಂಬಿಕೆ.

`ಉಮ್ಮತ್ತಾಟ್’ ಒಂದು ಸೌಮ್ಯ ಕಲೆ. ಕೊಡಗಿನ ಮಹಿಳೆಯರು ತಮ್ಮ ವಿಶಿಷ್ಟ ಉಡುಪು ಧರಿಸಿ ಷಷ್ಠಿ, ದೀಪಾವಳಿ, ಸಂಕ್ರಾಂತಿ, ಯುಗಾದಿ ಹಬ್ಬಗಳಲ್ಲಿ ಈ ಕಲೆಯನ್ನು ಪ್ರದರ್ಶಿಸುತ್ತಾರೆ. ತಲೆಗೆ ವಸ್ತ್ರ, ತುಂಬು ತೋಳಿನ ಜಾಕೆಟ್, ಹಿಂದಕ್ಕೆ ನೆರಿಗೆ ಬಿಟ್ಟು ಉಟ್ಟ ಸೀರೆ, ಮಂಗಳಕರವಾದ ಬಳೆ, ಮಣಿಮಾಲೆ, ಹಣೆಗೆ ಕುಂಕುಮದ ಬೊಟ್ಟು -ಇದು ಉಮ್ಮತ್ತಾಟ್ ಕಲಾವಿದೆಯರ ವೇಷ. ತಲೆಗೆ ಕಟ್ಟುವ ವಸ್ತ್ರಗಳು ಸಾಮಾನ್ಯವಾಗಿ ಕೆಂಪು ಬಣ್ಣದ್ದಿರುತ್ತವೆ.

ಕಲಾವಿದೆಯರು ಮಧ್ಯಭಾಗದಲ್ಲಿ `ಕುತ್ತ ದೀಪ ತಳಿಯ ತಕ್ಕೆ ಬೊಳಕು ಮಡಗಿ’ ಅದರ ಸುತ್ತ ವೃತ್ತಾಕಾರದಲ್ಲಿ ಹಾಡಿಕೊಂಡು ಸುತ್ತುತ್ತಾರೆ. ಪ್ರತಿಯೊಬ್ಬ ಕಲಾವಿದೆಯೂ ಕೈಯಲ್ಲಿ ಕಂಚಿನ ತಾಳ ಹಿಡಿದಿರುತ್ತಾಳೆ. (ಕಂಚಿನ ಬಗ್ಗೆ ಅವರಿಗೆ ಪವಿತ್ರ ಭಾವನೆ. ಕೊಡವರಲ್ಲಿ ಗಂಡು ಮಗು ಹುಟ್ಟಿದರೆ ಅವನು ಶೂರ ಮತ್ತು ಧೀರನೆಂಬ ಸಂಕೇತಕ್ಕೆ ಗುಂಡು ಹಾರಿಸಿ ಸದ್ದು ಮಾಡಿದರೆ, ಹೆಣ್ಣು ಹುಟ್ಟಿದಾಗ ಕಂಚಿನ ಬಟ್ಟಲು ಬಡಿದು ಸದ್ದು ಮಾಡುತ್ತಾರೆ. ಕಂಚಿನ ದನಿ `ಓಂಕಾರ’ದ ಸ್ವರೂಪವಾದ್ದರಿಂದ ಅದು ಕುಲದೇವಿಯ ಆರಾಧನೆಯ ಸಂಕೇತವೆಂದು ಅವರ ನಂಬಿಕೆ. ಉಮ್ಮತ್ತಾಟ್ ಕೊಡವರ ಕುಲದೇವತೆ ಕಾವೇರಮ್ಮನ ಆರಾಧನೆಯೂ ಹೌದೆಂದು ಅವರು ಹೇಳುತ್ತಾರೆ) ಉಮ್ಮತ್ತಾಟ್‌ದಲ್ಲಿ ಜೋಡಿಗೂಡುವಂತೆ ಎಷ್ಟು ಜನರಾದರೂ ಭಾಗವಹಿಸಬಹುದು. ಹಾಡು ಹೇಳಿಕೊಡುವವರು ಪ್ರತ್ಯೇಕವಾಗಿ ಒಂದು ಕಡೆ ನಿಂತು ಪೌರಾಣಿಕ ಪ್ರಸಂಗಗಳೇ ಅಲ್ಲದೆ ಕಾವೇರಿಯ ವರ್ಣನೆ ಕುರಿತು ನೂರಾರು ಹಾಡು ಹೇಳುತ್ತಾರೆ. ಆಗ ದೀಪದ ಸುತ್ತ ನಿಂತ ಕಲಾವಿದೆಯರು ಆ ಹಾಡನ್ನು ಪುನರುಚ್ಚರಿಸುತ್ತಾ ತಾಳ ಹಾಕಿಕೊಂಡು ಸುತ್ತುತ್ತಾರೆ.

ಪ್ರತಿ ಹಾಡಿಗೂ ಅವರು ಸುತ್ತುವ, ತಾಳ ಹಾಕುವ ಮತ್ತು ಕುಣಿಯುವ ಗತ್ತು ಭಂಗಿಗಳು ವ್ಯತ್ಯಾಸಗೊಳ್ಳುತ್ತವೆ. ಒಮ್ಮೆ ತಮ್ಮಷ್ಟಕ್ಕೆ ತಾವೇ ತಾಳ ಹಾಕಿದರೆ, ಇನ್ನೊಮ್ಮೆ ಇಬ್ಬಿಬ್ಬರು ಎದುರಾಗಿ ತಾಳ ಕೊಡುತ್ತಾರೆ. ಮತ್ತೊಮ್ಮೆ ಎಡಕ್ಕೊಮ್ಮೆ ಬಲಕ್ಕೊಮ್ಮೆ ತಿರುಗಿ ಎದುರು ಬದುರು ತಾಳ ಕೊಡುತ್ತಾರೆ. ತಾಳ ಹಾಕಿಕೊಂಡು ಹಾಡುತ್ತಾರೆ. ಯಾವ ಭಂಗಿಯಲ್ಲಿದ್ದರೂ ವೃತ್ತಚಲನೆ ನಿಧಾನವಾಗಿ ಸಾಗುತ್ತಲೇ ಇರುತ್ತದೆ. ತಾಳದ ಗತ್ತು ಮಾತ್ರ ಎಲ್ಲೂ ಕುಂಠಿತವಾಗುವುದಿಲ್ಲ. ತಾಳದ ಗತಿ ತ್ವರಿತವಾದಾಗ ಮಾತ್ರ ಕಲಾವಿದರ ಚಲನೆಯೂ ತ್ವರಿತಗೊಂಡು ಪ್ರದರ್ಶನ ಕಳೆಗೂಡುತ್ತದೆ.

ಉಮ್ಮತ್ತಾಟ್ ಹಾಡುಗಳಲ್ಲಿ ಕಾವೇರಿಯ ಸ್ತುತಿಗೀತೆಗಳೇ ಹೆಚ್ಚು. ಅಂತಹ ಒಂದು ಸ್ತುತಿಯ ನಾಲ್ಕು ಸಾಲುಗಳು ಹೀಗಿವೆ:

“ಕಾವೇರಮ್ಮ ದೇವಿ ತಾಯಿ ಕಾಪಾಡೆಂಗಳಾ,

ಭಾವ ಬಟ್ಟೆ ಕಾಟಿ ತಂದ್ ಚಾಕ್ ದೇವಿ ನೀ,

ದತ್ತ್ ಮೋವಳಾಯಿತ್ ನೀ ಬ್ರಹ ದೇವಂಗೇ,

ಗೊತ್ತಿಲ್ಲತೆ ಅಗಸ್ತ್ಯ ಋಷಿ ಬುಟ್ ಪೊರಟಯಾ.”

ಹೀಗೆ ಹೇಳಿಕೊಂಡು ನಿಧಾನವಾಗಿ ಕಲಾವಿದೆಯರು ಚಲಿಸುತ್ತಿದ್ದರೆ, ಕಾವೇರಿ ನದಿಯ ಗಂಭೀರ ಗಮನದ ಸಂಕೇತವೋ ಎಂದೆನಿಸುತ್ತದೆ!

‘ಉಮ್ಮತ್ತಾಟ್’ ದೈವೀ ಆರಾಧನೆಯ ಕಲೆ. ಅಂತೇ ಮ್ಮ ಸ್ವಸಂತೋಷಕ್ಕಾಗಿ ಸುಗ್ಗಿ ಮತ್ತು ವಸಂತ ಕಾಲದಲ್ಲಿ, ದೇವರ ಉತ್ಸವ ಮೊದಲಾದ ಸಮಾರಂಭಗಳಲ್ಲಿ ಕುಣಿದು ನಲಿಯುತ್ತಾರೆ. ಇತ್ತೀಚೆಗೆ ಉಮ್ಮತ್ತಾಟ್ ಹಾಡುಗಳಲ್ಲಿ ಸಮಕಾಲೀನ ವಿಷಯಗಳೆಲ್ಲ ಇರುತ್ತವೆ. ಈ ಕಲೆಯಲ್ಲಿ ಪಾಲುಕೊಳ್ಳುವರಲ್ಲಿ ಅವಿವಾಹಿತ ಯುವತಿಯರೇ ಹೆಚ್ಚು. ಮದುವೆಯಾದವರು ಸಂಕೋಚದಿಂದಾಗಿ ಪ್ರದರ್ಶನದಲ್ಲಿ ಸೇರಿಕೊಳ್ಳುವುದು ಕಡಮೆ.

ಜನಪದ ವಾದ್ಯಗಳು:ಚರ್ಮ-ಕಾಷ್ಠ ವಾದ್ಯಗಳು:

ಅನುಕರಣ ಮತ್ತು ಪ್ರಯೋಗಶೀಲಸ್ವಭಾವದ ಮಾನವ ಏನೆಲ್ಲ ಕಲೆಗಳ ಸೃಷ್ಟಿಗೆ ಕಾರಣನಾಗಿದ್ದಾನೆ. ಸಂಗೀತಕಲೆಯನ್ನೂ ಅನುಕರಣೆಯಿಂದ ಕಲಿತು ವೈವಿಧ್ಯತೆಯನ್ನು ತಂದಿದ್ದಾನೆ. ನಿಸರ್ಗದ ಕೂಸಾಗಿ ಬೆಳೆದ ಮಾನವ ಅದರ ವಿವಿಧ ಲಯ, ಸಡಗರ, ಆರ್ಭಟಕ್ಕೆ ಸ್ಪಂದಿಸಿ, ಹಾಡಿ ಕುಣಿದಿದ್ದಾನೆ. ತನಗೆ ಸುಲಭ ಸಾಧ್ಯವಾದ ವಸ್ತುಗಳಿಂದ ವಾದ್ಯಗಳ ನಿರ್ಮಾಣಕ್ಕೆ ಕೈಹಾಕಿದ್ದಾನೆ. ಆದಿಮಾನವನು ಪ್ರಾಣಿಗಳನ್ನು ಬೇಟೆಯಾಡುವ ದಿನಗಳಲ್ಲಿಯೇ ಚರ್ಮವಾದ್ಯಗಳ ಕಲ್ಪನೆ ಮೂಡಿರಬೇಕು. ಇವುಗಳ ಉಗಮ ಕುರಿತು ನಿರ್ದಿಷ್ಟವಾಗಿ ಹೇಳಲಿಕ್ಕಾಗದು.

ಚರ್ಮವಾದ್ಯಗಳಿಗೆ ಅತೀ ಪ್ರಾಚೀನ ಇತಿಹಾಸವಿದೆ. ಹರಪ್ಪಾ ಉತ್ಖನನದಲ್ಲಿ ಡೋಲು ಬಾರಿಸುತ್ತಿರುವ ಚಿತ್ರ ಮುದ್ರೆಗಳಿವೆ. ಋಗ್ವೇದದಲ್ಲಿಯೂ ವಾದ್ಯಗಳ ಪ್ರಸ್ತಾಪ ಬಂದಿದೆ. ಭರತಮುನಿ ವಿವಿಧ ವಾದ್ಯಗಳ ಉಲ್ಲೇಖ ಮಾಡಿದ್ದಾನೆ. ಕನ್ನಡ ನಾಡಿನ ಕಾವ್ಯ ಶಾಸನ ಶಿಲ್ಪಗಳಲ್ಲಿ ವಾದ್ಯಗಳ ಪ್ರಸ್ತಾಪವಿದೆ. ಜನಪದ ಜೀವನದಲ್ಲಿಯಂತೂ ಇನ್ನೂ ಈ ವಾದ್ಯಗಳು ತಮ್ಮ ಜೀವಂತಿಕೆಯನ್ನು ಮೇರೆಯುತ್ತವೆ.

ಜನಪದವಾದ್ಯಗಳನ್ನು ಸಾಮಾನ್ಯವಾಗಿ ಚರ್ಮವಾದ್ಯ, ತಂತಿವಾದ್ಯ, ಉಸಿರುವಾದ್ಯ ಹಾಗೂ ಲೋಹವಾದ್ಯಗಳೆಂದು ಅವುಗಳ ಸ್ವರೂಪ ವ್ಯತ್ಯಾಸಗಳಿಂದ ವಿಭಾಗಿಸಿ ಹೆಸರಿಸುತ್ತಾರೆ. ಇವೆಲ್ಲವುಗಳಲ್ಲಿ ಚರ್ಮವಾದ್ಯಗಳಿಗೆ ತುಂಬಾ ಪ್ರಾಚೀನತೆ ಇದೆ. ಚರ್ಮವಾದ್ಯಗಳನ್ನು ಏಕಮುಖ ಚರ್ಮವಾದ್ಯ ದ್ವಿಮುಖ ಚರ್ಮವಾದ್ಯಗಳೆಂದು ವಿಂಗಡಿಸಬಹುದು. ಏಕಮುಖ ಚರ್ಮವಾದ್ಯಗಳಲ್ಲಿ ಒಂದು ಭಾಗಕ್ಕೆ ಚರ್ಮ ಬಿಗಿದಿರುತ್ತಾರೆ. ಇನ್ನೊಂದು ಭಾಗ ಖುಲ್ಲಾ ಆಗಿರುತ್ತದೆ. ಅವು ದಪ್ಪು, ಹಲಗೆ, ದಮ್ಮಡಿ ಮುಂತಾದವುಗಳಾದರೆ, ವಾದ್ಯದ ಒಂದು ಭಾಗಕ್ಕೆ ಚರ್ಮದ ಹೊದಿಕೆಯಿದ್ದು ಇನ್ನೊಂದು ಭಾಗ ಮುಚ್ಚಿರುತ್ತವೆ. ಅವು; ನಗಾರಿ, ತಾಸೆ, ಸಂಬಾಳ, ಚೌಗಡೆ ಮುಂತಾದವುಗಳು. ಇನ್ನು ದ್ವಿಮುಖ ಚರ್ಮವಾದ್ಯಗಳು ಎರಡೂ ಭಾಗಕ್ಕೆ ಚರ್ಮ ಬಿಗಿದವುಗಳು. ಅವು: ಕರಡೆ, ಡೋಲು, ಡೊಳ್ಳು, ಡಮರುಗ, ದುರಗಮುರಗಿವಾದ್ಯ ಬುಡಬುಡಕಿವಾದ್ಯ ಮುಂತಾದವುಗಳು. ಅಲ್ಲದೆ

ಡಮರು ಆಕಾರದ ವಾದ್ಯಗಳು, ಹಲಗೆ ಆಕಾರದ ವಾದ್ಯಗಳು, ನಗಾರಿ ಆಕಾರದ ವಾದ್ಯಗಳು ಹಾಗೂ ಡೋಲು ಆಕಾರದ ವಾದ್ಯಗಳೆಂದೂ ವಿಭಾಗಿಸಿ ಹೇಳಲಾಗುತ್ತದೆ. ಈ ಎಲ್ಲ ವಿಂಗಡನೆಗಳು ಚರ್ಮವಾದ್ಯಗಳ ಆಕಾರ, ನುಡಿಸುವ ಕ್ರಮ, ರೂಪವೈವಿಧ್ಯ ಹಾಗೂ ಚರ್ಮ ಮುಖಗಳನ್ನು ಅವಲಂಬಿಸಿವೆ.

ಹಾಡುಸಹಿತ ಮತ್ತು ಹಾಡುರಹಿತವಾದ ಚರ್ಮವಾದ್ಯಗಳಲ್ಲಿ ಒಳಗೆ ಪೊಳ್ಳಾಗಿರುವ ಸಿಲಿಂಡರಾಕಾರ ವೃತ್ತಾಕಾರವಾದ ಬಳೆ ಮತ್ತು ಬೋಗಾಣಿ ಆಕಾರದ ಮಣ್ಣಿನ, ಕಟ್ಟಿಗೆಯ, ಇಲ್ಲವೆ ಲೋಹದ “ಪಡಗ” ಪ್ರಮುಖವಾಗಿರುವದು. ಅವುಗಳ ಮುಖಕ್ಕೆ ತೊಗಲನ್ನು ಹೊಂದಿಸಿ ಕಂಪಿತ ಧ್ವನಿ ಹೊರಡಿಸಲು ಕೈ, ಕಟ್ಟಿಗೆಯ ಗುಣಿ, ಬಿದಿರು ಬೆತ್ತಗಳನ್ನು ಬಳಸುತ್ತಾರೆ. ಇವೆಲ್ಲ ವಸ್ತುಗಳೂ ಸುಲಭ ಸಾಧ್ಯವಾದವುಗಳು.

ನಗಾರಿ :

ನಗಾರಿ ಎತ್ತ ಮುಂದ ಮುಂದ

ಪರಸಿ ಹೊಂಟೈತಿ ಹಿಂದ ಹಿಂದ.

ಎಂಬ ಮಾತಿನಲ್ಲಿ ಮೇಳವಾದ್ಯಗಳಲ್ಲಿ ನಗಾರಿಯ ಸ್ಥಾನ ನಿರ್ದೇಶಿತವಾಗಿದೆ. ಉತ್ಸವ ಹೊರಡುವ ಕಾಲದಲ್ಲಿ ನಗಾರಿಗಳನ್ನು ಎತ್ತುಗಳ ಮೇಲೆ ಹೇರಿಕೊಂಡು ನುಡಿಸುತ್ತಾ ಉತ್ಸವದ ಮುಂಚೂಣಿಯಲ್ಲಿರುತ್ತಿದ್ದರು. ಪ್ರಾಚೀನ ಕಾಲದ ಯುದ್ಧಗಳಲ್ಲಿ ಸೈನಿಕರನ್ನು ಹುರಿದುಂಬಿಸಲು, ವೈರಿಗಳ ಆಗಮನವನ್ನು ಸೂಚಿಸಲು, ಮಹತ್ವದ ಸುದ್ದಿ ಸಾರಲು ಈ ವಾದ್ಯವನ್ನು ಬಳಸಿಕೊಳ್ಳುತ್ತಿದುದ್ದು ತಿಳಿದು ಬರುತ್ತದೆ. ತಮ್ಮಟೆ ಮುಂತಾದ ಪಂಚಮಹಾವಾದ್ಯಗಳಲ್ಲಿ ನಗಾರಿಯೂ ಒಂದು. ಇದನ್ನು ಸೌಬತ್ತು, ಭೇರಿ, ದುಂದುಭಿ ಎಂಬ ಉಪನಾಮಗಳಿಂದಲೂ ಕರೆಯುತ್ತಾರೆ. ಸದ್ಯ ಈ ವಾದ್ಯದ ಉಪಯೋಗ ಕೆಲವು ಪ್ರಾಚೀನ ಪರಂಪರೆಯುಳ್ಳ ದೊಡ್ಡ ಮಠ ಮಂದಿರಗಳ ಪೂಜೆ ಸಮಯದಲ್ಲಿ ಮಾತ್ರ ಬಳಕೆಯಾಗುತ್ತದೆ. ಚರ್ಮವಾದ್ಯಗಳಲ್ಲಿ ಗಾತ್ರ ಮತ್ತು ನಾದಗಳಲ್ಲಿ ಡೊಳ್ಳನ್ನು ಬಿಟ್ಟರೆ ನಗಾರಿಯೇ ಅತ್ಯಂತ ದೊಡ್ಡ ವಾದ್ಯ. ಕಬ್ಬಿಣ, ಹಿತ್ತಾಳೆ ಮತ್ತು ತಾಮ್ರದ ಲೋಹದಿಂದ ಮಾಡಿದ ಐದು ಅಡಿಗೂ ಹೆಚ್ಚು ವ್ಯಾಸ ಬಾಯುಳ್ಳ ಪಡಗ ಎಮ್ಮೆಯ ಚರ್ಮವನ್ನು ಬಾರುಗಳಿಂದ ಬಿಗಿದಿರುತ್ತಾರೆ. ಇದನ್ನು ಗಟ್ಟಿಕೋಲು (ಗುಣಿ)ಯಿಂದ ಬಾರಿಸಿದಾಗ ಗಂಭೀರವಾದ ಶಬ್ದ ಹೊರಡುತ್ತದೆ. ಜೀವನಸಂಗೀತವೆಂಬ ಲಾವಣಿ ಸಂಕಲನದಲ್ಲಿ “ಗೋಕುಲಾಷ್ಟಮಿ” ಎಂಬ ಲಾವಣಿಯೊಂದಿದೆ. ಅಲ್ಲಿ ಪಗುಡಿಯಾಡಿದ ಪ್ರಸಂಗವನ್ನು ನಗಾರಿ ನುಡಿತಕ್ಕೆ ಅನ್ವಯಿಸಿ ಕಿವಿ ಹೀಗೆ ಹಾಡುತ್ತಾನೆ :

ತಾಳಗತ್ತ ಮಾಡಿದಂಗ | ನಗಾರಿ ನುಡಿದಂಗ

ದುಮದುಮ ಹೊಡೆದಂಗ | ಚಿಟ್ಟೆ ಔಡಲ ಸಿಡಿದಂಗ

ಸಿಡ್ಲ ಮಿಂಚ ಕಡಿದಂಗ | ಮಗ್ಗಿ ಪಾಟ್ಲಿ ಹೆಣೆದಂಗ

ಸುದ್ದಾ ನವಿಲು ಕುಣಿದಂಗ | ತಿಪ್ಪರಲಾಗ ಹೋಡಿದಂಗ

ಹೀಗೆ ನವಿಲಿನ ಕುಣಿತಕ್ಕೆ ಬೇಕಾದ ಗುಡುಗು ಸಿಡಿಲು ಗಂಭೀರ ಧ್ವನಿಗಳಿಗೆ ನಗಾರಿಯ ಮೊಳಗನ್ನು ಉದಾಹರಿಸುತ್ತಾನೆ ಜನಪದಕವಿ.

ಸಂಬಾಳ :

ಇದು ಜೋಡು ಬೋಗಾಣಿಯುಳ್ಳ ಚರ್ಮವಾದ್ಯ ಬೋಗಾಣಿಲೋಹ, ಕಟ್ಟಿಗೆ ಇಲ್ಲವೇ ಮಣ್ಣಿನಿಂದ ತಯಾರಿಸುತ್ತಾರೆ. ಈ ಎರಡೂ ಬೊಗಾಣಿಗಳ ಬಾಯಿ ಸುಮಾರು ೧೦ ಅಂಗುಲ ವ್ಯಾಸವುಳ್ಳದ್ದಾಗಿರುತ್ತದೆ. ಬೊಗಾಣಿಗಳ ಬಾಯಿಗೆ ಆಡಿನ ಚರ್ಮ ಬಿಗಿದಿರುತ್ತಾರೆ. ಬಲಭಾಗದ್ದು ದಪ್ಪಚರ್ಮ ಎಡಭಾಗದ್ದು ತಿಳುಚರ್ಮವುಳ್ಳದ್ದಾಗಿರುತ್ತದೆ. ಬಲಭಾಗದ ಚರ್ಮಕ್ಕೆ ಕರಣಿಯನ್ನು ಮೇಲ್ಭಾಗ ಇಲ್ಲವೆ ಒಳಭಾಗದಲ್ಲಿ ಲೇಪಿಸಿರುತ್ತಾರೆ. ಗೊಂದಲಿಗರು ವಿಶೇಷವಾಗಿ ಈ ವಾದ್ಯವನ್ನು ಬಳಸುತ್ತಾರೆ. ಪುರವಂತರಕುಣಿತ, ಕಂಬಿ ಹಾಡುಗಳಲ್ಲಿ ಈ ವಾದ್ಯವೇ ಪ್ರಧಾನವಾಗಿರುತ್ತದೆ. ಹಾಡಿನ ಸ್ವರಕ್ಕನುಗುಣವಾಗಿ ಹಗ್ಗಗಳನ್ನು ಬಿಗಿ ಅಥವಾ ಸಡಿಲುಮಾಡಿಕೊಂಡು ಕೊರಳಿಗೆ ತೂಗಿಹಾಕಿಕೊಂಡು ಒಂದು ಬೊಗಾಣಿಯಾಕಾರದ ವಾದ್ಯವನ್ನು ವಾದನಕಾರ ತನ್ನ ಎರಡೂ ತೊಡೆಗಳ ಸಂದಿನಲ್ಲಿಟ್ಟು ಬಿಗಿದ ಹಗ್ಗಕ್ಕೆ ಒತ್ತು ಕೊಡುತ್ತಾ ಬಾರಿಸುವಾಗ ಒಂದು ರೀತಿಯ ವಿಲಕ್ಷಣ ಧ್ವನಿ ಹೊರಡುತ್ತದೆ. ಶ್ರೋತೃಗಳನ್ನು ರಂಜಿಸುತ್ತದೆ. ನಾದದ ಇಂಪು ಹೆಚ್ಚಾಗಲು ಇದನ್ನು ಕಾಸಲಾಗುತ್ತದೆ. ಹೆಚ್ಚಾಗಿ ಇದರಲ್ಲಿ ಚೌತಾಳ, ತ್ರಿತಾಳಗಳನ್ನು ಬಳಸುತ್ತಾರೆ. ನಾನು ಒಬ್ಬ ವಾದನಕಾರನಿಗೆ ಕೇಳಿದ್ದೆ. ಅದು ಪುರವಂತರ ಕುಣಿತದ ಸಮಯದಲ್ಲಿ-ಸದ್ಯ ಬಾರಿಸುವ ತಾಳ ಯಾವುದು ಎಂದು ಪ್ರಶ್ನಿಸಿದಾಗ ಆ ವಾದನಕಾರ ಇದು ಅಡತಾಳರಿ ಎಂದು ಹೇಳಿದ. ಬಹುಶಃ ಇದು ಅರ್ಧತಾಳ ಇಲ್ಲವೇ ಅಟತಾಳ ಆಗರಿಬೇಕು.

ತಾಸೆ :

ತಾಯಿ ಮಕ್ಕಳ ಧ್ವನಿಯು ತಾಳ ಬಾರಿಸಿದಾಂಗ

ಜೋಡ ಕಿನ್ನುರಿ ನುಡಿದಂಗ | ಹಲಸಂಗಿ

ಹೊತ್ತೇರಿ ತಾಸೆ ಬಡಿದಾಂಗ.

ಮಕ್ಕಳ ಧ್ವನಿಯನ್ನು ತಾಸೆಯಿಂದ ಹೊರಡುವ ವಾದನದ ನಾದಕ್ಕೆ ಇಲ್ಲಿ ಉಪಮಿಸಲಾಗಿದೆ. ಸರ್ಕಸ್ಸು, ಡಂಬರಾಟ ಮುಂತಾದ ಪ್ರಚಾರ ಮಾಧ್ಯಮಕ್ಕೆ ಮಂದಿರ ಮಸೀದಿಗಳಲ್ಲಿಯೂ ಈ ವಾದ್ಯದ ಉಪಯೋಗವಾಗುತ್ತದೆ. ಒಂದು ಅಡಿ ವ್ಯಾಸ ಬಾಯಿಯಿರುವ ಕಂಚಿನ ಬೊಗಾಣಿಗೆ ಆಡಿನ ಚರ್ಮವನ್ನು ಉಂಗರುಗಳ ಮೂಲಕ ಹಾದು ಬರುವ ಹಗ್ಗಗಳಿಂದ ಬಿಗಿದಿರುತ್ತಾರೆ. ಸುತ್ತ ನಾಲ್ಕೂ ಕಡೆ ಸಿಲೆಂಡರಿನ ಆಕಾರವಿರುವ ಮರದ ಚೂರುಗಳನ್ನು ಹಗ್ಗಕ್ಕೆ ಬರುವಂತೆ ಜೋಡಿಸಿರುತ್ತಾರೆ. ಈ ವಾದ್ಯವನ್ನು ಕತ್ತಿನಿಂದ ಇಳಿಬಿಟ್ಟು ಇಲ್ಲವೇ ನೆಲದ ಮೇಲಿಟ್ಟು ಎರಡೂ ಕೈಯಿಂದ ಬಿದಿರುಕಡ್ಡಿಗಳಿಂದ ಟಪ-ಟಪ ಟಪವೆಂದು ಬಾರಿಸುತ್ತಾರೆ.

ಗುಮಟೆ :

ಸುಮಾರು ಎರಡುವರೆ ಅಡಿ ಉದ್ದದ ಹೂಜಿಯಾಕಾರದ ಮಣ್ಣಿನ ಕಲಸದ ಒಂದು ಕಡೆ ಬಾಯಿ ಚಿಕ್ಕದಾಗಿದ್ದು ಮತ್ತೊಂದು ಕಡೆಯ ಬಾಯಿ ದೊಡ್ಡದಾಗಿ ಇರುವ ಚರ್ಮವಾದ್ಯ. ಅಗಲವಾದ ಚಾಪ(ಉಡ)ದ ಇಲ್ಲವೇ ಕುರಿಯ ಚರ್ಮವನ್ನು ಬಿಗಿಯಾಗಿ ಕಟ್ಟುತ್ತಾರೆ. ಎಡಗಡೆಯ ಕಿರಿಯಗಲದ ಬಾಯಿಮಾತ್ರ ತೆರೆದೇ ಇರುತ್ತದೆ. ಬೇರೆ ಬೇರೆ ಪ್ರಸಂಗ ಉದ್ದೇಶಗಳಿಗೆ ಬಳಸುವಲ್ಲಿ ಇದರಲ್ಲಿ ಮೂರು ಪ್ರಕಾರಗಳನ್ನು ಗುರುತಿಸಲಾಗುವುದು, (೧) ಪಾಂಗು ಪಾಕು-ಇದು ಕೊಡದಾಕಾರದಲ್ಲಿದ್ದು ಒಂದುವರೆ ಫೂಟಿನಷ್ಟು ಉದ್ದವಾಗಿರುವದು. (೨) ಕೋಲು ಗುಮಟೆ- ಇದು ಹೂಜಿಯಾಕಾರದಲ್ಲಿದ್ದು ಸುಮಾರು ಮೂರು ಫೂಟು ಉದ್ದವಾಗಿರುವದು. (೩) ಸಾದಾ ಗುಮಟೆ- ಕೋಲು ಗುಮಟೆಯಂತಿದ್ದರೂ ಸ್ವಲ್ಪ ಚಿಕ್ಕದಾಗಿ ಎರಡರಿಂದ ಎರಡುವರೆ ಫೂಟಿನಷ್ಟು ಉದ್ದವಾಗಿರುವದು. ಕುತ್ತಿಗೆಗೆ ತೂಗು ಹಾಕಿಕೊಂಡು, ಸೊಂಟಕ್ಕೆ ಕಟ್ಟಿಕೊಂಡು, ನೆಲದ ಮೇಲೆ ಇಟ್ಟುಕೊಂಡು ಬಲ ಅಂಗೈ ಮತ್ತು ಬೆರಳುಗಳನ್ನು ಚರ್ಮದ ಹೊದಿಕೆಯ ಮೇಲೆ ಆಡಿಸುತ್ತಲೂ ಅದೇ ಕಾಲಕ್ಕೆ ಎಡಗೈಯನ್ನು ತೆರೆದ ಬಾಯಿಯ ಮೇಲೆ ಇಟ್ಟು ಮುಚ್ಚಿ ತೆಗೆಯುತ್ತಲೂ ನುಡಿಸುವರು. ಹಾಡಿನ ಲಯಕ್ಕನುಗುಣವಾಗಿ ಅದರ ಧ್ವನಿಯ ಏರಿಳಿತಗಳನ್ನು ನಿಯಂತ್ರಿಸುತ್ತಾರೆ. ಇದಕ್ಕೆ ವಿಶೇಷ ತರಬೇತಿ ಬೇಕಾಗುವದು, ಕರಾವಳಿ ಪ್ರದೇಶದ ಹಾಲಕ್ಕಿ, ನಾಮಧಾರಿ, ಅಂಬಿಗ, ಉಪ್ಪಾರ ಮುಂತಾದವರ ಗಂಡು ಚರ್ಮವಾದ್ಯವೆಂದೇ ಇದು ಪ್ರಸಿದ್ಧ. ಉತ್ಸಾಹ, ಆವೇಶ ಹುಟ್ಟಿಸುವ ಗುಮಟೆಯ ವಾದನಕ್ಕೆ ತುಂಬಾ ರಟ್ಟೆಬಲ ಮತ್ತು ಅವಶ್ಯಕವಾದ ಗತ್ತಿನ ಜ್ಞಾನವಿರಬೇಕಾಗುತ್ತದೆ. ನಾದದ ಇಂಪು ಹೆಚ್ಚಾಗಬೇಕಾದರೆ ಇದನ್ನು ಕಾಸಲಾಗುತ್ತದೆ. ಇದು ಹಾಡುರಹಿತ ವಾದ್ಯವೂ ಹೌದು, ಹಾಡುಸಹಿತ ವಾದ್ಯವೂ ಹೌದು.

ಚೌಗಡ :

ಇದನ್ನು ಹಲಿಗೆ ಮಜಲಿನಲ್ಲಿ ಪಕ್ಕವಾದ್ಯವಾಗಿ ಬಳಸುತ್ತಾರೆ. ಇದರ ಆಕಾರ ಡಗ್ಗಾದಂತೆ ಇರುತ್ತದೆ. ಕೆಲವು ಭಾಗದಲ್ಲಿ ಇದಕ್ಕೆ ದಿಮ್ಮಿಯೆಂದು ಕರೆಯುತ್ತಾರೆ. ಕುರಿ ಅಥವಾ ಆಡಿನ ದಪ್ಪವಾದ ಚರ್ಮದಿಂದ ಸಿದ್ಧಪಡಿಸಿರುತ್ತಾರೆ. ಒಂದು ಅಡಿ ವ್ಯಾಸವುಳ್ಳ ಮಣ್ಣಿನ ಇಲ್ಲವೇ ಕಟ್ಟಿಗೆಯ ಬೊಗಾಣಿಗೆ ಈ ತೊಗಲನ್ನು ಬಿಗಿದಿರುತ್ತಾರೆ. ತೊಗಲು ನಾದದ ಹದಕ್ಕೆ ಬರಬೇಕಾದರೆ ಅದರಲ್ಲಿ ಕುರಿಯ ಇಲ್ಲವೆ ಎಮ್ಮಿಯ ಹಾಲನ್ನು ಹಾಕಿ ಅಂತರದಲ್ಲಿ ಗೂಟಕ್ಕೋ ಕಂಬಕ್ಕೋ ಕಟ್ಟುತ್ತಾರೆ. ನಂತರ ಇದನ್ನು ಬಿಗಿದಾದ ಬಳಿಕ ಒಣಗಿದಾಗ ವಿಶಿಷ್ಟವಾದ ಧ್ವನಿ ಬರುತ್ತದೆ. ಚೌಗಡಕ್ಕೆ ಹಗ್ಗವೊಂದನ್ನು ಕಟ್ಟಿ ಕೊರಳಿಗೋ ಹೆಗಲಿಗೋ ಹಾಕಿಕೊಳ್ಳುತ್ತಾರೆ. ಬಲಗೈಯಲ್ಲಿ ಕಟ್ಟಿಗೆಯ ಗುಣಿ ಇರುತ್ತದೆ. ಗುಣಿಯ ಮುಂದಿನ ಭಾಗವನ್ನು ಅರಿವೆ ಸುತ್ತಿ ಒಂದು ತರದ ಜಿಡ್ಡನ್ನು ಆ ಭಾಗಕ್ಕೆ ಲೇಪಿಸಿರುತ್ತಾರೆ. ಚೌಗಡದ ಮಧ್ಯ ಭಾಗಕ್ಕೆ ಅದನ್ನು ತಟ್ಟುತ್ತಾರೆ. ಹಾಗೆಯೇ ಎಡಗೈ ತುದಿಯ ಬೆರಳನ್ನು ವಾದನಕ್ಕೆ ಬಳಸುತ್ತಾರೆ. ಹಲಗೆಯ ಮಜಲಿಗೆ ಬೇಕಾದ ವಿವಿಧ ತಾಳಗಳನ್ನು ಆದಿ, ಮಿಶ್ರ ಮುಂತಾದ ಬೇರೆ ಬೇರೆ ತಾಳಗಳಲ್ಲಿ ನುಡಿಸುತ್ತಾರೆ.

ಡೊಳ್ಳು :

ಜನಪದ ವಾದ್ಯಸಮುದಾಯದಲ್ಲಿ ಚಕ್ರವರ್ತಿಯೆನ್ನಬಹುದಾದ ದೊಡ್ಡ ಗಾತ್ರದ ಒಂದು ಚರ್ಮವಾದ್ಯ. ಡೊಳ್ಳು ವಾದನದ ಈ ಕಲೆ ಗಂಡು ಕಲೆಯೇ ಆಗಿದೆ. ಈ ಕಲೆಯ ಆರಾಧಕರು ಬೀರ ಭಕ್ತರಾದ ಕುರುಬರು. “ಕುರಿಯ ಮೇಲೆ ಕಣ್ಣೀರಲೆಪ್ಪಾ ಡೊಳ್ಳಿನ ಮೇಲೆ ಒಂದು ಕೈಯಿರಲಿ” ಎಂದು ಹಾಡಿನಲ್ಲಿ ಹೇಳಿಕೊಂಡಿದ್ದಾರೆ. ಕುರುಬ ಕುರಿಗಳೊಂದಿಗೆ ಕಾಡಿನಲ್ಲಿರುವಾಗ ಕಾಡಿನ ಕ್ರೂರ ಮೃಗಗಳ ಕಾಟ ತಪ್ಪಿಸಿಕೊಳ್ಳುವದಕ್ಕಾಗಿ ಈ ವಾದ್ಯವನ್ನು ನಿರ್ಮಿಸಿಕೊಂಡಿದ್ದಾನೆಂದು ಹೇಳಲಾಗುತ್ತದೆ.

ಡೊಳ್ಳಿನ ಉಗಮ ಕುರಿತು ಪೌರಾಣಿಕ ಕಥೆಯೊಂದನ್ನು ತಮ್ಮ ಹಾಡಿನಲ್ಲಿ ಹಾಡಿಕೊಳ್ಳುತ್ತಾರೆ. ಡೊಳ್ಳಾಸುರನೆಂಬ ರಾಕ್ಷಸನು ತಪಸ್ಸು ಮಾಡಿ ಶಿವನನ್ನು ಒಲಿಸಿಕೊಂಡು ಪರಶಿವನನ್ನೇ ನುಂಗುವ ವರ ಬೇಡಿದನಂತೆ. ರಕ್ಕಸನ ಭಕ್ತಿಗೆ ಮೆಚ್ಚಿದ ಶಿವನು ತಥಾಸ್ತು ಎಂದು ಹೇಳಿ, ತನ್ನ ಬಿಡುಗಡೆಯ ಅವಧಿ ಕೇಳಿದಾಗ ಪಂಚರಾತ್ರಿಗಳು ಸಂದಿಸಿದಾಗ ನಿನ್ನ ಬಿಡುಗಡೆಯೆಂದು ಹೇಳಿ ಶಿವನನ್ನು ನುಂಗುತ್ತಾನೆ. ರಾಕ್ಷಸ ಪಂಚರಾತ್ರಿಗಳು ಸಂದಿಸಿದಾಗ ವಚನ ಕೊಟ್ಟಂತೆ ಶಿವನನ್ನು ಡೊಳ್ಳಾಸುರನು ಬಿಡುಗಡೆ ಮಾಡದಾಗುತ್ತಾನೆ. ಆಗ ಸಾಕ್ಷಾತ್ ವಿಷ್ಣು ಪರಮಾತ್ಮನೇ ಈ ದೈತ್ಯನನ್ನು ಸಂಹರಿಸಿ ಪರಶಿವನ ಬಿಡುಗಡೆ ಮಾಡುತ್ತಾನೆ. ಆಗ ಪರಶಿವನು ಯೋಗನಾದದಲ್ಲಿ ಲೀನವಾಗಿರುತ್ತಾನೆ. ಶಿವನನ್ನು ಎಚ್ಚರಿಸಲು ವಿಷ್ಣು ರಕ್ಕಸನ ಪಕ್ಕೆಲುಬುಗಳನ್ನು ಪಡಗವನ್ನಾಗಿ ಮಾಡಿ ಅದಕ್ಕೆ ಚರ್ಮವನ್ನು ಬಿಗಿದು ಅವನ ಕೋರೆ ಹಲ್ಲುಗಳಿಂದ ಈ ಚರ್ಮವಾದ್ಯವನ್ನು ಬಡಿಯಲು ಪ್ರಾರಂಭಿಸಿದಾಗ ಶಿವ ನಾಟ್ಯವಾಡುತ್ತ ಕಣ್ಣು ತೆರೆಯುತ್ತಾನಂತೆ. ಈ ಕಥೆಯ ಸಂಕೇತ ದೇವರ ಗಮನವನ್ನು ತಮ್ಮತ್ತ ಸೆಳೆದುಕೊಳ್ಳುವುದೇ ಆಗಿರಬಹುದು.

ಯಾವ ಬದಲಾವಣೆಗೂ ಒಳಪಡದೇ ತನ್ನ ಮೂಲರೂಪದಲ್ಲಿಯೇ ಉಳಿದುಕೊಂಡು ಬಂದಿರುವ ಈ ವಾದ್ಯದ ರಚನೆ ಸರಳ ವಿಧಾನದಿಂದ ಕೂಡಿದೆ. ಪೊಳ್ಳಾಗಿರುವ ಸಿಲೆಂಡರ ಆಕಾರದ ಅರ್ಧ ಅಂಗುಲ ದಪ್ಪಗಿನ ಅಂಬುಳ್ಳ ಕಟ್ಟಿಗೆಯ ಪಡಗದ ಎರಡೂ ಮಗ್ಗುಲಿಗೆ ಚರ್ಮದ ಹೊದಿಕೆ ಹಾಕಿ ತಯಾರಿಸಲಾಗುತ್ತದೆ. ಪಡಗದ ಕಟ್ಟಿಗೆ ಮಾವಿನ, ಬೇವಿನ ಇಲ್ಲವೆ ಸುರಹೊನ್ನೆಯ ಮರದ್ದು ಇರುತ್ತದೆ. ಇದರ ಎಡಭಾಗಕ್ಕೆ ಆಡಿನ ಚರ್ಮ, ಬಲಭಾಗಕ್ಕೆ ಹೋತಿನ ಚರ್ಮವನ್ನು ಬಿಗಿಯುತ್ತಾರೆ. ಹೊದಿಕೆಯ ಹೊರಭಾಗದ ತುಂಬೆಲ್ಲಾ ಬಾಳೆಯ ಸೊಪ್ಪಿನ ಬೂದಿ ಹಾಗೂ ಎಣ್ಣೆಯಲ್ಲಿ ತಯಾರಿಸಿದ ಜಿಗಿಯನ್ನು ತೆಳ್ಳಗೆ ಲೇಪಿಸಲಾಗುತ್ತದೆ. ಇದರಿಂದಾಗಿ ಆ ಭಾಗ ದಪ್ಪಗಿನ “ಮಂದ್ರನಾದ” ಕೊಡುವದು. ಆಡಿನ ಚರ್ಮದ ಭಾಗ ಸಾಮಾನ್ಯವಾಗಿ ಬೆಳ್ಳಗಿರುತ್ತದೆ. ಅದು ತೆಳುವಾದ “ತಾರನಾದ” ಕೊಡುವದು. ಮಂದ್ರನಾದದ ಭಾಗವನ್ನು ಗಟ್ಟಿಗೆಯ ಗುಣಿಯಿಂದ ಬಾರಿಸಿದರೆ, ಇನ್ನೊಂದು ಭಾಗವನ್ನು ನಾಲ್ಕು ಬೆರಳು ಏಕ ಕಾಲಕ್ಕೆ ಪೆಟ್ಟು ಹಾಕುವಂತೆ ಕೈಯಿಂದ ಬಡಿಯಲಾಗುತ್ತದೆ. ಚರ್ಮದ ಹೊದಿಕೆಯನ್ನು ಪಡಗಕ್ಕೆ ಹೊಂದಿಸಿ ಗಟ್ಟಿಯಾಗಿ ಹಿಡಿದಿಟ್ಟಿರಲು ಅವುಗಳ ಮೇಲೆ ಪಡಗದ ಅಂಚಿನ ಸುತ್ತಲು ಪ್ರತಿಯೊಂದು ಹೊದಿಕೆಗೂ ಒಂದೊಂದು ಕಟ್ಟಿಗೆಯ ಉಲುಪಿಯ ಕಂಕಣವನ್ನು ಹಾಕಲಾಗುತ್ತದೆ. ಎರಡೂ ಕಂಕಣಗಳನ್ನು ನೂಲಿನ ಇಲ್ಲವೆ ನಾರಿನ ಹಗ್ಗದಿಂದ ಜಗ್ಗಿ ಕಟ್ಟಿ ಬಿಗಿಗೊಳಿಸಲಾಗುತ್ತದೆ. ಡೊಳ್ಳಿನ ಗಾತ್ರ ಉದ್ದದಲ್ಲಿ ಒಂದೂವರೆ ಅಡಿಯಿಂದ ಎರಡಡಿಯವರೆಗೆ ಮತ್ತು ವ್ಯಾಸದಲ್ಲಿ ೧೮ ಅಂಗುಲದಿಂದ ೨೪ ಅಂಗುಲದವರೆಗೆ ವಿವಿಧ ಪ್ರಮಾಣದ ನಾದ ಹೊರಡುವ ಗಾತ್ರದ್ದಿರುತ್ತದೆ. ಇಬ್ಬರು ವಾದನಕಾರರಿಂದ ಪ್ರಾರಂಭವಾಗಿ ಹತ್ತಾರು ವಾದನಕಾರರವರೆಗೂ ಸಂಖ್ಯೆ ಬೆಳೆಯುತ್ತದೆ. ಈ ಮೇಳಕ್ಕೆ ಡೊಳ್ಳಿನ ವಾಲಗ, ಬಡ್ಡಿ ವಾಲಗ ಎಂದು ಮುಂತಾಗಿ ಕರೆಯುತ್ತಾರೆ. ಬಾರಿಸುವವರು ಡೊಳ್ಳನ್ನು ಕಂಠಕ್ಕೆ ತೂಗು ಹಾಕಿಕೊಳ್ಳುತ್ತಾರೆ. ಇಲ್ಲವೇ ಸೊಂಟಕ್ಕೆ ಕಟ್ಟಿಕೊಳ್ಳುತ್ತಾರೆ. ದೇವರ ರಥೋತ್ಸವ, ಪಲ್ಲಕ್ಕೋತ್ಸವ, ಮುಂತಾದ ಸಾಂಸ್ಕೃತಿಕ ಉತ್ಸವಗಳ ಮುಂಚೂಣಿಯಲ್ಲಿ ಎರಡು ಸಾಲಾಗಿ “ಡಗಂ ಪಟದಾ” ಎಂದು ತಾಳ ಹಾಕುತ್ತ ನಡೆಯುತ್ತಾರೆ. ಮೆರವಣಿಗೆಯ ಮುಂದೆ ಡೊಳ್ಳು ಬಾರಿಸುತ್ತಾ ಮಾರ್ಗದಲ್ಲಿರುವ ದೇವಾಲಯಗಳ ಮುಂದೆ ಕೆಲ ನಿಮಿಷ ನಿಂತು ವಾದ್ಯ ಸೇವೆ ಸಲ್ಲಿಸಿ ಮುಂದುವರೆಯುವರು. ಆವೇಶಪೂರಿತರಾಗಿ ಕುಣಿಯುತ್ತಾರೆ. ಲಾಗ ಹಾಕುತ್ತಾರೆ. ಬಾರಿಸುವ ವೇಗ ಕ್ರಮೇಣ ಬೆಳೆದು ಕೊನೆಯಲ್ಲಿ ಗಂಭೀರ ಧ್ವನಿಯಿಂದ ಇಡೀ ವಾತಾವರಣವೇ ಭಾವೋನ್ಮಾದಕ್ಕೆ ಮುಟ್ಟುತ್ತದೆ. ಆಗ “ಡೊಳ್ಳು ಬಡಿದು ಸಾಕಾಯಿತು | ಹುಗ್ಗಿ ಪರಿಯಾಣ ಬೇಕಾಯಿತು” ಎಂಬಂತೆ ಹಸಿದು ಊಟಕ್ಕೆ ಕೂಕಡುತ್ತಾರೆ. ಆಮೇಲೆ ಗೀತಗೋಷ್ಠಿ ನಡೆಸುತ್ತಾರೆ. ಹಾಡುವ ಬೈಟಕಕ್ಕೆ ಮೊದಲು ಕೆಲ ನಿಮಿಷ ಬಾರಿಸುವದಕ್ಕೆ ಸರಿಪಟ್ಟವೆಂದು ಕರೆಯುವರು.

ದುಮ್ ತಂಗ ತಂಗ ತಂಗ | ದುಮ್ ತಂಗ ತಂಗ ತಂಗ

ದುಮ್ ತಂಗ ತಂಗ ತಂಗ | ದುಮ್ ತಂಗ ತಂಗ ತಂಗ

ಎಂಬುದು ಅದರ ನಾದ. ಇದಾದ ನಂತರ ಹಾಡುಗಳು ಪ್ರಾರಂಭ. “ದಿಲ್ಲಿಗೆ ಹೋದರೂ ಡೊಳ್ಳಿಗೆ ಒಂದೇ ಪೆಟ್ಟು” ಎಂಬ ಮಾತಿನ ಹಿನ್ನೆಲೆಯಲ್ಲಿ ಬಾರಿಸುವ ವಿಧಾನ ಎಲ್ಲ ಗತ್ತುಗಳಲ್ಲಿಯೂ ಒಂದೇ ರೀತಿಯಿರುತ್ತದೆ. ಒಂದು ಗುಣಿಗೆ ಮೊದಲು ಹೆಜ್ಜೆ ಎಂದು ಕರೆಯುತ್ತಾರೆ. ಅಂದರೆ ಒಂದು ಗುಣಿ ಪೆಟ್ಟ, ಬಳಿಕ ಒಂದು ಕೈಪೆಟ್ಟ – ಇದೇ ಕ್ರಮೇಣ ಹೆಚ್ಚುತ್ತಾ ಹೋಗುತ್ತದೆ. ಹೀಗೆ ಐದು ಗುಣಿ ಪೆಟ್ಟನವರೆಗೂ ಬಡಿಯುತ್ತಾರೆ. ಇದು ಹಾಡುರಹಿತ ಮತ್ತು ಹಾಡುಸಹಿತವಾದ ವಾದ್ಯ.

ದುರುಗಮುರಗಿ ವಾದ್ಯ :

ಇದಕ್ಕೆ ಬುರಬುರಕಿ ಎಂಬ ಡೋಲು, ಡೊಳ್ಳು ಎಂದು ಕರೆಯುತ್ತಾರೆ. ದುರಗವ್ವ-ಮುರಗವ್ವ ಉರಿಮಾರವ್ವಾ ಎಂಬ ಮುಂತಾದ ಹೆಸರುಗಳಿಂದ ಕರೆಯಿಸಿಕೊಳ್ಳುವ ಉಗ್ರದೇವತೆಯನ್ನು ಹೊತ್ತಾಡುವ ಅಲೆಮಾರಿ ಪೂಜಾರಿವರ್ಗ ಈ ವಾದ್ಯವನ್ನು ಉಪಯೋಗಿಸುತ್ತಾರೆ. ಸುಮಾರು ೧೫ ಅಂಗುಲ ವ್ಯಾಸವಿರುವ ೩೦ ಅಂಗುಲ ಉದ್ದವಿರುವ ಕಂಚು ಅಥವಾ ಹಿತ್ತಾಳೆಯ ಪಡಗಕ್ಕೆ ಎರಡೂ ಕಡೆ ಹದಮಾಡಿದ ಆಡಿನ, ಜಿಂಕೆಯ ಚರ್ಮವನ್ನು ಬಿಗಿದು ಕಟ್ಟಿರುತ್ತಾರೆ. ಬಡಿಯಲು ಎರಡು ಗಟ್ಟಿಯಾದ ತೆಂಗಿನ ಅಥವಾ ಈಚಲು ಮರದ ಗರಿಗಳ ಕಡ್ಡಿಗಳನ್ನು ಬಳಸುತ್ತಾರೆ. ಬಡಿಯುವ ಕೋಲು ಬಲಗೈಯಲ್ಲಿರುತ್ತದೆ. ಎಡಗೈ ಕೋಲು ಬಡಿಯುವ ಕೋಲಿಗಿಂತಾ ಗಾತ್ರದಲ್ಲಿ ಸಣ್ಣದಾಗಿದ್ದು ಕಮಾನಿನಂತೆ ಬಾಗಿರುತ್ತದೆ. ಈ ಬಾಗಿದ ಕೋಲನ್ನು ಚರ್ಮದ ಮೇಲೆ ತಿಕ್ಕುವದರಿಂದ ಬುರು ಬುರು ; ಡರ ಡರ ನಾದ ಹೊರಡುತ್ತದೆ. ಇದು ತುಂಬಾ ಕರ್ಕಶವಾಗಿ ಕಿವಿಗೆ ಒಂದು ತರಹ ಹಿಂಸೆಯನ್ನು ಕೊಡುವುದಾಗಿರುತ್ತದೆ. ತಿಕ್ಕುವ ಸ್ಥಳದಲ್ಲಿ ಔಡಲ ಬೀಜಗಳನ್ನು ಕುಟ್ಟಿ ತೆಗೆದ ಜಿಡ್ಡನ್ನು (ದ್ರವವನ್ನು) ಹಚ್ಚುತ್ತಾರೆ. ಹೀಗೆ ಲೇಪಿಸಿದ ಭಾಗದಲ್ಲಿ ತಿಕ್ಕುವುದರಿಂದ ಒಂದು ವಿಲಕ್ಷಣ ಧ್ವನಿ ಹೊರಡುತ್ತದೆ. ಇದಕ್ಕೆ ಉರಮೆ ವಾದ್ಯ ಎಂದೂ ಕರೆಯಲಾಗುತ್ತದೆ. ಉರಿ ಮಾರೆಮ್ಮನನ್ನು ಹೊತ್ತಾಡುವ ಜನರ ವಾದ್ಯವಾದುದರಿಂದ ಮೇಲಿನ ಈ ಹೆಸರು ಬಂದಿರಬೇಕು.

ಢಕ್ಕೆ :

ವೃತ್ತಿ ಗಾಯಕರಾದ ನೀಲಗಾರರು ತಂಬೂರಿಯ ಜೊತೆಗೆ ಢಕ್ಕೆಯೆಂಬ ವಾದ್ಯವನ್ನು ಬಳಸುತ್ತಾರೆ. ೧೨ ನೇಯ ಶತಮಾನದ ವಚನಕಾರರಲ್ಲಿ ಢಕ್ಕೆಯ ಮಾರಯ್ಯ ಢಕ್ಕೆಯ ಬೊಮ್ಮಣ್ಣರೆಂಬ ಜನಪದ ಕಲಾವಿದರಿದ್ದಾರೆ. ಢಕ್ಕೆಯ ವಾದನವೇ ಅವರ ವೃತ್ತಿಯಾಗಿದ್ದರಿಂದ ಈ ಹೆಸರು ಬಂದಿರಬೇಕು, ಮೊರದಲ್ಲಿ ಮಾರಿಯನ್ನಿಟ್ಟುಕೊಂಡು ತನ್ನ ಕೈಯಲ್ಲಿ ಬಳೆ ಧರಿಸಿ, ಕತ್ತಿ ಬಟ್ಟಲು ಹಿಡಿದು ಮನೆ ಮನೆಗೆ ಢಕ್ಕೆಯನ್ನು ಬಾರಿಸುತ್ತ ಬರುತ್ತಿದ್ದಾನೆಂಬುದು ಅವನ ಒಂದು ವಚನದಿಂದ ತಿಳಿದು ಬರುತ್ತದೆ. ಢಕ್ಕೆಯ ಉದ್ದ ಸುಮಾರು ೧೦ ಅಂಗುಲ ಇರುತ್ತದೆ. ಚರ್ಮದ ಹೊದಿಕೆಯ ಎರಡೂ ಮುಖಗಳು ಸುಮಾರು ನಾಲ್ಕು ಅಂಗುಲ ವ್ಯಾಸವಿರುತ್ತದೆ. ಇದಕ್ಕೆ ದನದ ಚರ್ಮವನ್ನು ಬಳಸುತ್ತಾರೆ. ಕಟ್ಟಿಗೆ ಹಲಸಿನ ಮರದ್ದು. ಚರ್ಮದ ಹೊದಿಕೆಯನ್ನು ಕೈಯಿಂದ ಅಥವಾ ನಯವಾದ ಕೋಲಿನಿಂದ ಬಡಿದು ಶಬ್ದ ಹೊರಡಿಸುತ್ತಾರೆ. ವಾದ್ಯಕ್ಕೆ ಬಿಗಿದಿರುವ ದಾರಗಳನ್ನು ಧ್ವನಿ ಬದಲಾವಣೆಗಾಗಿ ಆಗಾಗ್ಗೆ ಅದುಮಿ ತ್ವರಿತವಾಗಿ ಕೈಯ್ಯನ್ನು ಹಿಂದೆಳೆದುಕೊಳ್ಳುತ್ತಾರೆ. ಹೀಗೆ ಮಾಡುವದರಿಂದ ನಾದ ವೈವಿಧ್ಯ ಏರ್ಪಡುತ್ತದೆ. ಇದು ಡಮರುಗಾಕಾರವನ್ನು ಹೋಲುತ್ತದೆ. ಶಾಸನಗಳಲ್ಲಿ “ಢಕ್ಕೆಯ ಕೇರಿ” ಎಂಬ ಉಲ್ಲೇಖಗಳೂ ಬರುತ್ತವೆ. ಆದ್ದರಿಂದ ಇದು ಜನಪ್ರಿಯ ವಾದ್ಯವೇ ಸರಿ.

ಡಮರುಗ :

ರಚನೆಯಲ್ಲಿ ಢಕ್ಕೆಯನ್ನೇ ಹೋಲುವ ಡಮರುಗದ ನಡುವೆ ಎರಡು ದಾರದ ಗಂಟುಗಳನ್ನು ಕಟ್ಟಿರುತ್ತಾರೆ. ಈ ಗಂಟುಗಳು ಡಮರುಗವನ್ನು ಹದವರಿತು ಅಲುಗಾಡಿಸುವದರಿಂದ ಎರಡೂ ಗಂಟುಗಳು ಎರಡೂ ಕಡೆಯ ಚರ್ಮದ ಹೊದಿಕೆಗೆ ಬಡಿದು ಢಮ ಢಮ ಧ್ವನಿ ಹೊರಡುತ್ತದೆ. ಈ ಢಮ ಢಮ ನಾದದಿಂದಲೇ ಇದಕ್ಕೆ ಡಮರುಗವೆಂದು ಕರೆದಿರಬೇಕು. ಇದು ಶಿವನ ವಾದ್ಯವೆಂದು ತಿಳಿದು ಶಿವಭಕ್ತರಾದ ಗೊರವರು ಈ ವಾದ್ಯವನ್ನು ಪೂಜಿಸಿ ಉಪಯೋಗಿಸುತ್ತಾರೆ. ಗೊರವರ ಕಲಾಪ್ರದರ್ಶನಕ್ಕೆ ಈ ವಾದ್ಯದಿಂದಾಗಿ ಎಲ್ಲಿಲ್ಲದ ಕಳೆಕಟ್ಟುತ್ತದೆ. ೪-೫ ಜನ ಗೊರವಯ್ಯಗಳು ವಿಶಿಷ್ಟವಾದ ತಾಳ ಲಯಗಳೊಂದಿಗೆ ಡಮರುಗದ ನಾದದೊಡನೆ ಸ್ತುತಿಪದಗಳನ್ನು ಹೇಳುತ್ತಾ ಕುಣಿಯುತ್ತಾರೆ. ಕುಣಿತ ಪರಾಕಾಷ್ಠೆಯನ್ನು ಮುಟ್ಟಿದಾಗ ಡಮರುಗದ ನಾದದೊಂದಿಗೆ ಅವರ ಕುಣಿತ ರುದ್ರಸ್ವರೂಪವನ್ನು ತಾಳುತ್ತದೆ. ಮಹಾಕವಿ ಹರಿಹರ ತನ್ನ ಕಾರಿಕಾಲಮ್ಮೆ ರಗಳೆಯಲ್ಲಿ ಡಮರುಗದ ನಾದದೊಂದಿಗೆ ಶಿವನರ್ತನದ ದರ್ಶನ ಹೀಗೆ ಮಾಡಿಸುತ್ತಾನೆ :

‘ಡಮರುಗದ ನಾದಮುಂ ಢಣಢಣವೆನುತ್ತಿರಲ್……

…………ತಾನಾಡೆ ಜಗವಾಡೆ ಜೀವರಾಶಿಗಳಾಡೆ’

ಎಂದು ಹೇಳುವ ಮಾತಿನಲ್ಲಿ ಈ ವಾದ್ಯದ ನಾದಕ್ಕೆ ಜಗವೇ ಸ್ಪಂದಿಸುತ್ತದೆಂದು ಹೇಳಿದ ಈ ಕವಿ, ಗುಂಡಯ್ಯನ ರಗಳೆಯಲ್ಲಿಯೂ ಶಿವನರ್ತನದ ವೇಳೆಯಲ್ಲಿ ಡಮರುಗದ ಪ್ರಸ್ತಾಪ ಮಾಡುತ್ತಾನೆ :

“ಮಿಸುಗುವ ಡಮರುಗ ಢಂ ಢಂ ಢಣಲನೆ

ತಿಸುಳದಿ ಹರಿಯುವ ತಾರಂ ತಿರ‍್ರನೇ”

ಎಂದು ಹೇಳುತ್ತಾ ‘ಆಡಿದ ನಾಡಿದ ನಾಹಾ ಶಂಕರಾ ! ಆಡಿದನಾ ಗುಂಡನ ಮುಂದೀಶ್ವರ’ ಹೀಗೆ ಕುಣಿತ ಪರಾಕಾಷ್ಠೆ ಮುಟ್ಟಲು ಡಮರುಗದ ಸ್ಫೂರ್ತಿ ಮರೆಯಲಿಕ್ಕಾಗದು. ಗೊರವರಲ್ಲದೇ ಕೆಲವು ಭಾಗದಲ್ಲಿ ಹಾವಾಡಿಗರು, ಮಂಗನಾಡಿಸುವವರು ಈ ವಾದ್ಯವನ್ನು ತಮ್ಮ ಕಲೆಯಲ್ಲಿ ಬಳಸಿಕೊಳ್ಳುತ್ತಾರೆ.

ಬುಡಬುಡಕಿಯ ವಾದ್ಯ :

ಚರ್ಮವಾದ್ಯಗಳಲ್ಲಿ ಅತೀ ಚಿಕ್ಕದಾದ ವಾದ್ಯ ಈ ಬುಡಬುಡಕಿಯ ವಾದ್ಯ. ಇದನ್ನು ಕಿರುಡಮರುಗವಾದ್ಯವೆಂದು ಕರೆಯಬಹುದು. ಈ ವಾದ್ಯದ ಉಗಮದ ಬಗ್ಗೆ ದಂತಕಥೆಗಳಿವೆ. [ಶ್ರೀ ಕೃಷ್ಣನು ತಾರಕಾಸುರ-ಮಾರಕಾಸುರರನ್ನು ಸಂಹಾರ ಮಾಡಲು ಹೋದಾಗ ಬುಡಬುಡಕಿಯ ವಾದ್ಯ ಹಿಡಿದು ವೇಷ ಮರೆಸಿಕೊಂಡು ಹೋಗಿದ್ದನಂತೆ ಶ್ರೀಕೃಷ್ಣನಿಂದ ಬಳುವಳಿಯಾಗಿ ಈ ಕಲೆ ತಮಗೆ ಬಂದಿದೆಯೆಂದು ಹೇಳುತ್ತಾರೆ.] ಗೊಂದಲಿಗರ ಸಮೀಪಜಾತಿಯವರಾದ ಇವರಿಗೆ ಬುಡಬುಡಕಿಗಳೆಂದೇ ಕರೆಯುತ್ತಾರೆ. “ಕಿಡಬುಡ” ಈ ನಾದದ ಕಾರಣವಾಗಿಯೇ ಈ ವಾದ್ಯ ಹೀಗೆ ಕರೆಸಿಕೊಳ್ಳುತ್ತಿರಬೇಕು. ಮೂಡಲದ ಹಣೆಯಲ್ಲಿ ಬೆಳ್ಳಿ ಮೂಡುವ ಮುನ್ನ ಪ್ರಶಾಂತ ನಿಶೆಯೊಳಗೆ ಊರಲ್ಲಿ ತನ್ನ ಮಧುರ ಕಂಠದಿಂದ ಹಾಡುತ್ತ ತಿರುಗುವ ಬುಡಬುಡಕನಿಗೆ ಅವನ ವಾದ್ಯದ ರಮ್ಯನಿನಾದವು ಜೊತೆಗೂಡಿ ಮೇಳ ನಿದ್ದೆಯಲ್ಲಿ ಇದ್ದವರನ್ನು ಸುಖನಿದ್ದೆಯಲ್ಲಿ ತೂಗುತ್ತದೆ. ಈತ ಹೇಳುವ ಶಕುನದ ವಿಫಲತೆಯಿಂದಾಗಿ ; ‘ಬುಡಬುಡಕ್ಯಾನ ಮಾತ ಬುಡುತನಕ ಸುಳ್ಳ’ ಎಂಬ ಗಾದೆ ಹುಟ್ಟಿಕೊಂಡಿದೆ. ಸು ೮ ಅಂಗುಲ ಉದ್ದವಿರುವ ಕಳಸಿನ ಎರಡೂ ಬಾಯಿಗಳಿಗೂ ಕಪ್ಪೆ ಚರ್ಮ ಇಲ್ಲವೆ ಆಡಿನ ಜಠರದ ಚರ್ಮವನ್ನು ದಾರಗಳ ಸಹಾಯದಿಂದ ಬಿಗಿದಿರುತ್ತಾರೆ. ಬಿಗಿಯುವ ದಾರಕ್ಕೆ ಬದ್ದೆ ದಾರವೆಂದು ಕರೆಯುತ್ತಾರೆ. ಬದ್ದೆಯ ಭಾಗದಲ್ಲಿ ಎರಡೂ ಮಗ್ಗಲು ತದ್ವಿರುದ್ಧವಾಗಿ ಎರಡು ದಾರದ ತುಂಡುಗಳನ್ನು ಕಟ್ಟಿರುತ್ತಾರೆ. ಈ ದಾರದ ತುಂಡುಗಳ ಬಡಿಯುವ ತುದಿಗೆ ಮೇಣವನ್ನಂಟಿಸಿ ಸಣ್ಣ ಗಂಟುಗಳನ್ನಾಗಿ ಮಾಡಿ ಬಡಿಯುತ್ತಾರೆ. ಈ ಗಂಟುಗಳು ಎರಡೂ ಮುಖದ ಮಧ್ಯದಲ್ಲಿ ಬಂದು ಇನ್ನೊಂದು ಬುಡಬುಡಕೆಯ ಎರಡೂ ಮುಖದ ಬದಿ ಬಡಿಯುವಂತೆ ಕಟ್ಟಿರುತ್ತಾರೆ, ಇವುಗಳಿಗೆ ತಾಳುಗಳೆಂದು ಹೆಸರು. ಕಳಸಿನ ನಡುವೆ ಬೆರಳುಗಳಿಂದ ಹಿಡಿದು ಕೈಚಳಕದಿಂದ ತ್ವರಿತವಾಗಿ ಈ ವಾದ್ಯವನ್ನು ಅಲುಗಿಸಿದಾಗ ಗಂಟುಹಾಕಿದ ದಾರಗಳು ಚರ್ಮದ ಭಾಗಗಳಿಗೆ ಬಡಿದು ‘ಕಿಡಬುಡ’ ನಾದ ಕೊಡುತ್ತದೆ. ವಾದ್ಯದ ನಡುವೆ ಬಣ್ಣ-ಬಣ್ಣದ ಬಟ್ಟೆಗಳನ್ನು ಕಟ್ಟಿ ಆ ಬಟ್ಟೆಗಳಿಂದ ಬಿಗಿಯಾಗಿ ಹಿಡಿದು ನುಡಿಸುತ್ತಾರೆ.

ದುಡಿ :

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದುಡಿವಾದ್ಯ ವಿಶೇಷವಾಗಿದೆ. ಅಲ್ಲಿಯ ಮೇರ ಜನಾಂಗ ಗುಡ್ಡಗಾಡಿನಲ್ಲಿ ವಾಸಮಾಡುವ ಕುಡಿಯರು, ಕಾಪಾಳರು ಹೆಚ್ಚಾಗಿ ಈ ವಾದ್ಯದ ಉಪಯೋಗಮಾಡುತ್ತಾರೆ. ಸುಗ್ಗಿ ಮುಗಿದ ಸಂತೋಷದಲ್ಲಿ ಈ ವಾದ್ಯವನ್ನು ಬಳಸಿಕೊಂಡು ಕುಣಿಯುತ್ತಾರೆ. ಇದಕ್ಕೆ ದುಡಿಕುಣಿತವೆಂದೇ ಹೆಸರಿದೆ. ಮದುವೆ ನಾಮಕರಣ, ಮಂಗಲ ಉತ್ಸವಗಳಲ್ಲಿ ಈ ದುಡಿ ಬಡಿಯುವ ಕಲೆಯನ್ನು ಪ್ರದರ್ಶಿಸುತ್ತಾರೆ. ರಾತ್ರಿ ಹೊತ್ತು ಗದ್ದೆಯ ಬಯಲಿನ ಗುಡಿಸಲುಗಳ ಮುಂದೆ ಕುಳಿತು, ಕುಣಿದು ದುಡಿ ಬಾರಿಸಲು ಪ್ರಾರಂಭಿಸಿದರೆ ಶ್ರೋತೃಗಳಿಗೆ ಅನಿರ್ವಚನೀಯವಾದ ಆನಂದದ ಅನುಭವ ಸಿಗುತ್ತದೆ. ದುಡಿ ಡಮರುಗವನ್ನೇ ಹೋಲುವ ವಾದ್ಯ. ಅದಕ್ಕಿಂತ ಉದ್ದದಲ್ಲಿ ಸ್ವಲ್ಪ ದೊಡ್ಡದು. ಹಲಸು ಮುಂತಾದ ಮರವನ್ನು ಕೊರೆದು ಮಾಡಿದ ಕಳಸದ ಬಲಬಾಯಿಗೆ ದನದ ಚರ್ಮ, ಎಡಬಾಯಿಗೆ ಆಡಿನ ಚರ್ಮವನ್ನು ಚರ್ಮದ ಬಾರುಗಳಿಂದಲೇ ಬಿಗಿದಿರುತ್ತಾರೆ. ಎರಡೂ ಬದಿಯ ಬಾಯಿಗಳು ಅಗಲವಾಗಿರುತ್ತವೆ. ಬಡಿಯುವ ಜಾಗಕ್ಕೆ ದುಡಿಯ ಕರಣೆಯೆಂದು ಕರೆಯುತ್ತಾರೆ. ನಾದವೈಖರಿಗೆ ತಕ್ಕಂತೆ ದುಡಿಯ ಸುತ್ತ ಬಾರನ್ನು ಬಿಗಿಗೊಳಿಸುವದು ಸಡಿಲಿಸುವದು ಮಾಡುತ್ತಾರೆ. ದುಡಿಯ ವಾದನಕಾರ ಈ ಕಲೆಗೆ ತನ್ನನ್ನು ಅರ್ಪಿಸಿಕೊಂಡಿರುತ್ತಾನೆ. ಬಡಿಯುವಾಗ ಬಾಹ್ಯ ಪ್ರಪಂಚದ ಎಲ್ಲ ವ್ಯವಹಾರಗಳನ್ನು ಮರೆತಿರುತ್ತಾನೆ. ದುಡಿ ಬಾರಿಸುವ ಕಲಾವಿದನು ಅದನ್ನು ಸೊಂಟಕ್ಕೆ ಕಟ್ಟಿಕೊಂಡು ಇಲ್ಲವೆ ಕೊರಳಿಗೆ ಹಾಕಿಕೊಂಡು ಒಂದು ಕೈಯಲ್ಲಿ ಹಿಡಿದು ಮತ್ತೊಂದು ಕೈಯಿಂದ ಬಡಿಯುತ್ತಾನೆ. ಬಡಿತದಲ್ಲಿ ಅನೇಕ ಗತ್ತುಗಳಿವೆ. ಸೂಕ್ಷ್ಮವಾಗಿ ಗಮನಿಸಿದರೆ ಆ ಗತ್ತುಗಳ ವೈವಿಧ್ಯತೆ ಅರ್ಥವಾಗಬಹುದು. ಹಾಡಿನ ದನಿ ಮಂದ್ರದಿಂದ ತಾರಕಕ್ಕೆ ಹೋಗುವಂತೆ ದುಡಿಯ ಧನಿಯಲ್ಲೂ ಇಂಥ ಬೆಡಗಿದೆ. ಅದು ವಾದನಕಾರನ ಕುಶಲತೆಯನ್ನು ಅವಲಂಬಿಸಿದೆ.

ಕರಡಿ :

ಉತ್ತರ ಕರ್ನಾಟಕದಲ್ಲಿ ‘ಕರಡಿಮಜಲು’ ಎಂದೇ ಕರೆಯಿಸಿಕೊಂಡಿರುವ ಈ ವಾದ್ಯದ ವಾದನದ ಕಲೆ ತುಂಬಾ ಜನಪ್ರಿಯವಾದುದು. ಇದನ್ನು ದಕ್ಷಿಣ ಕರ್ನಾಟಕದಲ್ಲಿ ಕರಡಿಮೇಳ ಎಂದು ಕರೆಯುತ್ತಾರೆ. ಜಾತ್ರೆ ಉತ್ಸವಗಳಲ್ಲಿ ಧರ್ಮಗುರುಗಳನ್ನು ಊರೊಳಗೆ ಬರಮಾಡಿಕೊಳ್ಳುವಲ್ಲಿ ಮದುವೆ ಮೆರವಣಿಗೆಯಲ್ಲಿ ಈ ವಾದ್ಯದ ಮಜಲು ನಡೆಯುತ್ತದೆ. ಕರಡಿವಾದ್ಯ ಇತರ ಪಕ್ಕವಾದ್ಯಗಳ ಸಹಕಾರದಿಂದ ವಿಜೃಂಭಿಸುತ್ತದೆ. ೮ ಅಂಗುಲ ವ್ಯಾಸವುಳ್ಳ ೨೪ ಅಂಗುಲ ಉದ್ದವಿರುವ ಮರದ ಪಡಗಕ್ಕೆ ಆಡಿನ ಇಲ್ಲವೆ ಚಿಗರೆಯ ಚರ್ಮವನ್ನು ಎರಡೂ ಬಾಯಿಗೂ ಅಳವಡಿಸುತ್ತಾರೆ. ನಯವಾದ ಎರಡು ಗುಣಿಗಳಿಂದ ಒಳ್ಳೇ ಗತ್ತಿನಿಂದ ಬಾರಿಸುತ್ತಾರೆ. ಇದನ್ನು ಸೊಂಟಕ್ಕೆ ಇಲ್ಲವೆ ಕುತ್ತಿಗೆಗೆ ತೂಗು ಹಾಕಿಕೊಂಡಿರುತ್ತಾರೆ. ಬಡಿತದಲ್ಲಿ ಆದಿತಾಳ, ಏಕತಾಳ, ಝಂಪತಾಳ ಚೌತಾಳ ಚಾಲು ಮುಂತಾಗಿ ಬಾರಿಸುವದು ಮಿಶ್ರತಾಳ ಮುಂತಾದ ತಾಳಗಳನ್ನು ಹೆಸರಿಸುತ್ತಾರೆ.

ನಿಧಾನವಾಗಿ ಪ್ರಾರಂಭವಾದ ಕರಡಿಮಜಲಿನ ಗತ್ತು ಗತಿಗಳು ಹಂತ-ಹಂತವಾಗಿ ಏರಿ ಕ್ರಮೇಣ ಅದೇ ಗತಿಯಲ್ಲಿ ನಿಧಾನವಾಗಿ ಮುಕ್ತಾಯವಾಗುತ್ತವೆ. ‘ಕರಡಿವಾದ್ಯವು ಗುಡುಗುಡುತ್ತ ಸಾಗಿದಂಗೆ ಹಿಂಡುವ ದನಗಳು ತೊರವು ಬಿಡುವುದನ್ನು ಕಂಡಿದ್ದೇವೆ’ ಎಂಬುದಾಗಿ ಒಂದು ಕಡೆ ಶ್ರೀ ಸಿಂಪಿಲಿಂಗಣ್ಣನವರು ನೆನೆಸಿಕೊಂಡಿದ್ದಾರೆ. (ಆ ಕರಡಿ ವಾದಕನ ಹೆಸರು ಚಡಚಣದ ಸಿದರಾಯ ಎಂದು) ಶೃತಿಕಷ್ಟ ಸಂಧಿಯ ವಿಷಯವಾಗಿ ಈ ವಾದ್ಯದ ಧ್ವನಿಯನ್ನು ಕೇಶಿರಾಜನು ಹೆಸರಿಸುತ್ತಾನೆ. ಶಾಸನಗಳಲ್ಲಿ ಭೂಮಿದಾನದಲ್ಲಿ “ಕರಡಿಮಾನ್ಯದ ಹೊಲ” ಎಂಬ ಪ್ರಸ್ತಾಪ ಬರುತ್ತದೆ. ಕರಡಿ ಮೇಳಕ್ಕೆ ಕೊಟ್ಟ ಹೊಲ ಎಂಬ ಮಾತು ಶಾಸನಗಳಲ್ಲಿ ಬರುವದರಿಂದ ಇದರ ಪ್ರಾಮುಖ್ಯತೆಯ ಅರಿವು ನಮಗಾಗದೇ ಇರದು.

ಮದ್ದಳೆ :

ಜನಪದ ಆಟಗಳಾದ ಯಕ್ಷಗಾನ ದೊಡ್ಡಾಟಗಳಲ್ಲಿ ಈ ವಾದ್ಯಕ್ಕೆ ಅತ್ಯಂತ ಪ್ರಾಧಾನ್ಯತೆ ಇದೆ. ಕನ್ನಡದ ಪ್ರಾಚೀನ ಕಾವ್ಯಗಳಲ್ಲಿಯೂ ಮದ್ದಳೆಯ ಪ್ರಸ್ತಾಪವಿರುತ್ತದೆ. ಅಲ್ಲಮಪ್ರಭು ಮದ್ದಳೆಯನ್ನು ನುಡಿಸುತ್ತ ಬನವಾಸಿಯ ಮಧುಕೇಶ್ವರ ದೇವಾಲಯದಲ್ಲಿ ಮಾಯೆಯನ್ನು ಕುಣಿಸಿದ ಉಲ್ಲೇಖ ಪ್ರಭುಲಿಂಗ ಲೀಲೆಯಲ್ಲಿದೆ. “ಭರತೇಶ ವೈಭವ”ದಲ್ಲಿಯೂ ತೆರೆಯ ಮುಂಗಡೆಯೊಳು ನಿಂದು ಮದ್ದಳಿಗರು ಭರತಚಕ್ರಿಗೆ ಕೈ ಮುಗಿದು ಏರಿಕಟ ತದಿಕಟ ರಿಕ್ಕಾರಿಕ್ಕಟ, ದಿಮಿ ದಿರುದಿಮಿಕೆಂದು ಕೇಳಿಸಿದ….ಎಂಬ ಮಾತು ಬರುತ್ತದೆ. ‘ಮದ್ದಳೆಕಾರ'; ‘ಮದ್ದಳೆಯ ಕಲ್ಲಯ’ ಎಂದು ಮುಂತಾದ ಪದಪ್ರಯೋಗಗಳು ಶಾಸನದಲ್ಲೂ ಉಂಟು. ಹೀಗಾಗಿ ಈ ವಾದ್ಯ ಜನಪದ ಆಟಗಳಲ್ಲಿಯೂ ಮಾರ್ಗ ಕೃತಿಗಳಲ್ಲಿಯೂ ಉಪಯೋಗವಾಗಿದೆ. ಮದ್ದಳೆಯು ಮೃದಂಗದ ಮತ್ತೊಂದು ರೂಪವೆಂದರೂ, ಇದು ಮೃದಂಗಕ್ಕಿಂತ ಗಾತ್ರದಲ್ಲಿ ಸ್ವಲ್ಪ ದೊಡ್ಡದು. ಕೇರಳದ ಕಥಕ್ಕಳಿ ನೃತ್ಯದಲ್ಲಿ ಕೆಲವು ದೇವಾಲಯಗಳಲ್ಲಿ ಪೂಜಾ ಸಮಯಕ್ಕೆ ಈ ವಾದ್ಯವನ್ನು ನುಡಿಸುವ ರೂಢಿಯಿದೆ.

ಹಲಗೆ :

ಹಲಗೆಗಳಲ್ಲಿ ಹಲವು ಪ್ರಕಾರಗಳಿವೆ. ಚಿಟ್ಟಹಲಗೆ, ರಣಹಲಗೆ, ಜಗ್ಗಲಗೆ, ಕಣಿಹಲಗೆ. ತಮಟೆ, ಪರೆ, ಸಂಪರದಾನಿ ಎಂದು ಮುಂತಾಗಿ ಕರೆಯುತ್ತಾರೆ. ‘ಹಲಗೆಯಿಲ್ಲದ ಊರಿಲ್ಲ ಒಲೆಯಿಲ್ಲದ ಓಣಿಯಿಲ್ಲ’ ಎಂಬ ಗಾದೆ ಇದೆ. ಗ್ರಾಮ ದೇವತೆಗಳ ಉತ್ಸವ ಜಾತ್ರೆ ವಿವಿಧ ಎತ್ತುಗಳ ಹಾಗೂ ವ್ಯಕ್ತಿಗಳ ಮೆರವಣಿಗೆ, ಮದುವೆ, ಮರಣ, ಡಂಗುರ ಮುಂತಾದ ಪ್ರಚಾರ ಮಾಧ್ಯಮಕ್ಕಾಗಿ- ಹೀಗೆ ವಿವಿಧ ಸಂದರ್ಭಗಳಲ್ಲಿ ಪ್ರಾದೇಶಿಕ ಭಿನ್ನತೆಯೊಂದಿಗೆ ಈ ವಾದ್ಯ ಉಪಯೋಗ ಬೀಳುತ್ತದೆ. ಪೋತರಾಜನಿಗಂತೂ ಇದು ವೃತ್ತಿವಾದ್ಯವಾಗಿದೆ. ಹಲಗೆ ಬಾರಿಸುವ ಮತ್ತು ತಯಾರಿಸುವ ಕಸುಬು ಹೊಲೆಮಾದಿಗರಲ್ಲಿದೆ. ಈ ವಾದ್ಯದ ರಚನೆ ಸರಳವಾಗಿದೆ. ವೃತ್ತಾಕಾರವಾಗಿ ಸಿದ್ಧಗೊಳಿಸಿದ ಒಂದು ಮರದ ಬಳೆ ; ವ್ಯಾಸ ಸು. 1½ 2½ 3 1/3 ಅಡಿ ಹೀಗೆ ವಿವಿಧ ಪ್ರಮಾಣದ್ದಾಗಿರುತ್ತದೆ. ಈ ಬಳೆಗೆ ಚೆನ್ನಾಗಿ ಹದಗೊಳಿಸಿದ ಕೋಣನ ಚರ್ಮವನ್ನು ಬಿಗಿದು ಕಟ್ಟಿರುತ್ತಾರೆ. ಕಟ್ಟಲು ಚರ್ಮದ ದಾರಗಳನ್ನು ಬಳಸುತ್ತಾರೆ. ಹಲಗೆ ಚರ್ಮವನ್ನು ಮೊದಲು ಸುಣ್ಣದಲ್ಲಿ ಇಟ್ಟಿರುತ್ತಾರೆ. ಅದು ಸುಣ್ಣ ಮೇದಷ್ಟು ಧ್ವನಿ ‘ತಾರ’ ಬರುತ್ತದೆಂದು ಹೇಳುತ್ತಾರೆ. ಹೆಗಲಿಗೆ ತೂಗುಹಾಕಲು ಅನೂಕೂಲವಾಗುವಂತೆ ಹೆಗಲುಪಟ್ಟಿ ಜೋಡಿಸಿ ಬಾರಿಸಲು ಒಂದು ಕಟಿಗೆ ಗುಣಿಯನ್ನು, ಇನ್ನೊಂದು ತಿಳುವಾದ ಕಡ್ಡಿಯನ್ನು ಉಪಯೋಗಿಸುತ್ತಾರೆ. ಏರು ಧ್ವನಿ ಬರುವಂತೆ ಹಲಗೆಯನ್ನು ಬಿಸಿಲು ಇಲ್ಲವೆ ಬೆಂಕಿಯಲ್ಲಿ ಕಾಯಿಸಿ ಕಣ ಕಣ ನಾದ ಹೊರಡಿಸುತ್ತಾರೆ. ಹಲಗೆಯ ಬಡಿದಲ್ಲಿ ನಾನಾ ರೀತಿಗಳಿವೆ. ಇದೊಂದು ವಿಶಿಷ್ಟ ಕಲೆಯಾಗಿಯೇ ಗ್ರಾಮಗಳಲ್ಲಿ ಬೆಳೆದಿದೆ. ವಿವಿಧ ಬಗೆಯ ಧ್ವನಿಗಳನ್ನು ಹಲಗೆಯಲ್ಲಿಯೇ ಬಡಿ

ಹೆಚ್ಚುವರಿ ಸಂಪನ್ಮೂಲ

  1. ಯಕ್ಷಗಾನ ವಿಕಿಪೀಡಿಯ
  2. ಕಂಸಾಳೆ ಕೈಸಾಲೆ ಚಲನ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿರಿ
[
ಕಂಸಾಳೆ ವೀಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿರಿ]

[

ನಂದಿ ಕುಣಿತ]
[
ವೀರಗಾಸೆ]





ಸಾರಾಂಶ

ಪರಿಕಲ್ಪನೆ ೧

ಚಟುಟವಟಿಕೆ-೧

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಚಟುಟವಟಿಕೆ-೨

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಪರಿಕಲ್ಪನೆ ೨

ಚಟುಟವಟಿಕೆ-೧

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಭಾಷಾ ವೈವಿಧ್ಯತೆಗಳು

ಶಬ್ದಕೋಶ

ವ್ಯಾಕರಣ

ಮೌಲ್ಯಮಾಪನ

ಚರ್ಚಾ ಕೂಟ

  1. ಜಾನಪದ ಕಲೆಗಳು ಉಳಿಸುವದು ಅವಶ್ಯಕವೆ ?
  2. ಜಾನಪದ ಕಲೆ ಉಳಿಸಲು ಏನು ಮಾಡಬೇಕು?
  3. ಜಾನಪದ ಕಲೆಗಳಿಂದ ಕಲಿಯುವ ಪಾಠವೇನು ?

ಭಾಷಾ ಚಟುವಟಿಕೆಗಳು/ ಯೋಜನೆಗಳು

ಪಠ್ಯ ಬಗ್ಗೆ ಹಿಮ್ಮಾಹಿತಿ