ನಿನ್ನ ಮುತ್ತಿನ ಸತ್ತಿಗೆಯನ್ನಿತ್ತು ಸಲಹು
ಪರಿಕಲ್ಪನಾ ನಕ್ಷೆ
ಹಿನ್ನೆಲೆ/ಸಂದರ್ಭ
ಕಲಿಕೋದ್ದೇಶಗಳು
ಕವಿ ಪರಿಚಯ
ಶಿಕ್ಷಕರಿಗೆ ಟಿಪ್ಪಣಿ
ಹೆಚ್ಚುವರಿ ಸಂಪನ್ಮೂಲ
ಸಾರಾಂಶ
ಸಂದ ಕಾರಿರುಳು ಕನ್ನೆಯರು ಹಗಲಂ ನೋಡ
ಲೆಂದು ಬಂದರೊ ಸುರಾಸುರರಬುಧಿಯಂ ಮಥಿಸು
ವಂದು ಹೊಸ ವಿಷದ ಹೊಗೆ ಹೊಯ್ದು ಕಗ್ಗನೆ ಕಂದಿ ಜಲದೇವಿಯರು ಮನದಲಿ
ನೊಂದು ಮಾನಿಸರಾದರೋ ಕಮಲಜಂ ನೀಲ
ದಿಂದ ಮಾಡಿದ ಸಾಲಭಂಜಿಕೆಗಳೊದವಿ ಜೀ
ವಂದಳೆದವೋ ಎನಿಪ್ಪಂದದಿಂ ಬಂದರಂಗನೆಯರವನೀಶನೆಡೆಗೆ || ೧ ||
ಪದವಿಭಾಗ ಮತ್ತು ಪದಶಃ ಅರ್ಥ:
ಸಂದ (ಬಂದ) ಕಾರಿರುಳು (ಗಾಢಕತ್ತಲೆಯ ರಾತ್ರಿ) ಕನ್ನೆಯರು (ಕುಮಾರಿಯರು) ಹಗಲಂ (ಹಗಲನ್ನು) ನೋಡಲೆಂದು (ನೋಡುವುದಕ್ಕೆಂದು) ಬಂದರೊ. ಸುರಾಸುರರು (ದೇವತೆಗಳು ಮತ್ತು ರಾಕ್ಷಸರು) + ಅಂಬುಧಿಯಂ (ಸಮುದ್ರವನ್ನು) ಮಥಿಸುವಂದು (ಮಂಥನ ಮಾಡುವಾಗ) ಹೊಸ ವಿಷದ ಹೊಗೆ ಹೊಯ್ದು (ಸುರಿದು) ಕಗ್ಗನೆ (ಕಪ್ಪಗೆ) ಕಂದಿ (ಕಂದುಹೋಗಿ) ಜಲದೇವಿಯರು ಮನದಲಿ (ಮನದಲ್ಲಿ) ನೊಂದು ಮಾನಿಸರ್ (ಮನುಷ್ಯರು) + ಆದರೋ, ಕಮಲಜಂ (ಬ್ರಹ್ಮನು) ನೀಲದಿಂದ (ನೀಲಿ ಬಣ್ಣದಿಂದ) ಮಾಡಿದ ಸಾಲಭಂಜಿಕೆಗಳ್ (ಗೊಂಬೆಗಳು/ವಿಗ್ರಹಗಳು) + ಒದವಿ (ಹುಟ್ಟಿ) ಜೀವಂ (ಜೀವ) + ತಳೆದವೋ(ಪಡೆದವೋ) ಎನಿಪ್ಪಂದದಿಂ (ಎನ್ನಿಸುವಂತೆ) ಬಂದರ್ + ಅಂಗನೆಯರ್ (ಅಂಗನೆಯರು / ಗಾನರಾಣಿಯರು) + ಅವನೀಶನ (ರಾಜನ) + ಎಡೆಗೆ (ಕಡೆಗೆ)
ಸಾರಾಂಶ: ಕಾಳರಾತ್ರಿಯ ಕನ್ಯೆಯರು ಹಗಲನ್ನು ನೋಡುವುದಕ್ಕೆಂದು ಬಂದರೋ! ದೇವತೆಗಳು ಮತ್ತು ರಾಕ್ಷಸರು ಸಮುದ್ರವನ್ನು ಮಂಥನ ಮಾಡುವ ಸಮಯದಲ್ಲಿ ಹೊರಹೊಮ್ಮಿದ ಹೊಸ ವಿಷದ ಹೊಗೆ ಸುರಿದು, ಕಪ್ಪಾಗಿ ಘನೀಕೃತವಾದಂತೆ ಜಲದೇವಿಯರು ಮನದಲ್ಲಿ ನೊಂದು, ಮನುಷ್ಯರಾದರೋ! ಬ್ರಹ್ಮನು ನೀಲಿ ಬಣ್ಣದಿಂದ ಮಾಡಿದ ಗೊಂಬೆಗಳು ಜೀವವನ್ನು ಪಡೆದವೋ! ಎನ್ನುವಂತೆ ಗಾನರಾಣಿಯರು ಮಹಾರಾಜ ಹರಿಶ್ಚಂದ್ರ ಇರುವಲ್ಲಿಗೆ ಬಂದರು.
ಮಾಯದಬಲೆಯರು ಕಾಣುತ್ತ ಮಝ ಭಾಪದಟ
ರಾಯ ಮಝರೇ ರಾಯ ರಾಯದಳವುಳಕಾಱ
ರಾಯಕಂಟಕ ರಾಯಜಗಜಟ್ಟಿ ರಾಯದಲ್ಲಣ ರಾಯಕೋಳಾಹಳ
ರಾಯಭುಜಬಲಭೀಮ ರಾಯಮರ್ಧನ ರಾಯ
ಜೀಯ ಸ್ಥಿರಂಜೀವಯೆಂದು ಕೀರ್ತಿಸಿ ಗಾಣ
ನಾಯಕಿಯರೊಲಿದು ದಂಡಿಗೆವಿಡಿದು ಪೊಡಮಟ್ಟು ಹಾಡಲುದ್ಯೋಗಿಸಿದರು || ೨ ||
ಪದವಿಭಾಗ ಮತ್ತು ಪದಶಃ ಅರ್ಥ:
ಮಾಯದ + ಅಬಲೆಯರು (ಹೆಣ್ಣುಮಕ್ಕಳು) ಕಾಣುತ್ತ ಮಝ (ಇದು ಹೊಗಳಿಕೆಯ ಒಂದು ಮಾತು/ ಒಂದು ಉದ್ಗಾರವಾಚಕ) ಭಾಪು (ಇದು ಹೊಗಳಿಕೆಯ ಒಂದು ಮಾತು/ ಒಂದು ಉದ್ಗಾರವಾಚಕ) + ಅದಟ (ಶೂರ / ಪರಾಕ್ರಮಿ) ರಾಯ (ರಾಜ) ಮಝರೇ ರಾಯ ರಾಯದಳವುಳಕಾರ (ಶತ್ರು ರಾಜರನ್ನು ಸೂರೆ ಮಾಡುವವನು) ರಾಯಕಂಟಕ (ಶತ್ರುರಾಜರಿಗೆ ಕಂಟಕಪ್ರಾಯ ನಾದವನು) ರಾಯಜಗಜೆಟ್ಟಿ (ರಾಜರಲ್ಲಿ ಜಗಜಟ್ಟಿ) ರಾಯದಲ್ಲಣ (ಶತ್ರುರಾಜರನ್ನು ತಲ್ಲಣಗೊಳಿಸುವವನು) ರಾಯಕೋಳಾಹಳ (ಶತ್ರುರಾಜರಲ್ಲಿ ಕೋಲಾಹಲವನ್ನು ಉಂಟು ಮಾಡುವವನು) ರಾಯಭುಜಬಲಭೀಮ(ಭೀಮನಂತೆ ಬಲಶಾಲಿ) ರಾಯಮರ್ದನ (ಶತ್ರುರಾಜರನ್ನು ನಾಶಮಾಡುವವನು) ರಾಯಜೀಯ (ರಾಜ ಒಡೆಯ) ಸ್ಥಿರಂಜೀವ (ಚಿರಂಜೀವಿಯಾಗು) + ಎಂದು ಕೀರ್ತಿಸಿ ಗಾಣನಾಯಕಿಯರು (ಗಾನನಾಯಕಿಯರು) + ಒಲಿದು (ಪ್ರೀತಿಯಿಂದ) ದಂಡಿಗೆ (ಒಂದು ತಂತಿವಾದ್ಯ) + ಹಿಡಿದು ಪೊಡಮಟ್ಟು (ನಮಸ್ಕರಿಸಿ) ಹಾಡಲು + ಉದ್ಯೋಗಿಸಿದರು (ಪ್ರಾರಂಭಿಸಿದರು)
ಸಾರಾಂಶ: ಆ ಮಾಯದ ಹೆಣ್ಣುಮಕ್ಕಳಿಬ್ಬರು ಮಹಾರಾಜ ಹರಿಶ್ಚಂದ್ರನನ್ನು ಕಂಡು; ಮಝ, ಭಾಪು, ಅದಟರಾಯ, ಮಝರೇ ರಾಯ, ರಾಯದಳವುಳಕಾರ, ರಾಯಕಂಟಕ, ರಾಯಜಗಜೆಟ್ಟಿ, ರಾಯದಲ್ಲಣ, ರಾಯಕೋಳಾಹಳ, ರಾಯಭುಜಬಲಭೀಮ, ರಾಯಮರ್ದನ ಎಂದು ಗುಣಗಾನ ಮಾಡುತ್ತಾ ಒಡೆಯನೇ ಚಿರಂಜೀವಿಯಾಗು ಎಂದು ಕೀರ್ತಿಸಿದರು. ಆನಂತರ ಆ ಗಾನನಾಯಕಿಯರು ಪ್ರೀತಿಯಿಂದ ನಮಸ್ಕರಿಸಿ ದಂಡಿಗೆ ಹಿಡಿದು ಹಾಡಲು ಪ್ರಾರಂಭಿಸಿದರು.
ಎಕ್ಕಲವ ಬಳಿಬಿಡಿದು ಸುತ್ತಿದಾಸಱನು ಮುನಿ
ರಕ್ಕಸನ ಬನಕೆ ಬಂದಂಜಿಕೆಯನೆರಡನೆಯ
ಮುಕ್ಕಣ್ಣನೆನಿಪ ಗುರುವಾಜ್ಞೆಗೆಟ್ಟಳಲನಲ್ಲದೆ ಕನಸ ಕಂಡ ಭಯವ
ಮಿಕ್ಕು ಮಱವಂತಡಸಿ ಕವಿವ ಗತಿಗಳ ಸೊಗಸ
ನಕ್ಕಿಸದೆ ಸಮಯೋಚಿತದ ಪಸಾಯಕ್ಕೆ ಮನ
ವುಕ್ಕಿ ಸರ್ವಾಭರಣಮಂ ಗಾಣರಾಣಿಯರಿಗಿತ್ತನು ಹರಿಶ್ಚಂದ್ರನು || ೩ ||
ಪದವಿಭಾಗ ಮತ್ತು ಪದಶಃ ಅರ್ಥ: ಎಕ್ಕಲವ (ಕಾಡುಹಂದಿಯ) ಬಳಿ (ದಾರಿ) + ಹಿಡಿದು ಸುತ್ತಿದ + ಆಸರನು (ದಣಿವನ್ನು / ಬಳಲಿಕೆಯನ್ನು) ಮುನಿ ರಕ್ಕಸನ ಬನಕೆ ಬಂದು + ಅಂಜಿಕೆಯನು (ಅಂಜಿಕೆಯನ್ನು) + ಎರಡನೆಯ ಮುಕ್ಕಣ್ಣನ್ (ಶಿವ) + ಎನಿಪ ಗುರುವಾಜ್ಞೆ + ಕೆಟ್ಟು ಅಳಲನ್ (ದುಃಖವನ್ನು) + ಅಲ್ಲದೆ ಕನಸ ಕಂಡ ಭಯವ (ಭಯವನ್ನು) ಮಿಕ್ಕು (ಅತಿಶಯವಾಗಿ) ಮರೆವಂತೆ ಅಡಸಿ (ಪ್ರಾಪ್ತವಾಗಿ) ಕವಿದ (ಆವರಿಸಿದ) ಗತಿಗಳ (ಸಂಗೀತದ ಗತಿಗಳ) ಸೊಗಸನ್ (ಸೊಗಸನ್ನು) + ಅಕ್ಕಿಸದೆ (ಅಡಗಿಸಿಕೊಳ್ಳದೆ) ಸಮಯೋಚಿತದ ಪಸಾಯಕ್ಕೆ (ಬಹುಮಾನಕ್ಕೆ / ಉಡುಗೊರೆಗೆ) ಮನ + ಉಕ್ಕಿ ಸರ್ವಾಭರಣಮಂ ಗಾಣರಾಣಿಯರಿಗೆ + ಇತ್ತನು (ಕೊಟ್ಟನು)
ಸಾರಾಂಶ: ಹರಿಶ್ಚಂದ್ರನು ಕಾಡುಹಂದಿಯನ್ನು ಹಿಂಬಾಲಿಸಿ ಬಂದ ಬಳಲಿಕೆಯನ್ನು, ವಿಶ್ವಾಮಿತ್ರನ ಬನಕ್ಕೆ ಬಂದ ಅಂಜಿಕೆಯನ್ನು, ಎರಡನೆಯ ಶಿವನೆನಿಸಿದ ಗುರು ವಾಲ್ಮೀಕಿಯ ಆಜ್ಞೆಯನ್ನು ಮೀರಿದ ದುಃಖವನ್ನು ಹಾಗೂ ಕಾಡಿನಲ್ಲಿ ಕನಸು ಕಂಡ ಭಯವನ್ನು ಅತಿಶಯವಾಗಿ ಮರೆಯುವಂತೆ ಆವರಿಸಿದ ಸಂಗೀತದ ತಾಳಲಯಗತಿಗಳ ಸೊಗಸನ್ನು ಅಡಗಿಸಿಕೊಳ್ಳದೆ ಹರಿಶ್ಚಂದ್ರನು ಮನದಲ್ಲಿ ಸಂತಸಮೂಡಿಸಿದ ಗಾನರಾಣಿಯರಿಗೆ ಸಮಯೋಚಿತವಾದ ಸರ್ವಾಭರಣವನ್ನು ಬಹುಮಾನವಾಗಿ ಕೊಟ್ಟನು.
ಬಡತನದ ಹೊತ್ತಾನೆ ದೊರಕಿ ಫಲವೇನು ನೀ
ರಡಸಿರ್ದ ಹೊತ್ತಾಜ್ಯ ದೊರಕಿ ಫಲವೇನು ರುಜೆ
ಯಡಸಿ ಕೆಡೆದಿಹ ಹೊತ್ತು ರಂಭೆ ದೊರೆಕೊಂಡಲ್ಲಿ ಫಲವೇನು ಸಾವ ಹೊತ್ತು
ಪೊಡವಿಯೊಡೆತನ ದೊರಕಿ ಫಲವೇನು ಕಡುವಿಸಿಲು
ಹೊಡೆದು ಬೆಂಡಾಗಿ ಬೀಳ್ವೆಮಗೆ ನೀನೊಲಿದು ಮಣಿ
ದೊಡಿಗೆಗಳನಿತ್ತು ಫಲವೇನು ಭೂಪಾಲ ಹೇಳೆನುತ ಮತ್ತಿಂತೆಂದರು || ೪ ||
ಪದವಿಭಾಗ ಮತ್ತು ಪದಶಃ ಅರ್ಥ: ಬಡತನದ ಹೊತ್ತು (ಸಮಯದಲ್ಲಿ) + ಆನೆ ದೊರಕಿ ಫಲವೇನು ನೀರಡಸಿರ್ದ (ಬಾಯಾರಿಕೆಯಾದ) ಹೊತ್ತು (ಸಮಯದಲ್ಲಿ) + ಆಜ್ಯ (ತುಪ್ಪವು) ದೊರಕಿ ಫಲವೇನು ರುಜೆಯಡಸಿ (ರೋಗಬಂದು) ಕೆಡೆದಿಹ (ಬಿದ್ದಿರುವ) ಹೊತ್ತು (ಸಮಯದಲ್ಲಿ) ರಂಭೆ ದೊರೆಕೊಂಡಲ್ಲಿ (ದೊರೆತರೆ) ಫಲವೇನು ಸಾವ (ಸಾಯುವ) ಹೊತ್ತು (ಸಮಯದಲ್ಲಿ) ಪೊಡವಿಯ (ಭೂಮಿಯ / ರಾಜ್ಯದ) + ಒಡೆತನ (ದೊರೆತನ) ದೊರಕಿ ಫಲವೇನು ಕಡು + ಬಿಸಿಲು ಹೊಡೆದು ಬೆಂಡಾಗಿ ಬೀಳ್ವ (ಬೀಳುವ) + ಎಮಗೆ (ನಮಗೆ) ನೀನು + ಒಲಿದು ಮಣಿ + ತೊಡಿಗೆಗಳನು (ಆಭರಣಗಳನ್ನು) + ಇತ್ತು (ಕೊಟ್ಟು) ಫಲವೇನು ಭೂಪಾಲ (ಹರಿಶ್ಚಂದ್ರ) ಹೇಳು + ಎನುತ (ಎನ್ನುತ್ತಾ) ಮತ್ತೆ + ಇಂತೆಂದರು (ಹೀಗೆ ಹೇಳಿದರು).
ಸಾರಾಂಶ: ಬಡತನದ ಸಮಯದಲ್ಲಿ ಆನೆಯು ದೊರೆತು ಫಲವೇನು? ಬಾಯಾರಿಕೆಯ ಸಮಯದಲ್ಲಿ ತುಪ್ಪವು ದೊರಕಿ ಫಲವೇನು? ರೋಗಬಂದು ಬಿದ್ದಿರುವಾಗ ರಂಭೆಯು ದೊರಕಿ ಫಲವೇನು? ಸಾಯುವ ಸಮಯದಲ್ಲಿ ರಾಜ್ಯದ ದೊರೆತನ ದೊರಕಿ ಫಲವೇನು? ಕಡುಬಿಸಿಲಿನಿಂದ ಬಳಲಿ ಬೆಂಡಾಗಿರುವ ಸಮಯದಲ್ಲಿ ನಮಗೆ ನೀನು ಪ್ರೀತಿಯಿಂದ ಆಭರಣಗಳನ್ನು ಕೊಟ್ಟು ಫವೇನು?? ಎಂದು ಹೇಳುತ್ತಾ ಗಾನರಾಣಿಯರು ಮತ್ತೆ ಹೀಗೆ ಹೇಳಿದರು.
ಕಡಲೊಳಾಳ್ವಂಗೆ ತೆಪ್ಪವನು ದಾರಿದ್ರಂಗೆ
ಕಡವರವನತಿರೋಗಿಗಮೃತಮಂ ಕೊಟ್ಟಡವ
ರಡಿಗಡಿಗದಾವ ಹರುಷವನೆಯ್ದು ತಿಪ್ಪರವರಂ ಪೋಲ್ವರೀ ಪೊತ್ತಿನ
ಸುಡುಸುಡುನೆ ಸುಡುವ ಬಿಱುಬಿಸಿಲ ಸೆಕೆಯುಸುರ ಬಿಸಿ
ಹೊಡೆದುದುರಿಹತ್ತಿ ಬಾಯ್ ಬತ್ತಿ ಡಗೆ ಸುತ್ತಿ ಸಾ
ವಡಸುತಿದೆ ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ಭೂಭುಜಯೆಂದರು || ೫ ||
ಪದವಿಭಾಗ ಮತ್ತು ಪದಶಃ ಅರ್ಥ: ಕಡಲೊಳ್ (ಸಮುದ್ರದಲ್ಲಿ) ಆಳ್ವಂಗೆ (ಮುಳುಗುವವನಿಗೆ) ತೆಪ್ಪವನು (ತೆಪ್ಪವನ್ನು) ದರಿದ್ರಂಗೆ (ಬಡವನಿಗೆ) ಕಡವರವನು (ಚಿನ್ನವನ್ನು / ಸಂಪತ್ತನ್ನು) + ಅತಿರೋಗಿಗೆ + ಅಮೃತಮಂ (ಅಮೃತವನ್ನು) ಕೊಟ್ಟಡೆ (ಕೊಟ್ಟರೆ) ಅವರ್ (ಅವರು) + ಅಡಿಗಡಿಗೆ (ಮತ್ತೆಮತ್ತೆ) ಅದಾವ (ಅದೆಂತಹ) ಹರುಷವನು (ಸಂತೋಷವನ್ನು) + ಎಯ್ದುತಿಪ್ಪರ್ (ಹೊಂದುವರು) + ಅವರಂ (ಅವರನ್ನು) ಪೋಲ್ವರ್ (ಹೋಲುವವರು) + ಈ ಪೊತ್ತಿನ (ಈ ಸಮಯದ) ಸುಡುಸುಡುನೆ ಸುಡುವ ಬಿರುಬಿಸಿಲ ಸೆಕೆಯುಸುರ (ಬಿಸಿ ಉಸಿರು) ಬಿಸಿ ಹೊಡೆದುದು + ಉರಿಹತ್ತಿ ಬಾಯ್ ಬತ್ತಿ ಡಗೆ (ಸೆಕೆ) ಸುತ್ತಿ ಸಾವು + ಅಡಸುತಿದೆ (ಆವರಿಸುತ್ತಿದೆ) ನಿನ್ನ ಮುತ್ತಿನ ಸತ್ತಿಗೆಯನು (ರಾಜ ಲಾಂಛನವಾದ ಶ್ವೇತ ಛತ್ರವನ್ನು) + ಇತ್ತು (ಕೊಟ್ಟು) ಸಲಹು (ಕಾಪಾಡು) ಭೂಭುಜ (ರಾಜ) + ಎಂದರು.
ಸಾರಾಂಶ: ಆ ಗಾನರಾಣಿಯರು ರಾಜ ಹರಿಶ್ಚಂದ್ರನನ್ನು ಕುರಿತು ಸಮುದ್ರದಲ್ಲಿ ಮುಳುಗುವವನಿಗೆ ತೆಪ್ಪವನ್ನು, ಬಡವನಿಗೆ ಚಿನ್ನವನ್ನು, ಅತಿರೋಗಿಗೆ ಅಮೃತವನ್ನು ಕೊಟ್ಟರೆ ಅವರು ಸಂತೋಷವನ್ನು ಹೊಂದುವರು. ಅವರನ್ನು ಹೋಲುವ ನಮಗೆ ಸುಡುಸುಡನೆ ಸುಡುವ ಈ ಬಿರುಬಿಸಿಲ ಸೆಕೆಯಲ್ಲಿ ಉಸಿರಿನ ಬಿಸಿ ಹೆಚ್ಚಾಗಿ ಉರಿಯಹತ್ತಿದೆ, ನಮ್ಮ ಬಾಯಿ ಬತ್ತಿಹೋಗಿದೆ, ಬಿಸಿಲ ಝಳದಿಂದ ಸಾವು ಆವರಿಸುತ್ತಿದೆ, ಆದ್ದರಿಂದ ನಮಗೆ ನಿನ್ನ ಮುತ್ತಿನ ಸತ್ತಿಗೆಯನ್ನು(ಮುತ್ತಿನಿಂದ ಮಾಡಿದ ಬಿಳಿಯ ಛತ್ರಿ. ಇದು ಪವಿತ್ರವಾದ ರಾಜಲಾಂಛನಗಳಲ್ಲಿ ಒಂದಾಗಿದೆ) ಕೊಟ್ಟು ನಮ್ಮನ್ನು ಕಾಪಾಡು ಎಂದರು.
ರವಿಕುಲದ ಪೀಳಿಗೆಯೊಳೊಗೆದ ರಾಯರ್ಗೆ ಪ
ಟ್ಟವ ಕಟ್ಟುವಂದಿದಿಲ್ಲದಡರಸುತನ ಸಲ್ಲ
ದವನಿಯೊಳು ಯುದ್ಧರಂಗದೊಳಿದಂ ಕಂಡ ಹಗೆಗಳು ನಿಲ್ಲರಿದಱ ಕೆಳಗೆ
ಕವಿವ ನೆಳಲೊಳಗಾವನಿರ್ದನಾತಂಗೆ ತಾಂ
ತವಿಲೆಡರು ಬಡತನಂ ರೋಗವಪಕೀರ್ತಿ ಪರಿ
ಭವ ಭಯಂ ಹರೆವುದಿದನಱದಱದು ಸತ್ತಿಗೆಯ ಕೊಡಬಹುದೆ ಹೇಳೆಂದನು || ೬ ||
ಪದವಿಭಾಗ ಮತ್ತು ಪದಶಃ ಅರ್ಥ: ರವಿಕುಲದ ಪೀಳಿಗೆಯೊಳು (ಪರಂಪರೆಯಲ್ಲಿ) + ಒಗೆದ (ಹುಟ್ಟಿದ) ರಾಯರ್ಗೆ (ರಾಜರಿಗೆ) ಪಟ್ಟವ (ಪಟ್ಟವನ್ನು) ಕಟ್ಟುವಂದು (ಕಟ್ಟುವ ಸಮಯದಲ್ಲಿ) + ಇದು + ಇಲ್ಲದಡೆ (ಇಲ್ಲದಿದ್ದರೆ) + ಅರಸುತನ ಸಲ್ಲದು (ಸಲ್ಲುವುದಿಲ್ಲ) + ಅವನಿಯೊಳು (ಭೂಮಿಯಲ್ಲಿ) ಯುದ್ಧರಂಗದೊಳು (ಯುದ್ಧರಂಗದಲ್ಲಿ) + ಇದಂ (ಇದನ್ನು) ಕಂಡ (ನೋಡಿದ) ಹಗೆಗಳು (ಶತ್ರುಗಳು) ನಿಲ್ಲರು (ನಿಲ್ಲುವುದಿಲ್ಲ) + ಇದರ ಕೆಳಗೆ ಕವಿವ (ಆವರಿಸುವ) ನೆಳಲೊಳಗೆ (ನೆರಳಿನಲ್ಲಿ) + ಆವನ್ (ಯಾವನು) + ಇರ್ದನ್ (ಇರುವನೋ) + ಆತಂಗೆ (ಆತನಿಗೆ) ತಾಂ (ಅದು) ತವಿಲ್ (ತೊಂದರೆ) + ಎಡರು (ಅಡಚಣೆಗಳು / ಅಡ್ಡಿಗಳು) ಬಡತನಂ (ಬಡತನ) ರೋಗ + ಅಪಕೀರ್ತಿ (ಕೆಟ್ಟಹೆಸರು) ಪರಿಭವ (ಸೋಲು) ಭಯಂ (ಭಯವು) ಹರೆಯುವುದು (ಇಲ್ಲದಂತಾಗುವುದು) ಇದನ್ (ಇದನ್ನು) + ಅರಿದು (ತಿಳಿದು) ಸತ್ತಿಗೆಯ (ರಾಜ ಲಾಂಛನವಾದ ಛತ್ರಿಯನ್ನು) ಕೊಡಬಹುದೆ ಹೇಳು + ಎಂದನು.
ಸಾರಾಂಶ: ಹರಿಶ್ಚಂದ್ರನು ಗಾನರಾಣಿಯರನ್ನು ಕುರಿತು ಸೂರ್ಯವಂಶದ ಪರಂಪರೆಯಲ್ಲಿ ಹುಟ್ಟಿದ ರಾಜರಿಗೆ ಪಟ್ಟವನ್ನು ಕಟ್ಟುವ ಸಮಯದಲ್ಲಿ ಈ ರಾಜಲಾಂಛನವಾದ ಸತ್ತಿಗೆಯು ಇಲ್ಲದಿದ್ದರೆ ರಾಜತನವು ದೊರೆಯುವುದಿಲ್ಲ್ಲ. ಈ ಭೂಮಿಯ ಮೇಲೆ, ಯುದ್ಧರಂಗದಲ್ಲಿ ಸತ್ತಿಗೆಯನ್ನು ನೋಡಿದ ಶತ್ರುಗಳು ನಿಲ್ಲುವುದಿಲ್ಲ. ಈ ಸತ್ತಿಗೆಯ ನೆರಳಿನಲ್ಲಿ ಯಾವನು ಇರುವನೋ ಅತನಿಗೆ ವಿಪತ್ತು, ಅಡಚಣೆಗಳು, ಬಡತನ, ರೋಗ, ಅಪಕೀರ್ತಿ, ಸೋಲು, ಭಯ ಕಳೆದುಹೋಗುವುದು. ಇದನ್ನು ತಿಳಿದು ತಿಳಿದು ಸತ್ತಿಗೆಯನ್ನು ಕೊಡಬಹುದೇ ಹೇಳಿ ಎಂದನು.
ಅನುನಯದೊಳೆಲ್ಲವಂ ಕೊಡಬಹುದು ಬಿಡಬಹುದು
ಜನನಿಯಂ ಜನಕನಂ ನಲ್ಲಳಂ ದೈವವಂ
ಮನವಾರೆ ನಂಬಿ ನಚ್ಚಿರ್ದ ಪರಿವಾರಮಂ ಕೊಡುವ ಬಿಡುವತಿಕಲಿಗಳು
ಜನರೊಳಗೆ ಜನಿಸರೆಂದೆನಲು ನೀನೀಗ ಪೇ
ಳ್ದನಿತಱೊಳು ಬೇಡಿದಡೆ ಕೊಡಬೇಡ ಕೊಡೆಯನೀ
ಯೆನೆ ಲೋಭವೇಕರಸ ಎನಲಿದಲ್ಲದೆ ಬೇಱೆ ಮಾತೆಪಿತರಿಲ್ಲೆಂದನು || ೭ ||
ಪದವಿಭಾಗ ಮತ್ತು ಪದಶಃ ಅರ್ಥ: ಅನುನಯದೊಳು (ಬಹಳ ಪ್ರೀತಿಯಿಂದ) + ಎಲ್ಲವಂ (ಎಲ್ಲವನ್ನು) ಕೊಡಬಹುದು ಬಿಡಬಹುದು. ಜನನಿಯಂ (ತಾಯಿಯನ್ನು) ಜನಕನಂ (ತಂದೆಯನ್ನು) ನಲ್ಲಳಂ (ಸತಿಯನ್ನು) ದೈವವಂ (ದೇವರನ್ನು) ಮನವಾರೆ (ಮನಸಾರೆ) ನಂಬಿ ನಚ್ಚಿರ್ದ (ವಿಶ್ವಾಸವಿಟ್ಟಿರುವ) ಪರಿವಾರಮಂ (ಪರಿವಾರವನ್ನು) ಕೊಡುವ ಬಿಡುವ + ಅತಿಕಲಿಗಳು ಜನರೊಳಗೆ (ಈ ಲೋಕದೊಳಗೆ) ಜನಿಸರ್ (ಹುಟ್ಟರು) + ಎಂದು + ಎನಲು(ಹೇಳಲು) ನೀನು + ಈಗ ಪೇಳ್ವ (ಹೇಳುವ) + ಅನಿತರೊಳು (ಅಷ್ಟರಲ್ಲಿ) ಬೇಡಿದಡೆ (ಬೇಡಿದರೆ) ಕೊಡಬೇಡ ಕೊಡೆಯನ್ (ಸತ್ತಿಗೆಯನ್ನು) ಈಯ್ (ಕೊಡು) + ಎನೆ (ಎನಲು) ಲೋಭವು (ದುರಾಸೆ) + ಏಕೆ + ಅರಸ + ಎನಲು + ಇದಲ್ಲದೆ ಬೇರೆ ಮಾತೆಪಿತರು (ತಾಯಿತಂದೆಯರು) + ಇಲ್ಲ + ಎಂದನು
ಸಾರಾಂಶ: ಹರಿಶ್ಚಂದ್ರನು ಗಾನರಾಣಿಯರನ್ನು ಕುರಿತು ಪ್ರೀತಿಯಿಂದ ಎಲ್ಲವನ್ನು ಕೊಡಬಹುದು, ಬಿಡಬಹುದು. ತಾಯಿಯನ್ನು, ತಂದೆಯನ್ನು, ಸತಿಯನ್ನು, ದೇವರನ್ನು, ಮನಸಾರೆ ನಂಬಿ ವಿಶ್ವಾಸವಿಟ್ಟ ಪರಿವಾರವನ್ನು ಕೊಡುವ ಅತಿಶೂರರು ಜನರಲ್ಲಿ (ಲೋಕದ) ಜನಿಸರು ಎಂದನು. ಆಗ ಗಾನರಾಣಿಯರು ಹರಿಶ್ಚಂದ್ರನನ್ನು ಕುರಿತು ಮಹಾರಾಜ ನೀನು ಈಗ ಹೇಳಿದ ಅವರಲ್ಲ್ಲಿ ಯಾರನ್ನಾದರೂ ಬೇಡಿದರೆ ಕೊಡಬೇಡ. ನಿನ್ನ ಬಳಿ ಇರುವ ಮುತ್ತನ ಸತ್ತಿಗೆಯನ್ನು ಕೊಡು ಎಂದರೆ ಲಭವೇಕೆ?’ ಎಂದರು. ಆಗ ಹರಿಶ್ಚಂದ್ರನು ’ಇದಲ್ಲದೆ ಬೇರೆ ತಾಯಿತಂದೆಯರು ಇಲ್ಲ’ ಎಂದನು.
ಲೋಗರಿಗೆ ಕೊಡಬಾರದಾಗಿ ಸತಿ ವಂಶಗತ
ವಾಗಿ ಬಂದುದಱಂದ ತಂದೆ ಪಟ್ಟವ ಕಟ್ಟು
ವಾಗಲರ್ಚಿಸಿಕೊಂಬುದಾಗಿ ದೈವಂ ನೆಳಲ ತಂಪನೊಸೆದೀವುದಾಗಿ
ಸಾಗಿಸುವ ತಾಯ್ ಧುರದೊಳರಿಗಳಂ ನಡುಗಿಸುವು
ದಾಗಿ ಚತುರಂಗಬಲವೆನಿಸಿತೀ ಛತ್ರವೆಂ
ಬಾಗಳಿದನಱದಱದು ಬೇಡುವರನತಿಮರುಳರೆನ್ನರೇ ಮೂಜಗದೊಳು || ೮ ||
ಪದವಿಭಾಗ ಮತ್ತು ಪದಶಃ ಅರ್ಥ:ಲೋಗರಿಗೆ (ಜನರಿಗೆ) ಕೊಡಬಾರದಾಗಿ ಸತಿ ವಂಶಗತವಾಗಿ (ವಂಶಪಾರಂಪರ್ಯವಾಗಿ) ಬಂದಿದ್ದರಿಂದ, ತಂದೆ ಪಟ್ಟವ (ಪಟ್ಟವನ್ನು) ಕಟ್ಟುವಾಗಲ್ (ಕಟ್ಟುವ ಸಮಯದಲ್ಲಿ) + ಅರ್ಚಿಸಿ (ಪೂಜಿಸಿ) ಕೊಂಬುದಾಗಿ (ಕೊಳ್ಳುವುದಾಗಿ) ದೈವಂ (ದೇವರು) ನೆಳಲ (ನೆರಳಿನ) ತಂಪನು + ಒಸೆದು (ಸೊಗಸಾಗಿ) + ಈವುದಾಗಿ (ಕೊಡುವುದಾಗಿ) ಸಾಗಿಸುವ (ಪೋಷಿಸುವ) ತಾಯ್ (ತಾಯಿ) ಧುರದೊಳ್ (ಯುದ್ಧದಲ್ಲಿ) + ಅರಿಗಳಂ (ಶತ್ರುಗಳನ್ನು) ನಡುಗಿಸುವುದಾಗಿ ಚತುರಂಗಬಲವು + ಎನಿಸಿತು + ಈ ಛತ್ರವು (ಸತ್ತಿಗೆಯು) ಎಂಬಾಗಳ್ (ಎಂದು ಹೇಳುವಾಗ) + ಇದನ್ (ಇದನ್ನು) + ಅರಿದರಿದು (ತಿಳಿದು ತಿಳಿದು) ಬೇಡುವರನು (ಬೇಡುವವರನ್ನು) ಅತಿಮರುಳರು (ಬಹಳ ದಡ್ಡರು) + ಎನ್ನರೇ (ಎನ್ನುವುದಿಲ್ಲವೇ?) ಮೂಜಗದೊಳು (ಮೂರುಲೋಕದಲ್ಲಿ).
ಸಾರಾಂಶ: ಹರಿಶ್ಚಂದ್ರನು ಗಾನರಾಣಿಯರನ್ನು ಕುರಿತು: ಈ ಸತ್ತಿಗೆಯು ಜನರಿಗೆ ಕೊಡಬಾರದು. ವಂಶಪರಂಪರೆಯಿಂದ ಬಂದಿದ್ದರಿಂದ ತಂದೆಯು, ಪಟ್ಟವನ್ನು ಕಟ್ಟುವ ಸಮಯದಲ್ಲಿ ಇದನ್ನು ಪೂಜಿಸಿ ಕೊಳ್ಳುವುದರಿಂದ; ದೇವರು, ನೆರಳಿನ ತಂಪನ್ನು ಸೊಗಸಾಗಿ ಕೊಡುವುದರಿಂದ; ಪೋಷಿಸುವ ತಾಯಿ, ಯುದ್ಧದಲ್ಲಿ ಶತ್ರುಗಳನ್ನು ನಡುಗಿಸುವುದರಿಂದ ಚತುರಂಗ ಬಲ ಎನಿಸಿಕೊಂಡಿದೆ. ಇದನ್ನು ತಿಳಿದುತಿಳಿದು ಬೇಡುವವರನ್ನು ಮೂರುಲೋಕದಲ್ಲಿಯೂ ಅತಿದಡ್ಡರು(ಅತಿ ಮೂರ್ಖರು) ಎನ್ನುವುದಿಲ್ಲ್ಲವೇ? ಎಂದನು.
ಪರಿಕಲ್ಪನೆ ೧
ಚಟುವಟಿಕೆ-೧
- ವಿಧಾನ/ಪ್ರಕ್ರಿಯೆ
- ಸಮಯ
- ಸಾಮಗ್ರಿಗಳು/ಸಂಪನ್ಮೂಲಗಳು
- ಹಂತಗಳು
- ಚರ್ಚಾ ಪ್ರಶ್ನೆಗಳು
ಚಟುವಟಿಕೆ-೨
- ವಿಧಾನ/ಪ್ರಕ್ರಿಯೆ
- ಸಮಯ
- ಸಾಮಗ್ರಿಗಳು/ಸಂಪನ್ಮೂಲಗಳು
- ಹಂತಗಳು
- ಚರ್ಚಾ ಪ್ರಶ್ನೆಗಳು
ಪರಿಕಲ್ಪನೆ ೨
ಚಟುವಟಿಕೆ-೧
- ವಿಧಾನ/ಪ್ರಕ್ರಿಯೆ
- ಸಮಯ
- ಸಾಮಗ್ರಿಗಳು/ಸಂಪನ್ಮೂಲಗಳು
- ಹಂತಗಳು
- ಚರ್ಚಾ ಪ್ರಶ್ನೆಗಳು