ಚಿಗುರು-೯-ಪುರುಷಪ್ರಧಾನ ಸಂದೇಶಗಳು ಭಾಗ-೩
ಸಾರಾಂಶ
ಹಿಂದಿನ ಎರಡು ವಾರಗಳಲ್ಲಿ ಕಿಶೊರಿಯರು ಮಹಿಳೆಯರನ್ನು ಮತ್ತು ಪುರುಷರನ್ನು ಜಾಹೀರಾತುಗಳಲ್ಲಿ ಹೇಗೆ ಪ್ರತಿಬಿಂಬಿಸಲಾಗಿದೆ ಎಂದು ಚರ್ಚಿಸಿದ್ದಾರೆ. ಈ ವಾರದ ಮಾತುಕತೆಯಲ್ಲಿ ಕಿಶೋರಿಯರು ನಟ-ನಟಿಯರ ಸಂದರ್ಶನಗಳಲ್ಲಿ ಕೇಳುವ ಪ್ರಶ್ನೆಗಳಲ್ಲಿನ ವ್ತತ್ಯಾಸಗಳನ್ನು ಗುರುತಿಸುತ್ತಾರೆ. ಅದಷ್ಟೇ ಅಲ್ಲದೇ ಅವರ ಮೇಲೆ ಕುಟುಂಬದಲ್ಲಿರುವ ಯಾರಿಗೆ ಎಷ್ಟು ಅಧಿಕಾರ ಇದೆ ಎಂದು ಗುರುತಿಸುತ್ತಾರೆ. ಈ ಚಟುವಟಿಕೆಗಳ ಮೂಲಕ ಕುಟುಂಬದಲ್ಲಿ ಅವರ ಸ್ಥಾನಮಾನಗಳ ಬಗ್ಗೆ ಚರ್ಚಿಸುವುದು ಈ ಮಾಡ್ಯೂಲಿನ ಉದ್ದೇಶ.
ಊಹೆಗಳು
- ಹಿಂದಿನ ವಾರಗಳ ನಮ್ಮ ಚರ್ಚೆಗಳ ನಂತರ ಅವರು ಮನೆಯಲ್ಲಿ ಟಿ.ವಿ ಅಥವಾ ಇನ್ನಿತರೆ ಮಾಧ್ಯಮಗಳ ಮೂಲಕ ತೋರಿಸುವ ಜಾಹಿರಾತುಗಳನ್ನು ಹಾಗು ತಾರೆಯರ ಸಂದರ್ಶನಗಳನ್ನು ನೋಡಿರಬಹುದು/ನೋಡಿಲ್ಲದಿರಬಹುದು.
- ಕೆಲವು ಕಿಶೋರಿಯರು ಗುಂಪಿನಲ್ಲಿ ಗಲಾಟೆ ಮಾಡಿದರೂ, ಅವರಲ್ಲಿ ಹಲವರಿಗೆ ವೈಯಕ್ತಿಕವಾಗಿ ಆತ್ಮವಿಶ್ವಾಸದ ಕೊರತೆ ಇದೆ.
- ಕೆಲವು ಕಿಶೋರಿಯರು ಸ್ವಪ್ರೇರಣೆಯಿಂದಲೇ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಶುರು ಮಾಡಿದ್ದಾರೆ. ಇವರ ಧ್ವನಿಯನ್ನು ಹೆಚ್ಚಿಸುತ್ತಾ ಚರ್ಚೆಯನ್ನು ಅಡ್ಡಿಪಡಿಸುವ ಧ್ವನಿಗಳನ್ನು ಮಟ್ಟ ಹಾಕಬೇಕಿದೆ.
- ಮನೆಯಲ್ಲಿ ಟಿ.ವಿ ಇಲ್ಲದೆ ಅಥವಾ ಮನೆಯವರು ಸಿನೆಮಾಗಳಿಗೆ ಕರೆದುಕೊಂಡು ಹೋಗದಿರುವ ಕಾರಣಗಳಿಂದ ಕೆಲವರು ಜಾಹಿರಾತುಗಳನ್ನು ನೋಡದೆ ಇರಬಹುದು.
- ದಿನೇ ದಿನೇ ನಮ್ಮ ಹಾಗು ಅವರ ನಡುವಿನ ವಿಶ್ವಾಸದ ಮಟ್ಟ ಹೆಚ್ಚುತ್ತಿದೆ ಹಾಗಾಗಿ ಈ ಹಂತದಲ್ಲಿ ನಾವು ಸೂಕ್ಷ್ಮ ವಿಷಯಗಳನ್ನು ಚರ್ಚಿಸಬಹುದಾಗಿದೆ.
ಉದ್ದೇಶ
• ಕಿಶೋರಿಯರು ತಮ್ಮ ದೈನಂದಿನ ಬದುಕಿನಲ್ಲಿ ಪ್ರಶ್ನಿಸದೇ ಇರುವ ಪುರುಷಪ್ರಧಾನ ರಚನೆ ಹಾಗು ಸ್ತ್ರೀ-ಪುರುಷ ಚಿತ್ರಣದ ಮೇಲೆ ಅದರ ಪರಿಣಾಮದ ಬಗ್ಗೆ ಚರ್ಚಿಸುವುದು.
• ಪುರುಷ ಪ್ರಧಾನತೆ ಹಾಗು ಮಾಧ್ಯಮಗಳು ಹೇಗೆ ಒಂದಕ್ಕೊಂದು ಪೂರಕವಾಗಿವೆ ಹಾಗು ಒಂದನ್ನೊಂದು ಪುಷ್ಟೀಕರಿಸುತ್ತಿವೆ ಎಂಬುದರ ಬಗ್ಗೆ ಅರಿವು ಮೂಡಿಸುವುದರ ಮೂಲಕ ಅವರ ಸ್ವ-ಚಿತ್ರಣದ ಬಗ್ಗೆ ಯೋಚಿಸಲು ಪ್ರೇರೇಪಿಸುತ್ತೇವೆ.
• ಕಿಶೋರಿಯರ ಮೇಲೆ ಕುಟುಂಬದಲ್ಲಿರುವ ಯಾರಿಗೆ ಎಷ್ಟು ಅಧಿಕಾರ ಇದೆ ಹಾಗು ಕುಟುಂಬದಲ್ಲಿ ಕಿಶೋರಿಯರ ಸ್ಥಾನಮಾನಗಳ ಬಗ್ಗೆ ಚರ್ಚಿಸುವುದು. (Power and Influence Venn Diagram activity)
ಪ್ರಕ್ರಿಯೆ
ಕಿಶೋರಿಯರೊಂದಿಗೆ ಕುಶಲೋಪರಿಯ ಮೂಲಕ ಮಾತುಕಥೆಯನ್ನು ಶುರು ಮಾಡುವುದು. ಕಟ್ಟುಪಾಡುಗಳನ್ನು ನೆನಪಿಸುವುದು.
ಹಿಂದಿನ ವಾರದ ಮಾತುಕತೆಯನ್ನು ಜ್ಞಾಪಿಸುವುದು. (೧೦ ನಿಮಿಷ)
ಕನ್ನಡ ಚಲನಚಿತ್ರ ನಟ-ನಟಿಯರ ಸಂದರ್ಶನಗಳನ್ನು (ಉ.ದಾ. ರಚಿತಾ ರಾಮ್, ಪುನೀತ್ ರಾಜ್‌ಕುಮಾರ್, ರಾಧಿಕಾ ಪಂಡಿತ್, ಯಶ್) ತೋರಿಸುವುದು.
ಸಂದರ್ಶನಗಳಲ್ಲಿ ನಟರಿಗೆ ಯಾವ ತರಹದ ಪ್ರಶ್ನೆಗಳನ್ನು ಕೇಳಲಾಯಿತು, ನಡಿಯರಿಗೆ ಯಾವ ತರಹದ ಪ್ರಶ್ನೆಗಳನ್ನು ಕೇಳಲಾಯಿತು, ಪ್ರಶ್ನೆಗಳಲ್ಲಿನ ವ್ಯತ್ಯಾಸಗಳ ಬಗ್ಗೆ ತರಗತಿಯಲ್ಲಿಯೇ ಚರ್ಚಿಸುವುದು. (೨೫ ನಿಮಿಷ)
ಇದಾದ ನಂತರ ೪ ಗುಂಪುಗಳನ್ನು ಮಾಡಿಕೊಳ್ಳುವುದು. ಪ್ರತಿ ಗುಂಪಿನ ಜೊತೆ ಒಬ್ಬ ಫೆಸಿಲಿಟೇಟರ್ ಇರುತ್ತಾರೆ. (5 ನಿಮಿಷ)
ಈ ಗುಂಪಿನಲ್ಲಿ ಕಿಶೋರಿಯರು ಅವರ ಕುಟುಂಬದಲ್ಲಿರುವ ಸದಸ್ಯರನ್ನು, ಅವರ ಮೇಲೆ ಸದಸ್ಯರಿಗೆ ಇರುವ ಅಧಿಕಾರ ಮತ್ತು ಪ್ರಭಾವವನ್ನು ಮೊದಲೇ ನಿರ್ಧರಿಸಿದ ವೃತ್ತಾಕಾರದಲ್ಲಿ ಕತ್ತರಿಸಿದ ಹಾಳೆಗಳ ಮೂಲಕ ಚಾರ್ಟಿನ ಮೇಲೆ ಪ್ರಸ್ತುತ ಪಡಿಸುತ್ತಾರೆ. ಈ ವೃತ್ತಗಳು ೩ ವಿವಿಧ ಬಣ್ಣಗಳಲ್ಲಿರುತ್ತವೆ ಹಾಗು ಬೇರೆ ಬೇರೆ ಗಾತ್ರದಲ್ಲಿರುತ್ತವೆ. ಅತಿ ದೊಡ್ಡ ವೃತ್ತ ಅಂದರೆ ಅಧಿಕಾರ ಮತ್ತು ಪ್ರಭಾವ ಜಾಸ್ತಿ ಅದರಂತೆ ಅತಿ ಚಿಕ್ಕ ವೃತ್ತ ಅಂದರೆ ಅಧಿಕಾರ ಮತ್ತು ಪ್ರಭಾವ ಕಮ್ಮಿ. ಕುಟುಂಬದಲ್ಲಿರುವ ಪ್ರತಿ ಸದಸ್ಯರಿಗೂ ಕಿಶೋರಿಯರು ಈ ಚಟುವಟಿಕೆಯನ್ನು ಮಾಡುತ್ತಾರೆ. ಕುಟುಂಬದ ಮಹಿಳಾ ಸದಸ್ಯರು ಹಾಗು ಪುರುಷ ಸದಸ್ಯರು ಸಮಾನ ಅಧಿಕಾರ ಮತ್ತು ಪ್ರಭಾವ ಹೊಂದಿದ್ದರೆ ಅವರನ್ನು ಬೇರೆ ಬೇರೆ ವ್ರತ್ತದ ಮೂಲಕ ಪ್ರಸ್ತುತ ಪಡಿಸುವುದು.
ಕಿಶೋರಿಯರ ಕುಟುಂಬದಲ್ಲಿರುವ ಸದಸ್ಯರು ಹಾಗು ಅವರ ಅಧಿಕಾರ ಮತ್ತು ಪ್ರಭಾವದ ಕ್ರಮವನ್ನು ಫೆಸಿಲಿಟೇಟರ್‌ಗಳು ಪಟ್ಟಿ ಮಾಡಿಕೊಳ್ಳುತ್ತಾರೆ.
ಗುಂಪಿನಲ್ಲಿರುವ ಎಲ್ಲ ಕಿಶೋರಿಯರು ಈ ಚಟುವಟಿಕೆಯಲ್ಲಿ ಭಾಗವಹಿಸಿದ ನಂತರ ಇವುಗಳ ಬಗ್ಗೆ ಮುಂದಿನ ವಾರ ಮಾತನಾಡೋಣ ಎಂದು ಮಾತುಕಥೆಯನ್ನು ಮುಗಿಸುವುದು. (೩೫ ನಿಮಿಷಗಳು)
ಬೇಕಾದ ಸಂಪನ್ಮೂಲಗಳು
• ಕಂಪ್ಯೂಟರ್/ಲ್ಯಾಪ್‌ಟಾಪ್ - ೧
• ಪ್ರೊಜೆಕ್ಟರ್ - ೧
• ಸ್ಪೀಕರ್ - ೧
• ಕ್ಯಾಮೆರಾ - ೧
• ಚಾರ್ಟ್ - ೪
• ಸ್ಕೆಚ್ ಪೆನ್ನುಗಳು
• ಅಧಿಕಾರ ಮತ್ತು ಪ್ರಭಾವವನ್ನು ಪ್ರತಿನಿಧಿಸಲು ವೃತ್ತಾಕಾರದಲ್ಲಿ ಕತ್ತರಿಸಿದ ೩ ಗಾತ್ರದ ೩ ಬಣ್ಣಗಳ (ನೀಲಿ, ಬಿಳಿ, ಗುಲಾಬಿ) ಹಾಳೆಗಳು
ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು
ಒಬ್ಬ ಮುಖ್ಯ ಫೆಸಿಲಿಟೇಟರ್, ಮೂರು ಸಹಾಯಕ ಫೆಸಿಲಿಟೇಟರ್‌ಗಳು
ಒಟ್ಟು ಸಮಯ
೮೦ ನಿಮಿಷ
ಇನ್‌ಪುಟ್‌ಗಳು
ನಟ, ನಟಿಯರ ಸಂದರ್ಶನಗಳು
ಔಟ್‌ಪುಟ್‌ಗಳು
ಕಿಶೋರಿಯರು ಪ್ರಸ್ತುತಪಡಿಸಿದ Circle of Influence ಚಾರ್ಟ್‌ಗಳು