ಎಮ್ಮನುಡಿಗೇಳ್

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಪದ್ಯಭಾಗ ಎಮ್ಮ ನುಡಿಗೇಳ್

ಮುನ್ನ ತಯಾರಿ

ಹಳಗನ್ನಡ ಕವಿಗಳನ್ನು ಪಟ್ಟಿ ಮಾಡುವುದು.ಐಚ್ಛಿಕವಾಗಿ ಚಂಪೂಕವಿಗಳ ಬಗ್ಗೆ ತಿಳಿದುಕೊಳ್ಳಲು ಸೂಕ್ತ ಸನ್ನಿವೇಶ ರೂಪಿಸುವುದು .ಕವಿಗಳ ಹೆಸರನ್ನು ಚೀಟಿಯಲ್ಲಿ ಬರೆದು ಹಳಗನ್ನಡ ಕವಿಗಳನ್ನು ಬೇರ್ಪಡಿಸಲು ಹೇಳುವುದು. ಹಳಗನ್ನಡ ಗದ್ಯ ಪದ್ಯಗಳ ಶೀರ್ಷಿಕೆಗೆ ಸಂಬಂಧಿಸಿದಂತೆ ಹೊಸಗನ್ನಡಕ್ಕೆ ಪರಿವರ್ತಿಸಿ ನಾಟಕ ರೂಪಕ್ಕೆ ತಂದು ವಿದ್ಯಾರ್ಥಿಗಳಿಂದ ಅಭಿನಯಿಸಿ ತೋರಿಸುವುದು.ಗಮಕ ಶೈಲಿಯ ಅಥವಾ ಕಾವ್ಯವಾಚನ ಪದ್ಯಗಳನ್ನು ಧ್ವನಿಸುರುಳಿಗೆ ಅಳವಡಿಸಿ ವಿದ್ಯಾರ್ಥಿಗಳಿಗೆ ಪರಿಚಯಿಸುವದು .ಮಹಾಭಾರತ ರಾಮಾಯಣ ಪುರಾಣಗಳಿಗೆ ಸಂಬಂಧಿಸಿದಂತೆ ಚಿತ್ರಪಟಗಳನ್ನು ತಯಾರಿಸಿ ಪ್ರದರ್ಶಿಸುವುದು .ಕವಿ ಪಂಪನ ಭಾವಚಿತ್ರ ಅಥವಾ ದೃಶ್ಯಾವಳಿಯ ಮೂಲಕ ಪಂಪನನ್ನು ಪರಿಚಯಿಸುತ್ತ ಮುಖ್ಯಾಂಶಗಳನ್ನು ದಾಖಲಿಸಿಕೊಳ್ಳುವಂತೆ ಮಾಡುವುದು.

ಕಲಿಕೋದ್ದೇಶಗಳು

  • ಭಾಷೆಯನ್ನು ದೋಷ ರಹಿತ ಮತ್ತು ಪರಿಣಾಮಕಾರಿಯಾಗಿ ಬಳಸುವ ಪ್ರೌಢಿಮೆ ಬೆಳೆಸುವುದು.
  • ಭಾಷಾ ಸ್ಪಷ್ಟತೆ ಹಾಗೂ ತಾತ್ವಿಕವಾಗಿ ಗ್ರಹಿಸುವ ಹಿನ್ನೆಲೆಯಲ್ಲಿ ಭಾಷಾಂಶ ,ಛಂದಸ್ಸು ಅಲಂಕಾರಗಳನ್ನು ಕ್ರಿಯಾತ್ಮಕವಾಗಿ ಬೆಳೆಸುವುದು.
  • ಸಾಮಾಜಿಕ ನ್ಯಾಯ ,ಸಹಬಾಳ್ವೆ ,ಸ್ವಾವಲಂಬನೆ ,ಆತ್ಮಗೌರವ,ವಿಶ್ವಶಾಂತಿ, ಮೊದಲಾದ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಲು ಪ್ರೇರೇಪಿಸುವುದು.
  • ಹಳಗನ್ನಡ ಕಾವ್ಯವನ್ನು ಸ್ಪಷ್ಟವಾಗಿ ಓದುವ ಸಾಮರ್ಥ್ಯ ಬೆಳೆಸುವುದು.
  • ಕೃತಿ ಕರ್ತೃವಿನ ವೈಶಿಷ್ಟ್ಯ ಪರಿಚಯವಾಗುವ ರೀತಿಯಲ್ಲಿ ಸಾಹಿತ್ಯದ ವಿವಿಧ ಪ್ರಕಾರಗಳನ್ನು ಪರಿಚಯಿಸುವುದು.
  • ಚಂಪೂ ಕಾವ್ಯದ ಬಗ್ಗೆ ತಿಳಿಸುವುದು.

ಕವಿ ಪರಿಚಯ

ವಿಕಿ ಮಾಹಿತಿ ಸರಸ್ವತೀ ಮಣಿಹಾರನಾದ ಪಂಪ ಮಹಾಕವಿ ಪಂಪ ಕನ್ನಡದ ಆದಿಕವಿ. ‘ಆದಿಪುರಾಣ’ ಮತ್ತು ‘ಪಂಪಭಾರತ’ ಆತನ ಕೃತಿಗಳು. ಅವನೇ ಹೇಳಿರುವಂತೆ, ಭಾರತವೂ ‘ಆದಿಪುರಾಣ’ವೂ ಸಮಸ್ತ ಕ್ಷಿತಿಗೆ ಅಲಂಕಾರದಂತಿವೆ. ಸರಸ್ವತಿಗೆ ಅವು ಹೊಸ ವಿಲಸವನ್ನುಂಟುಮಾಡಿವೆ. ಸರಸ್ವತಿಗೇ ಹೊಸ ವಿಲಾಸವನ್ನುಂಟುಮಾಡಿದ ಪಂಪನ ವಾಗ್ವಿಳಾಸ ಸರಸ್ವತಿಯ ವಿಷಯದಲ್ಲಿಯೂ ಉದಾರವಾಗಿಯೇ ಇದೆ. ‘ಆದಿಪುರಾಣ’ ಕೃತಿರಚನೆಯ ಶಿಸ್ತಿನಲ್ಲೇ ಸರಸ್ವತಿಯು ನೆಲೆಯಾಗಿರುವುದನ್ನು ಕಾಣಬಹುದು. ಮೊದಲನೆಯ ಆಶ್ವಾಸವೊಂದನ್ನು ಉಳಿದು ಪ್ರತಿ ಆಶ್ವಾಸದ ಪ್ರಾರಂಭದ ಪದ್ಯದಲ್ಲಿ ತನ್ನ ಕಾವ್ಯದ ಮುಖ್ಯಪಾತ್ರಗಳಾದ ಮಹಾಬಲ, ಲಲಿತಾಂಗ, ವಜ್ರಜಂಘ, ಸುವಿಧಿ, ಪುರುದೇವ, ಶ್ರೀಪತಿ, ಆದಿನಾಥ, ಭರತ ಮೊದಲಾದವರನ್ನು ಸರಸ್ವತಿಗೆ ಮಣಿಹಾರವನ್ನಾಗಿಸಿದ್ದಾನೆ. ಸ್ವತಃ ತನ್ನನ್ನೇ ಮೂರು ಪದ್ಯಗಳಲ್ಲಿ ಸರಸ್ವತೀಮಣಿಹಾರನೆಂದು ಕರೆದುಕೊಳ್ಳುತ್ತಾನೆ. ಅದರಲ್ಲಿ ಒಂದು ಪದ್ಯವಂತೂ ಆತನ ಸರಸ್ವತಿಯ ದರ್ಶನಕ್ಕೆ ಮುನ್ನುಡಿಯಂತಿದೆ.

ಅತಿಸುಭಗೆಗೆ ಸಂದಂ ಸರ

ಸ್ವತಿಗೀತನ ಲಲಿತಾವಾಗ್ವಿಳಾಸಮೆ ದಲಂ

ಕೃತಿಯವೊಲೆಸೆದಪುದು ಜಗ

ತ್ಪ್ರತೀತನೀತನೆ ಸರಸ್ವತೀ ಮಣಿಹಾರಂ

ಈತನ ಲಲಿತವಾದ ವಾಗ್ವಿಳಾಸ, ಅತಿಸುಭಗಳಾದ ಸರಸ್ವತಿಗೆ ವಿಶೇಷವಾದ ಅಲಂಕಾರವಾಗುತ್ತದೆ. ಜಗತ್ಪ್ರಸಿದ್ಧನಾದ ಪಂಪ ಸರಸ್ವತಿಯ ಕಂಠದ ಮಣಿಹಾರ. ‘ಆದಿಪುರಾಣ’ದ ಪ್ರಾರಂಭದಲ್ಲಿಯೇ ಬಂದಿರುವ ಸರಸ್ವತಿಯ ಸ್ತುತಿ ಜೈನ ಕಾವ್ಯಪ್ರಪಂಚಕ್ಕೆ ದಿಕ್ಸೂಚಿಯಾಗಿ, ಜೈನಪರಂಪರೆಯ ಸರಸ್ವತಿಯ ಪರಿಕಲ್ಪನೆಯನ್ನು ಒಂದು ಸೂತ್ರಬದ್ಧವಾಗಿಸಿದೆ.

ಪರಮಜಿನೇಂದ್ರವಾಣಿಯೆ ಸರಸ್ವತಿ ಬೇಱದು ಪೆಣ್ಣರೂಪಮಂ

ಧರಿಯಿಸಿ ನಿಂದುದಲ್ತದುವೆ ಭಾವಿಸಿಯೋದುವ ಕೇಳ್ವ ಪೂಜಿಪಾ

ದರಿಸುವ ಭವ್ಯಕೋಟಿಗೆ ನಿರಂತರಸೌಖ್ಯಮನೀವುದಾನದ

ರ್ಕೆರೆದಪೆನಾ ಸರಸ್ವತಿಯ ಮಾೞ್ಕೆಮಗಿಲ್ಲಿಯೆ ವಾಗ್ವಿಳಾಸಮಂ

‘ಪರಮಜಿನೇಂಳ್ಳುದ್ರವಾಣಿಯೇ ಸರಸ್ವತಿ, ಅದು ಬೇರೆಯಲ್ಲ. ಹೆಣ್ಣಿನ ರೂಪವನ್ನು ಧರಿಸಿ ನಿಂತಿಲ್ಲ. ಅಂತಹ ಜಿನವಾಣಿಯು ಭಾವಿಸಿ ಓದುವ ಕೇಳುವ ಪೂಜಿಸುವ ಆದರಿಸುವ ಭವ್ಯಕೋಟಿಗೆ (ಜಿನಭಕ್ತರಿಗೆ) ನಿರಂತರ ಸೌಖ್ಯವನ್ನು ಕೊಡುವುದು. ಅಂತಹ ಸರಸ್ವತಿಯು ನಮಗೆ ವಾಗ್ವಿಳಾಸವನ್ನು ಮಾಡಲಿ’ ಎಂದು ಬೇಡಿಕೊಳ್ಳುತ್ತಾನೆ. ನದಿಯಾಗಿ, ನದಿದೇವತೆಯಾಗಿ ಮೊದಮೊದಲು ಪ್ರಚಲಿತದಲ್ಲಿದ್ದ ಸರಸ್ವತಿಯು ವಾಗ್ದೇವತೆಯಾಗಿ, ವಿದ್ಯಾದೇವತೆಯಾಗಿ ನಂತರ ಹೆಚ್ಚು ಪ್ರಸಿದ್ಧಳಾಗಿದ್ದಾಳೆ. ವಾಗ್ದೇವತೆಯನ್ನು ಸ್ತ್ರೀರೂಪದಲ್ಲಿಯೇ ಆರಾಧಿಸುತ್ತಾ ಬಂದಿರುವವರಿಗೆ ಪಂಪನ ‘ಪರಮಜಿನೇಂದ್ರನವಾಣಿಯೆ ಸರಸ್ವತಿ, ಕೇವಲ ಹೆಣ್ಣಿನ ರೂಪವನ್ನು ಧರಿಸಿ ನಿಂತಿರುವುದಲ್ಲ’ ಎಂಬ ಪರಿಕಲ್ಪನೆ ಆಶ್ಚರ್ಯವನ್ನುಂಟುಮಾಡುತ್ತದೆ. ಆದರೆ ಜೈನ ಪರಿಕಲ್ಪನೆಯಲ್ಲಿ, ಜೈನವೇದವೇ ಸರಸ್ವತಿ. ಅವುಗಳು ಶ್ರೇಷ್ಠರಾದ ತೀರ್ಥಂಕರರ ವಾಣಿಯಲ್ಲದೆ ಬೇರೆಯಲ್ಲ. ಸಂಸ್ಕೃತ ‘ಮಹಾಪುರಾಣ’ದಲ್ಲಿ ಆದಿಜಿನನ ಮೊಗದಿಂದ ಉದಯಿಸಿದ ಮಾತೇ ಸರಸ್ವತಿಯಾಯಿತು ಎಂಬ ಪರಿಕಲ್ಪನೆಯಿದೆ. ಜಿನನು ರಾಗದ್ವೇಷದಿಂದ ಮುಕ್ತನಾದ ಸಿದ್ಧ. ಅವನು ಕಾವ್ಯವನ್ನಾಗಲಿ, ಶಾಸ್ತ್ರವನ್ನಾಗಲಿ ಸೃಷ್ಟಿಸುವುದಿಲ್ಲ. ಅವನು ಮಾತನಾಡಿದ್ದೆಲ್ಲ ಕಾವ್ಯವಾಗುತ್ತದೆ ಹಾಗೂ ಶಾಸ್ತ್ರವಾಗುತ್ತದೆ. ಜೈನರ ನಂಬಿಕೆಯಂತೆ ಆ ಶಾಸ್ತ್ರಗಳೇ ಸರಸ್ವತಿ. ವೈದಿಕ ಪರಂಪರೆಯಲ್ಲೂ ಸರಸ್ವತಿಯ ಸೃಷ್ಟಿಕರ್ತ ಬ್ರಹ್ಮನೇ ಆಗಿದ್ದಾನೆ. ಬ್ರಹ್ಮ ಸರಸ್ವತಿಯ ಸೃಷ್ಟಿಕರ್ತನಾದರೆ, ಕವಿಗಳು ಸರಸ್ವತಿಯ ರೂಪಗಳಾದ ಕಾವ್ಯಗಳ ಸೃಷ್ಟಿಕರ್ತರು. ಆದ್ದರಿಂದ ಕವಿಗಳು ಅಭಿನವ ಸೃಷ್ಟಿಕರ್ತರು.

ನಿರೀಕ್ಷಿತ ಭಾಷಾ ಕೌಶಲ

  • ಹಳಗನ್ನಡ ಪದ್ಯವನ್ನು ಪದವಿಂಗಡಿಸಿ ಅರ್ಥಬದ್ಧವಾಗಿ ಓದುವರು .
  • ರಳ,ಕುಳ ಗಳ ಪರಿಚಯ ಹೊಂದುವರು.
  • ಪದ್ಯದ ಭಾವಾರ್ಥವನ್ನು ಹೇಳುವರು ಮತ್ತು ಸಂಗ್ರಹಿಸಿ ಬರೆಯುವರು.
  • ನಿಗದಿತ ಪದ್ಯದ ನುಡಿಯನ್ನು ಕಂಠಪಾಠ ಮಾಡಿ ಒಪ್ಪಿಸುವರು.

ಭಾಷಾ ವೈವಿಧ್ಯತೆಗಳು ಅಥವಾ ಸಾಹಿತ್ಯ ಪ್ರಕಾರಗಳು

 ಹಳಗನ್ನಡ ಸಾಹಿತ್ಯ , 

ಶಬ್ದಕೋಶ

ವಿನಮಿತ,ತೆಬ್ಬರಿಸಿಯುಂ,ಮಹೀಭುಜ , ದೀವಿಗೆ, ಪೆರ್ಮರ ,ಒಡಂಬಡಿಸಿ ,ಪಡಲಿಡು,


ಛಂಧಸ್ಸು /ಅಲಂಕಾರ

ಚಂಪಕಮಾಲಾವೃತ್ತದ ಪ್ರತಿ ಸಾಲಿನಲ್ಲೂ ೨೧ ಅಕ್ಷರಗಳಿರುತ್ತವೆ. ಅವುಗಳ ವಿನ್ಯಾಸದಲ್ಲಿ "ನಜಭಜಜಜರ" ಗಣವಿನ್ಯಾಸವಿರುತ್ತದೆ. ಇದಕ್ಕೆ "ಶಶಿವದನಾ" ಎಂಬ ಹೆಸರೂ ಇದೆ ಎಂದು ಪುರಾತನರ ಕೃತಿಗಳಲ್ಲಿ ತಿಳಿಯುತ್ತದೆ. ಸೂತ್ರ ಪದ್ಯ ಹೀಗಿದೆ "ನಜಭಜಜಂಜರಂ ಬಗೆಗೊಳ್ಳುತ್ತಿರೆ ಚಂಪಕಮಾಲೆಯೆಂದಪರ್" ಈ ಪದ್ಯಕ್ಕೆ ಪ್ರಸ್ತಾರ ಹಾಕಿದರೂ ಸಹ ಚಂಪಕಮಾಲಾ ವೃತ್ತದ ಲಕ್ಷಣ ಗೊತ್ತಾಗುತ್ತದೆ UUU|U_U |_ UU |U_U |U _U|U _U|_ U_| ನಜಭ|ಜಜಂಜ|ರಂ ಬಗೆ|ಗೊಳ್ಳುತ್ತಿ|ರೆ ಚಂಪ|ಕಮಾಲೆ|ಯೆಂದಪರ್| ಈ ವೃತ್ತದ ಮೊದಲ ಎರಡು ಲಘುಗಳನ್ನು ಒಂದು ಗುರುವಿನಿಂದ ಬದಲಾಯಿಸಿದಾಗ ಉತ್ಪಲಮಾಲಾವೃತ್ತವಾಗುತ್ತದೆ. ಕನ್ನಡದ ಆದಿ ಕವಿ ಪಂಪನ ಕೃತಿಯಿಂದಾದಿಯಾಗಿ ಅನೇಕ ಕಡೆಗಳಲ್ಲಿ ಈ ಛಂದಸ್ಸು ವಿಪುಲವಾಗಿ ಬಳಕೆಯಾಗಿದೆ. ಸಂಸ್ಕೃತದಲ್ಲಿ ವಿರಳಪ್ರಚುರವಾದ ಛಂದಸ್ಸು.. ಉದಾಹರಣೆ:- ಮುಳಿಸು ಲಲಾಟನೇತ್ರಶಿಖಿ ಮೆಚ್ಚೆ ವಿನೂತರಸಪ್ರಸಾದಮು- ಜ್ಜಳ ಜಸಮಂಗಸಂಗತ ಲಸದ್ಭಸಿತಂ ಪ್ರಭುಶಕ್ತಿ ಶಕ್ತಿ ನಿ| ರ್ಮಳಮಣಿಭೂಷಣಂ ಫಣಿವಿಭೂಷಣಮಾಗೆ ನೆಗೞ್ತೆಯಂ ಪುದುಂ ಗೊಳಿಸಿದನೀಶ್ವರಂ ನೆಗೞ್ದುದಾರ ಮಹೇಶ್ವರನೀಗೆ ಭೋಗಮಂ (ವಿಕ್ರಮಾರ್ಜುನವಿಜಯ ೧-೨)

ಬೋಧನಾ ವಿಧಾನ

ಕಥನ ಪದ್ಧತಿ ,ಪ್ರಶ್ನೋತ್ತರ ವಿಧಾನ, ನಾಟಕ ಪದ್ಧತಿ

ತರಗತಿ ಪಾಠ ಯೋಜನೆ

  • ಪದ್ಯ ವಿಂಗಡನೆ
  • ಮುನ್ತಯಾರಿ ಮತ್ತು ಕವಿ ಪರಿಚಯ
  • ಯುದ್ಧಭೂಮಿಗೆ ಧೃತರಾಷ್ಟ್ರ ಮತ್ತು ಗಾಂಧಾರಿಯರ ಆಗಮನ
  • ದುರ್ಯೋಧನನ್ನು ನೋಡಿ ಆನಂದಿಸಿದ ಅವನ ತಂದೆ ತಾಯಿಗಳು
  • ಧೃತರಾಷ್ಟ್ರನ ಬುದ್ಧಿ ಮಾತುಗಳು
  • ಪಗೆ ನಣ್ಪುಗಳಿಗೆ ಕಾರಣ (ಅರ್ಥಶಾಸ್ತ್ರದಲ್ಲಿ ಹೇಳಿದಂತೆ )
  • ಗಾಂಧಾರಿಯ ಅಳಲು ಮತ್ತು ಹಿತೋಪದೇಶ
  • ಅವಧಿ

೭ ಅವಧಿಗಳು

  • ಪ್ರಕ್ರಿಯೆ

ಮಹಾಭಾರತದ ಕಥೆಯನ್ನು ದೃಶ್ಯಾವಳಿ ಬಳಸಿ ಹೇಳುವುದು ಮಾದರಿ ವಾಚನ ವಿದ್ಯಾರ್ಥಿ ವಾಚನ ಮೌನ ಓದು ಕೇಂದ್ರ ಪ್ರಶ್ನೆಗಳು ವಿವರಣೆ ಸಾರಾಂಶ

ಸಾರಾಂಶ

ಪದ್ಯದ ಸಾರಾಂಶ (ಪಂಪಭಾರತಂ ಗದ್ಯಾನುವಾದ -ಎನ್. ಅನಂತರಂಗಾಚಾರ್)

ವ|| ಎಂಬೆನ್ನಗಮೆಯ್ದೆ ವಂದ ಪಿತೃದ್ವಂದ್ವ ಚರಣಕ್ಕೆ ವಿನಯವಿನಮಿತೋತ್ತಮಾಂಗ

   ನಾದನರ್ವರುಂಪರಸಿತಡವರಿಸಿಯುಂ ತೆಬ್ಬರಿಸಿಯುಮಳ್ಕಿರೊಳಪ್ಪಿಕೊಂಡಮೃತವರ್ಷಿ  ಕರ 
   ಪರಿಷೇಕದಿಂದೆ ಪುತ್ರಸ್ಪರ್ಷನಮಾಪ್ಯಾಯನಕೋಟಿಯಾಗೆ ಪುಳಕಿತ ಗಾತ್ರರುಮಾನಂದ ಬಾಷ್ಪವಾರಿ 
   ಧಾರಾಪರಿಕಲಿತನೇತ್ರರುಮಾಗಿ ಕಿರಿದಾನುಂ ಬೇಗಮಿರ್ದಲ್ಲಿ ಕಾರ್ಯವ್ಯಗ್ರ ಪಾಪಿಪಾಶಾಶ್ರಿತರೆಲ್ಲರುಂ
   ಕೇಳಲೆಂದು ಮಹೀಭುಜನಿಂತೆಂದಂ- 
ಎನ್ನುವಷ್ಟರಲ್ಲಿ ಸಮೀಪಕ್ಕೆ ಬಂದ ತಂದೆತಾಯಿಗಳ ಚರಣಕ್ಕೆ (ಪಾದಕ್ಕೆ ) ವಿನಯದಿಂದ ತಲೆಬಗ್ಗಿಸಿ ನಮಸ್ಕರಿಸಿದ(ದುರ್ಯೋಧನನು ತನ್ನ ತಂದೆತಾಯಿಗಳಾದ ಧೃತರಾಷ್ಟ್ರ ಗಾಂಧಾರಿಯರಿಗೆ ) ದುರ್ಯೋಧನನ್ನು ಇಬ್ಬರೂ ಹರಸಿದರು.ಮೈಯನ್ನು ಮುಟ್ಟಿ ನೋಡಿ ಯೂ ,ಸಮಾಧಾನ ಮಾಡಿಯೂ ಪ್ರೀತಿಯಿಂದ ಮಗನನ್ನು  ಆಲಂಗಿಸಿದ ಅವರಿಗೆ ಅಮೃತವನ್ನು ಸುರಿಸುವ ಅಭಿಷೇಕಕ್ಕಿಂತ ಮಗನ ಸ್ಪರ್ಷವು ಅತಿಯಾದ ಆನಂದವನ್ನು ಉಂಟುಮಾಡಿತು.ರೋಮಾಂಚಿತವಾದ ಶರೀರವುಳ್ಳವರೂ ಸಂತೋಷದ,  ಕಣ್ಣೀರಿನ ಪ್ರವಾಹದಿಂದ ತುಂಬಿದ  ಕಣ್ಣುಳ್ಳವರೂ ಆದ ಅವರು ಸ್ವಲ್ಪ ಕಾಲ  ಮೌನವಾಗಿದ್ದು ,ಮುಂದಿನ ಕಾರ್ಯದಲ್ಲಿ ಆಸಕ್ತನಾದ ಪಾಪಿ ದುರ್ಯೋಧನನ ಪಾಶಕ್ಕೆ ಒಳಗಾದವರೆಲ್ಲರೂ ಕೇಳಲೆಂದು ಧೃತರಾಷ್ಟ್ರನು ಹೀಗೆಂದನು. 

ಮ || ಎನಗಂ ಪಾಂಡುಗಮಿಲ್ಲ ಭೇದಮಿಳೆಯಂ ಪಚ್ಛಾಳ್ವಮಾ ಪಾಂಡುನಂದನಂ

       ದನರುಂ ಸೈದರೆ ನಿನ್ನೊಳೀ ಕಲಹಮುಂ ನಿನ್ನಿಂದಮಾಯ್ತೆಂದೊಡಿಂ |
       ಮುನಿವೈ ಗಂಗೆಯ  ಪೆರ್ಮಗಂಗೆ ಘಟಸಂಭೂತಂಗೆ  ಕರ್ಣಾಂಗಸಾ
      ಧ್ಯನೊಳಾ ಗಾಂಡಿವಿಯೊಳ್ ಕರುತ್ತಿರಿವರಾರಿಂ ಮಾಡುವಂ ಸಂಧಿಯುಂ || 

ನನಗೂ ಪಾಂಡುವಿಗೂ ಭೇದವಿಲ್ಲ; ಈ ಭೂಮಿಯನ್ನು(ರಾಜ್ಯವನ್ನು) ಭಾಗ ಮಾಡಿಕೊಂಡು ಆಳೋಣ.ಆ ಪಾಂಡುವಿನ ಮಕ್ಕಳು (ಪಾಂಡವರು)ನಿನ್ನೊಂದಿಗೆ ಹೊಂದಾಣಿಕೆಯಿಂದ ನಡೆದುಕೊಳ್ಳುವವರೇ ಆಗಿದ್ದಾರೆ.ನಿನ್ನಿಂದಲೇ ಈ ಕಲಹವು ಸಂಭವಿಸಿತು ಎಂದರೆ ನೀನು ಇನ್ನೂ ಕೋಪಿಸಿಕೊಳ್ಳುತ್ತೀಯೆ.ಭೀಷ್ಮ,ದ್ರೋಣ, ಕರ್ಣರಿಗೂ ಅಸಾಧ್ಯವಾದ (ಸೋಲಿಸಲು ಸಾಧ್ಯವಿಲ್ಲದ) ಆ ಆರ್ಜುನ(ಗಾಂಡೀವಿ) ನೊಂದಿಗೆ ಕೋಪದಿಂದ ಯುದ್ಧ ಮಾಡುವವರು ಯಾರಿದ್ದಾರೆ?ಆದ್ದರಿಂದ ಅವರೊಂದಿಗೆ (ಪಾಂಡವರೊಂದಿಗೆ ) ಸಂಧಿ ಮಾಡಿಕೊಳ್ಳುವುದೇ ಉಚಿತವಾದುದುಎಂದು ಧೃತರಾಷ್ಟ್ರನು ದುರ್ಯೋಧನನಿಗೆ ಹೇಳಿದನು.

ಹರಿಣಿ || ಪಗೆಗೆ ಕಣಿಯೊಂದುಂಟೇ ನಣ್ಪಿಂಗಾಮಾಗರಮುಂಟೆ ನೀಂ

          ಬಗೆಯೆ ಪಗೆಯುಂ ನಣ್ಪುಂ ಕಯ್ಕೊಂಡ ಕಜ್ಜದಿನಲ್ತೆ ಪು  |
           ಟ್ಟುಗುಮರಸುಗಳ್ಗೆಂದೀ ಸಂದರ್ಥಶಾಸ್ರದೊಳೇಕೆ ಪೇಳ್ 
           ಮಗನೆ ನೆಗಳ್ದೈ ಕಾರ್ಯಂ ಮಿತ್ರಾದಿ ಕಾರಕಮೆಂಬುದಂ  ||

ಹಗೆತನಕ್ಕೆ ಒಂದು ಗಣಿಯಿದೆಯೆ? ಸ್ನೇಹಕ್ಕೆ ಒಂದು ಮನೆಯಿದೆಯೆ?ನೀನೇ ಆಲೋಚಿಸು.ಅರಸರಿಗೆ ಶತ್ರುತ್ವ ಮತ್ತು ಮಿತ್ರತ್ವಗಳೆರಡೂ ಅವರು ಕೈಗೊಳ್ಳುವ ಕಾರ್ಯದಿಂದಲ್ಲವೇ ಹುಟ್ಟುವುದು ಎಂದು ರಾಜರಿಗೆ ಯೋಗ್ಯವಾದ ಅರ್ಥಶಾಸ್ರ್ತದಲ್ಲಿ ಹೇಳಿಲ್ಲವೇ?ಅರ್ಥಶಾಸ್ತ್ರದಲ್ಲಿ ಹೇಳಿರುವ ಕೈಗೊಂಡ ಕಾರ್ಯವೇ ಸ್ನೇಹದ್ವೇಷಗಳಿಗೆ ಕಾರಣವೆಂಬ ನೀತಿ ವಾಕ್ಯದಂತೆ ನೀನೇಕೆ ಮಾಡುವುದಿಲ್ಲ ? ಎಂದು ಧೃತರಾಷ್ಟ್ರನು ಮಗನಿಗೆ ಬುದ್ಧಿವಾದ ಹೇಳಿದನು.

ಕಂ || ನೀನುಳ್ಳೊಡೆಲ್ಲರೊಳರೆಮೆ

       ಗೇನುಮಳಲ್ ಮನದೊಳಿಲ್ಲದೆಂತೆನೆ ಮಗನೇ  |
      ಭಾನುವೆ ಸಾಲದೆ ಪಗಲೆನಿ
      ತಾನುಂ ದೀವಿಗೆಗಳುರಿದೊಡೇಂ ನಂದಿದೊಡೇಂ ||

ನೀನಿದ್ದರೆ ಎಲ್ಲರೂ ಇದ್ದ ಹಾಗೆ .ಮಗನೆ ನೀನೊಬ್ಬನುಳಿದರೆ ನಮಗೆ ಮನದಲ್ಲಿ ಯಾವ ಚಿಂತೆಯೂ ಇಲ್ಲ.ಅದು ಹೇಗೆಂದರೆ ಸೂರ್ಯನೊಬ್ಬನೇ ಸಾಲದೇ?ಹಗಲಿನಲ್ಲಿ ಎಷ್ಟು ದೀವಿಗೆಗಳು ಉರಿದರೇನು? ಆರಿದರೇನು? (ಹಗಲಿನಲ್ಲಿ ಎಷ್ಟು ದೀವಿಗೆಗಳು ಉರಿದರೂ ಸೂರ್ಯನ ಮಹತ್ವ ಅವುಗಳಿಗೆ ದೊರೆಯುವುದಿಲ್ಲ.ಸೂರ್ಯನ ಪ್ರಭೆಯ ಮುಂದೆ ದೀವಿಗೆಳ ಬೆಳಕು ಕಂದಿ ಹೋಗುತ್ತದೆ.ಅಷ್ಟು ಪ್ರಾಮುಖ್ಯತೆ ಪಡೆಯುವುದಿಲ್ಲ. ಹಾಗೆಯೇ ದುರ್ಯೋಧನನೊಬ್ಬನು ಉಳಿದರೆ ಅವನ ತಂದೆ ತಾಯಿಗಳಿಗೆ ಉಳಿದ ಮಕ್ಕಳನ್ನು ಕಳೆದುಕೊಂಡ ದುಃಖ ಅಷ್ಟಾಗಿ ಕಾಡಲಾರದೇನೋ)

ವ|| ಅದಲ್ಲೆದೆಯುಂ ಪಾಂಡವರಪ್ಪೊಡೆನಗೆ ಪಾಂಡುರಾಜಂಗೆ ಬೆಸಕೈಯ್ದುದೆನೆ ಬೆಸಕೈವರೆಂದುದಂ

        ಮೀರುವವರಲ್ಲರವರನಾನೆಂತುಮೊಡಂಬಡಿಸಿ ನೀನೆಂದುದನೆನಿಸುವೆನಿದರ್ಕೆ  ಮಾರ್ಕೊಳ್ಳದೊಡಂಬಡು 
       ನಿನ್ನಂ ಕಯ್ಯನೊಡ್ಡಿ ಬೇಡಿದಪ್ಪೆನೆಂದ ಧೃತರಾಷ್ಟ್ರನ ನುಡಿಗನುಬಲಮಾಗಿ ಗಾಂಧಾರಿಯಿಂತೆಂದಳ್-

ಅದಲ್ಲದೆಯೂ ಪಾಂಡವರಾದರೊ ನನ್ನೊಡನೆ ಪಾಂಡುರಾಜನೊಂದಿಗೆ ಹೇಗೆ ವಿಧೇಯರಾಗಿದ್ದರೋ ಅಷ್ಟೇ ವಿಧೆಯರಾಗಿದ್ದಾರೆ.ಅವನೊಂದಿಗೆ ಹೇಗೆ ನಡೆದುಕೊಳ್ಳುತ್ತಿದ್ದರೋ ಹಾಗೆಯೇ ನಡೆದುಕೊಳ್ಳುವವರು.ನಾನು ಹೇಳಿದುದನ್ನು ಅವರು ಮೀರುವುದಿಲ್ಲ.ಅವರನ್ನು ನಾನು ಹೇಗಾದರೂ ಒಪ್ಪಿಸಿ ನೀನು ಹೇಳಿದುದಕ್ಕೆ ಒಪ್ಪಿಕೊಳ್ಳುವ ಹಾಗೆ ಮಾಡುವೆನು.ಇದಕ್ಕೆ ನೀನು ಪ್ರತಿಯಾಡದೆ ಒಪ್ಪಿಕೊ.ನಿನ್ನನ್ನು ಕೈಯೊಡ್ಡಿ ಬೇಡಿಕೊಳ್ಳುವೆನು ಎಂದು ಧೃತರಾಷ್ಟ್ರನು ದುರ್ಯೋಧನನಿಗೆ ಹೇಳಿದಾಗ ಅವನ ಮಾತನ್ನು ಬೆಂಬಲವಾಗಿ (ಅನುಮೋದಿಸಿ) ಗಾಂಧಾರಿಯು ಹೀಗೆ ಹೇಳಿದಳು.

ಚಂ || ಕುರುಕುಳನಂದನಂ ಪವನನಂದನನೆಂಬ ಮದಾಂಧಗಂಧಸಿಂ

    ಧುರಮೆ     ಕರುತ್ತು ಪಾಯೆ ಪಡಲಿಟ್ಟವೊಲಾದುದು ಪುಣ್ಯದೊಂದು ಪೆ|
    ರ್ಮರನುಳಿವಂತೆ ನೀನುಳಿದೆಯಿನ್ನಿರಿವನ್ನರುಮಿಲ್ಲ ಮುತ್ತರುಂ
    ಕುರುಡರುಮೆನ್ನದೆಮ್ಮ ನುಡಿಗೇಳ್ ಮಗನೇ ಬಗೆ ತಂದೆಗಿಂಬುಕೆಯ್  ||

ಕುರುಕುಲವೆನ್ನುವ ನಂದನವನವು ಪವನನಂದನನೆಂಬ (ಭೀಮ)ಮದದಿಂದ ಅಂಧನಾದ ಆನೆಯ ಕೋಪದ ದಾಳಿಗೆ ತುತ್ತಾಗಿ ಧ್ವಂಸವಾಯಿತು.ಪುಣ್ಯದಿಂದ ಒಂದು ದೊಡ್ಡ ಮರವು ಉಳಿವ ಹಾಗೆ ನೀನೊಬ್ಬನು ನಮ್ಮ ಪಾಲಿಗೆ ಉಳಿದಿದ್ದೀಯೆ.ಇನ್ನು ಯುದ್ಧ ಮಾಡಿವವರು ಯಾರೂ ಇಲ್ಲ.ಮುದುಕರು ,ಕುರುಡರು ಎನ್ನದೆ ನಮ್ಮ ಮಾತನ್ನು ಕೇಳು ಮಗನೆ.ತಂದೆಯ ಮಾತನ್ನು ಒಪ್ಪಿಕೋ. ಎಂದು ಗಾಂಧಾರಿಯು ದುರ್ಯೋಧನನಿಗೆ ಹೇಳಿದಳು.

ಮೌಲ್ಯಮಾಪನ

ಭಾರತದ ಎರಡು ಮಹಾಕಾವ್ಯಗಳು ಯಾವುವು ? ಮೂಲ ಮಹಾಭಾರತವನ್ನು ಬರೆದವರು ಯಾರು ? ಮಹಾಭಾರತವನ್ನು ಕನ್ನಡದಲ್ಲಿ ಯಾರು ಯಾರು ಬರೆದಿದ್ದಾರೆ ? ಮಹಾಭಾರತದ ಮುಖ್ಯ ಪಾತ್ರಗಳು ಯಾವುವು ? ಪವನನಂದನ ಯಾರು ? ಘಟ ಸಂಭೂತ ಯಾರು ? ಮಹಾಭಾರತ ಯುದ್ಧಕ್ಕೆ ಯಾರು ಕಾರಣ ಎಂದು ಧೃತರಾಷ್ಟ್ರನು ಹೇಳುವನು ? ಹಗೆ ನಂಟಿನ ಕುರಿತು ಅರ್ಥಶಾಸ್ತ್ರದಲ್ಲಿ ಏನು ಹೇಳಿದೆ ?








ಹೆಚ್ಚುವರಿ ಸಂಪನ್ಮೂಲಗಳು

ವಿಕ್ರಮಾರ್ಜುನ ವಿಜಯ : ಒಂದು ಸಮೀಕ್ಷೆ -೧- ವಿಕ್ರಮಾರ್ಜುನ ವಿಜಯ ಕನ್ನಡದ ಮೊದಲ ಮಹಾಕಾವ್ಯ ಮಾತ್ರವಲ್ಲ, ಮೊದಲ ದರ್ಜೆಯ ಮಹಾಕಾವ್ಯ. ಕವಿಯ ಅನುಭವದ ಪರಿಣತಿ, ಭಾಷೆಯ ಪರಿಣತಿ ಮತ್ತು ಅಂದಿನ ಕಾಲದ ಜೀವನದ ಪರಿಣತಿಗಳನ್ನು ಅತ್ಯಂತ ಸಮರ್ಥವಾಗಿ ಪ್ರಕಟಿಸುವ ಈ ಕೃತಿ, ಎಲ್ಲ ಕಾಲಕ್ಕೂ ಓದುಗರ ಗಮನವನ್ನು, ಗೌರವವನ್ನು, ವಿಮರ್ಶೆಯನ್ನು ಗೆದ್ದುಕೊಳ್ಳುವ ಸಾಮರ್ಥ್ಯವನ್ನು ಪಡೆದಿದೆ. ತನ್ನ ಸಮೀಪ ಕಾಲದ ಯಾವ ಸಂಸ್ಕೃತ ಕಾವ್ಯಗಳನ್ನೂ ತನಗೆ ಮಾದರಿಯನ್ನಾಗಿ  ಮಾಡಿಕೊಳ್ಳದೆ, ದೂರದ ಮಹಾಕವಿ ವ್ಯಾಸರ ಕಥಾನಕವನ್ನು ಕನ್ನಡದಲ್ಲಿ ಕಂಡರಿಸುವ ಗೊಮ್ಮಟ ಶಿಲ್ಪ ಸಾಹಸಕ್ಕೆ ಪಂಪ ಕೈ ಹಾಕಿದ್ದರಿಂದ “ಕನ್ನಡಕ್ಕೆ ಏರೆತ್ತರದ ಆರಂಭ ಸಿಕ್ಕಿತು.”[1] “ವ್ಯಾಸರಾದ ಮೇಲೆ ಪಂಪನ ತನಕ ಬಂದ ಸಂಸ್ಕೃತ ಕವಿಗಳಾರೂ- ರಘುವಂಶವನ್ನು ರಚಿಸಿದ ಕಾಳಿದಾಸ ಕೂಡ-ಮತ್ತೆ ಮಹಾಭಾರತವನ್ನು ಸಮಗ್ರವಾಗಿ ಮುಟ್ಟಲು ಧೈರ್ಯ ಮಾಡಲಿಲ್ಲ ಎಂಬುದನ್ನು ನೆನೆದರೆ”[2] ಪಂಪನ ಈ ಪ್ರಯತ್ನ ಎಷ್ಟು ಮಹತ್ವದ್ದೆಂಬುದು ಮನವರಿಕೆಯಾಗುತ್ತದೆ.[3] ಆಗಲೇ ಸಿದ್ಧಪ್ರಸಿದ್ಧವಾದ ಆ ಮೂಲ ಮಹಾಕೃತಿಯನ್ನು ತಾನು ಮೀರಿಸಲಾರೆನೆಂಬ ಅರಿವಿದ್ದೂ, ತಾನು ಕೇವಲ ಆ ಮೂಲ ವಿಗ್ರಹದ ಅರ್ಚಕ ಮಾತ್ರನಾಗಬಾರದೆಂಬ ಎಚ್ಚರದಿಂದ ಆ ಮಹಾಭಾರತದ ವ್ಯಾಸಾನುಭವವನ್ನು ತನ್ನ ಕಾಲದ ಐತಿಹಾಸಿಕ ಚೌಕಟ್ಟಿನಲ್ಲಿ ಹಿಡಿದುಕೊಟ್ಟವನು ಪಂಪ. ‘ವ್ಯಾಸ ಮುನೀಂದ್ರ ರುಂದ್ರ ವಚನಾಮೃತ ವಾರ್ಧಿಯನೀಸುವೆಂ, ಕವಿ ವ್ಯಾಸನೆನ್ ಎಂಬ ಗರ್ವಮೆನಗಿಲ್ಲ’- ಎಂದು ತನ್ನ ವಿನಯವನ್ನು ಪ್ರಕಟಿಸಿದರೂ, ಮತ್ತೊಂದು ಮುಖ್ಯವಾದ ಮಾತನ್ನು ಆತ ಮರೆತಿಲ್ಲ. ಅದು, ಮೂಲಭಾರತ ದೊಡ್ಡದಾದರೂ, ಅದನ್ನು ವಿಕಾರಗೊಳಿಸದಂತೆ, ವ್ಯಾಸರಿಗೆ ಗೌರವ ತರುವಂತೆ ರಚಿಸಬೇಕೆಂಬುದು. ‘ಕತೆ ಪಿರಿದಾದೊಡಂ ಕತೆಯ ಮೆಯ್ಗಿಡಲೀಯದೆ’ ಸಮಸ್ತ ಭಾರತವನ್ನೂ ಹೇಳಬೇಕೆಂಂಬುದು. ಇದು ತೀರಾ ಗಮನಿಸಬೇಕಾದ ಮಾತಾಗಿದೆ. ವೈದಿಕ ಕಥಾವಸ್ತುವನ್ನು ಜೈನ ಧರ್ಮೀಯನಾದ ತಾನು ನಿರ್ವಹಿಸುವಲ್ಲಿ ತನಗೆ ತಾನೇ ಪಂಪ ಕೊಟ್ಟುಕೊಂಡದ್ದು ಈ ಎಚ್ಚರಿಕೆಯ ಮಾತು. ಈ ಎಚ್ಚರವನ್ನು ಪಂಪನ ಶತಮಾನದ ಅನಂತರದ ಜೈನ ಕವಿಗಳು ಮರೆತು, ವೈದಿಕ ಕಥಾನಕಗಳನ್ನು ‘ಮೆಯ್ಗಿಡಿಸು’ವುದರ ಮೂಲಕವೇ ತಮ್ಮ ಜೈನ ದೃಷ್ಟಿಯ ವೈಶಿಷ್ಟ್ಯವನ್ನು ತೋರಿದರೆಂಬುದನ್ನು ನೆನೆದಾಗ, ಪಂಪನಿಗಿದ್ದ ಈ ಎಚ್ಚರ ಎಷ್ಟು ಮಹತ್ವದ್ದೆಂಬುದು ಗೊತ್ತಾಗುತ್ತದೆ. ಈ ಎಚ್ಚರಕ್ಕೆ ಮತ್ತು ವ್ಯಾಸರ ಮೇಲಿನ ಗೌರವಕ್ಕೆ ಕಾರಣ, ಪಂಪನ ಪೂರ್ವಿಕರು ವೈದಿಕರಾಗಿದ್ದರು, ಪಂಪನಲ್ಲಿ ಜೈನ-ವೈದಿಕ ಸಂಸ್ಕಾರಗಳೆರಡೂ ಸಮನ್ವಯಗೊಂಡಿದ್ದವು ಎಂದು ಹೇಳಬಹುದಾದರೂ, ಪಂಪನ ವ್ಯಕ್ತಿತ್ವವೇ ಈ ದೊಡ್ಡತನದಿಂದ, ಉದಾರತೆಯಿಂದ, ಕನ್ನಡದ ಮೊದಲ ಕವಿಗೆ ತಕ್ಕ ಘನತೆಯಿಂದ ಕೂಡಿದುದಾಗಿತ್ತು. ವಿಕ್ರಮಾರ್ಜುನ ವಿಜಯದ ರಚನೆಯ ಮೂಲಕ ಪ್ರಕಟವಾಗುವ ಇನ್ನೊಂದು ವಿಶೇಷವೆಂದರೆ, ‘ಬೆಳಗುವೆನಿಲ್ಲಿ ಲೌಕಿಕಮನ್, ಅಲ್ಲಿ ಜಿನಾಗಮಮಂ’ ಎಂಬ ಘೋಷಣೆಯ ಮೂಲಕ ತನ್ನ ಕಾವ್ಯ ಪ್ರಜ್ಞೆಯನ್ನು ‘ಲೌಕಿಕ’ ಮತ್ತು ‘ಆಗಮಿಕ’ ಎಂದು ವಿಭಾಗಿಸಿದ್ದು. ಹೀಗೆ ವಿಭಾಗಿಸುವುದಕ್ಕೆ ಪಂಪನಿಗೆ ತೀರಾ ವೈಯಕ್ತಿಕವಾದ ಕಾರಣಗಳಿದ್ದವು. ಯಾಕೆಂದರೆ ಧರ್ಮದಲ್ಲಿ ಜೈನನಾದ ತಾನು, ಜೈನನಲ್ಲದ ರಾಜನೊಬ್ಬನ ಆಸ್ಥಾನದಲ್ಲಿ ಬದುಕಿದಾಗ ಮತ್ತು ಹಾಗೆ ಆಶ್ರಯಕೊಟ್ಟ ರಾಜನು ತನ್ನ ಪರಮಸ್ನೇಹಿತನೂ ಆದಾಗ, ಸಹಜವಾಗಿಯೆ ಒಂದೆಡೆ ತನ್ನ ರಾಜನ ಬಗೆಗಿದ್ದ  ಸ್ನೇಹನಿಷ್ಠೆಯನ್ನೂ, ಮತ್ತೊಂದೆಡೆ ತನ್ನ ಧರ್ಮನಿಷ್ಠೆಯನ್ನೂ ಪ್ರಕಟಿಸಬೇಕಾದ ಉಭಯ ಬದ್ಧತೆಗೆ ಒಳಗಾದದ್ದರಿಂದ, ಅವನ ಕಾವ್ಯಪ್ರಜ್ಞೆ ಗಂಡಭೇರುಂಡದಂತೆ ದ್ವಿಮುಖವಾಯಿತು. ಒಂದು ವೇಳೆ ಪಂಪನ ಆಶ್ರಯದಾತನಾದ ರಾಜ ಅರಿಕೇಸರಿ, ಧರ್ಮದಲ್ಲಿ ಜೈನನೇ ಆಗಿದ್ದ ಪಕ್ಷದಲ್ಲಿ ಪಂಪನ ಕಾವ್ಯಪ್ರಜ್ಞೆಯು ಹೀಗೆ ಎರಡಾಗಲು ಸಾಧ್ಯವಾಗುತ್ತಿರಲಿಲ್ಲವೆಂಬುದು ಸದ್ಯಕ್ಕೆ ಊಹೆಯ ಮಾತು. ಆದರೆ ಪಂಪನ ಕಾವ್ಯಪ್ರಜ್ಞೆ ಹೀಗೆ ಕವಲೊಡೆದದ್ದು ಒಂದು ಐತಿಹಾಸಿಕ ಆಕಸ್ಮಿಕದಂತೆ ತೋರಿದರೂ, ಇದೂ ಮುಂದಿನ ಜೈನ ಕವಿಗಳ ಪಾಲಿಗೆ ಒಂದು ಪರಂಪರೆಯೆ ಆಯಿತೆಂಬುದು ಗಮನಿಸಬೇಕಾದ ಮಾತಾಗಿದೆ. ರನ್ನ, ಪೊನ್ನ, ಜನ್ನ, ನೇಮಿಚಂದ್ರರ ತನಕವೂ ಈ ಪರಂಪರೆ ಚಾಚಿಕೊಂಡಿದೆ. ಅವರೆಲ್ಲರಿಗೂ ಕಾಕತಾಳೀಯದಂತೆ, ಪಂಪನಿಗೆ ಒದಗಿದಂಥ ಪರಿಸ್ಥಿತಿಯೇ ಹೆಚ್ಚು ಕಡಮೆ ಪುನರಾವರ್ತನೆಯಾದಂತೆ ತೋರುತ್ತದೆ. ಹೀಗೆ ಲೌಕಿಕ-ಆಗಮಿಕ ಎಂದು ಕವಲೊಡೆದಾಗ, ಪಂಪನ ‘ಲೌಕಿಕ ಕಾವ್ಯ’, ‘ಸಮಸ್ತ’ ತಂತ್ರವನ್ನವಲಂಬಿಸಿದ್ದು, ಎಂದರೆ ತನ್ನ ಕಾವ್ಯದ ಪಾತ್ರದೊಂದಿಗೆ, ತನ್ನ ಆಶ್ರಯದಾತನಾದ ರಾಜನನ್ನು ಸಮಾವೇಶಗೊಳಿಸಿ ಕತೆ ಹೇಳುವ ತಂತ್ರವನ್ನು ಕಂಡುಕೊಂಡದ್ದು ಒಂದು ಹೊಸವಿಧಾನವೇ ಆಗಿ, ಪಂಪ ನಿರ್ಮಿತ ಪರಂಪರೆಯ ಮುಖ್ಯಾಂಶವಾಗಿ ಮುಂದಿನ ಕವಿಗಳಿಗೆ ಒಂದು ಆಕರ್ಷಣೀಯ ತಂತ್ರವಾಯಿತು.[4] ಇದರ ಜತೆಗೆ ಪಂಪನಿಗೆ ವಿಶಿಷ್ಟವಾದ ಇನ್ನೆರಡು ಅಂಶಗಳನ್ನು ವಿಕ್ರಮಾರ್ಜುನ ವಿಜಯದಲ್ಲಿ ಗುರುತಿಸಬಹುದು: ಒಂದು, ಪಂಪನಿಗೆ, ಕನ್ನಡದ ಮೊದಲ ಕವಿಯಾಗಿ ಕಾವ್ಯದ ಭಾಷೆ ಹೇಗಿರಬೇಕು ಎನ್ನುವುದರ ಬಗ್ಗೆ ಇದ್ದ ಪ್ರಜ್ಞಾಪೂರ್ವಕವಾದ ಕಲ್ಪನೆ. ಪಂಪನಿಗಿಂತ ಹಿಂದೆ ಕನ್ನಡದ ಮೇಲೆ ಸಂಸ್ಕೃತದ ಪ್ರಭಾವ ದಟ್ಟವಾಗಿತ್ತು. ಪಂಪನಿಗೆ ಹಿಂದೆ ಒಂಬತ್ತನೆಯ ಶತಮಾನದ ನೃಪತುಂಗ, ಕಾವ್ಯಭಾಷೆಯ ಮೇಲೆ ಒತ್ತಿಕೊಂಡ ಸಂಸ್ಕೃತದ ಪ್ರಭಾವವನ್ನು ಗುರುತಿಸಿ, ಕನ್ನಡದಲ್ಲಿ ಸಂಸ್ಕೃತದ ಮಿತಿಮೀರಿದ ಮಿಶ್ರಣವನ್ನು ವಿರೋಧಿಸಿ, ಕಾವ್ಯದ ಭಾಷೆಯಲ್ಲಿ ಕನ್ನಡ-ಸಂಸ್ಕೃತಗಳು ಹದವಾದ ರೀತಿಯಲ್ಲಿ ಬೆರೆತರೆ ತಪ್ಪೇನಲ್ಲ ಎಂಬ ಮಾತನ್ನು ಹೇಳಿದ್ದ. ವ್ಯಾಸ-ಕಾಳಿದಾಸ- ಬಾಣಾದಿಗಳ ಕಾವ್ಯಸತ್ವದಿಂದ ಸಾಕಷ್ಟು ಪುಷ್ಟಿಯನ್ನು ಪಡೆದ ಪಂಪ, ವಿಕ್ರಮಾರ್ಜುನ ವಿಜಯವನ್ನು ಹೇಳುವುದಾದರೆ ಪಂಪನೇ ಹೇಳಬೇಕು ಎಂದು ಪಂಡಿತರು ಒಂದೇ ಸಮನೆ ಪ್ರೋತ್ಸಾಹಿಸಿದರೂ ಸಹ, ತನ್ನ ಪರಿಸರದ ‘ಸಾಜದ ಪುಲಿಗೆಱೆಯ ತಿರುಳ್ ಕನ್ನಡ’ವನ್ನು ಪಾಂಡಿತ್ಯಕ್ಕಾಗಿಯಾಗಲಿ, ಪಂಡಿತರಿಗಾಗಿಯಾಗಲಿ ಬಲಿಗೊಡಲು ಸಿದ್ಧನಿರಲಿಲ್ಲ. ಆದುದರಿಂದಲೇ ಮಾರ್ಗ ಕಾವ್ಯವನ್ನು ಬರೆಯುವಾಗ ಮೊದಲು ಕವಿ ಪ್ರತಿಭೆ ‘ದೇಸಿಯೊಳ್ ಪುಗುವುದು’, ಹಾಗೆ ಹೊಕ್ಕನಂತರ ‘ಮಾರ್ಗದೊಳೆ-ಎಂದರೆ ಮಾರ್ಗೀ ರೀತಿಯಲ್ಲಿ ಅಥವಾ ಸಂಸ್ಕೃತ ಮಾರ್ಗಕಾವ್ಯಗಳಿಂದ ಸಿದ್ಧವಾದ ಪ್ರೌಢ ರೀತಿಯಲ್ಲಿ-ತಳ್ವುದು’ ತನ್ನ ಕಾವ್ಯದ ಶೈಲಿಯ ಸ್ವರೂಪವಾಗಬೇಕು ಎಂದು ಮೊದಲೇ ಯೋಚಿಸಿಕೊಂಡ ಪಂಪ. ಹೀಗೆ ಮಾರ್ಗ-ದೇಸಿಗಳ  ಒಂದು ಸಮನ್ವಯವನ್ನು ತನ್ನ ಕಾವ್ಯದ ಶೈಲಿಯಲ್ಲಿ ಸಾಧಿಸಬೇಕೆಂಬ ಉದ್ದೇಶ ಅವನದು. ಕಾವ್ಯ ವಸ್ತುವಿನ ಬಗ್ಗೆ, ಅದನ್ನು ನಿರ್ವಹಿಸುವ ತಂತ್ರ(technique)ದ ಬಗ್ಗೆ ಮತ್ತು ಕಾವ್ಯದ ಭಾಷಾ ಶೈಲಿಯ ಬಗ್ಗೆ ಸ್ಪಷ್ಟವಾದ ಪ್ರಜ್ಞೆ, ಇದ್ದುದರ ಜತೆಗೆ, ತನ್ನ ಕಾವ್ಯದಲ್ಲಿನ ಪಾತ್ರಗಳ ಬಗೆಗೂ ಒಂದು ರೀತಿಯ ಪೂರ್ವ ನಿಶ್ಚಿತ ರೂಪ ಕಲ್ಪನೆ ಇದ್ದಂತೆ ತೋರುತ್ತದೆ. ತನ್ನ ವಿಕ್ರಮಾರ್ಜುನ ವಿಜಯದ ತುದಿಯಲ್ಲಿ ‘ಚಲದೊಳ್ ದುರ್ಯೋಧನಂ, ನನ್ನಿಯೊಳಿನತನಯಂ, ಗಂಡಿನೊಳ್ ಭೀಮಸೇನಂ, ಬಲದೊಳ್ ಮದ್ರೇಶನ್’ ಹೀಗೆ ಮೊದಲಾಗಿ ‘ಇವರ್ಗಳಿನೀ ಭಾರತಂ ಲೋಕಪೂಜ್ಯಂ’ ಎನ್ನುವಾಗ, ‘ಈ ಭಾರತಂ’ ಎಂದರೆ, ವ್ಯಾಸ ಭಾರತವೋ, ವಿಕ್ರಮಾರ್ಜುನ ವಿಜಯವೋ ಎಂಬ ಸಂಶಯ ಬರಲು ಸಾಧ್ಯವಿದ್ದರೂ, ಅದರ ಮುಖ್ಯಾರ್ಥ ತಾನು ಬರೆದ ಭಾರತ ಅಥವಾ ವಿಕ್ರಮಾರ್ಜುನ ವಿಜಯ, ಲೋಕ ಪೂಜ್ಯವಾಗುವ ಕೃತಿ  ಎಂಬುದೇ ಆಗಿದೆ. ತನ್ನ ಭಾರತದ ಮುಖ್ಯ ಪಾತ್ರಗಳನ್ನು ಕುರಿತ ಒಂದು ಬಗೆಯ ಸೂತ್ರ ರೂಪವಾದ ವಿಮರ್ಶೆಯನ್ನು ಕವಿಯೇ ಮಾಡಿರುವುದು ಅಪೂರ್ವವಾದ ಸಂಗತಿ. ಇದರಲ್ಲಿ ಕವಿ ತಾನು ಈ ಭಾರತವನ್ನು ಬರೆಯುವಲ್ಲಿ ಈ ಒಂದೊಂದು ಗುಣಕ್ಕೂ ಪ್ರತಿನಿಧಿಗಳಾಗುವಂತೆ ಒಂದೊಂದು ಪಾತ್ರವನ್ನೂ ಚಿತ್ರಿಸಿದ್ದೇನೆ ಎಂದು ಹೇಳಿಕೊಂಡಿದ್ದಾನೆಯೆ ಅಥವಾ ತಾನು ಬರೆದಾದ ಮೇಲೆ ಅದನ್ನು ತಾನೇ ಅವಲೋಕಿಸಿ ಅಥವಾ ಪ್ರಾಸಂಗಿಕವಾಗಿ ಈ ಪಾತ್ರ ವಿಮರ್ಶೆಯ ಮಾತನ್ನು ಹೇಳಿದ್ದಾನೆಯೆ, ಖಚಿತವಾಗಿ ಹೇಳುವುದು ಕಷ್ಟ. ಮುಳಿಯ ತಿಮ್ಮಪ್ಪಯ್ಯನವರಂತೂ ತಮ್ಮ ‘ನಾಡೋಜ ಪಂಪ’ದಲ್ಲಿ, ಪಂಪನು ತನ್ನ ವಿಕ್ರಮಾರ್ಜುನ ವಿಜಯದಲ್ಲಿ ಮಾಡಿದ ಈ ಪಾತ್ರ ವಿಮರ್ಶೆಯ ಆಧಾರದ ಮೇಲಿಂದಲೇ, ಪಂಪಭಾರತದ ಪಾತ್ರಗಳನ್ನು ಪರಿಶೀಲಿಸಿದ್ದಾರೆ. ನಮಗೆ ತೋರುವ ಮಟ್ಟಿಗೆ ಈ ಪಾತ್ರ ವಿಮರ್ಶೆಯ ಪದ್ಯ, ಉದ್ದೇಶಪೂರ್ವಕವೆನ್ನುವುದಕ್ಕಿಂತ, ಪ್ರಾಸಂಗಿಕವೆಂದೇ ತೋರುತ್ತದೆ. ಯಾಕೆಂದರೆ ಈ ಪದ್ಯದಲ್ಲಿನ ಹೆಸರುಗಳ ಅನುಕ್ರಮವನ್ನು ಗಮನಿಸಿದರೂ, ಮೊದಲಿಗೆ ದುರ್ಯೋಧನ, ಕರ್ಣ ಇತ್ಯಾದಿ ಹೆಸರುಗಳು ಬಂದು, ನಡುವೆ ಅರ್ಜುನನ ಹೆಸರು ಬಂದಿದೆ. ವಾಸ್ತವವಾಗಿ ‘ವಿಕ್ರಮಾರ್ಜುನ ವಿಜಯ’ವೆಂದು ತನ್ನ ಕೃತಿಗೆ ಹೆಸರು ಕೊಟ್ಟು, ಉದ್ದಕ್ಕೂ ಅರ್ಜುನನಿಗೇ ಬಹುಮಟ್ಟಿಗೆ ಅಗ್ರಸ್ಥಾನ ಸಲ್ಲುವಂತೆ ನೋಡಿಕೊಂಡ ಪಂಪ, ಅರ್ಜುನನ ಪಾತ್ರದಲ್ಲಿರುವವನು ವಾಸ್ತವವಾಗಿ ತನ್ನ ಪ್ರಭುವೂ, ಮಿತ್ರನೂ ಆದ ಅರಿಕೇಸರಿಯೇ ಎಂಬ ಎಚ್ಚರವನ್ನು ಕಾಯ್ದುಕೊಂಡು ಬಂದ ಪಂಪ, ‘ಲೋಕ ಪೂಜ್ಯ’ವಾದ ತನ್ನ ಕೃತಿಯ ತುದಿಯಲ್ಲಿ ಹೀಗೆ ಮುಖ್ಯ ಪಾತ್ರಗಳನ್ನು ಪಟ್ಟಿಮಾಡಿ ಪ್ರಶಂಸಿಸುವ ಸಂದರ್ಭದಲ್ಲಿ, ಅರ್ಜುನನ ಹೆಸರನ್ನು ಮೊದಲು ತರುವ ಸಾಧ್ಯತೆಯ ಕಡೆಗೆ ಗಮನ ಕೊಡದಷ್ಟು ಎಚ್ಚರ ತಪ್ಪುತ್ತಾನೆಯೆ ಎನ್ನುವುದು ಇಲ್ಲಿನ ಪ್ರಶ್ನೆ. ಹಾಗೆಯೇ ‘ಬಲದೊಳ್ ಮದ್ರೇಶನ್’ ಎಂಬ ಮಾತು ಬಂದರೂ, ಆ ಪಾತ್ರದ ಬಗ್ಗೆ ಪಂಪನ ಚಿತ್ರಣ ಈ ಮಾತನ್ನು ಪೋಷಿಸುವಷ್ಟೇನೂ ಬಂದಿಲ್ಲ. ಈ ಒಂದು ಪದ್ಯ ಕನ್ನಡ ವಿಮರ್ಶಕರನ್ನು ಕೆಣಕಿರುವ ಪದ್ಯ. ಇದರಲ್ಲಿ ಕೃಷ್ಣನ ಹೆಸರೇ ಇಲ್ಲ-ಎನ್ನುವುದರ ಮೇಲೆದ್ದ  ಕೋಲಾಹಲ ಕಡಮೆಯದಲ್ಲ. ಮತ್ತೆ ಕೆಲವರು, ಕವಿ ಪಂಪ, ಅರ್ಜುನನ ಮೇಲಿನ ಅಭಿಮಾನವನ್ನೂ ಬದಿಗೊತ್ತಿ ದುರ್ಯೋಧನ ಹಾಗೂ ಕರ್ಣನ ಪಾತ್ರಗಳ ಕಡೆಗೆ ಮನಸ್ಸನ್ನು ತೆತ್ತಿದ್ದಾನೆ ಎನ್ನುತ್ತಾರೆ. “ಚಲದೊಳ್ ದುರ್ಯೋಧನಂ ನನ್ನಿಯೊಳಿನತನಯಂ ಎಂಬ ಪದ್ಯ ಸ್ಥೂಲವಾಗಿ ಒಂದು ಮೌಲ್ಯ ಶ್ರೇಣಿಯನ್ನು (a scale of values) ಸೂಚಿಸುವಂತೆ ಕಾಣುತ್ತದೆ”[5] ಎಂಬ ಒಂದು ಅಭಿಪ್ರಾಯವೂ ಇದೆ. ಆದರೆ ಒಟ್ಟಿನಲ್ಲಿ ಪಂಪ ತನ್ನ ಭಾರತದ ಈ ಒಂದೊಂದು ಪಾತ್ರವೂ ಯಾವ ಯಾವ ಒಂದೊಂದು ವಿಶಿಷ್ಟ ಗುಣಕ್ಕೆ ಅಥವಾ ಮೌಲ್ಯಕ್ಕೆ ಪ್ರತಿನಿಧಿಗಳೆಂದು  ಭಾವಿಸಿದ್ದನೆಂಬುದು ಈ ಪ್ರಶಸ್ತಿ ಪದ್ಯದಿಂದ ಸ್ಪಷ್ಟವಾಗುತ್ತದೆ. ಹಾಗೆಯೇ ಇಂಥ ಯಾವ ಒಂದು ನಿರ್ದಿಷ್ಟ ಗುಣದೊಳಕ್ಕೂ ಬದ್ಧವಾಗಿಸಿ ಹೇಳಲಾಗದ ಕೃಷ್ಣನ ಹೆಸರನ್ನು ಪಂಪ ಈ ಪಟ್ಟಿಯೊಳಕ್ಕೆ ತಾರದಿರುವುದೂ ಅರ್ಥಪೂರ್ಣವಾಗಿಯೇ ತೋರುತ್ತದೆ. ಈ ಪಾತ್ರಗಳ ವರ್ಣನೆಯಲ್ಲಿ ಕಾಣುವ ಒಂದೊಂದು ಗುಣ ಅಥವಾ ಮೌಲ್ಯಗಳು ಪಂಪನ ಕಾಲದಲ್ಲಿಯೂ  ಪ್ರಕರ್ಷವಾದವುಗಳೇ. ಇದಕ್ಕೂ ಮಿಗಿಲಾಗಿ ಪಂಪ ತನ್ನ ಕಾಲದ ಸಮಸ್ತ ಜೀವನವನ್ನೂ ಸೆರೆಹಿಡಿದಿದ್ದಾನೆ, ತನ್ನ ವೈಯಕ್ತಿಕ ಅಭಿರುಚಿ ಹಾಗೂ ಅನುಭವಗಳೊಡನೆ. ಹೀಗಾಗಿ ವಿಕ್ರಮಾರ್ಜುನ ವಿಜಯ ಅತ್ಯಂತ ಪ್ರಜ್ಞಾಪೂರ್ವಕವಾಗಿ ರಚಿತವಾದ ಕೃತಿ. ತನ್ನ ರಾಜನಿಗಾಗಿ ಬರೆಯುತ್ತಿದ್ದೇನೆ, ಇದರಲ್ಲಿ ತನ್ನ ರಾಜನನ್ನು ಸಮೀಕರಿಸುವ ತಂತ್ರದಲ್ಲಿ ಬರೆಯುತ್ತಿದ್ದೇನೆ, ತನ್ನನ್ನು ಬರೆಯಲು ಹಚ್ಚಿದ ಹಾಗೂ ಈ ಪಂಡಿತ ಮಂಡಲಿಯಾಚೆ ಇರುವ ಜನಕ್ಕೂ ತಿಳಿಯುವಂತೆ ಬರೆಯುತ್ತೇನೆ ಮತ್ತು ಒಂದೊಂದು ಪಾತ್ರವನ್ನು ಒಂದೊದು ವಿಶಿಷ್ಟ ಗುಣಕ್ಕೆ ಪ್ರತಿನಿಧಿಯನ್ನಾಗಿ ಮಾಡುತ್ತೇನೆ-ಇತ್ಯಾದಿ ಮಿತಿಗಳ ಅರಿವನ್ನಿರಿಸಿಕೊಂಡು ಬರೆದಿದ್ದಾನೆ, ‘ಲೌಕಿಕ’ವನ್ನು ಬೆಳಗುವ ವಿಕ್ರಮಾರ್ಜುನ ವಿಜಯವನ್ನು. -೨- ವಿಕ್ರಮಾರ್ಜುನ ವಿಜಯವನ್ನು ಬರೆಯುವಲ್ಲಿ ಪಂಪ ಮಾಡಿದ ಒಂದು ಘೋಷಣೆ ‘ಬೆಳಗುವೆನಿಲ್ಲಿ ಲೌಕಿಕಮನ್, ಅಲ್ಲಿ ಜಿನಾಗಮಮಂ’ ಎನ್ನುವುದು ವಿಮರ್ಶಕರನ್ನು ದಾರಿ ತಪ್ಪಿಸಿದೆ[6] ಎಂಬುದು ನಮ್ಮ ಅಭಿಪ್ರಾಯ. ಹೀಗೆ ದಾರಿ ತಪ್ಪಿದ್ದರ ಪರಿಣಾಮವೆಂದರೆ ‘ವಿಕ್ರಮಾರ್ಜುನ ವಿಜಯ ಲೌಕಿಕ ಕಾವ್ಯ’, ‘ಆದಿಪುರಾಣ ಧಾರ್ಮಿಕ  ಕಾವ್ಯ’ ಎಂಬ ಗ್ರಹಿಕೆ. ಇದರಲ್ಲಿ ಎರಡನೆಯದು ನಿಜವಾದಷ್ಟು, ಮೊದಲನೆಯದು ನಿಜವಲ್ಲ. ಯಾಕೆಂದರೆ ವ್ಯಾಸ ಭಾರತದಂಥ ದೊಡ್ಡ ವಸ್ತುವನ್ನು ಎತ್ತಿಕೊಂಡು ಬರೆಯುವಾಗ, ತನ್ನ ಉದ್ದೇಶ, ಆ ವ್ಯಾಸ ಭಾರತವನ್ನು ಯಥಾವತ್ತಾಗಿ ತರುವುದಾಗಲಿ ಅಥವಾ ವ್ಯಾಸಭಾರತ ಯಾವ ದೃಷ್ಟಿಯಿಂದ ಅದುವರೆಗೂ ಪರಿಗಣಿತವಾಯಿತೋ, ಅದನ್ನೇ ತಾನು ಎತ್ತಿ ಹಿಡಿಯುವುದಾಗಲಿ ಆಗಿರದೆ, ಆ ವಸ್ತುವಿನಲ್ಲಿ ‘ಲೌಕಿಕ’ವನ್ನು ಬೆಳಗುವುದು, ಎಂದರೆ ಉಜ್ವಲವಾಗಿ ಕಾಣುವಂತೆ ಚಿತ್ರಿಸುವುದು ತನ್ನ ಉದ್ದೇಶ ಎಂಬ ಮಾತನ್ನು ‘ಬೆಳಗುವೆನಿಲ್ಲಿ ಲೌಕಿಕಮನ್’ ಎಂಬ ಮಾತಿನಲ್ಲಿ ಸೂಚಿಸಿದ್ದಾನೆಯೆ ಹೊರತು, ತನ್ನ ವಿಕ್ರಮಾರ್ಜುನ ವಿಜಯ ಕೇವಲ ಒಂದು ‘ಲೌಕಿಕ ಕಾವ್ಯ’ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ. ಆದಿಪುರಾಣದಲ್ಲಿ ‘ಜಿನಾಗಮಮಂ’ ಬೆಳಗುವೆನೆಂದು ಪಂಪ ಹೇಳಿದ ಇನ್ನೊಂದು ಮಾತಿನಿಂದ, ಮತ್ತು ಆದಿಪುರಾಣ ಮುಖ್ಯವಾಗಿ ಜೈನ ಧರ್ಮವನ್ನು  ಕುರಿತ ‘ಧಾರ್ಮಿಕ ಕಾವ್ಯ’ವೇ ಆದದ್ದರಿಂದ, ಬಹಳ ಸಹಜವಾಗಿಯೇ ಅದಕ್ಕೆ ಭಿನ್ನವಾದ ವಿಕ್ರಮಾರ್ಜುನ ವಿಜಯವನ್ನು ‘ಲೌಕಿಕ ಕಾವ್ಯ’ ಎಂದು ಭಾವಿಸುವುದು ನಮ್ಮಲ್ಲನೇಕರಿಗೆ ಅಭ್ಯಾಸವಾಯಿತೆಂದು ಕಾಣುತ್ತದೆ. ಒಂದು ವೇಳೆ, ಪಂಪನ ಅರ್ಥ ಅದಲ್ಲವೆಂದು ಗೊತ್ತಿದ್ದೂ,  ವಿಕ್ರಮಾರ್ಜುನ ವಿಜಯವನ್ನು ಒಂದು ಲೌಕಿಕ ಕಾವ್ಯವೆಂದು ಕರೆಯುವುದು ಅನುಚಿತವೇನೂ ಅಲ್ಲ. ಹಾಗೆ ಕರೆದರೆ, ‘ಮಹಾಭಾರತ’ವನ್ನು ಪುರುಷಾರ್ಥ ಸಾಧಕವಾದ ಮಹಾಪುರಾಣವೆಂದು ಪೂಜಿಸುವ ದೃಷ್ಟಿಯುಳ್ಳವರಿಗೆ ಕೊಂಚ ಕಸಿವಿಸಿಯಾಗಬಹುದಾದರೂ, ವಾಸ್ತವವಾಗಿ ಮಹಾಭಾರತ ಮೂಲತಃ ಒಂದು ‘ಲೌಕಿಕ’ ಕೃತಿಯೇ. ದ್ವೇಷ, ಅಸೂಯೆ, ಲೋಭ, ಸೇಡು, ವಿಜಯೋನ್ಮತ್ತತೆ ಇತ್ಯಾದಿಗಳಿಂದ ಕೂಡಿದ, ಈ ಲೋಕದ ಜನದ ನಡವಳಿಕೆಯನ್ನೇ ಅದು ಮುಖ್ಯವಾಗಿ ಚಿತ್ರಿಸುತ್ತದೆ-ಭೀಷ್ಮ, ಧರ್ಮರಾಯ, ವಿದುರ, ಕೃಷ್ಣನಂಥವರು ಆ ಕಥಾಪರಿಸರದಲ್ಲಿ ಉದಾತ್ತ ಮೌಲ್ಯಗಳಿಗೆ ಪ್ರತೀಕವಾಗಿದ್ದವರು ಎಂಬುದನ್ನು ಮರೆಯದೆ.  ಅಲ್ಲದೆ ಪಂಪನ ಆದಿಪುರಾಣದ ವಸ್ತುವನ್ನು ಗಮನಿಸಿದರೆ, ಅಲ್ಲಿನ ಊರ್ಧ್ವಗಾಮಿಯಾದ ಆತ್ಮವಿಕಾಸದ ದೃಷ್ಟಿಗೆ, ವಿಕ್ರಮಾರ್ಜುನ ವಿಜಯದ ಪಾತ್ರಗಳ ನಡವಳಿಕೆಗಳೆಲ್ಲವೂ ‘ಲೌಕಿಕ’ವೆಂದೇ ತೋರುತ್ತವೆ. ಅಲ್ಲದೆ ಜೈನ ಧರ್ಮದ ಕವಿಯೊಬ್ಬ ಎಷ್ಟೇ ಶ್ರದ್ಧಾ ಭಕ್ತಿಗಳಿಂದ, ಭಾರತದಂತಹ ವೈದಿಕ ವಸ್ತುವನ್ನು ಕುರಿತು ಬರೆದರೂ ಜೈನ ಧರ್ಮ ದಟ್ಟವಾದ ಅಂದಿನ ಪರಿಸರದವರಿಗೆ, ಪಂಪಭಾರತಕ್ಕಿಂತ ಆದಿಪುರಾಣವೇ ವಿಶೇಷ ಗೌರವಾರ್ಹವಾಗಿದ್ದರಿಂದಲೂ, ಜೈನನಾದ ಪಂಪ ಬರೆದ ವಿಕ್ರಮಾರ್ಜುನ ವಿಜಯ ಜೈನೇತರರ ಪಾಲಿಗೆ ಕೇವಲ ಒಂದು ‘ಲೌಕಿಕ ಕಾವ್ಯ’ವೆಂಬ ತಪ್ಪು ಕಲ್ಪನೆ ಹೇಗೋ ಬಂದದ್ದರಿಂದಲೂ, -ವಿಕ್ರಮಾರ್ಜುನ ವಿಜಯವನ್ನು ಪ್ರತಿಮಾಡಿ ಉಳಿಸಿ ಕೊಳ್ಳುವ ಬಗ್ಗೆ, ಜೈನರಿಗೆ ಹಾಗೂ ಜೈನೇತರರಿಗೆ ಅಷ್ಟಾಗಿ ಆಸಕ್ತಿಯಿರಲಿಲ್ಲವೆಂಬುದು ಈಗ ದೊರೆತಿರುವ ವಿಕ್ರಮಾರ್ಜುನ ವಿಜಯದ ಪ್ರತಿಗಳ ಸಂಖ್ಯೆಯನ್ನೂ ಆದಿಪುರಾಣದ ಪ್ರತಿಗಳ ಸಂಖ್ಯೆಯನ್ನೂ ಲೆಕ್ಕ ಹಾಕಿದರೆ ಗೊತ್ತಾಗುತ್ತದೆ. ಒಟ್ಟಿನಲ್ಲಿ ಪಂಪನ ‘ಬೆಳಗುವೆನಿಲ್ಲಿ ಲೌಕಿಕಮನ್’ ಎಂಬ ಮಾತಿನಿಂದ, ಆತನ ‘ವಿಕ್ರಮಾರ್ಜುನ ವಿಜಯ ಒಂದು ಲೌಕಿಕ ಕಾವ್ಯ’ ಎಂಬ ಅನ್ಯಾರ್ಥ ಪರಂಪರಾಗತವಾಗಿ ಬಂದಂತೆ ತೋರುತ್ತದೆ. ಹಾಗಾದರೆ ‘ಬೆಳಗುವೆನಿಲ್ಲಿ ಲೌಕಿಕಮನ್’ ಎಂದರೆ ಏನರ್ಥ? ತಾನು ವಸ್ತುವನ್ನಾಗಿ ತೆಗೆದುಕೊಂಡಿರುವುದು ವ್ಯಾಸಮುನೀಂದ್ರರ ಮಹಾಕೃತಿ, ‘ಪಂಚಮ ವೇದ’ವೆಂದು ಸ್ತುತ್ಯವಾಗಿ, ಸಮಸ್ತ ಧರ್ಮದ ಸಾರವೂ ಅದರಲ್ಲಿದೆ ಎಂದು ಭಾವಿತವಾದ ಕೃತಿ. ಇಂಥ ಕೃತಿಯನ್ನು ತನ್ನ ಕಾವ್ಯದ ‘ವಸ್ತು’ವನ್ನಾಗಿ ಮಾಡಿಕೊಂಡೂ, ‘ಬೆಳಗುವೆನಿಲ್ಲಿ ಲೌಕಿಕಮನ್’ ಎನ್ನುವುದು ಮೂಲಕೃತಿಗೆ ಅಪಚಾರ ಮಾಡಿದಂತಾಗಲಿಲ್ಲವೆ? ಮಹಾಭಾರತ ಎಷ್ಟಾದರೂ ಲೌಕಿಕ ಎಂದು ಟೀಕಿಸಿದಂತಾಗಲಿಲ್ಲವೆ ಎಂಬ ಪ್ರಶ್ನೆಗಳು ಏಳಬಹುದು. ಆದರೆ, ಪಂಪನಿಗೆ ವ್ಯಾಸರ ಬಗ್ಗೆ ಇರುವ ಗೌರವವನ್ನೂ, ಮೂಲದ ಮಹಾಕೃತಿಯ ‘ಮೆಯ್ಗಿಡಲೀಯದೆ’ ತಾನು ನಿರ್ವಹಿಸುತ್ತೇನೆಂಬ ಆತನ ಎಚ್ಚರವನ್ನೂ ಗಮನಿಸಿದರೆ ಇವು ಹುರುಳಿಲ್ಲದ ಪ್ರಶ್ನೆಗಳು ಎಂದು ಅನ್ನಿಸುತ್ತದೆ. ಮುಖ್ಯವಾಗಿ ಗಮನಿಸಬೇಕಾದ್ದೆಂದರೆ, ಪಂಪ ಧರ್ಮದಲ್ಲಿ ಜೈನ. ಆದ್ದರಿಂದ ಆತ ತನ್ನ ವೈಯಕ್ತಿಕ ಧರ್ಮಶ್ರದ್ಧೆಯನ್ನು ಪ್ರಕಟಪಡಿಸಲು, ಒದಗಿ ಬಂತು ಆದಿಪುರಾಣದ ಮಾಧ್ಯಮ. ಪಂಪ ಬದುಕಿದ್ದು ಹತ್ತನೆಯ ಶತಮಾನದ ವೀರಯುಗದಲ್ಲಿ. ಆದ್ದರಿಂದ ಆ ಶತಮಾನದ ಸತ್ವವನ್ನು ಪ್ರಕಟಿಸಲು ಒದಗಿ ಬಂತು ಮಹಾಭಾರತದ ಕಥಾ ಮಾಧ್ಯಮ. ಆದುದರಿಂದ ‘ಬೆಳಗುವೆನಿಲ್ಲಿ ಲೌಕಿಕಮನ್’ ಎಂದರೆ, ತನ್ನ ಸಮಕಾಲೀನವಾದ ಲೋಕ ಜೀವನ (ಲೌಕಿಕ)ವನ್ನು, ತನ್ನ ವೈಯಕ್ತಿಕ ಸ್ನೇಹಾನುಬಂಧಗಳನ್ನು, ತಾನು ಕಂಡ ಹಾಗೂ ಪಾಲ್ಗೊಂಡ ರಣರಂಗದ ಅನುಭವಗಳನ್ನು, ತನ್ನ ಕಾಲದ ಜನರ ನಡವಳಿಕೆಗಳನ್ನು, ಒಟ್ಟಿನಲ್ಲಿ ತನ್ನ ಕಾಲಮಾನವನ್ನು- ಈ ಕೃತಿಯಲ್ಲಿ ಉಜ್ವಲಗೊಳಿಸಿ ಹೇಳುತ್ತೇನೆ, ಎಂದರ್ಥ. ಇನ್ನೂ ಮುಂದುವರಿದು ಹೇಳಬೇಕೆಂದರೆ “ವಾಸ್ತವವಾಗಿ ಪಂಪನಿಗೆ ಮುಖ್ಯವಾದದ್ದು ಮಹಾಭಾರತ ಅಲ್ಲ. ತನ್ನ ಎದುರಿನ ತನ್ನ ಕಾಲದ ಭಾರತ; ಅದರಲ್ಲಿನ ತನ್ನ ಅನುಭವ,”[7] ‘ಬೆಳಗುವೆನಿಲ್ಲಿ ಲೌಕಿಕಮನ್’ ಎನ್ನುವುದು ವಿಕ್ರಮಾರ್ಜುನ ವಿಜಯವನ್ನು ಬರೆಯುವಲ್ಲಿ ಪಂಪನ ಧೋರಣೆ ಏನಿತ್ತೆಂಬುದನ್ನು ಪ್ರಕಟಿಸುವ ಮಾತೇ ಹೊರತು, ವಿಕ್ರಮಾರ್ಜುನ ವಿಜಯ ಒಂದು ‘ಲೌಕಿಕ ಕಾವ್ಯ’ ಎಂದಾಗಲಿ, ಮೂಲಭಾರತವೂ ಒಂದು ಲೌಕಿಕ ಕಾವ್ಯವೆಂಬ ಟೀಕೆಯೆಂದಾಗಲಿ ಅರ್ಥ ಹೊರಡುವುದಿಲ್ಲ. ವ್ಯಾಸಭಾರತವನ್ನು, ತನ್ನ ಎದುರಿಗಿರಿಸಿಕೊಂಡು ಪಂಪ ‘ಕತೆಯ ಮೆಯ್ಗಿಡಲೀಯದೆ’ ‘ಅಪೂರ್ವ’ವಾದ ರೀತಿಯಲ್ಲಿ ಹೇಳುವ ಪ್ರಯತ್ನದಲ್ಲಿದ್ದಾನೆ ವಿಕ್ರಮಾರ್ಜುನ ವಿಜಯದಲ್ಲಿ. ತನ್ನ ಉದ್ದೇಶಕ್ಕೆ ಅನುಸಾರವಾದ ಬದಲಾವಣೆಗಳನ್ನು ಮಾಡಿಕೊಂಡಿದ್ದಾನೆ. ಈ ಬದಲಾವಣೆಗಳು ಕೆಲವೆಡೆ ಉಚಿತವೂ ಮತ್ತೆ ಕೆಲವೆಡೆ ಅನುಚಿತವೂ ಆಗಿವೆ. ಅದರ ವಿವೇಚನೆ ಈ ಪ್ರಬಂಧದ ಉದ್ದೇಶವಲ್ಲ. ಆದರೆ ವ್ಯಾಸಭಾರತವನ್ನೂ, ಪಂಪಭಾರತವನ್ನೂ ಇರಿಸಿಕೊಂಡು ತೌಲನಿಕ ಸಮೀಕ್ಷೆ ನಡೆಯಿಸುವಾಗ, ಪಂಪ ಭಾರತದಲ್ಲಿ ವ್ಯಾಸ ಭಾರತದಲ್ಲಿರುವುದೆಲ್ಲವೂ ಬಂದಿಲ್ಲವಲ್ಲ ಎಂಬ ನಿರಾಸೆ ಕವಿಯುವುದು ಸಹಜ. ಅಂತಹ ಸಂದರ್ಭಗಳಲ್ಲಿ, ಪಂಪಭಾರತ ಕನ್ನಡ ಕಾವ್ಯ ಶ್ರೇಣಿಯಲ್ಲಿ ಯಾವ ಎತ್ತರದ್ದು ಎನ್ನುವುದನ್ನು ನಿರ್ಲಕ್ಷಿಸಿ, ವ್ಯಾಸಭಾರತದ ಎದುರಿಗೆ ಪಂಪನ ಸಾಧನೆ ಏನೇನೂ ಅಲ್ಲವೆಂಬರ್ಥದ ಮಾತುಗಳನ್ನು ಕೇವಲ ‘ವ್ಯಾಸಭಕ್ತ’ರಾದ ವಿಮರ್ಶಕರು ಆಡುವ ಸಂಭವವಿದೆ.[8] ಇಂಥ ಸಮೀಕ್ಷೆಗೆ ಹೊರಡುವವರು ಒಂದು ಸಂಗತಿಯನ್ನು ಮರೆಯಬಾರದು. ಅದೆಂದರೆ, ರಾಮಾಯಣ ಮಹಾಭಾರತಗಳನ್ನು ವಸ್ತುವನ್ನಾಗಿ ತೆಗೆದುಕೊಂಡ ಯಾವ ಪ್ರಾದೇಶಿಕ ಭಾಷೆಯ ಕವಿ ಕೃತಿಗಳೂ- ಪಂಪಭಾರತವೊಂದೇ ಯಾಕೆ-ಆ ಮೂಲ ಮಹಾಕೃತಿಗಳನ್ನು ಸಮಗ್ರವಾಗಿ ಹೇಳುತ್ತವೆ ಎಂದಾಗಲಿ, ಆ ಎತ್ತರಕ್ಕೆ ಏರಿವೆ ಎಂದಾಗಲಿ ಭಾವಿಸಲು ಸಾಧ್ಯವೇ ಇಲ್ಲ. ಯಾಕೆಂದರೆ ಭರತ ಖಂಡದ ಸೃಜನ ಸಾಮರ್ಥ್ಯ ಇಷ್ಟು ಮಹತ್ತಾಗಿ ಈ ಎರಡು ರಾಷ್ಟ್ರೀಯ ಮಹಾಕಾವ್ಯಗಳಲ್ಲಿ ಯಾವ ದೇಶಭಾಷೆಗಳಲ್ಲೂ ಮೂಡಿಲ್ಲ, ಮೂಡಲು ಸಾಧ್ಯವೂ ಇಲ್ಲ. ಭರತ ಖಂಡದಲ್ಲಿ ಮಾತ್ರವಲ್ಲ, ಜಗತ್ತಿನಲ್ಲೆ ಈ ಪ್ರಮಾಣದ ಅಭಿವ್ಯಕ್ತಿಗಳು ಹೋಲಿಕೆಗೆ ದೊರೆಯುವುದಿಲ್ಲ ಎನ್ನುತ್ತಾರೆ. ಹೀಗಿರುವಾಗ ಪಂಪಭಾರತವನ್ನು ವ್ಯಾಸಭಾರತದೊಂದಿಗೆ ಹೋಲಿಸಿ, ಆ ಎತ್ತರ ಬಿತ್ತರಗಳು ಪಂಪನಲ್ಲಿ ಬಂದಿಲ್ಲ ಎಂದು ಆಕ್ಷೇಪಿಸುವುದು ಸರಿಯಲ್ಲ. ಅಲ್ಲದೆ ಪಂಪಭಾರತದ ಕವಿ ಎಷ್ಟೆಷ್ಟು ಪರಿಮಿತಿಗಳಲ್ಲಿ ಕೆಲಸಮಾಡಬೇಕಾಯಿತೆಂಬುದನ್ನೂ ಇಂಥ ಸಂದರ್ಭದಲ್ಲಿ ಮರೆಯಬಾರದು. ಮೂಲಭಾರತದ ಒಂದೊಂದು ಸಂದರ್ಭವೂ ಹೆಗ್ಗಾಡಿನಂತೆ ಬೆಳೆದಿರುವಾಗ, ಪಂಪ ಆ ಸಮಸ್ತ ರೂಕ್ಷತೆಗಳನ್ನು ತರಬೇಕಿತ್ತೆಂದೂ, ತಂದಿಲ್ಲವೆಂದೂ ಆಕ್ಷೇಪಿಸುವುದು ಸುಲಭ. ಆದರೆ ಪಂಪನು ಮೂಲದ ಕಥಾನಕವನ್ನು ಬಹು ಜಾಣ್ಮೆಯಿಂದ ಸಂಗ್ರಹಿಸಿ ಹೇಳಿದ್ದಾನೆ, ಅದನ್ನು ತನ್ನದೆಂಬಂತೆ ಹೇಳಿದ್ದಾನೆ. ಈ ದೃಷ್ಟಿಯಿಂದ ನೋಡಿದರೆ, ವಿಕ್ರಮಾರ್ಜುನ ವಿಜಯವು ಪಂಪನೆ ಹೇಳಿಕೊಂಡಿರುವಂತೆ ‘ಸಮಸ್ತ ಭಾರತ’. ‘ಸಮಸ್ತ ಭಾರತ’- ಎಂಬ ಮಾತಿಗೆ ಮೂರು ರೀತಿಯ ವಿವರಣೆ ಸಾಧ್ಯ: ಒಂದು, ಇಡೀ ವ್ಯಾಸಭಾರತವನ್ನೇ, ಮುಖ್ಯ ಪ್ರಸಂಗಗಳಲ್ಲಿ ಯಾವುದನ್ನೂ ಬಿಡದೆ ಇದರಲ್ಲಿ ಹೇಳಲಾಗಿದೆ. ಎರಡು, ‘ಸಮಾಸ’ ಎಂದರೆ ಕೂಡಿಸುವುದು; ಕಾವ್ಯದ ಮುಖ್ಯ ಪಾತ್ರವಾದ ಅರ್ಜುನನ ಪಾತ್ರದಲ್ಲಿ ತನ್ನ ಪ್ರಭುವಾದ ಅರಿಕೇಸರಿಯನ್ನು ಅಭಿನ್ನಗೊಳಿಸಿ ಹೇಳುವುದು. ಮೂರು, ತನ್ನ ಸಮಕಾಲೀನ ಇತಿಹಾಸದಲ್ಲಿ ಪೌರಾಣಿಕವನ್ನು ‘ಸಮಾಸ’ಗೊಳಿಸಿ ಹೇಳುವುದು. ಇದು ಪಂಪಭಾರತದ ರಚನಾ ತಂತ್ರ. “ಪುರಾಣ ಮತ್ತು ಚರಿತ್ರೆಗಳನ್ನು ಹೀಗೆ ವಿಸ್ಮಯಕಾರಕವಾಗಿ ಒಂದಾದ ಮೇಲೊಂದರಂತೆ ಚಿಮ್ಮಿಸುತ್ತ, ಚಿತ್ರಿಸುತ್ತ, ಒಮ್ಮೆ ಪುರಾಣದ ಮೇಲೆ, ಇನ್ನೊಮ್ಮೆ ಚರಿತ್ರೆಯ ಮೇಲೆ, ಅನುಕ್ರಮವಾಗಿ ಬಿಡುದೀಪವನ್ನು  (Search-light) ಹಾಯಿಸುತ್ತ ಒಂದು ಬಗೆಯ ನೆಳಲು ಬೆಳಕಿನ ಲೋಕವನ್ನು ಸೃಷ್ಟಿಸಿ, ನಾವು ಪುರಾಣದ ಕತೆಯೊಂದನ್ನು ಓದುತ್ತಿರುವಂತೆಯೇ ತನ್ನ ಸಮಕಾಲೀನದಲ್ಲಿ ನಮ್ಮನ್ನು ಇಡುವ”[9] ಪಂಪನ ಈ ನವೀನ ತಂತ್ರ ಅಸಾಧಾರಣವಾದುದಾಗಿದೆ. “ಪಂಪ ಹತ್ತನೆ ಶತಮಾನದ ಭಾರತಕ್ಕೆ ಮಹಾಭಾರತದ ಡೈಮೆನ್‌ಶನ್ ಕೊಟ್ಕೊಂಡು ನೋಡಿದ ಆ-ಈ ಭಾರತದ ಕತೆಗಳು ಸಂಘಟಿಸೋ ಹಾಗೆ ಮಾಡಿ ಆ ಸಂಘಟನೆಯ ಮಿಂಚಲ್ಲಿ ತನ್ನದೇ ಅನುಭವಗಳನ್ನು, ತನ್ನ ಸತ್ಯದ ವಿನ್ಯಾಸಕ್ರಮವನ್ನು ಶೋಧಿಸಿಕೊಳ್ಳೋಕೆ ಹೆಣಗಿದ…. ಪುರಾಣ ಪ್ರಕೃತಗಳ ಸಮೀಕರಣದಲ್ಲಿ. ಅದರ ಸಂಘಟ್ಟಣೇಲಿ ವರ್ತಮಾನದ ಸಂಕೀರ್ಣಾನ ಹೊಳೆಸಿಕೊಳ್ಳೋಕೆ ಮಾಡಿದ ಪಂಪನ ಈ ಮಹತ್ಪ್ರಯತ್ನ ಭಾರತೀಯ ಕಾವ್ಯದ ಸಂದರ್ಭದಲ್ಲಿ- ಅಥವಾ ವಿಶ್ವ ಕಾವ್ಯದ ಸಂದರ್ಭದಲ್ಲಿ ಕೂಡ ಕನ್ನಡ ಮಾಡಿರೋ ಅತ್ಯಂತ ಮಹತ್ವದ ಪ್ರಯೋಗ.”[10] ವ್ಯಾಸಭಾರತವನ್ನೂ ಪಂಪ ಭಾರತವನ್ನೂ ಹೋಲಿಸಿ ನೋಡಿದರೆ, ವ್ಯಾಸರ ಬರವಣಿಗೆ ಋಷಿಸಹಜವಾದ ಅಲಿಪ್ತತೆಯಿಂದಲೂ, ಪಂಪನದು ಸ್ನೇಹಬದ್ಧವಾದ ಕವಿಯೊಬ್ಬನ ಪಕ್ಷಪಾತದಿಂದಲೂ ರಚಿತವಾದಂತೆ ತೋರುತ್ತದೆ. ವ್ಯಾಸಭಾರತದ ನಾಯಕ ಯಾರು ಎಂದು ಹೇಳುವುದು ಕಷ್ಟ. ಪಂಪಭಾರತದ ನಾಯಕ ಅರ್ಜುನನೇ ಎಂಬುದು ಸ್ಪಷ್ಟ. ಈ ಸ್ಪಷ್ಟತೆಯ ಅರಿವಿರುವುದರಿಂದಲೆ ಪಂಪ ತನ್ನ ಕೃತಿಗೆ ‘ವಿಕ್ರಮಾರ್ಜುನ ವಿಜಯ’ ಎಂದು ಹೆಸರಿಟ್ಟಿದ್ದಾನೆ. ಮೂಲಭಾರತದಲ್ಲಿ ಅರ್ಜುನ ಎಷ್ಟೇ ಮುಖ್ಯವಾದ ಪಾತ್ರವಾಗಿದ್ದರೂ, ಅದು ಅರ್ಜುನನೊಬ್ಬನ ವಿಜಯವನ್ನು ಹೇಳುವ ಕೃತಿಯಲ್ಲ ಎಂಬುದನ್ನು ನೆನೆದರೆ, ಪಂಪ ತನ್ನ ಕೃತಿಯನ್ನು ‘ವಿಕ್ರಮಾರ್ಜುನ ವಿಜಯ’ವನ್ನಾಗಿ ಮಾಡಿಕೊಂಡದ್ದರ ಔಚಿತ್ಯ ಸ್ಪಷ್ಟವಾದೀತು. ಅಲ್ಲದೆ “ವ್ಯಾಸಭಾರತವು ಒಬ್ಬ ವೀರ ಪುರುಷನ ಚರಿತ್ರೆಯಲ್ಲ; ಅದು ಒಂದು ಮನೆತನದ ಇತಿಹಾಸ. ಅದರಲ್ಲಿ ವರ್ಣಿತವಾಗಿರುವ ಪಾಂಡವ ಕೌರವರ ಕಥೆಯಲ್ಲಿ ಒಂದೊಂದು ಸಂದರ್ಭದಲ್ಲಿ ಒಬ್ಬೊಬ್ಬನು ಮುಖ್ಯಪಾತ್ರವನ್ನು ವಹಿಸುತ್ತಾನೆ. ಪಂಪನು ಈ ಭಾರತದ ಕಥೆಯನ್ನು ವಿಕ್ರಮಾರ್ಜುನ ವಿಜಯವನ್ನಾಗಿ ಅಳವಡಿಸಬೇಕಾಯಿತು. ಎಂದರೆ ಕಥೆಯ ಉದ್ದಕ್ಕೂ ಅರ್ಜುನನ ಚರಿತ್ರೆ ಪ್ರಧಾನವಾಗಿ ಕಾಣುವಂತೆ ಮಾಡಬೇಕಾಯಿತು.”[11] ಅಷ್ಟೆ ಅಲ್ಲ, ಪಂಪನ ಪಾಲಿಗೆ ಆ ಅರ್ಜುನನೆ ಈ ಅರಿಕೇಸರಿ, ಈ ಅರಿಕೇಸರಿಯೆ ಆ ಅರ್ಜುನ. ಈ ಕೃತಿಯ ಕೇಂದ್ರ ಪಾತ್ರವಾದ ಅರ್ಜುನನೇ ಅರಿಕೇಸರಿ ಎಂಬ ಖಚಿತವಾದ ಸಮೀಕರಣದ ಆಧಾರದಿಂದ, ಪಂಪಭಾರತದ ಇತರ ಪಾತ್ರಗಳಿಗೂ ಅಂದಿನ ಸಮಕಾಲೀನವಾದ ವ್ಯಕ್ತಿಗಳನ್ನು ಸಮೀಕರಿಸಿ ನೋಡುವ ಪ್ರಯತ್ನವನ್ನು ಮುಳಿಯ ತಿಮ್ಮಪ್ಪಯ್ಯನವರು, ತಮ್ಮ ನಾಡೋಜ ಪಂಪ ಎಂಬ ಕೃತಿಯಲ್ಲಿ ಮಾಡಿದ್ದಾರೆ. ಈ ಪ್ರಯತ್ನ ತಪ್ಪಲ್ಲವಾದರೂ, ಕವಿ ಅರಿಕೇಸರಿಯೊಬ್ಬನನ್ನು ಅರ್ಜುನನಲ್ಲಿ ಬುದ್ಧಿ ಪೂರ್ವಕವಾಗಿ ಹೋಲಿಸಿದಂತೆ, ತನ್ನ ಕಾವ್ಯದ ಇತರ ಅನೇಕ ವ್ಯಕ್ತಿಗಳನ್ನು, ಮಹಾಭಾರತದ ಇತರ ಪಾತ್ರಗಳೊಂದಿಗೆ ಇಷ್ಟೇ ಬುದ್ಧಿ ಪೂರ್ವಕವಾಗಿ ಸಮೀಕರಿಸುವ ಪ್ರಯತ್ನ ಮಾಡಿದ್ದಾನೆ ಎಂದು ನಮಗೆ ಅನ್ನಿಸುವುದಿಲ್ಲ. ಪಂಪ ಭಾರತದ ವಿಶೇಷತೆಯೆಂದರೆ, ವಸ್ತುನಿಷ್ಠ ಕಾವ್ಯ(objective poetry)ವನ್ನೇ ಬರೆಯಬೇಕಾದ ಪರಿಸರದಲ್ಲಿ, ಪಂಪ ಎಷ್ಟರ ಮಟ್ಟಿಗೆ ಈ ಕೃತಿಯಲ್ಲಿ ವ್ಯಕ್ತಿನಿಷ್ಠ ಕಾವ್ಯದ (Subjective poetry) ಅಂಶಗಳನ್ನು ಬೆರೆಸಿದ್ದಾನೆ ಎನ್ನುವುದು. ಈ ವ್ಯಕ್ತಿನಿಷ್ಠತೆಯ ಮೊದಲ ಅಂಶವೇ, ಆತನಿಗೆ ಅರಿಕೇಸರಿಯ ಮೇಲೆ ಇರುವ ವೈಯಕ್ತಿಕವಾದ ಪ್ರೀತಿ-ವಿಶ್ವಾಸ. ಇದರೊಂದಿಗೆ ಪಂಪನಿಗೆ ಕನ್ನಡನಾಡಿನ ಮೇಲೆ ಇದ್ದ ಪ್ರೀತಿ (ಬನವಾಸಿಯ ಬಗೆಗಿನ ಒಲವು), ತನ್ನ ವಿಶಿಷ್ಟ ಸೌಂದರ್ಯಾಭಿರುಚಿ ಮತ್ತು ಅವನ ಇನ್ನಿತರ ವೈಯಕ್ತಿಕಾನುಭವಗಳು ಬೆರೆತುಕೊಂಡಿರುವುದನ್ನು ಗುರುತಿಸಬಹುದು. ಅಂತೂ ವಸ್ತುನಿಷ್ಠ ಕಾವ್ಯ ಪದ್ಧತಿಯ ಚೌಕಟ್ಟಿನೊಳಕ್ಕೆ, ವ್ಯಕ್ತಿನಿಷ್ಠ ಮನೋಧರ್ಮಗಳನ್ನು ಇಷ್ಟೊಂದು ಸ್ಪಷ್ಟವಾಗಿ ತಂದುಕೊಂಡದ್ದು ಪಂಪನ ಈ ಕೃತಿಯ ವಿಶಿಷ್ಟ ಲಕ್ಷಣಗಳಲ್ಲಿ ಒಂದು. ಈ ವ್ಯಕ್ತಿನಿಷ್ಠತೆಯಿಂದ ಈ ಕೃತಿ ಅತ್ಯಂತ ಪ್ರಜ್ಞಾಪೂರ್ವಕವಾದ ಕೃತಿಯಾಗಿದೆ. ಪಂಪ ಈ ಕೃತಿಯನ್ನು ಬರೆದದ್ದು ತನ್ನ ರಾಜನಾದ ಅರಿಕೇಸರಿಯನ್ನು ಮೆರೆಯಿಸಲು. ಈ ಅರಿಕೇಸರಿ ಕೇವಲ ಪ್ರಭುವಾಗಿರದೆ ಪಂಪನ ಪರಮ ಮಿತ್ರನೂ ಆಗಿದ್ದ. ‘ಗುಣಾರ್ಣವನ ಒಳ್ಪು ಮನ್ಮನೋವಾಸಮನ್ ಎಯ್ದೆ’ ತಾನು ಈ ಕೃತಿಯಲ್ಲಿನ ಅರ್ಜುನನ ಪಾತ್ರದಲ್ಲಿ ಅರಿಕೇಸರಿಯನ್ನು ಹೋಲಿಸಲು ಮನಸ್ಸು ಮಾಡಿದೆ ಎನ್ನುತ್ತಾನೆ ಪಂಪ. ಆದರೆ ಪಂಪನ ಕಾವ್ಯ ಇದರಿಂದಲೂ ಒಂದು ಬದ್ಧಸ್ಥಿತಿಗೆ ತನ್ನನ್ನು ಒಪ್ಪಿಸಿಕೊಂಡಂತಾದುದರಿಂದಲೇ, ಉದ್ದಕ್ಕೂ ಈ  ‘ಅರಿಕೇಸರಿ- ಅರ್ಜುನ’ರ ಸಮೀಕರಣವನ್ನು ಕಣ್ಣಿಟ್ಟುಕೊಂಡು ಕಾಯಬೇಕಾದ ನಿರ್ಬಂಧಕ್ಕೆ ಕವಿ ಒಳಗಾಗಬೇಕಾಯಿತು. “ವಿಕ್ರಮಾರ್ಜುನ ವಿಜಯಕ್ಕೆ ಆದಿಪುರಾಣಕ್ಕಿರುವಂತೆ ಮೂಲ ಆಕರವೊಂದು ಇರುವುದಾದರೂ, ಪೂರ್ವಪುರಾಣಕ್ಕೆ ವಿಧೇಯನಾಗಿದ್ದ ಪ್ರಮಾಣದಲ್ಲಿ ವ್ಯಾಸರ ಮಹಾಭಾರತಕ್ಕೆ ವಿಧೇಯನಾಗಿಲ್ಲ. ಆದರೆ ಹೀಗೆ ಅರ್ಜಿಸಿಕೊಂಡ ಸ್ವಾತಂತ್ರ್ಯವನ್ನು ತನ್ನ ದೊರೆಯಾದ ಅರಿಕೇಸರಿಯ ‘ಅೞ್ತಿ’ ಗೆ ಸಮರ್ಪಿಸಿಕೊಳ್ಳುವುದರ ಮೂಲಕ ಇನ್ನೊಂದು ರೀತಿಯ ಬದ್ಧಸ್ಥಿತಿಯಲ್ಲಿ ತನ್ನ ಕಾವ್ಯವನ್ನು ನಡೆಯಿಸಬೇಕಾಯಿತು”[12] ಎಂಬ ಮಾತನ್ನು ಒಪ್ಪಬೇಕಾಗುತ್ತದೆ. ಪಂಪ ಹೀಗೆ ಸ್ನೇಹಾನುಬದ್ಧನಾಗಿದ್ದರೂ, ಆತನ ಸ್ನೇಹಿತ ಒಬ್ಬ ರಾಜನಾದುದರಿಂದ, ಪಂಪನ ಕಾವ್ಯ ಒಂದು Establishmentನ ಎಂದರೆ ಒಂದು ಪಟ್ಟಭದ್ರ ಅಧಿಕಾರವರ್ಗದ, ಪ್ರತಿನಿಧಿಯಾದ, ಅರಿಕೇಸರಿಯ ಆಸ್ಥಾನದ ಕಾವ್ಯವಾಗಿದೆ; ಹೀಗಾಗಿ ಇದು ಮುಖ್ಯವಾಗಿ ಅಂದಿನ “ಆಳುವ ವರ್ಗದ ಧೋರಣೆಯಿಂದ ಮೂಡಿದ್ದಾದ್ದರಿಂದ ಪರಿಮಿತವೂ ಆಗಿದೆ”[13]- ಎಂಬ ಅತ್ಯಾಧುನಿಕ ಅಭಿಪ್ರಾಯವನ್ನೂ ಗಮನಿಸಬೇಕಾಗಿದೆ. ಎಂದರೆ, ಅರಿಕೇಸರಿ ರಾಜನಾದ್ದರಿಂದ, ಪಂಪ ಬಾಯಿಮುಚ್ಚಿಕೊಂಡು, ಅಂದಿನ ಆಳುವ ವರ್ಗದ ಧೋರಣೆಗಳಿಗೆ ಬದ್ಧನಾಗಿದ್ದ ಎಂಬ ತಪ್ಪು ಕಲ್ಪನೆ ಇಂಥ ಮಾತಿನಿಂದ ಹೊರಡುತ್ತದೆ. ಇದು ತೀರಾ ಆಧುನಿಕವಾದ ವಿಮರ್ಶೆಯ ಮಾನದಂಡವನ್ನು, ಹತ್ತನೆಯ ಶತಮಾನದ ಕವಿಯನ್ನಳೆಯಲು ಬಳಸುವ ಆತುರದಿಂದ ಆಗುವ ಪ್ರಮಾದ. “ಅರಿಕೇಸರಿಯನ್ನು ಅರ್ಜುನನೊಡನೆ ಸಮೀಕರಿಸಿ ಭಾರತವನ್ನು ಪಂಪ ಬರೆದನೆಂಬಷ್ಟರಿಂದಲೇ, ಅವನು ರಾಜತ್ವವನ್ನು ಒಂದು ನಿರ್ದುಷ್ಟ ಸಂಸ್ಥೆಯೆಂದು ಬಗೆದಿದ್ದನೆಂದು ಗ್ರಹಿಸುವುದು ತಪ್ಪು.”[14] ಹಾಗೆಯೇ ಪಂಪನ ಧೋರಣೆಯೆಲ್ಲವೂ ಅಂದಿನ ಆಳರಸರ ಧೋರಣೆಯಾಗಿತ್ತೆಂದು ಭಾವಿಸುವುದೂ ತಪ್ಪು. ಇವತ್ತಿನ ಲೇಖಕ ಇಂದಿನ ಪರಿಸರದಲ್ಲಿ ಎಷ್ಟರ ಮಟ್ಟಿಗೆ ಪ್ರಭುತ್ವದ ಬಗ್ಗೆ ಪ್ರತಿಕ್ರಿಯೆ ತೋರಿಸಬಹುದೋ, ಅಷ್ಟರ ಮಟ್ಟಿಗೆ ಅಲ್ಲದಿದ್ದರೂ, ಅಂದಿನ ಪರಿಸರದಲ್ಲಿ ಪಂಪ ತಕ್ಕಮಟ್ಟಿಗೆ ತನ್ನ ಪ್ರತಿಕ್ರಿಯೆಗಳನ್ನೂ ತೋರಿಸುವಷ್ಟು ಸ್ವತಂತ್ರ ಮನೋಧರ್ಮದವನಾಗಿದ್ದನೆಂಬುದು, ಅವನ ಕೃತಿಯನ್ನು ಕಣ್ಣಿಟ್ಟು ಓದಿದರೆ ತಿಳಿಯುತ್ತದೆ. ಆದುದರಿಂದ ಪಂಪನಿಗೆ ಮುಖ್ಯವಾದದ್ದು ಅರಿಕೇಸರಿ ಒಬ್ಬ ರಾಜನೆಂಬುದಕ್ಕಿಂತ ಒಬ್ಬ ಪರಮ ಸ್ನೇಹಿತ ಎನ್ನುವುದು. ಪಂಪನಿಗೆ ಗೊತ್ತಿದೆ ‘ವಿಪುಳ ಯಶೋ ವಿತಾನ ಗುಣಮಿಲ್ಲದನಂ ಪ್ರಭುಮಾಡಿ ಪೂರ್ವ ಭೂಮಿಪರ ಪದಂಗಳಂ ಪುಗಿಸಿ’ ಹೋಲಿಸಿ ಕೃತಿ ಮಾಡುವ ಪರಂಪರೆಯೊಂದು ತನಗಿಂತ ಹಿಂದೆ ಇತ್ತೆಂಬುದು. ಆದರೆ ತಾನೂ ಹಾಗೆಯೇ ಆ ಪರಂಪರೆಯನ್ನು ಕಣ್‌ಮುಚ್ಚಿಕೊಂಡು ಪುನರಾವರ್ತಿಸಬಾರದೆಂಬುದೂ ಅವನಿಗೆ ಗೊತ್ತಿತ್ತು. ಆದರೆ ತನ್ನ ಮನಸ್ಸನ್ನು, ಸ್ನೇಹಿತನಾದ ‘ಗುಣಾರ್ಣವನ ಒಳ್ಪು’ ಆಕ್ರಮಿಸಿದ್ದರಿಂದ, ಸ್ನೇಹಕ್ಕಾಗಿ ಕಾವ್ಯ ಬರೆದರೆ ತಪ್ಪಲ್ಲ ಎನ್ನುವ ಸಮಾಧಾನವನ್ನು ಆತ ಹೇಳಿಕೊಂಡಿದ್ದಾನೆ. ‘ಪೆಱರೀವುದೇಂ, ಪೆಱರಮಾಡುವುದೇಂ, ಪೆಱರಿಂದಮಪ್ಪುದೇಂ’- ಎಂದು ಆದಿಪುರಾಣದ ಸಂದರ್ಭದಲ್ಲಿ ಘೋಷಿಸುವ ಪಂಪನನ್ನೂ ಎದೆಗರಗಿಸುವಂತಹ ಪ್ರೀತಿ-ವಿಶ್ವಾಸದಿಂದ ಅರಿಕೇಸರಿ ನೋಡಿಕೊಂಡಿರದೆ ಇದ್ದರೆ, ಪಂಪ ವಿಕ್ರಮಾರ್ಜುನ ವಿಜಯವನ್ನು ಬರೆಯುತ್ತಲೇ ಇರಲಿಲ್ಲವೆಂದು ತೋರುತ್ತದೆ. ಆದರೆ ಈ ‘ಅೞ್ತಿ’ಗೆ ತನ್ನ ಕಾವ್ಯವನ್ನು ಬದ್ಧನಾಗಿಸಿದ್ದರಿಂದ ಕಥಾನಿರ್ವಹಣೆಯಲ್ಲಿ ಪಂಪ ತುಂಬ ಇಕ್ಕಟ್ಟಿಗೆ ಸಿಕ್ಕಿಕೊಳ್ಳಬೇಕಾಯಿತೆಂಬುದನ್ನು ನಾವು ಮರೆಯುವಂತಿಲ್ಲ. ಹೀಗೆ ಕಾವ್ಯಾಭಿವ್ಯಕ್ತಿಯನ್ನು ಇಂತಹ ಬದ್ಧಸ್ಥಿತಿಗೆ ಒಳಗುಪಡಿಸಿದರೆ, ಅದರಿಂದ ಕಾವ್ಯಗುಣ ಕುಂಠಿತವಾಗಿ ಕಾವ್ಯ ದ್ವಿತೀಯ ದರ್ಜೆಗೆ ಇಳಿಯುವ ಅಪಾಯವಿದೆ.[15] ಆದರೆ ಇಷ್ಟೊಂದು ‘ಬದ್ಧ’ನಾಗಿದ್ದರೂ, ಪಂಪನ ಕೃತಿ ಆ ಕಾರಣದಿಂದಾಗಿ ದ್ವಿತೀಯ ದರ್ಜೆಗೆ ಇಳಿಯದೆ ಕನ್ನಡದ ಮಟ್ಟಿಗೆ ಪ್ರಥಮ ದರ್ಜೆಯದೇ ಆಗಿದೆ ಎನ್ನುವುದು ಸಂತೋಷದ ಸಂಗತಿ. -೩- ಆದರೂ ಅರಿಕೇಸರಿಯ ಬಗೆಗಿನ ಈ ವೈಯಕ್ತಿಕವಾದ ‘ಬದ್ಧತೆ’ ಅಥವಾ ಪಕ್ಷಪಾತದಿಂದ, ಪಂಪಭಾರತ ‘ವಿಕ್ರಮಾರ್ಜುನ ವಿಜಯ’ವಾದದ್ದು ಮಾತ್ರವಲ್ಲ, ಅರಿಕೇಸರಿಯ ಪರವಾದ ವಿಶೇಷ ಪಕ್ಷಪಾತದಿಂದ ನರಳುತ್ತದೆ. ಈ ಪಕ್ಷಪಾತದಿಂದ, ಉಳಿದ ಪಾತ್ರಗಳ ಬಗೆಗೆ ಕವಿ ಪೂರ್ವಗ್ರಹದಿಂದ ಕೂಡಿರದೆ ಇದ್ದರೂ, ಉಳಿದ ಪಾತ್ರಗಳನ್ನು ತಕ್ಕಷ್ಟು ಸಹಾನುಭೂತಿ ಗೌರವಗಳಿಂದ ಚಿತ್ರಿಸಿದ್ದರೂ, ಕಾವ್ಯ ನಿರ್ವಹಣೆಯಲ್ಲಿ ಎಷ್ಟೋ ಅನೌಚಿತ್ಯಗಳಿಗೆ ಆಸ್ಪದವಾಗಿದೆ. ಕಾವ್ಯದ ಪ್ರಾರ್ಥನಾ ಪದ್ಯಗಳಿಂದಲೇ ಈ ಪಕ್ಷಪಾತ ಆರಂಭವಾಗಿದೆ. ಮೊದಲ ಪದ್ಯದಲ್ಲಿಯೇ ಅವನ ‘ಸಮಸ್ತ’ ತಂತ್ರ ಮೊದಲಾಗಿದೆ. ತನ್ನ ಪೋಷಕನಾದ ಅರಿಕೇಸರಿಯನ್ನೂ ನಾರಾಯಣನನ್ನೂ ಒಟ್ಟಿಗೇ ಸ್ತುತಿ ಮಾಡಿ, ತನ್ನ ದೊರೆ ದೇವರಾದ ನಾರಾಯಣನಿಗಿಂತ   ಉತ್ತಮನೆಂದು ಹೇಳಿದ್ದಾನೆ. ಅರಿಕೇಸರಿ, ದೇವರಾದ ನಾರಾಯಣನಿಗಿಂತ ಹೇಗೆ, ಏಕೆ ಉತ್ತಮನೆಂಬುದನ್ನೂ ಸಮರ್ಥಿಸಿದ್ದಾನೆ. ಹಾಗೆಯೇ ಮುಂದಿನ ಪದ್ಯಗಳಲ್ಲಿ ಶಿವನನ್ನು, ಮನ್ಮಥನನ್ನು, ಗಣೇಶನನ್ನು ಸ್ತುತಿಸುವಲ್ಲಿ ಕೂಡ, ಈ ದೇವತೆಗಳನ್ನು ಅರಿಕೇಸರಿಯಿಂದ ‘ಇಕ್ಕಿಮೆಟ್ಟಿಸು’ವ ಪ್ರಯತ್ನವೇ ಪ್ರಧಾನವಾಗಿದೆ. ಇಡೀ ಕಾವ್ಯದಲ್ಲಿ ಪ್ರತಿಯೊಂದು ಆಶ್ವಾಸದ ಆದಿ ಹಾಗೂ ಅಂತ್ಯದಲ್ಲಿ ಅರ್ಜುನನನ್ನು ಕುರಿತ ಸ್ತುತಿ ಇದೆ. ಇದರ ಪರಿಣಾಮವಾಗಿ ಯಾವುದೇ ಒಂದು ಆಶ್ವಾಸದ ತುದಿಗೆ ಮಹಾಭಾರತದ ಬೇರೆಯ ಪಾತ್ರದ ಹೆಚ್ಚಳ ಸಹಜವಾಗಿ ಬಂದರೂ, ಅದನ್ನು ಪಕ್ಕಕ್ಕೆ ತಳ್ಳಿ ಅರಿಕೇಸರಿಯನ್ನೇ ಮೆರೆಯಿಸುವ ಅನೌಚಿತ್ಯ ಕೆಲವೆಡೆ ತಲೆದೋರಿದೆ. ನಿದರ್ಶನಕ್ಕೆ ಎರಡನೆಯ ಆಶ್ವಾಸದ ಮುಕ್ತಾಯದ ವೇಳೆಗೆ ಕರ್ಣನಿಗೆ ದುರ್ಯೋಧನನು ಅಂಗರಾಜ್ಯ ಪಟ್ಟವನ್ನು ಕೊಟ್ಟು, ‘ಕುಲಜ’ನನ್ನಾಗಿ ಹಾಗೂ ಜೀವದ ಗೆಳೆಯನನ್ನಾಗಿ ಮಾಡಿಕೊಳ್ಳುವ ಸಂದರ್ಭದ ವರ್ಣನೆ ಬರುತ್ತದೆ. ಅಂದಿನ ಸಂಜೆಯ ವರ್ಣನೆಗೆ  ಕವಿ ತೊಡಗಿದ ಕೂಡಲೆ, ಕವಿ ‘ಹೀಗೆ ಸುಯೋಧನ ನಿನಗೆ ಮಾಡಿದ ರಾಜ್ಯ ವಿಭೂತಿಗೆ ಹೆಮ್ಮೆಪಡಬೇಡ, ಗುಣಾರ್ಣವನಾದ ಅರಿಕೇಸರಿಯಿಂದ ನಾಳೆ ನಿನಗಾಗುವ ಗತಿಗೆ ಇಷ್ಟು ಸಾಕು, ಎಂದು ತನ್ನ ಮಗನಾದ ಕರ್ಣನಿಗೆ ಬುದ್ಧಿ ಹೇಳುವಂತೆ ಸೂರ್ಯ ಮುಳುಗಿದನು’ (೨-೮೬) ಎನ್ನುತ್ತಾನೆ. ಅದೇ ಇರುಳು ಮೂಡಿದ ಚಂದ್ರ ‘ಗುಣಾರ್ಣವನಲ್ಲಿ ಸೆಣಸಲೆಂದಿರುವ ಸುಯೋಧನನ ಬಗೆಗೆ ಕೆಂಗಣ್ಣು ಬಿಟ್ಟಂತೆ ಮೂಡಿದ’ (೨-೮೮) ನಂತೆ. ಮತ್ತೆ ಅಲ್ಲೇ, ಮರುದಿನದ ಸೂರ್ಯೋದಯ ‘ಉದಿತೋದಿತನೈ ನೀಂ, ನಿನಗೆ ಉದಯದ ಮೇಲೆ ಉದಯ’ (೨-೯೩) ಎಂದು ಅರಿಕೇಸರಿಗೆ ಹೇಳುವಂತೆ ಸೂರ್ಯ ಉದಯಿಸಿದನಂತೆ. ಹೀಗೆ ಸೂರ್ಯ-ಚಂದ್ರಾದಿಗಳೂ ಗುಣಾರ್ಣವನಾದ ಅರಿಕೇಸರಿಯ ಪ್ರತಿಷ್ಠೆಗೆ ನೈವೇದ್ಯವಾದ ಮೇಲೆ, ಪಂಪನಿಗೆ ಎಂತಹ ಪಕ್ಷಪಾತ ಅರಿಕೇಸರಿಯ ಬಗೆಗೆ ಮನೆ ಮಾಡಿಕೊಂಡಿದೆ ಎಂಬುದನ್ನು ಬೇರೆ ಹೇಳಬೇಕಾಗಿಲ್ಲ. ಅರಿಕೇಸರಿಯ ಮಹತ್ವವನ್ನು, ಇನ್ನಿತರ ಪಾತ್ರಗಳನ್ನು ತುಳಿದು ನಿಲ್ಲುವಂತೆ  ಮಾಡುವಷ್ಟರಲ್ಲಿ ಸ್ಥಾಪಿಸದೆ, ಆತನನ್ನು ಅಲೌಕಿಕ ವ್ಯಕ್ತಿಯೆಂಬಂತೆ ಚಿತ್ರಿಸುವ ಮೂಲಕವೂ ಅವನ ಹೆಗ್ಗಳಿಕೆಯನ್ನು ಎತ್ತಿ ಹಿಡಿಯುವ ಚಾಪಲ್ಯಕ್ಕೆ ಕವಿ ಬಲಿಯಾಗಿದ್ದಾನೆ. ನಾಲ್ಕನೆ ಆಶ್ವಾಸದ ಒಂದು ಸಂದರ್ಭ ಈ ದೃಷ್ಟಿಯಿಂದ ಗಮನಿಸತಕ್ಕದ್ದಾಗಿದೆ. ವಿಕ್ರಾಂತ ತುಂಗನಾದ ಅರಿಕೇಸರಿ ಅಥವಾ ಅರ್ಜುನ ‘ದಿಗಂಗನಾಮುಖಾವಲೋಕನಂಗೆಯ್ಯಲ್ ಬಗೆದು’, ಒಂದಿರುಳು ತನ್ನ  ಮಡದಿಯಾದ ದ್ರೌಪದಿಗೆ ತಿಳಿಸದಂತೆ ಎದ್ದು ಹೊರಡುತ್ತಾನೆ. ಹಾಗೆ ಅರಿಕೇಸರಿ ಎದ್ದು ‘ಮೋಹಮಯಂ ನಿಗಳಂ ಕಳತ್ರಮೆಂದು, ಅಱುಪದೆ ನಟ್ಟಿರುಳ್ ಮಱಿದು ಸಾರ್ಚಿದ ನಲ್ಲಳ ತಳ್ತ ತೋಳ್ಗಳಂ, ಮೆಲ್ಲ ಮೆಲ್ಲನೆ ಪತ್ತುವಿಡಿಸಿ’ (ವ ೪-೧೨) ಹೊರಟನಂತೆ. ಅರ್ಜುನ ಸುಮ್ಮನೆ ಎದ್ದು ಹೊರಟಿದ್ದರೂ, ಮರುದಿನ ಬೆಳಿಗ್ಗೆ ಮಡದಿಗೆ ಹೇಳಿ ಹೊರಟಿದ್ದರೂ- ತಪ್ಪಾಗುತ್ತಿರಲಿಲ್ಲ. ಆದರೆ, ನಟ್ಟ ನಡುರಾತ್ರಿ ಅಭಿನವ ಬುದ್ಧನಂತೆ, ಅಥವಾ ವಿರಾಗಿಯಾದ ಭವ್ಯ ಜೀವಿಯಂತೆ ‘ಮೋಹಮಯಂ ನಿಗಳಂ ಕಳತ್ರಂ’ ಎಂದು ಹೊರಟನಂತೆ. ವಾಸ್ತವವಾಗಿ ಈ ಮಾತು ಮೋಕ್ಷಗಾಮಿಯಾದ ಜೀವದ ಮನಃಸ್ಥಿತಿಯನ್ನು ವರ್ಣಿಸಲು ಜೈನ ಪುರಾಣದಲ್ಲಿ ಬರಲು ತಕ್ಕದ್ದು; ಆ ಮಾತನ್ನು, ಅರ್ಜುನನ ಬಾಯಲ್ಲಿ ಹಾಕಿ ಅವನನ್ನು, ವೈರಾಗ್ಯವೀರನೆಂಬಂತೆ ನಂಬಿಸಲು ಹೊರಟಿದ್ದಾನೆ ಕವಿ. ‘ಮೋಹಮಯಂ ನಿಗಳಂ ಕಳತ್ರಂ’ ಎಂದು ಹೊರಟ ಈ ವೀರ, ತನ್ನ ಪಯಣದ ಹಾದಿಯಲ್ಲಿ ಉಲೂಪಿ ಚಿತ್ರಾಂಗದೆಯರನ್ನೇಕೆ ಮದುವೆ ಮಾಡಿಕೊಂಡ ಎಂದು ಕೇಳಬೇಕಾಗುತ್ತದೆ. ಇದಕ್ಕಿಂತ ವಿಲಕ್ಷಣವಾದದ್ದೆಂದರೆ, ಹೀಗೆ ಎದ್ದು ಹೊರಟ ಅರಿಕೇಸರಿ, ರಾಮೇಶ್ವರದ ಕಡಲ ತಡಿಗೆ ಬಂದು, ತಾನು ಹಿಂದೆ ಶ್ರೀರಾಮನಾಗಿದ್ದಂದಿನ ಪೂರ್ವಭವವನ್ನು ನೆನೆಸಿಕೊಂಡದ್ದು! ಜೈನ ಪುರಾಣಗಳ ನೆನಪು ತರುವ ಪೂರ್ವಜನ್ಮ ಸ್ಮರಣೆಯಲ್ಲಿ (೪-೧೯), ಹಿಂದೆ ತಾನು ರಾಮನಾಗಿದ್ದಾಗ ಸೀತೆಯ ಜತೆಯಲ್ಲಿ ಸೇರಿ ನಿಂತ ಸ್ಥಳ ಇದು, ಖರ-ದೂಷಣರನ್ನು ಕೊಂದ ಸ್ಥಳ ಇದು, ಚಿನ್ನದ ಜಿಂಕೆಯನ್ನು ಅಟ್ಟಿಸಿ ಕೊಂಡು ಹೋದದ್ದು ಇಲ್ಲಿ, ಎಂದು ಗುರುತಿಸಿದನಂತೆ, ಈ ‘ಅಕಳಂಕ ರಾಮ’. ಪಂಪನ ಪ್ರಕಾರ ಈ ಅರಿಕೇಸರಿಯೇ ಹಿಂದಿನ ಜನ್ಮದಲ್ಲಿ ರಾಮನಾಗಿದ್ದ ಪಕ್ಷದಲ್ಲಿ, ತನ್ನ ಹಿಂದಿನ ಅವತಾರಗಳನ್ನು  ನೆನಸಿಕೊಳ್ಳುವ ಪಂಪನ ಕೃಷ್ಣನಿಗೆ ಎಷ್ಟು ಕಸಿವಿಸಿಯಾಗಬೇಡ! ‘ಅಕಳಂಕ ರಾಮ’ ಎನ್ನುವುದು ಅರಿಕೇಸರಿಯ ಒಂದು ಬಿರುದೆಂದು ತೋರುತ್ತದೆ. ಆ ಬಿರುದಿನ ಮೇಲೆ, ಹಿಂದಿನ ರಾಮನಿಗೆ ಕಳಂಕ ಹಚ್ಚಿದರೂ ಚಿಂತೆಯಿಲ್ಲ ಅನ್ನಿಸುತ್ತದೆ ಪಂಪನಿಗೆ. ಮುಂದೆ ಶ್ರೀಕೃಷ್ಣನ ಬಾಯಿಂದಲೂ ‘ನಾಂ ನಾರಾಯಣನೈ; ನೀನ್ ಉದಾತ್ತ ನಾರಾಯಣನೈ’ (೪-೪೫) ಎಂದು ಹೊಗಳಿಸಿದಲ್ಲದೆ ತೃಪ್ತಿಯಿಲ್ಲ. ಅಷ್ಟೇ ಅಲ್ಲ, ಅರ್ಜುನ ‘ಆದಿಪುರುಷ’ (೪-೬೪) ಮತ್ತು ‘ಮೂವರೊಳೊರ್ವಂ’ (ತ್ರಿಮೂರ್ತಿಗಳಲ್ಲಿ ಒಬ್ಬ : ೫-೧೦೨). ಈ ಅಚಾತುರ್ಯ ಮುಗಿಲು ಮುಟ್ಟುವುದು, ಅರಿಕೇಸರಿ ಅಥವಾ ಅರ್ಜುನ ಸಾಕ್ಷಾತ್ ಶಿವನನ್ನು ನೆಲಕ್ಕಿಕ್ಕಿ ಗಂಟಲನ್ನು ಮೆಟ್ಟಿ ಅವನನ್ನು ಮೆಚ್ಚಿಸಿ ಪಾಶುಪತಾಸ್ತ್ರವನ್ನು ಪಡೆದೆನೆಂದು ಹೇಳುವ ಸಂದರ್ಭದಲ್ಲಿ. ಪಂಪ ಭಾರತ ‘ಮುನ್ನಿನ ಕಬ್ಬಮನೆಲ್ಲ ಇಕ್ಕಿ’ ಮೆಟ್ಟಿತೆಂದು ಪಂಪ ತನ್ನ ಕೃತಿಯ ಕಡೆಯಲ್ಲಿ ಹೇಳಿಕೊಂಡಿದ್ದಾನೆ. ಈಗ ನಿದರ್ಶನಕ್ಕೆ ನಾವು ತೋರಿಸಿದ ಈ ಕೆಲವೇ ಪ್ರಸಂಗಗಳನ್ನು ನೋಡಿದರೂ, ಪಂಪನ ಅರಿಕೇಸರಿ ವಿಕ್ರಮಾರ್ಜುನ ವಿಜಯದ ಉಳಿದ ಪಾತ್ರಗಳನ್ನು ಇಕ್ಕಿ ಮೆಟ್ಟಿದಂತೆ ಯಾರಿಗಾದರೂ ಅನ್ನಿಸಬಹುದು. ಆದರೆ ಪಂಪ, ಅರ್ಜುನನ ಪಾತ್ರಕ್ಕೆ ಇಷ್ಟೊಂದು ಅನಗತ್ಯವಾದ ಪ್ರಾಶಸ್ತ್ಯವನ್ನು ಕೊಟ್ಟಿರುವುದು, ಎಂಟನೆಯ ಆಶ್ವಾಸದವರೆಗೆ. ಹದಿನಾಲ್ಕು ಆಶ್ವಾಸಗಳ ವಿಕ್ರಮಾರ್ಜುನ ವಿಜಯದಲ್ಲಿ, ಏಳು ಆಶ್ವಾಸಗಳು, ಅಂದರೆ ಅರ್ಧ ಭಾಗದಷ್ಟು ಕೃತಿಯಲ್ಲಿ, ಅರ್ಜುನನ ಪಾತ್ರದ ವೈಭವವೇ ವೈಭವ. ಹಾಗೆಂದರೆ ಮುಂದಿನ ಆಶ್ವಾಸಗಳಲ್ಲಿ ಅರ್ಜುನನ ಪಾತ್ರದ  ಪ್ರಾಶಸ್ತ್ಯ ಕಡಮೆಯಾಗಿದೆ ಎಂದಲ್ಲ. ಕಥಾನಾಯಕನಾದ ಅವನು ಒಂದು ನಿಶ್ಚಿತವಾದ ಎತ್ತರದಿಂದ ಇಳಿಯದಂತೆ ನೋಡಿಕೊಂಡಿದ್ದಾನೆ ಪಂಪ. ಹಾಗೆಯೇ ಉಳಿದ ಪಾತ್ರಗಳ ಕಡೆಗೆ ತಕ್ಕ ಗಮನವನ್ನೂ ಕೊಟ್ಟಿದ್ದಾನೆ. ಏಳನೆಯ ಆಶ್ವಾಸದಿಂದ ಮುಂದಕ್ಕೆ ಕವಿ ದುರ್ಯೋಧನನ ಪಾತ್ರದ ಕಡೆಗೆ, ಒಂಭತ್ತನೆಯ ಆಶ್ವಾಸದಿಂದ ಮುಂದಕ್ಕೆ ಕೃಷ್ಣನ ಪಾತ್ರದ ಕಡೆಗೆ, ಹತ್ತನೆಯ (ಒಂಭತ್ತನೆಯ ಆಶ್ವಾಸದ ಕೃಷ್ಣನಿಂದ ಕರ್ಣನ ಭೇದದ ಸಂದರ್ಭವನ್ನೂ ಸೇರಿಸಿಕೊಂಡು) ಆಶ್ವಾಸದಿಂದ ಮುಂದಕ್ಕೆ ಕರ್ಣನ ಪಾತ್ರದ ಕಡೆಗೆ, ಪಂಪ ವಿಶೇಷವಾದ ಗಮನವನ್ನು ಕೊಟ್ಟಂತೆ ತೋರುತ್ತದೆ. ವಿಕ್ರಮಾರ್ಜುನ ವಿಜಯದ ಮೂರು ಮುಖ್ಯ ಪಾತ್ರಗಳು ಇವು : ಅರ್ಜುನ, ದುರ್ಯೋಧನ ಮತ್ತು ಕರ್ಣ. ಈ ಮೂರು ಪಾತ್ರಗಳೂ ವೀರ, ಚಲ, ಚಾಗಗಳೆಂಬ, ಹತ್ತನೆಯ ಶತಮಾನದ ಪ್ರಧಾನ ಮೌಲ್ಯಗಳನ್ನು ಪ್ರತಿನಿಧಿಸುತ್ತವೆ. ಈ ಮೌಲ್ಯಗಳಲ್ಲಿ ವೀರ ಮತ್ತು ಚಾಗಗಳೆರಡೂ ಕರ್ಣನ ಪಾತ್ರದಲ್ಲಿ ವಿಶೇಷವಾಗಿ ಕಾಣುವುದರಿಂದ ಮತ್ತು ಕರ್ಣಾವಸಾನದ ಸಂದರ್ಭವನ್ನು ಚಿತ್ರಿಸುವಲ್ಲಿ ‘ನೆನೆಯದಿರಣ್ಣ ಭಾರತದೊಳಿಂ ಪೆಱರಾರುಮನ್, ಒಂದೆ ಚಿತ್ತದಿಂ ನೆನೆವೊಡೆ ಕರ್ಣನಂ ನೆನೆಯ’ (೧೨-೨೧೭) ಎಂದು ಎದೆ ತುಂಬ ಹೊಗಳಿ ತನ್ನ ಭಾರತ ‘ಕರ್ಣ ರಸಾಯನ’ವೂ ಆಯಿತೆಂದು ಹೇಳುವಲ್ಲಿ, ಪಂಪ, ತನ್ನ ಕಥಾನಾಯಕನಾದ ಅರ್ಜುನನನ್ನೂ ಹೇಗೆ ನಿಷ್ಪಕ್ಷಪಾತವಾಗಿ ಬದಿಗೆ ಸರಿಸಿದ್ದಾನೆಂಬುದನ್ನು ಗುರುತಿಸಬಹುದು. ಹೀಗಾಗಿ ಪಂಪನ ಮನಸ್ಸನ್ನು, ಅರ್ಜುನನಿಗಿಂತಲೂ ಮಿಗಿಲಾಗಿ ಕರ್ಣ ಆಕರ್ಷಿಸಿದ್ದನೆಂದು ಹೇಳಲವಕಾಶವಿದೆ. ಹಾಗೆಯೇ, ಏಕಾಂಗಿಯಾದ ದುರ್ಯೋಧನನ ಛಲವೂ ಪಂಪನ ಚಿತ್ತವನ್ನು ಹೀಗೆಯೇ ಸೂರೆಗೊಂಡಂತೆ ತೋರುತ್ತದೆ. ಇದಕ್ಕೂ ಮಿಗಿಲಾಗಿ ಕರ್ಣ-ದುರ್ಯೋಧನರ ಅಪೂರ್ವವಾದ ಸ್ನೇಹವನ್ನು ಚಿತ್ರಿಸುವಲ್ಲಿ ಪಂಪ, ತನಗೂ ತನ್ನ ರಾಜನಾದ ಅರಿಕೇಸರಿಗೂ ಇದ್ದ ಗಾಢವಾದ ‘ಅೞ್ತಿ’ಯನ್ನೇ ಪ್ರತಿಮಿಸಿದ್ದಾನೆ ಎನ್ನುವುದಕ್ಕೆ ಸಾಕಷ್ಟು ಅವಕಾಶವಿದೆ. ಒಟ್ಟಿನಲ್ಲಿ ಈ ಮೂರು ಪಾತ್ರಗಳ ನಿರ್ಮಿತಿಯ ಕಡೆಗೆ, ಉಳಿದ ಪಾತ್ರಗಳಿಗಿಂತ ಮಿಗಿಲಾದ ಲಕ್ಷ್ಯವನ್ನು ಪಂಪ ಹರಿಸಿದ್ದಾನೆ. ಇದಕ್ಕೂ ಮಿಗಿಲಾಗಿ ಕರ್ಣ ಮತ್ತು ದುಯೋಧನರ ಪಾತ್ರ ಚಿತ್ರಣದಲ್ಲಿ, ಮೂಲದಲ್ಲಿ ಕಾಣದ ಹೊಸ ತಿರುವನ್ನು ಕೊಟ್ಟು ನಿಜವಾದ ಇಂದಿನ ಅರ್ಥದ ದುರಂತ ನಾಯಕ ಪಾತ್ರಗಳನ್ನಾಗಿ ಮಾಡಿದ್ದಾನೆ. ಮೂಲದ ದುಷ್ಟ ಪಾತ್ರವಾದ ದುರ್ಯೋಧನನ ದೌಷ್ಟ್ಯವನ್ನು ಸಮರ್ಥಿಸದೆ, ಆ ಪಾತ್ರದ ಇನ್ನಿತರ ಒಳ್ಳೆಯ ಗುಣಗಳನ್ನು ಕಾಣಿಸುವ, ಓದಿದವರು ಕಂಡು ಮೆಚ್ಚುವ ಒಂದು ಆಯಾಮವನ್ನು ಪಂಪ ಇಲ್ಲಿ ಕೊಟ್ಟಿದ್ದಾನೆ. ಕವಿಯ ಅಸಾಧಾರಣ ಅನುಕಂಪೆಯ ಬೆಳಕಿನಲ್ಲಿ ದುರ್ಯೋಧನನೂ, ‘ಮಹಾನುಭಾವ’ನಾಗುವುದಲ್ಲದೆ “ದುಯೋಧನನ ವಿಷಯದಲ್ಲಿ ಮೂಲದಲ್ಲಿ ಕಾಣದೊರೆಯದ ಉದಾತ್ತೀಕರಣವಾಗಿದೆ.”[16] ಈ ಉದಾತ್ತೀಕರಣ ದೃಷ್ಟಿ ಕನ್ನಡ ಸಾಹಿತ್ಯಕ್ಕೆ ಮೊದಲನೆಯದು ಮಾತ್ರವಲ್ಲದೆ, ಮುಂದಿನ ಕವಿಗಳಾದ ರನ್ನನಿಂದ ಹಿಡಿದು ಜನ್ನನವರೆಗೂ ಚಾಚಿಕೊಂಡಿದೆ. ರನ್ನರ ದುರ್ಯೋಧನ, ನಾಗಚಂದ್ರನ ರಾವಣ, ಜನ್ನನ ಚಂಡಶಾಸನ-ಈ ಪಾತ್ರಗಳನ್ನು ನೋಡಿದರೆ ಸಾಕು, ಪಂಪನ ಪ್ರಭಾವ, ಪಾತ್ರ ಚಿತ್ರಣದ ಬಗೆಗೆ ಎಂಥ ದೃಷ್ಟಿಕೋನವನ್ನು ತೆರೆಯಿತೆಂಬುದು ತಿಳಿಯುತ್ತದೆ. ಪಂಪನ ಗಮನ ಕೇವಲ ಉನ್ನತ ಶ್ರೇಣಿಯ ವ್ಯಕ್ತಿಗಳ ಚಿತ್ರಣದ ಕಡೆಗಷ್ಟೇ ಕೇಂದ್ರೀಕೃತವಾಗಿಲ್ಲ. ಅಂದಿನ ಸರಳ ಸಾಮಾನ್ಯ ಜನರ ಆಗು-ಹೋಗುಗಳನ್ನು ಆತ ಮರೆತಿಲ್ಲ.  ಅವನು ಕೊಡುವ ಶಿಬಿರ ಜೀವನದ ಚಿತ್ರಣಗಳು, ರಣರಂಗಕ್ಕೆ ಹಿಂದಿನ ಇರುಳು ನಲ್ಲ-ನಲ್ಲೆಯರು  ಸಲ್ಲಾಪದಲ್ಲಿ ತೊಡಗಿಕೊಳ್ಳುವ, ವೀರರಾದವರು ಯುದ್ಧವನ್ನು ಕುರಿತು ಮಾತನಾಡಿಕೊಳ್ಳುವ, ಬಿಡಿ ಬಿಡಿ ಚಿತ್ರಗಳಲ್ಲಿ ಎಂಥ ಮಾನವೀಯ ಸಂಬಂಧಗಳು ಅನಾವರಣಗೊಂಡಿವೆಯೆನ್ನುವುದನ್ನು ಗುರುತಿಸಬಹುದು. ಹಾಗೆಯೇ, ವೇಶ್ಯಾವಾಟಿಕೆಯ ವರ್ಣನೆ ಅಷ್ಟಾದಶ ವರ್ಣನೆಗಳಲ್ಲಿ  ಒಂದಾದರೂ, ಪಂಪನ ಕೈಯಲ್ಲಿ, ಆತನ ಕಾಲದ ಸಮಾಜದ ಒಂದು ಸ್ತರವನ್ನು, ಆ ಸ್ತರದ ಜನರ ನಡವಳಿಕೆಯನ್ನು ದಾಖಲಿಸುವ ಸಾಧನವಾಗಿದೆ. ಪಂಪನ ಯುದ್ಧ ವರ್ಣನೆಗಳಂತೂ, ಹತ್ತನೆಯ ಶತಮಾನದ ವಾಸ್ತವಾನುಭವದಿಂದ ತುಂಬಿ ತುಳುಕುತ್ತವೆ. ಇಂಥ ವೀರಯುಗದ ಕಾವ್ಯದಲ್ಲೂ, ಪಂಪನ ಸೌಂದರ್ಯ ಪ್ರಜ್ಞೆ, ಧರ್ಮ ಪ್ರಜ್ಞೆಗಳು ಅಲ್ಲಲ್ಲಿ ಸ್ಫುಟವಾಗಿವೆ. ಅರಿಕೇಸರಿಯ ಪಕ್ಷಪಾತದಿಂದ ಪಂಪಭಾರತ ಅಲ್ಲಲ್ಲಿ ತೂಕ ತಪ್ಪಿದರೂ, ಒಟ್ಟಿನ ಮೇಲೆ ಹತ್ತನೆಯ ಶತಮಾನದ ಸಮಕಾಲೀನತೆಯನ್ನು, ವ್ಯಾಸರ ಕಥಾ ಭಿತ್ತಿಯ ಮೇಲೆ ಚಿತ್ರಿಸುವುದರಲ್ಲಿ ತುಂಬ ಯಶಸ್ವಿಯಾದ ಕೃತಿ ಎಂದು ಅನ್ನಿಸದಿರದು. ಮೂಲ ಭಾರತಕ್ಕೆ ಕನ್ನಡದಲ್ಲಿ ಒದಗಿದ ಈ ಹೊಸ ರೂಪವನ್ನು ನೋಡಿದರೆ “ಕನ್ನಡವಷ್ಟೇ ಏಕೆ, ಸಂಸ್ಕೃತ ವಾಙ್ಮಯದಲ್ಲಿಯೂ ಭಾರತದ ಈ ಬಗೆಯ ರೂಪಾಂತರ ಅಪರೂಪವಾದದು”[17] ಮತ್ತು ಪಂಪನಂತೆ ‘ಮುಂ ಸಮಸ್ತ ಭಾರತಮನ್ ಅಪೂರ್ವವಾಗಿ ಸಲೆ ಪೇೞ್ದ ಕವೀಶ್ವರರಿಲ್ಲ’ (೧-೧೧) ಎಂಬ ಪ್ರಶಸ್ತಿಗೆ ಅರ್ಹವಾದದ್ದು, ಈ ‘ವಿಕ್ರಮಾರ್ಜುನ ವಿಜಯ.’

  • * *

[1] ಸುಜನಾ : ಪಂಪಭಾರತದ ವಸ್ತುವಿನ್ಯಾಸ : ಪಂಪ : ಒಂದು ಅಧ್ಯಯನ, (೧೯೭೪) ಬೆಂಗಳೂರು ವಿಶ್ವವಿದ್ಯಾಲಯ, ಪು. ೧೧೯ [2] ಅಲ್ಲೇ, ಪು. ೧೧೯ [3] ಪಂಪನಿಗಿಂತ ಹಿಂದೆಯೆ ಮಹಾಭಾರತವನ್ನು ಕುರಿತು ಕನ್ನಡದಲ್ಲಿ ಕಾವ್ಯರಚನೆಯಾದ ಸಾಧ್ಯತೆಯನ್ನು, ಕವಿರಾಜಮಾರ್ಗದಲ್ಲಿ ಮತ್ತು ಮುಂದಿನ ಕೆಲವು ಲಕ್ಷಣ ಹಾಗೂ ಸಂಗ್ರಹ ಕೃತಿಗಳಲ್ಲಿ, ಮಹಾಭಾರತ ಕತೆಗೆ ಸಂಬಂಧಿಸಿದ ಬಿಡಿ ಪದ್ಯಗಳು ಸಮರ್ಥಿಸುತ್ತವೆಯಾದರೂ, ನಮ್ಮ ಮಟ್ಟಿಗೆ ಪಂಪ ಭಾರತವೇ ಕನ್ನಡದ ಆದಿಕಾವ್ಯವಾಗಿದೆ. [4] ಈ ತಂತ್ರ ಪಂಪನದೇನೂ ಅಲ್ಲ, ಅದು ಅವನಿಗಿಂತ ಹಿಂದೆ ಗುಣವರ್ಮನ ಶೂದ್ರಕದಲ್ಲಿಯೆ ಇತ್ತು ಎನ್ನುವ ಭಾವನೆಗೆ ಆಧಾರವಿದ್ದರೂ, ಗುಣವರ್ಮನ ಶೂದ್ರಕ ದೊರೆಯುವ ತನಕ, ಪಂಪನೆ ಈ ಹೊಸ ತಂತ್ರದ ನಿರ್ಮಾಪಕ ಎಂದು ಇಟ್ಟುಕೊಳ್ಳಬೇಕಾಗಿದೆ. [5] ಎಂ. ಚಿದಾನಂದ ಮೂರ್ತಿ : ಪಂಪಕವಿ ಮತ್ತು ಯುಗಧರ್ಮ : ಪಂಪ : ಒಂದು ಅಧ್ಯಯನ ಪು. ೨೬೯. [6] ನೋಡಿ-ಪಂಪ : ಒಂದು ಅಧ್ಯಯನ ಪು.೨೩೧, ೨೭೧, ೨೮೬ [7] ಕೆ.ವಿ. ಸುಬ್ಬಣ್ಣ : ಪಂಪನ ಕವಿತೆ : ಅನುಸಂಧಾನಕ್ಕೆ ಹೊಸಮಾರ್ಗ, ಪಂಪ : ಒಂದು ಅಧ್ಯಯನ,  ಪು. ೩೦೮. [8] ಪಂಪ : ಒಂದು ಅಧ್ಯಯನ : ಸುಜನಾ ಅವರ ಲೇಖನ : ಪಂಪಭಾರತದ ವಸ್ತು ವಿನ್ಯಾಸ, ಈ ಬಗೆಯ ದೃಷ್ಟಿಯಿಂದ ರಚಿತವಾಗಿದೆ. [9] ಎಂ. ಚಿದಾನಂದಮೂರ್ತಿ : ‘ಪಂಪಕವಿ ಮತ್ತು ಯುಗಧರ್ಮ’ ಅಲ್ಲೇ, ಪು.೨೭೫. [10] ಕೆ.ವಿ. ಸುಬ್ಬಣ್ಣ : ಪಂಪನ ಕವಿತೆ : ಅನುಸಂಧಾನಕ್ಕೆ ಹೊಸಮಾರ್ಗ, ಅಲ್ಲೇ, ಪು. ೩೧೪-೧೫. [11] ಟಿ.ಎಸ್. ವೆಂಕಣ್ಣಯ್ಯ : ಕನ್ನಡ ಸಾಹಿತ್ಯ ಚರಿತ್ರೆ ಮತ್ತು ಇತರ ಲೇಖನಗಳು, ಪು. ೬೧. [12] ಜಿ.ಎಚ್. ನಾಯಕ: ಪಂಪನ ಅಭಿವ್ಯಕ್ತಿ. ಪಂಪ: ಒಂದು ಅಧ್ಯಯನ, ಪು. ೨೧೪. [13] ಎಚ್.ಎಮ್. ಚನ್ನಯ್ಯ : ಪಂಪನಲ್ಲಿ ಸಾಮಾಜಿಕತೆಯ ಅರಿವು. ಅಲ್ಲೇ, ಪು. ೨೩೨, ೨೩೩ ಮತ್ತು ೨೪೧. [14] ಎಲ್. ಬಸವರಾಜು : ಅಲ್ಲೇ, ಪು. ೩೧೭. [15] I.A. Richards: Principles of Literary criticism p. 27. [16] ರಂ.ಶ್ರೀ. ಮುಗಳಿ : ಕನ್ನಡ ಸಾಹಿತ್ಯ ಚರಿತ್ರೆ, ಪು. ೯೮ [17] ರಂ.ಶ್ರೀ. ಮುಗಳಿ : ಕನ್ನಡ ಸಾಹಿತ್ಯ ಚರಿತ್ರೆ, ಪು. ೯೬.

ಉಪಯುಕ್ತ ವೆಬ್ ಪುಟಗಳು

ಆಡಿಯೋ

ವೀಡಿಯೋ

ಸಾಹಿತ್ಯ ಪೂರಕ ಪುಸ್ತಕಗಳು

ಪಂಪನ ವಿಕ್ರಮಾರ್ಜುನ ವಿಜಯ , ರನ್ನನ ಗದಾ ಯುದ್ಧ ,ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿ ,ಡಿ.ವಿ.ಜಿ.ಯವರ ಶ್ರೀಮದ್ಭಗವದ್ಗೀತಾ ತಾತ್ಪರ್ಯ, [1] ಸುಜನಾ : ಪಂಪಭಾರತದ ವಸ್ತುವಿನ್ಯಾಸ : ಪಂಪ : ಒಂದು ಅಧ್ಯಯನ, (೧೯೭೪) ಬೆಂಗಳೂರು ವಿಶ್ವವಿದ್ಯಾಲಯ, ಪು. ೧೧೯ [2] ಅಲ್ಲೇ, ಪು. ೧೧೯ [3] ಪಂಪನಿಗಿಂತ ಹಿಂದೆಯೆ ಮಹಾಭಾರತವನ್ನು ಕುರಿತು ಕನ್ನಡದಲ್ಲಿ ಕಾವ್ಯರಚನೆಯಾದ ಸಾಧ್ಯತೆಯನ್ನು, ಕವಿರಾಜಮಾರ್ಗದಲ್ಲಿ ಮತ್ತು ಮುಂದಿನ ಕೆಲವು ಲಕ್ಷಣ ಹಾಗೂ ಸಂಗ್ರಹ ಕೃತಿಗಳಲ್ಲಿ, ಮಹಾಭಾರತ ಕತೆಗೆ ಸಂಬಂಧಿಸಿದ ಬಿಡಿ ಪದ್ಯಗಳು ಸಮರ್ಥಿಸುತ್ತವೆಯಾದರೂ, ನಮ್ಮ ಮಟ್ಟಿಗೆ ಪಂಪ ಭಾರತವೇ ಕನ್ನಡದ ಆದಿಕಾವ್ಯವಾಗಿದೆ. [4] ಈ ತಂತ್ರ ಪಂಪನದೇನೂ ಅಲ್ಲ, ಅದು ಅವನಿಗಿಂತ ಹಿಂದೆ ಗುಣವರ್ಮನ ಶೂದ್ರಕದಲ್ಲಿಯೆ ಇತ್ತು ಎನ್ನುವ ಭಾವನೆಗೆ ಆಧಾರವಿದ್ದರೂ, ಗುಣವರ್ಮನ ಶೂದ್ರಕ ದೊರೆಯುವ ತನಕ, ಪಂಪನೆ ಈ ಹೊಸ ತಂತ್ರದ ನಿರ್ಮಾಪಕ ಎಂದು ಇಟ್ಟುಕೊಳ್ಳಬೇಕಾಗಿದೆ. [5] ಎಂ. ಚಿದಾನಂದ ಮೂರ್ತಿ : ಪಂಪಕವಿ ಮತ್ತು ಯುಗಧರ್ಮ : ಪಂಪ : ಒಂದು ಅಧ್ಯಯನ ಪು. ೨೬೯. [6] ನೋಡಿ-ಪಂಪ : ಒಂದು ಅಧ್ಯಯನ ಪು.೨೩೧, ೨೭೧, ೨೮೬ [7] ಕೆ.ವಿ. ಸುಬ್ಬಣ್ಣ : ಪಂಪನ ಕವಿತೆ : ಅನುಸಂಧಾನಕ್ಕೆ ಹೊಸಮಾರ್ಗ, ಪಂಪ : ಒಂದು ಅಧ್ಯಯನ,  ಪು. ೩೦೮. [8] ಪಂಪ : ಒಂದು ಅಧ್ಯಯನ : ಸುಜನಾ ಅವರ ಲೇಖನ : ಪಂಪಭಾರತದ ವಸ್ತು ವಿನ್ಯಾಸ, ಈ ಬಗೆಯ ದೃಷ್ಟಿಯಿಂದ ರಚಿತವಾಗಿದೆ. [9] ಎಂ. ಚಿದಾನಂದಮೂರ್ತಿ : ‘ಪಂಪಕವಿ ಮತ್ತು ಯುಗಧರ್ಮ’ ಅಲ್ಲೇ, ಪು.೨೭೫. [10] ಕೆ.ವಿ. ಸುಬ್ಬಣ್ಣ : ಪಂಪನ ಕವಿತೆ : ಅನುಸಂಧಾನಕ್ಕೆ ಹೊಸಮಾರ್ಗ, ಅಲ್ಲೇ, ಪು. ೩೧೪-೧೫. [11] ಟಿ.ಎಸ್. ವೆಂಕಣ್ಣಯ್ಯ : ಕನ್ನಡ ಸಾಹಿತ್ಯ ಚರಿತ್ರೆ ಮತ್ತು ಇತರ ಲೇಖನಗಳು, ಪು. ೬೧. [12] ಜಿ.ಎಚ್. ನಾಯಕ: ಪಂಪನ ಅಭಿವ್ಯಕ್ತಿ. ಪಂಪ: ಒಂದು ಅಧ್ಯಯನ, ಪು. ೨೧೪. [13] ಎಚ್.ಎಮ್. ಚನ್ನಯ್ಯ : ಪಂಪನಲ್ಲಿ ಸಾಮಾಜಿಕತೆಯ ಅರಿವು. ಅಲ್ಲೇ, ಪು. ೨೩೨, ೨೩೩ ಮತ್ತು ೨೪೧. [14] ಎಲ್. ಬಸವರಾಜು : ಅಲ್ಲೇ, ಪು. ೩೧೭. [15] I.A. Richards: Principles of Literary criticism p. 27. [16] ರಂ.ಶ್ರೀ. ಮುಗಳಿ : ಕನ್ನಡ ಸಾಹಿತ್ಯ ಚರಿತ್ರೆ, ಪು. ೯೮ [17] ರಂ.ಶ್ರೀ. ಮುಗಳಿ : ಕನ್ನಡ ಸಾಹಿತ್ಯ ಚರಿತ್ರೆ, ಪು. ೯೬.


ಭಾಷಾ ಚಟುವಟಿಕೆಗಳು/ ಯೋಜನೆಗಳು

ಮಹಾಭಾರತದ ವಿಭಿನ್ನ ಪಾತ್ರಗಳ ಅಭಿನಯ , ಪಾತ್ರಗಳ ವಿಮರ್ಶೆ, ಮಹಾಭಾರತದ ಪ್ರಸಂಗಗಳನ್ನು ಚಿತ್ರರೂಪದಲ್ಲಿ ಬಿಡಿಸುವುದು,ಮಹಾಭಾರತದ ಕಥೆ ಸಂಗ್ರಹ , ಪಂಪನ ಸಮಕಾಲೀನ ಕವಿಗಳ ಮಾಹಿತಿ ಸಂಗ್ರಹ ,

ಪದ್ಯ ಬಗ್ಗೆ ಹಿಮ್ಮಾಹಿತಿ