ರಾಮಧಾನ್ಯ ಚರಿತೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಪರಿಕಲ್ಪನಾ ನಕ್ಷೆ

ಹಿನ್ನೆಲೆ/ಸಂದರ್ಭ

ಕಲಿಕೋದ್ದೇಶಗಳು

ಕವಿ ಪರಿಚಯ

ಶಿಕ್ಷಕರಿಗೆ ಟಿಪ್ಪಣಿ

ಹೆಚ್ಚುವರಿ ಸಂಪನ್ಮೂಲ

ಸಾರಾಂಶ

ಪದ್ಯಭಾಗದ ಪದಶಃ ಅರ್ಥ ಮತ್ತು ಭಾವಾರ್ಥ (ಕನ್ನಡ ದೀವಿಗೆ ಸಹಾಯವನ್ನು ಪಡೆಯಲಾಗಿದೆ)

ಕೆಲರು ಗೋದಿಯ ಸಾಮೆಯನು ಕೆಲ

ಕೆಲರು ನವಣೆಯ ಕಂಬು ಜೋಳವ

ಕೆಲವು ಹಾರಕವೆಂದು ಕೆಲವರು ನೆಲ್ಲನತಿಶಯವ

ಕೆಲರು ನರೆದಲೆಗನನು ಪತಿಕರಿ

ಸಲದ ನೋಡಿದ ನೃಪತಿಯದರೊಳು

ಹಲವು ಮತವೇಕೊಂದನೇ ಪೇಳೆನಲು ಗೌತಮನು.    || ೧ ||

ಪದವಿಭಾಗ ಮತ್ತು ಪದಶಃ ಅರ್ಥ:-  ಕೆಲರು(ಕೆಲವರು) ಗೋದಿಯ(ಗೋಧಿಯನ್ನು) ಸಾಮೆಯನು ಕೆಲ ಕೆಲರು ನವಣೆಯ ಕಂಬು ಜೋಳವ ಕೆಲವು ಹಾರಕ (ಶ್ರೇಷ್ಠ) + ಎಂದು ಕೆಲವರು ನೆಲ್ಲನು + ಅತಿಶಯವ (ಶ್ರೇಷ್ಠ/ಉತ್ಕೃಷ್ಠ) ಕೆಲವರು ನರೆದಲಗನನು(ರಾಗಿಯನ್ನು) ಪತಿಕರಿಸಲು (ಅಂಗೀಕರಿಸಲು/ಒಪ್ಪಲು) + ಅದ ನೋಡಿದ ನೃಪತಿಯು(ರಾಜನು) + ಅದರೊಳು (ಅದರಲ್ಲಿ) ಹಲವು ಮತವು + ಏಕೆ + ಒಂದನೇ ಪೇಳು(ಹೇಳು) + ಎನಲು(ಎನ್ನಲು) ಗೌತಮನು.

ಭಾವಾರ್ಥ:- ಕೆಲವರು ಗೋದಿಯನ್ನು, ಕೆಲವರು ಸಾಮೆಯನ್ನು, ಕೆಲವರು ನವಣೆಯನ್ನು, ಕೆಲವರು ಕಂಬು, ಜೋಳವನ್ನು ಉತ್ತಮವೆಂದು ಹೇಳಿದರೆ ಕೆಲವರು ಭತ್ತವನ್ನು ಶ್ರೇಷ್ಠವೆಂದರೆ ಕೆಲವರು ರಾಗಿಯನ್ನು ಶ್ರೇಷ್ಠವೆಂದು ಹೇಳುವುದನ್ನು ನೋಡಿದ ಮಹಾರಾಜನು(ರಾಮನು) “ಅವುಗಳ ಶ್ರೇಷ್ಠತೆಯ ಬಗ್ಗೆ ಹಲವು ಅಭಿಪ್ರಾಯಗಳೇಕೆ? ಯಾವುದಾದರು ಒಂದನ್ನು ಹೇಳಿ” ಎಂದಾಗ ಗೌತಮನು ಹೀಗೆ ಹೇಳುತ್ತಾನೆ.....

ದಾಶರಥಿ ಚಿತ್ತೈಸು ನಮ್ಮಯ

ದೇಶಕತಿಶಯ ನರೆದಲೆಗನೇ

ವಾಸಿಯುಳ್ಳವನೀತ ಮಿಕ್ಕಿನ ಧಾನ್ಯವೇಕೆನಲು

ಲೇಸನಾಡಿದೆ ಮುನಿಪ ಗೌತಮ

ದೋಷರಹಿತನು ಪಕ್ಷಪಾತವ

ನೀಸು ಪರಿಯಲಿ ಮಾಡುವರೆ ಶಿವಯೆಂದನಾವ್ರಿಹಿಗ     || ೨ ||

ಪದವಿಭಾಗ ಮತ್ತು ಪದಶಃ ಅರ್ಥ:-  ದಾಶರಥಿ ಚಿತ್ತೈಸು(ಮನಸ್ಸುಮಾಡು) ನಮ್ಮಯ ದೇಶಕೆ + ಅತಿಶಯ(ಶ್ರೇಷ್ಠ) ನರೆದಲಗನೇ(ರಾಗಿಯೇ) ವಾಸಿ (ಶಕ್ತಿ/ಸತ್ವ) + ಉಳ್ಳವನು + ಈತ ಮಿಕ್ಕಿನ (ಉಳಿದ) ಧಾನ್ಯವು + ಏಕೆ + ಎನಲು ಲೇಸನು(ಒಳ್ಳೆಯದನ್ನು) + ಆಡಿದೆ ಮುನಿಪ ಗೌತಮ ದೋಷರಹಿತನು ಪಕ್ಷಪಾತವನು + ಈಸು(ಇಷ್ಟ) ಪರಿಯಲಿ(ರೀತಿಯಲ್ಲಿ) ಮಾಡುವರೆ ಶಿವ + ಎಂದನು ಆ ವ್ರೀಹಿಗ(ಭತ್ತ).

ಭಾವಾರ್ಥ:- “ದಶರಥ ಪುತ್ರನಾದ ಶ್ರೀರಾಮನೇ ಕೇಳು. ನಮ್ಮ ದೇಶದಲ್ಲಿ ಶ್ರೇಷ್ಠವೆಂದರೆ ರಾಗಿಯೇ ಸರಿ. ಇವನು ಶಕ್ತಿ(ಸತ್ವ) ಹೊಂದಿರುವವನು. ಉಳಿದ ಧಾನ್ಯಗಳೇಕೆ?” ಎಂಬ ಮಾತನ್ನು ಕೇಳಿದ ವ್ರಿಹಿಗ(ಭತ್ತ) “ಇದೇನು ಗೌತಮ ಮುನಿಯೇ ನೀನು ಒಳ್ಳೆಯ ಮಾತನಾಡಿದೆಯಲ್ಲ ! ದೋಷರಹಿತನಾದ ನೀನು ಈ ರೀತಿಯಲ್ಲಿ ಪಕ್ಷಪಾತ ಮಾಡಬಹುದೇ? ಶಿವ ಶಿವಾ! ಎಂದನು.”

ಎಲ್ಲ ಧರ್ಮದ ಸಾರವನು ನೀವ್

ಬಲ್ಲಿರರಿಯಿರೆ ಎಲ್ಲರನು ನೀ

ವಿಲ್ಲಿ ನುಡಿವ ಉಪೇಕ್ಷೆಯುಂಟೇ ಸಾಕದಂತಿರಲಿ

ನೆಲ್ಲು ನಾನಿರೆ ಗೋದಿ ಮೊದಲಾ

ದೆಲ್ಲ ಧಾನ್ಯಗಳಿರಲು ಇದರಲಿ

ಬಲ್ಲಿದನು ನರೆದಲೆಗನೆಂಬುದಿದಾವ ಮತವೆಂದ          || ೩ ||

ಪದವಿಭಾಗ ಮತ್ತು ಪದಶಃ ಅರ್ಥ:- ಎಲ್ಲ ಧರ್ಮದ ಸಾರವನು ನೀವ್ ಬಲ್ಲಿರಿ ಅರಿಯಿರೆ(ತಿಳಿದಿರುವಿರೆ) ಎಲ್ಲರನು ನೀವು + ಇಲ್ಲಿ ನುಡಿವ ಉಪೇಕ್ಷೆ(ಕಡೆಗಣನೆ) + ಉಂಟೇ ಸಾಕು + ಅದಂತಿರಲಿ (ಅದು ಹಾಗಿರಲಿ) ನೆಲ್ಲು (ಭತ್ತ) ನಾನು + ಇರೆ ಗೋದಿ ಮೊದಲಾದ + ಎಲ್ಲ ಧಾನ್ಯಗಳು + ಇರಲು ಇದರಲಿ ಬಲ್ಲಿದನು (ಶ್ರೀಮಂತ) ನರೆದಲಗನು (ರಾಗಿಯು) + ಎಂಬುದು + ಇದು + ಆವ ಮತ (ನ್ಯಾಯ) + ಎಂದ.

ಭಾವಾರ್ಥ:- ಮುಂದುವರೆದು ಮಾತನಾಡುತ್ತಾ ಭತ್ತ ಗೌತಮ ಮುನಿಗೆ ಹೀಗೆ ಹೇಳುತ್ತದೆ: “ಎಲ್ಲಾ ಧರ್ಮಗಳ ಸಾರ ನಿಮಗೆ ತಿಳಿದಿದೆ. ನಿಮಗೆ ಎಲ್ಲರ ಬಗ್ಗೆ ತಿಳಿದಿಲ್ಲವೇ? ಹೀಗಿದ್ದೂ ಇಲ್ಲಿ ಈ ರೀತಿ ಕಡೆಗಣಿಸಿ ಮಾತನಾಡುವುದು ಸರಿಯೇ? ಸಾಕು. ಅದು ಹಾಗಿರಲಿ, ಭತ್ತ ನಾನಿರುವಾಗ; ಗೋದಿ ಮೊದಲಾದ ಧಾನ್ಯಗಳೆಲ್ಲಾ ಇಲ್ಲಿರುವಾಗ ಇವರಲ್ಲಿ ರಾಗಿಯೇ ಶ್ರೀಮಂತ(ಶ್ರೇಷ್ಠ/ಬಲ್ಲಿದ) ಎಂದು ಹೇಳುವುದು ಇದು ಯಾವ ನ್ಯಾಯ? ಎಂದಿತು.

ಏನೆಲವೊ ನರೆದಲಗ ನೀನು ಸ

ಮಾನನೇ ಎನಗಿಲ್ಲಿ ನಮ್ಮನು

ದಾನವಾಂತಕ ಬಲ್ಲನಿಬ್ಬರ ಹೆಚ್ಚು ಕುಂದುಗಳ

ಜಾನಕೀ ಪತಿ ಸನಿಹದಲಿ ಕುಲ

ಹೀನ ನೀನು ಪ್ರತಿಷ್ಠ ಸುಡು ಮತಿ

ಹೀನ ನೀನೆಂದೆನುತ ಖತಿಯಲಿ ಬೈದು ಭಂಗಿಸಿದ       || ೪ ||

ಪದವಿಭಾಗ ಮತ್ತು ಪದಶಃ ಅರ್ಥ:- ಏನು + ಎಲವೊ ನರೆದಲಗ(ರಾಗಿ) ನೀನು ಸಮಾನನೇ ಎನಗೆ + ಇಲ್ಲಿ ನಮ್ಮನು ದಾನವಾಂತಕ (ವಿಷ್ಣು) ಬಲ್ಲನು + ಇಬ್ಬರ ಹೆಚ್ಚು ಕುಂದುಗಳ(ಕಡಿಮೆ/ಕೊರತೆಗಳು) ಜಾನಕೀ ಪತಿ ಸನಿಹದಲಿ (ಹತ್ತಿರದಲ್ಲಿ) ಕುಲಹೀನ ನೀನು ಪ್ರತಿಷ್ಠ (ಅಹಂಕಾರಿ) ಸುಡು ಮತಿಹೀನ (ಬುದ್ಧಿಗೇಡಿ) ನೀನು + ಎಂದು + ಎನುತ ಖತಿಯಲಿ (ಕೋಪದಿಂದ) ಬೈದು ಭಂಗಿಸಿದ (ಜರೆದನು).

ಭಾವಾರ್ಥ:- ನಂತರ ರಾಗಿಯನ್ನು ಕುರಿತು ವ್ರೀಹಿಗನು(ಭತ್ತ) ಈ ರೀತಿ ಹೇಳುತ್ತಾನೆ: “ಎಲವೋ ನರೆದಲಗ, ಇಲ್ಲಿ ನೀನು ನನಗೆ ಸಮಾನನೇ? ದಾನವಾಂತಕನಾದ ಭಗವಂತನೇ ನಮ್ಮಿಬ್ಬರಲ್ಲಿ ಯಾರು ಹೆಚ್ಚು, ಯಾರು ಕಡಿಮೆ ಎಂಬುದನ್ನು. ಜಾನಕಿಯ ಪತಿಯಾದ ಶ್ರೀ ರಾಮನ ಸನಿಹದಲ್ಲಿ ನೀನು ಕುಲಹೀನ, ಅಹಂಕಾರಿ, ಬುದ್ಧಿಗೇಡಿಯಾದ ಹೀನ.” ಎಂದು ಕೋಪದಿಂದ ಬೈದು ಜರೆದನು.

ಕ್ಷಿತಿಯಮರರುಪನಯನದಲಿ ಸು

ವ್ರತ ಸುಭೋಜನ ಪರಮ ಮಂತ್ರಾ

ಕ್ಷತೆಗಳಲಿ ಶುಭಶೋಭನದಲಾರತಿಗೆ ಹಿರಿಯರಲಿ

ಕ್ರತುಗಳೆಡೆಯೊಳಗರಮನೆಯಲಿ

ಪ್ರತಿದಿನವು ರಂಜಿಸುತ ದೇವರಿ

ಗತಿಶಯದ ನೈವೇದ್ಯ ತಾನಿಹೆನೆಂದನಾ ವ್ರಿಹಿಗ          || ೫ ||

ಪದವಿಭಾಗ ಮತ್ತು ಪದಶಃ ಅರ್ಥ:- ಕ್ಷಿತಿಯ (ಭೂಮಿಯ) + ಅಮರರ (ದೇವತೆಗಳ) [ಕ್ಷಿತಿಯಮರರ= ಬ್ರಾಹ್ಮಣರ] + ಉಪನಯನದಲಿ ಸುವ್ರತ (ಒಳ್ಳೆಯ ವ್ರತ) ಸುಭೋಜನ (ಒಳ್ಳೆಯ ಊಟ) ಪರಮ (ಶ್ರೇಷ್ಠ) ಮಂತ್ರಾಕ್ಷತೆಗಳಲಿ ಶುಭ ಶೋಭನದಲಿ (ಸಮಾರಂಭಗಳಲ್ಲಿ) + ಆರತಿಗೆ ಹಿರಿಯರಲಿ ಕ್ರತುಗಳ + ಎಡೆಯ + ಒಳಗೆ + ಅರಮನೆಯಲಿ ಪ್ರತಿ ದಿನವು ರಂಜಿಸುತ ದೇವರಿಗೆ + ಅತಿಶಯದ (ಮಿಗಿಲು/ಶ್ರೇಷ್ಠ) ನೈವೇದ್ಯ ತಾನು + ಇಹೆನು + ಎಂದನು + ಆ ವ್ರಿಹಿಗ.

ಭಾವಾರ್ಥ:- “ಬ್ರಾಹ್ಮಣರ(ಕ್ಷಿತಿಯ=ಭೂಮಿಯ; ಅಮರರು=ದೇವತೆಗಳು) ಉಪನಯನದಲ್ಲಿ, ವ್ರತಾಚರಣೆಯಲ್ಲಿ, ಒಳ್ಳೆಯ ಭೋಜನದಲ್ಲಿ, ಶ್ರೇಷ್ಠವಾದ ಮಂತ್ರಾಕ್ಷತೆಯಲ್ಲಿ, ಶುಭ ಸಮಾರಂಭಗಳಲ್ಲಿ, ಆರತಿಗೆ ಹಿರಿಯರಲ್ಲಿ, ಯಜ್ಞಯಾಗಾದಿಗಳಲ್ಲಿ(ಕ್ರತು), ಅರಮನೆಯಲ್ಲಿ – ಹೀಗೆ ಪ್ರತಿದಿನವು ಎಲ್ಲೆಂದರಲ್ಲಿ ರಂಜಿಸುತ್ತ ದೇವರಿಗೆ ಅತಿಶಯವಾದ ನೈವೇದ್ಯದಲ್ಲಿ ತಾನಿರುವೆನು” ಎಂದು ವ್ರಿಹಿಗನು(ಭತ್ತ) ತನ್ನ ಶ್ರೇಷ್ಠತೆಯನ್ನು ಹೇಳಿಕೊಂಡನು.

ಸತ್ಯಹೀನನು ಬಡವರನು ಕ

ಣ್ಣೆತ್ತಿನೋಡೆ ಧನಾಢ್ಯರನು ಬೆಂ

ಬತ್ತಿ ನಡೆವ ಅಪೇಕ್ಷೆ ನಿನ್ನದು ಹೇಳಲೇನದನು

ಹೆತ್ತ ಬಾಣಂತಿಯರು ರೋಗಿಗೆ

ಪತ್ಯ ನೀನಹೆ ಹೆಣದ ಬಾಯಿಗೆ

ತುತ್ತು ನೀನಹೆ ನಿನ್ನ ಜನ್ಮ ನಿರರ್ಥಕರವೆಂದ   || ೬ ||

ಪದವಿಭಾಗ ಮತ್ತು ಪದಶಃ ಅರ್ಥ:- ಸತ್ಯಹೀನನು ಬಡವರನು ಕಣ್ಣೆತ್ತಿ ನೋಡೆ ಧನಾಡ್ಯರನು(ಧನವಂತರನ್ನು) ಬೆಂಬತ್ತಿ (ಹಿಂಬಾಲಿಸಿ) ನಡೆವ ಅಪೇಕ್ಷೆ ನಿನ್ನದು ಹೇಳಲು + ಏನು + ಅದನು ಹೆತ್ತ ಬಾಣಂತಿಯರು ರೋಗಿಗೆ ಪತ್ಯ ನೀನು + ಇಹೆ (ಇರುವೆ) ಹೆಣದ ಬಾಯಿಗೆ ತುತ್ತು ನೀನು + ಇಹೆ (ಇರುವೆ) ನಿನ್ನ ಜನ್ಮ ನಿರರ್ಥಕರವು + ಎಂದ.

ಭಾವಾರ್ಥ:- ವ್ರಿಹಿಗನ(ಭತ್ತದ) ಮಾತನ್ನು ಕೇಳಿದ ರಾಗಿ ಸುಮ್ಮನಿರದೆ ಅದಕ್ಕೆ ಹೀಗೆ ಪ್ರತ್ಯುತ್ತರ ನೀಡುತ್ತದೆ: “ನೀನು ಸತ್ಯಹೀನನಾಗಿರುವೆ, ಬಡವರನ್ನು ಕಣ್ಣೆತ್ತಿ ನೋಡುವುದಿಲ್ಲ, ಶ್ರೀಮಂತರನ್ನು ಮಾತ್ರ ಹಿಂಬಾಲಿಸಿ ಹೋಗುವ ಅಪೇಕ್ಷೆ ನಿನ್ನದು. ಹೆತ್ತ ಬಾನಂತಿಯರು ಹಾಗೂ ರೋಗಿಗಳಿಗೆ ನೀನು ಪತ್ಯವಾಗಿರುವೆ ಅಲ್ಲದೆ ಹೆಣದ ಬಾಯಿಗೆ ತುತ್ತಾಗುವೆ. ನಿನ್ನ ಜನ್ಮ ವ್ಯರ್ಥವಾದುದು.” ಎಂದು ರಾಗಿ ಭತ್ತವನ್ನು ಜರೆಯಿತು. 

ಮಳೆದೆಗೆದು ಬೆಳೆಯಡಗಿ ಕ್ಷಾಮದ

ವಿಲಯಕಾಲದೊಳನ್ನವಿಲ್ಲದೆ

ಅಳಿವ ಪ್ರಾಣಿಗಳಾದರಿಸಿ ಸಲಹುವೆನು ಜಗವರಿಯೆ

ಎಲವೊ ನೀನೆಲ್ಲಿಹೆಯೊ ನಿನ್ನಯ

ಬಳಗವದು ತಾನೆಲ್ಲಿಹುದು ಈ

ಹಲವು ಹುಲು ಧಾನ್ಯಗಳೆನಗೆ ಸರಿದೊರೆಯೆ ಕೇಳೆಂದ  || ೭ ||

ಪದವಿಭಾಗ ಮತ್ತು ಪದಶಃ ಅರ್ಥ:- ಮಳೆ + ತೆಗೆದು(ಹೋಗಿ/ಇಲ್ಲದಾಗಿ) ಬೆಳೆಯು + ಅಡಗಿ ಕ್ಷಾಮದ ವಿಲಯ ಕಾಲದೊಳ್(ವಿನಾಶ ಕಾಲದಲ್ಲಿ) + ಅನ್ನ + ಇಲ್ಲದೆ ಅಳಿವ ಪ್ರಾಣಿಗಳ + ಆದರಿಸಿ ಸಲಹುವೆನು ಜಗವು + ಅರಿಯೆ (ತಿಳಿಯಲು) ಎಲವೊ ನೀನು + ಎಲ್ಲಿ + ಇಹೆಯೊ (ಇರುವೆಯೊ) ನಿನ್ನಯ ಬಳಗವದು ತಾನು + ಎಲ್ಲಿ + ಇಹುದು (ಇರುವುದು) ಈ ಹಲವು ಹುಲು(ಹೀನ/ಅಲ್ಪ) ಧಾನ್ಯಗಳು + ಎನಗೆ ಸರಿದೊರೆಯೆ (ಸರಿಸಮಾನವೇ) ಕೇಳು + ಎಂದ.

ಸಾರಾಂಶ:- ರಾಗಿಯು ಮುಂದುವರೆದು ವ್ರಿಹಿಗನನ್ನು ಕುರಿತು “ಈ ಜಗತ್ತಿಗೆಲ್ಲ ತಿಳಿದಿರುವಂತೆ; ಮಳೆ ಹೋಗಿ, ಬೆಳೆ ಇಲ್ಲದಂತಾಗಿ, ಘೋರ ಬರಗಾಲದಲ್ಲಿ ಅನ್ನವಿಲ್ಲದೆ ನಾಶವಾಗುವ ಪ್ರಾಣಿಗಳನ್ನು ನಾನು ಆದರಿಸಿ ಕಾಪಾಡುತ್ತೇನೆ. ಎಲವೋ ಆಗ ನೀನೆಲ್ಲಿರುವೆಯೋ ನಿನ್ನ ಬಳಗ ಎಲ್ಲಿರುವುದೋ. ಈ ಹಲವು ಹುಲು ಧಾನ್ಯಗಳು ನನಗೆ ಸರಿಸಮಾನವೇ? ಕೇಳು.” ಎಂದು ಹೇಳುತ್ತದೆ.

ಮಸೆದುದಿತ್ತಂಡಕ್ಕೆ ಮತ್ಸರ

ಪಿಸುಣ ಬಲರತಿ ನಿಷ್ಠುರರು ವಾ

ದಿಸಲು ಕಂಡನು ನೃಪತಿ ಮನದಲಿ ನೋಡಿ ನಸುನಗುತ

ಹಿಸುಣರಿವದಿರ ಮತ್ಸರವ ಮಾ

ಣಿಸುವ ಹದನೇನೆನುತ ಯೋಚಿಸಿ

ದ ಸುರ ಮುನಿಪರ ನೋಡೆ ಗೌತಮ ಮುನಿಪನಿಂತೆಂದ || ೮ ||

ಪದವಿಭಾಗ ಮತ್ತು ಪದಶಃ ಅರ್ಥ:- ೧. ಮಸೆದುದು (ತಿಕ್ಕಾಟವಾಯಿತು) + ಇತ್ತಂಡಕ್ಕೆ(ಎರಡು ತಂಡಕ್ಕೆ/ಗುಂಪಿಗೆ) ಮತ್ಸರ ಪಿಸುಣ(ಚಾಡಿಕೋರ) ಬಲರು + ಅತಿ ನಿಷ್ಠುರರು ವಾದಿಸಲು ಕಂಡನು ನೃಪತಿ ಮನದಲಿ ನೋಡಿ ನಸು ನಗುತ ಹಿಸುಣರ್ + ಇವದಿರ (ಇವರ) ಮತ್ಸರವ ಮಾಣಿಸುವ (ಕೊನೆಯಾಗಿಸುವ/ನಾಶಮಾಡುವ) ಹದನ(ರೀತಿ) + ಏನು + ಎನುತ ಯೋಚಿಸಿದ ಸುರ ಮುನಿಪರ(ದೇವತೆಗಳ ಮುನಿ/ಗೌತಮ) ನೋಡೆ ಗೌತಮ ಮುನಿಪನು + ಇಂತು + ಎಂದ.

ಸಾರಾಂಶ:- ಚಾಡಿಕೋರರು, ಬಹಳ ನಿಷ್ಠುರ ಮನೋಭಾವದವರಾಗಿದ್ದ ಎರಡೂ ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು ತಿಕ್ಕಾಟವಾಯಿತು. ಅದನನ್ನು ನೋಡಿದ ರಾಜನು ನಸುನಗುತ್ತಾ “ಇವರೆಲ್ಲಾ ಪಿಸುಣರು(ಚಾಡಿಕೋರರು). ಇವರೆಲ್ಲರ ಮತ್ಸರವನ್ನು ಕೊನೆಯಾಗಿಸುವುದು ಹೇಗೆ?” ಎಂದು ಯೋಚಿಸುತ್ತಾ ಗೌತಮ ಮುನಿಗಳ ಕಡೆ ನೋಡುತ್ತಾನೆ. ರಾಮನ ಪ್ರಶ್ನಾರ್ಥಕ ನೋಟವನ್ನು ನೋಡಿದ ಗೌತಮ ಮುನಿಯು ಈ ಮುಂದಿನಂತೆ ಹೇಳುತ್ತಾನೆ.

ಅರಸುಗಳು ನಾವೆಲ್ಲ ಭೂಮೀ

ಸುರರುನೆರೆದಿಹ ದಾನವರು ವಾ

ನರರು ನಮಗೀ ನ್ಯಾಯವನು ಪರಿಹರಿಸಲಳವಲ್ಲ

ಕರಸುವೆವು ಹರಿಹರವಿರಂಚಾ

ದ್ಯರನಯೋಧ್ಯೆಗೆ ಅವರ ಗುಣವಾ

ಧರಿಸಿ ಪೇಳ್ವರು ನಯದೊಳೆಂದನುರಾಮ ನಸುನಗುತ            || ೯ ||

ಪದವಿಭಾಗ ಮತ್ತು ಪದಶಃ ಅರ್ಥ :- ಅರಸುಗಳು ನಾವೆಲ್ಲ ಭೂಮೀಸುರರು(ಬ್ರಾಹ್ಮಣರು) ನೆರೆದಿಹ ದಾನವರು (ರಾಕ್ಷಸರು) ವಾನರರು ನಮಗೆ + ಈ ನ್ಯಾಯವನು ಪರಿಹರಿಸಲು(ಬಗೆಹರಿಸಲು) + ಅಳವಲ್ಲ(ಸಾಧ್ಯವಿಲ್ಲ) ಕರಸುವೆವು ಹರಿ(ವಿಷ್ಣು) ಹರ (ಈಶ್ವರ) ವಿರಂಚಿ (ಬ್ರಹ್ಮ) + ಆದ್ಯರನು (ಮೊದಲಾದವರನ್ನು) + ಅಯೋಧ್ಯೆಗೆ ಅವರ ಗುಣವ + ಆಧರಿಸಿ ಪೇಳ್ವರು (ಹೇಳುವರು) ನಯದೊಳ್ (ವಿವೇಕದಿಂದ/ನ್ಯಾಯವಾಗಿ) + ಎಂದನು ರಾಮ ನಸು ನಗುತ.

ಭಾವಾರ್ಥ: “ನಿಮ್ಮ ನ್ಯಾಯ ತೀರ್ಮಾನ ಮಾಡಲು, ಅರಸರಾದ ನಾವಾಗಲೀ ಭೂಸುರರು ಎನಿಸಿದ ಬ್ರಾಹ್ಮಣರಿಂದಾಗಲೀ ರಾಕ್ಷಸರಿಗಾಗಲೀ ವಾನರರಿಗಾಗಲೀ ಸಾಧ್ಯವಿಲ್ಲ. ಆದ್ದರಿಂದ ಬ್ರಹ್ಮ-ವಿಷ್ಣು-ಮಹೇಶ್ವರರೇ ಮೊದಲಾದವರನ್ನು ಕರೆಸುತ್ತೇವೆ. ಅವರಾದರೆ ಗುಣವನ್ನು ಆಧರಿಸಿ ವಿವೇಕದಿಂದ ನಿಮ್ಮ ನ್ಯಾಯ ತೀರ್ಮಾನ ಮಾಡುತ್ತಾರೆ” ಎಂದು ರಾಮನು ನಸುನಗುತ್ತ ಹೇಳಿದನು.(ವ್ಯಂಗವಾಗಿ)

ಪರಮ ಧಾನ್ಯದೊಳಿಬ್ಬರೇ ಇವ

ರಿರಲಿ ಸೆರೆಯೊಳಗಾರು ತಿಂಗಳು

ಹಿರಿದು ಕಿರಿದೆಂಬಿವರ ಪೌರುಷವರಿಯಬಹುದಿನ್ನು

ಪುರಕೆ ಗಮನಿಸಿ ನಾವು ನಿಮ್ಮನು

ಕರೆಸುವೆವು ಕೇಳೆನುತಯೋಧ್ಯಾ

ಪುರಿಗೆ ಪಯಣವ ಮಾಡಹೇಳಿದನಾವಿಭೀಷಣಗೆ          || ೧೦ ||

ಪದವಿಭಾಗ ಮತ್ತು ಪದಶಃ ಅರ್ಥ :- ಪರಮ(ಶ್ರೇಷ್ಠ) ಧಾನ್ಯದೊಳ್ (ಧಾನ್ಯದಲ್ಲಿ) + ಇಬ್ಬರೇ ಇವರು + ಇರಲಿ ಸೆರೆಯೊಳಗೆ + ಆರು ತಿಂಗಳು ಹಿರಿದು ಕಿರಿದು + ಎಂಬ + ಇವರ ಪೌರುಷವ + ಅರಿಯಬಹುದು + ಇನ್ನು ಪುರಕೆ ಗಮನಿಸಿ ನಾವು ನಿಮ್ಮನು ಕರೆಸುವೆವು ಕೇಳು + ಎನುತ + ಅಯೋಧ್ಯಾ ಪುರಿಗೆ (ಪಟ್ಟಣಕ್ಕೆ) ಪಯಣವ (ಪ್ರಯಾಣವ) ಮಾಡ (ಮಾಡಲು) ಹೇಳಿದನು + ಆ + ವಿಭೀಷಣಗೆ.

ಭಾವಾರ್ಥ: ಶ್ರೀರಾಮನು ಅಲ್ಲಿ ನೆರೆದಿದ್ದ ಧಾನ್ಯಗಳ ವಾದವಿವಾದಗಳನ್ನು ಗಮನಿಸಿದ ಮೇಲೆ ಹೀಗೆ ತೀರ್ಪು ನೀಡಿದನು. “ಕೇಳಿ, ಶ್ರೇಷ್ಠವಾದ ಧಾನ್ಯಗಳಲ್ಲಿ ಇವರಿಬ್ಬರೇ ಇರಲಿ. ಆರು ತಿಂಗಳು ಸೆರೆಯಲ್ಲಿ ಹಾಕಿದರೆ; ಹಿರಿದು ಕಿರಿದೆಂದು ವಾದಿಸುವ ಇವರ ಪೌರುಷವನ್ನು ತಿಳಿಯಬಹುದು. ಇನ್ನು ನಾವು ಅಯೋಧ್ಯಾ ಪಟ್ಟಣಕ್ಕೆ ಹೋಗುತ್ತೇವೆ. ಆ ನಂತರ ನಿಮ್ಮ ಸ್ಥಿತಿಯನ್ನು ಗಮನಿಸಿ ಕರೆಸಿಕೊಳ್ಳುತ್ತೇವೆ.” ಎಂದು ಹೇಳಿ ಅಯೋಧ್ಯಾ ಪಟ್ಟಣಕ್ಕೆ ಪ್ರಯಾಣಮಾಡಲು ವಿಭೀಷಣನಿಗೆ ಹೇಳಿದನು.

ಪರಿಕಲ್ಪನೆ ೧

ಚಟುವಟಿಕೆ-೧

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಚಟುವಟಿಕೆ-೨

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಪರಿಕಲ್ಪನೆ ೨

ಚಟುವಟಿಕೆ-೧

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಭಾಷಾ ವೈವಿಧ್ಯತೆಗಳು

ಶಬ್ದಕೋಶ

ವ್ಯಾಕರಣ/ಅಲಂಕಾರ/ಛಂದಸ್ಸು

ಮೌಲ್ಯಮಾಪನ

ಭಾಷಾ ಚಟುವಟಿಕೆಗಳು/ ಯೋಜನೆಗಳು

ಪಠ್ಯ ಬಗ್ಗೆ ಹಿಮ್ಮಾಹಿತಿ