ಮಾಡ್ಯೂಲ್ ೭- ಪುರುಷ ಪ್ರಧಾನತೆ ಭಾಗ ೨

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಉದ್ದೇಶ

  • ಪುರುಷಪ್ರಧಾನತೆ ಎಂಬ ವ್ಯವಸ್ಥೆ ಹೇಗೆ ಕೆಲಸಮಾಡುತ್ತದೆ, ಈ ವ್ಯವಸ್ಥೆ ಯಾಕಿದೆ, ಇದರಿಂದ ಯಾರಿಗೆ ಲಾಭ? - ಇದು ಶಕ್ತಿಯುತವಾಗಿ ಮುಂದುವರೆಯಲು ಪೂರಕವಾದ ಅಂಶಗಳೇನು? - ರೂಢಾವಳಿಗಳು, ಇತ್ಯಾದಿಗಳ ಬಗ್ಗೆ ಮಾತನಾಡುವುದು
  • ಮಾಧ್ಯಮ ಮತ್ತು ಮಾರುಕಟ್ಟೆಗಳು ಹೇಗೆ ಹೇಗೆ ಪರುಷ ಪ್ರಧಾನತೆಯ ಭಾಗ ಎನ್ನುವುದರ ಬಗ್ಗೆ ಮಾತನಾಡುವುದು.

ಪ್ರಕ್ರಿಯೆ

  • ಕುಶಲೋಪರಿಯ ಮೂಲಕ ನಮ್ಮ ಮಾತುಕತೆಯನ್ನು ಶುರು ಮಾಡುವುದು.
  • ಕಟ್ಟುಪಾಡುಗಳನ್ನು ಜ್ಞಾಪಿಸುವುದು - ಅವರು ಹೇಳಿಲ್ಲ ಅಂದರೆ ನಾವೇ ಒಂದೊಂದಾಗಿ ಹೇಳುವುದು.  
  1. ಏನಾದ್ರೂ ಮಾತಾಡ್ಬೇಕಿದ್ರೆ ಕೈ ಎತ್ತಿ ಮಾತಾಡೋಣ
  2. ಬೇರೆಯವರು ಮಾತಾಡ್ತಿದ್ರೆ ಅವರನ್ನ interrupt ಮಾಡೋದಾಗ್ಲಿ, ನಗೋದು, ಅಣಕ ಮಾಡೋದಾಗ್ಲಿ ಮಾಡೋದು ಬೇಡ
  3. ಎಲ್ಲಾರೂ ಭಾಗವಹಿಸಬೇಕು
  4. ನೀವು ಗಲಾಟೆ ಮಾಡ್ತ ಇದ್ರೆ ನಾವು ಸೈಲೆಂಟ್‌ ಆಗ್ತೀವಿ. ಆಗ್ಲೂ ಮಾತಾಡ್ತ ಇದ್ರೆ ನಾವು ವಾಪಸ್‌ ಹೊರಟು ಹೋಗ್ತೀವ
  5. ಫೋಟೋ ತೆಗೀವಾಗ ಫೋಸ್‌ ಕೊಡಬೇಡಿ
  6. ನಾವು ನಿಮಗೆ ಎಷ್ಟು ಮರ್ಯಾದೆ  ಕೊಡ್ತಿವೋ ನಿವು ನಮಗೆ ಅಷ್ಟೇ ಮರ್ಯಾದೆ  ಕೊಡಬೇಕು

ಹಿಂದಿನ ವಾರ ಏನು ಮಾತಾಡಿದ್ವಿ ಎಂದು ನೆನಪು ಮಾಡುವುದು.

ಚಟುವಟಿಕೆ

ಒಂದು ಗಾದೆಯನ್ನು ಫೆಸಿಲಿಟೇಟರ್‌ಗಳು ಹೇಳುವುದು. ಉಳಿದ ಫೆಸಿಲಿಟೇಟರ್‌ಗಳಲ್ಲಿ ಒಬ್ಬರು ಅದನ್ನು ಒಪ್ಪುವುದಿಲ್ಲ ಮತ್ತು ಯಾಕೆ ಎಂದು ಹೇಳುವರು.

ಅಳೋ ಗಂಡನ್ನ, ನಗುವ ಹೆಂಗ್ಸನ್ನ ನಂಬಬಾರದು  - Shreyas

  • ಇದನ್ನು ನಾನು ಒಪ್ಪುವುದಿಲ್ಲ ಯಾಕೆಂದರೆ ನಗು ಅಳು ಎರಡೂ ಮನುಷ್ಯ ಸಹಜವಾದ ಭಾವನೆಗಳು. ಅದು ದುಃಖ ಆದಾಗ ಗಂಡುಮಕ್ಕಳು ಅಳುವುದು ಹಾಗು ಖುಷಿಯಾದಾಗ ಹೆಣ್ಣು ಮಕ್ಕಳು ನಗುವುದು ಎರಡೂ ಸಹಜವಾದವುಗಳು. ಇವುಗಳನ್ನು ಗಂಡು ಅಥವಾ ಹೆಣ್ಣು ಮಕ್ಕಳು ಮಾಡಬಾರದು ಎಂದು ಹತ್ತಿಕ್ಕುವಂತೆ ಮಾಡಿರುವುದು ಪುರುಷ ಪ್ರಧಾನ ವ್ಯವಸ್ಥೆ. ನಾವು ಒಪ್ಪಿಕೊಳ್ಳಬೇಕಿಲ್ಲ, ಒಪ್ಪಬಾರದು ಕೂಡ.

ಗಂಡು ಕೂತು ಕೆಟ್ಟ, ಹೆಣ್ಣು ತಿರುಗಿ ಕೆಟ್ಟಳು - Anusha

  • ಇದನ್ನೂ ನಾನು ಒಪ್ಪುವುದಿಲ್ಲ. ನನ್ನ ಆಸೆ, ಸಾಮರ್ಥ್ಯ, ಅಗತ್ಯತೆಗಳಿಗೆ ಅನುಗುಣವಾಗಿ ನಾನು ಮನೇನಲ್ಲಿ ಕೂರ್ತೀನಿ ಅಥವಾ ಆಚೆ ಹೋಗಿ ಓಡಾಡುತ್ತೀನಿ. ಅದಕ್ಕೆ ನಾನು ಹೆಣ್ಣು ಗಂಡು ಎನ್ನುವುದು ಮುಖ್ಯ ಆಗಲ್ಲ.
  • ಅದರಲ್ಲೂ ಇವಾಗ ಎಷ್ಟೋ ಜನ ಹೆಣ್ಣುಮಕ್ಕಳು ಹೊರಗಡೆ ಹೋಗಿ ಕೆಲಸ ಮಾಡ್ತಿದಾರೆ, ಜೊತೆಗೆ ಗಂಡುಮಕ್ಕಳು ಕೂಡ ಮನೇನಲ್ಲೇ ಹೆಚ್ಚು ಇರುವ ಸಂದರ್ಭಗಳಿವೆ. ಅಂದರೆ ಎಲ್ಲರೂ  ಎಲ್ಲವನ್ನೂ ಮಾಡೋಕೆ ಸಾಧ್ಯ. ಆದ್ದರಿಂದ ಹೀಗೆ ಹೇಳೋದು ಹಾಸ್ಯಾಸ್ಪದ
  • ಗಂಡು ಹೀಗಿರಬೇಕು ಹೆಣ್ಣು ಹೀಗಿರಬೇಕು ಎಂದು ಹೇಳುವುದು ಪುರುಷ ಪ್ರಧಾನ ವ್ಯವಸ್ಥೆ.  

ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ - Chandani

  • ಇದನ್ನ ನಾನು ಖಂಡಿತ ಒಪ್ಪುವುದಿಲ್ಲ. ಕುಟುಂಬ ಅಂತ ಅಂದ ಮೇಲೆ ಮಗ ಮಗಳು ಇಬ್ಬರೂ ಒಂದೇ. ಸರ್ಕಾರ ಕೂಡ ಇಬ್ಬರಿಗೂ ಸಮನಾದ ಹಕ್ಕುಗಳನ್ನು ನೀಡಿದೆ. ಮದುವೆಯಾದ ತಕ್ಷಣ ಅವಳನ್ನು ಕುಟುಂಬದಿಂದ ಹೊರಹಾಕುವುದು ಅವಳ ಹಕ್ಕುಗಳನ್ನು ಕಿತ್ತುಕೊಂಡಂತೆ ಆದ್ದರಿಂದ ನಾನು ಇದನ್ನು ಒಪ್ಪಲ್ಲ.
  • ಹೀಗೆ ಹೆಣ್ಣಿನ ಹಕ್ಕನ್ನು ಕಸಿದುಕೊಂಡು ಗಂಡಿಗೆ ಮಣೆ ಹಾಕುವ ವ್ಯವಸ್ಥೆಯೇ ಪುರುಷ ಪ್ರಧಾನ ವ್ಯವಸ್ಥೆ. (5 ನಿಮಿಷ)

ಇವುಗಳ ಬಗ್ಗೆ ನೀವು ಏನಂತೀರ ಎಂದು ಅಲ್ಲಿರುವ ಕಿಶೋರಿಯರನ್ನು ಕೇಳುವುದು. ನಾವು ಹೇಳಿದ್ದನ್ನು ಒಪ್ಪದೇ ಇರುವವರು ಯಾರಾದ್ರು ಇದ್ದರೆ ಹೇಳಿ ಎಂದು ಕಿಶೋರಿಯರಿಗೆ ಮಾತನಾಡಲು ಕೇಳುವುದು. ( 5 ನಿಮಿಷ)

ಇದಕ್ಕೆಲ್ಲ ಏನು ಕಾರಣ, ಈ ವ್ಯವಸ್ಥೆಗೆ ಒಂದು ಹೆಸರಿದೆ ಅಂತ ಮಾತಾಡ್ಕೊಂಡ್ವಲ್ಲ, ಅದು ಏನು - “ಪುರುಷಪ್ರಧಾನತೆ” ಎಂದು ಜೋರಾಗಿ ಹೇಳಿಸುವುದು

ಪುರುಷ ಪ್ರಧಾನತೆ ಅಂದರೆ ಪುರುಷರಿಗೇ ಹೆಚ್ಚಿನ ಅಧಿಕಾರ, ಅವಕಾಶ, ಮನ್ನಣೆ ಕೊಡುವ ವ್ಯವಸ್ಥೆ. ಇದರಲ್ಲಿ ಹೆಣ್ಣು ಮಕ್ಕಳನ್ನು ಕಡೆಗಣಿಸಲಾಗುತ್ತದೆ ಇದಾದ ನಂತರ media and market and patriarchy DST  ಯನ್ನು ತೋರಿಸುವುದು. ಪ್ರತಿ ಸೆಕ್ಷನ್‌ನ ನಂತರ ಆ ಆ ವಿಷಯಗಳ ಬಗ್ಗೆ ವೀಡಿಯೋ ಪಾಸ್‌ ಮಾಡಿ  ಮಾತನಾಡುವುದು. ಅದೇ ರೀತಿ ಫಿಲ್ಮ್‌ಗಳಲ್ಲಿ ಏನಾಗುತ್ತೆ ಅಂತ ನೋಡೋಣ್ವ

ಬೇರೆ ಬೇರೆ ರೀತಿಯ ಕ್ಲಿಪ್‌ಗಳನ್ನು ತೋರಿಸುವುದು. ಇದರಲ್ಲಿ ಹೀರೋ ಏನು ಮಾಡ್ತಿದ್ದ, ಹೀರೋಯಿನ್‌ ಏನು ಮಾಡ್ತಿದ್ಲಯ ಎಲ್ಲವನ್ನೂ ಗಮನಿಸೋಕೆ ಹೇಳೋದು.

ಎಲ್ಲ ಕ್ಲಿಪ್‌ಗಳನ್ನೂ ತೋರಿಸಿಯಾದ ನಂತರ ಅವರಿಗೆ ಏನನ್ಸ್ತು ಅಂತ ಕೇಳುವುದು. ತಮ್ಮ ಫೇವರೆಟ್‌ಗಳನ್ನ ನೋಡಿ ಅವರಿಗೆ ಖುಷಿಯಾಗಿರಬಹುದು,

ಫಿಲಮ್ ಗಳ ಮುಖಾಂತರ ಆಗೋದು ಅಥವ ಆಗ್ತಿರೋದು ಅಥವ ಆಗಿರೋದು ಏನು ?

  1. its there twice in the audio - ಪ್ರೀತಿಯ ಹೆಸರು ಹೇಳಿ, ಫಾಲೋ ಮಾಡಿ, ಕಿರಿಕಿರಿ ಮಾಡಿ, ಹಿಂಸೆ ಮಾಡೋದು ಓಕೆ ಅಂತ ಹುಡುಗರಿಗೆ ಅನ್ನಿಸೋ ಹಾಗೆ ಮಾಡಿರೋದು (ಖರಾಬು ಹಾಡು ಕಣ್ಣಮುಂದೆ ತಂದ್ಕೊಂಡ್ರೆ, ಇದೇನು ಪಾಯಿಂಟ್ ಅಂತ ಗೊತ್ತಾಗುತ್ತೆ)
  2. ಹೀರೋ ಪ್ರೊಟೆಕ್ಷನ್ ಅಡಿಯಲ್ಲಿ ಮಾತ್ರ ಹೀರೋಯಿನ್ ಸೇಫ್ ಅನ್ನೋ ಭಾವನೆ ಹುಟ್ಟಾಕಿರೋದು - ಅಂದ್ರೆ ನಿಜ ಜೀವನದಲ್ಲಿ ಪುರುಷ ಪ್ರಧಾನತೆಯಿಂದಾಗಿ ಹೆಣ್ಣು ಮಕ್ಕಳನ್ನ ಗಂಡು ಮಕ್ಕಳ ಜೊತೆಯಿಲ್ಲದೇ ಇದ್ದರೆ ಕಳ್ಸಲ್ವಲ್ಲ ಹಾಗೆ
  3. ಪ್ರೀತಿ ಮಾಡೋದಿಕ್ಕೆ ಹಾಸ್ಯಾಸ್ಪದವಾದ ಕಾರಣಗಳನ್ನ ಒಪ್ಕೊಳ್ಳೋ ಹಾಗೆ ಮತ್ತೆ ಅದನ್ನ ನಿಜ ಜೀವನದಲ್ಲೂ ಹುಡುಗರು, ಹುಡುಗೀರು ಫಾಲೋ ಮಾಡೋ ಹಾಗೆ ಮಾಡಿರೊದು. ಟ್ರಾಫಿಕ್ ಜಾಮಲ್ಲಿ ಪಾಸ್ ಆಗ್ತಿರೋ ಬಸ್ಸಲ್ಲಿರೋ ಹುಡ್ಗೀನ ಕಿಟ್ಕಿ ಮೂಲಕ ನೋಡಿ ನೋಡಿ ಪ್ರೀತ್ಸೋದು, ನಿಂಗೋಸ್ಕರ ನಾನು ಸಾಯಕ್ಕೂ ರೆಡಿ ಅಂತ ರಕ್ತದಲ್ಲಿ ಲೆಟರ್ ಬರಿಯೋದು ಇತ್ಯಾದಿ
  4. ಹಿಂಸೆ ಮತ್ತೆ ದೌರ್ಜನ್ಯನ ಸರ್ವೇ ಸಾಮಾನ್ಯ ಅನ್ನೋ ಹಾಗೆ ತೋರ್ಸೋದು. ವಿಲನ್ ಕೈಲಿ ಹೆಣ್ಣು ಮಕ್ಕಳನ್ನ ಹೊಡೆಸೋದು, ಹೀರೋನ ಮಾನ ಅವಮಾನಗಳಿಗಾಗಿ ಅವನ ಮನೆಯ ಹೆಣ್ಣು ಮಕ್ಕಳನ್ನ ಕಿಡ್ನ್ಯಾಪ್ ಮಾಡ್ಸೋದು ಇನ್ನೂ ಇನ್ನೂ ಏನೇನೋ
  5. ಈಗಾಗಲೇ ಇರುವಂತಹ ಕಟ್ಟು ಪಾಡುಗಳನ್ನ ಕಮ್ಮಿ ಮಾಡೋ ಕಡೆ ಅಲ್ಲದೆ, ಜಾಸ್ತಿ ಮಾಡೋದು. ಸಾಮಾಜಿಕ ಪಾತ್ರಗಳು ಮತ್ತು ಅವುಗಳ ಜವಾಬ್ದಾರಿಗಳನ್ನ ಗಟ್ಟಿ ಮಾಡೋದು. ಇಲ್ಲೂ ಹೆಣ್ಣು ಮಕ್ಕಳು ನಿರ್ಧಾರ ಮಾಡಲ್ಲ, ಅಕ್ಕ ಸೀನಲ್ಲಿರಲ್ಲ, ಹಾಡುಗಳಾದ್ಮೇಲೆ ಹೀರೋಯಿನ್ ಫಿಲಮ್ಮಲ್ಲಿರಲ್ಲ ಫಿಲಮ್ಮಿನ ಜವಾಬ್ದಾರಿ ಮತ್ತೆ ಕಥೆ ಹೀರೋದ್ದೆ.
  6. ಆಮೇಲೆ ಗಂಡು ಅಂದ್ರೆ ಹೀಗೇ ಇರಬೇಕು ಅಂದ್ರೆ ಪೌರುಷವಂತ, ಜವಾಬ್ದಾರಿ ಹೊರುವವನು ಮತ್ತೆ ರಕ್ಷಕ, ಹೆಣ್ಣು ಅಂದರೆ ಹೀಗೇ ಇರ್ಬೇಕು ಅಂದ್ರೆ ಸುಂದರಿ, ಸುಶೀಲೆ ಮತ್ತು ಸಹನಶೀಲೆ.
  7. ಇನ್ನೂ ನಿಮಗೆ ಶಾಕ್ ಆಗೋ ವಿಷಯ ಇನ್ನೊಂದಿದೆ, ಮನೆಯಲ್ಲಿ ನಾವು ಯಾವ ಥರ ಬಟ್ಟೆ ಹಾಕ್ಕೋಬೇಕು, ಹೇಗಿದ್ರೆ ಹೊರಗೆ ಹೋಗಬಹುದು ಅಂತ ಹೇಳೋವ್ರು, ಮತ್ತೆ ಸ್ಲೀವ್ ಲೆಸ್ ಹಾಕ್ಕೊಳಕ್ಕೆ, ನಮಗಿಷ್ಟ ಬಂದಹಾಗೆ ಹೇರ್ ಸ್ಟೈಲ್ ಮಾಡ್ಕೊಳಕ್ಕೆ ಬಿಡದೇ ಇರೊ ನಮ್ಮ ಸಮಾಜದ ಜನರು - ಈ ಫಿಲಮ್ಮುಗಳಲ್ಲಿ ಬರೋ ಐಟಮ್ ಸಾಂಗ್ಸ್ ನೋಡಿ ಖುಷಿ ಪಡೋದು, ಶಿಳ್ಳೆ ಹಾಕೋದು, ಆ ಹೀರೋಯಿನ್ಸ್ ಬಗ್ಗೆ ಪೋಲಿ ಕಾಮೆಂಟ್ಸ್ ಮಾಡೋದು ಮಾಡ್ತಾರಲ್ಲ, ಇದ್ರಿಂದಾನೂ ಇರ್ಬೋದಲ್ವ, ನಮ್ಮನೆ ಮಕ್ಳನ್ನ ಬಿಟ್ಟು ಎಲ್ಲಾ ಹೆಣ್ಮಕ್ಳನ್ನ ರೇಗುಸ್ಬೋದು ಅಂತ ಮೆಜಾರಿಟಿ ಗಂಡು ಮಕ್ಕಳು ಅಂದ್ಕೊಂಡಿರೋದು?

ಇನ್ಮುಂದೆ ಗಮನಿಸಿ, ಕಥೆ ಯಾವುದೇ ಇರಲಿ, ಹೀರೋಯಿನ್ ಗೆ ಮತ್ತೆ ಉಳಿದ ಹೆಣ್ಣು ಪಾತ್ರಗಳಿಗೆ ಫಿಲಮ್ಮಲ್ಲಿ ಎಷ್ಟು ನಿಮಿಷದ ಕಥೆ ಬರ್ದಿದಾರೆ, ಹಿಂಸೆ ಮತ್ತು ದೌರ್ಜನ್ಯದ ಫೈಟಿಂಗ್ ಸೀನುಗಳಿಗೆ ಎಷ್ಟು ಸಮಯ ಕೊಟ್ಟಿದ್ದಾರೆ, ಐಟಮ್ ಸಾಂಗ್ ನ ಹಾಡಿನಲ್ಲಿ ಏನ್ ಹೇಳ್ತಿದಾರೆ, ಆ ಸಾಂಗ್ನಲ್ಲಿರೋ ಹುಡುಗೀಗೆ ಯಾವ ಥರ ಬಟ್ಟೆ ಹಾಕ್ಸಿದಾರೆ ಮತ್ತೆ ಆ ಹಾಡು ಬಂದಾಗ ಹುಡುಗರು ಏನ್ಮಾಡ್ತಾರೆ ಅಂತ.

ಇನ್ನ ಟೀ.ವೀ ವಿಷಯಕ್ಕೆ ಬರೋಣ.

ಇಲ್ಲಿ ಆಗೋದು ನಿಜಕ್ಕೂ ಹೆಣ್ಣು ಮಕ್ಕಳ ಸ್ಥಾನಮಾನ ಕೆಳಕ್ಕೆ ತರೋಂತದ್ದೇ. ಸೀರಿಯಲ್ ಗಳಲ್ಲಿ ಕಥೆ ಎಳೀತಾರೆ, ತುಂಬಾ ಜಾಹೀರಾತು ಬರುತ್ತೆ ಅನ್ನೋದೆಲ್ಲ ಪಕ್ಕಕ್ಕಿಟ್ರೇ, ಇದ್ರಲ್ಲಿ ಯಾವಾಗ್ಲೂ ಹೀರೋ ಕೋಟ್ಯಾಧಿಪತಿ, ಹೀರೋಯಿನ್ ಬಡ ಅಳುಮುಂಜಿ ಹೆಣ್ಣು ಮಗಳಾಗಿರ್ತಾಳೆ. ಮತ್ತೆ ಈ ಕಥೆಗಳಲ್ಲಿ ಕೇಡಿಗಳು ಅಥವ ವಿಲನ್ ಯಾವಾಗ್ಲೂ ಆಸ್ತಿಯ ಬಗ್ಗೆನೋ ಅಥವ ಹೀರೋನ ಪ್ರೀತಿಗಾಗೋ ಏನು ಬೇಕಾದರೂ ಮಾಡೋದಿಕ್ಕೆ ರೆಡಿ ಇರುವ ಹೆಣ್ಣುಮಕ್ಕಳೇ ಆಗಿರುತ್ತಾರೆ. ಇವರು ವಿಷ ಹಾಕ್ತಾರೆ, ಮೆಟ್ಟಿಲ ಮೇಲೆ ಎಣ್ಣೆ ಹಾಕ್ತಾರೆ, ಆಕ್ಸಿಡೆಂಟ್ ಮಾಡುಸ್ತ್ರಾರೆ, ಹೊಡುಸ್ತಾರೆ ಒಟ್ಟಾರೆ ಹೆಣ್ಣು ಮಕ್ಕಳಿಗೆ ಧ್ವೇಷ ಸಹಜವಾದದ್ದು ಅನ್ನೋ ಸಂದೇಶ ನೋಡುಗರ ಮನಸ್ಸಿನಲ್ಲಿ ಮೂಡೋ ಹಾಗೆ ಮಾಡ್ತಾರೆ. ಮತ್ತೆ ಒಂದೇ ಸಮ ಅನ್ಯಾಯಗಳಿಗೆ ಒಳಗಾಗಿ ಗೋಳಾಡೋ ಹೆಣ್ಣುಮಕ್ಕಳಿಂದ, ಈ ಹೆಣ್ಣು ಮಕ್ಕಳಿಗೆ ಏನೂ ಕೈಲಾಗಲ್ಲ ಅನ್ನೋ ಸಂದೇಶಾನೂ ಸಿಗುತ್ತೆ. ಇವುಗಳಿಂದ ಹೆಣ್ಣು ಮಕ್ಕಳ ಸ್ಟೇಟಸ್ ಕಮ್ಮಿ ಆದಹಾಗೇನೇ ತಾನೆ ?

ಈ ಜಾಹೀರಾತುಗಳಲ್ಲಿ ಹೆಣ್ಣು ಮತ್ತು ಗಂಡು ಪುರುಷ ಪ್ರಧಾನತೆ ಕೊಟ್ಟಿರುವ ಜವಾಬ್ದಾರಿಗಳನ್ನ ಎತ್ತಿಹಿಡಿಯೋದನ್ನ ನೀವು ನೋಡೇ ಇರ್ತೀರ ತಾನೆ?

ಬಟ್ಟೆ ಒಗೆಯೋ ಸೋಪು, ವಾಶಿಂಗ್ ಮೆಷೀನ್, ಬಟ್ಟೆಗಳ ಘಮ ಘಮಕ್ಕಾಗಿ ಹಾಕುವ ಸುಗಂಧಗಳಿಗೆ, ಕಾಫಿ ಮಾಡೋದಿಕ್ಕೆ, ಅಡಿಗೆ ಮನೆಯಲ್ಲಿ ಬಳಸುವ ಎಣ್ಣೆ, ಪಾತ್ರೆ, ಸಾಂಬಾರ್ ಪುಡಿ, ಸಾರು ಪುಡಿ ಇವೆಲ್ಲಕ್ಕೂ ಹೆಣ್ಣು ಮಕ್ಕಳನ್ನೇ ತೋರಿಸುತ್ತಾರೆ. ಕಾರು, ಕಾರಿನ ಟೈರು, ಪೈಂಟು, ಸಿಮೆಂಟು, ಶೂಸು, ಗಳಿಗೆ ಗಂಡು ಮಕ್ಕಳೇ ಮಾಡೆಲ್ ಗಳು. ಇವೆಲ್ಲಾ ಕೆಲಸಗಳಾದರೆ, ಇನ್ನ ಹೆಣ್ಣು ಸುಂದರವಾಗಿರಬೇಕು/ಲಕ್ಷಣವಾಗಿರಬೇಕು/ಹೀಗಿದ್ದರೆ ಸಾಕು ಅನ್ನೋ ಸಂದೇಶವನ್ನ ಗಟ್ಟಿಗೊಳೊಸೋದಿಕ್ಕೆ ಅಂತಾನೇ ಫೇರ್ ನೆಸ್ ಕ್ರೀಮ್ಸ್, ಮುಖದ ಚರ್ಮ ನುಣುಪಾಗಲು ಕ್ರೀಮ್ ಗಳು, ಸೂರ್ಯ ರಶ್ಮಿಗೆ ತ್ವಚೆ ಕಂದದ ಹಾಗೆ ನೋಡೋ ಕ್ರೀಮ್ ಗಳು, ಕೂದಲಿನ ನುಣುಪು, ಹೊಳಪಿಗಾಗಿ ಪ್ರಾಡಕ್ಟ್ ಗಳು ಒಂದೇ ಎರಡೇ!

ಇದೇ ಥರ ಗಂಡು ಮಕ್ಕಳು ಸಧೃಡ ಪೌರುಷವಂತರು ಅಂತ ತೋರಿಸೋದಿಕ್ಕೇನೇ ಬೈಕುಗಳು, ಕಾರುಗಳು, ಥರಹೇವಾರಿ ಡ್ರಿಂಕುಗಳು, ಶೇವಿಂಗ್ ಸಾಮಗ್ರಿ, ಟೂತ್ ಪೇಸ್ಟ್ , ಚಡ್ಡಿ, ಬನಿಯನ್‌ ಇತ್ಯಾದಿ.

ಇನ್ನೂ ಶಾಕಿಂಗ್ ಆಗಿರುವ ವಿಷಯ ಏನು ಈ ಜಾಹೀರಾತುಗಳ ಬಗ್ಗೆ ಅಂದ್ರೆ, ಯಾವುದೇ ವಸ್ತುವಿನ ಜಾಹೀರಾತಿಗೆ ಸಂಬಂಧವಿಲ್ಲದಿದ್ದರೂ ತುಂಡು ಬಟ್ಟೆ ಹಾಕಿದ ಹೆಣ್ಣು ಮಕ್ಕಳ ಬಳಕೆ ಮಾಡಲಾಗುತ್ತೆ ಇದನ್ನ ಗಮನಿಸಿದ್ದೀರ ? ಅದು ಗಂಡು ಮಕ್ಕಳ ಡಿಯೋಡರೆಂಟ್ ಆಗಿರಬಹುದು, ಮನೆಗಳಿಗೆ ಬಳಸಬಹುದಾದ ನಲ್ಲಿಗಳಾಗಿರಬಹುದು ಅಥವ ಗಂಡು ಮಕ್ಕಳ ಚೆಡ್ಡಿ, ಬನಿಯನ್ ಆಗಿರಬಹುದು, ಇವುಗಳಲ್ಲೆಲ್ಲಾ ಹೆಣ್ಣು ಮಕ್ಕಳನ್ನು ತೋರಿಸುವ ರೀತಿ ಗಮನಿಸಿ. ಇವುಗಳಿಂದ ಹೆಣ್ಣುಮಕ್ಕಳಿಗಾಗುವ ತೊಂದರೆ ಏನು ಗೊತ್ತಾ? ಇದು ಹೆಣ್ಣು ಮಕ್ಕಳೆಂದರೆ ಸುಂದರವಾಗಿರಬೇಕಾದವರು ಮತ್ತು ಮನೆಗೆಲಸಗಳಲ್ಲಿ ತೊಡಗಿ ಕೊಳ್ಳಬೇಕಾದವರು ಎನ್ನುವುದನ್ನೇ ಮತ್ತೆ ಮತ್ತೆ ತೋರಿಸುತ್ತಲೇ ಇರುತ್ತದೆ. 20 ನಿಮಿಷ

ಇದಾದ ನಂತರ ಕಿಶೋರಿಯರನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸುವುದು. ಗುಂಪುಗಳನ್ನು ಮಾಡಲು ,  action ಪ್ರಿನ್ಸ್‌ ,  ಚಕ್ರವರ್ತಿ ರಾಕಿ ಭಾಯ್‌, ಚಾಲೆಂಜಿಂಗ್‌ ಸ್ಟಾರ್‌, ಗೋಲ್ಡನ್‌ ಸ್ಟಾರ್‌, ಎಂದು ಚೀಟಿಗಳನ್ನು ಎತ್ತಿ ಮಾಡಿಸುವುದು.

ಪ್ರತಿ ಗುಂಪಿಗೂ ಒಂದೊಂದು ಫಿಲ್ಮ್‌ ಕ್ಲಿಪ್‌ಗಳನ್ನು ಕೊಟ್ಟು, ಅವುಗಳಲ್ಲಿ ಗಂಡುಮಕ್ಕಳು ಏನು ಮಾಡ್ತ ಇದರು, ಹೆಣ್ಣು ಮಕ್ಕಳು ಏನು ಮಾಡ್ತ ಇದ್ರು, ಅವರ ಪಾತ್ರ ಯಾವ ಥರ ಇತ್ತು ಎಂದು ಗುರುತಿಸಿ ಬರೆಯಲು ಹೇಳುವುದು. ನಮ್ಮ ಲ್ಯಾಪ್‌ಟಾಪಿನಲ್ಲಿ ಅವರಿಗೆ ವೀಡಿಯೋ ಕ್ಲಿಪ್‌ ಅನ್ನು ತೋರಿಸುವುದು. 30 ನಿಮಿಷ

ಇದಾದ ನಂತರ ದೊಡ್ಡ ಗುಂಪಿನಲ್ಲಿ ಪ್ರತಿ ಗುಂಪಿಗೂ ಅವರು ಬರೆದಿದ್ದನ್ನು ವಿವರಿಸಲು ಹೇಳುವುದು. 10 ನಿಮಿಷ

ಅದರ ಜೊತೆಗೆ ಅವರು ಮಿಸ್‌ ಮಾಡಿರುವುದನ್ನು ನಾವೇ  add ಮಾಡುವುದು.  

ಎಲ್ಲೆಲ್ಲೂ ಹೆಣ್ಣು ಮಕ್ಕಳ ಸ್ಥಾನ ಪುರುಷ ಪ್ರಧಾನತೆಗೆ ಅನುಗುಣವಾಗಿಯೇ ಇರಬೇಕೆನ್ನುವುದನ್ನು ತೋರಿಸುತ್ತಲೇ ಇದ್ದರೆ ನಾವು ಸಮಾನತೆಯ ಕಡೆಗೆ ಓದುತ್ತಾ ಹೋಗುವುದೂ, ಓದಿ ನಮ್ಮ ಕಾಲ ಮೇಲೆ ನಾವು ನಿಂತು ನಾವಿಷ್ಟ ಪಟ್ಟ ಕೆಲಸಗಳಲ್ಲಿ ತೊಡಗಿಕೊಳ್ಳುವುದೂ ಕಷ್ಟವಾಗುತ್ತೆ ತಾನೆ ? ನಮ್ಮ ಫಿಲಮ್ ಗಳಲ್ಲಿ, ಸೀರಿಯಲ್ ಗಳಲ್ಲಿ ಮತ್ತು ಜಾಹೀರಾತುಗಳಲ್ಲಿ, ಹೆಣ್ಣುಮಕ್ಕಳನ್ನ ಪೈಲಟ್, ಸೈಂಟಿಸ್ಟ್, ಬೈಕರ್, ಬಿಸಿನೆಸ್ ಮಾಡುವವರು ಹೀಗೆಲ್ಲಾ ತೋರಿಸಿದರೆ ಅದರ ಪ್ರಭಾವ ಹೇಗಿರಬಹುದು ಎಂದು ಯೋಚಿಸಿ.

ಇವನ್ನೆಲ್ಲಾ ಗಮನಿಸೋದಿಕ್ಕೆ, ಗಮನಿಸಿದ್ದನ್ನು ನಿಮ್ಮ ಸುತ್ತಲಿನವರ ಜೊತೆ ಹಂಚಿಕೊಳ್ಳಲು ಆರಂಭಿಸಬಹುದೆ ? ಹಾಗೇ ಪ್ರಶ್ನಿಸೋದಕ್ಕೂ ಸ್ಟಾರ್ಟ್‌ ಮಾಡ್ಬೇಕು ತಾನೆ ?

ನಮಸ್ಕಾರ.10 ನಿಮಿಷ

ಬೇಕಾಗುವ ಸಾಮಗ್ರಿಗಳು

  1. ಪ್ರೊಜೆಕ್ಟರ್‌
  2. ಪ್ರೊಜೆಕ್ಟರ್‌ ಕೇಬಲ್‌
  3. Extension cord
  4. Speaker
  5. Bedsheets to cover windows
  6. Media and market DST
  7. Brown sheets
  8. Sketch pens

ಒಟ್ಟೂ ಫೆಸಿಲಿಟೇಟರ್‌ಗಳು - 3

ಇನ್‌ಪುಟ್‌ಗಳು

  1. Ads and movie clips

ಔಟ್‌ಪುಟ್‌ಗಳು

ಕಿಶೋರಿಯರು ಬರೆದ ಚಾರ್ಟ್ ಶೀಟ್ಸ್ಗಳು