ವೈಯುಕ್ತಿಕ ವಿದ್ಯುನ್ಮಾನ ಸಂಗ್ರಹಾಲಯ ರಚನೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೧:೩೮, ೬ ಅಕ್ಟೋಬರ್ ೨೦೧೭ ರಂತೆ Anand (ಚರ್ಚೆ | ಕಾಣಿಕೆಗಳು) ಇವರಿಂದ
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search

ಮುಕ್ತ ಶೈಕ್ಷಣಿಕ ಸಂಪನ್ಮೂಲ

ಬೋಧನೆಯನ್ನು ಪರಿಣಾಮಕಾರಿಯಾಗಿಸಲು ಸಂಪನ್ಮೂಲಭರಿತವಾದ ಕಲಿಕಾ ವಾತಾವರಣ ಅವಶ್ಯಕವಾದುದು. ಹೀಗಿದ್ದರೂ ಸಹ ಹಲವು ಕಡೆ ಶಿಕ್ಷಕರು ಕೇವಲ ಪಠ್ಯಪುಸ್ತಕವನ್ನೇ ಹೊಂದಿದ್ದಾರೆ. ಪಠ್ಯಪುಸ್ತಕವು ಮಕ್ಕಳಿಗಾಗಿ ಇರುವಂತದ್ದು. ಶಿಕ್ಷಕರು ಪಠ್ಯಪುಸ್ತಕದಲ್ಲಿನ ವಿಷಯಗಳಿಗೆ ಸಂಪನ್ಮೂಲಗಳನ್ನು ಬಳಸಬೇಕು. ಈ ಮೂಲಕ ಶಿಕ್ಷಕರು ಮಕ್ಕಳ ಕಲಿಕಾ ಸಂದರ್ಭ ಮತ್ತು ಅವಶ್ಯಕತೆಗಳಿಗನುಗುಣವಾಗಿ ವಿವಿಧ ರೀತಿಯಲ್ಲಿ ಬೋಧನೆ ಮಾಡಲು ಸಹಾಯವಾಗುತ್ತದೆ. ತರಗತಿ ಕೋಣೆಯಲ್ಲಿ ಅಥವಾ ಪಠ್ಯದಲ್ಲಿ ಬರುವ ಸಂದೇಹ ಅಥವ ಪ್ರಶ್ನೆಗಳನ್ನು ಪರಿಹರಿಸಲು ಸಾಧ್ಯವಾಗುವಂತೆ ಶಿಕ್ಷಕರು ಸಂಪನ್ಮೂಲ ಹೊಂದಿರಬೇಕು.

ಹೀಗಿದ್ದರೂ ಸಹ ಕಲಿಕಾ ಸಂಪನ್ಮೂಲಗಳು ಶಿಕ್ಷಕರಿಗೆ ಸುಲಭವಾಗಿ ಲಭ್ಯವಾಗುತ್ತಿಲ್ಲ. ಲಭ್ಯವಾಗುತ್ತಿರುವ ನಿರ್ಧಿಷ್ಟ ಸಂಪನ್ಮೂಲಗಳು ಹಕ್ಕುಸ್ವಾಮ್ಯಕ್ಕೆ ಒಳಪಟ್ಟಿರುವವಾಗಿರುತ್ತವೆ. ಇವುಗಳನ್ನು ಶಿಕ್ಷಕರು ಅವರ ಬಳಕೆಗೆ ತಕ್ಕಂತೆ ಬದಲಾಯಿಸಲು ಸಾಧ್ಯವಿರುವುದಿಲ್ಲ ಹಾಗು ವೆಚ್ಚದಾಯಕವಾಗಿರುತ್ತವೆ. 'ಹಕ್ಕುಸ್ವಾಮ್ಯ' ಎಂದರೆ ಲೇಖಕನು ತನ್ನ ಲೇಖನವನ್ನು ಸಾರ್ವಜನಿಕವಾಗಿ ಲಭ್ಯವಾಗಿಸಲು ಇರುವ ಕಾನೂನಾತ್ಮಕ ಚೌಕಟ್ಟಾಗಿದೆ. ಯಾವುದೇ ಲೇಖಕನು ತನ್ನ ಲೇಖನಕ್ಕೆ ಯಾವುದೇ ರೀತಿಯ ಹಕ್ಯಸ್ವಾಮ್ಯ ಮಾಹಿತಿಯನ್ನು ನೀಡದಿದ್ದಲ್ಲಿ, ಅದು ಹಕ್ಕುಸ್ವಾಮ್ಯಕ್ಕೆ ಒಳಪಟ್ಟಿದೆ ಎಂದು ಪರಿಗಣಿಸಲಾಗುತ್ತದೆ. ಹಲವು ಸಂಪನ್ಮೂಲಗಳು 'all rights reserved' ಎಂಬ ರೀತಿಯ ಹಕ್ಕುಸ್ವಾಮ್ಯವನ್ನು ಹೊಂದಿರುತ್ತವೆ, ಇವುಗಳನ್ನು ಮುಕ್ತವಾಗಿ ಬಳಸಲು, ಹಂಚಿಕೊಳ್ಳಲು ಅಥವಾ ಪರಿಷ್ಕರಿಸಲು ಅನುಮತಿ ಇರುವುದಿಲ್ಲ.

ಶಿಕ್ಷಕರು ತಮ್ಮ ಅವಶ್ಯಕತೆಗೆ ತಕ್ಕಂತೆ ಸಂಪನ್ಮೂಲಗಳನ್ನು ಪರಿಷ್ಕರಿಸಿಕೊಳ್ಳಬೇಕಿರುತ್ತದೆ. ಆದರೆ ಹಕ್ಕುಸ್ವಾಮ್ಯವುಳ್ಳ ಸಂಪನ್ಮೂಲಗಳು ಈ ರೀತಿಯ ಪರಿಷ್ಕರಣೆಗೆ ಅನುಮತಿಸುವುದಿಲ್ಲ. ಆದ್ದರಿಂದ ಕಡಿಮೆ ಹಕ್ಕುಸ್ವಾಮ್ಯ ನಿರ್ಬಂಧ ಹೊಂದಿರುವ ಸಂಪನ್ಮೂಲಗಳನ್ನು ಲಭ್ಯವಾಗಿಸುವಂತಹ ಚಳುವಳಿ ಆರಂಭವಾಗಿದೆ. 'ಮುಕ್ತ ಶೈಕ್ಷಣಿಕ ಸಂಪನ್ಮೂಲವು' ಶಿಕ್ಷಕರು ಮರುಬಳಸಲು(re-use), ಪರಿಷ್ಕರಿಸಲು (re-vise), ಮರು-ಮಿಶ್ರಣ ಮಾಡಲು (re-mix) ಮತ್ತು ಮರು ಹಂಚಿಕೆ (re-distribute) ಮಾಡಲು ಸಾಧ್ಯವಾಗಿಸುವ ಸಂಪನ್ಮೂಲಗಳನ್ನು ಒದಗಿಸುವ ಗುರಿ ಹೊಂದಿದೆ.

ಜಾಗತಿಕ ವಿದ್ಯುನ್ಮಾನ ಸಂಗ್ರಹಾಲಯದಿಂದ ವೈಯುಕ್ತಿಕ ವಿದ್ಯುನ್ಮಾನ ಸಂಗ್ರಹಾಲಯ

ಶಿಕ್ಷಕರು ತಮ್ಮ ಆಸಕ್ತಿಯ ವಿಷಯಗಳಿಗೆ, ತಮ್ಮ ಕಂಪ್ಯೂಟರ್‌ನಲ್ಲಿ ಅಂತರ್ಜಾಲದ ಮೂಲಕ ಹೇಗೆ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳನ್ನು ಬಳಸಬಹುದು ಎಂಬುದನ್ನು ಈ ಅಧ್ಯಾಯದಲ್ಲಿ ಚರ್ಚಿಸಲಾಗುತ್ತದೆ. ಜಾಗತಿಕ ವಿದ್ಯುನ್ಮಾನ ಸಂಗ್ರಹಾಲಯವಾಗಿ ಅಂತರ್ಜಾಲವು ಬಹಳಷ್ಟು ವಿಷಯಗಳೊಗೆ ಮಾಹಿತಿಯನ್ನು ಹೊಂದಿದೆ. ಇದು ನಮ್ಮ ಕಲಿಕೆಯ ಬಗೆಗಿನ ಯೋಚನೆಯನ್ನು ಹಾಗು ಕಲಿಕಾ ಕೌಶಲಗಳ ಬಗೆಗಿನ ಯೋಚನೆಯನ್ನು ಬದಲಾಯಿಸುತ್ತದೆ. ಅಂತರ್ಜಾಲವು ನಿರಂತರವಾದ ಕಲಿಕಾ ಸಂಪನ್ಮೂಲವಾಗಿದೆ, ಇಲ್ಲಿ ಬಹಳಷ್ಟು ವಿಷಯಗಳು ಲಭ್ಯವಿವೆ. ಈ ಸಂಪನ್ಮೂಲಗಳನ್ನು ಉಪಯುಕ್ತವಾಗಿಸಲು ಇವುಗಳನ್ನು ಉತ್ತಮವಾಗಿ ನಿರ್ವಹಿಸಬೇಕು, ಈ ಸಂಪನ್ಮೂಲಗಳನ್ನು ಬೋಧನೆಯಲ್ಲಿ ಅಳವಡಿಕೆಮಾಡಿಕೊಳ್ಳಲು ಸ್ಪಷ್ಟವಾದ ಘಟಕ ಯೋಜನೆಯನ್ನು ಹೊಂದಿರಬೇಕು. ಇದಕ್ಕಾಗಿ ಮಾಹಿತಿಯನ್ನು ಬಳಸುವ, ನಿರ್ವಹಿಸುವ, ಮೌಲ್ಯಮಾಪನ ಮಾಡುವ ಕೌಶಲವು ಬಹಳ ಮುಖ್ಯವಾದುದು. ಇಲ್ಲಿ ಬೋಧನೆ ಮತ್ತು ಕಲಿಕೆಗಾಗಿ ಬಹಳಷ್ಟು ಪರಿಕರಗಳು ಲಭ್ಯವಿವೆ, ಒಂದೇ ಪರಿಕರದ ಮೂಲಕ ಕಲಿಕೆ ಸಾಧ್ಯವಾಗುವುದಿಲ್ಲ, ಪರಿಕರಗಳು ಮತ್ತು ಸಾಮಗ್ರಿಗಳ ಸಂಗ್ರಹಾಲಯವನ್ನು ನಾವು ಬಳಸಬೇಕು.
ಅಂತರ್ಜಾಲದಲ್ಲಿ ಮಾಹಿತಿಯನ್ನು ವಿವಿಧ ರೀತಿಯಲ್ಲಿ ಹುಡುಕಬಹುದು. ಅಂತರ್ಜಾಲದಲ್ಲಿ ಮಾಹಿತಿಯನ್ನು ಹುಡುಕುವುದು ಹೇಗೆ ಎಂಬುದನ್ನು ನಾವು ತಿಳಿಸಿದಿರಬೇಕು. ಮಾಹಿತಿಯ ಮೂಲ, ಸಂಪನ್ಮೂಲವು ಉಚಿತವಾಗಿ ಲಭ್ಯವಿದ್ದರೂ ಸಹ ಮಾಹಿತಿಯ ಮೂಲವನ್ನು ನಮೂದಿಸಬೇಕು. ಅಂತರ್ಜಾಲದಲ್ಲಿ ಸಂಪನ್ಮೂಲಗಳು ವಿವಿಧ ನಮೂನೆಯಲ್ಲಿ ಲಭ್ಯವಿರುತ್ತವೆ - ಚಿತ್ರಗಳು, ವೀಡಿಯೋ ಮತ್ತು ಆಡಿಯೋ ಇತ್ಯಾದಿ. ಅಂತರ್ಜಾಲದಲ್ಲಿ ವೀಡಿಯೋ, ಆಡಿಯೋ ಹಾಗು ಇತರೇ ಸಂಪನ್ಮೂಲಗಳನ್ನು ಬಳಸುವಾಗ ಅಂತರ್ಜಾಲ ಸುರಕ್ಷತೆಯ ಬಗ್ಗೆ ಅರಿವು ಹೊಂದಿರಬೇಕು. ಈಗಾಗಲೇ ನಮಗೆ ತಿಳಿದಿರುವಂತೆ, ಪ್ರತಿಯೊಂದು ವೆಬ್‌ಸೈಟ್‌ ಸಹ ಅಂತರ್ಜಾಲದ ಒಂದು ಪುಟವಾಗಿರುತ್ತದೆ ಹಾಗು ವಿಳಾಸವನ್ನು ಹೊಂದಿರುತ್ತದೆ. ಈ ವಿಳಾಸದ ಕೊಂಡಿಯನ್ನು ನಾವು ಕಾಪಿ ಮಾಡಿಕೊಳ್ಳಲೂಬಹುದು.ಸರ್ಚ್‌ ಎಂಜಿನ್ ಮೂಲಕ ಮಾಹಿತಿಯನ್ನು ಹುಡುಕಲೂಬಹುದು.

ವೈಯುಕ್ತಿಕ ವಿದ್ಯುನ್ಮಾನ ಸಂಗ್ರಹಾಲಯದ ಉದ್ದೇಶಗಳು

ವೈಯುಕ್ತಿಕ ವಿದ್ಯುನ್ಮಾನ ಸಂಗ್ರಹಾಲಯವು ನಿಮ್ಮ ಆಸಕ್ತಿಯ ವಿವಿಧ ವಿಷಯಗಳಿಗೆ ಮಾಹಿತಿಯನ್ನು ಸಂಗ್ರಹಿಸುವುದಾಗಿದೆ. ಇಲ್ಲಿ ವೈಯುಕ್ತಿಕವೆಂದರೆ, ಇದು ನಿಮ್ಮ ಕಂಪ್ಯೂಟರ್‌ನಲ್ಲಿ ಲಭ್ಯವಿದೆ ಎಂದು ಅರ್ಥ.ವಿದ್ಯುನ್ಮಾನವೆಂದರೆ ಇದು ವಿದ್ಯುನ್ಮಾನ ನಮೂನೆಯಲ್ಲಿ ಲಭ್ಯವಿದೆ, ಹಾಗು ಈ ಮೂಲಕ ಪರಿಷ್ಕರಿಸಲು, ಸಂಗ್ರಹಿಸಲು ಹಾಗು ಹಂಚಿಕೊಳ್ಳಲು ಸುಲಭವಾಗಿರುತ್ತದೆ. ಮುಖ್ಯವಾಗಿ ಇದು ಸಂಗ್ರಹಾಲಯವಾಗಿರುತ್ತದೆ. ಇದರರ್ಥ ವಿದ್ಯುನ್ಮಾನ ಸಂಪನ್ಮೂಲಗಳು ವ್ಯವಸ್ಥಿತವಾಗಿ ನಿರ್ವಹಿಸಲ್ಪಟ್ಟಿರುತ್ತವೆ ಹಾಗು ಬೇಕಾದಾಗ ಸುಲಭವಾಗಿ ಬಳಸಬಹುದಾಗಿರುತ್ತದೆ.

ಅಂತರ್ಜಾಲದಲ್ಲಿ ಮಾಹಿತಿ ಹುಡುಕುವುದು ಹೇಗೆ- ಪಠ್ಯ, ಚಿತ್ರ, ಆಡಿಯೋ ಹಾಗು ವೀಡಿಯೋ ಸಂಪನ್ಮೂಲ

ಪಠ್ಯ ಸಂಪನ್ಮೂಲ ಹುಡುಕುವುದು

ಅಂತರ್ಜಾಲವು ಮುಕ್ತ ಪಠ್ಯ ಸಂಪನ್ಮೂಲದ ಶ್ರೀಮಂತ ಮೂಲವಾಗಿದೆ. ಮುಕ್ತಶೈಕ್ಷಣಿಕ ಸಂಪನ್ಮೂಲಗಳನ್ನು ಬಳಸುವುದು ಸೂಕ್ತ, ಏಕೆಂದರೆ ವೈಯುಕ್ತಿಕ ಸಂಗ್ರಹಾಲಯ ರಚನೆಯಲ್ಲಿ ಬಳಕೆಗೆ ಅನುಮತಿಯಿಲ್ಲದ ವಿಷಯಗಳನ್ನು ಬಳಸಬಾರದು. ನಿಮಗೆ ಪರಿಚಿತವಿರುವ ಮುಕ್ತ ಶೈಕ್ಷಣಿಕ ಸಂಗ್ರಹಾಲಯಗಳನ್ನು ನೋಡಬಹುದು ಅಥವಾ ಅಂತರ್ಜಾಲದಲ್ಲಿ ಹುಡುಕಬಹುದು. ಪಠ್ಯ ಸಂಗ್ರಹಾಲಯದಲ್ಲಿ ಹುಡುಕುವುದು ಈಗಾಗಲೇ ಲಭ್ಯವಿರುವ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳನ್ನು ಹುಡುಕುವ ವಿಧಾನವಾಗಿದೆ. ತುಂಬಾ ಪ್ರಮುಖವಾದ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳ ಸಂಗ್ರಹಾಲಯಗಳೆಂದರೆ, ಎನ್‌ಸೈಕ್ಲೋಪೀಡಿಯಾ, ವಿಕಿಪೀಡಿಯಾ ಇತ್ಯಾದಿ. ವಿಕಿಪೀಡಿಯಾದಲ್ಲಿ ನಿಮಗೆ ಅವಶ್ಯವಿರುವ ವಿಷಯವನ್ನು ಸರ್ಚ್‌ಬಾರ್‌ನಲ್ಲಿ ನಮೂದಿಸುವ ಮೂಲಕ ಸಂಪನ್ಮೂಲ ಹುಡುಕಬಹುದು.

'ವಿಕಿಪೀಡಿಯಾ'ವು ನೂರಕ್ಕೂ ಹಚ್ಚು ಭಾಷೆಗಳಲ್ಲಿ ಲಭ್ಯವಿದೆ. ಇದರಿಂದ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳನ್ನು ತೆಲುಗು ಮತ್ತು ಉರ್ದು ಭಾಷೆಯಲ್ಲಿಯೂ ಹುಡುಕಬಹುದು.

ಇತರೆ ಪ್ರಮುಖ ಮುಕ್ತ ಶೈಕ್ಷಣಿಕ ಸಂಪನ್ಮೂಲ ವೆಬ್‌ಸೈಟ್‌ಗಳೆಂದರೆ, http://www.wikieducator.org, https://oercommons.org. ಮುಕ್ತ ಶೈಕ್ಷಣಿಕ ಸಂಪನ್ಮೂಲ ವೆಬ್‌ಸೈಟ್‌ಗಳ ಪಟ್ಟಿಯು http://www.searchoer.com/list-of-oer.html ನಲ್ಲಿ ಲಭ್ಯವಿದೆ.

ಇದರ ಜೊತೆಗೆ ಮಾಹಿತಿ ಹುಡುಕಲು ಗೂಗಲ್ ಸರ್ಚ್, ಡಕ್‌ಡಕ್‌ಗೋ ಸರ್ಚ್‌ ಎಂಜಿನ್‌ಗಳನ್ನು ಸಹ ನೀವು ಬಳಸಬಹುದು. ಈ ಸರ್ಚ್‌ ಎಂಜಿನ್‌ಗಳು ನಿಮ್ಮ ವಿಷಯದ ಬಗೆಗಿನ ವೆಬ್‌ಪುಟಗಳನ್ನು ಒದಗಿಸುತ್ತದೆ. ಈ ವೆಬ್‌ಪುಟಗಳು ಮುಕ್ತ ಸಂಪನ್ಮೂಲಗಳು ಆಗಿರುತ್ತವೆ ಹಾಗು ಇದಕ್ಕೆ ವಿರುದ್ದವಾದವು ಆಗಿರುತ್ತವೆ. ಬಳಸುವ ಮುನ್ನ ಇವು ಮುಕ್ತ ಸಂಪನ್ಮೂಲಗಳೇ ಎಂಬುದನ್ನು ನೀವು ಪರಿಶೀಲಿಸಬೇಕು.

ಚಿತ್ರ ಸಂಪನ್ಮೂಲಗಳನ್ನು ಹುಡುಕುವುದು

ವಿಕಿಪೀಡಿಯಾವು ಪ್ರಮುಖ ಮುಕ್ತ ಪಠ್ಯ ಸಂಪನ್ಮೂಲ ಸಂಗ್ರಹಾಲಯವಾಗಿರುವಂತೆ ವಿಕಿಮೀಡಿಯಾ ಕಾಮನ್ಸ್ ಎಂಬುದು ಬಹುಮಾಧ್ಯಮ ಸಂಪನ್ಮೂಲ ಸಂಗ್ರಹಾಲಯವಾಗಿದೆ (ಆಡಿಯೋ, ವೀಡಿಯೋ ಮತ್ತು ಚಿತ್ರ). ವಿಕಿಮೀಡಿಯಾ ಕಾಮನ್ಸ್‌ ಪುಟದಲ್ಲಿ ನಿಮಗೆ ಅವಶ್ಯವಿರುವ ವಿಷಯದ ಮೇಲೆ ಹುಡುಕಬಹುದು. ಪ್ಲಿಕರ್ ಎಂಬದು ಸಹ ಮತ್ತೊಂದು ಮುಕ್ತ ಚಿತ್ರ ಸಂಪನ್ಮೂಲ ಸಂಗ್ರಹಾಲಯವಾಗಿದೆ. ಚಿತ್ರ ಸಂಪನ್ಮೂಲಗಳಿಗಾಗಿ ಗೂಗಲ್ ಸರ್ಚ್, ಡಕ್‌ಡಕ್‌ಗೋ ಸರ್ಚ್‌ ಎಂಜಿನ್‌ಗಳನ್ನು ಸಹ ನೀವು ಬಳಸಬಹುದು.ಪಠ್ಯ ಸಂಪನ್ಮೂಲಗಳಂತೆಯೇ, ಮುಕ್ತವಾಗಿ ಲಭ್ಯವಿರುವ ಚಿತ್ರಗಳನ್ನು ಮಾತ್ರವೇ ನೀವು ಬಳಸಬೇಕು.

ಆಡಿಯೋ ಸಂಪನ್ಮೂಲಗಳನ್ನು ಹುಡುಕುವುದು

Freesound ಮತ್ತು and Soundcloud ಗಳು ಆಡಿಯೋ ಸಂಗ್ರಹಾಲಯಗಳಾಗಿವೆ. ಆಡಿಯೋ ಸಂಪನ್ಮೂಲಗಳಿಗಾಗಿ ಗೂಗಲ್ ಸರ್ಚ್, ಡಕ್‌ಡಕ್‌ಗೋ ಸರ್ಚ್‌ ಎಂಜಿನ್‌ಗಳನ್ನು ಸಹ ನೀವು ಬಳಸಬಹುದು.

ವೀಡಿಯೋ ಸಂಪನ್ಮೂಲಗಳನ್ನು ಹುಡುಕುವುದು

ಯೂಟ್ಯೂಬ್ ಪ್ರಮುಖವಾದ ವೀಡಿಯೋ ಸಂಗ್ರಹಾಲಯವಾಗಿದೆ. ಇದು ಸಹ ಮುಕ್ತವಾದ ಹಾಗು ಮುಕ್ತವಲ್ಲದ ವೀಡಿಯೋ ಸಂಪನ್ಮೂಲಗಳನ್ನು ಹೊಂದಿರುತ್ತದೆ. ಇದು ಜಗತ್ತಿನಲ್ಲಿ ಅತಿ ಹೆಚ್ಚು ವೀಡಿಯೋಗಳನ್ನು ಹೊಂದಿರುವ ಸಂಗ್ರಹಾಲಯವಾಗಿದೆ. ಈ ವೀಡಿಯೋ ಡೌನ್‌ಲೋಡ್‌ಗೆ ಒಳಪಟ್ಟಿದಲ್ಲಿ ನಿಮಗೆ ಡೌನ್‌ಲೋಡ್‌ ಆಯ್ಕೆ ಕಾಣುತ್ತದೆ. ಯೂಟ್ಯೂಬ್‌ನಲ್ಲಿ ನೀವು ವೀಡಿಯೋಗಳನ್ನು ಹುಡುಕಬಹುದು. ನೀವು ಹುಡುಕುವಾಗ ಆಯಾ ವಿಷಯದ ವೀಡಿಯೋಗಳ ಪಟ್ಟಿಯನ್ನು ಕಾಣಬಹುದು. ಆ ವೀಡಿಯೋ ಲಿಂಕ್‌ಗಳ ಮೇಲೆ ಒತ್ತುವ ಮೂಲಕ ವೀಡಿಯೋ ನೋಡಬಹುದು. ಹಾಗೆಯೇ ಆ ವಿಡಿಯೋ ಕೆಳಗೆ ಇರುವ "download as" ನ್ನು ಬಳಸುವ ಮೂಲಕ ವೀಡಿಯೋವನ್ನು ಡೌನ್‌ಲೋಡ್‌ ಮಾಡಬಹುದು. ಡೌನ್‌ಲೋಡ್ ಮಾಡಿದ ವೀಡಿಯೋಗಳು ಕಂಪ್ಯೂಟರ್‌ನ ಡೌನ್‌ಲೋಡ್ ಕಡತಕೋಶದಲ್ಲಿ ಉಳಿದಿರುತ್ತವೆ. ಆ ವೀಡಿಯೋಗಳನ್ನು ಕಾಪಿ ಮಾಡಿಕೊಂಡು ನಿಮ್ಮ ಕಡತಕೋಶದಲ್ಲಿ ಉಳಿಸಿಕೊಳ್ಳಬಹುದು.

ವಿಮಿಯೋ ಮತ್ತು ವಿಕಿಮೀಡಿಯಾ ಎಂಬುವು ಸಹ ಆಡಿಯೋ ಮತ್ತು ವೀಡಿಯೋ ಸಂಗ್ರಹಾಲಯಗಳಾಗಿವೆ. ‘OER Videos’ ಎಂದು ಗೂಗಲ್ ಸರ್ಚ್ ಮಾಡುವ ಮೂಲಕ ವಿವಿಧ ಸಂಗ್ರಹಾಲಯಗಳ ಪಟ್ಟಿಯನ್ನು ನೋಡಬಹುದು. ಸರ್ಚ್ ಎಂಜಿನ್‌ ನಲ್ಲಿ "videos" ಆಯ್ಕೆಯನ್ನು ಫಿಲ್ಟರ್ ಮಾಡಿಕೊಂಡು ವೀಡಿಯೋಗಳನ್ನು ಹುಡುಕಬಹುದು. ವೀಡಿಯೋಗಳನ್ನು ಪಠ್ಯದಾಖಲೆಗಳಿಗೆ ಸೇರಿಸಲು ಸಾಧ್ಯವಿರುವುದಿಲ್ಲ , ಆದರೆ ಆ ವೀಡಿಯೋಗಳ ಕೊಂಡಿಯನ್ನು ಪಠ್ಯದಾಖಲೆಯಲ್ಲಿ ಸೇರಿಸಿ ವೀಡಿಯೋ ಬಗೆಗೆ ಮಾಹಿತಿ ಮತ್ತು ವಿವರ ನೀಡಬಹುದು.

ಅಂತರ್ಜಾಲದ ಸಂಪನ್ಮೂಲವನ್ನು ಹೇಗೆ ಮೌಲ್ಯೀಕರಿಸುವುದು (How to evaluate an Internet resource)

ಅಂತರ್ಜಾಲದಲ್ಲಿ ಉಪಯುಕ್ತ ಮಾಹಿತಿಯನ್ನು ಹುಡುಕುವಾಗ, ನೀವು ಗಮನಿಸಬೇಕಾದ ಕೆಲವು ಅಂಶಗಳು:

  1. ಜಾಲತಾಣದ ಮೂಲ: ವೆಬ್ ತಾಣಮೂಲವನ್ನು ತಿಳಿಯುವುದು ಬಹಳ ಮುಖ್ಯ, ವಿಷಯಗಳನ್ನು ಹುಡುಕುವಲ್ಲಿ ನಮಗೆ ಅನೇಕ ರೀತಿಯಲ್ಲಿ ನಮಗೆ ಸಹಾಯ ಮಾಡುತ್ತದೆ ಮತ್ತು ವಿವಿಧ ದೃಷ್ಟಿಕೋನವನ್ನು ಬೆಳೆಸುವಲ್ಲಿ ಸಹಾಯ ಮಾಡುತ್ತದೆ.
  2. ಬಹುಸಂಖ್ಯಾ ವೆಬ್ ತಾಣಗಳ ಬಳಕೆ: ಒಂದು ವೆಬ್ ಪುಟ ಕೇವಲ ಒಂದು ಮಾದರಿಯ ಮಾಹಿತಿಯನ್ನು ನೀಡುತ್ತದೆ, ಒಂದಕ್ಕಿಂತ ಹೆಚ್ಚು ವೆಬ್ ತಾಣಗಳನ್ನು ಬಳಸುವುದರಿಂದ ನಿಮಗೆ ವಿವಿಧ ದೃಷ್ಟಿಕೋನಗಳನ್ನು ಬೆಳೆಸುತ್ತದೆ, ನೀವು ಒಂದಕ್ಕೊಂದು ಪರಿಶೀಲನೆ ಮಾಡಬಹುದು ಮತ್ತು ಅದರಲ್ಲಿನ ದೋಷಗಳನ್ನು ಗುರುತಿಸಬಹುದು.
  3. ಪ್ರಸ್ತುತತೆ: ಸಾಮಾನ್ಯವಾಗಿ ವಿಷಯಗಳನ್ನು ಹುಡುಕುವಾಗ ನಮಗೆ ಒಂದು ಪುಟ ಬರುತ್ತದೆ ಮತ್ತು ನಾವು ಅದನ್ನು ಬೇರೆಯವರಿಗೆ ಹಂಚಿಕೆ ಮಾಡುತ್ತೇವೆ, ಆದರೆ ಆ ಪುಟದಲ್ಲಿನ ವಿಷಯವನ್ನು ಓದುವುದು (ಕನಿಷ್ಟ ತ್ವರಿತವಾಗಿ) ಮುಖ್ಯ ಎಂದು ತಿಳಿಯುವುದು.ಇದು ಹುಡುಕಾಟದ ಕಾರ್ಯಾನಿರ್ವಹಣೆಯನ್ನು ತಿಳಿಸುತ್ತದೆ. ಯಾವುದೇ ವೆಬ್ ಪುಟ 'ಕೀ' ಪದ ಹೊಂದಿರುತ್ತದೆ ( ಟ್ಯಾಗ್‌ಗಳು ಎನ್ನುವರು) ಕೆಲವು ಸಮಯ 'ಕೀ' ಪದಗಳನ್ನು ನೀಡಿರುತ್ತಾರೆ (ಇದು ವಿಷಯವನ್ನು ಸಂಬಂಧಿಸಿರುತ್ತದೆ) ಇವು ವಿಷಯವನ್ನು ಸಂಕ್ಷಿಪ್ತವಾಗಿ ವಿವರಣೆಯನ್ನು ನೀಡುತ್ತವೆ. ಪ್ರಸ್ತುತತೆಯನ್ನು ವಿಂಗಡಿಸುವುದು ಬಹಳ ಮುಖ್ಯವಾಗಿದೆ, ಮಾಹಿತಿ ಬಳಕೆ ಬಹಳ ಸಂದರ್ಭೋಚಿವಾಗಿರುತ್ತದೆ. , ಒಂದು ವೆಬ್ ಪುಟ ಮಳೆಯ ಬಗ್ಗೆ ಬರೆದು ಮತ್ತು ಅದು ಜನರ ಜೀವನ ಶೈಲಿ ಮತ್ತು ವಿವಿಧ ಸ್ಥಳಗಳಲ್ಲಿ ವಿವಿಧ ರೀತಿಯಲ್ಲಿ ಬೆಳೆಯುವ ಬೆಳೆಗಳ ಬಗ್ಗೆ ಹೇಳುತ್ತದೆ. ನಾವು ಅದನ್ನು ಎಷ್ಟರ ಮಟ್ಟಿಗೆ ನಮಗೆ ಉಪಯುಕ್ತವಾಗಿದೆ ಎಂದು ನೋಡಬೇಕು. ಮಾಹಿತಿಯನ್ನು ನೀಡಿದ ಸಮಯಕ್ಕೆ ಅದರ ಪ್ರಸ್ತುತತೆಯನ್ನು ಗಮನಿಸಬೇಕು. ನೀಡಿದ ಮಾಹಿತಿ ಹಳೆಯದಾಗಿದ್ದರೆ, ಅದರ ನಿಖರತೆಯನ್ನು ಪರೀಕ್ಷಿಸಬೇಕು.
  4. ವೆಬ್ ತಾಣದ ವೈಶಿಷ್ಟ್ಯಗಳು: ವೆಬ್ ತಾಣ ಹಲವು ಉಪಯೋಗವನ್ನು ಹೊಂದಿದೆ ಎಂದು ನಮಗೆ ತಿಳಿಯುವುದು, ನಾವು ಎಷ್ಟು ವಿಧದಲ್ಲಿ ಮಾಹಿತಿಯನ್ನು ಬಳಕೆ ಮಾಡುತ್ತೇವೆ ಮತ್ತು ನೋಡುತ್ತೇವೆ ಎಂಬುದು ಆಧಾರದ ಮೇಲೆ ಅದರ ಉಪಯುಕ್ತತೆ ತಿಳಿಯುತ್ತದೆ, ಶಿಕ್ಷಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಬಳಸಬಹುದು?

ಮಾಹಿತಿಯನ್ನು ಹುಡುಕುವುದು ಹೇಗೆ

ಎರಡನೇ ಅಂಶ ವೆಬ್ ತಾಣಗಳನ್ನು ಬಳಸಿಕೊಂಡು ನಾವು ಮಾಹಿತಿಯನ್ನು ಹೇಗೆ ಹುಡುಕುತ್ತೇವೆ? ಎಂಬುದಕ್ಕೆ ಸಂಬಂಧಿಸಿದೆ. ನಾವು ಬಳಸುವ ಪದಗಳು, ನುಡಿಗಟ್ಟು, ಹುಡುಕಾಟದ ಪ್ರಶ್ನೆಗಳು ಫಲಿತಾಂಶದ ಗುಣಮಟ್ಟವನ್ನು ನಿರ್ಧರಿಸುವ ಪ್ರಮುಖ ಲಕ್ಷಣಗಳಾಗಿವೆ. ಉದಾಹರಣೆಗೆ ಈ ವಿವಿಧ ಹುಡುಕಾಟಗಳನ್ನು ಪ್ರಯತ್ನಿಸಿ. ಜಿರಾಫೆ, ಜಿರಾಫೆ ವಿಕಾಸ ಮತ್ತು ಬೆಳವಣಿಗೆ . ಈ ರೀತಿ ಹುಡುಕಿದಾಗ ಬರುವ ಎಲ್ಲಾ ಬೇರೆ ಬೇರೆ ಪುಟಗಳು ಸಹ ವಿಭಿನ್ನವಾಗಿರುವುದನ್ನು ಗಮನಿಸಬಹುದು. ಸಂಪನ್ಮೂಲವನ್ನು ಹುಡುಕುವಾಗ ಅದರ ಅಗತ್ಯವೇನು? ಬಳಕೆದಾರರು ಯಾರು? ಎಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಯಾವ ರೀತಿಯ ಫಲಿತಾಂಶವನ್ನು ನೋಡುತ್ತೇವೆ ಹಾಗು ಅದರ ಪ್ರಸ್ತುತತೆ ಏನು ಎಂಬುದನ್ನು ನಾವು ಯಾವ ಪದಗಳ ಮೂಲಕ ಹುಡುಕುತ್ತೇವೆಯೋ ಅದು ನಿರ್ಧರಿಸುತ್ತದೆ.

ವೆಬ್ ತಾಣಗಳ ಮೌಲ್ಯಮಾಪನ ಪರಿಶೀಲನಾಪಟ್ಟಿ

ವೆಬ್‌ಸೈಟ್‌ನ್ನು ಮೌಲ್ಯಮಾಪನ ಮಾಡಲು ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಬೇಕು.

  1. ಯಾರ ವೆಬ್ ತಾಣ? (ಪ್ರತಿ ವೆಬ್‌ಪುಟದಲ್ಲಿನ "About us" ಮೇಲೆ ಒತ್ತುವ ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದು).
  2. ಯಾವ ರೀತಿಯ ವೆಬ್ ಸೈಟ್ : ವಾಣಿಜ್ಯ, ಶೈಕ್ಷಣಿಕ, ಇತ್ಯಾದಿ. ಶೈಕ್ಷಣಿಕ ಪುಟಗಳು ಅಥವಾ ವಾಣಿಜ್ಯವಲ್ಲದ ಪುಟಗಳು ಹೆಚ್ಚು ಸೂಕ್ತ.
  3. ಯಾವ ರೀತಿಯ ಸಂಪನ್ಮೂಲಗಳು? ಯಾವಾಗಲೂ ಒಂದಕ್ಕಿಂತ ಹೆಚ್ಚು ವೆಬ್ ತಾಣ ಪರಿಶೀಲಿಸಿ ವಿಶ್ವಾಸಾರ್ಹ ಮಾಹಿತಿಯನ್ನು ಪರೀಕ್ಷಿಸಿ.
  4. ಇದು ಚರ್ಚೆಗಾಗಿ ಅನುಮತಿಸುತ್ತದೆಯೆ?
  5. ಇದು ವ್ಯವಹಾರ ಮಾಡಲು ಸಾಧ್ಯವಿದೇಯಾ? ಇ-ಕಾಮರ್ಸ್ ವೆಬ್ ತಾಣ ಮುಂತಾದವು.
  6. ಸಂಚರಿಸಲು ಸುಲಭವಾಗಿದೆಯಾ ?
  7. ಉಚಿತ / ಪಾವತಿಸಿದ / ಚಂದಾದಾರಿಕೆ
  8. ಹಕ್ಕುಸ್ವಾಮ್ಯ (ಕಾಪಿರೈಟ್ಸ್)
  9. ಸಂಚರಣೆ ಆಂತರಿಕ ಮತ್ತು ಬಾಹ್ಯ ವೆಬ್ ಕೊಂಡಿಗಳು
  10. ವೆಬ್ ತಾಣ ಸಂಪರ್ಕಿಸುವುದು ಹೇಗೆ ?

ಬೋಧನೆ ಮತ್ತು ಕಲಿಕೆಗೆ ಸಂಬಂಧಿಸಿದ ಸಂಪನ್ಮೂಲಗಳು

ಈ ಮೇಲಿನ ಅಂಶಗಳ ಜೊತೆಗೆ ಇವುಗಳನ್ನು ಸಹ ಪರಿಗಣಿಸಬೇಕು

  1. ವೆಬ್ ಸೈಟ್ ಬಗ್ಗೆ ಮಾಹಿತಿ ?
  2. ಮಾಹಿತಿ ಯಾವಾಗಲೂ ವಿಶ್ವಾಸಾರ್ಹ ಒಂದಕ್ಕಿಂತ ಹೆಚ್ಚು ವೆಬ್ ತಾಣ ಪರಿಶೀಲಿಸಿ
  3. ಯಾರು ಸೃಷ್ಟಿಸಿದರು?
  4. ಇದು ಏನನ್ನು ಹೊಂದಿದೆ?
  5. ಇದು ಶಿಕ್ಷಕರಿಗಾಗಿಯೇ ?
  6. ಅಥವಾ ಮಕ್ಕಳಿಗಾಗಿಯೇ ?
  7. ತರಗತಿಯಲ್ಲಿ ಹೇಗೆ ಬಳಸುವುದು?

ವೈಯುಕ್ತಿಕ ಸಂಪನ್ಮೂಲ ಕಡತಕೋಶ ರಚಿಸುವ ಹಂತಗಳು

ಸಂಪನ್ಮೂಲ ಕಡತಕೋಶ ರಚನೆಯಲ್ಲಿ ಹಲವು ಹಂತಗಳಿವೆ. ಪ್ರತೀ ಹಂತಕ್ಕೂ ಸಹ ನಿರ್ದಿಷ್ಟವಾದ ತಂತ್ರಜ್ಞಾನ ಅನ್ವಯಕಗಳು ಬಳಕೆಯಾಗುತ್ತವೆ. ಈ ಎಲ್ಲಾ ಸೂಕ್ತ ಅನ್ವಯಕಗಳನ್ನು ಅನ್ವಯಕಗಳನ್ನು_ಅನ್ವೇಷಿಸಿ ಪುಟದಲ್ಲಿ ನೋಡಬಹುದು.

  1. ನಿಮ್ಮ ಕಂಪ್ಯೂಟರ್ ನಲ್ಲಿ ಪ್ರತಿ ವಿಷಯಕ್ಕೂ ಒಂದು ಕಡತಕೋಶ ರಚನೆಮಾಡಿ.
  2. ಒಂದು ವಿಷಯದ ಮೇಲಿನ ನಿಮ್ಮ ಆಲೋಚನೆಗಳು, ಮತ್ತು ಸಂಪನ್ಮೂಲಗಳನ್ನೊಳಗೊಂಡ ಮೆಟಾ ಡಾಕ್ಯುಮೆಂಟ್ ರಚಿಸಿ.
  3. ಅಂತರ್ಜಾಲದ ಮೂಲಕ ಸೂಕ್ತ ಸಂಪನ್ಮೂಲಗಳನ್ನು ಹುಡುಕಿ.
  4. ಪುಟವನ್ನು,ಚಿತ್ರಗಳನ್ನು , ವೀಡಿಯೊಗಳನ್ನು ಉಳಿಸಿ.
  5. ಪಠ್ಯ ದಾಖಲೆಗೆ ಸೇರಿಸಿ.
  6. ಪಠ್ಯ ದಾಖಲೆಗೆ ಕೊಂಡಿಗಳನ್ನು ಸೇರಿಸಿ.
  7. ನಿಮ್ಮ ಸ್ವ-ಅಭಿಪ್ರಾಯಗಳನ್ನು, ಸಲಹೆಗಳನ್ನು ಪಠ್ಯ ದಾಖಲೆಗೆ ಸೇರಿಸಿ, ಆಯ್ದ ವಿಷಯಕ್ಕೆ ಪೂರಕವಾದ ಸಂಪನ್ಮೂಲಗಳನ್ನು ಹುಡುಕಿ ಸಂಪನ್ಮೂಲ ದಾಖಲೆ ರಚಿಸಿ.
  8. ಪಠ್ಯ ದಾಖಲೆಯನ್ನು ನಮೂನೀಕರಿಸಿ.

ವೈಯುಕ್ತಿಕ ವಿದ್ಯುನ್ಮಾನ ಸಂಗ್ರಹಾಲಯ

ಆಯ್ದ ವಿಷಯಕ್ಕೆ ಮೆಟಾ ದಾಖಲೆಯೊಂದಿಗೆ ಅಂತರ್ಜಾಲದಿಂದ ನೀವು ಡೌನ್‌ಲೋಡ್‌ ಮಾಡಿದ ಸಂಪನ್ಮೂಲಗಳ ಕಡತಕೋಶವೇ ವೈಯುಕ್ತಿಕ ವಿದ್ಯುನ್ಮಾನ ಸಂಗ್ರಹಾಲಯವನ್ನು ರಚಿಸುತ್ತದೆ. ಇದೇ ರೀತಿ ಯಾವುದೇ ವಿಷಯಕ್ಕೆ ಬೇಕಾದರು ಸಂಗ್ರಹಾಲಯ ರಚಿಸಬಹುದು, ಇದು ನಿಮ್ಮ ಸಂರಚಿತವಾದ ವಿನ್ಯಾಸದಲ್ಲಿ ನಿಮ್ಮ ಜ್ಞಾನವನ್ನು ಬೆಳೆಸುತ್ತದೆ. ಅಂತರ್ಜಾಲವು ಎಲ್ಲಾ ವಿಷಯಗಳಿಗೂ ಸಂಪನ್ಮೂಲ/ಮಾಹಿತಿಯನ್ನು ಹೊಂದಿರುವುದರಿಂದ ನಿಮ್ಮ ಆಯ್ಕೆಯ ವಿಷಯಗಳ ಕಲಿಕೆಗೆ ಅವಕಾಶವಿರುತ್ತದೆ. ವಿಷಯಗಳು ಕೇವಲ ಸೈದ್ದಾಂತಿಕ ಆಸಕ್ತಿಯೇ ಆಗಿರಬೇಕು ಅಥವ ಜ್ಞಾನ ಕಟ್ಟಿಕೊಳ್ಳಲು ಮಾತ್ರವೇ ಇರಬೇಕು ಎಂದೇನಿಲ್ಲ. ಇವು ಹಲವು ಕೌಶಲಗಳ ಬೆಳವಣಿಗೆಗೆ ಸಹ ಸಹಕಾರಿಯಾಗುತ್ತವೆ. ಹೊಸ ಭಾಷೆ ಕಲಿಕೆಗೆ ಅಥವಾ ಹೊಸ ಕೌಶಲ ಕಲಿಕೆಗೆ ಸಹಕಾರಿಯಾಗುತ್ತದೆ. ಈ ವೈಯುಕ್ತಿಕ ವಿದ್ಯುನ್ಮಾನ ಸಂಗ್ರಹಾಲಯವನ್ನು ನಿಮ್ಮ ಸಹೊದ್ಯೋಗಿಗಳೊಡನೆಯೂ ಸಹ ನೀವು ಹಂಚಿಕೊಳ್ಳಬಹುದು. ಇದರಿಂದ ಅವರಿಗೂ ಸಹ ಇದು ಉಪಯುಕ್ತವಾಗುತ್ತದೆ. ಈ ರೀತಿ ಶಿಕ್ಷಕರು ತಮ್ಮ ಸಂಪನ್ಮೂಲಗಳನ್ನು ಅಥವಾ ಸಂಗ್ರಹಾಲಯಗಳನ್ನು ಇತರೆ ಶಿಕ್ಷಕರೊಡನೆ ಹಂಚಿಕೊಂಡಾಗ ಇದು ಸಂಪನ್ಮೂಲಭರಿತ ವಾತಾವಾರಣವನ್ನು ಸೃಷ್ಟಿಸುತ್ತದೆ. ನೀವು ಕಲಿಯಲು ಬಯಸುವ, ನಿಮ್ಮ ಆಯ್ಕೆಯ ವಿಷಯಕ್ಕೆ ವೈಯುಕ್ತಿಕ ವಿದ್ಯುನ್ಮಾನ ಸಂಗ್ರಹಾಲಯ ರಚಿಸಲು ಪ್ರಯತ್ನಿಸಿ.

ಜಾಗತಿಕ ವಿದ್ಯುನ್ಮಾನ ಸಂಗ್ರಹಾಲಯಕ್ಕೆ ಕೊಡುಗೆ

ನೀವು ವಿಕಿಪೀಡಿಯಾದಲ್ಲಿ ನೋಂದಾಯಿಸಿಕೊಳ್ಳಬಹುದು. ಕನ್ನಡ ಭಾಷೆಯಲ್ಲಿ ಲೇಖನಗಳನ್ನು ರಚಿಸಬಹುದು(http://kn.wikipedia.org) ಪ್ರಸ್ತುತ ಲಭ್ಯವಿರುವ ಲೇಖನಗಳಿಗೆ ವಿಷಯ ಸೇರಿಸಬಹುದು. ಇದು ನಿಮ್ಮ ಭಾಷೆಯ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳಿಗೆ ತುಂಬಾ ಮೌಲ್ಯಯುಕ್ತವಾದ ಕೊಡುಗೆಯಾಗುತ್ತದೆ. ಇದೇ ರೀತಿ ಇತರೆ ಭಾಷೆಗಳಿಗೂ ಸಹ ಸಂಪನ್ಮೂಲ ಕೊಡುಗೆ ನೀಡಬಹುದು.( ಉರ್ದು, ಇಂಗ್ಲೀಷ್, ಹಿಂದಿಅಥವಾ ಯಾವುದೇ ಭಾರತೀಯ ಭಾಷೆಗಳಿಗೆ). ಇದೇ ರೀತಿ TROER ನಲ್ಲಿಯೂ ನೀವು ನೋಂದಾಯಿಸಿಕೊಳ್ಳಬಹುದು ಹಾಗು ಸಂಪನ್ಮೂಲ ಕೊಡುಗೆ ನೀಡಬಹುದು. ನೀವು ರಚಿಸಿದ ಸಂಪನ್ಮೂಲಗಳನ್ನು ವಿಷಯ ಶಿಕ್ಷಕರ ವೇದಿಕಗೆಳಲ್ಲಿ ಹಂಚಿಕೊಳ್ಳುವ ಮೂಲಕ ಅಥವಾ ಮುಕ್ತ ಶೈಕ್ಷಣಿಕ ಸಂಪನ್ಮೂಲ ಸಂಗ್ರಹಾಲಯಗಳಲ್ಲಿ ಪ್ರಕಟಿಸುವ ಮೂಲಕ ಮುಕ್ತ ಶೈಕ್ಷಣಿಕ ಸಂಪನ್ಮೂಲವಾಗಿ ಬಿಡುಗಡೆ ಮಾಡುವುದನ್ನು ಹವ್ಯಾಸವಾಗಿ ರೂಡಿಸಿಕೊಳ್ಳಬೇಕು.