ಶಾಲಾ ಅನಾಯಕತ್ವ ಅಭಿವೃದ್ದಿಗೊಳಿಸುವಲ್ಲಿ ಪ್ರಭಾವ ವಲಯ - ಕಾಳಜಿ ವಲಯ
Click here to access English page
ಇತ್ತೀಚೆಗಿನ ವಿಧ್ಯಮಾನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿನ ಗುಣಮಟ್ಟದ ಶಿಕ್ಷಣದ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿರುವುದನ್ನು ನಾವು ಕಾಣಬಹುದಾಗಿದೆ, ಈ ಎಲ್ಲಾ ಚರ್ಚೆಗಳಲ್ಲಿಯೂ ಶಾಲಾಭಿವೃದ್ದಿಯ ಎಲ್ಲಾ ಆಗುಹೋಗುಗಳಿಗೂ ಶಾಲಾ ಮುಖ್ಯಶಿಕ್ಷಕರನ್ನೇ ಹೊಣೆಗಾರನ್ನಾಗಿಸಲಾಗುತ್ತಿದೆ.
ತನ್ನ ಶಾಲಾ ಪರಿಸರದಲ್ಲಿನ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಬಹುಪಾಲು ಮುಖ್ಯಶಿಕ್ಷಕರಿಗೆ ಅಪಾರ ಕಾಳಜಿ ಇರುವುದನ್ನು ನಾವು ಕಾಣಬಹುದಾಗಿದೆ. ಪ್ರಮುಖವಾಗಿ ಶಾಲಾ ಸಂದರ್ಭದಲ್ಲಿ ಮಕ್ಕಳ ಬೋಧನೆ-ಕಲಿಕೆ, ಶಾಲಾ ಫಲಿತಾಂಶ, ಶಾಲಾ ಭೌತಿಕ ಅಭಿವೃದ್ದಿ, ಶಿಕ್ಷಕರ ವೃತ್ತಿ ಕೌಶಲ ಬೆಳವಣಿಗೆ, ಸಮುದಾಯ ಸಹಕಾರ, ಮೂಲಭೂತ ಸೌಕರ್ಯಗಳ ಲಭ್ಯತೆ, ದಾನಿಗಳ ಸಹಕಾರ, ಮಕ್ಕಳು-ಶಿಕ್ಷಕರ ನಡುವಿನ ಭಾಂಧವ್ಯ, ಶಿಕ್ಷಕರು-ಶಿಕ್ಷಕರ ನಡುವಿನ ಭಾಂಧವ್ಯ ಹೀಗೆ ಹಲವಾರು ರೀತಿಯ ಕಾಳಜಿಗಳು ಮುಖ್ಯ ಶಿಕ್ಷಕರಿಗೆ ಇರುತ್ತವೆ.
ಈ ಕಾಳಜಿಗಳನ್ನು ಕಾರ್ಯರೂಪಗೊಳಿಸಬೇಕಾದಲ್ಲಿ ಮುಖ್ಯ ಶಿಕ್ಷಕರ ತಮ್ಮ ಪ್ರಭಾವವನ್ನು ವಿಸ್ತರಿಸಿಕೊಳ್ಳಬೇಕು, ಮುಖ್ಯ ಶಿಕ್ಷಕರು ತನ್ನ ಕಾರ್ಯಕ್ಷೇತ್ರವನ್ನು ತುಂಬಾ ಕೂಲಂಕುಷವಾಗಿ ನೋಡಬೇಕಾಗುತ್ತದೆ. ನಂತರ ಎಲ್ಲ ಭಾಗೀದಾರರೊಡನೆ ಸೇರಿ ನಾನೇನಾದರು ಪ್ರಯತ್ನ ಮಾಡಬಹುದೇ, ಆ ಮೂಲಕ ಬದಲಾವಣೆ ತರಬಹುದೇ ಎಂಬ ಆಲೋಚನೆಯ ಮೂಲಕ ಪ್ರಭಾವ ವಲಯವನ್ನು ವಿಸ್ತರಿಸಿಕೊಳ್ಳಬಹುದು. ಈ ಅಂಶಗಳನ್ನೇ ಸ್ಟೀಪನ್ ಕೋವೆರವರು "ಪ್ರಭಾವ ವಲಯ ಮತ್ತು ಕಾಳಜಿ ವಲಯ" ಪರಿಕಲ್ಪನೆಯಲ್ಲಿ ವಿವರಿಸಿದ್ದಾರೆ.
ಕೆಲವು ಶೈಕ್ಷಣಿಕ ಸಂಶೋಧನೆಗಳಲ್ಲಿ ಮುಖ್ಯ ಶಿಕ್ಷಕರ ಪಾತ್ರ/ಜವಾಬ್ದಾರಿಗಳ ಬಗ್ಗೆ ವಿಶ್ಲೇಷಣೆ ಮಾಡಲಾಗಿದ್ದು, ಶಾಲಾಭಿವೃದ್ದಿಯ ಎಲ್ಲಾ ಪ್ರಕ್ರಿಯೆಗಳಿಗೂ ಮುಖ್ಯ ಶಿಕ್ಷಕರೇ ನೇರ ಹೊಣೆಗಾರರು ಎಂದು ಹೇಳಿರುವುದನ್ನು ಕಾಣಬಹುದು. ಮುಖ್ಯ ಶಿಕ್ಷಕರು ತಮ್ಮ ಪ್ರಭಾವ ವಲಯವನ್ನು ಬಳಸಿಕೊಂಡು ತಮ್ಮ ಕಾಳಜಿಗಳ ಮೇಲೆ ಕಾರ್ಯಪ್ರವೃತ್ತರಾಗಲು ಮತ್ತು ತಮ್ಮ ಕಾರ್ಯವೈಖರಿಯನ್ನು ಪರಿಣಾಮಕಾರಿಗೊಳಿಸುವ ಕೆಲವು ಅಂಶಗಳನ್ನು ಈ ಕೆಳಗೆ ನೋಡಬಹುದು.
ಮುಖ್ಯಶಿಕ್ಷಕರು ಸಹ ತರಗತಿ ತೆಗೆದುಕೊಳ್ಳುವುದು, ಈ ಮೂಲಕ ಮುಖ್ಯಶಿಕ್ಷಕರು ಶಾಲೆಯ ಮಕ್ಕಳೊಡನೆ ಸಂಪರ್ಕಹೊಂದಬಹುದಾಗಿದೆ. ಶಾಲೆಯ ಮಕ್ಕಳ ಸಂದರ್ಭ/ಹಿನ್ನೆಲೆಯನ್ನು ಅರ್ಥೈಸಿಕೊಳ್ಳಬಹುದು. ತರಗತಿ ಪ್ರಕ್ರಿಯೆಯಲ್ಲಿನ ಸವಾಲುಗಳ ಬಗ್ಗೆ ಶಿಕ್ಷಕರೊಡನೆ ಚರ್ಚೆನಡೆಸಲು ಹಾಗು ಪರಿಹಾರ ಕಂಡುಕೊಳ್ಳಲು ಸಹಾಯಕವಾಗುತ್ತದೆ. ಮುಖ್ಯಶಿಕ್ಷಕರು ತಮ್ಮ ತರಗತಿ ಕೋಣೆಯಲ್ಲಿನ ಅನುಭವದ ಮೂಲಕ ಚರ್ಚಿಸುವಾಗ ಸಹ ಶಿಕ್ಷಕರಿಗೂ ಸಹ ಒಂದು ರೀತಿಯ ವೃತ್ತಿಪರತೆ ಬೆಳೆಯಲು ಸಹಾಯಕವಾಗುತ್ತದೆ. ವಾರದಲ್ಲಿ ಕನಿಷ್ಟ ಎರಡು ದಿನ ತರಗತಿ ಬೋಧನೆಗೆ ಸಮಯ ನೀಡಿದರೆ, ಬೋಧನೆ ಮಾಡುವಾಗ ಮಕ್ಕಳ ಸ್ಥಿತಿಗತಿ/ಕಲಿಕಾ ಹಂತದ ಬಗ್ಗೆ ಅರಿವು ಮೂಡುತ್ತದೆ, ಈ ಅನುಭವ ಆಧಾರದ ಮೇಲೆ ಆಯಾ ತರಗತಿಯ ಶಿಕ್ಷಕರೊಡನೆ ಸಂವಾದ ನಡೆಸಲು ಹಾಗು ಅವರಿಗೆ ಸೂಕ್ತ ಸಲಹೆ ಸೂಚನೆ ನೀಡಲು ಸಹಾಯಕವಾಗುತ್ತದೆ.
ಶಾಲೆಯಲ್ಲಿ ಮಕ್ಕಳಿಗೆ ಮುಖ್ಯಶಿಕ್ಷಕರ ಲಭ್ಯತೆ, ಮಕ್ಕಳು ಸಾಮಾನ್ಯವಾಗಿ ತರಗತಿ ಕೋಣೆಗಳ ಸಮಸ್ಯೆಗಳ ಬಗ್ಗೆ , ಸಣ್ಣ ಪುಟ್ಟ ಶಾಲಾ ಸಮಸ್ಯೆಗಳ ಬಗ್ಗೆ ಪ್ರಶ್ನೆ ಕೇಳಲು ಮಾತ್ರ ಮುಖ್ಯ ಶಿಕ್ಷಕರ ಬಳಿ ಬರುತ್ತಾರೆ. ಆದರೆ ಮುಖ್ಯಶಿಕ್ಷಕರು ಮಕ್ಕಳನ್ನು ಸೂಕ್ಮವಾಗಿ ಗಮನಿಸಬೇಕು, ಕಲಿಕ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸದ ಮಕ್ಕಳು, ಕಲಿಕೆಯಲ್ಲಿ ಹಿನ್ನೆಡೆ ಹೊಂದಿರುವ ಮಕ್ಕಳು, ಮನೆಪಾಠಗಳನ್ನು ಪೂರ್ತಿ ಮಾಡದ ಮಕ್ಕಳು, ಶುಚಿತ್ವವಿಲ್ಲ ಮಕ್ಕಳು, ಶಾಲೆಗೆ ತಡವಾಗಿ ಬರುವ ಮಕ್ಕಳನ್ನು ಗುರತಿಸಿ ಮಾತನಾಡಬೇಕು, ಆಗ ಅವರ ಸಮಸ್ಯೆಗಳ ಬಗ್ಗೆ ಮಾತನಾಡಲು ಪ್ರೋತ್ಸಾಹಿಸಬೇಕು.
ಈ ರೀತಿ ಮುಕ್ತವಾಗಿ ಸಂವಹನ ನಡೆಸಲು ಸಾದ್ಯವಾಗುವಂತೆ ಶಾಲೆಯಲ್ಲಿ ಮಕ್ಕಳಿಗೆ ಮುಖ್ಯಶಿಕ್ಷಕರು ಲಭ್ಯವಿರಬೇಕು. ಮಕ್ಕಳು ತಮಗೆ ಅಗತ್ಯಬಿದ್ದಾಗೆಲ್ಲ ಯಾವುದೇ ಭೀತಿಯಿಲ್ಲದೆ ಮುಖ್ಯಶಿಕ್ಷಕರೊಡನೆ ತಮ್ಮ ಸಮಸ್ಯೆಗಳ ಬಗ್ಗೆ ಮಾತನಾಡಲು ಅವಕಾಶವಿರಬೇಕು. ವಿಶೇಷವಾಗಿ ಸರ್ಕಾರಿ ಶಾಲೆಯ ಮಕ್ಕಳ ಸನ್ನಿವೇಶದಲ್ಲಿ ಮಕ್ಕಳಿಗೆ ನಾನಾತರಹದ ಸಮಸ್ಯೆಗಳಿರುತ್ತವೆ. ಕೌಟುಂಬಿಕ ಸಮಸ್ಯೆಗಳು, ದುಶ್ಚಟಗಳ ಪೋಷಕರು, ಸದಾ ಕೆಲಸದಲ್ಲಿ ನಿರತರಾದ ತಾಯಿ ಹೀಗೆ ಹಲವು ಕಾರಣಗಳಿಂದಾಗಿ ಮಕ್ಕಳಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಸೂಕ್ತ ವ್ಯಕ್ತಿಗಳ ಅವಶ್ಯಕತೆ ಇರುತ್ತದೆ. ಈ ಸಂದರ್ಭದಲ್ಲಿ ಮುಖ್ಯಶಿಕ್ಷಕರು ಮಕ್ಕಳೊಡನೆ ಮುಕ್ತವಾಗಿ ಬೆರೆಯುವ ಮೂಲಕ ಮಕ್ಕಳು ನಿರ್ಭೀತಿಯಿಂದ ಸಂವಹನ ನಡೆಸಲು ಸಹಾಯಕವಾಗುತ್ತದೆ. ಇದು ಸಹಶಿಕ್ಷಕರಿಗೂ ಸಹ ಪ್ರೇರೇಪಣೆ ನೀಡಲು ಸಹಾಯಕವಾಗುತ್ತದೆ.
ಸಹಶಿಕ್ಷಕರಿಗೆ ಶಾಲೆಯಲ್ಲಿ ಮುಖ್ಯಶಿಕ್ಷಕರ ಲಭ್ಯತೆ , ತರಗತಿ ಹಂತದಲ್ಲಿ ಜವಾಬ್ದಾರಿ ನಿರ್ವಹಿಸುವ ಸಹಶಿಕ್ಷಕರಿಗೆ ತರಗತಿ ಪ್ರಕ್ರಿಯೆಯಲ್ಲಿ ಹಲವು ಸವಾಲುಗಳು ಬರುತ್ತವೆ. ಮಕ್ಕಳ ಕಲಿಕೆ, ಭಾಗವಹಿಸುವಿಕೆ, ಬೋಧನಾ ಪ್ರಕ್ರಿಯೆ ಇನ್ನೂ ಮುಂತಾದ ವಿಷಯಗಳ ಬಗ್ಗೆ ಶಿಕ್ಷಕರಿಗೆ ಬೆಂಬಲವಾಗಿ ಮುಖ್ಯಶಿಕ್ಷಕರು ಶಾಲೆಯಲ್ಲಿ ಲಭ್ಯವಿರಬೇಕು. ಈ ಮೂಲಕ ಶಿಕ್ಷಕರನ್ನು ಹುರಿದುಂಬಿಸಿ ಬೋಧನಾ ಪ್ರಕ್ರಿಯೆಯನ್ನು ಪರಿಣಾಮಕಾರಿಗೊಳಿಸಲು ಸಾಧ್ಯವಾಗುತ್ತದೆ. ಸಹ ಶಿಕ್ಷಕರ ನಡುವೆ ಕೆಲವು ಸಲ ಬಿನ್ನಾಭಿಪ್ರಾಯಗಳು ಉಂಟಾಗುವ ಸಾಧ್ಯತೆಗಳು ಇರುತ್ತವೆ. ಇಂತಹ ಸಂದರ್ಭಗಳಲ್ಲಿ ಮುಖ್ಯಶಿಕ್ಷಕರು ಸಹ ಶಿಕ್ಷಕರೊಡನೆ ಸಂವಹನ ನಡೆಸಲು ಹಾಗು ಅವರವರ ಸಮಸ್ಯೆಗಳನ್ನು ಆಲಿಸಲು ಲಭ್ಯವಿರಬೇಕು ಹಾಗು ಶಿಕ್ಷಕರ ನಡುವೆ ಸಹಸಂಬಂಧ ಏರ್ಪಡುವಂತಹ ಕಾರ್ಯತಂತ್ರಗಳನ್ನು ಬಳಸಬೇಕು.
ಶಾಲೆಯಲ್ಲಿ ಯಾರೂ ನಿಮ್ಮ ಮಾತು ಕೇಳುವುದಿಲ್ಲವೆಂದು ನಿಮಗೆ ಬೇಸರ ಆಗಿರಬಹುದು. ಆದರೆ ನೀವು ಮುಕ್ತವಾಗಿ ಅವರೊಡನೆ ಬೆರೆಯಲು ಆರಂಭಿಸಿದರೆ ಇತರರು ತಾವಾಗೇ ನಿಮ್ಮನ್ನು ಹಿಂಬಾಲಿಸುತ್ತಾರೆ. ಜನ ನಾವು ಹೇಳುವುದನ್ನು ಮಾಡುವುದಿಲ್ಲ, ನಾವು ಮಾಡುವುದನ್ನು ಅನುಸರಿಸುತ್ತಾರೆ. ಆದ್ದರಿಂದ ಮೊದಲು ನಾವು ಮುಂದೆ ಬಂದರೆ ನಂತರ ಶಾಲೆಯ ಅಭಿವೃದ್ಧಿಯತ್ತ ಗಮನ ಹರಿಸಬಹುದು.ಹೀಗೆ ನಮ್ಮಲ್ಲಿ ಸ್ಥಿರತೆ ಮತ್ತು ಪಾರದರ್ಶಕತೆ ಇದ್ದರೆ ಪ್ರಭಾವಿ ವಲಯ ವಿಸ್ತರಿಸುತ್ತದೆ.
ಸಮುದಾಯ/ಪೋಷಕರೊಡನೆ ಭಾಂಧವ್ಯ: ಪೋಷಕರಿಗೆ/ಸಮುದಾಯದವರಿಗೆ ಶಾಲೆಯ ಬಗ್ಗೆ ಅರಿವಿಲ್ಲ, ಅವರನ್ನು ಶಾಲೆಯೆಡೆಗೆ ಕರೆತರುವುದೇ ಒಂದು ದೊಡ್ಡ ಸಮಸ್ಯೆಯೆಂಬುದು ಬಹಳಷ್ಟು ಮುಖ್ಯಶಿಕ್ಷಕರ ಹೇಳಿಕೆ, ಶಾಲೆಗೆ ಪೋಷಕರನ್ನು ಕರೆತರಬೇಕು ಎಂಬ ಇವರ ಕಾಳಜಿ ಸರಿ, ಆದರೆ ಪೋಷಕರು ಶಾಲೆಗೆ ಬಾರದಿರಲು ಏನು ಕಾರಣಗಳಿರಬಹುದು ಎಂಬುದರ ಬಗ್ಗೆಯೂ ಯೋಚಿಸಬೇಕಿದೆ. ಪೋಷಕರು ಶಾಲೆಗೆ ಬಂದಾಗ ಪೋಷಕರ ಸಮಸ್ಯೆಗಳು ಹಾಗು ಅವರ ಕೌಟುಂಬಿಕ ಹಿನ್ನೆಲೆಯ ಬಗ್ಗೆ ಮುಖ್ಯಶಿಕ್ಷಕರಿಗೆ ಅರಿವಿರಬೇಕಾಗುತ್ತದೆ. ಮಕ್ಕಳ ಸಮಸ್ಯೆಗಳ ಬಗ್ಗೆ ನೇರವಾಗಿ ಪೋಷಕರನ್ನೇ ದೂಷಿಸುವುದಕ್ಕಿಂತ ಅವರ ಹಿನ್ನೆಲೆಯನ್ನು ಅರಿತು, ಅವರಿಗೆ ಮಕ್ಕಳ ಶೈಕ್ಷಣಿಕ ಮಹತ್ವದ ಬಗ್ಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಬಹುದು. ಪೋಷಕರು ಸಾಮಾನ್ಯವಾಗಿ ದಿನಗೂಲಿ ನೌಕರರು, ಮನೆಗೆಲಸದವರೋ ಆಗಿರುತ್ತಾರೆ, ಅವರ ಸ್ಥಿತಿಗತಿಗಳ ಬಗ್ಗೆ ಮುಖ್ಯಶಿಕ್ಷಕರಿಗೆ ಅರಿವಿದ್ದರೆ ಅವರೊಡನೆ ಬಾಂಧವ್ಯಯುತವಾಗಿ ಸಂಭಾಷಿಸುವ ಮೂಲಕ ಶಾಲೆಯ ಬಗ್ಗೆ ಗೌರವ ಭಾವನೆ ಮೂಡಿಸಬಹುದು.
ಶಾಲೆಗಳಲ್ಲಿ ಪೋಷಕರ ಸಭೆಗಳನ್ನು ಏರ್ಪಡಿಸಿ ಅದಕ್ಕೆ ಅಹ್ವಾನ ನೀಡಲಾಗುತ್ತದೆ, ಅದೇ ಸಮಯಕ್ಕೆ ತಮ್ಮ ದಿನ ನಿತ್ಯದ ಕೆಲಸಗಳಿಗೆ ತೆರಳಬೇಕಿರುವುದರಿಂದ ಬಹಳಷ್ಟು ಪೋಷಕರು ಈ ಸಭೆಗಳಿಗೆ ಗೈರು ಹಾಜರಾಗುತ್ತಾರೆ, ಪೋಷಕರ ಸಭೆಗಳನ್ನು ಪೋಷಕರಿಗೆ ಅನುಕೂಲವಾಗುವಂತಹ ಸಮಯದಲ್ಲಿ ಏರ್ಪಡಿಸುವ ಮೂಲಕ ಪೋಷಕರ ಸಭೆಗೆ ಎಲ್ಲಾ ಪೋಷಕರು ಭಾಗವಹಿಸಲು ಪ್ರೋತ್ಸಾಹಿಸಬೇಕು. ರಜಾ ದಿನಗಳಂದು ಸಭೆ ಕರೆಯುವುದು, ಒಂದಷ್ಟು ಮಕ್ಕಳು ವಾಸಿಸುವ ಪ್ರದೇಶಕ್ಕೆ ತೆರಳಿ ಅಲ್ಲೇ ಸಭೆ ನಡೆಸುವುದು, ಆಯಾ ಸಮುದಾಯಗಳ ಮುಖಂಡರನ್ನು ಭೇಟಿ ಮಾಡಿ ಅವರ ಮೂಲಕ ಪೋಷಕರಿಗೆ ಅರಿವು ಮೂಡಿಸುವುದು, ಪೋಷಕರು ಲಭ್ಯವಾಗುವ ಸಂದರ್ಭಗಳನ್ನು ತಿಳಿದು ಆ ಸಂದರ್ಭಗಳಲ್ಲೇ ಅವರ ಸಂಪರ್ಕ ಸಾಧಿಸುವುದು, ಉದಾ : ಪಡಿತರ ವಿತರಣಾ ದಿನಗಳು, ಹಬ್ಬಗಳ ದಿನಗಳು. ಪೋಷಕರು ಮತ್ತು ಶಿಕ್ಷಕರ ನಡುವೆ ಸಂವಹನ ಉತ್ತಮವಾದಷ್ಟು ಮಕ್ಕಳ ನಡೆತೆ ಮತ್ತು ಕಲಿಕೆಯಲ್ಲಿ ಬದಲಾವಣೆ ಕಾಣಬಹುದು. ಇಲ್ಲಿ ಮುಖ್ಯ ಶಿಕ್ಷಕರು ತಮ್ಮ ಶಿಕ್ಷಕರು, ಮಕ್ಕಳು ಹಾಗು ಪೋಷಕರ ಮೇಲೆ ತಮ್ಮ ಪ್ರಭಾವ ಬೀರಬಹುದು.
ಇಲಾಖೆ ಸಂಪರ್ಕ: ಇಲಾಖೆಯೊಂದಿಗಿನ ನಿರಂತರ ಸಂಪರ್ಕವೂ ಸಹ ಮುಖ್ಯಶಿಕ್ಷಕರ ಕಾರ್ಯವೈಖರಿಯ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳ ಕಲಿಕಾ ಹಂತಕ್ಕೆ ಪೂರಕವಾಗಿ ಪಠ್ಯಕ್ರಮ ಬೋಧನಾ ವಿಧಾನವನ್ನು ಬದಲಾಯಿಸಿಕೊಳ್ಳುವುದು, ಮಕ್ಕಳ ಕಲಿಕಾ ಸಾಮರ್ಥ್ಯಕ್ಕನುಗುಣವಾಗಿ ಮೌಲ್ಯಮಾಪನ ವಿಧಾನಗಳ ಬದಲಾವಣೆ ಬಗ್ಗೆ ಕಾಳಜಿವಹಿಸಬಹುದು. ಮುಖ್ಯಶಿಕ್ಷಕರು ತಮ್ಮ ಶಾಲಾ ಹಂತದ ಮಕ್ಕಳ ಕಲಿಕಾ ಸಾಮರ್ಥ್ಯಕ್ಕನುಗುಣವಾಗಿ ಬೋಧನೆ, ಮೌಲ್ಯಮಾಪನಗಳಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಲು ಅವಕಾಶವಿದೆ.
ಶಾಲಾ ನಾಯಕತ್ವದ ಹಿನ್ನೆಲೆಯಲ್ಲಿ ನೋಡುವಾಗ ಮುಖ್ಯಶಿಕ್ಷಕರ ದೃಷ್ಟಿಕೋನವೂ ಸಹ ಅವರ ಕಾಳಜಿವಲಯ ಮತ್ತು ಪ್ರಭಾವ ವಲಯದ ಮೇಲೆ ಪರಿಣಾಮ ಬೀರುತ್ತದೆ. ಶಾಲೆಯಲ್ಲಿ ಏನು ಮಾಡಬೇಕು, ಏನು ಮಾಡಬಾರದು, ಸಮುದಾಯದ ಭಾಗೀದಾರರು , ಶಿಕ್ಷಕರು, ಮಕ್ಕಳು, ಪೋಷಕರೊಂದಿಗೆ ಸೇರಿ ಏನು ಮಾಡಬೇಕು, ಏನು ಮಾಡಬಾರದು ಎಂಬುದರ ಪಟ್ಟಿ ಮಾಡಬೇಕಾಗುತ್ತದೆ. ಆ ನಂತರ ತಾನು ಮಾಡಲಾಗದ ಅಂಶಗಳನ್ನು ತನ್ನ ಕಾಳಜಿ ವಲಯದ ಮೂಲಕ ಕಾರ್ಯರೂಪಕ್ಕೆ ತರಲು ಪ್ರಯತ್ನಿಸಬಹುದು.ಇಲಾಖೆಯೊಂದಿಗೆ ಸೇರಿ ಮಾಡಬಹುದಾದ ಅಂಶಗಳ ಪಟ್ಟಿ ತಯಾರಿಸಿ ಆ ಅಂಶಗಳ ಬಗ್ಗೆ ಇಲಾಖೆಯ ಸಹಾಯ ಕೋರಬಹುದಾಗಿದೆ.
ಶಾಲೆಯನ್ನು ಆಕರ್ಷಣೀಯಗೊಳಿಸುವಲ್ಲಿ ದಾನಿಗಳೊಡನೆ ಭಾಂಧವ್ಯ: ಶಾಲಾ ನಾಯಕತ್ವದ ಮೂರ್ತ ರೂಪದಂತಿರುವ ಮುಖ್ಯ ಶಿಕ್ಷಕರು ತನ್ನ ಕಾರ್ಯಕ್ಷೇತ್ರವಾಧ ಶಾಲೆಯನ್ನು ಆಕರ್ಷಣೀಯಗೊಳಿಸಿ ಮಕ್ಕಳು ಪೋಷಕರು ನಿರಂತರವಾಗಿ ಶಾಲಾ ಚಟುವಟಿಕೆಯಲ್ಲಿ ತೊಡಗುವಂತೆ ಮಾಡಬೇಕಾಗುತ್ತದೆ, ಶಾಲೆಯ ಕುಂದು ಕೊರತೆ ನಿವಾರಿಸುವಲ್ಲಿ ಊರಿನ ಪರ ಊರಿನ ದಾನಿಗಳ ಸಂಪರ್ಕ ಇಟ್ಟುಕೊಳ್ಳುವುದು ಆ ಮೂಲಕ ಶಾಲಾ ಅಭಿವೃದ್ಧಿ ಚಟುವಟಿಕೆಗಳನ್ನು ಅವರಿಗೆ ಮನವರಿಕೆ ಮಾಡುವುದು, ಸಮುದಾಯ ಮತ್ತು ದಾನಿಗಳ ನಡುವೆ ಭಾಂದವ್ಯ ಬೆಸಯದುಕೊಂಡು ಸಹಾಯ ಸಹಕಾಋವನ್ನು ನಿರಂತರವಾಗಿಸುವಲ್ಲಿ ಮುಖ್ಯ ಶಿಕ್ಷಕರ ಪಾತ್ರ ಘಣನೀಯವಾಗಿದೆ. ಮುಖ್ಯ ಶಿಕ್ಷಕರು ಆ ಮೂಲಕ ಪ್ರಭಾವಿಸುವ ಅಗತ್ಯವೂ ಇದೆ.
ಶಾಲಾ ಹಳೇ ವಿದ್ಯಾರ್ಥಿಗಳೊಡನೆ ಸಮಾಗಮ : ಶಾಲೆಗೆ ಬರುವ ವಿದ್ಯಾರ್ಥಿಗಳು ಮಾತ್ರ ಶಾಲೆಯಿಂದ ಬಾಗೀದಾರರು ಮಾತ್ರವಲ್ಲ, ಆ ಶಾಲೆಯಲ್ಲಿ ಶಿಕ್ಷಣ ಮುಗಿಸಿರುವ ವಿದ್ಯಾರ್ಥಿಗಳು ಆ ಶಾಲೆಯ ಬಾಗೀದಾರರೆ, ಹಳೇ ವಿದ್ಯಾರ್ಥಿಗಳ ಸಂಘಟನೆ ಅದರ ಅಗತ್ಯತೆಯನ್ನು ಮನವರಿಕೆ ಮಾಡುವು ಹಳೇ ವಿದ್ಯಾರ್ಥಿಗಳಿಗೆ ಸಲಹೆ ಸೂಚನೆ ನೀಡುತ್ತಾ ಅವರನ್ನು ಶಾಲಾಭಿವೃದ್ಧಿಯಲ್ಲಿ ತೊಡಗಿಸಿ ಪ್ರಭಾವವನ್ನು ಸಮುದಾಯದಾದ್ಯಂತ ವಿಸ್ತರಿಸುವ ಅಗತ್ಯ ಮುಖ್ಯ ಶಿಕ್ಷಕರದಾಗಿರುತ್ತದೆ.
ಪ್ರಸ್ತಾವಿಕ ಉದಾಹರಣೆ:
ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಸಾಧನೆಯ ಬಗ್ಗೆ ಚರ್ಚಿಸಲು ಬೆಂಗಳೂರಿನ ಕೆಲವು ಮುಖ್ಯ ಶಿಕ್ಷಕರ ಜೊತೆ ನಡೆದ ಸಭೆಯಲ್ಲಿಯೂ ಸಹ ಈ ಮೇಲಿನ ಅಂಶಗಳ ಬಗ್ಗೆ ಚರ್ಚೆಯಾಯಿತು. ಬಹಳಷ್ಟು ಮುಖ್ಯಶಿಕ್ಷಕರು ಈ ಮೇಲೆ ತಿಳಿಸಿದ ಅಂಶಗಳನ್ನು ಶಾಲೆಯಲ್ಲಿ ಅನುಷ್ಟಾನಗೊಳಿಸುವ ಬಗ್ಗೆ ಹಾಗು ಈಗಾಗಲೇ ಕೆಲವು ಅನುಷ್ಟಾನಗೊಂಡಿರುವ ಬಗ್ಗೆ ವಿಶ್ಲೇಷಣೆ ನೀಡಿದ್ದಾರೆ. ಈ ಚರ್ಚೆಯ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕರೇ ತಮ್ಮ ಅನುಭವದ ಮೂಲಕ ಹೇಗೆ ಶಾಲಾಭಿವೃದ್ದಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಬಹುದು ಎಂಬುದನ್ನು ವಿವರಿಸದ್ದಾರೆ. ಈ ಅನುಭವಗಳಲ್ಲಿ ಈಗ ನಾವು ಮೇಲೆ ನೋಡಿದ ಅಂಶಗಳನ್ನು ಸಹ ಕಾಣಬಹುದಾಗಿದೆ.
ಬೆಂಗಳೂರಿನ ಒಂದು ಬಾಲಕೀಯರ ಪ್ರೌಢಶಾಲೆಯಲ್ಲಿನ ಮುಖ್ಯಶಿಕ್ಷಕಿಯೊಬ್ಬರು, ತಮ್ಮ ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವ ಮಕ್ಕಳ ಸಂಖ್ಯೆಯನ್ನು ಗಮನಿಸಿದರು, ತಮ್ಮ ಶಾಲೆಯ ಅಸ್ತಿತ್ವ ಮತ್ತು ಶಿಕ್ಷಕರನ್ನು ಉಳಿಸಿಕೊಳ್ಳುವ ಕಾಳಜಿಯಿಂದಾಗಿ ಶಾಲೆಯಲ್ಲಿ ಬಾಲಕರನ್ನು ದಾಖಲು ಮಾಡಿಕೊಳ್ಳಲು ಅವಕಾಶ ನೀಡುವಂತೆ ಇಲಾಖೆಗೆ ಕೋರಿಕೆ ಸಲ್ಲಿಸಿ ಅದರಲ್ಲಿ ಯಶಸ್ವಿಯಾದರು. ಪ್ರೌಢಶಾಲೆಗಳಲ್ಲಿ ಬಾಲಕರನ್ನು ನಿಬಾಯಿಸುವುದು ಸುಲಭದ ಕೆಲಸವಲ್ಲ, ಆದರೂ ಶಾಲೆಯ ಮೇಲಿನ ಕಾಳಜಿಯಿಂದಾಗಿ ಅವರು ಶ್ರಮವಹಿಸಲು ಸಿದ್ದರಾದರು. ಮತ್ತು ಈ ಹೊಸ ಜವಾಬ್ದಾರಿಯನ್ನು ನಿರ್ವಹಿಸಲು ತಮ್ಮೆಲ್ಲಾ ಸಹೋದ್ಯೋಗಿಗಳೊಡನೆ ಚರ್ಚಿಸಿ ಎಲ್ಲರ ಸಹಮತದೊಂದಿಗೆ ತೀರ್ಮಾನ ತೆಗೆದುಕೊಂಡರು.
ಅದೇ ರೀತಿ ಹಲವಾರು ಮುಖ್ಯ ಶಿಕ್ಷಕರು ತಮ್ಮ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತೆರೆಯುವ ಮೂಲಕ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸುವ ಪ್ರಯತ್ನ ಮಾಡುತ್ತಾ, ತನ್ನ ಕಾಳಜ ವಲಯದ ಮೇಲೆ ಪ್ರಭಾವ ಬೀರುತ್ತಿದ್ದಾರೆ.
ಕಾಳಜಿ ವಲಯ ಮತ್ತು ಪ್ರಭಾವ ವಲಯದ ವ್ಯಾಖ್ಯಾನ
ಮುಖ್ಯಶಿಕ್ಷಕರೊಂದಿಗಿನ ಚರ್ಚೆಯ ಪ್ರಕಾರ ಶಾಲೆಯಲ್ಲಿ ಮುಖ್ಯಶಿಕ್ಷಕರು ತಮ್ಮದೇ ಆದ ಕಾಳಜಿ ವಲಯವನ್ನು ಸೃಷ್ಟಿ ಮಾಡಿಕೊಳ್ಳಬೇಕು ಹಾಗು ಆ ಕಾಳಜಿವಲಯಗಳ ಮೇಲೆ ತನ್ನ ಪ್ರಭಾವ ವಲಯವನ್ನು ವಿಸ್ತರಿಸುತ್ತಾ ಸಾಗಬೇಕು, ಆಗ ಮಾತ್ರ ಶಾಲಾ ಚಟುವಟಿಕೆಗಳಲ್ಲಿನ ಸವಾಲುಗಳನ್ನು ಸುಗಮವಾಗಿ ಪರಿಹರಿಸಲು ಸಾಧ್ಯ ಎಂದು ಹೇಳುತ್ತಾರೆ.
ಕಾಳಜಿ ವಲಯ ಮತ್ತು ಪ್ರಭಾವ ವಲಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ತನ್ನ ಸುತ್ತಮುತ್ತಲಿನ ಆಗುಹೋಗುಗಳ ಬಗ್ಗೆ ಕಾಳಜಿ ಇದ್ದರೆ ಮಾತ್ರವೇ , ಅವುಗಳ ಮೇಲೆ ತನ್ನ ಪ್ರಭಾವ ಬೀರಲು ಸಾಧ್ಯವಾಗುತ್ತದೆ. ಆದರೆ ಕೇವಲ ಕಾಳಜಿ ಮಾತ್ರವೇ ಇದ್ದು ಅದರ ಮೇಲೆ ಯಾವುದೇ ಪ್ರಕ್ರಿಯೆ ಆರಂಭಿಸದಿದ್ದಾಗ ಅದು ನಕಾರತ್ಮಕ ಧೋರಣೆಯನ್ನು ಬಿಂಬಿಸುತ್ತದೆ. ನನ್ನ ಕಾಳಜಿಗಳ ಮೇಲೆ ನಾನೇದರೂ ಕಾರ್ಯ ಆರಂಭಿಸಬಹುದೇ ಎಂಬ ಚಿಂತನೆ ಮೂಡಿದಾಗ ನಮ್ಮೊಳಗಿನ ಕಾಳಜಿಗಳು ಧನಾತ್ಮಕವಾಗುತ್ತವೆ" ಎಂಬುದು ಯಶಸ್ವಿ ಮುಖ್ಯಶಿಕ್ಷಕರೊಬ್ಬರ ಅನಿಸಿಕೆಯಾಗಿದೆ.
ಎಲ್ಲ ವ್ಯಕ್ತಿಗಳ ಜೀವನದಲ್ಲಿ ಒಂದಲ್ಲ ಒಂದು ರೀತಿಯ ಭಿನ್ನಾಭಿಪ್ರಾಯಗಳು ಕ್ಲಿಷ್ಟ ಸಮಸ್ಯೆಗಳು ಸಂಸಾರದಲ್ಲಿಯಾಗಲೀ ಕಾರ್ಯಕ್ಷೇತ್ರದಲ್ಲಿ ಅಥವಾ ಸ್ನೇಹಿತರೊಡನೆಯಾಗಲೀ ಇರುತ್ತವೆ ಅಥವಾ ಇರಬಹುದು . ಕೆಲವು ಬಾರಿ ಈ ಸಮಸ್ಯೆಗಳು ಬಹಳ ಚಿಕ್ಕದಾಗಿರುತ್ತದೆ ಮತ್ತೆ ಕೆಲವು ಸಾರಿ ಸಮಸ್ಯೆಗಳು ಬಹಳ ದೊಡ್ಡದಿರಲೂಬಹುದು.ಇದೇ ರೀತಿ ಶಾಲೆಗಳಲ್ಲಿಯೂ ಸಹ ಒಂದಲ್ಲ ಒಂದು ರೀತಿಯ ಸವಾಲುಗಳು ಎದುರಾಗುತ್ತಲೇ ಇರುತ್ತವೆ . ಇಂತಹ ಸಂದರ್ಭದಲ್ಲಿ ಶಾಲಾ ಮುಖ್ಯಸ್ಥರಲ್ಲಿ ಕೆಲವರು ಈ ಕೆಳಗಿನಂತೆ ಯೋಚಿಸಬಹುದು .
''ನಾನು ಏನೆಲ್ಲಾ ಮಾಡಬಹುದೋ ಅದನ್ನೆಲ್ಲಾ ಮಾಡಿದ್ದೇನೆ. ಪರಿಸ್ಥಿತಿ ಕೈಮೀರಿತ್ತು. ಸನ್ನಿವೇಶ ಹೀಗಿದ್ದಿದ್ದರೆ ಏನಾದರೂ ಮಾಡಬಹುದಿತ್ತು. “ಇದು ನನ್ನ ಕೈಲಿರಲಿಲ್ಲ, ಇದನ್ನೂ ಮೀರಿ ಯೋಚಿಸಲಾಗುವುದಿಲ್ಲ "
ಮತ್ತು ಇನ್ನು ಕೆಲವರು ''ಇದರ ವಿಷಯವಾಗಿ ನಾನು ಏನಾದರೂ ಮಾಡಬಲ್ಲೆ, ನೋ ಡೋಣ, ಸ್ವಲ್ಪ ಸಮಯ ತೆಗೆದು ಕೊಂಡು ಯೋಚಿಸಿದರೆ ಖಂಡಿತ ಏನಾದರೂ ಮಾಡಬಹುದು " ಎಂಬುದಾಗಿ ಯೋಚಿಸುತ್ತಾರೆ.
ನಮ್ಮಲ್ಲಿ ಅನೇಕರು ಮೊದಲೆರಡು ಪ್ರತಿಕ್ರಿಯೆಗಳನ್ನು ಹೆಚ್ಚಾಗಿ ಆಯ್ದು ಕೊಳ್ಳುತ್ತೇವೆ, ಏಕೆಂದರೆ ನಮ್ಮ ಅನುಕೂಲಕ್ಕೆ ತಕ್ಕಂತೆ ಇರುವ, ಕಡಿಮೆ ಸಮಯ ತೆಗೆದುಕೊಳ್ಳುವ ಹಾಗು ಹೆಚ್ಚು ಹೊಣೆಗಾರಿಕೆ/ಜವಾಬ್ದಾರಿ ಇಲ್ಲದ ಉತ್ತರವನ್ನು ನಾವು ಹುಡುಕುತ್ತೇವೆ, ನಮ್ಮ ಸಮಸ್ಯೆಗಳಿಗೆ ಸನ್ನಿವೇಶವನ್ನೋ ಅಥವಾ ಯಾವುದೋ ವ್ಯಕ್ತಿಯನ್ನೋ, ವ್ಯವಸ್ಥೆಯನ್ನೋ ಹಳಿಯುತ್ತಲೇ ಸಮಸ್ಯೆಯೊಂದಿಗೆ ಉಳಿದುಹೋಗುತ್ತೇವೆ.
ಆದರೆ ಕೆಲವರು ಮಾತ್ರ ''ನಾನು ಮನಸ್ಸು ಮಾಡಿದರೆ ಕಿಂಚಿತ್ತಾದರೂ ಬದಲಾವಣೆ ಮಾಡಬಲ್ಲೆ'' ಎಂಬ ನಿರ್ಧಾರಕ್ಕೆ ಬರುತ್ತಾರೆ, ಮತ್ತು ಕಾರ್ಯರೂಪಕ್ಕೆ ತರಲು ಮನಸ್ಸು ಮಾಡುತ್ತಾರೆ, ಈ ರೀತಿ ನಿರ್ಧಾರ ಮಾಡಿದವರಿಗೆ ಹೆಚ್ಚು ಜವಾಬ್ದಾರಿ ಮತ್ತು ಶ್ರಮ ಕಟ್ಟಿಟ್ಟ ಬುತ್ತಿಯಾಗುತ್ತದೆ, ಆದರೆ ಅಂತಿಮವಾಗಿ ಯಶಸ್ಸು ದೊರಕುವುದು ನಿಶ್ಚಿತವಾಗಿರುತ್ತದೆ.
ಈ ಸಿದ್ದಾಂತವನ್ನು ಡಾ.ಸ್ಟೀಪನ್ ಕೋವೆ (Stephen Covey)ರವರು ತಮ್ಮ ಪ್ರಖ್ಯಾತ ಪುಸ್ತಕ 'The 7 habits of highly effective people” ಎಂಬ ಪುಸ್ತಕದಲ್ಲಿ ವಿವರಿಸುತ್ತಾ "ಪ್ರತಿಕ್ರಿಯಾತ್ಮಕ ಪ್ರವೃತ್ತಿ " (Reactive) ಮತ್ತು "ಪ್ರಕ್ರಿಯಾತ್ಮಕ ಪ್ರವೃತ್ತಿ" (Proactive) ಎಂಬುದಾಗಿ ವಿಂಗಡಿಸಿ "ಕಾಳಜಿ ವಲಯ ಮತ್ತು ಪ್ರಭಾವ ವಲಯ" ಎಂಬ ಪರಿಕಲ್ಪನೆಯನ್ನು ನೀಡಿದ್ದಾರೆ.
ಪ್ರತಿಕ್ರಿಯಾತ್ಮಕ ಪ್ರವೃತ್ತಿಯ ವ್ಯಕ್ತಿಗಳು ತಮ್ಮ ಪರಿಸರ, ಸುತ್ತಲಿನ ವ್ಯಕ್ತಿಗಳನ್ನು, ಸಂದರ್ಭ ಸನ್ನಿವೇಶವನ್ನು ದೂರತ್ತಲೇ ಇರುವ ಸಮಸ್ಯೆಯೊಂದಿಗೆಯೇ ಇರುತ್ತಾರೆ. ಯಾವುದೇ ವಿಷಯದಲ್ಲೂ ಸ್ಪಷ್ಟವಾಗಿ ನಿರ್ಧಾರ ತೆಗೆದುಕೊಳ್ಳುವುದಿಲ್ಲ, ಕಷ್ಟ ಎನಿಸಿದ ಕೆಲದಗಳನ್ನು ಅಲ್ಲಿಯೇ ನಿಲ್ಲಿಸಿಬಿಡುತ್ತಾರೆ ವಿವಿಧ ಕಾರ್ಯತಂತ್ರಗಳ ಯೋಚನೆ ಮಾಡುವುದಿಲ್ಲ. ಹಾಗು ತನ್ನ ಸಹಶಿಕ್ಷಕರ ತಪ್ಪುಗಳನ್ನು ಹುಡುಕುವುದೇ ಒಂದು ಕಾರ್ಯವಾಗಿರುತತ್ತದೆ.
ಪ್ರಕ್ರಿಯಾತ್ಮಕ ವ್ಯಕ್ತಿಗಳು ತಮ್ಮ ಪ್ರಭಾವ ವಲಯದಲ್ಲಿನ ವಿಷಯಗಳಿಗೆ ಪ್ರಾಮುಖ್ಯತೆ / ಗಮನ ಕೊಡುತ್ತಾರೆ ಹಾಗು ಯಾವುದೇ ಸನ್ನಿವೇಶ/ಸಂದರ್ಭಗಳನ್ನು ನಿಂದಿಸುವುದರ ಬದಲು, ಆ ಸಂದರ್ಭವನ್ನು ನಿಭಾಯಿಸುವ ರೀತಿ/ಕಾರ್ಯತಂತ್ರಗಳನ್ನು ಅಲೋಚಿಸುತ್ತಾರೆ ಹಾಗು ಅನುಸರಿಸುತ್ತಾರೆ. ನಮ್ಮ ಶಾಲೆಯಲ್ಲಿನ ಪ್ರತಿಯೊಂದು ಸನ್ನಿವೇಶ/ಸಂದರ್ಭಗಳಿಗೆ ತಾವೂ ಸಹ ಕಾರಣ ಎಂಬುದಾಗಿ ಯೋಚಿಸುತ್ತಾರೆ. ಹಾಗು ಈ ಸಂದರ್ಭ ಅಥವಾ ಸಮಸ್ಯೆಗಳನ್ನು ಎದುರಿಸಲು ನಾನೇನು ಮಾಡಬಹುದು, ಯಾರನ್ನು ಒಳಗೊಳ್ಳಿಸಬಹುದು ಎಂಬ ಕಾರ್ಯೋನ್ಮುಖವಾದ ಚಿಂತನೆ ಮಾಡುತ್ತಾರೆ.
ಸ್ಟೀವೆನ್ ಕೋವೆಯವರ ಪ್ರಭಾವವಲಯ ಮತ್ತು ಕಾಳಜಿ ವಲಯ ಪರಿಕಲ್ಪನೆಯು ಬಹಳ ಯಶಸ್ವಿ ಹಾಗೂ ಶಕ್ತಿಯುತವಾಗಿದೆ. ಇದರ ಅಂಶಗಳನ್ನು ಶಾಲಾ ನಾಯಕತ್ವದಲ್ಲಿ ಅಳವಡಿಸಿಕೊಳ್ಳುವ ಮೂಲಕ ಶಾಲಾಭಿವೃದ್ದಿ ಅಂಶಗಳನ್ನು ಯಶಸ್ವಿಯಾಗಿ ಅನುಷ್ಟಾಗೊಳಿಸಬಹುದಾಗಿದೆ.