ಆವಾಸ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

https://www.youtube.com/watch?v=iq63QW8g7jI


ಉದ್ದೇಶಗಳು:

ವಿವಿಧ ಪ್ರಾಣಿಗಳು ಹಾಗು ಅವುಗಳ ಆವಾಸಗಳ ನಡುವಿನ ಭಿನ್ನತೆ ಮತ್ತು ಸಾಮ್ಯತೆಯನ್ನು ಕಥೆಯ ಮೂಲಕ ಅರ್ಥಮಾಡಿಕೊಳ್ಳುವುದು.

ತಮ್ಮ ಸುತ್ತಲಿನ ವಿವಿಧ ಆವಾಸಗಳು ಮತ್ತು ಅಲ್ಲಿನ ಜೀವಿಗಳನ್ನು ವೀಕ್ಷಣೆ ಮೂಲಕ ಅನ್ವೇಷಿಸಿ, ಆವಾಸ ಪರಿಕಲ್ಪನೆಯನ್ನು ಸ್ಪಷ್ಟೀಕರಿಸಿಕೊಳ್ಳುವರು.

ತಂತ್ರಜ್ಞಾನವನ್ನು ಬಳಸಿ ಪ್ರಾಣಿಗಳ ರಚನಾತ್ಮಕ ಹೊಂದಾಣಿಕೆ ಅವುಗಳ ಆಹಾರ, ಆವಾಸ ಮತ್ತು ಪರಿಸರದ ಇತರೆ ಅಂಶಗಳೊಂದಿಗಿನ ಸಂಬಂಧವನ್ನು ಗುರುತಿಸಲು ಅವಕಾಶ ಕಲ್ಪಿಸುವುದು

ಪ್ರಾಣಿಗಳು ಆವಾಸಕ್ಕೆ ಹೊಂದಿಕೊಳ್ಳಲು ಅಗತ್ಯವಾದ ರಚನಾತ್ಮಕ ಹೊಂದಾಣಿಕೆಗಳನ್ನು ಪರಿಶೀಲಿಸುವರು

ಪೂರ್ವ ಜ್ಞಾನ

ಕೆಲವು ಪ್ರಾಣಿಗಳು ಮತ್ತು ಅವುಗಳ ವಾಸಸ್ಥಳದ ಕುರಿತಾದ ಜ್ಞಾನ

ಬೇಕಾಗಿರುವ ಸಾಮಗ್ರಿಗಳು ಮತ್ತು ಸಂಪನ್ಮೂಲಗಳು

ಭೂತ-ಗನ್ನಡಿ, ಚಮಚ, ಬ್ರಶ್, ಪೇಪರ್, ಪೆನ್ಸಿಲ್, ನಮ್ಮ ಮನೆ- ಕಥೆ, ಒಗಟುಗಳು- ಹಾಳೆ, ಚಿತ್ರಗಳ ಪ್ರಸ್ತುತಿ, ಆವಾಸ-ಕಾರ್ಯಹಾಳೆ , ಹೊಂದಾಣಿಕೆ ಕುರಿತಾದ ವೀಡಿಯೋ.

ಪ್ರಕ್ರಿಯೆ:

ಚಟುವಟಿಕೆ 1-'ನಮ್ಮಮನೆ' ಕಥೆ

ವಿದ್ಯಾರ್ಥಿಗಳಿಗೆ ಪ್ರಥಮ್ ಸ್ಟೋರಿ ವೀವರ್ ನ 'ನಮ್ಮಮನೆ' ಕಥೆಯನ್ನು ಪರಿಚಯಿಸಿ. ಯಾವ ಪ್ರಾಣಿಗಳು ಏನು ಮಾಡಬಲ್ಲವು? ಅವುಗಳು ಎಲ್ಲಿ ವಾಸಿಸುತ್ತವೆ? ಎಂದು ಚರ್ಚಿಸುತ್ತಾ ವಿವಿಧ ಪ್ರಾಣಿಗಳು ಮತ್ತು ಅವುಗಳ ಆವಾಸವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿ. ಕಥೆಯಲ್ಲಿ ವ್ಯಕ್ತವಾಗಿರುವ ಕೆಲಸಗಳನ್ನು ಮಾಡಬಲ್ಲ ವಿವಿಧ ಪ್ರಾಣಿಗಳು ಮತ್ತು ಅವುಗಳ ಜೊತೆಗಿನ ತಮ್ಮ ವೈಯುಕ್ತಿಕ ಅನುಭವವನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸಿಕೊಡಿ. ಅದೇ ಕೆಲಸಗಳನ್ನು ಮಾಡಬಲ್ಲ ಇತರ ಪ್ರಾಣಿಗಳನ್ನು ಮತ್ತು ಅವುಗಳ ವಾಸಸ್ಥಳವನ್ನು ನೆನಪಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಡಿ. ಕಥೆಯ ಕೊನೆಯಲ್ಲಿ ಒಟ್ಟಾರೆಯಾಗಿ ವಿವಿಧ ಪ್ರಾಣಿಗಳ ವಾಸಸ್ಥಾನ ಮತ್ತು ಅವುಗಳ ಗುಣಲಕ್ಷಣಗಳನ್ನು ಗುರುತಿಸಲು ಪ್ರೇರೆಪಿಸಿ.

ಚಟುವಟಿಕೆ 1.1- ಆವಾಸ ಕುರಿತಾದ ಒಗಟುಗಳನ್ನು ಪರಿಹರಿಸುವುದು ಮತ್ತು ರಚಿಸುವುದು:

ನೀಡಲಾಗಿರುವ ಒಗಟುಗಳನ್ನು ಮಿಂಚು ಪಟ್ಟಿಯಲ್ಲಿ ಬರೆಯಿರಿ. ವಿದ್ಯಾರ್ಥಿಗಳನ್ನು ಎರಡು ಗುಂಪುಗಳನ್ನಾಗಿ ಮಾಡಿ. ಮೊದಲನೇ ಗುಂಪು ಮಿಂಚು ಪಟ್ಟಿಯೊಂದನ್ನು ಆಯ್ಕೆ ಮಾಡಿ ಅದನ್ನು ಎರಡನೇ ಗುಂಪಿಗೆ ಕೇಳುವುದು. ಎರಡನೇ ಗುಂಪು ಒಗಟನ್ನು ಬಿಡಿಸಿ ಆವಾಸವನ್ನು ಹೆಸರಿಸಬೇಕು. ಇದೇ ರೀತಿ ಪ್ರಶ್ನೆ ಕೇಳಲು ಮತ್ತು ಉತ್ತರಿಸಲು ಎರಡೂ ತಂಡಗಳು ತಿರುವನ್ನು ಹೊಂದಬೇಕು. ಮಕ್ಕಳು ಒಗಟನ್ನು ಪರಿಹರಿಸುವಲ್ಲಿ ಪರಿಚಿತ ಮತ್ತು ಆರಾಮದಾಯಕವಾದ ನಂತರ, ಆವಾಸಸ್ಥಾನಗಳಿಗೆ ಸಂಬಂಧಿಸಿದ ತಮ್ಮದೇ ಆದ ಒಗಟನ್ನು ನಿರ್ಮಿಸಲು ಎರಡೂ ತಂಡಗಳು ಪ್ರಯತ್ನಿಸಲಿ. ಎರಡೂ ತಂಡವು ತಾವು ರಚಿಸಿದ ಒಗಟನ್ನು ವಿರುದ್ದ ತಂಡಗಳಿಗೆ ಪ್ರಶ್ನೆಗಳಾಗಿ ಕೇಳಬೇಕು. ಎರಡೂ ತಂಡಗಳಿಗೆ ಒಗಟುಗಳನ್ನು ಕೇಳಲು ಮತ್ತು ಬಿಡಿಸಲು ಅವಕಾಶ ಮಾಡಿಕೊಡಿ.

ಚಟುವಟಿಕೆ 1.2- ವಿವಿಧ ಆವಾಸದಲ್ಲಿನ ಜೀವಿಗಳ ಪಟ್ಟಿ

ಬೇರೆ ಬೇರೆ ಆವಾಸಗಳಲ್ಲಿ ಕಂಡುಬರುವ ಪ್ರಾಣಿ, ಸಸ್ಯ ಮತ್ತು ಇನ್ನಿತರ ವಸ್ತುಗಳನ್ನು ನೀಡಲಾಗಿರುವ ಪಟ್ಟಿಯಲ್ಲಿ ವಿದ್ಯಾರ್ಥಿಗಳು ಹೆಸರಿಸಲಿ. ಮರುಭೂಮಿ, ಪರ್ವತ, ಕಾಡು, ಸಮುದ್ರದ ಆವಾಸಸ್ಥಾನ, ಹುಲ್ಲುಗಾವಲು ಮುಂತಾದ ಆವಾಸಸ್ಥಾನಗಳಲ್ಲಿ ವಾಸಿಸುವ ಪ್ರಾಣಿಗಳ ಬಗ್ಗೆ ಕಂಡುಹಿಡಿಯಲು ಪುಸ್ತಕಗಳನ್ನು ಉಲ್ಲೇಖಿಸಲು ಮತ್ತು ವಯಸ್ಕರನ್ನು ಸಂಪರ್ಕಿಸಿ ಈ ಪಟ್ಟಿಯನ್ನು ಪೂರ್ಣಗೊಳಿಸುವಂತೆ ವಿದ್ಯಾರ್ಥಿಗಳಿಗೆ ತಿಳಿಸಿ.

ಕಾಡಿನಲ್ಲಿ ಮರುಭೂಮಿಯಲ್ಲಿ ಪರ್ವತಗಳ ಮೇಲೆ ಸಮುದ್ರದಲ್ಲಿ ಇನ್ನಿತರೆ

ಕೆಲವು ಪ್ರಾಣಿಗಳು ನಿರ್ದಿಷ್ಟ ಆವಾಸಸ್ಥಾನದಲ್ಲಿ ಮಾತ್ರ ಏಕೆ ವಾಸಿಸುತ್ತವೆ ಎಂಬುದನ್ನು ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ? ಮತ್ತು ಎಲ್ಲಾ ಪ್ರಾಣಿಗಳು ಎಲ್ಲಾ ಆವಾಸಸ್ಥಾನಗಳಲ್ಲಿ ವಾಸಿಸಲು ಏಕೆ ಸಾಧ್ಯವಿಲ್ಲ? ಆವಾಸ ಕುರಿತಾದ ತಮ್ಮೆಲ್ಲಾ ಪ್ರಶ್ನೆಗಳನ್ನು ಕೇಳಲು ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಿ. ಮಕ್ಕಳು ಆವಾಸಸ್ಥಾನದ ಬಗ್ಗೆ ತಮ್ಮದೇ ಆದ ವ್ಯಾಖ್ಯಾನವನ್ನು ಅಭಿವೃದ್ಧಿಪಡಿಸಲಿ ಮತ್ತು ಅವರ ವ್ಯಾಖ್ಯಾನವು ಸರಿಯಾಗಿದೆ ಎಂದು ಅವರು ಏಕೆ ಭಾವಿಸುತ್ತಾರೆ ಎಂಬುದನ್ನು ಇತರರೊಂದಿಗೆ ಹಂಚಿಕೊಳ್ಳಲಿ.

ಚಟುವಟಿಕೆ 2: ಹೊರಾಂಗಣ ಚಟುವಟಿಕೆ

ಪೂರ್ವ ತಯಾರಿ- ವಿದ್ಯಾರ್ಥಿಗಳ ಸುತ್ತಮುತ್ತಲಿನ ಪರಿಸರದ ಆವಾಸವನ್ನು ಗುರುತಿಸುವಂತಾಗಲು, ದೊಡ್ಡ ಕಲ್ಲು, ಹಾಸುಕಲ್ಲುಗಳ ನಡುವಿನ ಬಿರುಕು, ಕೊಳೆತ ಮರದ ರೆಂಬೆ ಹಾಗೂ ಹುಲ್ಲುಹಾಸಿನ ಭಾಗವಿರುವ ಚಿತ್ರಗಳ ಪ್ರಸ್ತುತಿಯನ್ನು ವಿದ್ಯಾರ್ಥಿಗಳಿಗೆ ತೋರಿಸಿ, ಪ್ರತಿ ಚಿತ್ರವೂ ಆವಾಸ ಹೌದೆ ಅಥವಾ ಅಲ್ಲವೇ? ಎಂಬುದನ್ನು ಚರ್ಚಿಸುವುದು. ಹೌದು ಅಥವಾ ಇಲ್ಲ ಎಂಬುದಕ್ಕೆ ಸೂಕ್ತ ಕಾರಣವನ್ನು ವಿದ್ಯಾರ್ಥಿಗಳು ಹಂಚಿಕೊಳ್ಳಲಿ. ಇದು ವಿದ್ಯಾರ್ಥಿಗಳು ಶಾಲೆಯಲ್ಲಿನ ಕಿರು ಆವಾಸಗಳನ್ನು ಗುರುತಿಸಲು ಸಹಾಯ ಮಾಡಬಲ್ಲದು.

ವಿದ್ಯಾರ್ಥಿಗಳನ್ನು ೫-೬ ಗುಂಪುಗಳಾಗಿ ಮಾಡಿ ನಿಮ್ಮ ಶಾಲೆಯ ಆವರಣಕ್ಕೆ ಅಥವಾ ಹತ್ತಿರದ ಉದ್ಯಾನವನಕ್ಕೆ ಭೇಟಿ ನೀಡಿ. ಚಮಚ, ಬ್ರಶ್ ಮತ್ತು ಭೂತಗನ್ನಡಿಯನ್ನು ಬಳಸಿ ನೀವು ಕಾಣಬರುವ ಜೀವಿಗಳನ್ನು ವೀಕ್ಷಿಸಿ, ಆವಾಸ-ಕಾರ್ಯಹಾಳೆಯಲ್ಲಿ ನೀಡಿರುವಂತೆ ಶಾಲೆಯ ಆವರಣದಲ್ಲಿ ಕಂಡುಬಂದ ಆವಾಸಗಳು, ಗಮನಿಸಿದ ಜೀವಿಯ ಚಿತ್ರ ಮತ್ತು ಅದರ ವಿವರಣೆಯನ್ನು ಬರೆಯಲು ಹೇಳಿ.(ಅಲ್ಲಿ ಏನಿದೆ? ಅಲ್ಲಿ ಕುಳಿತಿರುವುದೇನು? ಅಲ್ಲಿ ಚಲಿಸುತ್ತಿರುವುದೇನು? ಅಲ್ಲಿ ತೆವಳುತ್ತಿರುವುದೇನು? ಅಲ್ಲಿ ಹರಿದಾಡುತ್ತಿರುವುದೇನು? ಅಲ್ಲಿ ಬೆಳೆದಿರುವುದೇನು? ಈ ನೆಲದಲ್ಲಿ ರಂಧ್ರಗಳು ಅಥವಾ ಬಿಲಗಳಿವೆಯೆ? ಅಲ್ಲಿ ವಾಸ ಮಾಡುವ ಜೀವಿಗಳು ಯಾವುವು? ಅಲ್ಲಿ ಯಾವ ಯಾವ ಜೀವಿಗಳು ತಮ್ಮ ಮನೆಯನ್ನು ಮಾಡಿಕೊಂಡಿವೆ? ಅವುಗಳನ್ನು ಆವಾಸವೆನ್ನಲು ವಿದ್ಯಾರ್ಥಿಗಳು ಯಾವ ರೀತಿಯ ಆಧಾರಗಳನ್ನು ನೋಡುವರು? ಮತ್ತು ಅವರು ಸಂಗ್ರಹಿಸಿದ ದತ್ತಾಂಶಗಳ ವಿವರಣೆ ಕುರಿತು ಚರ್ಚಿಸಿ. (ದತ್ತಾಂಶ ಸಂಗ್ರಹಿಸಲು ವಿದ್ಯಾರ್ಥಿಗಳು ಚಮಚ, ಬ್ರಶ್ ಮತ್ತು ಭೂತಗನ್ನಡಿಯನ್ನು ಬಳಸಬಹುದು).

ಮೇಲಿನ ಚಟುವಟಿಕೆಯ ನಂತರ, ಆವಾಸಸ್ಥಾನದ ಕುರಿತಾದ ತಮ್ಮದೇ ಆದ ವ್ಯಾಖ್ಯಾನವನ್ನು ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಲಿ ಮತ್ತು ಅವರ ವ್ಯಾಖ್ಯಾನವು ಸರಿಯಾಗಿದೆ ಎಂದು ಅವರು ಏಕೆ ಭಾವಿಸುತ್ತಾರೆ ಎಂಬುದನ್ನು ಇತರರೊಂದಿಗೆ ಹಂಚಿಕೊಳ್ಳಲಿ.

ಚಟುವಟಿಕೆ 3: ಆವಾಸ ಮತ್ತು ಹೊಂದಾಣಿಕೆ

ಚಟುವಟಿಕೆ ೧.೨ ರಲ್ಲಿ ಹೇಳಲಾದಂತೆ, ವಿದ್ಯಾರ್ಥಿಗಳು ತಾವು ಪಟ್ಟಿ ಮಾಡಿರುವ ವಿವಿಧ ಆವಾಸದಲ್ಲಿನ ಜೀವಿಗಳ ಕುರಿತಾಗಿ ತರಗತಿಯಲ್ಲಿ ಹಂಚಿಕೊಳ್ಳಲು ಅವಕಾಶ ಮಾಡಿಕೊಡಿ. ಅವರು ಆ ಜೀವಿಗಳ ಪಟ್ಟಿಯನ್ನು ಹೇಗೆ ಮತ್ತು ಯಾವ ಮೂಲದಿಂದ ಸಂಗ್ರಹಿಸಿದರು?ಈ ಪ್ರಕ್ರಿಯೆಯಲ್ಲಿ ಅವರಿಗೆ ಕಂಡುಬಂದ ಕುತೂಹಲಕರ ಅಥವಾ ಆಶ್ಚರ್ಯಕರ ವಿಷಯಗಳನ್ನು ತರಗತಿಯಲ್ಲಿ ಹಂಚಿಕೊಳ್ಳಲು ಹೇಳಿ.

ಹೊಂದಾಣಿಕೆ ಕುರಿತಾದ ವೀಡಿಯೋವನ್ನು ತರಗತಿಯಲ್ಲಿ ತೋರಿಸಿ, ತಮ್ಮ ಸುತ್ತಲಿನ ವಾಸಸ್ಥಳಕ್ಕನುಗುಣವಾಗಿ ಮೂರು ಪ್ರಾಣಿಗಳಲ್ಲಿ ಕಾಣಬರುವ ಹೊಂದಾಣಿಕೆಗಳನ್ನು ತಿಳಿಸುವುದು. ಈ ಪ್ರಕ್ರಿಯೆಯಲ್ಲಿ ಸಾದ್ಯವಾದಲ್ಲಿ, ಆ ರಚನಾತ್ಮಕ ಹೊಂದಾಣಿಕೆಗಳ ಅಗತ್ಯತೆ ಮತ್ತು ಅವಶ್ಯಕತೆಗಳನ್ನು ಕುರಿತು ಚರ್ಚಿಸುವುದು

ವಿದ್ಯಾರ್ಥಿಗಳು ಪಟ್ಟಿ ಮಾಡಿರುವ ಪ್ರಾಣಿಗಳಲ್ಲಿ ಯಾವುದಾದರು ಎರಡು ಆವಾಸದಲ್ಲಿ ಒಂದೊಂದು ಪ್ರಾಣಿಯ/ಸಸ್ಯದ ಹೊಂದಾಣಿಕೆ ರಚನೆ, ಅಬ್ಯಾಸ, ಲಕ್ಷಣ, ಜೀವಿಸುವ ಆವಾಸದ ಗುಣಲಕ್ಷಣಗಳನ್ನು ಗುರುತಿಸಲು ಉತ್ತೇಜಿಸುವುದು. ಉದಾಹರಣೆಗೆ ಕಾಡು ಮತ್ತು ಸರೋವರದಲ್ಲಿನ ಪ್ರಾಣಿಗಳಾದ ನರಿ ಮತ್ತು ಮೀನನ್ನು ಪ್ರತ್ಯೇಕವಾಗಿ ವೀಕ್ಷಿಸಿ ಅವುಗಳ ಆವಾಸಕ್ಕೆ ಹೊಂದಿಕೆಯಾಗುವಂತಹ ಎಲ್ಲಾ ಲಕ್ಷಣಗಳು, ಅಭ್ಯಾಸಗಳು ಮತ್ತು ರಚನೆಯನ್ನು ಚರ್ಚಿಸುವುದು. ನಂತರ, ಅವುಗಳ ನಡುವಿನ ವ್ಯತ್ಯಾಸ ಮತ್ತು ಸಾಮ್ಯತೆಗಳನ್ನು ಚರ್ಚಿಸುವುದು.