ಚಿಗುರು ೧ - ಪರಿಚಯದ ಹೊಸ ಹೆಜ್ಜೆ - ಭಾಗ ೧

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೦೬:೫೬, ೯ ಜನವರಿ ೨೦೨೩ ರಂತೆ Anusha (ಚರ್ಚೆ | ಕಾಣಿಕೆಗಳು) ಇವರಿಂದ (removed assumptions)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search

ಸಾರಾಂಶ

ಈ ಮಾಡ್ಯೂಲ್‌ ಕಿಶೋರಿಯರು ಹಾಗು ಫೆಸಿಲಿಟೇಟರ್‌ಗಳನ್ನು ಪರಸ್ಪರ ಪರಿಚಯಿಸಿಕೊಳ್ಳಲು ರೂಪಿಸಲಾಗಿದೆ. ತಮಾಷೆಯ ಚಟುವಟಿಕೆಗಳ ಮೂಲಕ ಪರಿಚಯ ಮಾಡಿಕೊಳ್ಳುವುದರಿಂದ ನಾವು ಶಾಲೆಯ ಬೇರೆ ತರಗತಿಗಳಂತೆ ಅಲ್ಲ ಎನ್ನುವ ಭಾವನೆ ಮೂಡುತ್ತದೆ. ಗುಂಪು ಚಟುವಟಿಕೆಯಿಂದಾಗಿ ಬೇರೆ ಬೇರೆ ತರಗತಿಯ ಕಿಶೋರಿಯರ ನಡುವೆ ಹೆಚ್ಚಿನ ಹಂಚಿಕೆಯಾಗುತ್ತದೆ.

ಉದ್ದೇಶಗಳು

  1. ನಮ್ಮ ಕಾರ್ಯಕ್ರಮದ ಬಗ್ಗೆ ಕಿಶೋರಿಯರಿಗೆ ಸ್ಥೂಲವಾಗಿ ಪರಿಚಯಿಸಿ, ಅವರಿಗೆ ಇದರ ಬಗ್ಗೆ ಉತ್ಸಾಹ ಮೂಡುವಂತೆ ಮಾಡುವುದು.
  2. ನಮ್ಮೊಡನೆ ಹೊಸ ದಿಶೆಯಲ್ಲಿ ಹೊಸ ಹೆಜ್ಜೆಯನ್ನು ಇಡಲು ಅವರನ್ನು ಸಿದ್ದಗೊಳಿಸುವುದು.

ಪ್ರಕ್ರಿಯೆ

ದೊಡ್ಡ ಡಬ್ಬಿಯಲ್ಲಿ ೪ ಬಣ್ಣದ ಸ್ಟಿಕರ್‌ಗಳನ್ನು ಹಾಕಿ ಗುಂಪುಗಳನ್ನು ಮಾಡಿಕೊಳ್ಳಲು ಕಿಶೋರಿಯರಿಗೆ ಒಂದು ಸ್ಟಿಕರ್‌ನ್ನು ಆರಿಸಿಕೊಳ್ಳಲು ಹೇಳುತ್ತೇವೆ. (ಗುಲಾಬಿ, ಹಸಿರು, ನೇರಳೆ, ನೀಲಿ). ಬೇರೆ ಬೇರೆ ಜಾಗಗಳಲ್ಲಿ ಗುಂಪಿನಲ್ಲಿ ಕುಳಿತುಕೊಳ್ಳುತ್ತೇವೆ. ಗುಲಾಬಿ - ಅಪರ್ಣ ಹಸಿರು - ಶ್ರೇಯಸ್ ನೇರಳೆ - ಕಾರ್ತಿಕ್‌ ನೀಲಿ - ಅನುಷಾ

ಅವರವರ ಗುಂಪುಗಳಲ್ಲಿ ಕುಳಿತುಕೊಳ್ಳಲು ಹೇಳಿ ನಂತರ ಕಟ್ಟುಪಾಡುಗಳನ್ನು ಹೇಳುತ್ತೇವೆ.

ಕಟ್ಟುಪಾಡುಗಳು

  1. ಎಲ್ಲಾರು ಭಾಗವಹಿಸೋಣ.
  2. ಒಬ್ಬರು ಮಾತನಾಡುವಾಗ, ಎಲ್ಲಾರೂ ಕೇಳಿಸಿಕೊಳ್ಳೋಣ.
  3. ನಮಗೇನಾದರೂ ಮಾತನಾಡಬೇಕು ಎಂದು ಅನಿಸಿದರೆ, ಕೈ ಎತ್ತೋಣ.
  4. ಪರಸ್ಪರ ಅಣಕ ಮಾಡುವುದು, ಗೇಲಿ ಮಾಡಿಕೊಳ್ಳುವುದು ಬೇಡ.
  5. ನಾವು ನಿಮ್ಮ ಶಿಕ್ಷಕಕರಲ್ಲ. ನಾವೆಲ್ಲರೂ ಸಮಾನ ಅನ್ನುವುದನ್ನು ಮರೆಯುವುದಿಲ್ಲ.
  6. ನಾವು ಬೇರೆ ಬೇರೆ ತರಗತಿ ಅಂತ ಅಂದುಕೊಳ್ಳದೆ, ಎಲ್ಲರೂ ಗೆಳತಿಯರಾಗಿ ಒಟ್ಟಿಗೆ ಬೆರೆಯೋಣ.

ಎಲ್ಲರನ್ನೂ ಅವರವರ ಗುಂಪಿನಲ್ಲೇ ನಿಂತುಕೊಳ್ಳಲು ಹೇಳುತ್ತೇವೆ. ಈ ಕೆಳಗಿನಂತೆ ವರ್ಗೀಕರಣಗಳನ್ನು ಮಾಡಬಹುದು.

  1. ಎತ್ತರದ ಪ್ರಕಾರ ನಿಂತುಕೊಳ್ಳಿ.
  2. ನಿಮ್ಮ ಮನೆ ಶಾಲೆಯಿಂದ ಇರುವ ದೂರದ ಪ್ರಕಾರ ನಿಂತುಕೊಳ್ಳಿ.
  3. ನಿಮ್ಮ ಹೆಸರಿನ ಅಕ್ಷರದ ಪ್ರಕಾರ ನಿಂತುಕೊಳ್ಳಿ. (ಇಂಗ್ಲಿಷ್‌ ಅಕ್ಷರದ ಪ್ರಕಾರ)
  4. ಹುಟ್ಟಿದ ದಿನಾಂಕ ಮತ್ತು ತಿಂಗಳಿನ ಪ್ರಕಾರ ನಿಂತುಕೊಳ್ಳಿ.

ಮಾತುಕತೆಯನ್ನು ಮುಂದುವರೆಸಿಕೊಂಡು ಹೋಗುತ್ತೇವೆ. ಎಲ್ಲರಿಗೂ ಒಂದೊಂದು ಮುಂಚೆಯೇ ಬರೆದ ಚೀಟಿಯನ್ನು ನೀಡುತ್ತೇವೆ. ಇದಲ್ಲಿ ಅವರನ್ನು ಪರಿಚಯ ಮಾಡಿಕೊಳ್ಳಲು ಅವರ ಹೆಸರು ಹಾಗು ಯಾವುದಾದರೂ ಒಂದು ಸಾಮಾನ್ಯ ಪ್ರಶ್ನೆ ಇರುತ್ತದೆ. ಉದಾಹರಣೆಗೆ : ನನ್ನ ಹೆಸರು ಹಾಗು ಇಷ್ಟವಾದ ಬಣ್ಣ, ನನ್ನ ಹೆಸರು ಹಾಗು ನೆಚ್ಚಿನ ತಿಂಡಿ ಇತ್ಯಾದಿ.

ಬಾಟಲಿಯನ್ನು ತಿರುಗಿಸುವ ಆಟವನ್ನು ಆಡುತ್ತೇವೆ. ಇಲ್ಲಿ ಕಿಶೋರಿಯರನ್ನು ವೃತ್ತಾಕಾರದಲ್ಲಿ ಕೂರಿಸಿ ನಂತರ ಖಾಲಿ ಬಾಟಲಿಯನ್ನು ತಿರುಗಿಸುವುದು. ಅದು ಯಾರ ಕಡೆಗೆ ನಿಲ್ಲುತ್ತದೆಯೋ ಅವರಿಗೆ ನಾವು ಒಂದು ಪ್ರಶ್ನೆಯನ್ನು ಕೆಳಗಿನ ಪಟ್ಟಿಯಲ್ಲಿರುವಂತೆ ಕೇಳುವುದು.

ಬಾಟಲಿ ತಿರುಗಿಸುವ ಆಟದ ಪ್ರಶ್ನೆಗಳು

  1. ಬೆಂಗಳೂರಲ್ಲಿ ಎಲ್ಲಿ ಬೇಕಾದರೂ ಪಿಕ್‌ನಿಕ್‌ಗೆ ಹೋಗಬಹುದು ಅಂದರೆ, ಎಲ್ಲಿಗೆ ಹೋಗುವಿರಿ?
  2. ನಿಮ್ಮ ಮುಂದೆ ದೇವರು ಪ್ರತ್ಯಕ್ಷ ಆಗಿ ಏನು ವರ ಬೇಕು ಅಂತ ಕೇಳಿದರೆ ಏನು ಕೇಳುವಿರಿ?
  3. ನಿಮ್ಮ ಅಚ್ಚುಮೆಚ್ಚಿನ ಸ್ನೇಹಿತೆಯ ಜೊತೆ ಒಂದು ದಿನ ಪೂರ್ತಿ ಕಳೆಯಬಹುದು ಅಂದರೆ, ಏನು ಮಾಡುವಿರಿ?
  4. ಮಾಲ್‌ನಲ್ಲಿ ಏನು ತೆಗೆದುಕೊಂಡರೂ ಉಚಿತ ಅಂತಾದರೆ, ಏನು ತೆಗೆಯುವಿರಿ?
  5. ಈಗ ಒಂದು ಚಲನಚಿತ್ರದಲ್ಲಿ ನಾಯಕಿಯ ಬದಲು ನೀವು ಇರಬಹುದು ಅಂದರೆ, ಯಾವ ಚಲನಚಿತ್ರ ಆಯ್ಕೆ ಮಾಡುವಿರಿ? ಯಾಕೆ?
  6. ನಿಮಗೆ ಯಾವ ತಿಂಡಿ ಬೇಕಾದರೂ ತೆಗೆದುಕೊಂಡು ತಿನ್ನಬಹುದು ಅಂತ ಆದರೆ ಏನು ತೆಗೆದುಕೊಳ್ಳುವಿರಿ? ಯಾಕೆ?
  7. ನೀವು ಒಂದು ದಿನ ಮುಖ್ಯಮಂತ್ರಿ ಆಗಿರುವಿರಿ ಅಂದರೆ, ಏನು ಮಾಡುವಿರಿ?
  8. ನಿಮಗೆ ಮಾಯ ಆಗಿ ಏಲ್ಲಿ ಬೇಕಿದ್ದರೂ ಪ್ರತ್ಯಕ್ಷ ಆಗಬಹುದು ಅಂತ ಆದರೆ, ಎಲ್ಲಿಗೆ ಹೋಗುತ್ತೀರ?
  9. ಮಾಯಾವಿ ದೀಪ ನಿಮಗೆ ಸಿಕ್ಕಿದರೆ ಹಾಗೂ ನೀವು ಏನು ಕೇಳಿದರೂ ಅದಾಗುತ್ತೆ ಅಂತ ಇದ್ದರೆ, ಏನು ಕೇಳುವಿರಿ?
  10. ಶಾಲಾ ಪಠ್ಯ ಪುಸ್ತಕ ಅಷ್ಟೇ ಅಲ್ಲದೆ ನೀವು ಏನು ಬೇಕಿದ್ದರೂ ಕಲಿಯಬಹುದು ಅಂತಿದ್ದರೆ ನೀವು ಏನು ಕಲಿಯಲು ಇಷ್ಟ ಪಡುವಿರಿ?
  11. ನಿಮಗೆ ಇಷ್ಟ ಇರುವ ಆಟದಲ್ಲಿ ನೀವು ಉನ್ನತ ಸಾಧನೆ ಮಾಡುವಿರಿ ಅಂದರೆ, ಅದು ಯಾವ ಆಟ?
  12. ನಿಮಗೆ ಜಗತ್ತಿನಲ್ಲಿರುವ ಯಾವ ವಾಹನವನ್ನಾದರೂ ಓಡಿಸಬಹುದು ಅನ್ನುವ ಆಯ್ಕೆ ಇದ್ದರೆ , ಯಾವ ವಾಹನವನ್ನು ಓಡಿಸುತ್ತೀರ?
  13. ನಿಮಗೆ ಏನಾದ್ರೂ ನಿರ್ಭಂದನೆ ಮಾಡುವ ಶಕ್ತಿ ಇದ್ದರೆ, ನೀವು ಏನನ್ನು ನಿರ್ಭಂದಿಸುವಿರಿ?

ಇದರ ನಂತರ ನಮ್ಮ ಕಾರ್ಯಕ್ರಮದಲ್ಲಿ ಈ ತರಹದ ಚಟುವಟಿಕೆಗಳನ್ನು ಮಾಡುತ್ತ ಹಲವಾರು ತರಹದ ವಿಷಯಗಳನ್ನು ಕಲಿಯುತ್ತ ಹೋಗೋಣ ಎಂದು ತರಗತಿಯನ್ನು ಮುಗಿಸುವುದು.

ಬೇಕಾದ ಸಂಪನ್ಮೂಲಗಳು

  1. ಖಾಲಿ ಚಾರ್ಟ್‌
  2. ತಿರುಗಿಸಲು ಖಾಲಿ ಬಾಟಲಿ

ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು ೪

ಒಂದೊಂದು ಗುಂಪಿನ ಜೊತೆಗೆ ಒಬ್ಬರಂತೆ. ಸರಾಸರಿಯಾಗಿ ಒಂದು ಗುಂಪಿಗೆ ೧೩ ಜನ ಕಿಶೋರಿಯರು ಬರುತ್ತಾರೆ.

ಒಟ್ಟು ಸಮಯ

೫೦ ನಿಮಿಷಗಳು

ಇನ್‌ಪುಟ್‌ಗಳು

  1. ಬಣ್ಣದ ಸ್ಟಿಕ್ಕರ್‌ಗಳು
  2. ಹೆಸರಿನ ಜೊತೆ ಹೇಳಲು ಸಹಕಾರಿಯಾಗುವಂತಹ ಖುಷಿ ವಿಚಾರಗಳ ಚೀಟಿಗಳು

ಔಟ್‌ಪುಟ್‌ಗಳು

ಕಿಶೋರಿಯರು ಹೇಳಿದ ವಿಷಯಗಳ ಪಟ್ಟಿ