ಪ್ರೀಪ್ಲೇನ್ ಕಲಿಯಿರಿ

From ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು
Jump to: navigation, search

ಪರಿಚಯ

ಮೂಲ ಮಾಹಿತಿ

ಐ.ಸಿ.ಟಿ ಸಾಮರ್ಥ್ಯ ಪ್ರೀಪ್ಲೇನ್ ಎಂಬುದು ಸ್ವತಂತ್ರ ಮತ್ತು ಮುಕ್ತ ತಂತ್ರಾಂಶ ಅನ್ವಯಕವಾಗಿದ್ದು , ಪರಿಕಲ್ಪನಾ ನಕ್ಷೆಗಳನ್ನು ರಚಿಸಲು ಹಾಗು ಸಂಕಲನ ಮಾಡಲು ಬಳಸುವ ಸಾರ್ವತ್ರಿಕ ಸಂಪನ್ಮೂಲ ರಚನೆಯ ಅನ್ವಯಕವಾಗಿದೆ. ಪರಿಕಲ್ಪನಾ ನಕ್ಷೆಯು ಮೈಂಡ್‌ಮ್ಯಾಪಿಂಗ್‌ ಗೆ ಸಮಾನಾರ್ಥಕಪದವಾಗಿರುವುದರಿಂದ ಇದನ್ನು ಮೈಂಡ್‌ಮ್ಯಾಪಿಂಗ್‌ ಎಂದೇ ಪರಿಗಣಿಸಲಾಗುವುದು.
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ ಪರಿಕಲ್ಪನಾ ನಕ್ಷೆಗಳನ್ನು ರಚಿಸುವುದು ಆಲೋಚಿಸಲು, ಬುದ್ದಿಮಂಥನ ಮಾಡಲು, ಮಾಹಿತಿ ಹಂಚಲು, ಸಭೆಗಳ ಅಥವಾ ಗುಂಪು ಚರ್ಚೆಗಳ ಮಾಹಿತಿ ದಾಖಲಿಸಲು ಸಹಾಯಕವಾಗುತ್ತದೆ.

ಮಕ್ಕಳ ಆಲೋಚನೆಗಳನ್ನು ನಿರ್ವಹಿಸಲು ಹಾಗು ಸಂಗ್ರಹಿಸುವ ಕೌಶಲ ಬೆಳೆಸಲು ಪರಿಕಲ್ಪನಾ ನಕ್ಷೆ ಬಹಳ ಉತ್ತಮ ವಿಧಾನವೆಂದು ಶಿಕ್ಷಣ ತಜ್ಙರು ಪರಿಗಣಿಸಿದ್ದಾರೆ. ಹಾಗೆಯೇ ಬೋಧನೆಗೆ ಬಹಳ ಮುಖ್ಯವಾದ ವಿಧಾನವೆಂದು ಗುರುತಿಸಿದ್ದಾರೆ. ಮಕ್ಕಳು ಬರೆಯುವಾಗ ಅವರ ಆಲೋಚನೆಗಳನ್ನು ಸಂಘಟಿಸಲು ಈ ಪರಿಕರ ಸಹಾಯಕವಾಗುತ್ತದೆ. ಸಮಸ್ಯೆಯನ್ನು ವಿಶ್ಲೇಷಿಸಲು ಅಥವ ಒಂದು ಆಲೋಚನೆಯ ಮೇಲೆ ಪರಿಕಲ್ಪನಾ ನಕ್ಷೆ ರಚಿಸಲು ಈ ಅನ್ವಯಕವನ್ನು ಶಿಕ್ಷಕರು ಮತ್ತು ಮಕ್ಕಳು ಸಹಯೋಜಿತವಾಗಿ ಅಥವಾ ಪ್ರತ್ಯೇಕವಾಗಿ ಬಳಸಬಹುದು.

ಆವೃತ್ತಿ Version - 1.3.15
ಸಂರಚನೆ ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿದ್ದು, ಯಾವುದೇ ಸಂರಚನೆಯ ಅಗತ್ಯತೆ ಇರುವುದಿಲ್ಲ.
ಇತರೇ ಸಮಾನ ಅನ್ವಯಕಗಳು ಪ್ರೀಮೈಂಡ್
ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ ಪರಿಕಲ್ಪನಾ ನಕ್ಷೆ ರಚಿಸಲು ಮೊಬೈಲ್‌ನಲ್ಲಿ ಯಾವುದೇ ಆನ್ವಯಕಗಳು ಲಭ್ಯವಿಲ್ಲ. ಆದರೆ ಪರಿಕಲ್ಪನಾ ನಕ್ಷೆಗಳನ್ನು ನೋಡಲು Freeplane reader ಅಥವಾ ಫ಼್ರೀಮೈಂಡ್ ಅನ್ವಯಕ ಬಳಸಬಹುದು.
ಅಭಿವೃದ್ದಿ ಮತ್ತು ಸಮುದಾಯ ಸಹಾಯ ಪ್ರೀಪ್ಲೇನ್ ಅಧಿಕೃತ ವೆಬ್‌ಪುಟ

ಲಕ್ಷಣಗಳ ಮೇಲ್ನೋಟ

ಪ್ರೀಪ್ಲೇನ್ ಮೂಲಕ ನೀವು ಪರಿಕಲ್ಪನಾ ನಕ್ಷೆಗಳನ್ನು ರಚಿಸಬಹುದು. ಪಠ್ಯ ಸಂಪನ್ಮೂಲವನ್ನು ನಕ್ಷೆ ಅಥವಾ ಮರದ ರೀತಿಯ ಗ್ರಾಫಿಕಲ್ ಸಂಪನ್ಮೂಲವಾಗಿ ನಿರ್ವಹಿಸಬಹುದು. ಒಂದು ವಿಷಯದ ಪರಿಕಲ್ಪನೆ, ಸಂಬಂಧಿತ ಪರಿಕಲ್ಪನೆ ಮತ್ತು ಉಪ ಪರಿಕಲ್ಪನೆಗಳನ್ನು ಒಂದೇ ಚಿತ್ರನೋಟದಲ್ಲಿ ನೋಡಬಹುದು. ಪರಿಕಲ್ಪನಾ ನಕ್ಷೆಯು ಪಠ್ಯಾಧಾರಿತ ಮುಕ್ತ ಶೈಕ್ಷಣಿಕ ಸಂಪನ್ಮೂಲವನ್ನು ರಚಿಸಲು ಹಾಗು ಹೆಚ್ಚುವರಿ ಸಂಪನ್ಮೂಲವನ್ನು ಸಂಪರ್ಕಿಸಲು, ಟಿಪ್ಪಣಿಗಳನ್ನು ಹಾಗು ಚಿತ್ರಗಳನ್ನು ಸೇರಿಸಲು ಸಹಾಯಕವಾಗುತ್ತದೆ. ಪ್ರೀಪ್ಲೇನ್ ಮೂಲಕ ಯೋಚನೆಗಳನ್ನು ಸಂಘಟಿಸಲು ಹಾಗು ಕ್ರಮಾನುಗತವಾಗಿಸಲು ಸಾಧ್ಯವಾಗುತ್ತದೆ. ಪ್ರೀಪ್ಲೇನ್‌ ನ ಪರಿಕಲ್ಪನೆಗಳ ಜಾಲಘಟಕ(ನೋಡ್‌)ಗಳನ್ನು ಮತ್ತೊಂದು ಜಾಲಘಟಕ(ನೋಡ್‌)ಗಳೊಂದಿಗೆ ಹಾಗು ಬೇರೆ ಕೂಡಿಕೆ(ಕನೆಕ್ಟರ್)/ಪಟ್ಟಿಗಳೊಂದಿಗೆ ಸಂಪರ್ಕಿಸಬಹುದಾಗಿದೆ. ಪರಿಕಲ್ಪನಾ ನಕ್ಷೆಯನ್ನು ಚಿತ್ರವನ್ನಾಗಿ ಹಾಗು ಪಠ್ಯ ದಾಖಲೆಯಾಗಿ ಎಕ್ಸ್‌ಪೋರ್ಟ್‌ ಮಾಡಬಹುದು.

ಅನುಸ್ಥಾಪನೆ

 1. ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.
 2. ಒಂದು ವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “ Freeplane ” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.
 3. ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.
  1. Application > System Tools > ಮೂಲಕ ಟರ್ಮಿನಲ್ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
  2. ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
  3. sudo apt-get install freeplane

ಅನ್ವಯಕ ಬಳಕೆ

ನಕ್ಷೆ ರಚನೆ

ಪ್ರೀಪ್ಲೇನ್‌ ಬಳಸುವುದನ್ನು ಕಲಿಯಲು, ನಾವು ಇಲ್ಲಿ ಡಿಜಿಟಲ್ ಸ್ಟೋರಿ ಟೆಲ್ಲಿಂಗ್ ಬಗೆಗಿನ ಪರಿಕಲ್ಪನಾ ನಕ್ಷೆಯನ್ನು ರಚಿಸುತ್ತೇವೆ. ಮೇಲಿನ ಚಿತ್ರದಲ್ಲಿರುವಂತೆ ಪ್ರೀಪ್ಲೇನ್ ಒಂದು ವಿಂಡೋದ ಒಂದು ಪುಟದಲ್ಲಿ "New mindmap" ಎಂಬ ಹೆಸರಿನೊಡನೆ ತೆರೆದಿದೆ. ಈ ಘಟಕ (Node) ವನ್ನು "ರೂಟ್‌ ನೋಡ್‌" ಎಂದು ಕರೆಯಲಾಗುತ್ತದೆ. ಇದು ಪರಿಕಲ್ಪನಾ ನಕ್ಷೆಯಲ್ಲಿ ಚರ್ಚಿಸಬೇಕಿರುವ ವಿಷಯವನ್ನು ಸೂಚಿಸುತ್ತದೆ. ಮೆನುಬಾರ್ ನ File ನ್ನು ತೆರೆಯುವುದರ ಮೂಲಕ ಪರಿಕಲ್ಪನಾ ನಕ್ಷೆ ಕಡತವನ್ನು ಉಳಿಸಬಹುದು. ಇದು ರೂಟ್‌ ನೋಡ್‌ನಲ್ಲಿ ಇದ್ದ ಹೆಸರಿನ ಮೂಲಕವೇ ಉಳಿದಿರುತ್ತದೆ.

ಘಟಕ ಸೇರಿಸುವುದು

ಪರಿಕಲ್ಪನಾ ನಕ್ಷೆಯನ್ನು ನಿಮ್ಮ ಕಡತಕೋಶದಲ್ಲಿ ಉಳಿಸಬಹುದು. ಇದು ".mm" ವಿಸ್ತರಣೆಯೊಂದಿಗೆ ಉಳಿಯುತ್ತದೆ. ಇಲ್ಲಿ ನಾವು Learning Digital Story Telling.mm ಎಂಬ ಹೆಸರಿನ ಪರಿಕಲ್ಪನಾ ನಕ್ಷೆಯನ್ನು ರಚಿಸಿದ್ದೇವೆ. ರೂಟ್‌ನೋಡ್‌ ರಚನೆಯಾದ ನಂತರ ಹೆಚ್ಚುವರಿ ಅಂಶಗಳು ಘಟಕ ಹಾಗು ಉಪಘಟಕಗಳಾಗಿ (Child node) ರಚನೆಯಾಗುತ್ತವೆ. ಪರಿಕಲ್ಪನೆಗಳು ಮತ್ತು ಉಪಪರಿಕಲ್ಪನೆಗಳಿಗೆ ಘಟಕ ಮತ್ತು ಉಪಘಟಕಗಳನ್ನು ರಚಿಸುವ ಮೂಲಕ ಪರಿಕಲ್ಪನಾ ನಕ್ಷೆ ರಚನೆಯಾಗುತ್ತದೆ. ಪ್ರತೀ ಘಟಕಗಳಿಗೂ ಸಹ ಉಪ ಘಟಕಗಳನ್ನು ಸೇರಿಸುತ್ತಲೇ ಇರಬಹುದು. ಉಪಘಟಕ ರಚಿಸಲು ‘insert’ ಕೀ ಬಳಸಿ. ಮತ್ತೊಂದು ಪರಿಕಲ್ಪನೆಯ ಮುಖ್ಯ ಘಟಕ ರಚಿಸಲು ‘enter’ ಕೀ ಬಳಸಿ. ಈ ರೀತಿಯಾಗಿ ಕೇವಲ ಎರಡು ಕೀ ಬಳಕೆಯ ಮೂಲಕ ಪರಿಕಲ್ಪನಾ ನಕ್ಷೆ ರಚಿಸಲುಬಹುದು. ಉಪಘಟಕ(insert) and ಘಟಕ (enter). ಈ ರೀತಿಯಾಗಿ ಪರಿಕಲ್ಪನಾ ನಕ್ಷೆಯು ಮಾಹಿತಿಯನ್ನು ವರ್ಗೀಕರಿಸಲು ಮತ್ತು ವಿಂಗಡಿಸಲು ಬಳಕೆಯಾಗುತ್ತದೆ.

ನಮ್ಮ ನಕ್ಷೆಯು ಡಿಜಿಟಲ್ ಸ್ಟೋರಿ ಟೆಲ್ಲಿಂಗ್ ಪರಿಕಲ್ಪನೆಯ ‘why’, ‘what’ and ‘how’ ಎಂಬ ಘಟಕಗಳಿಗೆ ಹಲವು ಉಪಘಟಕಗಳನ್ನು ಹೊಂದಿದೆ.

 1. ಮೊದಲನೇ ಚಿತ್ರವು, ಮೊದಲ ಘಟಕ ರಚನೆಯ ಮೂಲಕ ಪರಿಕಲ್ಪನಾ ನಕ್ಷೆ ರಚನೆಯಾಗಿರುವುದನ್ನು ತೋರಿಸುತ್ತಿದೆ.
 2. ಎರಡನೇ ಚಿತ್ರವು, ಘಟಕ ಮತ್ತು ಹಲವು ಉಪಘಟಕಗಳಿಂದ ಪೂರ್ಣಗೊಂಡ ಪರಿಕಲ್ಪನಾ ನಕ್ಷೆಯನ್ನು ತೋರಿಸುತ್ತಿದೆ.

ಘಟಕಗಳನ್ನು ಸಂಪರ್ಕಿಸುವುದು(linking nodes)

 1. ನಾವು ಕೆಲವು ವಿಷಯಗಳ ಬಗ್ಗೆ ಚರ್ಚಿಸುವಾಗ, ಆ ವಿಷಯಗಳು ಒಂದಕ್ಕೊಂದು ಸಂಬಂಧೀಕರಿಸಿರುತ್ತವೆ. ವಿವರವಾಗಿ ಆ ವಿಷಯವನ್ನು ಚರ್ಚಿಸಲು ಸಾಧ್ಯವಾಗುವಂತೆ ನಾವು ಅವುಗಳನ್ನು ಸಂಪರ್ಕಿಸಬೇಕಿರುತ್ತದೆ. ಇದಕ್ಕಾಗಿ ಮೈಂಡ್‌ಮ್ಯಾಪ್‌ನಲ್ಲಿ ಗ್ರಾಫಿಕಲ್ ಲಿಂಕ್ ಬಳಸಿ ಎರಡು ಘಟಕಗಳ ನಡುವೆ ಸಂಪರ್ಕ ಮಾಡಬಹುದು. (ಬಾಣದ ಗುರುತು). ಇದಕ್ಕಾಗಿ ಆ ಎರಡು ಘಟಕಗಳನ್ನು ಆಯ್ಕೆ ಮಾಡಿಕೊಂಡು ನಂತರ ಮೆನುಬಾರ್‌ನಲ್ಲಿ Insert > add graphical link ಕ್ಲಿಕ್ ಮಾಡಿ. ಆ ಬಾಣದ ಗುರುತನ್ನು ನಮಗೆ ಬೇಕಾದ ರೀತಿ ಚಲಿಸಬಹುದು.

ಕಡತಗಳನ್ನು ಮತ್ತು ವೆಬ್‌ಲಿಂಕ್‌ಗಳನ್ನು ಹೈಪರ್‌ಲಿಂಕ್ ಮಾಡುವುದು

 1. ಮೊದಲನೇ ಚಿತ್ರದಲ್ಲಿ, ಪರಿಕಲ್ಪನಾ ನಕ್ಷೆಯ ರೂಟ್‌ನೋಡ್‌ನಲ್ಲಿ ಒಂದು ಕೆಂಪು ಬಣ್ಣದ ಬಾಣದ ಗುರುತನ್ನು ಗಮನಿಸಿದಿರಾ ? ಈ ರೂಟ್‌ನೋಡ್‌ ಡಿಜಿಟಲ್ ಸ್ಟೋರಿ ಟೆಲ್ಲಿಂಗ್‌ನ ವಿಕಿಪೀಡಿಯಾ ಪುಟದ ಕೊಂಡಿಯನ್ನು ಹೈಪರ್‌ಲಿಂಕ್‌ ಮಾಡಲಾಗಿದೆ. ಈ ರೀತಿಯಾಗಿ ವಿವಿಧ ಸಂಪನ್ಮೂಲ ಪುಟಗಳ ಲಿಂಕ್‌ಗಳನ್ನು ಘಟಕಗಳಿಗೆ ಹೈಪರ್‌ಲಿಂಕ್‌ ಮಾಡಬಹುದು. ನಮ್ಮ Learning Digital Story Telling.mm ಪರಿಕಲ್ಪನಾ ನಕ್ಷೆಯಲ್ಲಿ ನಾವು ಮುಖ್ಯ ರೂಟ್‌ನೋಡ್‌ ನಲ್ಲಿನ ‘Learning Digital Story Telling’ ಪಠ್ಯಕ್ಕೆ ಹೈಪರ್‌ಲಿಂಕ್ ಮಾಡಿದ್ದೇವೆ.
 2. ಇದಕ್ಕಾಗಿ ಮೆನುಬಾರ್‌ನಲ್ಲಿ Edit → Link → Add or Modify hyperlink (type) ಕ್ಲಿಕ್ ಮಾಡಬೇಕು. ನಂತರ ಇಲ್ಲಿ ನಿಮಗೆ ಬೇಕಾದ ವೆಬ್‌ಪುಟದ ವಿಳಾಸವನ್ನು ನಮೂದಿಸಬೇಕು. ಇದನ್ನು ಕೀಬೋರ್ಡ್ ಮೂಲಕ ಮಾಡುವುದಾದಲ್ಲಿ Ctrl+K ಕೀ ಬಳಸಬಹುದು. ಇಲ್ಲಿ ಕೊಂಡಿಯನ್ನು ಸೇರಿಸಲು ವಿಂಡೋ ತೆರೆಯುತ್ತದೆ. ಅದರಲ್ಲಿ https://en.wikipedia.org/wiki/Digital_storytelling ಕೊಂಡಿಯನ್ನು ಸೇರಿಸಲಾಗಿದೆ.
 3. ಕಂಪ್ಯೂಟರ್‌ನಲ್ಲಿರುವ ಸ್ಥಳೀಯ ಕಡತಕ್ಕೆ ಹೈಪರ್‌ಲಿಂಕ್‌ ಮಾಡಬಹುದು. ಮೆನುಬಾರ್‌ನಲ್ಲಿನ Edit-->Link-->Add Hyperlink (choose) ನ್ನು ಆಯ್ಕೆ ಮಾಡಿಕೊಂಡಾಗ, ಕಂಪ್ಯೂಟರ್‌ಲ್ಲಿರುವ ಕಡತವನ್ನು ಆಯ್ಕೆ ಮಾಡಿಕೊಳ್ಳಲು ಸೂಚಿಸುತ್ತದೆ. ಅಗತ್ಯವಿರುವ ಕಡತವನ್ನು ಆಯ್ಕೆ ಮಾಡಿಕೊಂಡು ಹೈಪರ್‌ಲಿಂಕ್ ಮಾಡಬಹುದು. ಮೂರನೇ ಚಿತ್ರವು ಕಡತವನ್ನು ಹೇಗೆ ಆಯ್ಕೆ ಮಾಡಿಕೊಳ್ಳುವುದು ಎಂಬುದನ್ನು ತೋರಿಸುತ್ತದೆ.

ನೋಟ್‌ ವಿಂಡೋನಲ್ಲಿ ಟಿಪ್ಪಣಿ ಸೇರಿಸುವುದು

 1. ನಮ್ಮ Learning Digital Story Telling.mm ಪರಿಕಲ್ಪನಾ ನಕ್ಷೆಯಲ್ಲಿ ನೀವು ಅರಿಶಿಣ ಬಣ್ಣದ ಲೇಬಲ್ ಒಂದನ್ನು ಕಾಣುವಿರಿ. ಅಲ್ಲಿಗೆ ನಿಮ್ಮ ಮೌಸ್‌ ಕರ್ಸರ್‌ನ್ನು ತೆಗೆದುಕೊಂಡು ಹೋದರೆ,ಅದರೊಳಗಿನ ಟಿಪ್ಪಣಿಯನ್ನು ಓದಬಹುದು.
 2. ಟಿಪ್ಪಣಿ ಸೇರಿಸಲು ಮೆನುಬಾರ್ ನಲ್ಲಿ View--->Notes--->Display note panel ಆಯ್ಕೆ ಮಾಡಬೇಕು.
 3. ಇದು ಮೈಂಡ್‌ಮ್ಯಾಪ್ ಕೆಳಗೆ ಒಂದು ಕೋಷ್ಟಕವನ್ನು ತೆರೆಯುತ್ತದೆ. ಆ ಕೋಷ್ಟಕದಲ್ಲಿ ನಾವು ಆಯ್ಕೆ ಮಾಡಿಕೊಂಡಿರುವ ಘಟಕಕ್ಕೆ ಅವಶ್ಯಕವಾದ ಟಿಪ್ಪಣಿ ನೀಡಬಹುದು.

ಕಡತ ಉಳಿಸುವುದು ಮತ್ತು ಎಕ್ಸ್‌ಪೋರ್ಟ್‌ ಮಾಡುವುದು

 1. ಮೊದಲನೇ ಚಿತ್ರದಲ್ಲಿ ತೋರಿಸಿರುವಂತೆ, ಪರಿಕಲ್ಪನಾ ನಕ್ಷೆಯು ಪ್ರೀಪ್ಲೇನ್‌ ನಲ್ಲಿ '.mm' ನಮೂನೆಯಲ್ಲಿ ಉಳಿಯುತ್ತದೆ. ಕಡತವನ್ನು ಉಳಿಸುವಾಗ ಕಡತಕೋಶ ಆಯ್ಕೆ ಮಾಡಿಕೊಳ್ಳಲು ಆಯ್ಕೆ ಇರುತ್ತದೆ. ನೀವು ಯಾವುದೇ ಕಡತಕೋಶ ಆಯ್ಕೆ ಮಾಡದಿದ್ದಲ್ಲಿ ಪ್ರೀಪ್ಲೇನ್ ಕಡತವು "home" ಕಡತಕೋಶದಲ್ಲಿ ಉಳಿಯುತ್ತದೆ.
 2. ಹಾಗೆಯೇ, ಎರಡನೇ ಚಿತ್ರದಲ್ಲಿ ತೋರಿಸಿರುವಂತೆ, ಪರಿಕಲ್ಪನಾ ನಕ್ಷೆಯನ್ನು ಇನ್ನು ಹಲವು ನಮೂನೆಗಳಲ್ಲಿ ಉಳಿಸಬಹುದು. ಪಠ್ಯ ದಾಖಲೆಯಾಗಿಯೂ ನಕ್ಷೆಯನ್ನು ಎಕ್ಸ್‌ಪೋರ್ಟ್‌ ಮಾಡಬಹುದು.(in .odt or .doc formats). ಚಿತ್ರವಾಗಿಯೂ ಸಹ ನಕ್ಷೆಯನ್ನು ಎಕ್ಸ್‌ಪೋರ್ಟ್‌ ಮಾಡಬಹುದು. (in .png or .jpeg formats) ಅಥವಾ ವೆಬ್‌ಪುಟವಾಗಿಯೂ ಎಕ್ಸ್‌ಪೋರ್ಟ್‌ ಮಾಡಬಹುದು. (in .html format),


ಪ್ರೀಪ್ಲೇನಲ್ಲಿ ಕನ್ನಡ ಟೈಪಿಂಗ್

ಇದರಲ್ಲಿ ನೇರವಾಗಿ ಕನ್ನಡದಲ್ಲಿ ಬರೆಯಲು ಸಾಧ್ಯವಿಲ್ಲದ ಕಾರಣದಿಂದ ಅಕ್ಷರ ಕುಟುಂಬ(ಫಾಂಟ್ ಫ್ಯಾಮಿಲಿ)ವನ್ನು ಬದಲಿಸಬೇಕು.

 1. Tools -> Preferences -> Appearance -> ಗೆ ಹೋಗಿ
 2. ಇಲ್ಲಿ ಕನ್ನಡ ಅಕ್ಷರ ಕುಟುಂಬ(ಫಾಂಟ್ ಫ್ಯಾಮಿಲಿಯನ್ನು)ವನ್ನು ಆರಿಸಿ ನಂತರ Okay ಎಂದು ಒತ್ತಿ.
 3. ಪ್ರೀಪ್ಲೇನ್ ಅನ್ನು ಪುನರಾಂಭಿಸಲು ಕೇಳಿದರೆ ಅದಕ್ಕೆ ಅನುಮತಿ ನೀಡಿ. ನಂತರ ಕನ್ನಡದಲ್ಲಿ ಬೆರೆಯಬಹುದಾಗಿದೆ.

ವಿ.ಸೂ: ನೀವು ಹಳೆಯ ಪ್ರೀಪ್ಲೇನ್ ಅನ್ನು ಉಪಯೋಗಿಸುತ್ತಿದ್ದರೆ ಮೇಲಿನ ಪ್ರಕ್ರಿಯೆಗಳು ಕಾರ್ಯನಿರ್ವಹಿಸದಿರಬಹುದು. ಆಗ ಲಿಬ್ರೆಆಫೀಸ್ ರೈಟರ್ ನಲ್ಲಿ ಬೇಕಿರುವ ಪದಗಳನ್ನು ಬರೆದು ನಂತರ ಪ್ರೀಪ್ಲೇನ್ ಗೆ ವರ್ಗಾಯಿಸಿ.

ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು

ಬೇರೆ ಎಲ್ಲಾ ಅನ್ವಯಕಗಳಂತೆಯೇ, ಇದನ್ನು ಸಹ FILE – SAVE AS ಮೂಲಕ ಉಳಿಸಬಹುದು. ಕೀಬೋರ್ಡ್ ಮೂಲಕ ಮಾಡುವುದಾದಲ್ಲಿ CTRL-S ಕೀ ಬಳಸಬಹುದು. ಕಡತಕ್ಕೆ ಅರ್ಥಪೂರ್ಣವಾದ ಹೆಸರನ್ನು ನಮೂದಿಸಿ ಉಳಿಸಬಹುದು.ಪರಿಕಲ್ಪನಾ ನಕ್ಷೆಯು ಪ್ರೀಪ್ಲೇನ್‌ ನಲ್ಲಿ '.mm' ನಮೂನೆಯಲ್ಲಿ ಉಳಿಯುತ್ತದೆ. ಇದನ್ನು ಸಹ PNG, JPEG ಹಾಗು ಪಠ್ಯದಾಖಲೆಗೆ ಎಕ್ಸ್‌ಪೋರ್ಟ್‌ ಮಾಡಬಹುದು.

ಉನ್ನತೀಕರಿಸಿದ ಲಕ್ಷಣಗಳು

 1. ನೇರವಾಗಿ ಘಟಕಗಳಿಗೆ ಚಿತ್ರಗಳನ್ನು ಸೇರಿಸಬಹುದು. ದೃಶೀಕರಣ ಪ್ರಸ್ತುತಿಯನ್ನು 'Cloud'ಮೂಲಕ ಸಾಧ್ಯವಾಗಿಸಬಹುದು. ಯಾವುದೇ ಘಟಕಗಳಿಗೆ ವಿವರವಾದ ಟಿಪ್ಪಣಿಯನ್ನು ಸೇರಿಸಬಹುದು. ಪಠ್ಯದಾಖಲೆಯಾಗಿ ಎಕ್ಸ್‌ಪೋರ್ಟ್‌ ಮಾಡಿದ ಮೇಲೆ, ನೀವು ಸೇರಿಸಿದ ಟಿಪ್ಪಣಿಗಳ ಸಮೇತ ದಾಖಲೆಯನ್ನು ನೋಡಬಹುದು. ಎಲ್ಲಾ ಘಟಕಗಳು ಶೀರ್ಷಿಕೆಗಳಾಗಿ ಹಾಗು ಎಲ್ಲಾ ಉಪಘಟಕಗಳು ಉಪ ಶೀರ್ಷಿಕೆಗಳಾಗಿ ಕಾಣುತ್ತವೆ. ಈ ರೀತಿಯಾಗಿ ಪ್ರೀಪ್ಲೇನ್‌ ಬಳಸಿಕೊಂಡು ನೀವು ದಾಖಲೆ ರಚಿಸಬಹುದು.
 2. ನಿಮ್ಮ ಇಡೀ ಕಡತಕೋಶ ವಿನ್ಯಾಸವನ್ನು ಮೈಂಡ್‌ಮ್ಯಾಪ್‌ ಆಗಿ ಆಮದು ಮಾಡಿಕೊಳ್ಳಬಹುದು.
 3. ಪ್ರೀಪ್ಲೇನ್ ಬಳಸಿಕೊಂಡು ಪರಿಕಲ್ಪನಾ ನಕ್ಷೆಯ ಮೂಲಕ ಮುಕ್ತ ಶೈಕ್ಷಣಿಕ ಸಂಪನ್ಮೂಲ ರಚನೆಯನ್ನು ನೀವು ಪ್ರಾರಂಭಿಸಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಇನ್ನೂ ಉನ್ನತೀಕರಿಸಿದ ಕಾರ್ಯ ಲಕ್ಷಣಗಳಿಗೆ ಈ ಅನ್ವಯಕದ ಕೈಪಿಡಿಯನ್ನು ಓದಬಹುದು. ಪ್ರೀಪ್ಲೇನ್ ಟ್ಯುಟೋರಿಯಲ್ ಪ್ರೀಪ್ಲೇನ್ ಅನ್ಯಕದಲ್ಲೇ ದೊರೆಯುತ್ತದೆ. ಪ್ರೀಪ್ಲೆನ್ ಅನ್ವಯಕ ತೆರೆದ ನಂತರ F1 ಕೀ ಬಳಸಿ. ಟ್ಯುಟ್ಯೋರಿಯಲ್ ಸಹ ಒಂದು ಪರಿಕಲ್ಪನಾ ನಕ್ಷೆಯಾಗಿರುತ್ತದೆ. ಈ ಪರಿಕಲ್ಪನಾ ನಕ್ಷೆಯನ್ನು ಅಭ್ಯಸಿಸುವ ಮೂಲಕ ಒಂದು ಮಾಹಿತಿಯನ್ನು ಹೇಗೆ ಸುಲಭವಾಗಿ ಸಂವಹನ ಮಾಡಬಹುದು ಎಂಬುದನ್ನು ತಿಳಿಯಬಹುದು.

ಸಂಪನ್ಮೂಲ ರಚನೆಯ ಆಲೋಚನೆಗಳು

ಸಂಪನ್ಮೂಲ ರಚನೆಯನ್ನು ಪ್ರಾರಂಭಿಸಲು ಪ್ರೀಪ್ಲೇನ್ ಒಂದು ಉತ್ತಮ ಪರಿಕರವಾಗಿದೆ. ನೀವು ಯಾವ ವಿಷಯದ ಮೇಲೆ ಸಂಪನ್ಮೂಲ ರಚಿಸಲು ತೊಡಗುವಿರೋ ಆ ವಿಷಯಕ್ಕೆ ಪರಿಕಲ್ಪನಾ ನಕ್ಷೆ ರಚಿಸಬಹುದು. ವಿಷಯದ ಬಗೆಗಿನ ಆಲೋಚನೆಗಳು, ಪರಿಕಲ್ಪನೆಗಳು, ಉಪ ಪರಿಕಲ್ಪನೆಗಳು, ನಿರ್ದಿಷ್ಟ ಅಂಶಗಳು, ಪ್ರತೀ ಅಲೋಚನೆಗಳಿಗೂ ಸಹ ಉಪ ಘಟಕಗಳನ್ನು ರಚಿಸಬಹುದು. ಘಟಕಗಳ ನಡುವೆ ಸಂಪರ್ಕಿಸಬಹುದು, ವೆಬ್‌ ಪುಟ, ಹೈಪರ್‌ಲಿಂಕ್, ಟಿಪ್ಪಣಿ ಸೇರಿಸಬಹುದು. ವಿದ್ಯುನ್ಮಾನ ಪರಿಕಲ್ಪನಾ ನಕ್ಷೆಯ ಶಕ್ತಿಯೆಂದರೆ ನಿಮಗೆ ಬೇಕಾದಾಗ ಈ ನಕ್ಷೆಯನ್ನು ಪರಿಷ್ಕರಿಸಬಹುದು.

ಈ ಪರಿಕಲ್ಪನಾ ನಕ್ಷೆಯನ್ನು ಪೂರ್ಣಗೊಳಿಸಿದ ನಂತರ ಇದನ್ನು ನಿಮ್ಮ ಸಹವರ್ತಿಗಳೊಡನೆ ಹಂಚಿಕೊಳ್ಳಬಹುದು. ಹಿಮ್ಮಾಹಿತಿ ಪಡೆಯಬಹುದು ಹಾಗು ಹಿಮ್ಮಾಹಿತಿ ಆಧಾರದ ಮೇಲೆ ಮತ್ತೆ ಪರಿಷ್ಕರಿಸಬಹುದು.

ಆಕರಗಳು

ವಿಕಿಪೀಡಿಯಾ