MDRS ಮಾಡ್ಯೂಲ್ ೧೦ ಜೀವನ ಕೌಶಲ್ಯ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಉದ್ದೇಶ

   • ಸಶಕ್ತ ಕಿಶೋರಿಯಾಗಲು ಬೇಕಿರುವ ಜೀವನ ಕೌಶಲ್ಯಗಳ ಬಗ್ಗೆ ತಿಳಿದುಕೊಳ್ಳುವುದು

  • ಜೀವನ ಕೌಶಲ್ಯಗಳನ್ನು ದಿನನಿತ್ಯದ ಜೀವನದಲ್ಲಿ ಬಳಸುವುದು ಹೇಗೆ ಎಂದು ಉದಾಹರಣೆಗಳ ಮೂಲಕ ತಿಳಿದುಕೊಳ್ಳುವುದು.

ಪ್ರಕ್ರಿಯೆ

ಕುಶಲೋಪರಿಯ ಮೂಲಕ ಮಾತುಕತೆಯನ್ನು ಶುರುಮಾಡುವುದು.

1,2,3,4, ಎಣಿಸುವುದರ ಮೂಲಕ 4 ಗುಂಪುಗಳನ್ನು ಮಾಡಿಕೊಳ್ಳುವುದು.

ಕಿಶೋರಿಯರು ಗುಂಪಿನಲ್ಲಿ ಕುಳಿತ ನಂತರ ಅವರಿಗೆ ಚಾರ್ಟ್‌ ಶೀಟ್‌ ಹಾಗು ಸ್ಕೆಚ್‌ಪೆನ್‌ಗಳನ್ನು ಕೊಟ್ಟು ನೀವು ಓದಿ ಮುಂದೆ ಏನಾಗಲು ಬಯಸಿದ್ದೀರ ಎಂದು ಬರೆಯಲು ಹೇಳುವುದು.

ಬರೆದಾದ ನಂತರ ನೀವು ಏನಾಗಲು ಬಯಸಿದ್ದೀರೋ ಅದನ್ನ ಸಾಧಿಸಲು ನಿಮಗೆ ಏನೇನಲ್ಲ ಸಹಾಯ ಬೇಕು ಮತ್ತು ನೀವು ಏನೇನು ಮಾಡಬೇಕು ಎಂದು ಬರೆಯಲು ಹೇಳುವುದು. 20 ನಿಮಿಷ

ಬರೆದಾದ ನಂತರ ದೊಡ್ಡ ಗುಂಪಿಗೆ ಬರುವುದು. ಪ್ರತಿ ಗುಂಪಿನಲ್ಲಿ ಒಬ್ಬರಿಂದ ಬರೆದಿರುವುದನ್ನು ಓದಲು ಹೇಳುವುದು. 10 ನಿಮಿಷ

ನಿಮ್ಮಲ್ಲಿ ಕೆಲವರು ಡಾಕ್ಟರ್‌, ಟೀಚರ್‌, ಎಂಜಿನಿಯರ್‌, ಅಕೌಂಟಂಟ್‌ ಹೀಗೆ ಬೇರೆ ಬೇರೆ ಆಗ್ಬೇಕು ಅಂದಿದೀರಿ. ಅದರ ಜೊತೆಗೆ ಅದಕ್ಕೆ ಅಪ್ಪ ಅಮ್ಮನ ಸಹಾಯ ಬೇಕು, ಫ್ರೆಂಡ್ಸ್‌ ಬೇಕು, ಟೀಚರ್ಸ್‌ ಸಹಾಯ ಬೇಕು, ಚೆನ್ನಾಗಿ ಓದಬೇಕು ಅಂತ ಬರೆದಿದ್ದೀರಿ. ಇವಾಗ ಇದನ್ನೆಲ್ಲ ಸಾಧಿಸೋಕೆ ಬೇಕಿರೋ ಸ್ಕಿಲ್‌ ಅಥವಾ ಕೌಶಲ್ಯಗಳ ಬಗ್ಗೆ ತಿಳ್ಳೊಳೋಣ್ವ?

ಇದರ ನಂತರ ಜೀವನ ಕೌಶಲ್ಯದ ಬಗೆಗಿನ ಪ್ರಸ್ತುತಿಯನ್ನು ತೋರಿಸಿ ಮಾತನಾಡುವುದು. ಪ್ರಸ್ತುತಿಯಲ್ಲಿ ಈ ಕೆಳಗಿನ ಅಂಶಗಳಿರುತ್ತವೆ.

ನಮ್ಮ ಜೀವನವನ್ನ ಸಶಕ್ತವಾಗಿ ಕಟ್ಕೊಳೋಕೆ, ಜೀವನನ್ನ ನಮಗೆ ಹೇಗೆ ಬೇಕೋ ಹಾಗೇ ನಡೆಸ್ಕೊಂಡು ಹೋಗಕ್ಕೆ ಬೇಕಾಗಿರೋ ಜೊತೆಗೆ, ನಮ್ಮ ಗುರಿಯನ್ನ ತಲುಪುವ ದಾರಿಯಲ್ಲಿ ಬರಬಹುದಾದ ಎಲ್ಲ ರೀತಿಯ ಚಾಲೆಂಜ್‌ಗಳನ್ನ ಸಾಲ್ವ್‌ ಮಾಡ್ಕೊಳ್ಳೋಕೆ, ಸಾಧ್ಯ ಮಾಡೋ ಶಕ್ತಿಗಳು ಅಥವ ಸಾಮರ್ಥ್ಯಗಳನ್ನ ಜೀವನ ಕೌಶಲ್ಯ ಅಥವ life skills ಅಂತ ಕರೀತೀವಿ.

ಈಗ ನೀವು ಕಿಶೋರಾವಸ್ಥೆ ಅಥವ ಟೀನೇಜಲ್ಲಿದೀರ. ನಾನು ಮುಂದೆ ಏನೋದ್ಬೇಕು, ಏನು ಕೆಲಸ ಮಾಡ್ಬೇಕು, ನನ್‌ ಲೈಫು ಹೀಗಿರ್ಬೇಕು, ನನ್‌ ಭವಿಷ್ಯ ಹೀಗಿರ್ಬೇಕು ಅಂತ ಯೋಚನೆ ಮಾಡೋ ವಯಸ್ಸು ಇದು. ಅದರ ಜೊತೆಗೆ ನಮ್ಮ ಗುರಿಗಳನ್ನ ಸಾಧಿಸೋಕೆ ಏನು ಬೇಕು ಅನ್ನೋದನ್ನ್ ತಿಳ್ಕೊಳೋಕೆ ಜೀವನ ಕೌಶಲ್ಯದ ಸಹಾಯ ಬೇಕಾಗುತ್ತೆ.  ನಮ್ಮ ಗುರಿಯನ್ನ ಸಾಧಿಸಿ, ಸಶಕ್ತ ಜೀವನ ನಡೆಸೋಕೆ ಜೀವನ ಕೌಶಲ್ಯ ಅತ್ಯವಶ್ಯಕ.

ಜೀವನ ಕೌಶಲ್ಯಗಳು ಹಲವಾರು. ಅವುಗಳಲ್ಲಿ ಮುಖ್ಯವಾದದ್ದು ೭ ಕೌಶಲ್ಯಗಳು. ಅವು ಯಾವ್ದಪ್ಪ ಅಂದ್ರೆ …

ಸಂವಹನ/ ಮಾತುಕತೆ, ಯೋಚನೆ ಮಾಡುವುದು, ಯೋಜನೆ ಮಾಡುವುದು,, ನಿರ್ಧಾರಗಳನ್ನು

ತೆಗೆದುಕೊಳ್ಳುವುದು, ಭಾವನೆಗಳನ್ನು ನಿಭಾಯಿಸುವುದು, ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದು, ಆತ್ಮ ವಿಶ್ವಾಸ ಮತ್ತು ಸ್ವಯಂ ವಿಮರ್ಶೆಯನ್ನು ಕಲಿಯುವುದು.

ಇವುಗಳನ್ನು ಒಂದೊಂದೇ ಉದಾಹರಣೆಯ ಮೂಲಕ ನೋಡೋಣ

ಮೊದಲನೆಯದು ಸಂವಹನ ಅಥವ ಮಾತುಕತೆ

ನಾವು ಏನು ಯೋಚನೆ ಮಾಡ್ತೀವೋ, ನಮ್ಮ ಅಭಿಪ್ರಾಯ ಏನಿರುತ್ತೋ ಅದನ್ನ ನಾವು ಎಷ್ಟು ಸ್ಪಷ್ಟವಾಗಿ ಯೋಚಿಸ್ತೀವೋ ಅಷ್ಟೇ ಸ್ಪಷ್ಟವಾಗಿ ನಾವು ಯಾರಿಗೆ ಇದನ್ನ ಹೇಳಲು ಹೊರಟಿದ್ದೇವೆಯೋ ಅವರಿಗೆ ಹೇಳುವುದು ಅಥವ ತಿಳಿಸುವುದು.

ನಾವು ಚಿಕ್ಕವರಿದ್ದಾಗಲೇ ಮಾತನಾಡಲು ಕಲಿತಿರುತ್ತೇವೆ. ಸಂವಹನ ಅಂದರೆ ಕೇವಲ ಮಾತಾಡೋದಷ್ಟೇ ಅಲ್ಲ. ಅದು ಜೀವನ ಕೌಶಲ್ಯ ಆಗ್ಬೇಕು ಅಂದ್ರೆ ನಾವು ಏನು ಹೇಳುತ್ತೇವೆಯೋ ಅದು ನಮ್ಮ ಮುಂದಿರುವವರಿಗೆ ಸ್ಪಷ್ಟವಾಗಬೇಕು.

ಯಾವುದೇ ರೀತಿಯ ಗೊಂದಲವಾಗದಂತೆ ಇರಬೇಕು.

ಉದಾಹರಣೆಗೆ:

ನನಗೆ ವಹಿಸಿದ ಮನೆಗೆಲಸಗಳನ್ನು ಮತ್ತು ಶಾಲೆಯಲ್ಲಿ ನನಗೆ ಕೊಟ್ಟ ಹೋಮ್ ವರ್ಕ್‌ ಅನ್ನು ನಾನು ಮಾಡಿದ್ದೇನೆ ಹಾಗಾಗಿ ನಾನು ಮೊಬೈಲ್ ಅನ್ನು ನಿಖರವಾಗಿ ಇಂತಿಷ್ಟು ಸಮಯ ಬಳಸುತ್ತೇನೆ ಎಂದು ನೀವು ನಿಮ್ಮ ಪೋಷಕರಿಗೆ ತಿಳಿಸಬೇಕೆಂದುಕೊಂಡರೆ, ಅದನ್ನು ಯಾವುದೇ ಭಾವೋದ್ವೇಗಗಳಿಲ್ಲದೆ ಮಾತನಾಡಿ ಮನವೊಲಿಸುವ ಹಾಗಾಗುವುದು.

ಎರಡನೆಯ ಕೌಶಲ್ಯ - ಯೋಚನೆ ಮಾಡುವುದು

ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಆ ವಿಷಯದ ಬಗ್ಗೆ ನಮಗೆ ಸಿಗುವ ಎಲ್ಲಾ ಮಾಹಿತಿಯನ್ನು, ಅಭಿಪ್ರಾಯಗಳನ್ನು, ಅದನ್ನು ನೋಡಲು ಹಲವು ದೃಷ್ಟಿಕೋನಗಳನ್ನು ಪರಿಗಣಿಸಿ ಆಲೋಚಿಸುವುದು. ಆಗ ಮಾತ್ರ ನಾವು ತೆಗೆದುಕೊಳ್ಳುವ ನಿರ್ಧಾರ ನಮ್ಮ ಗುರಿಯನ್ನು ಮುಟ್ಟುವುದಕ್ಕೆ ಸಹಾಯ ಮಾಡುತ್ತದೆ, ಹಾಗು ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯದ ಭಾಗವಾಗುತ್ತದೆ.

ಉದಾಹರಣೆ: ಹತ್ತನೇ ತರಗತಿಯ ನಂತರ ನೀವು ಏನನ್ನು ಓದಬೇಕೆಂದು ನಿರ್ಧಾರಮಾಡಲು ಈ ಯೋಚನೆಗಳು ಸಹಾಯಮಾಡುತ್ತವೆ

  • ಮುಂದಕ್ಕೆ ಓದಲು ಇರುವ ಎಲ್ಲಾ ಆಯ್ಕೆಗಳ ಬಗ್ಗೆ ಮಾಹಿತಿ ಇದ್ದರೆ ಒಳ್ಳೆಯದು.
  • ಹತ್ತನೆಯ ತರಗತಿಯನ್ನು ಎಷ್ಟು ಅಂಕಗಳನ್ನು ಪಡೆದು ಪಾಸ್ ಆಗಬೇಕೆಂಬ ಅರಿವು ಇರಬೇಕು.
  • ನಿಮಗೆ ಕಷ್ಟವಾಗುವ ವಿಷಯಗಳನ್ನು ನೀವು ಹೇಗೆ ಅರ್ಥಮಾಡಿಕೊಳ್ಳುತ್ತೀರಿ ಮತ್ತು ಅದನ್ನು ಕಲಿಯಲು ಯಾವ ವಿಧಾನಗಳನ್ನು/ಯೋಜನೆಯನ್ನು ಮಾಡುತ್ತೀರಿ ಎನ್ನುವುದು ತಿಳಿಯುತ್ತಾ ಹೋಗಬೇಕು ( ಸ್ನೇಹಿತೆಯರ ಬಳಿ ಹೇಳಿಸಿಕೊಳ್ಳಬಹುದೆ? ಶಿಕ್ಷಕರ ಬಳಿ ಹೆಚ್ಚಿನ ಸಹಾಯ ತೆಗೆದುಕೊಳ್ಳಬಹುದೆ? ಮನೆಯಲ್ಲಿ ಅಣ್ಣ, ಅಕ್ಕ, ಅಪ್ಪ, ಅಮ್ಮನ ಸಹಾಯ ತೆಗೆದುಕೊಳ್ಳಬಹುದೆ - ಇತ್ಯಾದಿ)
  • ಆರ್ಥಿಕವಾಗಿ ತೊಂದರೆಗಳಿದ್ದರೆ, ಅದನ್ನು ಮೀರಲು ಮಾರ್ಗೋಪಾಯಗಳೇನು ಎನ್ನುವ ಮಾರ್ಗದರ್ಶನ ಪಡೆಯುವುದು - (ಶಿಕ್ಷಕರ ಬಳಿ, ಮಾದರಿ ವ್ಯಕ್ತಿಗಳ ಬಳಿ, ಇಂಟರ್ನೆಟ್ ಮುಖಾಂತರ ಇತ್ಯಾದಿ)

ಇವೆಲವನ್ನೂ ಆಲೋಚಿಸಬಲ್ಲ ಸಾಮರ್ಥ್ಯವನ್ನು ಯೋಚಿಸುವುದು ಎನ್ನುತ್ತೇವೆ

ಮೂರನೆಯದು ಯೋಜನೆ ಮಾಡುವುದು ಅಥವ planning (ಪ್ಲಾನಿಂಗ್) ಮಾಡುವುದು

ನಾವು ಯಾವುದಾದರೂ ಕೆಲಸ ಮಾಡಲು / ನಿರ್ವಹಿಸಲು ಬೇಕಾಗಿರೋ ಎಲ್ಲ ವಿಷಯಗಳ ಬಗ್ಗೆ ಮನಸ್ಸಿನಲ್ಲೇ ಮ್ಯಾಪ್‌ ಥರ ಮಾಡ್ಕೊಳ್ಳೋದನ್ನ ಯೋಜನೆ ಅಥವ planninf ಅನ್ನಬಹುದು. ಈ ಮ್ಯಾಪು ನಮಗೆ ಯಾವ ಕ್ರಿಯೆ ಆದ್ಮೇಲೆ ಯಾವುದು ಅನ್ನೋದನ್ನ ಹಂತ ಹಂತವಾಗಿ ಅಂದುಕೊಳ್ಳೋದಕ್ಕೆ ಸಹಾಯ ಮಾಡುತ್ತದೆ ಹಾಗು ನಮಗೆ ಸ್ಪಷ್ಟತೆ ನೀಡುತ್ತದೆ.

ಉದಾಹರಣೆ

ಹತ್ತನೆಯ ತರಗತಿಯ ನಂತರ ಏನನ್ನು ಓದಬೇಕೆಂದು ತಿಳಿಯುವುದು ನಿಮ್ಮ ಮುಂದಿರುವ ಕೆಲಸ ಎಂದುಕೊಳ್ಳೋಣ. ಇದನ್ನು ಮಾಡಲು ನೀವು ಏನು ಮಾಡುವಿರಿ ಎನ್ನುವುದು ನಿಮ್ಮ ಯೋಜನೆಯಾಗುತ್ತದೆ, ಈ ಕೆಳಗಿನ ಹಂತಗಳನ್ನು ನೀವು ಪಾಲಿಸಬಹುದು

  1. ಯಾವ ರೀತಿಯ ಮಾಹಿತಿ ಸಿಕ್ಕರೆ ಉಪಯುಕ್ತ ಎಂದು ಯೋಚಿಸುವುದು. ಅಂದರೆ ಕಾಲೇಜ್ ಗಳ ಬಗ್ಗೆ ಮಾಹಿತಿ, ಸ್ಕಾಲರ್ ಶಿಪ್ ಗಳ ಬಗ್ಗೆ ಮಾಹಿತಿ, ವಸತಿ ಗೃಹಗಳ ಬಗ್ಗೆ ಮಾಹಿತಿ, ಯಾವ ಯಾವ ವಿಷಯ ತೆಗೆದುಕೊಂಡರೆ ಅದರಿಂದ ಮುಂದೆ ಏನಾಗಬಹುದು ಎನ್ನುವ ಮಾಹಿತಿ ಇತ್ಯಾದಿ
  2. ಈ ಮೊದಲಿನ ಪ್ರತಿಯೊಂದು ಮಾಹಿತಿಗೂ, ಆ ಮಾಹಿತಿ ಎಲ್ಲಿ ದೊರಕುತ್ತದೆ ಎಂದು ಅರಿತುಕೊಳ್ಳುವುದು ಅಂದರೆ  ಯಾರನ್ನು ಕೇಳಬೇಕು - ವ್ಯಕ್ತಿಗಳು - ಶಿಕ್ಷಕರು, ಅಣ್ಣ/ಅಕ್ಕ, ಚಿಕ್ಕಪ್ಪ, ಸಂಬಂಧಿಗಳು, ಗೆಳೆಯ ಗೆಳತಿಯರ ಪೋಷಕರು ಇತ್ಯಾದಿ, ಯಾವ ಮಾಹಿತಿ ಮೂಲಗಳನ್ನು ಹುಡುಕಿಕೊಳ್ಳಬೇಕು - internet ಬಳಸಿ ಸರ್ಚ್ ಮಾಡುವುದು, ಶಿಕ್ಷಣದ ಬಗ್ಗೆ ಇರುವ ವಾರ ಪತ್ರಿಕೆ/ಮಾಸ ಪತ್ರಿಕೆ ಓದುವುದು, ದಿನಪತ್ರಿಕೆ ನೋಡುವುದು ಇತ್ಯಾದಿ

ನಾಲ್ಕನೆಯ ಕೌಶಲ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು

ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯ ಎಂದರೆ ಯಾವುದಾದರೂ ಗುರಿ ತಲುಪಲು ಯಾವ ಯಾವ ಆಯ್ಕೆಗಳಿವೆ ಎಂದು ಅರ್ಥ ಮಾಡಿಕೊಂಡು, ಬೇಕಾಗಿರುವ ಆಯ್ಕೆಯನ್ನು ಗುರುತಿಸಿಕೊಳ್ಳುವುದು.

ಈ ಕೌಶಲ್ಯದ ಭಾಗವಾಗಿ ಯೋಚನೆ ಮಾಡುವುದು, ಯೋಜನೆ ಮಾಡುವುದು, ಸಮಸ್ಯೆಗಳನ್ನು ಬಗೆಹರಿಸುವುದು, ಮನವೊಲಿಸುವಿಕೆ ಇತ್ಯಾದಿಗಳಿರುತ್ತವೆ.

ಉದಾಹರಣೆಗೆ

ನೀವು ಡಾಕ್ಟರ್ ಆಗಬೇಕೆಂದು ನಿರ್ಧರಿಸಿದ್ದಿರಿ ಎಂದುಕೊಳ್ಳೋಣ. ಇದಕ್ಕೆ ಸಂಬಂಧಿಸಿದಂತೆ ನಿಮಗಿರುವ

ಆಯ್ಕೆಗಳು ಈ ರೀತಿಯಾಗಿವೆ

  1. ಮೊದಲನೆಯದು - NEET ಪರೀಕ್ಷೆಯಲ್ಲಿ ಒಳ್ಳೆಯ rank ಗಳಿಸಿ ಪಾಸ್ ಆಗಿ - ಕಡಿಮೆ ಖರ್ಚಿನಲ್ಲಿ ಒಳ್ಳೆಯ ಕಾಲೇಜಿನಲ್ಲಿ MBBS ಓದುವುದು.
  2. ಎರಡನೆಯದು - NEET ಪರೀಕ್ಷೆಯಲ್ಲಿ ಒಳ್ಳೆಯ rank ಇಲ್ಲದೆ ಇದ್ದರೂ ಲಕ್ಷಾನುಗಟ್ಟಲೆ ಡೊನೇಶನ್ ಕಟ್ಟಿ ಸಿಕ್ಕ ಕಾಲೇಜಿನಲ್ಲಿ MBBS ಓದುವುದು.

ನಿಮ್ಮ ಆಯ್ಕೆ ಮೊದಲನೆಯದ್ದಾಗಿದ್ದರೆ, ಅದಕ್ಕೆ ಸಂಬಂಧಿಸಿದಂತೆ ನೀವು, ಯೋಚನೆ (ಯಾವ ರೀತಿಯ ಡಾಕ್ಟರ್‌

ಆಗಬೇಕು), ಯೋಜನೆ (ಅಂಕಗಳು, ಸಿದ್ಧತೆ, ಎಲ್ಲಿ, ಹೇಗೆ ಇತ್ಯಾದಿ) ಮಾಡಿ ಬರುವ ಸಮಸ್ಯೆಗಳನ್ನು ಪರಿಹರಿಸಿಕೊಂಡು, ಮನೆಯವರ ಮನವೊಲಿಸಿ ನಿಮ್ಮ ಗುರಿ ತಲುಪಲು ಸಿದ್ಧರಾಗಬೇಕಿದೆ.

ನಿಮ್ಮ ಆಯ್ಕೆ ಎರಡನೆಯದ್ದಾಗಿದ್ದರೆ ನೀವು ಆರ್ಥಿಕವಾಗಿ ಸಧೃಡರಾಗಿರಬೇಕು ಅಥವ ನಿಮಗೆ ಡೊನೇಶನ್ ಹಣ

ಹೊಂದಿಸುವ ಮಾರ್ಗಗಳಿರಬೇಕು.


ಐದನೆಯ ಕೌಶಲ್ಯ - ಭಾವನೆಗಳನ್ನು ನಿಭಾಯಿಸುವುದು

ಭಾವನೆಗಳನ್ನು ನಿಭಾಯಿಸುವ ಕೌಶಲ್ಯವೆಂದರೆ ಭಾವನಾತ್ಮಕತೆಗೆ, ಉದ್ರೇಕಗಳಿಗೆ ಒಳಗಾಗದೆ ಸಮಚಿತ್ತವನ್ನು ಕಾಪಾಡಿಕೊಳ್ಳುವ ಮನಸ್ಥಿತಿಯನ್ನು ಬೆಳೆಸಿಕೊಳ್ಳುವುದು. ಯಾವುದೇ ಸಂದರ್ಭದಲ್ಲಿಯೂ ಹತಾಶೆ, ದುಃಖ, ಸಿಟ್ಟು, ಸೆಡವು, ಪ್ರಯತ್ನ ಬಿಟ್ಟು ಕೈಚೆಲ್ಲುವುದು, ನಕಾರಾತ್ಮಕವಾಗಿ ಯೋಚಿಸುವುದು, ಆಸಕ್ತಿ ಕಳೆದುಕೊಳ್ಳುವುದು ಇತ್ಯಾದಿಗಳಿಗೆ ಒಳಗಾಗದೆ ನಿಮ್ಮ ನಿರ್ಧಾರಗಳಿಗೆ ಬದ್ಧರಾಗಲು ಇನ್ನೂ ಯಾವ್ಯಾವ ಆಯ್ಕೆಗಳಿವೆ ಎಂದು ಹುಡುಕುವುದು. ಬೆಂಬಲಕ್ಕಿರುವ ಶಕ್ತಿಗಳನ್ನು, ವ್ಯಕ್ತಿಗಳನ್ನು ಹುಡುಕಿಕೊಳ್ಳುವುದು, ಮಾಡಲು ಸಮಚಿತ್ತವಾಗಿರುವುದು ಸಹಾಯಮಾಡಬಲ್ಲದು.

ಉದಾಹರಣೆ

ಹತ್ತನೆಯ ತರಗತಿಯಲ್ಲಿ ಉತ್ತಮ ಶ್ರೇಣಿಯಲ್ಲಿ ಪಾಸ್  ಆಗಬೇಕೆಂದರೆ ಗಣಿತ ಚೆನ್ನಾಗಿ ಗೊತ್ತಿರಬೇಕೆಂದಾದಲ್ಲಿ ಮತ್ತು ನಿಮಗೆ ಗಣಿತ ಕಷ್ಟವೆಂದಾದಲ್ಲಿ, ಗಣಿತವನ್ನು ತಿಳಿದುಕೊಳ್ಳಬೇಕಾದಾಗ, ಅರ್ಥಮಾಡಿಕೊಳ್ಳಲು ಕಷ್ಟಗಳು ಎದುರಾದರೆ, “ಇದು ನನಗೆ ಅರ್ಥವಾಗುವುದಿಲ್ಲ” ಎಂದು ಕೈಚೆಲ್ಲುವುದು, ಆಸಕ್ತಿ ಕಳೆದುಕೊಳ್ಳುವುದು ಮತ್ತು ದುಃಖ ಪಡುವುದು. ಇದು ನಮಗೆ ಉಪಯೋಗವಾಗುವುದಿಲ್ಲ. ನಾನು ನನಗೆ ಅರ್ಥಮಾಡಿಸಬಲ್ಲ ವ್ಯಕ್ತಿಗಳನ್ನು, ಮಾರ್ಗಗಳನ್ನು ಸಮಚಿತ್ತದಿಂದ ಹುಡುಕಿಕೊಳ್ಳುವುದರ ಮೂಲಕ ಈ ಸಂದರ್ಭವನ್ನು ನಿಭಾಯಿಸಬಹುದು.

ಆರನೆಯ ಕೌಶಲ್ಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದು

ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಜೀವನ ಕೌಶಲ್ಯವೆಂದರೆ, ನಮ್ಮ ಮುಂದಿರುವ ಸಮಸ್ಯೆಯನ್ನು ಗುರುತಿಸಿ, ಅದನ್ನು ನಿವಾರಿಸಲು ಸಾಧ್ಯವಾಗುವ ಎಲ್ಲ ರೀತಿಯ ಪರಿಹಾರಗಳನ್ನು ಯೋಚಿಸಿ, ನಮ್ಮ ಸಮಸ್ಯೆಗೆ ಸಮಂಜಸವಾದ ಪರಿಹಾರವನ್ನು ನಿರ್ಧರಿಸುವ ಪ್ರಕ್ರಿಯೆ ಎನ್ನಬಹುದು

ಉದಾಹರಣೆಗೆ

ನೀವು ಹತ್ತನೆಯ ತರಗತಿಯ ನಂತರ ಕಾಲೇಜಿಗೆ ಸೇರುವಾಗ ಯಾವ ವಿಷಯ (ಸಬ್ಜೆಕ್ಟ್) ತೆಗೆದುಕೊಳ್ಳಬೇಕೆಂದು

ತಿಳಿಯದೆ ಇರುವುದು ನಿಮ್ಮ ಸಮಸ್ಯೆ ಎಂದುಕೊಳ್ಳೋಣ. ಇದಕ್ಕೆ ಪರಿಹಾರದ ಆಯ್ಕೆಗಳು ಹಲವಿರಬಹುದು.

  1. ನಿಮ್ಮ ಸಹಪಾಠಿಗಳು ಅಥವ ನಿಮ್ಮ ಗೆಳತಿಯರು ಆಯ್ಕೆ ಮಾಡಿಕೊಳ್ಳುವ ವಿಷಯಗಳನ್ನು ಯಾವುದೇ ಇತರ  ಯೋಚನೆಗಳಿಲ್ಲದೆ ನಮ್ಮ ಆಯ್ಕೆಯನ್ನಾಗಿ ಮಾಡಿಕೊಳ್ಳುವುದು
  2. ನಿಮಗೆ ಇಷ್ಟವಾಗುವ, ನಿಮಗೆ ಭವಿಷ್ಯದಲ್ಲಿ ಏನಾಗಬೇಕು ಎನ್ನುವ ಗುರಿಗೆ ತಕ್ಕಂತೆ, ಅನೇಕ ಮಾಹಿತಿ ಮೂಲಗಳಲ್ಲಿ ಹುಡುಕಿ ಸಂಗ್ರಹಿಸಿದ ಮಾಹಿತಿಗಳ ಪ್ರಕಾರ ನಿಮ್ಮ ಆಯ್ಕೆಯನ್ನು ಮಾಡಿಕೊಳ್ಳುವುದು
  3. ಯಾವ ರೀತಿಯ ವಿಷಯಗಳಿವೆ - ಅವುಗಳನ್ನು ಓದುವುದರಿಂದ ಭವಿಷ್ಯದಲ್ಲಿ ಯಾವ ರೀತಿಯ ಆಯ್ಕೆಗಳು ಮತ್ತು ಸಾಧ್ಯತೆಗಳು ನಮಗೆ ದೊರೆಯಲಿವೆ ಎಂದು ಅರ್ಥಮಾಡಿಕೊಂಡು - ಅದರ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳುವುದು

ಈ ಮೂರು ಆಯ್ಕೆಗಳಲ್ಲಿ, ನಿಮ್ಮ ಸಮಸ್ಯೆ ಪರಿಹರಿಸಿಕೊಳ್ಳಲು ಸರಿಯಾದ ಮಾರ್ಗವನ್ನು ನಿರ್ಧರಿಸಬಹುದು

ಏಳನೆಯ ಮತ್ತು ಕೊನೆಯ ಕೌಶಲ್ಯ ಆತ್ಮ ವಿಶ್ವಾಸ ಮತ್ತು ಸ್ವಯಂ ವಿಮರ್ಶೆಯನ್ನು ಕಲಿಯುವುದು

ಆತ್ಮ ವಿಶ್ವಾಸ ಎಂದರೆ, ನಮ್ಮ ಕಲಿಕೆಯ ಬಗ್ಗೆ, ನಮ್ಮ ಮುಂದಿರುವ ಸಮಸ್ಯೆಗಳು/ಸಂದರ್ಭಗಳು ಮತ್ತು ನಾವು

ಮಾಡುವ ಆಯ್ಕೆಗಳ ಬಗ್ಗೆ ಧೈರ್ಯವಾಗಿ ಮತ್ತು ಧೃಡವಾಗಿರುವ ಮನಸ್ಥಿತಿ ಎನ್ನಬಹುದು.

ಸ್ವಯಂ ವಿಮರ್ಶೆಮಾಡಿಕೊಳ್ಳುವುದೆಂದರೆ, ನಮ್ಮ ಆಲೋಚನೆಗಳು, ಪರಿಹಾರಗಳು, ಆಸಕ್ತಿಗಳು ಮತ್ತು ಆಯ್ಕೆಗಳು ಸರಿಯಾಗಿವೆಯೇ ಇಲ್ಲವೇ ಎಂದು ಯೋಚಿಸಿ, ಅವುಗಳಲ್ಲಿ ತೊಂದರೆಗಳಿದ್ದರೆ ಅವುಗಳನ್ನು ಗುರುತಿಸಿಕೊಳ್ಳುವ ಮನಸ್ಥಿತಿ ಎನ್ನಬಹುದು.

  1. ನಮ್ಮ ಯೋಚನೆಗಳು, ನಿರ್ಧಾರಗಳು ಮತ್ತು ಪರಿಹಾರಗಳ ಬಗ್ಗೆ ಹಾಗು ಅವುಗಳಿಂದ ಉಂಟಾಗಬಹುದಾದ ಎಲ್ಲ  ರೀತಿಯ ಪರಿಣಾಮಗಳ ಬಗ್ಗೆ ಸಮಚಿತ್ತದಿಂದ, ಧೃಡತೆಯಿಂದ ಮತ್ತು ಧೈರ್ಯದಿಂದ ಎದುರಿಸಬಲ್ಲ ಮನಸ್ಥಿತಿಯನ್ನು ಆತ್ಮವಿಶ್ವಾಸವೆನ್ನುತ್ತೇವೆ
  2. ನಾವು ತೆಗೆದುಕೊಂಡ ನಿರ್ಧಾರ ಸರಿಯಾದದ್ದೇ ಅಲ್ಲವೇ ಎಂದು ಯೋಚಿಸಿದಾಗ ಅಥವ ನಮ್ಮ ನಿರ್ಧಾರದಿಂದ ನಾವು ಅಂದುಕೊಂಡ ಫಲಿತಾಂಶ ಸಿಗುತ್ತಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾದಾಗ, ನಾವು ಎಲ್ಲಿ ಎಡವಿರಬಹುದು ಎನ್ನುವುದನ್ನು ಕಂಡುಹಿಡಿದುಕೊಳ್ಳುವ ಪ್ರಕ್ರಿಯೆಯನ್ನು ಸ್ವಯಂ  ವಿಮರ್ಶೆಮಾಡಿಕೊಳ್ಳುವುದು ಎನ್ನುತ್ತೇವೆ.

ಕಿಶೋರಿಯರಾಗಿ ನೋವು ಮಾಡಬೇಕಾಗಿರುವುದು

  1. ನಿಮ್ಮ ಆಸಕ್ತಿಗಳು, ಮುಂದೆ ಭವಿಷ್ಯದಲ್ಲಿ ಏನಾಗಬೇಕು ಎಂಬುದನ್ನು ಬರೆದಿಟ್ಟುಕೊಳ್ಳುವುದು
  2. ಅದಕ್ಕೆ ಪೂರಕವಾಗಿ ಏನು ಓದಬೇಕು, ಎಷ್ಟು ಅಂಕ ಗಳಿಸಿದರೆ ತನಗೆ ಇದನ್ನು ಸಾಧಿಸಲು ಸಾಧ್ಯ ಎನ್ನುವುದನ್ನು ಗುರುತಿಸಲು ಸಾಧ್ಯವಾಗುವುದು.
  3. ಬೇರೆ ಕೋರ್ಸ್‌ ಅನ್ನು ಮಾಡಬೇಕಿದ್ದರೆ, ಕೋರ್ಸಿನ ಬಗ್ಗೆ  ಬೇಕಾದ ಮಾಹಿತಿಗಳನ್ನು ಕಲೆ ಹಾಕುವುದು
  4. ಬೆಂಬಲದ ಗುಂಪನ್ನು ಗುರುತಿಸಿ ಕಟ್ಟಿಕೊಳ್ಳುವುದು ಮತ್ತು ರೋಲ್‌ ಮಾಡೆಲ್‌ ಅನ್ನು ಗುರುತಿಸಿಕೊಳ್ಳುವುದು
  5. ನಿಮ್ಮ ಆಸಕ್ತಿಯ ಬಗ್ಗೆ ಪೋಷಕರಿಗೆ ಕ್ಲಿಯರ್‌ ಆಗಿ ವಿವರಿಸುವುದು (ಸಂವಹನ ಕೌಶಲ್ಯ)
  6. ಒಂದು ವೇಳೆ ಪೋಷಕರು ಸಲಹೆ ನೀಡಿದರೆ ಅವುಗಳನ್ನು ತಿರಸ್ಕರಿಸದೇ, ಅದರ ಬಗ್ಗೆ ಮಾಹಿತಿ ಕಲೆ ಹಾಕುವುದು
  7. ತನಗೆ ಏನನ್ನು ಓದಬೇಕೊ ಆ ಕೋರ್ಸಿಗೆ / ಇಷ್ಟವಿರುವ ಕಾಲೇಜಿನಲ್ಲಿ ಪ್ರವೇಶ ಪಡೆದುಕೊಳ್ಳುವುದು 30 ನಿಮಿಷ

ಜೀವನ ಕೌಶಲ್ಯಗಳು ಯಾವುವು ಎಂದು ಇನ್ನೊಮ್ಮೆ ಹೇಳುವುದು.

ಉದಾಹರಣೆಯ ಮೂಲಕ (ಪ್ರಸ್ತುತಿ) ಜೀವನ ಕೌಶಲ್ಯಗಳನ್ನು ಹೇಗೆ ಬಳಸುವುದು ಎಂಬುದರ ಬಗ್ಗೆ ಮಾತನಾಡುವುದು.

ಉದಾಹರಣೆಗಳು

ಕೆಲವು ಸನ್ನಿವೇಶಗಳ ಮೂಲಕ ಇವುಗಳನ್ನು ತಿಳಿದುಕೊಳ್ಳೋಣ

ಶ್ರೇಯಳ ಕಥೆ

ಶ್ರೇಯಳಿಗೆ ತಾನು SSLC ನಂತರ ಓದಬೇಕೆಂದು ಆಸೆ. ಆದರೆ ಆಕೆಯ ಪೋಷಕರ ಬಳಿ ಮುಂದೆ ಓದಿಸಲು ಹಣವಿಲ್ಲ. ಆದ್ದರಿಂದ ಅವರು SSLC ನಂತರ ಓದಿಸಲು ತಯಾರಿಲ್ಲ.

ಈ ಸಂದರ್ಭದಲ್ಲಿ ಶ್ರೇಯ ಏನೆಲ್ಲ ಮಾಡಬಹುದು?

(give a pause here for disucssion)

  • ಶ್ರೇಯ ತಂದೆ ತಾಯಿಯ ಹತ್ತಿರ ತನಗೆ ಓದಲು ಬಹಳ ಆಸಕ್ತಿಯಿದೆ ಎಂದು ಮಾತನಾಡಬಹುದು.
  • ಮನೆಯಲ್ಲಿ ಚರ್ಚಿಸುವಾಗ ಆಕೆಯ ವಿಶ್ವಾಸವಿರುವ ಹಿರಿಯರ ಸಹಾಯ ಪಡೆಯುವುದು. (ಚಿಕ್ಕಪ್ಪ, ಚಿಕ್ಕಮ್ಮ, ಮಾವ, ಅತ್ತೆ, ಅಣ್ಣ, ಅಕ್ಕ )
  • ತನಗೆ ವಿದ್ಯಾರ್ಥಿವೇತನಗಳು(Scholarships) ಸಿಗುತ್ತವೆ, ಹಾಸ್ಟೆಲ್‌ಗಳೂ ಕೂಡ ಬಹಳ ಸುರಕ್ಷಿತವಾಗಿರುತ್ತೆ ಎಂದು ಅವರ ಮೂಲಕ ಪೋಷಕರಿಗೆ ತಿಳಿಸುವುದು.
  • HM ಅಥವ ಶಿಕ್ಷಕರ ಸಹಾಯ ಪಡೆದುಕೊಳ್ಳವುದು. ಅವರ ಹತ್ತಿರ ಮನೆಯಲ್ಲಿ ಮಾತನಾಡಿಸುವುದು.
  • ಶಿಕ್ಷಣದ ಮಹತ್ವದ ಬಗ್ಗೆ ಶಿಕ್ಷಕರು ಪೋಷಕರ ಮನ ಮುಟ್ಟುವಂತೆ ಹೇಳಿದರೆ ಉತ್ತಮ
  • ಆಕೆಯ ಬೆಂಬಲದ ಗುಂಪಿನ ಹತ್ತಿರ ವಿದ್ಯಾರ್ಥಿವೇತನ, ಹಾಸ್ಟೆಲ್‌, ಕಾಲೇಜುಗಳ ಬಗ್ಗೆ ಮಾಹಿತಿ ಸಿಕ್ಕರೆ ಆಕೆಯನ್ನು  ಕಾಲೇಜಿಗೆ ಕಳಿಸುವ ಬಗ್ಗೆ ಯೋಚಿಸುತ್ತೀರ ಎಂದು ಕೇಳಲು ವಿನಂತಿಸಿಕೊಳ್ಳುವುದು
  • ಬೆಂಬಲದ ಗುಂಪಿನ ಮೂಲಕ ಮನವೊಲಿಸಿ, ಪೋಷಕರನ್ನು ಕಾಲೇಜ್‌ expo ಗಳಿಗೆ ಕರೆದುಕೊಂಡು ಹೋಗುವುದು. ಅದರಲ್ಲಿ ಅವರಿಗೆ ಕಾಲೇಜು, ವಿದ್ಯಾರ್ಥಿವೇತನ‌ಗಳ ಬಗ್ಗೆ ಮಾಹಿತಿ ಸಿಗುತ್ತದೆ. ಇದರಿಂದ ಅವರ ಮನಸ್ಸು ಬದಲಾಗಬಹುದು.

ಬೇರೆ ಯಾವುದೇ ದಾರಿಗಳಿಲ್ಲದಿದ್ದರೆ

  • ವೃತ್ತಿಪರ ಕೋರ್ಸಿಗೆ ಸೇರಿಕೊಳ್ಳುತ್ತೇನೆ ಎಂದು ಒಪ್ಪಿಸುವುದು.
  • ಕಡಿಮೆ ಸಮಯದ ಕೋರ್ಸ್‌ಗಳಿಗೆ ಮತ್ತು ಅವುಗಳಿಂದ ಬರುವ ಆದಾಯದ ಕಾರಣಗಳಿಂದ ಪೋಷಕರು ಒಪ್ಪಬಹುದು.
  • ಕೋರ್ಸಿನಲ್ಲಿ ಕಲಿತ ಕೌಶಲ್ಯವನ್ನು ಬಳಸಿಕೊಂಡು, ಆಕೆ ಹಗಲಿನಲ್ಲಿ ಕೆಲಸ ಮಾಡಿಕೊಂಡು ಸಂಜೆ ಕಾಲೇಜಿಗೆ ಹೋಗುವ ಸಾಧ್ಯತೆಗಳನ್ನು ಬೆಂಬಲದ ಗುಂಪಿನ ಮೂಲಕ ಚರ್ಚಿಸುವುದು

ಎರಡನೆಯದು - ತಸ್ಲಿಮಳ ಕಥೆ

ತಸ್ಲೀಮಳಿಗೆ SSLC ನಂತರ ಮುಂದೆ ಓದಬೇಕೆಂದು ಆಸೆ. ಆದರೆ ಆಕೆಯ ಮನೆಯಲ್ಲಿ ಒಳ್ಳೆಯ ಸಂಬಂಧ ಬಂದಿದೆ ಎಂದು ಮದುವೆ ಮಾಡಲು ನಿರ್ಧರಿಸಿದ್ದಾರೆ.

ಈ ಸಂದರ್ಭದಲ್ಲಿ ತಸ್ಲೀಮ ಏನೆಲ್ಲ ಮಾಡಬಹುದು ?

(give a pause here for disucssion)

ಕಿಶೋರಿಯಾಗಿ ತನಗೆ ಮೂರು ವರ್ಷಗಳ ಸಮಯವನ್ನು ಪಡೆದುಕೊಳ್ಳುವುದು

  • ತನ್ನ ಬೆಂಬಲದ ಗುಂಪಿನಲ್ಲಿ ಪೋಷಕರು ಯಾರ ಮಾತನ್ನು ಕೇಳುತ್ತಾರೆ ಗುರುತಿಸಿಕೊಳ್ಳುವುದು.
  • ಮದುವೆ 18 ವರ್ಷದ ನಂತರ ಮಾಡ್ಕೋತೀನಿ, ಈಗ ಬೇಡ. ಅಲ್ಲಿಯವರೆಗೆ ಕಾಯೋಣ ಅಂತ ಬೀಸೋ ದೊಣ್ಣೆನ ತಪ್ಪಿಸಿಕೊಳ್ಳೋದು.
  • ಇನ್ನೂ ಮೂರು ವರ್ಷ ನನಗೆ 18 ವರ್ಷ ಆಗೋವರೆಗೂ ಕಾಯಿರಿ ಪ್ಲೀಸ್‌ ಎಂದು ಕೇಳಿಕೊಳ್ಳುವುದು

18 ವರ್ಷಗಳಾಗುವವರೆಗೆ ಓದಲು ಅವಕಾಶವನ್ನು ಒದಗಿಸಿಕೊಳ್ಳುವುದು

  • ತನ್ನ ವಿಶ್ವಾಸಕ್ಕಿರುವವರ ಹತ್ತಿರ ತನಗೆ ಮುಂದೆ ಓದಲು ಇಷ್ಟ ಇದೆ ಎಂದು ಹೇಳಿ ಕನ್ವಿನ್ಸ್‌ ಮಾಡಬಹುದು
  • ಇದು ಬಾಲ್ಯವಿವಾಹ ಮತ್ತು ಕಾನೂನು ಬಾಹಿರ ಎಂದು ಶಿಕ್ಷಕರ ಹತ್ತಿರ, ವಿಶ್ವಾಸಕ್ಕಿರುವವರ ಹತ್ತಿರ ಹೇಳಿಸಬಹುದು  ಇದರಿಂದ ತನಗೆ ಮತ್ತೆ ತನ್ನ ಸನ್ನಿಹಿತರಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಎಂದು ಖಾತ್ರಿಯಿದ್ದರೆ ಮಾತ್ರ ಹೇಳಿ.

ಮೂರನೆಯದು ಜೆನಿಫರ್‌ ಕಥೆ

ಜೆನಿಫರ್‌ಗೆ ಕಾಲೇಜು ಸೇರಿ ಡಿಗ್ರಿ ಓದಲು ಇಷ್ಟವಿಲ್ಲ. ಆಕೆಗೆ SSLC ನಂತರ ಫ್ಯಾಶನ್‌ ಟೆಕ್ನಾಲಜಿ ಕೋರ್ಸ್‌  ಮಾಡಿಕೊಂಡು ತನ್ನದೇ ಆದ ಬೊಟಿಕ್‌ ಇಡಬೇಕೆಂಬ ಆಸೆ. ಆದರೆ ಆಕೆಯ ಪೋಷಕರು ಚೆನ್ನಾಗಿ ಓದಿಕೊಳ್ಳಲಿ  ಎಂದು ಆಸೆ ಪಡುತ್ತಿದ್ದಾರೆ. ಆದ್ದರಿಂದ ಆಕೆಗೆ PUC ಓದು ಎಂದು ಹೇಳುತ್ತಿದ್ದಾರೆ.

ಈ ಸಂದರ್ಭದಲ್ಲಿ ಜೆನಿಫರ್‌ ಏನೆಲ್ಲ ಮಾಡಬಹುದು ?

(give a pause here for disucssion)

  • ಫ್ಯಾಶನ್‌ ಟೆಕ್ನಾಲಜಿಯ ಬಗ್ಗೆ ವಿವರವಾಗಿ ಮಾಹಿತಿಯನ್ನು ಕಲೆ ಹಾಕುವುದು.
  • ತನ್ನ ತುಡಿತ, ಆಸಕ್ತಿ ಇರುವುದು ಇದರಲ್ಲಿ, ನಾನು ಓದಲು ಇಷ್ಟವಿಲ್ಲದೇ ಇದನ್ನ ಮಾಡ್ತಿಲ್ಲ, ಆದರೆ ನನ್ನ ಗುರಿಯನ್ನ ಫಾಲೋ ಮಾಡ್ತಿದೀನಿ. ಇದರಲ್ಲಿಒಳ್ಳೆ ಪ್ರತಿಭೆ ಇದೆ ಎಂದು ನನಗನಿಸುತ್ತೆ ಎಂದು ಹೇಳುವುದು
  • ಆಕೆಯ ಬೆಂಬಲದ ಗುಂಪಾದ ಅಣ್ಣ , ಅಕ್ಕ ಅತ್ತೆ, ಮಾವ, ಚಿಕ್ಕಪ್ಪ ಇತ್ಯಾದಿಯವರೊಂದಿಗೆ ಮಾತನಾಡಿ ಫ್ಯಾಶನ್‌ ಟೆಕ್ನಾಲಜಿ ಕೋರ್ಸ್‌ ಓದಲು ತನಗೆ ಇಷ್ಟವಿರುವ ಬಗ್ಗೆ, ಆಸಕ್ತಿಯ ಬಗ್ಗೆ, ಪೋಷಕರ ಮನವೊಲಿಸುವ ಬಗ್ಗೆ ಮಾತನಾಡುವುದು
  • ಅವರ ಮೂಲಕ ತಂದೆ ತಾಯಿಯರಿಗೆ ಕೇವಲ PUC ಅಷ್ಟೇ ಅಲ್ಲ, ಇದರಿಂದ ಕೂಡ ಒಳ್ಳೆಯ ಹೆಸರು, ಸಂಪಾದನೆ ಮಾಡಬಹುದು ಎಂದು ತಿಳಿ ಹೇಳುವುದು.
  • ಬೆಂಬಲದ ಗುಂಪಿನ ಜೊತೆ ಫ್ಯಾಶನ್‌ ಟೆಕ್ನಾಲಜಿ ಕೋರ್ಸ್‌ ನಡೆಯುವ ಜಾಗಕ್ಕೆ ಪೋಷಕರನ್ನು ಕರೆದುಕೊಂಡು ಹೋಗುವುದು
  • ಉಚಿತ ಕೋರ್ಸ್‌ಗಳಿರುವ ಜಾಗಗಳ ಬಗ್ಗೆ ಮಾಹಿತಿ ಕಲೆ ಹಾಕಿ ತಿಳಿಸುವುದು

ಇವೆಲ್ಲವನ್ನು ಮಾಡಿರುವುದು ಬೇರೆ ಬೇರೆ ಜೀವನ ಕೌಶಲ್ಯಗಳನ್ನು ಉಪಯೋಗಿಸಿಕೊಂಡು. ನೀವು ಕೂಡ ಅವುಗಳನ್ನು ಉಪಯೋಗಿಸಿಕೊಂಡು ಸಶಕ್ತ ಕಿಶೋರಿಯರಾಗುತ್ತೀರ ತಾನೆ? ?

ಒಬ್ಬೊಬ್ಬರಿಗೆ ಒಂದೊಂದು ರೀತಿ ಇದು ವರ್ಕ್ ಆಗುತ್ತೆ. ಆದ್ದರಿಂದ ಅದನ್ನ ಯುಕ್ತಿಯಿಂದ, ನಮಗೆ ಯಾವ ನಿರ್ಧಾರದಿಂದ ಜಾಸ್ತಿ ಒಳ್ಳೇದು ಅಂತ ಅನ್ಸುತ್ತೋ ಅದನ್ನ ಮಾಡೋದು ಉತ್ತಮ ಅಂತ ನಂಗನ್ಸುತ್ತೆ, ನಿಮಗೆ? 30 ನಿಮಿಷ

ಒಟ್ಟು ಸಮಯ

೯೦ ನಿಮಿಷಗಳು

ಒಟ್ಟು ಫೇಸಿಲಿಟೇಟರ್‌ಗಳು: 1

ಬೇಕಾಗಿರುವ ಸಂಪನ್ಮೂಲಗಳು

  • Projector
  • Laptop
  • Speaker

ಇನ್‌ಪುಟ್‌ಗಳು

Life Skill Presentation

ಔಟ್‌ಪುಟ್‌ಗಳು

ಕಿಶೋರಿಯರು ಬರೆದ ಚಾರ್ಟ್‌ಗಳು