ರಚನಾ ಸಮಾಜ ವಿಜ್ಞಾನ 9 ಪೀಠಿಕೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

1. ಪೀಠಿಕೆ

ಇದು ಶಿಕ್ಷಕರ ಓದುವ ಸಾಹಿತ್ಯ. ತರಗತಿ ಪ್ರಕ್ರಿಯೆಗಳನ್ನು ರಚನವಾದಿ ನೆಲೆಗಳಿಂದ ಹೇಗೆ ಅನುಕೂಲಿಸಬಹುದು ಎನ್ನುವುದರ ಹುಡುಕಾಟವೇ ಇಲ್ಲಿನ ಮುಖ್ಯ ಕಾಳಜಿ ಇಲ್ಲಿ ನೀಡಿರುವ ಸಲಹೆಗಳನ್ನು ವಿಚಾರಗಳನ್ನು ಮತ್ತೊಮ್ಮೆ ತಾವೆಲ್ಲರೂ ವಿಮರ್ಶೆಗೊಳಪಡಿಸಿಕೊಂಡು ತಮ್ಮ ತಮ್ಮ ಸಂದರ್ಭಗಳಲ್ಲಿ ಅವುಗಳ ಅನುಷ್ಠಾನ ಹೇಗೆ ಎಂದು ಆಲೋಚಿಸಿಕೊಳ್ಳಬೇಕಾಗಿದೆ. ಕಲಿಕೆಯು ಅನುಭವಾತ್ಮಕವಾಗಬೇಕು. ಆಗಲೇ ಅದು ಆಪ್ತವಾಗುವುದು ಹಾಗೂ ಸಹಜವಾಗುವುದು ಎಂಬ ಪೂರ್ವಕಲ್ಪನೆಯೊಂದಿಗೆ ಈ ಸಾಹಿತ್ಯ ರಚಿಸಲಾಗಿದೆ. ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2005 ಹಾಗೂ ಆರ್.ಟಿ.ಇ. 2009 ರ ಆಶಯಗಳ ಹಿನ್ನೆಲೆಯಲ್ಲಿ ಪಠ್ಯಪುಸ್ತಕಗಳ ಪರಿಷ್ಕರಣೆ ಕಾರ್ಯ ಕೈಗೆತ್ತಿಕೊಳ್ಳಲಾಯಿತು. ಈ ಆಶಯಗಳ ಸಾಕಾರಕ್ಕಾಗಿ ಪಾಠಗಳನ್ನು ರಚಿಸಲಾಗಿದೆ. ಈ ಪಾಠಗಳನ್ನು ರಚನವಾದಿ ತತ್ವದ ತರಗತಿ ಪ್ರಕ್ರಿಯೆಗಳಿಂದ ನಿರ್ವಹಿಸಬೇಕಿದೆ. ಮಕ್ಕಳು ತಮ್ಮ ಕಲಿಕೆ ತಾವೇ ಕಟ್ಟಿಕೊಳ್ಳಲು ಅನುಕೂಲ ಮಾಡಿಕೊಡುವ ಚಟುವಟಿಕೆಗಳನ್ನು ನೀಡಲಾಗಿದೆ. ಇವುಗಳ ಹೊರತಾಗಿಯೂ ಶಿಕ್ಷಕರು ತಮ್ಮ ಸಂದರ್ಭಕ್ಕೆ ವಿವಿಧ ಚಟುವಟಿಕೆಗಳನ್ನು ರಚನಾವಾದಿ ತತ್ವದನ್ವಯ ಹಮ್ಮಿಕೊಳ್ಳಬಹುದಾಗಿದೆ. ಕಲಿಕೆ ಪಠ್ಯಪುಸ್ತಕ, ಶಿಕ್ಷಕರು ಹಾಗೂ ತರಗತಿ ಕೋಣೆಗಳ ಮಿತಿಗಳನ್ನು ಮೀರಿ ಬೆಳೆಯಬೇಕು, ಆಗಲೇ ಅದು ಕಲಿಕಾದಾರರಿಗೆ ಅರ್ಥಪೂರ್ಣವಾಗುವುದು. ಈ ದೃಷ್ಟಿಯಿಂದ ಇಲ್ಲಿ ನೀಡಿರುವ ಸಾಹಿತ್ಯವನ್ನು ಅರ್ಥೈಸಿಕೊಳ್ಳಬೇಕು.

ಈ ಸಾಹಿತ್ಯ ಓದುವುದಕ್ಕೆ ಮೊದಲು 2011ರಲ್ಲಿ ನೀಡಲಾದ ತರಬೇತಿ ಸಂಚಿ `ನಿರಂತರ' ಓದಿಕೊಳ್ಳುವುದು ಅಪೇಕ್ಷಣೀಯ. ಒಂದು ಅರ್ಥದಲ್ಲಿ ಈ ಸಾಹಿತ್ಯ `ನಿರಂತರ'ದ ಮುಂದುವರಿದ ಭಾಗ ಎನ್ನಬಹುದು. ಈ ಸಾಹಿತ್ಯದಲ್ಲಿ ಎಂಟನೆಯ ತರಗತಿಯ ಸಮಾಜ ವಿಜ್ಞಾನ ವಿಷಯ ಕೆಲವು ಚಟುವಟಿಕೆಗಳನ್ನು ಸೂಚಿಸಿದೆ. ಈ ಚಟುವಟಿಕೆಗಳನ್ನು ಇದೇ ವಿಷಯಕ್ಕೆ ಬಳಸಬೇಕು ಎಂದೇನಿಲ್ಲ. ಚಟುವಟಿಕೆಗಳನ್ನು ಸೂಕ್ತ ಮಾರ್ಪಾಡುಗಳೊಂದಿಗೆ ಯಾವ ವಿಷಯ ಹಾಗೂ ತರಗತಿಯಲ್ಲಿ ಬೇಕಾದರೂ ಬಳಸಬಹುದು. ಪಾಠ ಯೋಜನೆ ಬರೆಯಲು ವಿವಿಧ ರೀತಿಯ ಮಾದರಿಗಳು ಕಾಣುತ್ತವೆ. ಪಾಠಯೋಜನೆ ಕಲಿಕಾ ಪ್ರಕ್ರಿಯೆಗಳನ್ನು ಹೇಗೆ ಸಂಟಿಸುತ್ತೀರಿ ಎನ್ನುವುದನ್ನು ಸ್ಪಷ್ಟಪಡಿಸಬೇಕೇ ಹೊರತು ಮಾದರಿಗಳನ್ನಲ್ಲ. ಪಾಠಯೋಜನೆಯಲ್ಲಿ ಇರಲೇಬೇಕಾದ ಅಂಶಗಳ ಕುರಿತಂತೆ ಎಲ್ಲ ವಿಷಯಗಳ ಶೀರ್ಷಿಕೆಗಳಡಿಯಲ್ಲಿಯೂ ಚರ್ಚಿಸಿದೆ. ಅವುಗಳ ಆಧಾರದಲ್ಲಿ ನಿಮ್ಮ ತರಗತಿಗೆ ಬೇಕಾದ ಪಾಠಯೋಜನೆ ನೀವೇ ತಯಾರಿಸಿಕೊಳ್ಳಿ. ಒಂದೇ ಪಾಠಯೋಜನೆ ಮಾದರಿಗೆ ಜೋತು ಬೀಳಬೇಕಾಗಿಲ್ಲ.

ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನವನ್ನು ಕೂಡಾ ಕಲಿಕೆಯ ಸಾಧನ ಎಂದೇ ಅರ್ಥೈಸಿಕೊಳ್ಳಬೇಕಾಗಿದೆ. ಇಲ್ಲಿ ಶಿಕ್ಷಕರು ಕೂಡಾ ತಮ್ಮ ಆಚರಣೆಗಳನ್ನು ವಿಮರ್ಶಿಸಿಕೊಳ್ಳುವ ಅವಕಾಶಗಳಿವೆ. ಇದರ ಮೂಲಕ ಕಲಿಕಾದಾರರಲ್ಲಿ ಸ್ವಾವಲೋಕನ ಅನುಕೂಲಿಸುವುದು ಬಹಳ ಮುಖ್ಯ. ಆಗ ಮಾತ್ರ ಕಲಿಕೆ ವೈಯಕ್ತಿಕವಾಗುತ್ತದೆ. ಕಲಿಕದಾರರ ಜವಾಬ್ದಾರಿಯಾಗುತ್ತದೆ. ತರಗತಿ ಪ್ರಕ್ರಿಯೆಗಳಲ್ಲಿ ಮೌಲ್ಯಮಾಪನವನ್ನು ಹೇಗೆ ಅಳವಡಿಸಿಕೊಳ್ಳಬಹುದು ಎನ್ನುವುದು ಇನ್ನು ಮುಂದೆ ನಮ್ಮೆಲ್ಲರಿಗೂ ಒಂದು ನಿರಂತರ ಕಾಳಜಿಯೇ ಆಗಬೇಕಾಗಿದೆ. ವ್ಯವಸ್ಥೆಗೆ ತನ್ನನ್ನು ತಾನು ಸುಧಾರಣೆ ಮಾಡಿಕೊಳ್ಳಲು ಇರುವ ಸಾಮಥ್ರ್ಯವೇ ಗುಣಾತ್ಮಕತೆ ಎಂದು ಎನ್ಸಿಎಫ್ - 2005 ಹೇಳುತ್ತದೆ. ವ್ಯಕ್ತಿಗಳಲ್ಲಿ ತಮ್ಮನ್ನು ತಾವು ಸುಧಾರಣೆ ಮಾಡಿಕೊಳ್ಳುವ ಸಾಮಥ್ರ್ಯ ಬೆಳೆದಾಗ ಮಾತ್ರ ವ್ಯವಸ್ಥೆ ಸುಧಾರಣೆಯಾಗಬಲ್ಲದು. ಗುಣಾತ್ಮಕ ಶಿಕ್ಷಣದ ಮೂಲ ಗುಣಾತ್ಮಕ ಮೌಲ್ಯಮಾಪನದಲ್ಲಿ ಇದೆ ಎಂಬ ಹಿನ್ನೆಲೆಯಲ್ಲಿ ಈ ಸಾಹಿತ್ಯವನ್ನು ಓದುವುದು.

ತರಗತಿಯಲ್ಲಿ ಕಲಿಕೆ ಅನುಕೂಲಿಸಲು ಪಠ್ಯಪುಸ್ತಕ ಕೇವಲ ಒಂದು ಆಕರ ಮಾತ್ರ ಎನ್ನುವುದು ನಮ್ಮ ಮನಸ್ಸಿನಲ್ಲಿರಲಿ. ಪಠ್ಯವಸ್ತು ಹೇಗಿದ್ದರೂ ಅದನ್ನು ನಾವು ಅನುಭವಾತ್ಮಕ ಹಾಗೂ ವಿಮರ್ಶಾಯುಕ್ತ ತರಗತಿ ಪ್ರಕ್ರಿಯೆಗಳ ಮೂಲಕ ಮಕ್ಕಳ ಸಂದರ್ಭಕ್ಕೆ ಪ್ರಸ್ತುತ ಮಾಡಬಹುದು ಹಾಗೂ ಆ ಮೂಲಕ ಅರ್ಥಪೂರ್ಣವಾಗಿಸಬಹುದು. ತರಗತಿಗಳಲ್ಲಿ ಕಲಿಯುವುದೇ ಅಂತಿಮ ಎಂಬ ಭಾವನೆ ದೂರವಾಗಬೇಕು. ತರಗತಿ ಕಲಿಕೆ ಒಟ್ಟಾರೆ ಕಲಿಕೆಯ ಆರಂಭ ಮಾತ್ರ ಎನ್ನುವ ಪ್ರಜ್ಞೆ ಎಲ್ಲರಲ್ಲಿಯೂ ಬೆಳೆಸಬೇಕಾಗಿದೆ. ಈ ನಿಟ್ಟಿನಲ್ಲಿ ಬದಲಾದ ಪಠ್ಯಪುಸ್ತಕಗಳ ಕುರಿತಂತೆ ಸಮುದಾಯದೊಡನೆ ಶಾಲೆಗಳು ಸಂವಾದ ನಡೆಸಬೇಕಾಗಿರುವುದು ಆದ್ಯತೆಯ ಅಪೇಕ್ಷೆಯಾಗಿದೆ.

ಪ್ರತಿ ವಿಷಯಕ್ಕೂ ಅದರದ್ದೇ ಆದ ಪರಿಭಾಷೆಯಿದೆ. ಈ ಪರಿಭಾಷೆಯಲ್ಲಿಯೇ ಆ ವಿಷಯದ ತರಗತಿ ಪ್ರಕ್ರಿಯೆಗಳನ್ನು ಅನುಕೂಲಿಸುವುದು ಅಗತ್ಯ. ಅಂತೆಯೇ ಎಲ್ಲ ಕಲಿಕೆಯೆ ವಿಷಯಗಳನ್ನೂ ಸಮಗ್ರವಾಗಿ ಗ್ರಹಿಸಲು ಸಾಧ್ಯವಾಗುವಂತಹ ಕಲಿಕಾ ವಾತಾವರಣ ನಿರ್ಮಿಸಬೇಕಾಗಿದೆ. ವಿಷಯಗಳ ನಡುವಿನ ಗಡಿರೇಖೆಗಳನ್ನು ಕಡಿಮೆ ಮಾಡಿ ವಿವಿಧ ವಿಷಯಗಳನ್ನು ಸಮ್ಮಿಳಿತಗೊಳಿಸಿ ಅರ್ಥೈಸಿಕೊಳ್ಳುವುದನ್ನು ಅನುಕೂಲಿಸಬೇಕಾಗಿದೆ. ಆದ್ದರಿಂದ ಕಲಿಕೆ ಫಲಪ್ರದವಾಗಬೇಕಾದರೆ ಎಲ್ಲ ಶಿಕ್ಷಕರೂ ಈ ನಿಟ್ಟಿನಿಂದ ಆಲೋಚಿಸುತ್ತ ಒಟ್ಟಾಗಿ ಕಾರ್ಯತತ್ಪರರಾಗಬೇಕಾಗಿದೆ.

ಈ ಸಾಹಿತ್ಯದೊಡನೆಯೇ ತರಗತಿ ಅವಲೋಕನ ನಮೂನೆಗಳನ್ನು ನೀಡಿದೆ. ಇದು ತರಬೇತಿಯ ಅವಧಿಯಲ್ಲಿ ನಡೆಸುವ ಪ್ರದರ್ಶನ ಪಾಠಗಳನ್ನು ನೀಡಿ ನಿಮ್ಮ ಟಿಪ್ಪಣಿಗಳನ್ನು ದಾಖಲಿಸಿಕೊಳ್ಳಲು ಇರುವ ಸ್ಥಳ. ಅಂತಿಮವಾಗಿ ನಿಮ್ಮ ಅವಲೋಕನಗಳು ಈ ಸಾಹಿತ್ಯದ ಒಂದು ಭಾಗವಾಗಿಯೇ ಉಳಿಯಬೇಕು ಎಂಬ ಆಶಯದೊಂದಿಗೆ ಈ ನಮೂನೆಗಳನ್ನು ನೀಡಲಾಗಿದೆ. ಈ ಪುಸ್ತಕ ತರಬೇತಿಯ ಬಳಿಕವೂ ನಿಮ್ಮೊಡನೆ ಉಳಿಯುವ ಆಕರ ಸಾಹಿತ್ಯ. ಇದನ್ನು ಕೆಲವು ಬಾರಿಯಾದರೂ ಓದಿ ಇಲ್ಲಿ ಹೇಳಿರುವ ವಿಷಯಗಳನ್ನು ಮನನ ಮಾಡಿಕೊಳ್ಳಬೇಕು. ಈ ಪುಸ್ತಕದೊಡನೆ ನಿಮ್ಮ ಸಂವಾದ ಇಡೀ ವರ್ಷ ಮುಂದುವರಿಯಬೇಕು. ಅಗತ್ಯವಿದ್ದರೆ ತಮ್ಮ ಸಮಲೋಚನಾ ಸಭೆಗಳಲ್ಲಿಯೂ ನಿಮ್ಮ ವಿಚಾರಗಳನ್ನು ಮಂಡಿಸಿ ಚರ್ಚಿಸಬಹುದು.

ಇದು ರಚನವಾದಿ ತತ್ವ ಆಧರಿಸಿದ ತರಗತಿ ಪ್ರಕ್ರಿಯೆಗಳನ್ನು ಅನುಕೂಲಿಸುವ ನಿಟ್ಟಿನಲ್ಲಿ ನಾವೆಲ್ಲರೂ ಜೊತೆಯಾಗಿ ಇಡುತ್ತಿರುವ ಮೊದಲ ಹೆಜ್ಜೆ. ತರಬೇತಿ ಮುಗಿಯುವ ತನಕ ನಾವೆಲ್ಲರೂ ಜೊತೆಯಾಗಿ ನಡೆದರೂ ನೀವು ಶಾಲೆಗೆ ತೆರಳಿದ ಬಳಿಕ ನಿಮ್ಮ ಹಾದಿ ಬೇರೆಯಾಗುತ್ತದೆ. ಇಲ್ಲಿ ಚರ್ಚಿಸಲಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ನಿಮ್ಮ ತರಗತಿ ಪ್ರಕ್ರಿಯೆಗಳನ್ನು ಸಂಟಿಸಿಕೊಳ್ಳಿ. ಅಗತ್ಯವಿದ್ದರೆ ಮಾರ್ಗದರ್ಶನಕ್ಕಾಗಿ ಸಂಪನ್ಮೂಲ ವ್ಯಕ್ತಿಗಳನ್ನು ಸಂಪರ್ಕಿಸಿ. ನಾವು ನೀಡುವ ಶಿಕ್ಷಣದ ಗುಣಾತ್ಮಕತೆಯನ್ನು ಉಳಿಸಿ ಬೆಳೆಸಬೇಕಾದರೆ ಸೈದ್ಧಾಂತಿಕ ವಿಷಯಗಳಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು, ಅಲ್ಲವೇ?

ಹೊಸ ಪಠ್ಯ ಪುಸ್ತಕಗಳು ಅತ್ಯಂತ ಅರ್ಥಪೂರ್ಣವಾದ ತರಗತಿ ಕಲಿಕಾ ಪ್ರಕ್ರಿಯೆಗಳನ್ನು ಅನುಕೂಲಿಸುವ ನಿಟ್ಟಿನಲ್ಲಿ ಎಲ್ಲರಿಗೂ ಉಪಯುಕ್ತವಾಗುತ್ತವೆ ಎಂದು ಭಾವಿಸುತ್ತೇವೆ.

ಸಾಹಿತ್ಯ ರಚನಾ ತಂಡ