ಕರ್ನಾಟಕ ಪ್ರಾಣಿ ಸಂಪತ್ತು ವನಮಹೋತ್ಸವ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಮಾತು ಸಾಕು, ನಾವು ಸಸಿ ಬೆಳೆಸಬೇಕು

ನರ್ಸರಿಯಲ್ಲಿ ಒಂದು ಲಕ್ಷ ಸಸಿ ಬೆಳೆಸಲು ೮ ಜನ ಕಾರ್ಮಿಕರು ನವೆಂಬರ್-ಜುಲೈವರೆಗೆ ಶ್ರಮಿಸಬೇಕು. ರಾಜ್ಯದ ಅರಣ್ಯ ಇಲಾಖೆ ನರ್ಸರಿ ಸಿದ್ದತೆ, ಸಸಿ ನಾಟಿ ತಯಾರಿ, ರಕ್ಷಣೆ ವಿಚಾರಗಳಲ್ಲಿ ಸಾಕಷ್ಟು ಕೆಲಸಮಾಡಬೇಕು. ಇಡೀ ರಾಜ್ಯದಲ್ಲಿ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಬರುವ ಕೆನರಾ ಅರಣ್ಯ ವೃತ್ತ ಅತ್ಯಂತ ಮಹತ್ವದ ಮಳೆ ಕಾಡಿನ ಪ್ರದೇಶ. ಇಡೀ ರಾಜ್ಯದಲ್ಲಿಯೇ ಇಲ್ಲಿ ಅತಿ ಹೆಚ್ಚು ಅರಣ್ಯೀಕರಣ ಚಟುವಟಿಕೆ ಸಹಜ. ಭೂಮಿ ಬಿಸಿ ತಣ್ಣಗಾಗುವ ಮುನ್ನ ಬಿದ್ದ ಮಳೆಗೆ ಸಸಿ ನೆಡಬೇಕು. ಬರೋಬ್ಬರಿ ೧೫ ದಿನಗಳ ಸೀಮಿತ ಅವಧಿಯಲ್ಲಿ ವರ್ಷಕ್ಕೆ ೭೫-೮೦ಲಕ್ಷ ಸಸಿ ನೆಡುವದಕ್ಕೆ ಇಲ್ಲಿ ಹರಸಾಹಸ ಪಡಬೇಕು!. ನೆಡುವ ಸಸಿಗಳಲ್ಲಿ ಶೇಕಡಾ ೭೦ಕ್ಕಿಂತ ಹೆಚ್ಚು ಅಕೇಸಿಯಾ, ಕ್ಯಾಸುರಿನಾ, ತೇಗಗಳಿಗೆ ಮೀಸಲು ಎಂಬುದು ಬಹಿರಂಗ ಸತ್ಯ. ನಮ್ಮ ನೆಲದ ಸಸ್ಯ ಅಭಿವೃಧ್ಧಿಗೆ ಅವಕಾಶಗಳು ತೀರ ಸೀಮಿತ. ಹೀಗಿರುವಾಗ ಕೋಟಿ ಸಸಿ ಸುಲಭದ ಕೆಲಸವಲ್ಲ. ಪಶ್ಚಿಮಘಟ್ಟದಲ್ಲಿ ವೈವಿಧ್ಯಮಯ ಸಸ್ಯ ಭಂಡಾರವಿದೆ, ಭೂ ದೇವಿಗೆ ಸಾವಿರ ಸಾವಿರ ಸಸ್ಯ ವರ್ಗಗಳ ಶೃಂಗಾರವಿದೆ. ಆದರೆ ನಾಶ ಮಿತಿಮೀರಿದೆ, ಹೆಚ್ಚು ಹೆಚ್ಚು ಪರಿಸರ ಹೋರಾಟ ನಡೆದ ನೆಲದಲ್ಲೇ ಇಡೀ ಅರಣ್ಯ ಸ್ವರೂಪ ೧೦-೨೦ವರ್ಷಗಳ ಈಚೆಗೆ ಸಾಕಷ್ಟು ಹದಗೆಟ್ಟಿದೆ. ವಿದ್ಯುತ್ ಮಾರ್ಗ, ರಸ್ತೆ ಪ್ರತಿ ವರ್ಷ ಕಾಡು ಕಬಳಿಸುತ್ತಿವೆ. ಆದರೆ ರಾಜ್ಯದ ಅತ್ಯಂತ ದೊಡ್ಡ ಜಮೀನ್ದಾರ ಕರ್ನಾಟಕ ಅರಣ್ಯ ಇಲಾಖೆಗೆ ತನ್ನ ನರ್ಸರಿಗೆ ಈ ನೆಲದ ವಿಶೇಷ ಸಸ್ಯಗಳ ಬೀಜ ಪೂರೈಸುವ ತಾಕತ್ತಿಲ್ಲ! ಬೀಜೋತ್ಪಾದನೆಗಾಗಿ ೧೯೯೫ರ ಹೊತ್ತಿಗೆ ಪ್ಲಸ್ ಟ್ರೀ ಕಾರ್ಯಕ್ರಮದನ್ವಯ ಗುರುತಿಸಲಾದ ವಿಶೇಷ ವೃಕ್ಷಗಳನ್ನು ಮರಳಿ ನೋಡುವದಕ್ಕೆ ಅದಕ್ಕಿನ್ನೂ ಸಾಧ್ಯವಾಗಿಲ್ಲ! ವ್ಯಾಪಕ ಅರಣ್ಯೀಕರಣದ ಹೊಣೆ ಅರಣ್ಯ ಇಲಾಖೆ ಹೆಗಲಿಗಿದೆ, ಸಹಜವಾಗಿ ಅರಣ್ಯ ಭೂಮಿಯಲ್ಲಿ ಹೆಚ್ಚಿನ ಸಸಿ ನಾಟಿಯಾಗುತ್ತಿದೆ. ಹತ್ತಾರು ವರ್ಷಕ್ಕೆ ಒಮ್ಮೆ ಕಡಿಯುವ ನೆಡುತೋಪು ಬೆಳೆಸುವಲ್ಲಿ ಇಲಾಖೆಯ ಆಸಕ್ತಿ ಹೆಚ್ಚು. ಅರಣ್ಯ ಸಮಿತಿ, ಶಿಕ್ಷಣ ಸಂಸ್ಥೆ, ಧಾರ್ಮಿಕ ಸಂಘಟನೆಗಳು ವೈವಿಧ್ಯಮಯ ಸಸಿ ನೆಡುವ ಕಾರ್ಯದಲ್ಲಿ ಭಾಗಿಯಾಗುತ್ತಿವೆ, ಆದರೂ ಅದು ವನಮಹೋತ್ಸವ ದಿನಚರಣೆಗೆ ಮೀಸಲು!. ಈ ವರ್ಷ ೧೮ಕೋಟಿ ಸಸಿನಾಟಿಯ ಸಂಖ್ಯೆ ತಲುಪಲಾದೀತೆ?. ಇದರಲ್ಲಿ ವಿಶೇಷವಿಲ್ಲ, ಈಗಾಗಲೇ ರಾಜ್ಯದಲ್ಲಿ ಜಪಾನ್ ನೆರವಿನ ಅರಣ್ಯ ಯೋಜನೆ ಜಾರಿಯಲ್ಲಿರುವುದರಿಂದ ಯೋಜನೆಯಲ್ಲಿ ನೆಡುವ ಸಸಿ ಸಂಖ್ಯೆಯನ್ನೇ ಕೊಂಚ ವೈಭವೀಕರಿಸಿ ಅನಂತ ಅಶೀಸರ ಮಾಧ್ಯಮದ ಮುಂದಿಟ್ಟಿದ್ದಾರೆ ಅಷ್ಟೇ! ಇದು ಸರಕಾರದ ಸಾಧನೆ ಎಂದು ಬಿಂಬಿಸುವ ಇರಾದೆ ಅವರಿಗಿರಬಹುದು. ಆದರೆ ಕಳೆದ ಐದು ವರ್ಷಗಳಿಂದ ಈ ಯೋಜನೆ ನೆರವಿನಿಂದ ಪ್ರತಿವರ್ಷ ಅರಣ್ಯೀಕರಣ ಚಟುವಟಿಕೆ ನಡೆಯುತ್ತಿದೆ. ಈಗಿನ ಹೊಸ ಸರಕಾರ ಸಸಿ ನೆಡುವ ವಿಚಾರದಲ್ಲಿ ಹೊಸ ಕಲ್ಪನೆಯನ್ನೇನೂ ಹೊಂದಿಲ್ಲ, ಹೆಚ್ಚುವರಿ ಸಸಿ ನೆಡುತ್ತಿಲ್ಲ. ವಿದೇಶಿ ನೆರವು ಇಲ್ಲದಿದ್ದರೆ ನಮ್ಮ ಅರಣ್ಯೀಕರಣಕ್ಕೆ ಯಾವತ್ತೂ ಜೀವವಿಲ್ಲ! ೧೯೮೦ರ ದಶಕದ ವಿಶ್ವ ಬ್ಯಾಂಕ್ ನೆರವಿನ ಸಾಮಾಜಿಕ ಅರಣ್ಯ ಯೋಜನೆ, ೧೯೯೧ರ ಬ್ರಿಟನ್ ನೆರವಿನ ಪಶ್ಚಿಮ ಘಟ್ಟ ಅಭಿವೃದ್ಧಿ, ೧೯೯೭ರ ತರುವಾಯದಲ್ಲಿ ಜಪಾನ್ ಹಣಕಾಸು ನಮ್ಮ ಅರಣ್ಯಾಭಿವೃದ್ಧಿ ಮೂಲವಾಗಿದೆ. ವಿದೇಶಿ ಯೋಜನೆಯಿಲ್ಲದಾಗ ನಮ್ಮ ಇಡೀ ನರ್ಸರಿ ಚಟುವಟಿಕೆ ಸ್ಥಗಿತವಾದುದನ್ನು ೫-೬ವರ್ಷಗಳ ಹಿಂದೆ ಕಂಡಿದ್ದೇವೆ. ಈಗ ಸಸಿ ನೆಡುವದರ ಜತೆಗೆ ನೆಟ್ಟ ಸಸಿ ಪೋಸುವದು, ರಕ್ಷಿಸುವದು ಮಹತ್ವದ್ದು. ಅಳಿದುಳಿದ ನೈಸರ್ಗಿಕ ಕಾಡು ರಕ್ಷಿಸುವ ಹೊಣೆ ಇನ್ನೂ ಹೆಚ್ಚಿನದು. ಹತ್ತಾರು ನರ್ಸರಿ ತಿರುಗಿ ವಾಸ್ತವ ಕಲೆಹಾಕಿದರೆ ಗ್ರಾಮ ಅರಣ್ಯ ಸಮಿತಿ ಕ್ಷೇತ್ರದಲ್ಲಿ ಸಸಿ ನೆಡುವ ಮಾಮಾಲಿ ಯೋಜನೆಗೆ ಮಾತ್ರ ಸಸಿಗಳ ದಾಸ್ತಾನಿದೆ. ಸಾರ್ವಜನಿಕರಿಗೆ ಉಚಿತ ಸಸಿ ವಿತರಣೆಗೆ ಅವಕಾಶವಿಲ್ಲ, ಆಸಕ್ತರಿಗೆ ಸೀಮಿತ ಪ್ರಮಾಣದ ಸಸಿ ಮಾರಾಟ ಮಾಡುವ ಪದ್ದತಿಯಿದೆ. ಸಾಮಾಜಿಕ ಅರಣ್ಯ ವಿಭಾಗವಂತೂ ಅಗತ್ಯ ಹಣಕಾಸಿನ ನೆರವಿಲ್ಲದೇ ನಿತ್ರಾಣವಾಗಿದೆ. ಇಡೀ ರಾಜ್ಯದಲ್ಲಿ ಸದ್ಯಕ್ಕೆ ೧೮ಕೋಟಿ ಸಸಿ ದಾಸ್ತಾನಿಲ್ಲ ಎಂದು ನಂಬಲರ್ಹ ಮೂಲಗಳು ಹೇಳುತ್ತಿವೆ. ಬೆಳೆಸಿದ ಸಸಿಗಳಲ್ಲಿಯೂ ಶೇಕಡಾ ೭೦ಕ್ಕಿಂತ ಹೆಚ್ಚು ಅಕೇಸಿಯಾ, ನೀಲಗಿರಿ, ಗಾಳಿ, ತೇಗದ ಬಳಗದ್ದು! ಅಂಕಿಸಂಖ್ಯೆ ಬದಲಾಗಿದೆ ಎಂದು ಚಿಂತಿಸಬೇಕಾದ ಕಾರಣವಿಲ್ಲ, ಎಷ್ಟು ನೆಡುತ್ತೇವೆ ಎಂದು ವೈಭವೀಕರಿಸುವದಕ್ಕಿಂತ ಮುಂದಿನ ವರ್ಷಕ್ಕೆ ನೆಟ್ಟ ಸಸಿ ಎಷ್ಟು ಉಳಿಸುತ್ತೇವೆ ಎಂದು ‘ಹಸಿರು ಅಡಿಟ್’ ನಡೆಸುವದು ಹೆಚ್ಚು ಮುಖ್ಯವಾಗುತ್ತದೆ. ಇಂದು ಸಸಿ ಬೆಳೆಸುವ ಕಾಯಕದಲ್ಲಿ ಅರಣ್ಯ ನರ್ಸರಿಗಳಲ್ಲಿ ವಾಚಮನ್‌ಗಳ ಪಾತ್ರ ಮುಖ್ಯವಾದುದು. ಕಾಡಿನ ಬೀಜ ಸಂಗ್ರಹಿಸಿ ಪಾಲಿಥೀನ್ ಚೀಲಗಳಲ್ಲಿ ಸಸಿ ಬೆಳೆಸುವ ಅವರ ಉತ್ಸಾಹ ಅರಣ್ಯೀಕರಣದ ಜೀವಾಳ. ಕೋಟಿ ಸಸಿ ಬೆಳೆಸುವ ಈ ಬಡ ವಾಚಮನ್‌ಗಳಿಗೆ ಪಾಪ! ಕಳೆದ ೩ ತಿಂಗಳಿಂದ ದಿನಗೂಲಿ ನೀಡಿಲ್ಲ, ಹಸಿರು ಬೆಳೆಸಿದ ಅವರು ಹಸಿವು ಕಟ್ಟಿಕೊಂಡಿದ್ದಾರೆ ! ಕರ್ನಾಟಕದ ಈ ಸರಕಾರ ೧೦೦ದಿನ ಪೂರೈಸಿದಾಗ ಹಸುರು ಸಮೃದ್ಧ ಗ್ರಾಮಗಳನ್ನು ರಾಜ್ಯದಲ್ಲಿ ಗುರುತಿಸಿತು. ಇಂತಹ ಗ್ರಾಮಗಳಿಗೆ ಪರಿಸರಪರ ಇನ್ನಷ್ಟು ಯೋಜನೆ, ಯೋಚನೆ ಕಲ್ಪಿಸಬೇಕಾದವರು ಈಗ ಎಲ್ಲ ಮರೆತಿದ್ದಾರೆ. ಗಣಿಗಾರಿಕೆ ನೀತಿ, ಹೊಸ ಹೊಸ ಯೋಜನೆಗಳ ಪ್ರಸ್ತಾಪಗಳಲ್ಲಿ ಪರಿಸರದ ನಿಲುವಂತೂ ಅಸ್ಪಷ್ಟವಾಗಿರುವದು ಎದ್ದು ಕಾಣುತ್ತಿದೆ. ಗಣಿದೂಳು ಪರಿಸರಪರ ನಿಲುವನ್ನು ಮಸುಕಾಗಿಸಿದೆ. ಅರಣ್ಯ ಸಚಿವರೂ ಆದ ಮುಖ್ಯಮಂತ್ರಿ ಯಡ್ಡಿಯೂರಪ್ಪ ಇಡೀ ಇಲಾಖೆಗೆ ಅಗತ್ಯ ಸರ್ಜರಿ ಮಾಡಿ ಅರಣ್ಯ ಅಭಿವೃದ್ಧಿಗೆ ಅಗತ್ಯ ಚೇತನ ನೀಡುವ ಕೆಲಸ ಇನ್ನೂ ಬಾಕಿಯಿದೆ. ಧಾರ್ಮಿಕ ಮುಖಂಡರ ನೇತ್ರತ್ವದಲ್ಲಿ ಹಸಿರೀಕರಣದ ಹೊಸ ಸಾಧ್ಯತೆಗೆ ಹಿಂದೆ ರಾಜ್ಯದಲ್ಲಿ ವನಸಂವರ್ಧನೆ ಯೋಜನೆ ಜಾರಿಯಾಗಿತ್ತು. ಸದಾ ಮಠಗಳ ಸುತ್ತ ತಿರುಗುವ ಈಗಿನ ಸರಕಾರ ಅದಕ್ಕೂ ಚಾಲನೆ ನೀಡಿಲ್ಲ. ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಸಸಿ ಬೆಳೆಸುವ ಶಾಲಾವನ ಯೋಜನೆ ನೆನೆಗುದಿಗೆ ಬಿದ್ದಿದೆ. ಸಸಿ ಬೆಳೆಸಿದ ಶಿಕ್ಷಣ ಸಂಸ್ಥೆಗೆ ಲಾಭಾಂಶ ನೀಡುವ ಮಹತ್ವದ ಕೆಲಸವನ್ನು ರಾಮಕೃಷ್ಣ ಹೆಗಡೆ ಆರಂಭಿಸಿದ್ದರು. ಗ್ರಾಮೀಣ ಶಾಲೆಗಳಿಗೆ ಇದು ಒಳ್ಳೆಯ ಆಧಾಯ ಮೂಲವಾಗಿತ್ತು. ಹಣ್ಣುಹಂಪಲು ಸಸಿ ಬೆಳೆಸುವಲ್ಲಿ ಮಕ್ಕಳ ಉತ್ಸಾಹ ಎಳೆ ಮನಸ್ಸಿನಲ್ಲಿ ಪರಿಸರ ಕಾಳಜಿ ಹುಟ್ಟಿಸುವ ಕೆಲಸ. ಆದರೆ ಈಗ ಶಾಲಾವನ ಲಾಭಾಂಶ ಹಂಚಿಕೆ ಒಪ್ಪಂದಪತ್ರ ಪರಿಶೀಲಿಸಿ ಸಸಿ ಹಾಕುವ ಕೆಲಸವೇ ಸ್ಥಗಿತವಾಗಿದೆ! ಹೊಸ ಯೋಜನೆ ಮಾಡುವುದಕ್ಕಿಂತ ಹಳೆಯ ಯೋಜನೆಗಳಿಗೆ ಮರುಜೀವ ನೀಡಿದರೆ ಅಭಿವೃದ್ಧಿ ಅನುಭವದಲ್ಲಿ ಬೆಳೆಯಲು ಸಾಧ್ಯವಾಗುತ್ತದೆ. ಇನ್ನೊಂದೆಡೆ ಪಶ್ಚಿಮ ಘಟ್ಟದಲ್ಲಂತೂ ಅರಣ್ಯೀಕರಣ ನೀತಿಯನ್ನೇ ಮರುಪರಿಶೀಲಿಸಬೇಕಿದೆ, ನೆಡುತೋಪು ನಿರ್ವಹಿಸುವ, ಹೊಸ ನೆಡುತೋಪು ನಿರ್ಮಿಸುವ ಹಂತದಲ್ಲಿ ಇಲಾಖೆಯ ಕಾರ್ಯ ವೈಖರಿ ಗಮನಿಸಬೇಕಿದೆ. ಕಾಡಿನ ಬೆಂಕಿ ಆರಿಸುವ ಇಲಾಖೆಯೇ ನೆಡುತೋಪು ಕಟಾವಾದ ನೆಲೆಯಲ್ಲಿ ಬೆಂಕಿ ಹಾಕುತ್ತಿದೆ, ಎಳೆ ಸಸಿಗಳು ಬೇಯುತ್ತಿವೆ. ನೆಡುವದಕ್ಕಾಗಿ ಕಡಿಯುವ ವೈಖರಿ ಎದ್ದು ಕಾಣುತ್ತಿದೆ. ನಿಜ ಹೇಳಿ! ಪರಿಸರ ಬಿಕ್ಕಟ್ಟುಗಳ ಮಧ್ಯೆ ನಮ್ಮ ಮಾತು ಜಾಸ್ತಿಯಾದಂತೆ ಕಾಣುವದಿಲ್ಲವೇ? ಹೀಗಾಗಿ ರಚನಾತ್ಮಕ ಚಿಂತನೆ ಎಕ್ಕುಟ್ಟಿ ಹೋಗಿದೆ. ನಮಗೂ ಅಷ್ಟೇ, ಭಾಷಣವನ್ನು ತೀರ ಎತ್ತರದಲ್ಲಿ ಮಾಡಿ ಅಭ್ಯಾಸವಾಗಿದೆ. ಮಾತಾಡುತ್ತ ಮಾತಾಡುತ್ತ ನೆಲದ ವಾಸ್ತವ ಅರಿಯುವ ಉತ್ಸಾಹ ಹೊರಟು ಹೋಗಿದೆ. ಕಾಡಿನ ಕುರಿತ ಸೆಮಿನಾರುಗಳು ನಮಗೆ ಎಷ್ಟು ಸಹಜವಾಗಿದೆ ಎಂದರೆ ಬೆಳಿಗ್ಗೆ ಉದ್ಘಾಟನೆ ಹೊತ್ತಿಗೆ ನಾವು ಸಂಜೆಯ ಠರಾವು ಮುದ್ರಿಸಿ ಹಂಚಬಹುದು !. ಮಣ್ಣು ಮುಟ್ಟದ ಪ್ರೋಪೇಸರ್, ವಿಜ್ಞಾನಿಗಳ ಇಂಟಲೆಕ್ಚ್ಯುವಲ್ ಪಡೆ ನಂಬಿಕೊಂಡರೆ ಮಾತಾಡುವದು ಬಿಟ್ಟರೆ ಬೇರೆ ಕೆಲಸ ಆಗೋದಿಲ್ಲ. ಅಮೂಲ್ಯ ….. ಅಮೂಲ್ಯ ಎಂದು ಮಾತಾಡುತ್ತ ನಮ್ಮ ಸಮಯದ ಮೌಲ್ಯವೇ ಕುಸಿದಿದೆ. ಎದೆಮುಟ್ಟಿ ನೋಡಿ, ನಾವು ಇಂದಿನ ಪರಿಸರ ಕಾರ್ಯಕ್ರಮ ಮುಗಿಸಿ ಮುಂದಿನ ಕಾರ್ಯಕ್ರಮಕ್ಕೆ ದಿನಾಂಕ ನಿಗದಿ ಮಾಡುತ್ತೇವೆ, ನಡುವೆ ಎಷ್ಟು ಗಿಡ ನೆಡುತ್ತೇವೆ?. ಸಂತರಾಗಿ ಉಪದೇಶ ಮಾಡುವದರಲ್ಲಿ ಯಾವ ಅರ್ಥವೂ ಇಲ್ಲ. ‘ಸರ್, ಸೆಮಿನಾರು ಸಾಕೇ ಸಾಕು, ನಮಗೀಗ ಧಾರಾಳ ಮಾಹಿತಿಯಿದೆ, ಎಲ್ಲರೂ ಪರಿಸರ ಪಂಡಿತರಾಗಿದ್ದೇವೆ. ಅದೇ ದೇವರ ಕಾಡು, ಕಾಂಡ್ಲ ಮಾತು ಮಾತಾಗಿದೆ! ಸೆಮಿನಾರಿನ ದಿನಾಂಕ, ಫ್ಲೆಕ್ಸ್ ಬೋರ್ಡ್ ಬಿಟ್ಟರೆ ಮಾತುಗಳೆಲ್ಲ ತೀರ ಹಳೆಯವು. ಈಗ ನಿಸರ್ಗದ ಹೊಸ ಭಾಷೆ ಕಲಿಯಬೇಕು. ನಮ್ಮ ಹಿರಿಯರು ಮಳೆ ಬಿದ್ದ ಹೊಸತರಲ್ಲಿ ಸಸಿ, ಬೀಜ ನೆಡಲು ಹೇಳುತ್ತಾರೆ. ಭೂಮಿಯ ಬಿಸಿ ಮಳೆ ಹನಿಗೆ ತಣ್ಣಗಾಗುವ ಮುನ್ನ ಸಸಿ ನೆಲಕ್ಕೆ ನೆಡಬೇಕು. ಆಗ ಬೇರು ಆಳಕ್ಕಿಳಿದು ಗಿಡ ಚಿಗುರುತ್ತದೆ. ಹೀಗಾಗಿ ಸದ್ಯಕ್ಕೆ ಸೆಮಿನಾರು ನಿಲ್ಲಿಸಿ ಎಲ್ಲ ಸಸಿ ಬೆಳೆಸಿ, ಉಳಿಸುವ ಒಳ್ಳೆಯ ಕೆಲಸಕ್ಕೆ ಹೊರಡೋಣ.

ಹಿ೦ದಕ್ಕೆ